ಕೊತ್ತಿಮೀರಿ ಸೊಪ್ಪಿನೊಳಗೆ ಅಡಗಿಹೋಯ್ತು ಗಲಭೆ!

Chakravarti Sulibele
Published on

ಜಾಕಿರ್ ನಾಯ್ಕ್​ ಭಾಷಣಗಳನ್ನು ನಾವಷ್ಟೇ ವಿರೋಧಿಸುತ್ತೇವೆ ಎಂದು ಭಾವಿಸಬೇಡಿ. ಶಿಯಾಗಳು, ಸೂಫಿಗಳು, ಬರೇಲ್ವಿಗಳು ಕೊನೆಗೆ ಸುನ್ನಿಗಳಲ್ಲೂ ಒಂದಷ್ಟು ಪಂಥದವರು ಕಟುವಾಗಿ ವಿರೋಧಿಸುತ್ತಾರೆ. ಆತ ದೇಶಬಿಟ್ಟು ಓಡಿಹೋದಾಗ ನಮಗಿಂತ ಹೆಚ್ಚು ಸಂಭ್ರಮಿಸಿದವರು ಅವರೇ!

ದೆಹಲಿ ಗಲಭೆಯ ರಂಗು-ರಂಗಿನ ಸುದ್ದಿಗಳು ಹೊರ ಬರುತ್ತಲೇ ಇವೆ. ದೆಹಲಿ ಗಲಭೆ ಈಗ ಭಾರತಕ್ಕಷ್ಟೇ ಸೀಮಿತವಾಗುಳಿದಿಲ್ಲ. ಈ ಗಲಭೆಗಳ ಸಾಕಾರಕ್ಕಾಗಿ ಜಾರ್ಜ್ ಸೊರೋಸ್​ನಂಥ ವ್ಯಕ್ತಿಗಳಲ್ಲದೆ ಗಲ್ಪ್ ರಾಷ್ಟ್ರಗಳಿಂದಲೂ ಹಣ ಹರಿದು ಬಂದಿರುವುದು ಬೆಳಕಿಗೆ ಬರುತ್ತಿದೆ. ಅದರ ಹಿಂದು-ಹಿಂದೆಯೇ ನಡೆದ ವ್ಯವಸ್ಥಿತವಾದ ಬೆಂಗಳೂರಿನ ಗಲಭೆಗಳ ಜಾಡೂ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದು ಅಚ್ಚರಿಯ ಮತ್ತು ಗಾಬರಿ ಹುಟ್ಟಿಸುವ ಸಂಗತಿ! ಲೇಖನದ ಮುಂದಿನ ಹಂತಕ್ಕೆ ಹೋಗುವ ಮುನ್ನವೇ ಕೆ.ಜೆ.ಹಳ್ಳಿ ಗಲಭೆಯ ನಂತರ, ಎಮ್​ಎಸ್.ರಾಮಯ್ಯ ಕಾಲೇಜಿನಲ್ಲಿ ವೈದ್ಯಕೀಯ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಐಸಿಸ್​ಗೆ ಸಹಕಾರ ಕೊಡುತ್ತಿದ್ದ ಸ್ಪೋಟಕ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಹತೆಯ ಮುಖವಾಡದ ಹಿಂದೆ ಇವರುಗಳೆಲ್ಲ ದೇಶವನ್ನು ಒಡೆಯುವ ಕೃತ್ಯ ಮಾಡುತ್ತಿರುವುದು ದುರದೃಷ್ಟಕರವೇ ಸರಿ.

ಆದರೆ, ಒಟ್ಟಾರೆ ಸಮಾಜವಾಗಿ, ಸರ್ಕಾರವಾಗಿ ನಾವು ಸಾಗುತ್ತಿರುವ ದಿಕ್ಕು ಶಾಶ್ವತ ಪರಿಹಾರದೆಡೆಗೆ ನಮ್ಮನ್ನೊಯ್ಯುತ್ತಿರುವಂತೆ ಕಾಣುತ್ತಿಲ್ಲ. ತಾತ್ಕಾಲಿಕ ಲಾಭದಾಸೆಗೆ ನಾವು ದೀರ್ಘಕಾಲದ ಬದಲಾವಣೆಯ ಅವಕಾಶವನ್ನು ಕಳೆದು ಕೊಳ್ಳುತ್ತಿದ್ದೇವೆ ಎನಿಸುತ್ತಿದೆ. ಈ ಶತಮಾನದ ಆರಂಭದ ಹೊತ್ತಿನಲ್ಲಿಯೇ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಗಳನ್ನು ಕೇಂದ್ರವಾಗಿ ಇರಿಸಿಕೊಂಡು ಮುಸ್ಲಿಂ ಸಂಘಟನೆಗಳು ತೀವ್ರ ಪ್ರಮಾಣದಲ್ಲಿ ಕೆಲಸ ನಿರ್ವಹಿಸುತ್ತವೆ ಎಂಬ ಮಾಹಿತಿ ಸರ್ಕಾರಗಳಿಗಿತ್ತು. ಅದರಲ್ಲೂ ಬಾಬ್ರಿ ಕಟ್ಟಡ ಉರುಳಿದುದರ ನೆಪದಲ್ಲಿ ಕೇರಳದಲ್ಲಿ 1993ರಲ್ಲೇ ಹುಟ್ಟಿಕೊಂಡ ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್ ತನ್ನನ್ನು ತಾನು ವಿಸ್ತರಿಸಿಕೊಂಡ ರೀತಿ ಹೆದರಿಕೆ ಹುಟ್ಟಿಸುವಂಥದ್ದಾಗಿತ್ತು. ಮುಸಲ್ಮಾನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲಕ್ಕೆತ್ತುವ ಕಲ್ಪನೆಯೊಂದಿಗೆ ಹುಟ್ಟಿಕೊಂಡ ಈ ಸಂಸ್ಥೆ ಮೇಲ್ನೋಟಕ್ಕೆ ಈ ಕೆಲಸಗಳನ್ನು ಮಾಡುತ್ತಿತ್ತಾದರೂ ಆಂತರ್ಯದಲ್ಲಿ ತೀವ್ರತರವಾದ ಭಯೋತ್ಪಾದಕ ಕೃತ್ಯಗಳಲ್ಲೇ ತೊಡಗಿತ್ತು. 2003ರಲ್ಲಿ ಕೊಯ್ಕೊಡ್​ನಲ್ಲಿ ಹಿಂದೂಗಳ ಮಾರಣಹೋಮ ನಡೆಸುವಲ್ಲಿ ಈ ಸಂಘಟನೆಯ ಪಾತ್ರ ಬೆಳಕಿಗೆ ಬಂದ ನಂತರ ಇದು ಸಮಾಧಿಗೊಂಡು ‘ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ’ ಹುಟ್ಟಿಕೊಂಡಿತು. ಎನ್​ಡಿಎಫ್ ಕೇರಳಕ್ಕಷ್ಟೇ ಸೀಮಿತವಾಗಿದ್ದರೆ ಹೊಸದಾಗಿ ಹುಟ್ಟಿಕೊಂಡ ಈ ಸಂಸ್ಥೆ ಕರ್ನಾಟಕದ ಫೋರಮ್ ಫಾರ್ ಡಿಗ್ನಿಟಿ, ಗೋವಾ ಸಿಟಿಜನ್ಸ್ ಫೋರಂ, ತಮಿಳುನಾಡಿನ ನೀತಿ ಪಸಾರೈ ಮೊದಲಾದ ಸಂಘಟನೆಗಳನ್ನು ಸೇರಿಸಿಕೊಂಡು ವಿಸ್ತಾರವಾಗಿ ಹಬ್ಬಿತ್ತು. ನಿಷೇಧಿತ ಸಿಮಿಯೊಂದಿಗೂ ಈ ಸಂಘಟನೆಯ ಸಂಪರ್ಕಗಳು ಸೂಕ್ಷ್ಮ ಮಟ್ಟದಲ್ಲಿ ಕಂಡು ಬಂದಿದ್ದವು. ಇದುವರೆಗೂ ಈ ಸಂಘಟನೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಕುರಿತಂತೆ ಯಾವ ಪುರಾವೆಗಳನ್ನೂ ಒದಗಿಸಲಾಗಲಿಲ್ಲ, ನಿಜವೇ. ಆದರೆ ಕಟ್ಟರ್ ಇಸ್ಲಾಮಿ ಪಂಥದ ಪ್ರತಿಪಾದಕನಾಗಿ ತಾನು ಕಾಲಿಟ್ಟೆಡೆಯಲ್ಲೆಲ್ಲ ಅಶಾಂತಿಯನ್ನು ಹಬ್ಬಿಸುವಲ್ಲಿ ಅದರ ಪಾತ್ರ ಬಲು ಜೋರಾಗಿದೆ. ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿಯವರಿಗೆ ಅವಮಾನವಾಗುವಂತೆ ಪ್ರಶ್ನೆ ಕೇಳಿದ್ದಾರೆಂಬ ಕಾರಣಕ್ಕೆ ಪ್ರಾಧ್ಯಾಪಕ ಟಿ.ಜೆ.ಕುರಿಯನ್​ರ ಕೈ ಕತ್ತರಿಸಿದಾಗ ಈ ಸಂಘಟನೆಯ 37 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಅದೇ ಕೇರಳದಲ್ಲಿ ಆರೆಸ್ಸೆಸ್ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ ಅನೇಕ ಕಾರ್ಯಕರ್ತರ ಹತ್ಯೆಯಲ್ಲಿ ಸಂಘಟನೆ ಭಾಗಿಯಾಗಿದೆ ಎಂದು ಸ್ವತಃ ಕೇರಳ ಸರ್ಕಾರ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಅದಾದ ಎರಡೇ ವರ್ಷಗಳಲ್ಲಿ ಈ ಸಂಘಟನೆಯ ಮೇಲೆ ಹತ್ಯೆಗೆ ಪ್ರಯತ್ನ ಮಾಡಿದ 86 ಪ್ರಕರಣಗಳು ದಾಖಲಾಗಿದ್ದವು! ಇವೆಲ್ಲಕ್ಕಿಂತಲೂ ವಿಕಟವಾದ ಕೃತ್ಯವೆಂದರೆ ಹಿಂದೂ ಮತ್ತು ಕ್ರಿಶ್ಚಿಯನ್ ತರುಣ-ತರುಣಿಯರನ್ನು ಮತಾಂತರ ಮಾಡುವಲ್ಲಿ ಈ ಸಂಘಟನೆಯ ಪಾತ್ರ. ಇದರ ಸಹೋದರಿ ಸಂಸ್ಥೆ ನ್ಯಾಷನಲ್ ವುಮೆನ್ಸ್ ಫ್ರಂಟ್​ನ ಅಧ್ಯಕ್ಷೆಯ ಮೇಲೆ ಸ್ಟಿಂಗ್ ಆಪರೇಶನ್ ಮಾಡಿದಾಗ ಈ ಕುರಿತ ಅನೇಕ ಸಂಗತಿಗಳು ಹೊರ ಬಂದವು. ಇದನ್ನೂ ಓದಿ: ವಿಶ್ವಗುರು: ಪಾಕ್​ ಆಕ್ರಮಿತ ಕಾಶ್ಮೀರ ಶಾಶ್ವತವಾಗಿ ಕೈತಪ್ಪಿ ಹೋಯ್ತಾ?!

ಪಿಎಫ್​ಐ ಧಾರ್ವಿುಕ ಚಟುವಟಿಕೆಗಳನ್ನು ನಡೆಸುವುದು ಮೇಲ್ನೋಟಕ್ಕೆ ನಿಜವಾಗಿದ್ದರೂ ಅದರ ಮುಖ್ಯ ಅಜೆಂಡಾ ಇಸ್ಲಾಮಿನ ರಾಜಕೀಯ ಚಿಂತನೆಗಳನ್ನು ಹಬ್ಬಿಸುವುದೇ ಆಗಿದೆ. ತಮ್ಮದೇ ರಾಜಕೀಯ ವಿಭಾಗವೆನಿಸಿರುವ ಎಸ್​ಡಿಪಿಐನ ಮೂಲಕ ಅವರು ಕಟ್ಟರ್​ಪಂಥಿ ಇಸ್ಲಾಮಿ ರಾಜ್ಯವನ್ನು ನಿರ್ಮಾಣ ಮಾಡುವ ತಯಾರಿಯಲ್ಲಿ ತೊಡಗಿರುವುದು ಬಲು ಸೂಕ್ಷ್ಮವಾದ ಸಂಗತಿ. ಎಲ್ಲೆಲ್ಲಿ ಪಿಎಫ್​ಐ ತನ್ನ ಕಬಂಧ ಬಾಹುಗಳನ್ನು ಚಾಚಿದೆಯೋ ಅಲ್ಲೆಲ್ಲ ಷರಿಯಾ ನ್ಯಾಯಪದ್ಧತಿಯನ್ನು ಅನುಸರಿಸುವ ಮತ್ತು ಭಾರತೀಯ ನ್ಯಾಯವ್ಯವಸ್ಥೆಯನ್ನು ಧಿಕ್ಕರಿಸುವ ಮಾತುಗಳು ಸಹಜವಾಗಿ ಕೇಳಿಬರುತ್ತವೆ. ತನಗೆ ಬೇಕಾಗಿರುವ ತರುಣ ಪೀಳಿಗೆಯನ್ನು ಜೋಡಿಸಿಕೊಳ್ಳುವುದಕ್ಕೆಂದೇ ಈ ಸಂಘಟನೆ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ಯಾಂಪಸ್ ಫ್ರಂಟ್​ನ ಮೂಲಕ ಕೆಲಸ ಮಾಡುತ್ತಿದೆ. ನೆನಪಿಡಿ, ಇಷ್ಟನ್ನೂ ಹೇಳುತ್ತಿರುವುದರ ಉದ್ದೇಶವೆಂದರೆ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಗಳು ಮೇಲ್ನೋಟಕ್ಕೆ ಒಂದಷ್ಟು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆಯಷ್ಟೇ ಅಲ್ಲ. ಆಳ ಹೊಕ್ಕು ನೋಡಿದರೆ ಪಿಎಫ್​ಐ ತನ್ನ ಬಾಹುಗಳನ್ನು ವಿಸ್ತರಿಸುವ ಕಿಡಿ ಹಚ್ಚಿದ ಘಟನೆ ಅದು.

ಹಾಗೆ ನೋಡಿದರೆ ಇವರೆಲ್ಲ ಹೇಳುವುದು ಸತ್ಯವೇ. ಬಾಬ್ರಿ ಕಟ್ಟಡ ಉರುಳಿದ ನಂತರ ಮತಾಂಧತೆಯನ್ನು ಹಬ್ಬಿಸಲು ಇವರೆಲ್ಲರಿಗೂ ಒಂದು ಅಸ್ತ್ರ ದೊರೆತಂತಾಯ್ತು. ಉಗ್ರ ಹಿಂದುತ್ವದ ಪ್ರತಿಪಾದನೆಗೂ ಬಾಬ್ರಿ ಕಟ್ಟಡ ಉಪಯೋಗವಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ. ಈ ಕಟ್ಟಡ ಉರುಳುತ್ತಿರುವ ದೃಶ್ಯಗಳನ್ನು ತೋರಿಸಿಯೇ ತರುಣ ಪೀಳಿಗೆಯ ಮುಸಲ್ಮಾನರನ್ನು ಕಟ್ಟರ್​ಪಂಥಿಯರು ಆಕರ್ಷಿಸಲು ಸಾಧ್ಯವಾಗಿದ್ದು. ಧರ್ಮದ ವಿಚಾರ ಬಂದಾಗ ಪ್ರತಿಯೊಬ್ಬ ಮುಸಲ್ಮಾನನೂ ಕಟ್ಟರ್​ಪಂಥೀಯನೇ. ಅದು ಧರ್ಮದ ಮೂಲಕವೇ ಅವರಿಗೆ ಸಿದ್ಧಿಸಿದ್ದು. ಅವರಿಗೆ ಮತ್ತೊಬ್ಬ ದೇವರನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಗುಣ ಬರುವುದು ಬಲುಕಷ್ಟವೇ. ಆದರೂ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಅನೇಕ ಮುಸಲ್ಮಾನ ಪಂಥಗಳು ಅನುಸರಿಸಿಕೊಂಡು ನಡೆಯುವ ಗುಣವನ್ನು ಪಡೆಯುವುದು ಸತ್ಯವೇ. ಆ ದೃಷ್ಟಿಯಿಂದ ನೋಡಿದರೆ ಭಾರತದ ವಿಚಾರದಲ್ಲಿ ಶಿಯಾಗಳು, ಸೂಫಿಗಳು, ಬರೇಲ್ವಿ, ಬೊಹ್ರಾಗಳು ಸಾಧಾರಣಮಟ್ಟಿಗೆ ಹಿಂದೂಗಳೊಂದಿಗೆ ಸಹಬಾಳ್ವೆಯನ್ನೇ ನಡೆಸಿದ್ದಾರೆ. ಆದರೆ ಇತ್ತೀಚೆಗೆ ವ್ಯಾಪಕಗೊಳ್ಳುತ್ತಿರುವ ವಹಾಬಿ ಮತ್ತು ಸಲಫಿಗಳು, ದೇವ್​ಬಂದಿಗಳು, ಅಹಲ್-ಎ-ಹದೀಸ್, ಶಫಾಯ್, ಹನಫಿ, ಹನ್​ಬಲಿಗಳು ಬಲು ಕಟ್ಟರ್​ಗಳೆ. ಇಂಥವರಿಗೆ ಹೆಚ್ಚು ಅರಬ್​ನ ಹಣ ಹರಿದು ಬರುವುದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ತಮ್ಮನ್ನು ತಾವು ಅರಬ್​ಗೆ ಹತ್ತಿರವೆಂದು ಸಾಬೀತುಪಡಿಸಿಕೊಳ್ಳಲು ಇವರು ಪಡುವ ಪಾಡು ಅಂತಿಂಥದ್ದಲ್ಲ. ಜಮಾತ್​ನ ಹೆಸರಲ್ಲಿ ಊರೂರು ತಿರುಗುವ ಮತಪ್ರಚಾರಕರನ್ನು ಒಮ್ಮೆ ನೋಡಿ. ಅವರು ಹಾಕುವ ಬಟ್ಟೆ, ಗಡ್ಡ-ಮೀಸೆಗಳ ರೂಪುರೇಷೆ, ಟೋಪಿ ಹಾಕಿಕೊಳ್ಳುವ ಶೈಲಿ ಪ್ರತಿಯೊಂದೂ ಅರಬ್​ರಿಗೆ ಹತ್ತಿರವಿರುವಂತೆ ಕಾಣುತ್ತದೆ. ಇದನ್ನೂ ಓದಿ: ವಿಶ್ವಗುರು: ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

18ನೇ ಶತಮಾನದ ಕೊನೆಯ ವೇಳೆಗೆ ವಹಾಬಿಸಂ ಭಾರತದಲ್ಲಿ ನೆಲೆ ಕಂಡುಕೊಂಡಿತು. ಗಾಂಧೀಜಿ ಖಿಲಾಫತ್ ಚಳವಳಿಗೆ ಬೆಂಬಲ ಕೊಟ್ಟು ಖಲೀಫಾರಿಗೆ ಗೌರವ ಕೊಡಬೇಕೆನ್ನುವುದರೊಂದಿಗೆ ಇದು ತೀವ್ರಘಟ್ಟವನ್ನು ಮುಟ್ಟಿತ್ತು. ದ್ವಿರಾಷ್ಟ್ರ ಸಿದ್ಧಾಂತದ ಬೀಜಾವಾಪವಾಗಿದ್ದು ಅಲ್ಲಿಂದಲೇ! ಅರಬ್ಬರ ವಹಾಬಿಸಂಗೆ ಸಂವಾದಿಯಾಗಿ ಸುನ್ನಿಗಳೊಳಗೆ ಸುಧಾರಣೆಯ ರೂಪದಲ್ಲಿ ಭಾರತದಲ್ಲೇ ಹುಟ್ಟಿಕೊಂಡಿದ್ದು ದೇವ್​ಬಂಧಿ ಪಂಥ. 1857ರ ಸ್ವಾತಂತ್ರ್ಯ ಸಂಗ್ರಾಮ ಅಂದುಕೊಂಡ ಪ್ರತಿಫಲ ಕೊಡದೇ ಹೋದಾಗ ಹುಟ್ಟಿಕೊಂಡದ್ದಿದು. ಇಸ್ಲಾಮನ್ನು ಗಟ್ಟಿಗೊಳಿಸುತ್ತ ಬ್ರಿಟಿಷರ ವಿರುದ್ಧ ಹೋರಾಡಲು ಅವರನ್ನು ತಯಾರು ಮಾಡುತ್ತ ಬಲಗೊಂಡವರಿವರು. ಸ್ವಾತಂತ್ರ್ಯದ ಕಾಲಘಟ್ಟದಲ್ಲೂ ಬ್ರಿಟಿಷರ ಜೊತೆಯಾಗಿ ನಿಲ್ಲದೇ ಪಾಕಿಸ್ತಾನದ ಸ್ಥಾಪನೆಯನ್ನು ವಿರೋಧಿಸಿದ್ದರು ಇವರು. ಹಾಗಂತ ಅಪ್ಪಟ ದೇಶಭಕ್ತರೆಂಬ ಭ್ರಮೆ ಏನೂ ಬೇಕಾಗಿಲ್ಲ. ಸಣ್ಣ ತುಂಡು ಪಾಕಿಸ್ತಾನದ ನಿರ್ಮಾಣ ಮಾಡುವುದಕ್ಕಿಂತ ವಿಸ್ತಾರವಾದ ಹಿಂದುಸ್ಥಾನವನ್ನೇ ಪರಿವರ್ತನೆಗೊಳಿಸುವುದು ಒಳಿತೆಂಬುದು ಅವರ ಉದ್ದೇಶವಾಗಿತ್ತು. ಇಂದು ದೇಶದಾದ್ಯಂತ ವ್ಯಾಪಕವಾಗಿ ಹಬ್ಬಿರುವ ಇಸ್ಲಾಮಿನ ಪಂಥವಾಗಿ ಇವರು ಬೆಳೆದು ನಿಂತಿದ್ದಾರೆ.

ಇವರಂತೆಯೇ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ಹುಟ್ಟಿಕೊಂಡ ಮತ್ತೊಂದು ಪಂಥ ಬರೇಲ್ವಿ ಇಸ್ಲಾಂ. ಆಂತರಿಕವಾಗಿ ತಮ್ಮನ್ನು ತಾವು ರೂಪಿಸಿಕೊಳ್ಳಬೇಕೆಂಬ ಚಿಂತನೆಯೊಂದಿಗೆ ಈ ಪಂಥ ಹೆಚ್ಚು-ಹೆಚ್ಚು ಸೂಫಿ ತತ್ತ್ವದ ಕಡೆಗೆ ವಾಲಿಕೊಂಡಿತು. ಸದ್ಯದಮಟ್ಟಿಗೆ ಭಾರತದಲ್ಲಿ ಇರುವ ಹೆಚ್ಚಿನ ಸಂಖ್ಯೆಯ ಮುಸಲ್ಮಾನರು ಇವರೇ. ದೇವ್​ಬಂದಿಗಳಷ್ಟು ಕಟ್ಟರ್​ಪಂಥಿಗಳಲ್ಲದ ಈ ಮುಸಲ್ಮಾನರು ಸಾಮಾಜಿಕ, ಆರ್ಥಿಕ ದೃಷ್ಟಿಯಿಂದ ಸಾಕಷ್ಟು ಹಿಂದುಳಿದವರೇ. ಸಹಜವಾಗಿಯೇ ಮುಂದುವರಿದ ಶಿಕ್ಷಿತ ದೇವ್​ಬಂದಿ, ಸಲಫಿ, ವಹಾಬಿ ಮುಸಲ್ಮಾನರು ಬರೇಲ್ವಿ ಪಂಥದ ತರುಣರನ್ನು ತಮ್ಮತ್ತ ಸೆಳೆದುಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಈ ಪಂಥದ ಅನೇಕರು ಗೋರಿಗಳು ಪೂಜೆ ಮಾಡುವುದನ್ನು ಕಟ್ಟರ್​ಪಂಥಿಗಳು ವಿರೋಧಿಸುತ್ತಾರೆ. ಜ್ಯೋತಿಷ್ಯ ಕೇಳುವ, ಅದಕ್ಕೆ ತಕ್ಕಂತೆ ತಮ್ಮ ಮನೆಯ ಕಾರ್ಯಗಳನ್ನು ನಡೆಸುವ ಅನೇಕ ಮಂದಿ ಕಂಡುಬರುವುದು ಈ ಪಂಥದಲ್ಲಿಯೇ. ಹಿಂದೂಗಳಿಗೆ ಬಲು ಹತ್ತಿರವೆನಿಸುವ ಈ ಆಚರಣೆಗಳನ್ನು ಕಟುವಾಗಿ ನಿಂದಿಸುತ್ತಲೇ ಈ ತರುಣರನ್ನು ಉಳಿದವರು ಸೆಳೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇವರುಗಳ ನಡುವೆ ಅತ್ಯಂತ ಕೆಟ್ಟ ಸಂಘರ್ಷಗಳು ಭಾರತದಲ್ಲಿ ನಡೆದಿವೆ. ಜಾಕಿರ್ ನಾಯ್ಕ್​ ಭಾಷಣಗಳನ್ನು ನಾವಷ್ಟೇ ವಿರೋಧಿಸುತ್ತೇವೆ ಎಂದು ಭಾವಿಸಬೇಡಿ. ಶಿಯಾಗಳು, ಸೂಫಿಗಳು, ಬರೇಲ್ವಿಗಳು ಕೊನೆಗೆ ಸುನ್ನಿಗಳಲ್ಲೂ ಒಂದಷ್ಟು ಪಂಥದವರು ಕಟುವಾಗಿ ವಿರೋಧಿಸುತ್ತಾರೆ. ಆತ ದೇಶಬಿಟ್ಟು ಓಡಿಹೋದಾಗ ನಮಗಿಂತ ಹೆಚ್ಚು ಸಂಭ್ರಮಿಸಿದವರು ಅವರೇ! ಇದನ್ನೂ ಓದಿ: ವಿಶ್ವಗುರು: ಕಾರ್ಗಿಲ್ ಪಾಠ ಈಗ ಬಳಕೆಯಾಗುತ್ತಿದೆ!

ದುರದೃಷ್ಟಕರ ಸಂಗತಿ ಏನು ಗೊತ್ತೇ? ಈ ಯಾವ ವಿಚಾರಗಳೂ ನಮ್ಮ ನಾಯಕರುಗಳಿಗಾಗಲೀ ಈ ಘಟನೆಗಳನ್ನು ವಿಚಾರಣೆ ನಡೆಸುವ ಸ್ಥಳೀಯ ಅಧಿಕಾರಿಗಳಿಗಾಗಲೀ ಖಂಡಿತ ಗೊತ್ತಿಲ್ಲ. ಅವರ ಪಾಲಿಗೆ ಎಲ್ಲ ಮುಸಲ್ಮಾನರೂ ಒಂದೇ. ಬೆಂಗಳೂರಿನ ಘಟನೆಯ ಹಿಂದಿರುವ ಪಿಎಫ್​ಐ ಸಲಫಿ ಚಿಂತನೆಗಳ ಹಬ್ಬಿಸಲೆಂದೇ ನಿಂತಿರುವಂಥದ್ದು. ಇವರುಗಳನ್ನು ವಿರೋಧಿಸುವ ಅನೇಕ ಪಂಗಡಗಳು ಬೆಂಗಳೂರಿನಲ್ಲಿವೆ. ಗಲಭೆಗಳಿಗೆ ಕಿಡಿ ಹಚ್ಚಿ ಮಾಯವಾಗಿಬಿಡುವ ಈ ಸಂಘಟನೆಯ ಮುಖಂಡರು ಆನಂತರ ಸಿಕ್ಕಿ ಹಾಕಿಕೊಳ್ಳುವ ವಿರೋಧಿ ಪಾಳಯದವರನ್ನೇ ಜೈಲಿನಿಂದ ಬಿಡಿಸಿಕೊಂಡು ಬಂದು ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.

ನೀವು ನಂಬಲಾರಿರಿ, ಬರೇಲ್ವಿ ಸೂಫಿ ಪಂಥಕ್ಕೆ ಸೇರಿದ ಅನೇಕ ತರುಣರು ಅದಾಗಲೇ ಸಲಫಿಗಳತ್ತ ವಾಲುತ್ತಿದ್ದಾರೆ. ತಮ್ಮ ಮಸೀದಿಗಳಲ್ಲಿ ಹೇಳುವ ವಿಚಾರಗಳನ್ನು ಕೇಳದೇ ಸಾಮಾಜಿಕ ಜಾಲತಾಣಗಳಲ್ಲಿ ಸಲಫಿಗಳು ಹರಿಬಿಡುವ ಕಟ್ಟರ್ ಚಿಂತನೆಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಇದನ್ನು ಸಮರ್ಥವಾಗಿ ಅರಿತುಕೊಂಡಿರುವ ಮೋದಿ ಶಿಯಾಗಳಿಗೆ, ಸೂಫಿಗಳಿಗೆ ಹೆಚ್ಚಿನ ಬೆಲೆ ಕೊಡುತ್ತ ಈ ಕಟ್ಟರ್​ಪಂಥಿಗಳನ್ನು ಅಧಿಕಾರ ಕೇಂದ್ರಗಳಿಂದ ದೂರವಿರಿಸುತ್ತಿದ್ದಾರೆ. ಇತರ ರಾಜಕಾರಣಿಗಳಿಗೆ ಇವೆಲ್ಲವೂ ಅರ್ಥವಾಗಲು ಇನ್ನೊಂದು ಜನ್ಮವೇ ಬೇಕಾಗಬಹುದೇನೋ. ಉತ್ತರಕನ್ನಡದಲ್ಲಿ ಪರೇಶ್ ಮೇಸ್ತಾ ತೀರಿಕೊಂಡಾಗ ಉಗ್ರ ಭಾಷಣ ಮಾಡಿದವರ್ಯಾರಿಗೂ ಇಂದು ಆತನ ಕೊಲೆಗಡುಕರಿಗೇನಾಯ್ತು ಎಂಬ ವಿಚಾರ ಬೇಕಿಲ್ಲ. ಆದರೆ ಈ ಮಾತುಗಳಿಂದಾಗಿ ಅಲ್ಲಿನ ಮುಸಲ್ಮಾನ್ ತರುಣರು ಕಟ್ಟರ್​ಪಂಥಿ ಚಿಂತನೆಗಳ ದಿಕ್ಕಿಗೆ ತಿರುಗಿಕೊಂಡು ಬಿಟ್ಟಿದ್ದಾರಲ್ಲ, ಅವರನ್ನು ಕರೆತರುವುದು ಇನ್ನು ಸಾಧ್ಯವೇ ಇಲ್ಲ. ಮೊನ್ನೆ ಕೆ.ಜಿ. ಹಳ್ಳಿಯ ಘಟನೆಯಾದಾಗಲು ಅಷ್ಟೇ. ವೋಟುಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ಸು ಕೊಟ್ಟ ಒಂದೊಂದು ಹೇಳಿಕೆಯೂ ಭಾರತದ ಪುನರ್ ನಿರ್ವಣಕ್ಕೆ ತಡೆಗೋಡೆಯನ್ನೇ ಕಟ್ಟುವಂತಿದ್ದವು. ಏಕೆಂದರೆ ಕಟ್ಟರ್​ಪಂಥಿ ಮುಸಲ್ಮಾನರ ಸೌಧ ಮೂರು ಹಂತಗಳದ್ದು. ಆಂತರಿಕ ವಾದ ಕಟ್ಟರ್​ಪಂಥಿ ಸಂಘಟನೆಗಳ ತಿರುಳಾದರೆ ಅದರ ಸುತ್ತಲೂ ಅದನ್ನು ಅನುಸರಿಸುವ ಜನ, ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಿವೆ. ಮೂರನೇ ಹಂತದ ಕವಚವಾಗಿ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು ರಕ್ಷಣೆಗೆಂದು ಸದಾ ನಿಂತಿರುತ್ತಾರೆ. ಬೆಂಗಳೂರಿನ ಘಟನೆಯಲ್ಲೂ ಹಾಗೇ ಆಯ್ತು ನೋಡಿ. ಪಿಎಫ್​ಐನ ಅಂಗಸಂಸ್ಥೆ ಎಸ್​ಡಿಪಿಐ ಬೆಂಕಿ ಹಚ್ಚಿತು. ಅದನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ಸು ಧಾವಿಸಿ ಬಂತು. ನಾವುಗಳು ಇಡಿಯ ಪ್ರಕರಣದ ತೀವ್ರತೆಯನ್ನು ಕೊತ್ತಿಮೀರಿ ಸೊಪ್ಪಿನ ಲೇವಡಿಯ ಮೂಲಕ ಹಾಳುಗೆಡವುವ ವೇಳೆಗೆ ಅದನ್ನೇ ಆಧಾರವಾಗಿಟ್ಟುಕೊಂಡು ಬುದ್ಧಿಜೀವಿಗಳು ಗಲಾಟೆಕೋರರಿಗೆ ರಕ್ಷಣಾಗೋಡೆಯನ್ನೇ ನಿರ್ವಿುಸಿಬಿಟ್ಟರು!

ಮತಾಂಧತೆಯ ಈ ಓಟದ ಕುರಿತಂತೆ ನಾವು ತಿಳಿದುಕೊಳ್ಳಬೇಕಾದ್ದು ಬಹಳ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net