

| ಎನ್.ವಿ.ವೆಂಕಟೇಶ್ ಗುಡಿಬಂಡೆ
ಚಿಕ್ಕಬಳ್ಳಾಪುರ ಎಂದಾಕ್ಷಣ ದ್ರಾಕ್ಷಿ, ತರಕಾರಿ, ಹೂವಿನ ಬೆಳೆ ನೆನಪಾಗುತ್ತದೆ. ಇದರ ನಡುವೆ ಗುಡಿಬಂಡೆ ತಾಲೂಕಿನ ರೈತರೊಬ್ಬರು ಖರ್ಜೂರ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದ ಪ್ರಗತಿಪರ ರೈತ ಲಕ್ಷ್ಮೀನಾರಾಯಣ ಜಿಲ್ಲೆಯಲ್ಲಿ ಮೊದಲ ಬಾರಿಗೆ ನೂತನ ಪ್ರಯೋಗ ನಡೆಸಿ ಯಶಸ್ಸು ಕಂಡಿದ್ದಾರೆ. 4 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆಯುತ್ತಿದ್ದ ಇವರು ಬೆಲೆ ಸಿಗದೆ, ಮಾವು, ಸಪೋಟ ತೋಟ ಮಾಡಿದ್ದರು. ಅದರಲ್ಲೂ ನಿರೀಕ್ಷಿತ ಲಾಭ ಕಾಣದೆೆ ನಷ್ಟ ಅನುಭವಿಸಿದ್ದರು. ಈ ನಡುವೆ ಏನಾದರೂ ನೂತನ ಪ್ರಯೋಗ ಮಾಡಬೇಕೆಂದು ಯೋಚಿಸಿ ಖರ್ಜೂರ ಬೆಳೆಯನ್ನು ಬೆಳೆದಿದ್ದಾರೆ. ಗ್ರಾಪಂ ಅಧ್ಯಕ್ಷ ರೂ ಆಗಿರುವ ಲಕ್ಷ್ಮೀನಾರಾಯಣ, ಉಷ್ಣವಲಯದಲ್ಲಿ ಬೆಳೆಯುವ ಖರ್ಜೂರ ತಳಿ ಬಗ್ಗೆ ತಮಿಳುನಾಡಿನ ವ್ಯಕ್ತಿಯೊಬ್ಬರಿಂದ ಮಾಹಿತಿ ಪಡೆದುಕೊಂಡು, ಅವರ ಮೂಲಕವೇ ಕುವೈತ್ನಿಂದ ಸಸಿ ತರಿಸಿ ತಮ್ಮ ಹೊಲದಲ್ಲಿ ನಾಟಿ ಮಾಡಿದ್ದಾರೆ. ನಾಲ್ಕು ಎಕರೆ ಜಾಗದಲ್ಲಿ 260 ಗಿಡಗಳಿದ್ದು, ಅದರಲ್ಲಿ ಸದ್ಯ ಕೆಲವು ಫಸಲು ಬಿಟ್ಟಿವೆ. ತೋಟದಲ್ಲೇ 1 ಕೆ.ಜಿ ಖರ್ಜೂರವನ್ನು 250 ರೂ. ಗೆ ಮಾರಾಟ ಮಾಡುತ್ತಿದ್ದಾರೆೆ.
ನಾಟಿ ವಿಧಾನ ಮತ್ತು ಖರ್ಚು: ಸಸಿ ನಾಟಿಗೂ ಮುನ್ನ 2 ಅಡಿ ಆಳ, 2 ಅಡಿ ಉದ್ದದ ಗುಂಡಿ ತೆಗೆದು ಅದರಲ್ಲಿ ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ ಹಾಕಿ ಭರ್ತಿ ಮಾಡಿ ಎರಡು ತಿಂಗಳು ಬಿಡಬೇಕು. ನಂತರ ಅದೇ ಗುಂಡಿಯನ್ನು ಒಂದು ಅಡಿ ತೆಗೆದು ಸಸಿ ನಾಟಿ ಮಾಡಬೇಕು. ಗಿಡದಿಂದ ಗಿಡಕ್ಕೆ 25 ಅಡಿ ಅಂತರವಿರಬೇಕು. ನಾಟಿ ಮಾಡಿದ 2 ವರ್ಷ ಅಂತರ ಬೆಳೆ ಬೆಳೆಯಬಹುದು. ನಾಟಿ ಮಾಡುವವರೆಗೆ ಪ್ರತಿ ಗಿಡಕ್ಕೆ 5 ಸಾವಿರ ರೂ. ಖರ್ಚು ಬರುತ್ತದೆ. 260 ಗಿಡಗಳಿಗೆ 13 ಲಕ್ಷ ರೂ. ಖರ್ಚು ಬಂದಿದೆ. ನಂತರ ವರ್ಷಕ್ಕೆ ಎರಡು ಬಾರಿ ಗೊಬ್ಬರ ಹಾಕಬೇಕು ಎನ್ನುತ್ತಾರೆ ಲಕ್ಷ್ಮೀ ನಾರಾಯಣ.
4 ವರ್ಷಕ್ಕೆ ಫಸಲು: ಖರ್ಜೂರ ಸಸಿ ನಾಟಿ ಮಾಡಿದ ಮೂರರಿಂದ ನಾಲ್ಕು ವರ್ಷಗಳ ನಡುವೆ ಹೊಂಬಾಳೆ ಮಾದರಿಯಲ್ಲಿ ಹೂವು ಬಿಡಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ ಮೊದಲನೇ ವಾರದವರೆಗೆ ಹಂತಹಂತವಾಗಿ ಹೂವು ಬಿಡುತ್ತದೆ. ನಂತರ ಹೊಂಬಾಳೆ ಒಡೆದು 20 ದಿನಗಳಲ್ಲಿ ಸಣ್ಣ ಸಣ್ಣ ಕಾಯಿ ಆಗುತ್ತವೆ. ಮೂರು ತಿಂಗಳಲ್ಲಿ ಕಾಯಿಗಳು ಹಸಿರು ಬಣ್ಣದೊಂದಿಗೆ ಗೋಲಿಗಾತ್ರದಷ್ಟಾಗುತ್ತವೆ. 4ನೇ ತಿಂಗಳಿಗೆ ಕಂದು ಬಣ್ಣಕ್ಕೆ ತಿರುಗಿ, ಕೇಸರಿ ಮಿಶ್ರಿತ ಕಂದು ಬಣ್ಣಕ್ಕೆ ಬಂದಾಗ ಕೊಯ್ಲು ಮಾಡಬಹುದಾಗಿದೆ. ನಾಟಿ ಮಾಡಲು ಮಳೆಗಾಲ ಉತ್ತಮ ಎನ್ನುತ್ತಾರೆ ಲಕ್ಷ್ಮೀನಾರಾಯಣ್.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಮೊದಲು ಖರ್ಜೂರ ಬೆಳೆದಿದ್ದೇನೆ. ಆಂಧ್ರಪ್ರದೇಶದ ವ್ಯಾಪಾರಿಗಳು ಖರೀದಿಸಲು ಬಂದಿದ್ದಾರೆ. ಸದ್ಯ ತಾಲೂಕಿನಲ್ಲಿಯೇ ಕೆ.ಜಿಗೆ 250 ರೂ.ನಂತೆ ಮಾರಾಟ ಮಾಡಲು ಯೋಚಿಸಿದ್ದೇನೆ. | ಲಕ್ಷ್ಮೀನಾರಾಯಣ ಹಂಪಸಂದ್ರ ರೈತ
ನೀರಾವರಿ, ಕೀಟಬಾಧೆ, ಇಳುವರಿ: ಗಿಡಗಳಿಗೆ ಡ್ರಿಪ್ ಅಳವಡಿಸಿದ್ದು, ಬೇಸಿಗೆಯಲ್ಲಿ 2 ದಿನಕ್ಕೊಮ್ಮೆ ನೀರು ಬಿಡುತ್ತೇನೆ. ಮಳೆಗಾಲದಲ್ಲಿ ಹೆಚ್ಚು ನೀರು ಬೇಕಾಗಲ್ಲ. ಗಿಡದ ಬುಡದಲ್ಲಿ ರೈನೋಸ್ ಎಂಬ ಕೀಟ ಉತ್ಪತ್ತಿಯಾಗಿ ಗಿಡದ ಸುಳಿ ಕಚ್ಚುತ್ತದೆ. ಅದನ್ನು ಪತ್ತೆ ಹಚ್ಚಿ ಔಷಧ ಸಿಂಪಡಿ ಸಬೇಕು. ಸಾವಯುವ ಗೊಬ್ಬರ ದೊಂದಿಗೆ ರಾಸಾಯನಿಕ (ಡಿಎಪಿ) ಗೊಬ್ಬರ ಬಳಸಿದರೆ ಪ್ರತಿ ಗಿಡಕ್ಕೆ 350ರಿಂದ 400 ಕೆಜಿ ಖರ್ಜೂರ ಬೆಳೆಯಬಹುದು. ನಮ್ಮ ತೋಟದ ಗಿಡಗಳಲ್ಲಿ 400 ಕೆ.ಜಿ. ಬೆಳೆ ಬಂದಿದೆ ಎಂದು ಲಕ್ಷ್ಮೀ ನಾರಾಯಣ ಹೇಳುತ್ತಾರೆ.
ಮಾಹಿತಿಗೆ: ಲಕ್ಷ್ಮೀನಾರಾಯಣ, ಮೊ.ಸಂ.-8762870327