ಪುರಾತನ ಕೃಷಿಯಲ್ಲಿ ಸಮೃದ್ಧ ಮೆಕ್ಕೆಜೋಳ

Vittavani
Published on

| ನರೇಂದ್ರ ಎಸ್. ಮರಸಣಿಗೆ ಹೆಬ್ರಿ (ಉಡುಪಿ)

ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಸಹಿತ ಮಲೆನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಮೆಕ್ಕೆಜೋಳವನ್ನು ಪುರಾತನ ಕ್ರಮದಲ್ಲಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿರುವ ದೇಸಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾಮ್ರ್ ಮತ್ತು ಡೇರಿಯ ಗೋಧಾಮದಲ್ಲಿ ಸಮೃದ್ಧವಾಗಿ ಬೆಳೆಸಲಾಗಿದೆ.

ಉಡುಪಿ-ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಗೋಧಾಮದ 6 ಎಕರೆ ಜಾಗದಲ್ಲಿ ದೇಸಿಯ ಗೋವುಗಳ ವರ್ವಿು ಕಾಂಪೋಸ್ಟ್, ಕಾಂಪೋಸ್ಟ್ ಗೊಬ್ಬರ, ಜೀವಾಮೃತ, ಹಸುವಿನ ಸಗಣಿ, ಗಂಜಲ ಬಳಸಿ ಸಾವಯವ ಮೆಕ್ಕೆಜೋಳ ಬೆಳೆಸಲಾಗಿದೆ. ಐಟಿ-ಬಿಟಿ, ಮೆಡಿಕಲ್ ಸೈನ್ಸ್ ಸಹಿತ ಇತರ ಉದ್ಯೋಗದಂತೆಯೇ ಪ್ರಾಚೀನ ಮಾದರಿ ಕೃಷಿಯೊಂದಿಗೆ ಮೆಕ್ಕೆಜೋಳ ಬೆಳೆದು ಸಮೃದ್ಧ ಕೃಷಿ ಪದ್ಧತಿಯನ್ನು ಮಾದರಿಯಾಗಿ ದೇಶಕ್ಕೆ ನೀಡುವ ಜತೆಗೆ ನಾವು ಕೂಡ ಐಟಿ-ಬಿಟಿ ಉದ್ಯೋಗಸ್ಥರಿಗೆ ಕಡಿಮೆ ಇಲ್ಲದಂತೆ ಅತ್ಯುತ್ತಮ ಜೀವನ ನಡೆಸಿ ಮಾದರಿಯಾಗಬಹುದು ಎಂದು ಖ್ಯಾತ ಕೈಗಾರಿಕೋದ್ಯಮಿ ಮೂಡಬಿದರೆ ಎಸ್​ಕೆಎಫ್ ಎಲಿಕ್ಸರ್ ಇಂಡಿಯಾ ಲಿಮಿಟೆಡ್​ನ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್ ಸಾಧಿಸಿ ತೋರಿಸಿದ್ದಾರೆ.

ಸಾಂಪ್ರದಾಯಕ ಬೇಸಾಯ: ಗೋಧಾಮದಲ್ಲಿ ಪುರಾತನ ಕ್ರಮದಂತೆಯೇ ಮಣ್ಣಿನ ಫಲವತ್ತತೆ ಕಾಪಾಡಲು ದೇಸಿ ಗೋವುಗಳ ಸಗಣಿ-ಗಂಜಲವನ್ನೇ ಬಳಸಿ ಕೃಷಿ ಮಾಡಲಾಗುತ್ತಿದೆ. ಅಸಾಧ್ಯ ಎಂದು ಹೇಳುವ ಈ ಆಧುನಿಕ ಕಾಲದಲ್ಲಿ ಮುನಿಯಾಲು ಗೋಧಾಮದಲ್ಲಿ ತ್ಯಾಜ್ಯ ನಿರ್ವಹಣೆ ಜತೆಗೆ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವ ಪ್ರಮುಖ ಉದ್ದೇಶದೊಂದಿಗೆ ದೇಸಿ ಗೋವುಗಳನ್ನು ಸಾಕಲಾಗುತ್ತಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲೇ ಬೇಸಾಯ ಮಾಡುವ ಮೂಲಕ ಗ್ರಾಮ ಸ್ವರಾಜ್ಯವನ್ನು ಮಾಡುವ ಸಂಕಲ್ಪವನ್ನು ಗೋಧಾಮ ಸಾರುತ್ತಿದೆ.

30 ಎಕರೆ ಹಚ್ಚಹಸುರಿನ ಭೂಮಿಯಲ್ಲಿ ಪ್ರಾಚೀನ ಭಾರತದ ಕಲ್ಪನೆಯಲ್ಲಿ ಹೊಸ ಲೋಕವನ್ನು ಗೋಧಾಮ ಸೃಷ್ಟಿಸಿದೆ. ಯುವ ಸಮುದಾಯಕ್ಕೆ ಪ್ರೇರಣೆಯಾಗಿ ಅಸಾಧ್ಯವಾದುದನ್ನು ಸಾಧಿಸಿ ತೋರುವುದೇ ಗೋಧಾಮದ ಪ್ರಮುಖ ಉದ್ದೇಶ. ಯುವಕರು 1 ಎಕರೆ ಖಾಲಿ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದು ಜೀವನವನ್ನು ಉತ್ತಮಪಡಿಸಿಕೊಂಡು ಆರ್ಥಿಕವಾಗಿ ಸದೃಡವಾಗಬಹುದು. ವರ್ಷಕ್ಕೆ 3 ಬೆಳೆಯನ್ನು ತೆಗೆದು ಜೋಳ ಮತ್ತು ಜೋಳದ ದಂಟು ಮಾರಾಟ ಮಾಡಿ ವಾರ್ಷಿಕ 15 ಲಕ್ಷ ರೂಪಾಯಿ ಆದಾಯ ಗಳಿಸಬಹುದು.

ಹಳ್ಳಿಗಳಲ್ಲಿ ಯುವಕರು ಕೃಷಿಯತ್ತ ಗಮನಹರಿಸಬೇಕು. ಮೆಕ್ಕೆಜೋಳವನ್ನು ಯಾವುದೇ ರಾಸಾಯನಿಕ ಬಳಸದೆ ಸಾಂಪ್ರದಾಯಿಕವಾಗಿ ದನದ ಗೊಬ್ಬರ ಹಾಗೂ ತ್ಯಾಜ್ಯ ಬಳಸಿ 6 ಎಕರೆ ಜಾಗದಲ್ಲಿ ಬೆಳೆಯಲಾಗಿದೆ. ಪ್ರಾಚೀನ ಮಾದರಿಯ ಕೃಷಿಯನ್ನು ಯುವಕರು ಮಾಡಿದರೆ ಖಂಡಿತವಾಗಿಯೂ ಫಲಪ್ರದವಾಗುತ್ತದೆ. ಮಣ್ಣಿನ ಫಲವತ್ತತೆ, ಪ್ರಕೃತಿಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. | ಜಿ.ರಾಮಕೃಷ್ಣ ಆಚಾರ್ ಆಡಳಿತ ನಿರ್ದೇಶಕ, ಎಸ್​ಕೆಎಫ್ ಎಲಿಕ್ಸರ್ ಇಂಡಿಯಾ ಲಿ., ಮೂಡಬಿದರೆ

ಮುಂದಿನ ಪೀಳಿಗೆಗೆ ಕೊಡುಗೆ: ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಪ್ರಾದೇಶಿಕ ಹವಾಮಾನಕ್ಕೆ ತಕ್ಕಂತೆ ಕೌಶಲ ಮತ್ತು ಪ್ರಾಯೋಗಿಕ ಜ್ಞಾನ ಬಳಸಿಕೊಂಡು ಅಸಾಧ್ಯವಾದುದನ್ನು ಸಾಧಿಸಲಾಗಿದೆ. ಭಾರತದಲ್ಲಿ ಕಡಿಮೆಯಾಗುತ್ತಿರುವ ರೈತ ಸಮುದಾವನ್ನು ಮತ್ತೆ ಕೃಷಿಯತ್ತ ಮುಖ ಮಾಡಿಸುವುದು, ಯುವಕ- ಯುವತಿಯರನ್ನು ಇನ್ನಷ್ಟು ಕೃಷಿಕ್ಷೇತ್ರದಲ್ಲಿ ತೊಡಗಿಸುವುದು, ನಮ್ಮೆದುರಿಗಿರುವ ಕೃಷಿಯಲ್ಲೇ ನಮಗೆ ಸುವರ್ಣ ಅವಕಾಶವಿದೆ ಎಂಬುದನ್ನು ಗೋಧಾಮವು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಿದೆ. ಆ ಮೂಲಕ ಯುವ ಸಮುದಾಯದ ಮೂಲಕವೇ ಕೃಷಿ ಸಮೃದ್ಧ ಭಾರತವನ್ನು ಹಳ್ಳಿಯ ಮೂಲಕ ಕಟ್ಟುವ ಸಂಕಲ್ಪವನ್ನು ಗೋಧಾಮ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net