

ಕಳೆದ ವಾರವಿಡೀ, ನೂರು ವರ್ಷ ಕಂಡ ಹೀರಾಬೆನ್ರದ್ದೇ ಸುದ್ದಿ. ನರೇಂದ್ರ ಮೋದಿಯವರ ತಾಯಿಯಾಗಿ ಆಕೆ ಇಡೀ ರಾಷ್ಟ್ರದ ಗೌರವವನ್ನು ತನ್ನದಾಗಿಸಿಕೊಂಡಿದ್ದರು. ಮೋದಿ ದೇಶದ 14ನೇ ಪ್ರಧಾನಿಯಾಗಿ ಜನಮಾನಸದಲ್ಲಿ ಬಲವಾಗಿ ಬೇರೂರಿದ್ದಾರೆ. ಆದರೆ ಇದಕ್ಕೂ ಮೊದಲಿನ ಯಾವ ಪ್ರಧಾನಿಯ ತಾಯಿಯೂ ಜನಮಾನಸವನ್ನು ಇಷ್ಟು ಆವರಿಸಿಕೊಂಡಿದ್ದು ನನಗಂತೂ ನೆನಪಿಲ್ಲ. ಮೋದಿಯವರನ್ನು ರಾಷ್ಟ್ರದ ಆಸ್ತಿ ಎಂದು ಜನ ಕೊಂಡಾಡುವಾಗಲೆಲ್ಲ ಅವರನ್ನು ಕೊಡುಗೆಯಾಗಿ ಕೊಟ್ಟ ಆ ತಾಯಿಯನ್ನು ಶ್ರದ್ಧೆಯಿಂದ ನೆನಪಿಸಿಕೊಂಡಿದ್ದಾರೆ. ಗಮನಿಸಬೇಕಾದ್ದೆಂದರೆ, ಆಕೆ ಮಾತ್ರ ಎಂದಿಗೂ ತನ್ನ ಮಗ ಪ್ರಧಾನಿ ಎಂಬಂತೆ ಮಾತಾಡಿದ್ದನ್ನು, ಅಹಂಕಾರವನ್ನೇ ಹೊದ್ದುಕೊಂಡು ನಡೆದಾಡಿದ್ದನ್ನು ಯಾರೂ ನೋಡಿಲ್ಲ. ಆಸ್ಪತ್ರೆಗೆ ಹೋಗುವಾಗ, ವೋಟು ಹಾಕಲು ಹೋಗುವಾಗಲೂ ಸಾಮಾನ್ಯರಂತೆ ಆಟೊದಲ್ಲಿ ಹೋದ ಆಕೆ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗಿ ದೊಡ್ಡವರ ಮನೆಯವರು ಹೇಗಿರಬೇಕು ಎಂಬುದಕ್ಕೆ ಆದರ್ಶವಾಗಿಬಿಟ್ಟರು. ಮಗ ತನ್ನ ತಾಯಿಯನ್ನು ಶ್ರೇಷ್ಠಳೆಂದು ಭಾವಿಸಿ ಹೊಗಳುವುದು ಸಹಜ ಮತ್ತು ಕರ್ತವ್ಯ ಕೂಡ. ಆದರೆ ತಾಯಿ ಮಾತ್ರ ಅದನ್ನು ಎಂದಿಗೂ ತಲೆಗೇರಿಸಿಕೊಳ್ಳಬಾರದು ಅಷ್ಟೆ. ಇಲ್ಲವಾದರೆ ಮಗನ ಕಾರ್ಯಕ್ಷೇತ್ರದಲ್ಲಿ ಪದೇಪದೆ ಹಸ್ತಕ್ಷೇಪ ನಡೆಸಿ ಆತನ ಬದುಕನ್ನೇ ದುಸ್ತರಗೊಳಿಸುವ ಸಾಧ್ಯತೆಗಳು ಬಹಳ ಇವೆ. ಅದು ಸರಿಯೂ ಹೌದು. ಹೀರಾಬೆನ್ರ ಐದು ಜನ ಗಂಡುಮಕ್ಕಳಲ್ಲಿ ಮೋದಿ ಒಬ್ಬರು. ಇತರ ನಾಲ್ಕು ಜನರೇನೋ ಪ್ರಧಾನಿಯಾಗಲಿಲ್ಲ. ಮೋದಿ ತನಗೆ ಸಿಕ್ಕ ಸಂಸ್ಕಾರವನ್ನು, ವೈಯಕ್ತಿಕ ಸಾಮರ್ಥ್ಯವನ್ನು ಬಳಸಿಕೊಂಡು ಆ ಹಂತಕ್ಕೇರಿದರು. ಹೀಗಿರುವಾಗ ತಾಯಿ ಅದರ ಶ್ರೇಯವನ್ನು ತಾನು ಪಡೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅದೇ ವೇಳೆಗೆ ತನ್ನೆಲ್ಲ ಸಾಧನೆಗಳಿಗೂ ಕಾರಣವಾದ ತಾಯಿಗೆ ಈ ಶ್ರೇಯವನ್ನು ಕೊಡದೇ ಹೋದರೆ ಮಗ ಕೃತಘ್ನನಾದಂತೆ. ಈ ನೈತಿಕ ಚೌಕಟ್ಟನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಇತ್ತೀಚೆಗೆ ಖ್ಯಾತ ಲೇಖಕರೊಬ್ಬರ ಸನ್ಮಾನ ಸಮಾರಂಭದಲ್ಲಿ ಅವರ ತಂದೆ ಸಿಕ್ಕರು. ‘ನೀವೇಕೆ ವೇದಿಕೆಯ ಮೇಲೆ ಬರಲಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿ ಕೇಳಿದ್ದಕ್ಕೆ ‘ಅವೆಲ್ಲವನ್ನೂ ಆತನೇ ಗಳಿಸಿದ್ದು. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ಬಲು ಸಹಜವಾಗಿ ಹೇಳಿದರು. ಮನಮುಟ್ಟಿದ ಮಾತು ಅದು.
ಸನ್ಯಾಸತ್ವವನ್ನು ಪಡೆದ ವ್ಯಕ್ತಿ ಮತ್ಯಾರಿಗೂ ಪ್ರಣಾಮ ಮಾಡಬೇಕಿಲ್ಲವಂತೆ, ತಾಯಿಗೆ ಮಾತ್ರ. ಮಗ ಸನ್ಯಾಸಿಯಾದನೆಂದರೆ ಆ ತಾಯಿಯ ವ್ಯಕ್ತಿತ್ವ ಕೂಡ ಭಿನ್ನವೇ ಆಗಿಬಿಡುತ್ತದೆ. ಆಕೆ ಆತನಿಂದ ಏನನ್ನೂ ಬಯಸಲಾರಳು. ಸಾಧ್ಯವಾದರೆ ಪಥವಿಮುಖನಾಗದಂತೆ ಆತನನ್ನು ನಿರಂತರವಾಗಿ ಪ್ರೇರೇಪಿಸುವ ಜವಾಬ್ದಾರಿ ಅವಳದ್ದು. ನೇಣಿಗೇರಬೇಕಿದ್ದ ರಾಮ್್ರಸಾದ್ ಬಿಸ್ಮಿಲ್ನನ್ನು ನೋಡಹೊರಟಿದ್ದ ತಾಯಿ ಕಣ್ಣೀರ್ಗರೆದ ಮಗನನ್ನು ಕಂಡು ಕೆಂಡವಾದಳಂತೆ. ‘ಬ್ರಿಟೀಷರ ವಿರುದ್ಧ ಕಾದಾಡಿ ನೇಣಿಗೇರುವ ಮಗನ ದರ್ಶನ ಪಡೆಯಲು ಹೆಮ್ಮೆಯಿಂದ ಬಂದರೆ ಸಾವಿಗೆ ಹೆದರಿ ಕಣ್ಣೀರ್ಗರೆಯುವ ನಿನ್ನ ನೋಡಬೇಕಾಯ್ತಲ್ಲ. ಇಷ್ಟು ಹೇಡಿ ಎಂದು ಗೊತ್ತಿದ್ದರೆ ಹುಟ್ಟಿದೊಡನೆ ಕೊಂದುಬಿಡುತ್ತಿದ್ದೆ’ ಎಂದಳಂತೆ. ಕಣ್ಣೀರಲ್ಲೇ ಆಕೆಯ ಪಾದ ತೊಳೆದ ಬಿಸ್ಮಿಲ್ ‘ಇದು ಹೇಡಿತನದ ಕಣ್ಣೀರಲ್ಲ, ದುಃಖದ ಕಣ್ಣೀರು. ಎಲ್ಲರೂ ನಿನ್ನಂತಹ ತಾಯಂದಿರೇ ಆಗಿಬಿಟ್ಟಿದ್ದರೆ, ನನ್ನಂಥ ಸಂತಾನವೇ ಹುಟ್ಟುತ್ತಿತ್ತು. ಬ್ರಿಟೀಷರು ಆಗ ಭಾರತದೊಳಕ್ಕೆ ಕಾಲಿಡುವ ಸಾಹಸ ಮಾಡುತ್ತಿರಲಿಲ್ಲ’ ಎಂದನಂತೆ.
ಮೋದಿ ಅನೇಕ ಬಾರಿ ತಾಯಿ ಕುರಿತಂತೆ ಹೇಳುತ್ತಾ ಗದ್ಗದಿತರಾದದ್ದಿದೆ. ಆಕೆಯ ಗುಣಗಾನ ಮಾಡುವ ಸಂದರ್ಭವನ್ನು ಅವರೆಂದಿಗೂ ಬಿಟ್ಟುಕೊಟ್ಟಿಲ್ಲ. ಅಧಿಕಾರ ಹಿಡಿಯುವಾಗ ‘ಎಂದೂ ಲಂಚಕ್ಕೆ ಕೈ ಒಡ್ಡಬೇಡ’ ಎಂದು ತಾಯಿ ಹೇಳಿದ್ದನ್ನು ಅವರು ಅನೇಕ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ವಿದೇಶದ ಸಂದರ್ಶನವೊಂದರಲ್ಲಂತೂ ತಾಯಿಯ ಕುರಿತಂತೆ ಹೇಳುತ್ತಾ ಉಮ್ಮಳಿಸಿಬರುವ ದುಃಖ ತಡೆಯಲು ಅವರು ಮಾಡಿದ ಪ್ರಯತ್ನವನ್ನು ಇಂದಿಗೂ ಯುಟ್ಯೂಬ್ಗಳಲ್ಲಿ ನೋಡಬಹುದು. ಹೀಗಾಗಿಯೇ ತಾಯಿಯನ್ನು ಕಳಕೊಂಡ ದುಃಖ ಮೋದಿಯವರಿಗೆ ಶಾಶ್ವತವಾದ್ದು. ಆದರೆ ಅದನ್ನು ಅವರು ಸ್ವೀಕರಿಸಿದ ರೀತಿ ಇತ್ತಲ್ಲ ಅದು ಮಾತ್ರ ಮಾರ್ಗದರ್ಶಿ. ವಿಚಾರ ತಿಳಿದ ಕೆಲವು ಗಂಟೆಗಳಲ್ಲೇ ಅಂತ್ಯಸಂಸ್ಕಾರವನ್ನೂ ಮಾಡಿಮುಗಿಸಿ, ದೇಶಕ್ಕೊಂದು ಸಮರ್ಥ ಸಂದೇಶ ಕಳಿಸಿದರು. ಯಾವ ಗೌಜು-ಗದ್ದಲವಿರಲಿಲ್ಲ, ಆಡಂಬರವೂ ಇರಲಿಲ್ಲ. ತಾಯಿಯ ಶವಯಾತ್ರೆಗೆ ಬಂದು, ತನ್ನನ್ನು ಪ್ರಭಾವಗೊಳಿಸುವ ಯಾವ ಅವಕಾಶವನ್ನೂ ರಾಜಕಾರಣದ ಬಕೆಟ್ಟುಗಳಿಗೆ ಅವರು ಕೊಡಲೇ ಇಲ್ಲ. ಅನೇಕರ ಟ್ವೀಟುಗಳಲ್ಲಿ ಮೋದಿಯವರನ್ನು ಹೊಗಳಿದ್ದಾರಲ್ಲ, ಅದರೊಡನೆ ಅವರೆದುರಿಗೆ ನಿಲ್ಲುವ ಅವಕಾಶವೊಂದು ತಪ್ಪಿಹೋಯ್ತಲ್ಲ ಎಂಬ ಚಿಂತೆಯೂ ಇದ್ದಂತಿತ್ತು! ಹಾಗೆಯೇ ಸುಮ್ಮನೆ ಊಹಿಸಿ ನೋಡಿ, ಹೀರಾಬೆನ್ರ ಅಂತಿಮ ದರ್ಶನಕ್ಕೆ ಅವಕಾಶವಿದ್ದಿದ್ದರೆ ಯಾರ್ಯಾರು ಅಲ್ಲಿ ಹಾಜರಿರುತ್ತಿದ್ದರು ಅಂತ. ನಿಸ್ಸಂಶಯವಾಗಿ ಭಾಜಪದ ರಾಷ್ಟ್ರ, ರಾಜ್ಯ ನಾಯಕರುಗಳಲ್ಲದೇ ಕೊನೆಗೆ ಈ ಬಾರಿಯ ವಿಧಾನಸಭೆಯ ಟಿಕೆಟ್ ಆಕಾಂಕ್ಷಿಯೂ ನಿಂತಿರುತ್ತಿದ್ದ. ಮತ್ತು ಆ ಮಹಾತಾಯಿಯ ಶವದೊಂದಿಗೆ ತನ್ನದೊಂದು ಸೆಲ್ಪಿ ಹಾಕಿಕೊಂಡು ಸಾಧ್ಯವಾದರೆ ಎಂಟ್ಹತ್ತು ಚಿತ್ರಗಳ ಒಂದು ಫೈಲ್ ಮಾಡಿಕೊಂಡು ಸಂಘ ಕಾರ್ಯಾಲಯದೆದುರು ನಿಂತುಬಿಡುತ್ತಿದ್ದ. ಈ ಕಾರಣಕ್ಕಾದರೂ ಟಿಕೆಟು ಕೊಡಲಿ ಅಂತ. ಈ ಹೊಲಸಿಗೆ ಆ ಪುಣ್ಯಾತ್ಮ ಅವಕಾಶವನ್ನೇ ಕೊಡಲಿಲ್ಲ!
ಅನೇಕರು ಮೋದಿಯವರ ಸರಳತೆಗೆ ಹೆಮ್ಮೆಪಟ್ಟು ಟ್ವೀಟ್ ಮಾಡಿದ್ದನ್ನು ನಾನು ನೋಡಿದೆ. ಅದ್ಯಾವ ಧೈರ್ಯದಿಂದ ಇವರೆಲ್ಲ ಟ್ವೀಟ್ ಮಾಡುತ್ತಾರೋ ದೇವರೇ ಬಲ್ಲ. ಅನೇಕರು ಮಕ್ಕಳ ಮದುವೆಯನ್ನು ಇಂದ್ರನ ದರ್ಬಾರಿನಂತೆ ಸಿಂಗರಿಸಿದ್ದು ನಮ್ಮ ಕಣ್ಣೆದುರಿಗಿದೆ. ಸ್ವತಃ ಮಕ್ಕಳೇ ತೀರಿಕೊಂಡಾಗ ಇಡಿ ರಾಜ್ಯಕ್ಕೆ ಮುಕ್ತ ಆಹ್ವಾನ ಕೊಟ್ಟಂತೆ ಶವಯಾತ್ರೆ ನಡೆಸಿದ ಉದಾಹರಣೆ ಇದೆ. ಎಕರೆಗಟ್ಟಲೆ ಸರ್ಕಾರಿ ಜಾಗವನ್ನು ಶವಸಂಸ್ಕಾರಕ್ಕಾಗಿ ಮೀಸಲಿಟ್ಟ ಉದಾಹರಣೆಗಳಿವೆ. ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗ ಮಗಳು ರಕ್ಷಿತಾಗಾಗಿ ಬೆಂಗಳೂರಿನಲ್ಲಿ ನಡೆಸಿದ ಅದ್ದೂರಿ ವಿವಾಹವನ್ನು ಮರೆಯುವುದುಂಟೇನು? ಜನಾರ್ದನ ರೆಡ್ಡಿಯವರಂತೂ ವಿವಾಹ ಪಕ್ಕಕ್ಕಿಡಿ, ಆಹ್ವಾನ ಪತ್ರಿಕೆಯೇ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆಗೆಲ್ಲ ಮೋದಿ ನೋಟು ಅಮಾನ್ಯೀಕರಣ ಮಾಡಿ ಜನಸಾಮಾನ್ಯರ ವೈಭವಕ್ಕೆ ತಾತ್ಕಾಲಿಕವಾಗಿ ಬ್ರೇಕು ಹಾಕಿದ್ದರು. ಉದಾಹರಣೆ ನೀಡುತ್ತಾ ಹೋದರೆ ಪ್ರತಿಯೊಬ್ಬರದ್ದೂ ಒಂದೊಂದು ದೊಡ್ಡ ಕಥೆಯೇ. ಉನ್ನತ ಸ್ಥಾನವನ್ನಲಂಕರಿಸಿ ಸಹಜವಾಗಿಯೇ ಇವೆಲ್ಲವನ್ನೂ ಸ್ವೀಕರಿಸಿದ ಮಂದಿ ಬಲು ವಿರಳ.
ಹಾಗಂತ ತಾಯಿಯ ಸಾವಿನಲ್ಲೂ ಈ ರೀತಿಯ ಸಮಾಜಪ್ರಜ್ಞೆ ಮೆರೆದವರು ಮೋದಿಯೊಬ್ಬರೇ ಅಲ್ಲ. ಕೇಂದ್ರ ವೈದ್ಯಕೀಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ಅವರ ತಾಯಿ ಏಕಾಕಿ ಕುಸಿದುಬಿದ್ದು ತೀರಿಕೊಂಡಿದ್ದರು. ಆಸ್ಪತ್ರೆಗೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನಮಾಡಿದ ನಂತರವೂ ಆಕೆಯ ದೇಹತ್ಯಾಗವಾಯ್ತು. ಆಗ ಆಕೆಯ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದ ಹೆಗ್ಗಳಿಕೆ ಹರ್ಷವರ್ಧನ್ರದ್ದು. ಅವರೇನು ಅದನ್ನು ಸುದ್ದಿಯಾಗಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅಪರೂಪದ ಜೀವವಲ್ಲವೇನು?
ಮೋದಿ ಯಾರೂ ಮಾಡದ್ದೇನೂ ಮಾಡಲಿಲ್ಲ. ಭಾರತದಲ್ಲಿ ರಾಜನ ಕರ್ತವ್ಯ ಪ್ರಜೆಗಳ ಆನಂದಕ್ಕೆ ಭಂಗ ಬರದಂತೆ ನೋಡಿಕೊಳ್ಳುವುದಷ್ಟೆ. ಆತ ಮೂರು ಜನರಿಗೆ ಮಾತ್ರ ತಲೆಬಾಗಲೇಬೇಕು. ಗುರುವಿಗೆ, ತಾಯಿಗೆ ಮತ್ತು ತನ್ನ ಸರ್ವಸ್ವವೂ ಆಗಿರುವ ಪ್ರಜೆಗಳಿಗೆ. ಚಂದ್ರಗುಪ್ತ ಇಡಿಯ ಭಾರತವನ್ನು ಆಳುವಾಗಲೂ ಚಾಣಕ್ಯನ ಪರಮಶಿಷ್ಯನೇ ಆಗಿದ್ದ. ಗುರುಗಳು ಹಾಕಿದ ಗೆರೆಯನ್ನು ಆತ ಎಂದಿಗೂ ದಾಟಿದ್ದೇ ಇಲ್ಲ. ಸನ್ಯಾಸಿಯಾಗಿ ಇಡೀ ದೇಶದಲ್ಲಿ ಅದ್ವೈತದ ಡಿಂಡಿಮ ಬಾರಿಸುತ್ತಾ ಹೊಸ ಪಂಥವನ್ನೇ ಹುಟ್ಟುಹಾಕಿದ ಶಂಕರರು ಅಂತ್ಯಕಾಲದಲ್ಲಿ ತಾಯಿ ನೆನಪಿಸಿಕೊಂಡಳೆಂಬ ಏಕೈಕ ಕಾರಣಕ್ಕೆ ಧಾವಿಸಿ ಬಂದರಲ್ಲದೇ ಎಲ್ಲರನ್ನೂ ಎದುರು ಹಾಕಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆ ನಿಂತರು. ಪ್ರಜೆಗಳ ಹಿತಕ್ಕೆ ಮಾರಕನಾಗಬಹುದಾಗಿದ್ದ ತನ್ನ ಮಗನಿಗೆ ಅಮೋಘವರ್ಷ ನೃಪತುಂಗ ಮರಣದಂಡನೆ ಶಿಕ್ಷೆ ಕೊಡಲು ಸಜ್ಜಾಗಿದ್ದ. ಮೋದಿ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅವರು ಅನವಶ್ಯಕವಾಗಿ ಯಾರೆದುರೂ ತಲೆಬಾಗಲಿಲ್ಲ. ಮೇಲ್ನೋಟಕ್ಕೆ ನೋಡಿದರೆ ಅವರೊಬ್ಬ ಅಹಂಕಾರಿಯಂತೆ ಕಾಣಬಹುದೇನೋ, ಆದರೆ ಆಂತರ್ಯದಲ್ಲಿ ಪ್ರಜೆಗಳ ಹಿತಕ್ಕಾಗಿ ತನ್ನ ತಾನು ಸವೆದುಕೊಳ್ಳುತ್ತಿರುವ ಈ ದೇಶದ ಶ್ರೇಷ್ಠ ರಾಜರುಗಳ ಇಂದಿನ ಪರಂಪರೆಯವರಾಗಿ ನಿಂತಿದ್ದಾರಷ್ಟೆ. ಇಂತಹ ಪರಂಪರೆಗೆ ಭಂಗ ಬರುವಂತೆ ಆಗಿದ್ದು ಬ್ರಿಟೀಷರ ಆಗಮನದ ನಂತರವೇ. ಬ್ರಿಟೀಷರ ಆಡಳಿತವನ್ನು ಇಲ್ಲಿ ಸದೃಢಗೊಳಿಸಿದ ರಾಬರ್ಟ್ ಕ್ಲೈವ್ ಮೊದಲ ಬಾರಿಗೆ ತನ್ನ ದೇಶಕ್ಕೆ ಮರಳುವಾಗ ಸುಮಾರು ಎರಡೂವರೆ ಲಕ್ಷ ಪೌಂಡುಗಳಷ್ಟು ಹಣವನ್ನು ಲೂಟಿಗೈದು ಒಯ್ದಿದ್ದನಂತೆ. ಎರಡನೇ ಬಾರಿಗೆ ಬಂದು ಎರಡೇ ವರ್ಷದಲ್ಲಿ ನಾಲ್ಕು ಲಕ್ಷ ಪೌಂಡುಗಳ ಲೂಟಿಗೈದಿದ್ದ. ಸ್ವತಃ ಮೆಕಾಲೆ ಈ ಎಲ್ಲ ಬ್ರಿಟೀಷ್ ಅಧಿಕಾರಿಗಳ ವೈಭವದ ಬದುಕನ್ನು ನೋಡಿ ಇವರನ್ನು ‘ಬಿಳಿ ನವಾಬರು’ ಎಂದು ಸಂಬೋಧಿಸುತ್ತಿದ್ದ. ರಾಬರ್ಟ್ ಕ್ಲೈವ್ 1764ರಲ್ಲಿ ‘ನವಾಬರನ್ನು ಮುಂದಿಟ್ಟುಕೊಂಡು ನಾವು ಲೂಟಿ ಮಾಡಬೇಕು. ಆತನೇ ನಮ್ಮ ಮತ್ತು ಇತರೆ ಯುರೋಪಿಯನ್ನರ ನಡುವೆ ಕಾವಲಾಗಿರುತ್ತಾನೆ’ ಎಂದು ಹೇಳಿದ್ದ. ಅಂದರೆ ನವಾಬರ ಮುಖವಾಡ ತೊಟ್ಟುಕೊಂಡು ಶಾಂತವಾಗಿ ಲೂಟಿಮಾಡುವ ಪರಿ ಇದಷ್ಟೆ. ಇಂದು ಅನೇಕ ನಾಯಕರು ಮೋದಿಯವರನ್ನು ಮುಖವಾಡ ಮಾಡಿಕೊಂಡು ತಾವು ಮಾಡಬಹುದಾದ ಕೆಲಸವನ್ನು ತೆರೆಯ ಹಿಂದೆ ಮಾಡುತ್ತಲೇ ಇದ್ದಾರೆ. ಸರಳತೆ ಇವರ ಪಾಲಿಗೆ ಹೊಗಳಲಿಕ್ಕಷ್ಟೆ, ಆಚರಿಸಲಿಕ್ಕಲ್ಲ. ಬೆಂಗಳೂರಿನ ಲುಲುಮಾಲ್ಗೆ ಪ್ರತ್ಯೇಕವಾದ ಅಂಡರ್ಪಾಸ್ ಮಾಡಲಾಗಿದೆ. ಈ ಮಾಲ್ ಯಾರಿಗೆ ಸೇರಿದ್ದು? ಯಾರ ಹಣದಲ್ಲಿ ಇದಕ್ಕೆ ಪ್ರತ್ಯೇಕವಾದ ರಸ್ತೆ ಮಾಡಲಾಯ್ತು? ಈ ಸಂದರ್ಭದಲ್ಲಿ ಜನ ಓಡಾಟಕ್ಕಾಗಿ ಪಟ್ಟ ಹಿಂಸೆಗಳೆಷ್ಟು? ಇವೆಲ್ಲವನ್ನೂ ಆ ರಾಜಕಾರಣಿ ಉತ್ತರಿಸಬಲ್ಲರೇನು? ಅಥವಾ ಬಿಳಿಯ ನವಾಬರಂತೆ ಇವರು ಕರಿಚರ್ಮದ ನವಾಬರಾಗಿಬಿಟ್ಟಿದ್ದಾರೆ!
ಕರ್ಜನ್ ವೈಸ್ರಾಯ್ ಆಗಿದ್ದಾಗ ದೆಹಲಿಯಲ್ಲಿ ಒಂದು ಭರ್ಜರಿ ದರ್ಬಾರನ್ನು ನಡೆಸಿದ್ದ. ಅಂದಿನ ಇತಿಹಾಸಕಾರರು ಇದರ ಕುರಿತಂತೆ ವಿವರಿಸುತ್ತಾ ಆನೆಗಳು, ಭೇರಿ-ನಗಾರಿಗಳು, ಆಭರಣಗಳನ್ನು ಧರಿಸಿದ ರಾಜರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆಂದು ಹೇಳುತ್ತಾರೆ. ಇದರ ಚಿತ್ರೀಕರಣ ಮಾಡಿಕೊಂಡಿದ್ದ ಕರ್ಜನ್ ಭಾರತೀಯರ ದುಡ್ಡಿನಲ್ಲಿ ಚೆನ್ನಾಗಿ ಮೆರೆದುಬಿಟ್ಟ. ಹಾಗೆ ನೋಡಿದರೆ ಆ ಕರ್ಜನ್ಗಳು ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಅವರ ವೈಭವದ ಮೆರವಣಿಗೆಗಳೆಲ್ಲ ದೇಶದ ಪ್ರಜೆಗಳನ್ನು ಲೂಟಿಮಾಡಿದ ಹಣವೇ. ನಮ್ಮ ರಸ್ತೆಗಳನ್ನು, ಶಾಲಾ-ಕಾಲೇಜುಗಳನ್ನು, ವೈದ್ಯಕೀಯ ವ್ಯವಸ್ಥೆಗಳನ್ನು ನುಂಗಿ ನೀರ್ಗಡಿದು ಸಂಭ್ರಮಿಸುವ ಮಂದಿ ಮೋದಿಯ ಸರಳತೆಯ ಗುಣಗಾನ ಮಾಡುವಾಗ ಯಾಕೊ ಹೊಟ್ಟೆ ಕಿವುಚಿದಂತಾಗುತ್ತದೆ.
ಎಲ್ಲಕ್ಕಿಂತಲೂ ಮನಸ್ಸಿಗೆ ಬೇಸರವಾದ ಸಂಗತಿ ಯಾವುದು ಗೊತ್ತೇನು? ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಅನ್ನ, ಆಹಾರ ಸೇವಿಸದೇ ಮಲಗಿಕೊಂಡಿದ್ದಾರೆ. ಅವರನ್ನು ಭೇಟಿ ಮಾಡಲು ಹೋಗುವ ಮಂದಿ ಫೋಟೊ ತೆಗೆದುಕೊಂಡು, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹಂಚಿಕೊಳ್ಳುವುದು. ಪ್ರತಿಯೊಂದು ಚೆಂಡಿಗೂ ಸಿಕ್ಸ್ ಹೊಡೆಯಬೇಕೆನ್ನುವ ಕುತ್ಸಿತ ಚಿಂತನೆ ರಾಜಕಾರಣಕ್ಕೆ ಹಬ್ಬಿರುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಮೋದಿಯವರ ಪುಣ್ಯದ ಫಲವನ್ನು ಚೆನ್ನಾಗಿ ಮೇಯುವ ಈ ಮಂದಿ, ತಮ್ಮ ಪಾಪದ ಫಲವನ್ನು ಮೋದಿಗೆ ಮೆತ್ತಿ ಮೆರೆದರೆ ಅಚ್ಚರಿಪಡಬೇಡಿ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)