

| ಪರಶುರಾಮ ಭಾಸಗಿ ವಿಜಯಪುರ
ಕುಮಟಗಿ ಗ್ರಾಮದ ಸಿಂದಗಿ ರಸ್ತೆಯಲ್ಲಿ ಉದ್ಯಮಿಗಳಾದ ಪಿ.ಕೆ. ಚಿಂಚಲಿ, ಸಿದ್ದಯ್ಯ ಮಠ, ಮಲ್ಲಿಕಾರ್ಜುನ ಬಿಜ್ಜರಗಿ ಹಾಗೂ ಸುರೇಶ ಪರಗೊಂಡ ಎಂಬುವರು ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಣಿಕೆ ಘಟಕ ಸ್ಥಾಪಿಸಿದ್ದಾರೆ. ರೈತರ ಜಮೀನಿನಿಂದ ಬರುವ ರೇಷ್ಮೆ ಗೂಡುಗಳನ್ನು ವಿಂಗಡಿಸಿ, ಸ್ವಚ್ಛಗೊಳಿಸಿ ಬಳಿಕ ವಿವಿಧ ಹಂತಗಳಲ್ಲಿ ರೇಷ್ಮೇ ನೂಲು ತೆಗೆಯುವ ಪ್ರಕ್ರಿಯೆ ನಡೆದಿದೆ. ಉತ್ಪಾದಿತ ಗ್ರೇಡ್-ಎ ಮಾದರಿಯ ರೇಷ್ಮೆ ನೂಲುಗಳನ್ನು ರಾಜ್ಯದ ಬೆಂಗಳೂರು ಹಾಗೂ ಪಶ್ಚಿಮ ಬಂಗಾಳ, ಆಸ್ಸಾಂ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಮೊದಲು ರೇಷ್ಮೆ ನೂಲು ತೆಗೆಯಲು ರಾಮನಗರವನ್ನೇ ನೆಚ್ಚಿಕೊಂಡಿದ್ದ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಇದೀಗ ಈ ಘಟಕ ವರವಾಗಿದೆ.
ಪ್ರಸ್ತುತ ಗ್ರೇಡ್ ‘ಎ’ ಮಾದರಿಯ ರೇಷ್ಮೆ ತೆಗೆಯುವ ತಂತ್ರಜ್ಞಾನ ಅತ್ಯಂತ ಕಡಿಮೆ. ಇದ್ದರೂ ರಾಮನಗರ, ಶಿಡ್ಲಘಟ್ಟ ಮುಂತಾದ ದೂರದ ಕೈಗಾರಿಕೆಗಳನ್ನೇ ರೇಷ್ಮೆ ಬೆಳೆಗಾರರು ಆಶ್ರಯಿಸಬೇಕಿತ್ತು. ಇದೀಗ ಜಿಲ್ಲೆಯಲ್ಲಿಯೇ ಇಂಥ ಘಟಕ ಸ್ಥಾಪಿಸಿದ್ದರಿಂದ ಸಾಗಾಣಿಕೆ ವೆಚ್ಚ ತಗ್ಗಿದಂತಾಗಿದೆ. ಅಲ್ಲದೆ, ಸಾಗಾಟ ಸಂದರ್ಭ ಉಂಟಾಗುತ್ತಿದ್ದ ಹಾನಿ ಹಾಗೂ ನಷ್ಟವನ್ನು ತಪ್ಪಿಸಿದಂತಾಗಿದೆ. ಕುಮಟಗಿಯ ಈ ಘಟಕದಲ್ಲಿ ಉತ್ಪಾದನೆಯಾಗುವ ಗ್ರೇಡ್ ‘ಎ’ ಮಾದರಿಯ ರೇಷ್ಮೆ ನೂಲನ್ನು ಬೆಂಗಳೂರು, ಧರ್ವವರ, ಪಶ್ಚಿಮ ಬಂಗಾಳ ಮತ್ತು ಆಸ್ಸಾಂ ಸೇರಿದಂತೆ ಮತ್ತಿತರ ಕಡೆ ರಫ್ತು ಮಾಡಲಾಗುತ್ತದೆ. ಬೆಳೆಗಾರರಿಗೆ ಉತ್ತಮ ಬೆಲೆ ಕೂಡ ಸಿಗುತ್ತದೆ ಎನ್ನುತ್ತಾರೆ ರೇಷ್ಮೆ ಸಹಾಯಕ ನಿರ್ದೇಶಕ ಬಿ.ವೈ. ಬಿರಾದಾರ.
ರೇಷ್ಮೆ ಬೆಳೆಗಾರರ ಸಮಸ್ಯೆ ಅರಿತು ಇಂಥದ್ದೊಂದು ಕೈಗಾರಿಕೆ ಸ್ಥಾಪಿಸಲಾಗಿದೆ. ಇದರಿಂದ ಬೆಳೆಗಾರರಿಗೆ ಮಾತ್ರವಲ್ಲದೆ ಸಾಕಷ್ಟು ಜನರಿಗೆ ಉದ್ಯೋಗವಕಾಶ ಲಭಿಸಿದೆ. ಸ್ಥಳೀಯ 40 ಜನರಿಗೆ ಕೌಶಲ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸಲಾಗಿದೆ. ಇದರಲ್ಲಿ ರೇಷ್ಮೆ ಇಲಾಖೆ ಅಧಿಕಾರಿಗಳು, ಕೆನರಾ ಬ್ಯಾಂಕ್ ಮತ್ತಿತರರ ಸಹಾಯ ಮತ್ತು ಸಹಕಾರ ಸಾಕಷ್ಟಿದೆ. ಈ ಭಾಗದಲ್ಲಿ ಇದು ಮೊದಲ ಪ್ರಯತ್ನ. | ಸಿದ್ದಯ್ಯ ಮಠ ಉದ್ಯಮಿ ಜಿಲ್ಲೆಯಲ್ಲಿ 1666 ಎಕರೆ ರೇಷ್ಮೆ ಬೆಳೆ ಪ್ರದೇಶವಿದೆ. ವಾರ್ಷಿಕ 1.52 ಲಕ್ಷ ಕೆಜಿ ರೇಷ್ಮೆ ಉತ್ಪಾದನೆಯಾಗುತ್ತದೆ. ಮುಂಚೆ ಮಾರುಕಟ್ಟೆಗಾಗಿ ರಾಮನಗರ ಮತ್ತಿತರ ದೂರದ ಪ್ರದೇಶಗಳನ್ನೇ ಅವಲಂಭಿಸಬೇಕಿತ್ತು. ಇದೀಗ ಜಿಲ್ಲೆಯಲ್ಲಿಯೇ ಈ ಘಟಕ ಸ್ಥಾಪಿಸಿದ್ದರಿಂದ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ಸಿಕ್ಕಂತಾಗಿದೆ. ಇನ್ಮುಂದೆ ಈ ಪ್ರದೇಶ ರೇಷ್ಮೆ ನಾಡು ಆಗುವತ್ತ ಕ್ರಮೇಣ ಹೆಜ್ಜೆ ಇರಿಸುತ್ತಿದೆ. | ಸಿದ್ದರಾಜು ಉಪ ನಿರ್ದೇಶಕ, ರೇಷ್ಮೆ ಇಲಾಖೆ ನೂಲು ಉತ್ಪಾದನೆ ಘಟಕ ಇಲ್ಲದೇ ಇರುವ ಕಾರಣಕ್ಕೆ ಮತ್ತು ಸೂಕ್ತ ಮಾರುಕಟ್ಟೆ ಸಮಸ್ಯೆಯಿಂದ ರೇಷ್ಮೆ ಬೆಳೆಯಿಂದ ವಿಮುಖರಾಗುತ್ತಿದ್ದೆವು. ಇದೀಗ ಜಿಲ್ಲೆಯಲ್ಲಿಯೇ ಈ ಘಟಕ ಸ್ಥಾಪಿಸಿದ್ದರಿಂದ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ. ಸಾಗಾಟ ವೆಚ್ಚ ತಗ್ಗಿ ಉತ್ತಮ ಲಾಭಾಂಶ ಕೈ ಸೇರುತ್ತಿದೆ. | ಮಲ್ಲನಗೌಡ ಗುರುಬಸಪ್ಪಗೌಡ ಪಾಟೀಲ ರೈತ ರೆಬಿನಾಳ ಗ್ರಾಮ
3 ಎಕರೆ ಪ್ರದೇಶದಲ್ಲಿ ಈ ಘಟಕ ಸ್ಥಾಪಿಸಲಾಗಿದ್ದು, 15,500 ಚದರ ಅಡಿ ಪ್ರದೇಶದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಚೀನಾದಿಂದ ಅತ್ಯಾಧುನಿಕ ಯಂತ್ರೋಪಕರಣ ತರಿಸಿಕೊಳ್ಳಲಾಗಿದೆ. ಅದಕ್ಕಾಗಿ 1.71 ಕೋಟಿ ರೂ.ವೆಚ್ಚ ಮಾಡಲಾಗಿದೆ. ಇನ್ನುಳಿದಂತೆ ಶೆಡ್ ನಿರ್ವಣ, ಮತ್ತಿತರ ಉತ್ಪಾದಕ ಘಟಕಗಳು ಸೇರಿ ಅಂದಾಜು 5 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸರ್ಕಾರದಿಂದ ರೇಷ್ಮೆ ಅಭಿವೃದ್ಧಿ ಯೋಜನೆಯಡಿ 1.05 ಕೋಟಿ ರೂ. ಸಹಾಯಧನ ಪಡೆಯಲಾಗಿದೆ. ರಾಜ್ಯದ 20 ಕಡೆ ಇಂಥ ಘಟಕಗಳಿದ್ದು ಇದೀಗ ಅವಿಭಜಿತ ವಿಜಯಪುರ ಜಿಲ್ಲೆಗೂ ಕಾಲಿರಿಸಿದೆ.