ಭೂ ಸ್ವಾವಲಂಬನೆ!; ಫಲವತ್ತತೆ ವೃದ್ಧಿಗೆ ಸರ್ಕಾರದ ದಿಟ್ಟ ಹೆಜ್ಜೆ..

Vittavani 2
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಹೆಚ್ಚು ಹೆಚ್ಚು ಇಳುವರಿ ಪಡೆಯುವ ಬಯಕೆ, ಕಡಿಮೆ ಭೂಮಿಯಲ್ಲಿ ಅತಿಯಾದ ಲಾಭ ಮಾಡುವ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಭೂಮಿಯನ್ನು ಸಂಪೂರ್ಣ ಹಾಳು ಮಾಡಲಾಗುತ್ತಿದೆ. ಜಾನುವಾರು ಸಾಕುವವರೂ ಕಡಿಮೆಯಾಗಿದ್ದು, ಹೊಲಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುವುದು ದುಸ್ಥರ ಎನ್ನುವಂತ ಸಂದರ್ಭ ಸೃಷ್ಟಿಯಾಗಿದ್ದು, ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳ ಕೃಷಿ ಭೂಮಿ ಸಾವಯವ ಇಂಗಾಲದ ಕೊರತೆಯಿಂದ ಬಳಲುತ್ತಾ ಪರಾವಲಂಬಿಯಾಗಿದೆ. ಇನ್ನು ಸ್ವಾವಲಂಬಿ ಮಾಡುವ ಕಡೆ ಸರ್ಕಾರ ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭೂಮಿ ಫಲವತ್ತಾಗಿರಬೇಕೆಂದರೆ ಅದರಲ್ಲಿ ನಿರ್ಧಿಷ್ಟ ಪ್ರಮಾಣದ ತೇವಾಂಶ, ಗಾಳಿ, ಖನಿಜ ಸೂಕ್ಷಾ್ಮಣುಗಳು ಇರಬೇಕು ಆದರೆ ರಾಜ್ಯದ ಇಪ್ಪತ್ತು ಜಿಲ್ಲೆಗಳ ಕೃಷಿ ಭೂಮಿ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮಣ್ಣಿನಲ್ಲಿ ತೇವಾಂಶ, ಗಾಳಿ, ಖನಿಜ, ಸಾವಯವ ಪದಾರ್ಥಗಳ ಪ್ರಮಾಣ ದಿನೇದಿನೆ ಇಳಿಮುಖವಾಗುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳ ಇಳುವರಿಯೂ ಕುಸಿದಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡಿರುವ ಸರ್ಕಾರ ಇದೀಗ ಕೃಷಿ ಭೂಮಿಗಳ ಸಾವಯವ ಇಂಗಾಲ ವೃದ್ಧಿಸುವ ಕಡೆ ನಡೆದಿದೆ.

ಒಂದೂವರೆ ದಶಕದ ಹಿಂದೆ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ.1 ರಿಂದ 1.5 ಇತ್ತು. ಆದರೆ ಈಗ ಅದು 0.5ಕ್ಕೆ ಇಳಿದಿರುವ ಆತಂಕದ ಸ್ಥಿತಿ ಇದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಕೃಷಿ ಉತ್ಪನ್ನಗಳಿಗೆ ಪರಾವಲಂಬಿಯಾಗಬೇಕಾಗುತ್ತದೆ. ಹೀಗಾಗಿ ಸರ್ಕಾರ ಇದೀಗ ಎಚ್ಚೆತ್ತುಕೊಂಡಿದೆ. ರಾಜ್ಯದಲ್ಲಿ 129.70 ಲಕ್ಷ ಹೆಕ್ಟೇರ್ ಭೂಮಿ ಇದೆ. ಇದರಲ್ಲಿ ಸುಮಾರು 71 ಲಕ್ಷ ಹೆಕ್ಟೇರ್ ಭೂಮಿಗೆ ಉಪಚಾರ ಬೇಕಾಗುತ್ತದೆ ಎಂಬ ಅಂದಾಜಿದೆ. ಆದ್ದರಿಂದಲೇ ಸರ್ಕಾರ ಭೂಮಿಯನ್ನು ಉಪಚರಿಸುವ ಮೂಲಕ ಫಲವತ್ತತೆ ಹೆಚ್ಚಿಸಲು ಮುಂದಾಗಿದೆ. ಮಣ್ಣಿನ ಫಲವತ್ತತೆ ಕಡಿಮೆ ಇರುವ ಪ್ರತಿ ಜಿಲ್ಲೆಯಲ್ಲಿ 100 ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಶೇ.0.5ಕ್ಕಿಂತ ಕಡಿಮೆ ಸಾವಯವ ಇಂಗಾಲ, ಶೇ.80ಕ್ಕಿಂತ ಕಡಿಮೆ ಸತುಗಳು, ಶೇ.60 ಕ್ಕಿಂತ ಕಡಿಮೆ ಕಬ್ಬಿಣ ಅಂಶ ಕಂಡು ಬಂದಿದೆ. ರಸಸಾರ, ಲವಣಾಂಶ ಹೆಚ್ಚಾಗಿ ಪೋಷಕಾಂಶ ಕಡಿಮೆಯಾಗಿದೆ. ಆದ್ದರಿಂದ ಸರ್ಕಾರ ಸಾವಯವ ಇಂಗಾಲ ಅಭಿಯಾನಕ್ಕೆ ಮುಂದಾಗಿದೆ.

ಭೂಮಿ ಸವಳು-ಜವಳು: ಒಂದೆಡೆ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ನೀರು ಬಳಕೆಯಿಂದ ಭೂಮಿ ಸವಳು-ಜವಳು ಆಗುತ್ತಿದೆ. ರಾಜ್ಯದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್ ಸವಳು-ಜವಳು ಭೂಮಿ ಇದೆ ಎಂಬ ಅಂದಾಜಿದೆ. ತಿಪ್ಪೆ ಗೊಬ್ಬರ ಬಳಕೆ ಕಡಿಮೆ ಯಾಗಿರುವುದು, ಹಸಿರೆಲೆ ಗೊಬ್ಬರ ಬಳಕೆ ಆಗದಿರುವುದು, ಬಹುಬೆಳೆ ಪದ್ಧತಿ ಇಲ್ಲದೇ ಏಕ ಬೆಳೆ ಪದ್ಧತಿ ಹೆಚ್ಚುತ್ತಿರುವುದು ಭೂಮಿಯ ಫಲವತ್ತತೆ ಕಡಿಮೆಗೆ ಕಾರಣವಾಗಿದೆ.

ಅಭಿಯಾನ ಏನು?: ಮಣ್ಣಿನ ಫಲವತ್ತತೆ ಹೆಚ್ಚಿಸಲು ಸರ್ಕಾರ ಐದು ವರ್ಷಗಳಲ್ಲಿ 75 ಕೋಟಿ ರೂ. ಬಳಕೆ ಮಾಡಿ ಸಾವಯವ ಇಂಗಾಲ ಅಭಿಯಾನ ಆರಂಭಿಸಿದೆ. ವರ್ಷಕ್ಕೆ 15 ಕೋಟಿ ರೂ. ವೆಚ್ಚ ಮಾಡಲಿದೆ. ಶೇ.75 ಸಬ್ಸಿಡಿಯಲ್ಲಿ ಹಸಿರೆಲೆ ಗೊಬ್ಬರದ ಕಿಟ್​ಗಳನ್ನು ನೀಡಲಿದೆ. ಅದರ ಜತೆಗೆ ದ್ವಿದಳ ಧಾನ್ಯಗಳ ಮಿನಿ ಕಿಟ್ ನೀಡಲಿದೆ. 25 ಜಿಲ್ಲೆಗಳಲ್ಲಿ ತಲಾ 4 ಕೆಜಿಯ 90,750 ತೊಗರಿ ಪ್ಯಾಕೆಟ್​ಗಳನ್ನು ರೈತರಿಗೆ ವಿತರಿಸುತ್ತಿದೆ. 24 ಜಿಲ್ಲೆಗಳಲ್ಲಿ ತಲಾ 4 ಕೆಜಿಯ 88,650 ಪ್ಯಾಕೆಟ್ ಹೆಸರು, 11 ಜಿಲ್ಲೆಗಳಲ್ಲಿ 22,500 ಪ್ಯಾಕೆಟ್ ಉದ್ದು ನೀಡಲಿದೆ. ಇದರಲ್ಲಿ ಹೊಸ ತಳಿಗಳನ್ನು ಪರಿಚಯಿಸಲಿದೆ. ಒಂದೇ ರೀತಿಯ ಬೆಳೆ ಬೆಳೆಯದೇ ದ್ವಿದಳ ಧಾನ್ಯ ಬೆಳೆದಾಗ ಅದರ ಸೊಪು್ಪ ಸಹ ಭೂಮಿಗೆ ಒಳ್ಳೆಯ ಆಹಾರವಾಗುತ್ತದೆ. ಇದರ ಜತೆಗೆ 5 ಕೃಷಿ ವಿಶ್ವವಿದ್ಯಾಲಯಗಳಲ್ಲಿ ತಲಾ 1000 ಎಕರೆಗಳಲ್ಲಿ ನೈಸರ್ಗಿಕ ಕೃಷಿ ಮಾಡಲಾಗುತ್ತಿದೆ. ಜೈವಿಕ ಗೊಬ್ಬರ, ಎರೆಹುಳು ಗೊಬ್ಬರವನ್ನು ಹೆಚ್ಚು ಪ್ರಚಾರ ಮಾಡಲಾಗುತ್ತದೆ.

ಪರಿಣಾಮಗಳೇನು?

  • ಜಮೀನಿನಲ್ಲಿ ನೀರು ಇಂಗುವುದಿಲ್ಲ
  • ಮಣ್ಣು ಕೊಚ್ಚಿ ಹೋಗುತ್ತದೆ
  • ಬೆಳೆಗಳಿಗೆ ತೇವಾಂಶ ಕಡಿಮೆಯಾಗುತ್ತದೆ
  • ಮಣ್ಣಿನ ಸಂರಚನೆ ಹಾಳಾಗಿದೆ
  • ಕೃಷಿ ಉತ್ಪನ್ನಗಳ ಉತ್ಪಾದಕತೆ ಶೇ.25 ಕಡಿಮೆಯಾಗುತ್ತದೆ

ಫಲವತ್ತತೆ ಕಡಿಮೆ ಇರುವ ಜಿಲ್ಲೆಗಳು: ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಗದಗ, ಹಾವೇರಿ, ಧಾರವಾಡ, ಬೆಂಗಳೂರು ನಗರ, ಬಾಗಲಕೋಟೆ, ವಿಜಯನಗರ, ವಿಜಯಪುರ

ರಸಗೊಬ್ಬರ, ಕೀಟನಾಶಕ ಬಳಕೆ ಹೆಚ್ಚಾಗಿರುವುದರಿಂದ ಸ್ವಾವಲಂಬಿಯಾಗಿದ್ದ ಮಣ್ಣನ್ನು ಪರಾವಲಂಬಿ ಮಾಡಿದ್ದೇವೆ. ಮತ್ತೆ ಅದನ್ನು ಸ್ವಾವಲಂಬಿ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದಲೇ ವಿಶೇಷ ಅಭಿಯಾನದ ಮೂಲಕ ಸತ್ವ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲದಿದ್ದರೆ ಕೃಷಿ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. | ಬಿ.ಸಿ. ಪಾಟೀಲ್ ಕೃಷಿ ಸಚಿವ

ರಸಗೊಬ್ಬರ ಬಳಕೆ: ಇಡೀ ದೇಶದಲ್ಲಿ ರಸಗೊಬ್ಬರದ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ನೀಡುವ ಸಬ್ಸಿಡಿಗಳೇ 2.39 ಲಕ್ಷ ಕೋಟಿ ರೂ.ರಾಜ್ಯದಲ್ಲಿ ಸುಮಾರು 40 ಸಾವಿರ ಕೋಟಿ ರೂ.ಗಳ ವಹಿವಾಟು ನಡೆಯುತ್ತಿದೆ.

ಭೂಮಿ ಫಲವತ್ತತೆ ಇರುವ ಜಿಲ್ಲೆಗಳು: ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ, ಚಾಮರಾಜನಗರ.

ಮಣ್ಣಿನಲ್ಲಿ ಏನೇನು ಇರಬೇಕು?

  • ಶೇ.25 ನೀರು
  • ಶೇ.25 ಗಾಳಿ
  • ಶೇ. 45 ಖನಿಜ
  • ಶೇ. 5 ಸಾವಯವ ಪದಾರ್ಥ
  • ಸಾವಯವ ಪದಾರ್ಥದಲ್ಲಿ ಶೇ.1 ಸೂಕ್ಷ್ಮ ಜೀವಾಣು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net