ಮುಂಗಾರು ಹರುಷ, ಕೃಷಿ ಕಾರ್ಯ ಬಿರುಸು; ರಾಜ್ಯದಲ್ಲಿ 5.38 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ..

Vittavani
Published on
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಈ ವೇಳೆ ಸಾಕಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ರಾಜ್ಯ ಸರ್ಕಾರ ದಾಸ್ತಾನು ಮಾಡಿಕೊಂಡಿದೆ. ಉತ್ತಮ ಗಣಮಟ್ಟದ ಬೀಜ, ರಸಗೊಬ್ಬರ ಹಾಗೂ ಕೀಟನಾಶಗಳನ್ನು ರೈತರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಳೆಪೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತ ವಿಸ್ತೃತ ವರದಿ ಇಲ್ಲಿದೆ.

| ಹರೀಶ್ ಬೇಲೂರು ಬೆಂಗಳೂರು

ರಾಜ್ಯಕ್ಕೆ ಈ ಬಾರಿ ನೈಋತ್ಯ ಮುಂಗಾರು ಉತ್ತಮ ವರ್ಷಧಾರೆ ತರಲಿದ್ದು, ದಕ್ಷಿಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಬಂಗಾಳಕೊಲ್ಲಿಯಲ್ಲಿ ಈಗಾಗಲೆ ಮುಂಗಾರು ಮಾರುತಗಳ ಸೃಷ್ಟಿಗೆ ಪೂರಕ ವಾತಾವರಣ ಉಂಟಾಗಿದೆ. ಅಲ್ಲದೆ, ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸಾಗಿ ಸಾಗಿದೆ. ರೈತರು ಜಮೀನುಗಳನ್ನು ಹದಗೊಳಿಸಿ ಬೀಜ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ದಿಸೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 5.38 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಪೈಕಿ 7.56 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಲಭ್ಯವಿದೆ. ಇದುವರೆಗೆ 4,084 ಕ್ವಿಂಟಾಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ರಸಗೊಬ್ಬರಗಳನ್ನು ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ ಮಷಿನ್(ಪಿಒಎಸ್) ಮುಖೇನ ವಿತರಿಸಬೇಕಿದೆ. ಪ್ರಸ್ತುತ ಸಾಲಿನ ಪೂರ್ವ ಮುಂಗಾರಿನಲ್ಲಿ 2.80 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ 1.30 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಮಾಡಲಾಗಿದೆ. ರಾಜ್ಯದಲ್ಲಿ ಸದ್ಯ 7,22,070 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ. 2021-22ನೇ ಸಾಲಿನಲ್ಲಿ 3ನೇ ಮುಂಗಡ ಆಂದಾಜಿನ ವರದಿಯಂತೆ 139.83 ಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಈ ವರ್ಷದಲ್ಲಿ ಇನ್ನಷ್ಟು ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷಿಸಲಾಗಿದೆ. ಪೂರ್ವ ಮುಂಗಾರಿನ ಬೆಳೆ ಸಮೀಕ್ಷೆಗೆ ಈಗಾಗಲೆ ಸಿದ್ಧತೆಗಳು ನಡೆಯುತ್ತಿವೆ.

ಕಾರ್ಯಕ್ರಮ ಬಳಸಿಕೊಳ್ಳಿ: ಕೃಷಿ ಇಲಾಖೆ ರೈತರಿಗೆ ಅನುಕೂಲಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ( ಕೃಷಿ ಸಂಜೀವಿನಿ) ಯೋಜನೆಯಡಿ ಈಗಾಗಲೆ 160 ಚಿಕಿತ್ಸಾ ವಾಹನಗಳು ಸಂಚರಿಸುತ್ತಿವೆ. ಕೃಷಿ ವಿಸ್ತೀರ್ಣ ಚುಟುವಟಿಕೆ ಹಾಗೂ ತಾಂತ್ರಿಕ ಸಲಹೆಗಳನ್ನು ರೈತರಿಗೆ ನೀಡಲು ಚಾಲನೆ ನೀಡಲಾಗಿದೆ. ಸದ್ಯದಲ್ಲೇ ಹೆಚ್ಚುವರಿ 64 ಸಂಚಾರಿ ವಾಹನಗಳು ರಸ್ತೆಗೆ ಇಳಿಯಲಿವೆ. ರೈತರು ಎದುರಿಸುತ್ತಿರುವ ಕೃಷಿ ಸಂಬಂಧಿ ಸಮಸ್ಯೆಗಳಿಗೆ ಅಧಿಕಾರಿಗಳು ವಾಹನ ಜತೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಿದ್ದಾರೆ. ರೈತರ ಜಮೀನಿನಲ್ಲಿ ಸಮಸ್ಯೆಗಳನ್ನು ಆಲಿಸಲು ಜಾರಿಗೆ ಬಂದಿರುವ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ 16 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಅಕ್ರಮ ರಸಗೊಬ್ಬರ ಜಪ್ತಿ: ಅಕ್ರಮವಾಗಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ರಸಗೊಬ್ಬರ ಮತ್ತು ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. 2021-22ರಲ್ಲಿ 1,394 ಕ್ವಿಂಟಾಲ್ ಬಿತ್ತನೆ ಬೀಜ, 964 ಟನ್ ರಸಗೊಬ್ಬರ, 6,989 ಕೆಜಿ ಪೀಡೆನಾಶಕ ಜಪ್ತಿ. ಪ್ರಸ್ತುತ ವರ್ಷದಲ್ಲಿ 36 ಟನ್ ರಸಗೊಬ್ಬರ, 62 ಕೆಜಿ ಪೀಡೆನಾಶಕವನ್ನು ವಶಪಡಿಸಿಕೊಳ್ಳಲಾಗಿದೆ.

ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: 3.45 ಲಕ್ಷ ಟನ್ ಯೂರಿಯಾ, 1.02 ಲಕ್ಷ ಟನ್ ಡಿಎಪಿ, 0.20 ಲಕ್ಷ ಟನ್ ಎಂಒಪಿ, 2.48 ಲಕ್ಷ ಟನ್ ಕಾಂಪ್ಲೆಕ್ಸ್ ಸೇರಿ 7.15 ಲಕ್ಷ ಟನ್ ರಸಗೊಬ್ಬರ ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿದೆ. 9.85 ಲಕ್ಷ ಮೆಟ್ರಿಕ್ ಟನ್ ಗೋದಾಮುಗಳಲ್ಲಿ ದಾಸ್ತಾನಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಗೊಬ್ಬರ ಸರಬರಾಜು ಮಾಡಲಾಗುತ್ತಿದೆ. ಕೇಂದ್ರದಿಂದ 3,61,000 ಮೆಟ್ರಿಕ್ ಟನ್ ಗೊಬ್ಬರವನ್ನು ಕೇಂದ್ರ ಸರ್ಕಾರ, ರಾಜ್ಯಕ್ಕೆ ಹಂಚಿಕೆ ಮಾಡಿದೆ. 83,827 ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಮಾಡಲಾಗಿದೆ. ಬಿತ್ತನೆ ಬೀಜಕ್ಕೂ ಸಮಸ್ಯೆ ಇಲ್ಲ. ಸದ್ಯ 8,64,503 ಬಿತ್ತನೆ ಬೀಜ ದಾಸ್ತಾನಿದೆ.

ಒಂದು ವಾರದಲ್ಲಿ ಬೆಳೆ ವಿಮೆ: ಬಾಕಿ ಇರುವ ಬೆಳೆ ವಿಮೆ ಹಣವನ್ನು ಇನ್ನೊಂದು ವಾರದಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. 2018ರಿಂದ ಆಧಾರ್ ಲಿಂಕ್ ಆಗದ ಸುಮಾರು 1.50 ಲಕ್ಷ ಜನರಿಗೆ ಹಣ ಪಾವತಿ ಆಗುವುದು ಬಾಕಿ ಇತ್ತು. ಅವರ ಖಾತೆಗೆ ಆಧಾರ್ ಲಿಂಕ್ ಆಗಿರುವ ಕಾರಣ ಈಗ ಯಾವುದೇ ಸಮಸ್ಯೆ ಇಲ್ಲ. ಅಷ್ಟೂ ಜನರಿಗೂ ಪರಿಹಾರದ ಹಣ ತಲುಪಲಿದೆ ಎಂದಿದ್ದಾರೆ.

12.67 ಲಕ್ಷ ರೈತರು ನೋಂದಣಿ: 2021-22ನೇ ಸಾಲಿನಲ್ಲಿ 12.67 ಲಕ್ಷ ರೈತರು ಬೆಳೆವಿಮೆಗಾಗಿ ನೋಂದಣಿ ಮಾಡಿಸಿಕೊಂಡಿದ್ದರು. ಬಿತ್ತನೆ ವಿಫಲಗೊಂಡ ಹಿನ್ನೆಲೆಯಲ್ಲಿ ಕೋಯ್ಲೊತ್ತರ ನಷ್ಟದ ಅಡಿ 2.10 ಲಕ್ಷ ರೈತರಿಗೆ 135.72 ಕೋಟಿ ರೂ.ಗಳನ್ನು ಪರಿಹಾರವನ್ನು ನೇರವಾಗಿ ಅವರ ಅಕೌಂಟ್​ಗೆ ಜಮೆ ಮಾಡಲಾಗಿದೆ. ಬೆಳೆವಿಮೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.49 ರಂತೆ ಶೇ.98 ಹಣವನ್ನು ತುಂಬುತ್ತದೆ. ಇನ್ನು ಶೇ.2 ಪ್ರೀಮಿಯಂ ಹಣವನ್ನು ರೈತರು ಭರಿಸಬೇಕು.

ಅನುದಾನದ ವಿವರ

  • 2.92 ಲಕ್ಷ ರೈತರಿಗೆ ಒಟ್ಟು 380 ಕೋಟಿ ರೂ.ಬೆಳೆ ವಿಮೆ ಪರಿಹಾರ ನೀಡಿಕೆ
  • ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಫಸಲ್ ಬಿಮಾ ಯೋಜನೆಯಡಿ 36 ಬೆಳೆ ನೋಂದಾಯಿಸಲು ಅನುಮತಿ
  • 1.68 ಲಕ್ಷ ಟಾರ್ಪಾಲೀನ್ ವಿತರಣೆಗೆ ಸಿದ್ಧತೆ
  • ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪನೆಗೆ 30 ಕೋಟಿ ರೂ. ಅನುದಾನ ಬಿಡುಗಡೆ
  • ರೈತರಿಗೆ ಡೀಸೆಲ್ ಸಹಾಯಧನ ಒದಗಿಸಲು ‘ರೈತ ಶಕ್ತಿ’ ಯೋಜನೆ ಶೀಘ್ರದಲ್ಲೇ ಜಾರಿಗೆ. ಇದಕ್ಕಾಗಿ ಬಜೆಟ್​ನಲ್ಲಿ 400 ಕೋಟಿ ರೂ. ಮೀಸಲಿಟ್ಟಿದ್ದು, ಪ್ರತಿ ಎಕರೆಗೆ 250 ರೂ. ಸಹಾಯಧನ ಗರಿಷ್ಠ 5 ಎಕರೆವರೆಗೆ ಸಿಗಲಿದೆ
  • ಸಿರಿಧಾನ್ಯ ಉತ್ತೇಜನ ಕಾರ್ಯಕ್ರಮಗಳಿಗೆ 50 ಕೋಟಿ ರೂ. ಬಿಡುಗಡೆ
  • ರೈತ ಸಿರಿ ಯೋಜನೆಯಡಿ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಸಿರಿಧಾನ್ಯ ಬೆಳೆದ 18,276 ರೈತರಿಗೆ ಒಟ್ಟು 16 ಕೋಟಿ ರೂ. ಪ್ರೋತ್ಸಾಹಧನ ಪಾವತಿ
  • ಕಿಸಾನ್ ಸಮ್ಮಾನ್ ನಿಧಿಯಡಿ ಈವರೆಗೆ 53,83,156 ರೈತರಿಗೆ 8,702 ಕೋಟಿ ರೂ ಹಾಗೂ ರಾಜ್ಯ ಸರ್ಕಾರದಿಂದ 50,35,650 ರೈತರಿಗೆ 3,864 ಕೋಟಿ ರೂ. ಸಹಾಯಧನ ಪಾವತಿ
  • ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ತೊಗರಿ, ಹೆಸರು, ಉದ್ದು ಉತ್ಪಾದನೆ ಹೆಚ್ಚಿಸಲು ಮಿನಿಕಿಟ್ ವಿತರಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net