

ಅಮೆರಿಕದ ಸಂವಿಧಾನವು ಗರ್ಭಪಾತ ಕುರಿತಂತೆ ಗರ್ಭಿಣಿಯ ಸ್ವಾತಂತ್ರ್ಯನ್ನು ಸಂರಕ್ಷಿಸುತ್ತದೆ ಎಂದು ಅಮೆರಿಕ ಸುಪ್ರೀಂ ಕೋರ್ಟ್ 1973ರಲ್ಲಿ ‘ರೋ ವರ್ಸಸ್ ವೇಡ್’ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ, ಈಗ ಆ ತೀರ್ಪನ್ನು ರದ್ದುಗೊಳಿಸಿ, ಗರ್ಭಪಾತ ನಿಷೇಧದ ಪರ ಅದು ನಿರ್ಣಯ ಪ್ರಕಟಿಸಿದೆ. ಈ ಮೂಲಕ, ಗರ್ಭಪಾತವನ್ನು ಸೀಮಿತಗೊಳಿಸಲು ಅಥವಾ ನಿಷೇಧಿಸಲು ಬಯಸುತ್ತಿದ್ದ ಅಮೆರಿಕದ ರಿಪಬ್ಲಿಕನ್ ಪಕ್ಷದವರು ಮತ್ತು ಧಾರ್ವಿುಕ ಸಂಪ್ರದಾಯವಾದಿಗಳಿಗೆ ಜಯ ದೊರೆತಂತಾಗಿದೆ ಎಂದು ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ.
ಗರ್ಭಧಾರಣೆಯ 15 ವಾರಗಳ ನಂತರ ಗರ್ಭಪಾತವನ್ನು ನಿಷೇಧಿಸುವ ರಿಪಬ್ಲಿಕನ್ ಪಕ್ಷ ಬೆಂಬಲಿತ ಮಿಸಿಸಿಪಿ ಪ್ರಾಂತ್ಯದ ಕಾನೂನನ್ನು ಸುಪ್ರೀಂ ಕೋರ್ಟ್ 6-3ರ ಬಹುಮತದೊಂದಿಗೆ ಎತ್ತಿಹಿಡಿದಿದೆ. ಗರ್ಭಾವಸ್ಥೆಯ 24 ಮತ್ತು 28 ವಾರಗಳ ನಡುವೆ ಗರ್ಭಪಾತಕ್ಕೆ ಅನುಮತಿಸುವ ನಿರ್ಧಾರವನ್ನು ‘ರೋ ವರ್ಸಸ್ ವೇಡ್’ ಪ್ರಕರಣದಲ್ಲಿ ತಪ್ಪಾಗಿ ಕೈಗೊಳ್ಳಲಾಗಿದೆ. ಏಕೆಂದರೆ, ಅಮೆರಿಕದ ಸಂವಿಧಾನವು ಗರ್ಭಪಾತದ ಹಕ್ಕುಗಳ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಈಗ ನೀಡಿರುವ ತೀರ್ಪಿನಲ್ಲಿ ಹೇಳಿದ್ದಾರೆ. ಅಂದಹಾಗೆ, ಕಳೆದ ಮೇ ತಿಂಗಳಲ್ಲಿಯೇ ನ್ಯಾಯಾಲಯ ನೀಡಬಹುದಾದ ತೀರ್ಪಿನ ಕರಡೊಂದು ಸೋರಿಕೆಯಾಗಿ, ಗರ್ಭಪಾತ ನಿಷೇಧಿಸುವ ಸಾಧ್ಯತೆ ಇದೆ ಎಂಬ ಸಂಗತಿ ಬೆಳಕಿಗೆ ಬಂದು, ರಾಜಕೀಯ ವಿವಾದ ಸೃಷ್ಟಿಯಾಗಿತ್ತು.
ಮಿಸಿಸಿಪಿ ಪ್ರಾಂತ್ಯದ ಗರ್ಭಪಾತ ಕುರಿತ ಕಾನೂನು ಸಂವಿಧಾನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೆಳ ಹಂತದ ನ್ಯಾಯಾಲಯಗಳು ನಿರ್ಬಂಧಿಸಿದ್ದವು. ಮಿಸಿಸಿಪಿ ಪ್ರಾಂತ್ಯದಲ್ಲಿ ‘ಜಾಕ್ಸನ್ ಮಹಿಳಾ ಆರೋಗ್ಯ ಸಂಸ್ಥೆ’ ಎಂಬ ಹೆಸರಿನ ಒಂದೇ ಗರ್ಭಪಾತ ಕ್ಲಿನಿಕ್ ಈಗ ಉಳಿದುಕೊಂಡಿದೆ. ಗರ್ಭಪಾತ ನಿಷೇಧಿಸುವ 2018ರ ಕಾನೂನನ್ನು ಈ ಸಂಸ್ಥೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಅಮೆರಿಕದ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಆಡಳಿತದ ಬೆಂಬಲವೂ ಈ ಸಂಸ್ಥೆಗೆ ಇತ್ತು.
ಮಿಸಿಸಿಪಿ ಕಾನೂನು ಗರ್ಭಪಾತವನ್ನು ನಿಷೇಧಿಸುತ್ತದೆ. ತುರ್ತು ಪರಿಸ್ಥಿತಿ ಅಥವಾ ಭ್ರೂಣದ ಅಸಹಜತೆ ಸಂದರ್ಭದಲ್ಲಿ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ. ಅಲ್ಲದೆ, ಅತ್ಯಾಚಾರ ಅಥವಾ ಬಲವಂತದ ಲೈಂಗಿಕ ಕ್ರಿಯೆಯಿಂದ ಉಂಟಾಗುವ ಗರ್ಭಧಾರಣೆಗಳಿಗೆ ಕೂಡ ವಿನಾಯಿತಿ ನೀಡುವುದಿಲ್ಲ. 2018ರಲ್ಲಿ ಫೆಡರಲ್ ನ್ಯಾಯಾಧೀಶರು ‘ರೋ ವರ್ಸಸ್ ವೇಡ್’ ಪ್ರಕರಣದ ಪೂರ್ವನಿದರ್ಶನವನ್ನು ಉಲ್ಲೇಖಿಸಿ ಮಿಸಿಸಿಪಿ ಕಾನೂನನ್ನು ರದ್ದುಪಡಿಸಿದ್ದರು. ಕೆಳಹಂತದ ಅನೇಕ ನ್ಯಾಯಾಲಯಗಳು ಗರ್ಭಪಾತದ ಹಕ್ಕು ಪರವಾಗಿಯೇ ತೀರ್ಪು ನೀಡಿದ್ದವು.
ನಂತರ ಈಚೆಗೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಈ ಪ್ರಕರಣ ಬಂದಿತು. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ಯಾಮ್ಯುಯೆಲ್ ಅಲಿಟೊ ಅವರ ಅಭಿಪ್ರಾಯ ವ್ಯಕ್ತಪಡಿಸುವ ಕರಡು ಮೇ 2ರಂದು ಸೋರಿಕೆಯಾಯಿತು. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಸೋರಿಕೆಯನ್ನು ಖಂಡಿಸಿ, ಅಪರಾಧಿಯನ್ನು ಪತ್ತೆ ಮಾಡಲು ತನಿಖೆಗೆ ಆದೇಶಿಸಿದರು. ಈ ಸೋರಿಕೆಯ ನಂತರ ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯಿಸಿ, ‘ಗರ್ಭಪಾತ ನಿಷೇಧವು ಒಂದು ಹುಚ್ಚು ಕ್ರಮವಾಗಿದ್ದು, ಗರ್ಭಪಾತದ ಹಕ್ಕನ್ನು ರಕ್ಷಿಸುವ ಕಾನೂನನ್ನು ಅಮೆರಿಕದ ಕಾಂಗ್ರೆಸ್ ಅಂಗೀಕರಿಸಬೇಕು’ ಎಂದು ಒತ್ತಾಯಿಸಿದರು. ಇದರ ಬೆನ್ನಿಗೆ, ವಾಷಿಂಗ್ಟನ್ ಮತ್ತು ಇತರ ನಗರಗಳಲ್ಲಿ ಗರ್ಭಪಾತದ ಹಕ್ಕುಗಳಿಗೆ ಆಗ್ರಹಿಸಿ ಸಾವಿರಾರು ಜನರು ಪ್ರತಿಭಟಿಸತೊಡಗಿದರು. ಕೆಲವು ಸಂಪ್ರದಾಯವಾದಿ ನ್ಯಾಯಮೂರ್ತಿಗಳ ಮನೆಗಳ ಮುಂದೆಯೂ ಪ್ರತಿಭಟನೆಗಳು ನಡೆದವು. ಬಂದೂಕು, ಮದ್ದುಗುಂಡು ಹೊಂದಿದ್ದ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬನನ್ನು ಜೂನ್ 8ರಂದು ನ್ಯಾಯಮೂರ್ತಿ ಬ್ರೆಟ್ ಕವ್ನಾಗ್ ಅವರ ಮನೆ ಬಳಿ ಬಂಧಿಸಿ, ಕೊಲೆ ಯತ್ನದ ಆರೋಪ ಹೊರಿಸಲಾಯಿತು.
ಬದಲಾದ ಕೋರ್ಟ್ ನಿಲುವು: 2016ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಗರ್ಭಪಾತ ಸೌಲಭ್ಯಗಳು ಮತ್ತು ವೈದ್ಯರ ಮೇಲೆ ಕಟ್ಟುನಿಟ್ಟಾದ ನಿಯಮಗಳನ್ನು ಹೇರುವ ಟೆಕ್ಸಾಸ್ ಕಾನೂನನ್ನು ರದ್ದುಗೊಳಿಸಿದ್ದರು. 2020ರಲ್ಲಿ ನ್ಯಾಯಮೂರ್ತಿಗಳು ಇದೇ ರೀತಿಯ ಲೂಯಿಸಿಯಾನ್ ಕಾನೂನನ್ನು ಕೂಡ ರದ್ದುಗೊಳಿಸಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಮೂರು ನೇಮಕಾತಿಗಳೊಂದಿಗೆ ಅಮೆರಿಕದ ಸವೋಚ್ಚ ನ್ಯಾಯಾಲಯವು ಹೆಚ್ಚು ಸಂಪ್ರದಾಯವಾದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗರ್ಭಪಾತ ನಿಷೇಧ ತೀರ್ಪು ಪ್ರಕಟಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದಲ್ಲಿ ಬಿಗಿ ಕಾನೂನು: ಭಾರತದಲ್ಲಿ, ಗರ್ಭಧಾರಣೆಯ 24 ವಾರಗಳ ಒಳಗಾಗಿ ಗರ್ಭಪಾತಕ್ಕೆ ಕಾನೂನಿನ ಪ್ರಕಾರ ಅವಕಾಶ ಕಲ್ಪಿಸಲಾಗಿದೆ. 1971ರ ‘ವೈದ್ಯಕೀಯವಾಗಿ ಗರ್ಭ ತೆಗೆದು ಹಾಕುವ ಕಾಯ್ದೆ’ ಪ್ರಕಾರ ಕೆಲವು ಷರತ್ತುಗಳಿಗೆ ಅನ್ವಯಿಸಿ ಗರ್ಭಪಾತ ಕಾನೂನುಬದ್ಧವಾಗಿದೆ. ಗರ್ಭಧಾರಣೆಯ 20 ತಿಂಗಳ ಒಳಗಾಗಿ ಗರ್ಭಪಾತ ಮಾಡಿಸಲು ಒಬ್ಬ ವೈದ್ಯರ ಅಭಿಪ್ರಾಯ ಅಗತ್ಯವಿರುತ್ತದೆ. 20 ತಿಂಗಳ ಮೇಲ್ಪಟ್ಟು ಹಾಗೂ 24 ತಿಂಗಳ ಒಳಗಿನ ಅವಧಿಯಲ್ಲಿದ್ದರೆ, ಇಬ್ಬರು ವೈದ್ಯರ ಅಭಿಪ್ರಾಯ ಬೇಕಾಗುತ್ತದೆ. ಮಗುವಿಗೆ ಜನ್ಮ ನೀಡುವುದರಿಂದ ಮಹಿಳೆಯ ಪ್ರಾಣಕ್ಕೆ ಅಪಾಯವಿರುವ ಸಂದರ್ಭ, ಜನಿಸುವ ಮಗುವು ಸಾಕಷ್ಟು ದೈಹಿಕ ಇಲ್ಲವೇ ಮಾನಸಿಕ ಅಸ್ವಸ್ಥತೆ ಹೊಂದುವ ಸಂದರ್ಭ ಗರ್ಭಪಾತಕ್ಕೆ ಅವಕಾಶವಿದೆ. ಅವಧಿ ಮೀರಿದ ಸಂದರ್ಭದಲ್ಲಿ, ಕೋರ್ಟ್ ಮೆಟ್ಟಿಲೇರಿ ಗರ್ಭಪಾತಕ್ಕೆ ಅನುಮತಿ ಪಡೆದ ನಿದರ್ಶನಗಳೂ ಇವೆ.
ನಮ್ಮ ದೇಶಕ್ಕೆ ಇದೊಂದು ದುರ್ದಿನ. ಇದರರ್ಥ, ಹೋರಾಟ ಮುಗಿಯಿತು ಎಂದಲ್ಲ. ಗರ್ಭಪಾತ ಹಕ್ಕು ಕಾನೂನು ಪರವಾಗಿರುವವರನ್ನು ಸದನ ಹಾಗೂ ಸೆನೆಟ್ಗೆ ಅಮೆರಿಕದ ಜನರು ಆಯ್ಕೆ ಮಾಡಬೇಕು. ಜನರ ಖಾಸಗಿತನದ ಮೂಲಭೂತ ಹಕ್ಕು, ಕೌಟುಂಬಿಕ ವಿಷಯಗಳಲ್ಲಿ ಸ್ವಾತಂತ್ರ್ಯ ಕಾಪಾಡುವ ಕಾನೂನು ಬೇಕು. | ಜೋ ಬೈಡೆನ್ ಅಮೆರಿಕ ಅಧ್ಯಕ್ಷ ದೇವರೇ ಈ ತೀರ್ಪು ನೀಡಿದ್ದಾನೆ. ಇದು ಸಂವಿಧಾನದ ಅನುಸರಣೆಯಾಗಿದೆ. ನಾನು ವಾಗ್ದಾನ ಮಾಡಿದ್ದನ್ನೆಲ್ಲ ಈಡೇರಿಸಿರುವುದರಿಂದ ಇದು ಸಾಧ್ಯವಾಗಿದೆ. ಅಮೆರಿಕದ ಸುಪ್ರೀಂ ಕೋರ್ಟ್ಗೆ ಮೂವರು ಅತ್ಯಂತ ಗೌರವಾನ್ವಿತ ಹಾಗೂ ಸಂವಿಧಾನ ರಕ್ಷಕ ವ್ಯಕ್ತಿಗಳನ್ನು ನೇಮಕ ಮಾಡಿದ್ದೆ. | ಡೊನಾಲ್ಡ್ ಟ್ರಂಪ್ ಅಮೆರಿಕದ ಮಾಜಿ ಅಧ್ಯಕ್ಷ
ಗರ್ಭಪಾತ ಹೆಚ್ಚಳ: 2017ರಿಂದ 2020ರ ಅವಧಿಯ ಮೂರು ವರ್ಷಗಳಲ್ಲಿ ಅಮೆರಿಕದಲ್ಲಿ ಗರ್ಭಪಾತಗಳ ಸಂಖ್ಯೆ ಶೇ. 8 ರಷ್ಟು ಹೆಚ್ಚಾಗಿದೆ. ಇದರ ಹಿಂದಿನ 30 ವರ್ಷಗಳ ಅವಧಿಯಲ್ಲಿ ಇದು ಇಳಿಮುಖವಾಗಿತ್ತು ಎಂದು ಸಂಶೋಧನಾ ಸಂಸ್ಥೆಯೊಂದು ಬಿಡುಗಡೆ ಮಾಡಿದ ವಿವರಗಳು ಸೂಚಿಸುತ್ತವೆ. ‘ರೋ ವರ್ಸಸ್ ವೇಡ್’ ಪ್ರಕರಣದಲ್ಲಿ ಗರ್ಭಪಾತದ ಪರವಾಗಿ ತೀರ್ಪು ಹೊರಹೊಮ್ಮಿದ ಏಳು ವರ್ಷಗಳ ನಂತರ 1980ರಲ್ಲಿ ಅಮೆರಿಕದಲ್ಲಿ ಗರ್ಭಪಾತದ ಪ್ರಮಾಣವು ಉತ್ತುಂಗ ತಲುಪಿತ್ತು. ಪ್ರತಿ ಸಾವಿರ ಮಹಿಳೆಯರಿಗೆ 29.3 ಗರ್ಭಪಾತಗಳು ಜರುಗಿದ್ದವು. 2017ರಲ್ಲಿ ಈ ಸಂಖ್ಯೆಯು 13.5ಕ್ಕೆ ತಲುಪಿತ್ತು. 2017ರಿಂದ 2020ರ ನಡುವೆ ಮಿಸಿಸಿಪಿ ಪ್ರಾಂತ್ಯದಲ್ಲಿ ಗರ್ಭಪಾತ ದರವು ಶೇ 40ರಷ್ಟು ಹೆಚ್ಚಳವನ್ನು ಕಂಡಿತ್ತು.
ಉದ್ಯೋಗಿಗಳಿಗೆ ನೆರವು ಘೋಷಣೆ: ಹೊರದೇಶಗಳಿಗೆ ತೆರಳಿ ಗರ್ಭಪಾತ ಮಾಡಿಸಿಕೊಳ್ಳಲು ತಮ್ಮ ಉದ್ಯೋಗಿಗಳಿಗೆ ನೆರವಾಗುವುದಾಗಿ ಅಮೆರಿಕದ ಅನೇಕ ಕಂಪನಿಗಳು ಹೇಳಿವೆ. ಅಮೆಜಾನ್, ಆಪಲ್ ಇಂಕ್, ಮೈಕ್ರೊಸಾಫ್ಟ್, ಮೆಟಾಪ್ಲಾಟ್ಫಾಮ್ರ್ ಇಂಕ್ಸ್, ವಾಲ್ಟ್ ಡಿಸ್ನಿ ಕಂಪನಿ, ನೆಟ್ಫ್ಲಿಕ್ಸ್ ಮೊದಲಾದ ಕಂಪನಿಗಳು ಈ ಕುರಿತು ಪ್ರಕಟಣೆ ನೀಡಿವೆ.
ಪ್ರತಿ ವರ್ಷ 7 ಕೋಟಿಗೂ ಅಧಿಕ: ಗರ್ಭಪಾತದ ಹಕ್ಕುಗಳಿಗೆ ಮಾನ್ಯತೆ ನೀಡುವ ಪ್ರವೃತ್ತಿ ಜಾಗತಿಕವಾಗಿ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಜಾಗತಿಕವಾಗಿ ಅಂದಾಜು 7.3 ಕೋಟಿ ಗರ್ಭಪಾತಗಳು ನಡೆಯುತ್ತವೆ.