

ಭಾಲ್ಕಿ ಬಿಕೆಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್, ಮೈಸೂರಿನ ಸುತ್ತೂರು ಕಾಲೇಜಿನಲ್ಲಿ ಎಂ.ಟೆಕ್ ಮುಗಿಸಿರುವ ಇವರು, ಭಾಲ್ಕಿಯ ಎಂ.ಟೆಕ್ ಪದವೀಧರ ಶಿವಶರಣಪ್ಪ ಕುಡತೆ ಅವರನ್ನು ವರಿಸಿದ್ದಾರೆ. ಬೆಂಗಳೂರು ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ 10 ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ತಿಂಗಳಿಗೆ 1.50 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಊರಿಗೆ ಬಂದವರು ಮತ್ತೆ ನೌಕರಿಯತ್ತ ಮುಖ ಮಾಡಿಲ್ಲ. ಪತಿ ಜತೆ ಕೆಲಸದ ನಿಮಿತ್ತ ಚೀನಾಕ್ಕೆ ಹೋಗಿದ್ದಾಗ ಡ್ರ್ಯಾಗನ್ ಹಣ್ಣಿನ ರುಚಿ ಸವಿದಿದ್ದಾರೆ. ಅಲ್ಲಿಂದ ಬಂದವರೇ ಅದೇ ಹಣ್ಣಿನ ಮೂಲಕ ತೋಟಗಾರಿಕೆ ಕೃಷಿಗೆ ಸೈ ಎಂದಿದ್ದಾರೆ.
ಭಾಲ್ಕಿ ಹೊರವಲಯದ ಭಾತಂಬ್ರಾ ರಸ್ತೆಯಲ್ಲಿರುವ ಹೊಲದಲ್ಲಿ ಒಂದೊಂದು ಎಕರೆಯಲ್ಲಿ ಡ್ರ್ಯಾಗನ್ ಮತ್ತು ಮಾವಿನ ಹಣ್ಣು ಹಾಕಿದ್ದಾರೆ. ಡ್ರ್ಯಾಗನ್ 20-25 ವರ್ಷದವರೆಗೆ ಹಣ್ಣು ನೀಡುತ್ತದೆ. ಮೊದಲ ವರ್ಷ ಮಾರಿದ ಹಣದಿಂದ ಖರ್ಚು-ವೆಚ್ಚ ತೆಗೆದಿದ್ದು, ಮುಂದಿನ ಮಾರಾಟ ಮಾಡುವ ಹಣ್ಣು ಸಂಪೂರ್ಣ ಲಾಭಕರ ಎನ್ನುತ್ತಾರೆ ಸುನೀತಾ.
ಎಷ್ಟೇ ಓದಿ ಉನ್ನತ ಸ್ಥಾನದಲ್ಲಿದ್ದರೂ ಕೃಷಿಯಲ್ಲಿ ಸಿಗುವ ಸಂತೃಪ್ತಿ ಬೇರಾವುದರಲ್ಲೂ ಸಿಗಲ್ಲ. ಶಿಕ್ಷಣ ಇದ್ದರೆ ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು. ಇಂಜಿನಿಯರ್, ಡಾಕ್ಟರ್ ವೃತ್ತಿಗಿಂತ ಕೃಷಿಯೇ ಶ್ರೇಷ್ಠ ಎಂಬುದನ್ನು ನಾನು ಅರಿತುಕೊಂಡಿರುವೆ. | ಸುನೀತಾ ಕುಡತೆ ಭಾಲ್ಕಿ