ಗೋರ್ಬಚೆವ್; ಸೋತು ಗೆದ್ದ ನಾಯಕ

vihara
ಗೋರ್ಬಚೆವ್ ಮತ್ತು ರೇಗನ್.
Published on
ಸುಳ್ಳಿನ ಪರದೆಯ ಹಿಂದೆ ಅಡಗಿಕೊಂಡು, ದಾರುಣಸ್ಥಿತಿಗೆ ತಲುಪಿದ್ದ ಸೋವಿಯೆತ್ ಯೂನಿಯನ್​ನಲ್ಲಿ ಬದಲಾವಣೆಯ ಗಾಳಿಬೀಸಲು ಕಾರಣರಾದ ಮಿಖಾಯಿಲ್ ಗೋರ್ಬಚೆವ್ ಶೀತಲಸಮರವನ್ನು ಕೊನೆಗಾಣಿಸುವಲ್ಲಿಯೂ ಮಹತ್ವದ ಪಾತ್ರವಹಿಸಿದರು. ಅವರ ಜೀವನ-ಸಾಧನೆಯ ಅವಲೋಕನ ಇಲ್ಲಿದೆ.
| ಪ್ರೇಮಶೇಖರ

ಅದು 1983ನೇ ಇಸವಿ. ಅಮೆರಿಕಾ ಮತ್ತು ಸೋವಿಯೆತ್ ಯೂನಿಯನ್ ನಡುವಿನ ವೈರತ್ವ ಉತ್ತುಂಗದಲ್ಲಿದ್ದು, ಶೀತಲ ಸಮರ ಇನ್ನೇನು ಶಾಖಸಮರವಾಗಿ ಬದಲಾಗಿ ಇಡೀ ಜಗತ್ತು ಅಣ್ವಸ್ತ್ರ ಯುದ್ಧಕ್ಕೆ ಸಿಲುಕಲಿದೆ ಎಂಬ ಆತಂಕ ಎಲ್ಲೆಡೆ ಮನೆಮಾಡಿದ್ದ ದಿನಗಳವು. ಮಾತುಮಾತಿಗೂ ರೇಗುತ್ತಿದ್ದ ಅಮೆರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್ ಭಯಾನಕ ‘ಸ್ಟಾರ್ ವಾರ್’ (Strategic Defence Initiative, SDI) ಯೋಜನೆಯ ಮೂಲಕ ಜಾಗತಿಕ ಅಣ್ವಸ್ತ್ರ ಯುದ್ಧದ ರಕ್ಕಸನನ್ನು ಇನ್ನಷ್ಟು ಹತ್ತಿರಕ್ಕೆ ತಂದು ನಿಲ್ಲಿಸಿದ್ದರು. ಅಂತಹ ಒಂದು ದಿನ ಅವರು ಸೋವಿಯೆತ್ ಯೂನಿಯನ್ ಅನ್ನು ‘ದುಷ್ಟ ಸಾಮ್ರಾಜ್ಯ’ (Evil Empire) ಎಂದು ಕರೆದುಬಿಟ್ಟರು.

1987ರ ನವೆಂಬರ್ ತಿಂಗಳ ಒಂದು ಚಳಿಯ ಮುಂಜಾವು ಅದೇ ರೊನಾಲ್ಡ್ ರೇಗನ್ ವಾಷಿಂಗ್​ಟನ್ ವಿಮಾನ ನಿಲ್ದಾಣದಲ್ಲಿ ಅದೇ ಸೋವಿಯೆತ್ ಯೂನಿಯನ್​ನ ನಾಯಕ ಮಿಖಾಯಿಲ್ ಗೋರ್ಬಚೆವ್​ರಿಗಾಗಿ ಕಾದು ನಿಂತಿದ್ದರು. ಜತೆಯಲ್ಲಿದ್ದ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಶುಲ್ಟ್ಜ್ ಅಧ್ಯಕ್ಷರಿಗೆ ನಾಲ್ಕು ವರ್ಷಗಳ ಹಿಂದಿನ ಅವರದೇ ಮಾತನ್ನು ನೆನಪಿಸಿ ನಸುನಗುತ್ತಾ ಹೇಳಿದರು- ‘ಆ ದುಷ್ಟ ಸಾಮ್ರಾಜ್ಯದ ಸಾಮ್ರಾಟನಿಗಾಗಿ ನೀವು ಈ ಚಳಿಯ ಬೆಳಗಿನಲ್ಲಿ ಕಾಯುತ್ತಾ ನಿಂತಿದ್ದೀರಿ!’ ಅಧ್ಯಕ್ಷ ರೇಗನ್ ವಿಶಾಲವಾಗಿ ನಗುತ್ತಾ ಹೇಳಿದರು- ‘ಓಹ್, ಅದೊಂದು ಬೇರೆಯೇ ಯುಗ!’

ನಾಲ್ಕು ವರ್ಷಗಳಲ್ಲಿ ಜಾಗತಿಕ ಇತಿಹಾಸದಲ್ಲಿ ಯುಗವೊಂದು ಮರೆಯಾಗಿ ಹೊಸದೊಂದು ಹುಟ್ಟಿತ್ತು. ಈ ಅಸಾಮಾನ್ಯ ಬೆಳವಣಿಗೆಗೆ ಕಾರಣವಾದವರಲ್ಲಿ ದೊಡ್ಡದಾಗಿ ಕಾಣುವ ಒಂದು ಹೆಸರು- ಮಿಖಾಯಿಲ್ ಸೆರ್ಗೆಯಿವಿಚ್ ಗೋರ್ಬಚೆವ್. ವಿನಾಶದ ಅಂಚಿನಲ್ಲಿ ತತ್ತರಿಸುತ್ತ ನಿಂತಿದ್ದ ಜಗತ್ತನ್ನು ನೆಮ್ಮದಿಯ, ಶಾಂತಿಯ ಹೊಸ ಭವಿಷ್ಯದತ್ತ ಮುಖ ಮಾಡಿಸಿ ಇತಿಹಾಸ ಸೃಷ್ಟಿಸಿದ ಆ ಮಹಾನ್ ನಾಯಕ ಇದೇ ಆಗಸ್ಟ್ 30ರಂದು 91ನೇ ವಯಸ್ಸಿನಲ್ಲಿ ಇತಿಹಾಸವಾಗಿಹೋದರು.

1931ರಲ್ಲಿ ರಶಿಯನ್-ಯೂಕ್ರೇನಿಯನ್ ರೈತ ಕುಟುಂಬದಲ್ಲಿ ಜನಿಸಿದ ಗೋರ್ಬಚೆವ್ 21ನೆಯ ವಯಸ್ಸಿನಲ್ಲಿ ಸೋವಿಯೆತ್ ಕಮ್ಯೂನಿಸ್ಟ್ ಪಾರ್ಟಿ ಸೇರಿ, 40ನೆಯ ವಯಸ್ಸಿನಲ್ಲಿ ಪಕ್ಷದ ಕೇಂದ್ರೀಯ ಸಮಿತಿಯ ಸದಸ್ಯರಾಗಿ, 54ನೆಯ ವಯಸ್ಸಿನಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದರು. ಸೋವಿಯೆತ್ ಕಮ್ಯೂನಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯೆಂದರೆ ಅಂದು ಆ ಕಮ್ಯೂನಿಸ್ಟ್ ದೈತ್ಯನ ಅನಭಿಷಿಕ್ತ ಸಾಮ್ರಾಟ ಎಂದರ್ಥ.

ಫೆಬ್ರವರಿ 1985ರಲ್ಲಿ ಗೋರ್ಬಚೆವ್ ಸೋವಿಯೆತ್ ನಾಯಕತ್ವ ವಹಿಸಿಕೊಂಡಾಗ ಜಗತ್ತು ಸಂಕಟದಲ್ಲಿತ್ತು, ಅದಕ್ಕಿಂತಲೂ ಹೆಚ್ಚು ಸಂಕಟದಲ್ಲಿದ್ದದ್ದು ಸೋವಿಯೆತ್ ಯೂನಿಯನ್. ಅರ್ಧ ಶತಮಾನದ ಹಿಂದೆ ಬಂಡವಾಳಶಾಹಿ ಅಮೆರಿಕಾ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ನರಳುತ್ತಿದ್ದಾಗ ಇದೇ ಸೋವಿಯೆತ್ ಯೂನಿಯನ್ ಕಮ್ಯೂನಿಸ್ಟ್ ಮೌಲ್ಯಗಳನ್ನು ಅಳವಡಿಸಿಕೊಂಡು ಆರ್ಥಿಕ ಪ್ರಗತಿಯ ಹಾದಿಯಲ್ಲಿ ದಾಪುಗಾಲು ಹಾಕುತ್ತಿತ್ತು. ಅದೆಲ್ಲವನ್ನೂ ಮಣ್ಣುಗೂಡಿಸಿದ್ದು ಎರಡನೆಯ ಜಾಗತಿಕ ಸಮರದ ನಂತರ ಸೋವಿಯೆತ್ ನಾಯಕ ಜೋಸೆಫ್ ಸ್ಟಾಲಿನ್ ಅನುಸರಿಸಿದ ಆತ್ಮಹತ್ಯೀಯ ಸಾಮರಿಕ ಹಾಗೂ ರಾಜತಾಂತ್ರಿಕ ನೀತಿಗಳು. ಆ ಜಾಗತಿಕ ಯುದ್ಧದಲ್ಲಿ ಸೋತ ಜರ್ಮನಿಗಿಂತಲೂ ಹೆಚ್ಚಿನ ಪ್ರಾಣಹಾನಿ ಮತ್ತು ಸಂಪತ್ತಿನ ಹಾನಿಯನ್ನು ಸೋವಿಯೆತ್ ಯೂನಿಯನ್ ಅನುಭವಿಸಿತ್ತು. ಅದಕ್ಕೆ ಹೋಲಿಸಿದರೆ ಕೂದಲೂ ಕೊಂಕದಿದ್ದ ಅಮರಿಕಾ ಅತ್ಯಂತ ಸದೃಢ ಸ್ಥಿತಿಯಲ್ಲಿತ್ತು. ಅಂದು ಸೋವಿಯೆತ್​ಗೆ ಬೇಕಾಗಿದ್ದದ್ದು ಅರ್ಥವ್ಯವಸ್ಥೆಯ ಪುನರ್​ನಿರ್ವಣ. ಆದರೆ ಸ್ಟಾಲಿನ್ ಆದ್ಯತೆಯಾಗಿ ಕಂಡದ್ದು ಪೂರ್ವ ಮತ್ತು ಆಗ್ನೇಯ ಯೂರೋಪ್​ನಲ್ಲಿ ಕಮ್ಯೂನಿಸ್ಟ್ ಕೈಗೊಂಬೆ ಸರ್ಕಾರಗಳ ಸ್ಥಾಪನೆ. ಇದನ್ನು ತಮ್ಮ ಅಸ್ತಿತ್ವಕ್ಕೇ ಸಂಚಕಾರ ತರುವ ಕ್ರಮ ಎಂದು ಭಾವಿಸಿದ ಪಶ್ಚಿಮ ಯೂರೋಪಿಯನ್ ರಾಷ್ಟ್ರಗಳು ಅಮೆರಿಕಾ ನಾಯಕತ್ವದಲ್ಲಿ ಮಾಸ್ಕೋ ವಿರುದ್ಧ ತಿರುಗಿಬಿದ್ದವು, ಶೀತಲ ಸಮರ ಆರಂಭವಾಯಿತು. ಅದರ ಅವಿಭಾಜ್ಯ ಅಂಗವಾಗಿದ್ದದ್ದು ಶಸ್ತ್ರಾಸ್ತ್ರ ಪೈಪೋಟಿ.

ಆರ್ಥಿಕವಾಗಿ ಬಲಿಷ್ಠವಾಗಿದ್ದ ಅಮೆರಿಕಾ ಮತ್ತು ಅದರ ಸಹಾಯದಿಂದ ತಮ್ಮ ಅರ್ಥವ್ಯವಸ್ಥೆಗಳನ್ನು ಪುನರ್​ನಿರ್ವಣ ಮಾಡಿಕೊಂಡ ಪಶ್ಚಿಮ ಯೂರೋಪಿಯನ್ ದೇಶಗಳಿಗೆ ಏಕಕಾಲದಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಶಸ್ತ್ರಾಸ್ತ್ರ ಪೈಪೋಟಿಗಳೆರಡಕ್ಕೂ ಹಣ ವಿನಿಯೋಗಿಸುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಸೋವಿಯೆತ್ ಯೂನಿಯನ್​ನ ಸ್ಥಿತಿ ಹಾಗಿರಲಿಲ್ಲ. ಶೀತಲ ಸಮರದಿಂದಾಗಿ ಶಸ್ತ್ರಾಸ್ತ್ರ ಪೈಪೋಟಿ ಮತ್ತು ಬೃಹತ್ ಸೇನಾವ್ಯವಸ್ಥೆಯನ್ನು ಸಾಕುವ ಜವಾಬ್ದಾರಿ ಹೊರಲಾರದ ಹೊರೆಯಾಗಿಬಿಟ್ಟಿತು. ಪರಿಣಾಮವಾಗಿ ಅರ್ಥವ್ಯವಸ್ಥೆ ದಿನೇದಿನೇ ಕುಸಿಯುತ್ತಾ ಸಾಗಿತು. ಹೀಗಾಗಿಯೇ 1964-1982ರ ಲಿಯೋನಿದ್ ಬ್ರಝೆ್ನೕವ್ ಆಳ್ವಿಕೆಯ ಕಾಲ ‘ನಿಂತನೀರಿನ ಯುಗ’ ಎಂದು ಇತಿಹಾಸದಲ್ಲಿ ಕುಖ್ಯಾತಿ ಪಡೆದಿದೆ. ಆಹಾರ ಹಾಗೂ ಇತರ ಅಗತ್ಯವಸ್ತುಗಳ ತೀವ್ರ ಕೊರತೆ ದೇಶದಾದ್ಯಂತ ತಾಂಡವವಾಡತೊಡಗಿದ ಕಾಲವದು.

ಇಷ್ಟಾಗಿಯೂ, ಕಬ್ಬಿಣದ ಪರದೆಯೊಳಗಿದ್ದ ಸೋವಿಯೆತ್ ಯೂನಿಯನ್ ಜಗತ್ತಿಗೆ ಸುಳ್ಳು ಅಂಕಿಅಂಶಗಳನ್ನು ನೀಡುತ್ತಾ ತನ್ನೊಳಗೆ ಎಲ್ಲವೂ ಸರಿಯಿದೆ ಎಂದು ನಾಟಕವಾಡುತ್ತಾ ವರ್ಷವರ್ಷಗಳನ್ನು ಕಳೆದುಬಿಟ್ಟಿತ್ತು. ಇದನ್ನು ಬದಲಾಯಿಸಲು, ತನ್ನ ಜನರಿಗೆ ನಿಜವಾಗಿಯೂ ಉತ್ತಮವೆನಿಸುವ ಬದುಕನ್ನು ನೀಡಲು ನಾಯಕನೊಬ್ಬ ಅವತರಿಸಲೇಬೇಕಾಗಿತ್ತು. ಆ ಐತಿಹಾಸಿಕ ಜವಾಬ್ದಾರಿಗೆ ಹೆಗಲು ಕೊಟ್ಟದ್ದು ಮಿಖಾಯಿಲ್ ಗೋರ್ಬಚೆವ್. ‘ಹೊರಜಗತ್ತಿಗೆ ಸುಳ್ಳು ಹೇಳುವುದರಿಂದ ನಮ್ಮ ಪರಿಸ್ಥಿತಿಯೇನೂ ಉತ್ತಮಗೊಳ್ಳುವುದಿಲ್ಲ. ಅದು ನಿಜವಾಗಿಯೂ ಉತ್ತಮಗೊಳ್ಳುವುದು ನಾವು ವಾಸ್ತವವನ್ನು ಒಪ್ಪಿಕೊಂಡು ಅಗತ್ಯ ಪರಿಹಾರಾತ್ಮಕ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದರಿಂದ ಮಾತ್ರ’ ಎಂದು ಹೇಳಿದ ಗೋರ್ಬಚೆವ್ ತಾವು ಬೇರೆಯೇ ಮಣ್ಣಿನಲ್ಲಿ ಮಾಡಿದ ನಾಯಕ ಎಂದು ಜಗತ್ತಿಗೇ ಸಾರಿದರು. ಮುಂದೆ ಘಟಿಸಿದ್ದು ಇತಿಹಾಸ. ರೋಗಪೀಡಿತ ಸೋವಿಯೆತ್ ವ್ಯವಸ್ಥೆಯನ್ನು ಸುಧಾರಿಸಲು ಗೋರ್ಬಚೆವ್ ಹಾಕಿಕೊಂಡದ್ದು ಮೂರು ಯೋಜನೆಗಳು- 1 ಸೋವಿಯೆತ್ ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆ (Glasnost), ಆರ್ಥಿಕ ಕ್ಷೇತ್ರದಲ್ಲಿ ಪುನರ್ವ್ಯವಸ್ಥೆ(Perestroika), ಆಡಳಿತ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವೀಕರಣ (Demokratizasia). ಅನಗತ್ಯವಾದ ಮಿಲಿಟರಿ ವೆಚ್ಚಗಳನ್ನು ಕಡಿತಗೊಳಿಸಿ ಆ ಹಣವನ್ನೆಲ್ಲಾ ಆರ್ಥಿಕ ಪ್ರಗತಿಗೆ ತೊಡಗಿಸಬೇಕು ಎಂದು ಗೋರ್ಬಚೆವ್ ರ್ತಸಿದ್ದು ಸರಿಯಾಗಿಯೇ ಇತ್ತು. ಆದರೆ ಪ್ರಮುಖ ವಿರೋಧಿಗಳೊಂದಿಗೆ ಸ್ನೇಹಸಂಬಂಧ ವೃದ್ಧಿಯಾಗದೇ ಅದು ಅಸಾಧ್ಯ ಎಂದೂ ಅವರು ಅರಿತಿದ್ದರು. ಹೀಗಾಗಿಯೇ ಅಧಿಕಾರದ ಪ್ರಾರಂಭದ ದಿನಗಳಿಂದಲೇ ಅವರು ಅಮೆರಿಕಾ ಮತ್ತು ಚೀನಾಗಳ ಜತೆ ಸಂಬಂಧ ಸುಧಾರಣೆಗೆ ತಮ್ಮ ಸರ್ಕಾರ ಸಿದ್ಧ ಎಂಬ ಸೂಚನೆಗಳನ್ನು ನೀಡತೊಡಗಿದರು. ಅಮೆರಿಕಾದಿಂದ ಬಂದದ್ದು ನಕಾರಾತ್ಮಕ ಪ್ರತಿಕ್ರಿಯೆ. ಸೋವಿಯೆತ್ ನಾಯಕನೊಬ್ಬ ವಿಶ್ವಶಾಂತಿಯ ಬಗ್ಗೆ ಮಾತಾಡುವುದನ್ನು ನಂಬಲು ತಾವು ತಯಾರಿಲ್ಲ ಎಂಬ ನಿಲುವನ್ನು ಅಧ್ಯಕ್ಷ ರೇಗನ್ ವ್ಯಕ್ತಪಡಿಸಿದ್ದು ನಾಟಕೀಯವಾಗಿ. ಆ ಮಾಜಿ ಹಾಲಿವುಡ್ ನಟ 1985ರಲ್ಲಿ ಪಶ್ಚಿಮ ಬರ್ಲಿನ್​ಗೆ ಭೇಟಿ ನೀಡಿ, ಪೂರ್ವ-ಪಶ್ಚಿಮ ವಿಭಜನೆಯ ಸಂಕೇತವಾದ ಬರ್ಲಿನ್ ಗೋಡೆಯ ಮುಂದೆ ನಿಂತು ದನಿಯೆತ್ತರಿಸಿ ಕೂಗಿದ್ದು ಹೀಗೆ- ‘ಮಿಸ್ಟರ್ ಗೋರ್ಬಚೆವ್, ನಿಮಗೆ ವಿಶ್ವಶಾಂತಿಯ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಶೀತಲ ಸಮರದ ಸಂಕೇತವಾದ ಈ ಗೋಡೆಯನ್ನು ಕೆಡವಿ.’

ಕೆಲವೇ ತಿಂಗಳ ನಂತರ ನವೆಂಬರ್​ನಲ್ಲಿ ರೇಗನ್ ಜಿನೀವಾದಲ್ಲಿ ಗೋರ್ಬಚೆವ್​ರನ್ನು ಭೇಟಿಯಾದರು. ನಂತರ ಅವರು ಜಗತ್ತಿಗೆ ಹೇಳಿದ್ದು ‘ಇವರು ಪ್ರಾಮಾಣಿಕರಾಗಿರುವಂತೆ ಕಾಣುತ್ತಿದೆ. ಇವರೊಂದಿಗೆ ನಾವು ವ್ಯವಹರಿಸಬಹುದು ಎಂದು ನನಗನಿಸುತ್ತದೆ.’ ಜಾಗತಿಕ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದ್ದು ಹೀಗೆ.

ಮುಂದಿನ ಅಕ್ಟೋಬರ್​ನಲ್ಲಿ ಈ ಇಬ್ಬರು ನಾಯಕರು ಐಸ್​ಲ್ಯಾಂಡ್ ರಾಜಧಾನಿ ರೇಕ್​ಯಾವಿಕ್​ನಲ್ಲಿ ಮತ್ತೆ ಭೇಟಿಯಾಗಿ ಶೀತಲ ಸಮರದ ಅಂತ್ಯದತ್ತ ಇನ್ನೊಂದು ಮಹತ್ವಪೂರ್ಣ ಹೆಜ್ಜೆಯಿಟ್ಟರು.

ಸೋವಿಯೆತ್ ಅರ್ಥವ್ಯವಸ್ಥೆಯನ್ನು 500 ದಿನಗಳಲ್ಲಿ ಮಾರುಕಟ್ಟೆ ಅರ್ಥವ್ಯವಸ್ಥೆಯಾಗಿ ಬದಲಾಯಿಸುವ ಗೋರ್ಬಚೆವ್​ರ ಯೋಜನೆಗೆ ಅಮೆರಿಕಾ ಸಹಕಾರ ಒದಗಿಸಲು ಮುಂದೆ ಬಂತು. ಒಟ್ಟಿನಲ್ಲಿ ಸೋವಿಯೆತ್ ಅರ್ಥವ್ಯವಸ್ಥೆಯನ್ನು ಸುಧಾರಿಸುವುದಕ್ಕಾಗಿ ಗೋರ್ಬಚೆವ್ ಯೋಜಿಸಿದ ಕ್ರಮಗಳ ಸರಪಳಿ ಕ್ರಿಯೆ ಅಂತಾರಾಷ್ಟ್ರೀಯ ಸ್ನೇಹಸಹಕಾರಕ್ಕೆ ದಾರಿ ಮಾಡಿ 1990-91ರಲ್ಲಿ ಶೀತಲ ಸಮರದ ಅಂತ್ಯಕ್ಕೆ ಕಾರಣವಾಯಿತು.

ಸೋವಿಯತ್ ರಾಜಕೀಯ ವ್ಯವಸ್ಥೆಯ ಸುಧಾರಣೆಯೂ ಗೋರ್ಬಚೆವ್​ರ ಆದ್ಯತೆಯಾಗಿತ್ತು. ಅದಕ್ಕಾಗಿ ಅವರು ಜನತೆಗೆ ವಾಕ್ ಸ್ವಾತಂತ್ರ್ಯ, ಸರ್ಕಾರವನ್ನು ಟೀಕಿಸುವ ಸ್ವಾತಂತ್ರ್ಯವನ್ನು ನೀಡಿದರು. ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ವಾಕ್ ಸ್ವಾತಂತ್ರ್ಯ ಸಿಕ್ಕಿದ್ದೇ ಆ ಜನ ಹುಚ್ಚೆದ್ದುಹೋದರು. ಅದು ಅತಿಶೀಘ್ರದಲ್ಲಿ ಯಾವ ಮಟ್ಟ ತಲುಪಿತೆಂದರೆ ಗೋರ್ಬಚೆವ್ ಬಹಳ ನಿಧಾನವಾಗಿ ಸ್ವಾತಂತ್ರ್ಯ ನೀಡುತ್ತಿದ್ದಾರೆ, ಅವರೇ ನಮ್ಮ ಸ್ವಾತಂತ್ರ್ಯದ ವಿರೋಧಿ ಎಂದು ಯುವಜನತೆ ಭಾವಿಸುವಂತಾಯಿತು. ಕಮ್ಯೂನಿಸ್ಟ್ ಪಕ್ಷದಲ್ಲೇ ಸಂಪ್ರದಾಯವಾದಿಗಳ ಉಗ್ರ ವಿರೋಧವನ್ನು ನಿಭಾಯಿಸಿಕೊಂಡು ಗೋರ್ಬಚೆವ್ ಸಾಗುತ್ತಿದ್ದ ಕಠಿಣ ಹಾದಿಯನ್ನು ಅರಿತವರು ಕಡಿಮೆ. ಬೇಜವಾಬ್ದಾರಿ ಯುವಕನೊಬ್ಬ ‘ನನ್ನ ಕೈಗೊಂದು ರಿವಾಲ್ವರ್ ಸಿಕ್ಕಿದರೆ ಗೋರ್ಬಚೆವ್​ರನ್ನು ಕೊಲ್ಲುತ್ತೇನೆ’ ಎಂದೂ ಘೊಷಿಸಿದ್ದ. ಅದೃಷ್ಟವಶಾತ್ ಅವನ ಕೈಗೆ ರಿವಾಲ್ವರ್ ಸಿಗಲಿಲ್ಲ. ಆದರೆ ಜನಬೆಂಬಲ ಗೋರ್ಬಚೆವ್ ಕೈಜಾರಿ ಬೋರಿಸ್ ಯೆಲ್ತ್​ಸಿನ್ ಕೈಗೆ ಬಿತ್ತು. ಆಗಸ್ಟ್ 1991ರಲ್ಲಿ ಉಪಾಧ್ಯಕ್ಷ ಗೆನ್ನಾಡಿ ಯೇನಾಯೆವ್ ನೇತೃತ್ವದಲ್ಲಿ ಕಮ್ಯೂನಿಸ್ಟ್ ಕಟ್ಟರ್​ವಾದಿಗಳು ಕ್ಷಿಪ್ರಕ್ರಾಂತಿಯೆಸಗಿ ಗೋರ್ಬಚೆವ್​ರನ್ನು ಗೃಹಬಂಧನದಲ್ಲಿಟ್ಟರು. ಗೋರ್ಬಚೆವ್ ನೀಡಿದ್ದ ಸ್ವಾತಂತ್ರ್ಯದ ನಿಜವಾದ ಬೆಲೆ ಜನತೆಗೆ ತಿಳಿದದ್ದು ಆಗ. ಸ್ವಾತಂತ್ರ್ಯ ಕಳೆದುಕೊಳ್ಳಲು ತಯಾರಿಲ್ಲದ ಅವರು ಕ್ಷಿಪ್ರಕ್ರಾಂತಿಯ ವಿರುದ್ಧ ರಣಕಹಳೆಯನ್ನೇ ಮೊಳಗಿಸಿಬಿಟ್ಟರು. ಪರಿಣಾಮವಾಗಿ ಕ್ರಾಂತಿ ಮೂರೇದಿನದಲ್ಲಿ ಮಣ್ಣುಮುಕ್ಕಿತು. ಆದರೆ ಆ ಮೂರು ದಿನಗಳಲ್ಲಿ ಜನರ ನೇತೃತ್ವ ವಹಿಸಿದ ರಶಿಯನ್ ಫೆಡರೇಶನ್ ಅಧ್ಯಕ್ಷ ಬೋರಿಸ್ ಯೆಲ್ತ್​ಸಿನ್ ರಾಷ್ಟ್ರೀಯ ಜನನಾಯಕನಾಗಿ ಅವತರಿಸಿಯಾಗಿತ್ತು, ಗೋರ್ಬಚೆವ್ ಜನಪ್ರಿಯತೆ ಕುಗ್ಗಿತ್ತು.

ಅಂತಿಮವಾಗಿ ನವೆಂಬರ್​ನಲ್ಲಿ ಸೋವಿಯೆತ್ ಕಮ್ಯೂನಿಸ್ಟ್ ಪಾರ್ಟಿಯನ್ನು ವಿಸರ್ಜಿಸಿದ ಯೆಲ್ತ್​ಸಿನ್ ಡಿಸೆಂಬರ್ 21ರಂದು ಸೋವಿಯೆತ್ ಯೂನಿಯನ್ ಅನ್ನೇ ವಿಸರ್ಜಿಸಿ ಆದೇಶ ಸಿದ್ಧಪಡಿಸಿ ಸಹಿ ಹಾಕಲು ಗೋರ್ಬಚೆವ್ ಮುಂದಿಟ್ಟರು. ತಾನು ಅನುಷ್ಠಾನಗೊಳಿಸಿದ ಪ್ರಜಾಪ್ರಭುತ್ವೀಕರಣ ತನ್ನನ್ನು ಕೆಳಗೆ ದೂಡುತ್ತದೆ, ತನ್ನ ದೇಶವನ್ನು ಛಿದ್ರಗೊಳಿಸುತ್ತದೆ ಎಂದು ಬಹುಶಃ ಗೋರ್ಬಚೆವ್ ನಿರೀಕ್ಷಿಸಿರಲಿಲ್ಲ. ಕ್ರಿಸ್​ವುಸ್ ದಿನದಂದು ಆ ಆದೇಶಕ್ಕೆ ಸಹಿ ಹಾಕಿದ ಗೋರ್ಬಚೆವ್ ನಿರಾಸೆಯನ್ನು ವ್ಯಕ್ತಪಡಿಸಿದ್ದು ಹೀಗೆ- ‘...ಒಕ್ಕೂಟವನ್ನು ಉಳಿಸಿಕೊಳ್ಳುವುದಕ್ಕೆ ಹಿನ್ನಡೆಯಾಗಿದೆ... ಈ ಬಗ್ಗೆ ನನಗೆ ಚಿಂತೆ ಇದೆ.’

‘ಕೆಲವೊಮ್ಮೆ ನಾವು ಒಳ್ಳೆಯದನ್ನು ಬೆಂಬಲಿಸುತ್ತೇವೆ ಮತ್ತು ಸೋಲುತ್ತೇವೆ’ ಎಂದು ಅಮೆರಿಕನ್ ರಾಜತಂತ್ರಜ್ಞ ಜಾನ್ ಕೆನೆತ್ ಗಾಲ್​ಬ್ರೆತ್ ಹೇಳಿದ್ದು ಗೋರ್ಬಚೆವ್ ಬದುಕಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಗೋರ್ಬಚೆವ್ ಒಳ್ಳೆಯದನ್ನು ಬೆಂಬಲಿಸಿದರು, ಸೋತರು. ಆದರೆ ಜಗತ್ತಿಗೆ ಅವರು ನೀಡಿದ ಶಾಂತಿಯ ಕೊಡುಗೆಗಾಗಿ ಚರಿತ್ರೆಯಲ್ಲಿ ಅಜರಾಮರರಾಗಿದ್ದಾರೆ. ಅದು ಅವರ ಗೆಲುವು.

ಶಸ್ತ್ರಾಸ್ತ್ರ ಪೈಪೋಟಿ ನಿಲುಗಡೆ

ಚೀನಾದ ಜತೆ ಸ್ನೇಹವೃದ್ಧಿಯತ್ತಲೂ ಗೋರ್ಬಚೆವ್ ಗಮನ ನೀಡಿದರು. ಆ ಏಷ್ಯನ್ ದೈತ್ಯನ ಜತೆಗಿನ ಸ್ನೇಹ ಮೂರು ದೊಡ್ಡ ಸೇನಾ ಖರ್ಚುಗಳಲ್ಲಿ ಉಳಿತಾಯ ತರುತ್ತದೆ ಎಂದು ಲೆಕ್ಕಹಾಕಿದ ಗೋರ್ಬಚೆವ್ ಅದರ ಪ್ರಯತ್ನವನ್ನು ಆರಂಭಿಸಿದ್ದು ಚೀನಾಗೆ ಹತ್ತಿರದ ಸೋವಿಯೆತ್ ಬಂದರು ನಗರ ವ್ಲಾದಿವೋಸ್ತಾಕ್​ನಲ್ಲಿ. ಜುಲೈ 7, 1986ರಂದು ಅಲ್ಲಿ ನೀಡಿದ ಸಂದೇಶದಲ್ಲಿ ಅವರು ಚೀನೀ ಆತಂಕವನ್ನು ಕಡಿಮಗೊಳಿಸುವ ಕ್ರಮವಾಗಿ ಅಫ್ಘಾನಿಸ್ತಾನದಿಂದ ಸೋವಿಯೆತ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿಯೂ, ಉತ್ತರದಲ್ಲಿ ಮಂಗೋಲಿಯಾದಲ್ಲಿರುವ ಸೋವಿಯತ್ ಸೇನೆಯನ್ನು ಮಿತಗೊಳಿಸುವುದಾಗಿಯೂ ಮತ್ತು ಕಂಪೂಚಿಯಾದಲ್ಲಿ ವಿಯೆಟ್ನಾಮೀ ಸೇನಾ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವುದಾಗಿಯೂ ಘೊಷಿಸಿದರು. ಏಶಿಯಾದಲ್ಲಿನ ಶಾಂತಿಗೆ, ಸೋವಿಯೆತ್-ಚೀನಾ ಮೈತ್ರಿವೃದ್ಧಿಗೆ ಇದೊಂದು ಮಹತ್ವದ ಹೆಜ್ಜೆ. ಈ ಯೋಜನೆಗಳು 1988-96ರಲ್ಲಿ ಜಾರಿಗೆ ಬಂದವು. ಪರಿಣಾಮವಾಗಿ ಏಶಿಯಾದಲ್ಲಿ ಮೂರು ಭಾರಿ ಸೇನಾ ವೆಚ್ಚಗಳಿಂದ ಮಾಸ್ಕೋ ಮುಕ್ತವಾಯಿತು. ಈ ನಡುವೆ ನವೆಂಬರ್ 1987ರಲ್ಲಿ ಅಮೆರಿಕಾ ಜತೆ ಐಎನ್​ಎಫ್ ಒಪ್ಪಂದವಾಗಿ ಮಧ್ಯಮ ದೂರದ ಬ್ಯಾಲಿಸ್ಟಿಕ್ ಮಿಸೈಲ್​ಗಳನ್ನೂ ಎರಡೂ ದೇಶಗಳು ಕಡಿತಗೊಳಿಸಿ ಶಸ್ತ್ರಾಸ್ತ್ರ ಪೈಪೋಟಿಯ ನಿಲುಗಡೆಯಲ್ಲಿ ಅತ್ಯಂತ ದೊಡ್ಡ ಹೆಜ್ಜೆಯಿಟ್ಟವು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net