More

    ವಿಶ್ವಗುರು: ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

    ವಿಶ್ವಗುರು: ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

    ಭಾರತ ತನ್ನೊಂದಿಗೆ ಮಾತುಕತೆಗೆ ಬರುತ್ತದೆ. ಆಗ ತನ್ನ ಸಾರ್ವಭೌಮತೆಯನ್ನು ಪ್ರದರ್ಶಿಸಬಹುದು. ಆ ಮೂಲಕ ಏಷ್ಯಾದ ಬಲಾಢ್ಯ ರಾಷ್ಟ್ರ ತಾನೇ ಎಂಬ ಸಂದೇಶ ನೀಡಿದಂತಾಗುತ್ತದೆ ಎಂದು ಕನಸು ಕಾಣುತ್ತಿದ್ದ ಚೀನಾಕ್ಕೆ ಸರಿಯಾದ ಕಪಾಳಮೋಕ್ಷವಾಗಿದೆ. ಬಿಕ್ಕಟ್ಟಿನ ಸನ್ನಿವೇಶವನ್ನು ಭಾರತ ಸಮರ್ಥವಾಗಿ ನಿಭಾಯಿಸಿದ್ದು ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.

    ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ ಯಾವ ಬಗೆಯ ಸಂಕಟ ಬಂದಾಗಲೂ ತಕ್ಷಣ ಪ್ರತಿಸ್ಪಂದಿಸಿ ಹಣ ಹಾಕುತ್ತಿದ್ದುದು ಇದರ ಅಕೌಂಟಿಗೇ. ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು, ಕೆಲವರು ಕಷ್ಟಪಟ್ಟು ದುಡಿದ ತಿಂಗಳ ಸಂಬಳವನ್ನು ಇದಕ್ಕೆ ಕೊಟ್ಟು ಸತ್ಪಾತ್ರರಿಗೆ ತಲುಪುತ್ತದೆ ಎಂದು ನಂಬುತ್ತಿದ್ದರು. ಆದರೆ ಇತ್ತೀಚೆಗೆ ರಾಜೀವ್ ಗಾಂಧಿ ಫೌಂಡೇಶನ್​ಗೂ ಇದರಿಂದ ಹಣ ಸಂದಾಯವಾಗಿದೆ ಎಂದು ತಿಳಿದು ಬಂದಾಗ ಇಡಿಯ ದೇಶ ಆಘಾತಗೊಂಡಿತು. ಈಗಿನ ದಾಖಲೆಗಳ ಪ್ರಕಾರ ಕನಿಷ್ಠಪಕ್ಷ ಎರಡುಬಾರಿಯಾದರೂ ಪರಿಹಾರ ನಿಧಿಯಿಂದ ಫೌಂಡೇಶನ್​ಗೆ ಹಣ ವರ್ಗಾಯಿಸಲಾಗಿದೆ. ಬಹುಶಃ ಇದರ ಅರಿವಿದ್ದುದರಿಂದಲೇ ಪ್ರಧಾನಿ ಮೋದಿ ಕರೊನಾ ಪರಿಹಾರಕ್ಕೆ ಈ ನಿಧಿಯನ್ನು ಬದಿಗೆ ಸರಿಸಿ ಪಿಎಮ್ ಕೇರ್ಸ್ ಆರಂಭಿಸಿದ್ದು.

    ವಿಭಜನೆಯ ಹೊತ್ತಲ್ಲಿ ಪಾಕಿಸ್ತಾನದಿಂದ ಭಾರತದೆಡೆಗೆ ಬಂದವರ ಪುನರ್​ವಸತಿಗಾಗಿ ಜನಸಾಮಾನ್ಯರಿಂದ ಸಂಗ್ರಹಿಸಿದ ಹಣವನ್ನು ಬಳಸುವ ಯೋಚನೆಯಿಂದ 1948ರಲ್ಲಿ ಪರಿಹಾರ ನಿಧಿ ಶುರುವಾಯ್ತು. ಆಗಿನ್ನೂ ಸಂವಿಧಾನವೂ ರಚನೆಯಾಗಿರಲಿಲ್ಲ. ಕಾಂಗ್ರೆಸ್ಸಿನ ಅಧ್ಯಕ್ಷರು ಈ ನಿಧಿಯ ಸದಸ್ಯರಾಗಿದ್ದರು. ಅಂದರೆ ಕಾಂಗ್ರೆಸ್ಸು ಯಾರಿಗೆ ಧನಸಹಾಯ ಮಾಡಬೇಕೆನ್ನುತ್ತದೆಯೋ ಈ ನಿಧಿಯ ಮೂಲಕ ಅವರಿಗೆ ಹಣ ಸಂದಾಯವಾಗುತ್ತಿತ್ತು. 1985ರಲ್ಲಿ ರಾಜೀವ್ ಗಾಂಧಿ ಇದರ ಸಂಪೂರ್ಣ ಹೊಣೆಗಾರಿಕೆಯನ್ನು ಪ್ರಧಾನಿಯ ಹೆಗಲಿಗೇರಿಸಿ ಅವರು ತಮ್ಮಿಚ್ಛೆಗೆ ತಕ್ಕಂತೆ ಬಳಸಬಹುದೆಂಬ ನಿಯಮ ತಂದರು. ಅಂದಿನಿಂದ ಪ್ರಧಾನಮಂತ್ರಿ ಯಾರಿಗೆ ಹೇಳುತ್ತಾರೋ ಅವರಿಗೆ ಪ್ರಶ್ನೆಯನ್ನೇ ಕೇಳದೆ ಹಣ ವರ್ಗಾಯಿಸುವ ರೂಢಿ ಆರಂಭವಾಯ್ತು. ಏಕೆಂದರೆ ಪರಿಹಾರನಿಧಿಯನ್ನು ಸಿಎಜಿ ಕೂಡ ಲೆಕ್ಕ ಪರಿಶೋಧನೆ ಮಾಡುವಂತಿಲ್ಲ. ಇದಕ್ಕೆ ಪ್ರತಿಯಾಗಿ ಕರೊನಾ ಎದುರಿಸಲು ಮೋದಿ ರೂಪಿಸಿದ ‘ಪಿಎಮ್ ಕೇರ್ಸ್’ ರಕ್ಷಣಾ ಸಚಿವರು, ಗೃಹ ಸಚಿವರು, ಹಣಕಾಸು ಸಚಿವರನ್ನು ಸದಸ್ಯರನ್ನಾಗಿ ಹೊಂದಿರುವುದಲ್ಲದೆ ಸಮಾಜದ ವಿಭಿನ್ನ ಕ್ಷೇತ್ರಗಳ ಪ್ರಮುಖರನ್ನೂ ಸದಸ್ಯರಾಗಿ ನಾಮಕರಣ ಮಾಡುವ ಅವಕಾಶವನ್ನು ಕಲ್ಪಿಸಿದೆ. ಇವರೆಲ್ಲರೂ ಸೇರಿ ಅನುಕಂಪದ ಆಧಾರದ ಮೇಲೆ ಈ ನಿಧಿಯನ್ನು ಯಾವುದಕ್ಕೆ ಬಳಸಬೇಕೆಂದು ನಿರ್ಧರಿಸುವಂತೆ ನಿಯಮವನ್ನು ರೂಪಿಸಲಾಗಿದೆ. ಅಂದರೆ ಬಡವರ ಬೆವರಿನ ಹಣದ ಅಧಿಕಾರ ಒಬ್ಬನ ಕೈಲಿರದೇ ಸಮರ್ಥ ತಂಡವೊಂದರ ಜವಾಬ್ದಾರಿಯಾಯ್ತು. ಪರಿವಾರದ ಜೀತ ಮಾಡುತ್ತಲೇ ಕಾಲಕಳೆದ ಅನೇಕರಿಗೆ ಈ ಸೂಕ್ಷ್ಮ ಸಂಗತಿಗಳು ಅರಿವಾಗದೇ ಬೊಬ್ಬಿಟ್ಟರು, ಕೂಗಾಡಿದರು, ಬಂದ ಹಣದ ಲೆಕ್ಕ ಕೊಡಿ ಎಂದೂ ಅರಚಿದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮೋದಿ ಎಂದಿನಂತೆ ಬಂದ ಸಾವಿರಾರು ಕೋಟಿ ರೂಪಾಯಿ ಹಣವನ್ನು ಸೂಕ್ತವಾದ ರೀತಿಯಲ್ಲಿ ವಿಲೇವಾರಿ ಮಾಡುತ್ತ ಅದಕ್ಕೆ ಸಂಬಂಧಪಟ್ಟ ಲೆಕ್ಕಾಚಾರವನ್ನು ಜನರ ಮುಂದಿಡುತ್ತ ನಡೆದರು. ರಾಜೀವ್ ಗಾಂಧಿ ಫೌಂಡೇಶನ್​ಗೆ ಮನಮೋಹನ್ ಸಿಂಗರು ಕನಿಷ್ಠಪಕ್ಷ ಎರಡು ಬಾರಿಯಾದರೂ ಪರಿಹಾರ ನಿಧಿಯ ಹಣವನ್ನು ದೇಣಿಗೆಯ ರೂಪದಲ್ಲಿ ಕೊಟ್ಟಿದ್ದಾರೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಾಗ ಕಾಂಗ್ರೆಸ್ಸಿನ ಸಂಕಟವೇನೆಂದು ಎಲ್ಲರಿಗೂ ಅರಿವಾಯ್ತು. ಪರಿಹಾರ ನಿಧಿ ಇಲ್ಲವಾಗಿ ಮೋದಿಯವರ ‘ಪಿಎಮ್ ಕೇರ್ಸ್’ ವ್ಯಾಪಕಗೊಳ್ಳಲಾರಂಭಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಈ ನಿಧಿಯಿಂದ ಒಂದು ಪೈಸೆ ಹುಟ್ಟಲಾರದು ಎಂಬುದು ಗೊತ್ತಾಗಿದೆ.

    ಇಷ್ಟಕ್ಕೂ ರಾಜೀವ್ ಗಾಂಧಿ ಫೌಂಡೇಶನ್ 1991ರಲ್ಲಿ ರಾಜೀವ್​ರ ಕನಸುಗಳನ್ನು ಸಾಕಾರಗೊಳಿಸಲು ಸೋನಿಯಾ ಕಟ್ಟಿದ ಸಂಸ್ಥೆ. ಈ ಸಂಸ್ಥೆಯ ಅಧ್ಯಕ್ಷೆ ಸೋನಿಯಾರೇ. ಸದಸ್ಯರಾಗಿರುವವರಲ್ಲಿ ಪ್ರಮುಖರೆಂದರೆ ರಾಹುಲ್, ಪ್ರಿಯಾಂಕ, ಮನಮೋಹನ್ ಸಿಂಗ್, ಚಿದಂಬರಂ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ. ಒಂದೇ ಕುಟುಂಬಕ್ಕೆ ಸೇರಿದ ಮೂರು ಜನ ಮತ್ತು ಹೆಚ್ಚು-ಕಡಿಮೆ ಒಂದೇ ಪಕ್ಷಕ್ಕೆ ಸೇರಿದ ಎಲ್ಲ ಸದಸ್ಯರ ಈ ತಂಡಕ್ಕೆ ಜನರ ಬೆವರಿನ ಹಣ, ಲೆಕ್ಕಾಚಾರವೇ ಇಲ್ಲದೇ ಕೊಟ್ಟಿದ್ದಾದರೂ ಹೇಗೆ? ಜೊತೆಗೆ ಈ ಫೌಂಡೇಶನ್ನು ಚೀನಾದೊಂದಿಗೆ ನೇರ ಸಂಬಂಧವನ್ನು ಹೊಂದಿದ್ದು ಮೂರು ವರ್ಷಗಳಲ್ಲಿ ಚೀನಾದ ಸರ್ಕಾರದಿಂದ 90 ಲಕ್ಷ ರೂಪಾಯಿಯನ್ನು ಮತ್ತು ರಾಯಭಾರಿಯಿಂದ 10 ಲಕ್ಷ ರೂಪಾಯಿಯನ್ನು ಪಡೆದು ಅನೇಕ ಅಧ್ಯಯನಗಳನ್ನು ಮಾಡಿದೆ. ಚೀನಾದೊಂದಿಗೆ ಸೇರಿ ಭಾರತದಲ್ಲಿ ವ್ಯಾಪಾರ-ವಹಿವಾಟು ನಡೆಸುವುದರ ಕುರಿತಂತೆ ದೆಹಲಿಯಲ್ಲೂ ಬೀಜಿಂಗ್​ನಲ್ಲೂ ಸೆಮಿನಾರ್​ಗಳನ್ನು ಏರ್ಪಡಿಸಿದೆ. ಮುಕ್ತ ವ್ಯಾಪಾರಕ್ಕಾಗಿ ಚೀನಾ ಮತ್ತು ಭಾರತದ ಸ್ಥಿತಿಗತಿಗಳನ್ನು ತಜ್ಞರ ಮೂಲಕ ಅಧ್ಯಯನ ಮಾಡಿಸಿದೆ. ಒಟ್ಟಾರೆ ಎಲ್ಲ ಅಧ್ಯಯನಗಳ ಸಾರಾಂಶ ರೂಪವೇನೆಂದರೆ ‘ಚೀನಾ ಭಾರತಕ್ಕಿಂತಲೂ ಬಲಾಢ್ಯ ಮತ್ತು ಸಿರಿವಂತ ದೇಶವಾಗಿದ್ದು ಜಾಗತಿಕವಾಗಿ ಸಾಕಷ್ಟು ಬೆಳೆದಿದೆ. ಭಾರತದೊಂದಿಗೆ ವ್ಯಾಪಾರ ಮಾಡುವುದರಿಂದ ಚೀನಾಕ್ಕೆ ಹೆಚ್ಚು ಲಾಭವಾಗಲಿದ್ದು ಭಾರತವೂ ಸೂಕ್ತವಾಗಿ ಪ್ರತಿಸ್ಪಂದಿಸಬೇಕಿದೆ’ ಎಂಬುದೇ ಆಗಿದೆ. ಸ್ವತಃ ಕಾಂಗ್ರೆಸ್ ಪಕ್ಷ ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು. ಈ ಒಪ್ಪಂದವಾದದ್ದಾದರೂ ಯಾವಾಗ? ಯುಪಿಎಯ ಮೊದಲ ಅವಧಿಯಲ್ಲಿ ಎಡಪಕ್ಷಗಳು ಕಾಂಗ್ರೆಸ್ಸಿನೊಂದಿಗೆ ಅಸಮಾಧಾನ ಹೊಂದಿದ್ದಾಗ ರಾಹುಲ್ ಜಿನ್​ಪಿಂಗ್​ರೊಂದಿಗೆ ಸೇರಿ ಸಹಿ ಹಾಕಿದ ಸಂದರ್ಭ ಅದು. ತನ್ನದ್ದೇ ಪಕ್ಷಗಳ ಮೂಲಕ ಸರ್ಕಾರವನ್ನು ಉರುಳಿಸುವ ಬೆದರಿಕೆ ಹಾಕಿ, ಆಳುವ ಪಕ್ಷವನ್ನೇ ತನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ದೀನಸ್ಥಿತಿಗೆ ತಂದು ನಿಲ್ಲಿಸುವ ತಾಕತ್ತು ಚೀನಾಕ್ಕೆ ಅಂದೇ ಇತ್ತು. ಮುಂದೆಯೂ ಚೀನಾದೊಂದಿಗೆ ಸೋನಿಯಾ ಹೇಗೆ ಸಹಜವಾಗಿ ಬೆರೆತರೆಂದರೆ ಅಲ್ಲಿ ಒಲಿಂಪಿಕ್ಸ್ ನಡೆದಾಗ ವಿಶೇಷ ಆಹ್ವಾನಿತರಾಗಿ ಮಗ, ಮಗಳು, ಅಳಿಯನೊಂದಿಗೆ ಹೋಗಿದ್ದರು. ಅಧಿಕೃತವಾಗಿ ಭಾರತದಿಂದ ಪ್ರಮುಖರ್ಯಾರೂ ಅಲ್ಲಿ ಕಂಡುಬರಲಿಲ್ಲ. ರಾಹುಲ್ ಬಯಸಿದಾಗಲೆಲ್ಲ ಚೀನೀ ರಾಯಭಾರಿಯ ಬಳಿ ಹೋಗಿ ಮಾತನಾಡಿಕೊಂಡು ಬರುತ್ತಿದ್ದರಲ್ಲಾ, ಹಾಗೆಯೇ ಕೈಲಾಸಕ್ಕೆಂದು ಹೋದವರು ದಾರಿಯಲ್ಲಿಯೇ ಚೀನೀ ಸೈನಿಕರ ಮುಖ್ಯಸ್ಥರೊಂದಿಗೆ ಆಪ್ತ ಮಾತುಕತೆ ನಡೆಸಿ ಬಂದಿದ್ದರಲ್ಲ ಅಲ್ಲೆಲ್ಲ ಇದ್ದದ್ದು ಈ ಸಲುಗೆಯೇ. ಭಾರತದ ಗಡಿಯನ್ನು ನುಂಗಲು ಸಿದ್ಧವಾಗಿರುವ ಶತ್ರುರಾಷ್ಟ್ರದೊಂದಿಗೆ ಅಧಿಕೃತವಲ್ಲದ ಈ ಪರಿಯ ಸ್ನೇಹ ಖಂಡಿತವಾಗಿಯೂ ಒಳ್ಳೆಯದಲ್ಲ. ಕಾಂಗ್ರೆಸ್ಸಿನ ಈಗಿನ ಸ್ಥಿತಿ ಹೇಗಿದೆ ಎಂದರೆ ಮೋದಿಯವರನ್ನು ಅಧಿಕಾರದಿಂದ ಇಳಿಸಲು ಪಾಕಿಸ್ತಾನ ಸಹಕಾರ ಮಾಡಿದರೆ ಇಮ್ರಾನ್ ಖಾನ್​ನೊಂದಿಗೂ ಒಪ್ಪಂದ ಮಾಡಿಕೊಳ್ಳಬಲ್ಲಂಥದ್ದು. ಈಗ ಹಾಗೆ ಸುಮ್ಮನೆ ಹರಡಿ ಬಿದ್ದಿರುವ ಚುಕ್ಕೆಗಳನ್ನು ಸೇರಿಸುತ್ತ ಹೋಗಿ. ಗಾಲ್ವಾನ್ ಕಣಿವೆಗೆ ಚೀನಾ ಬಂತಲ್ಲ ಅದು ಹೊಸತೇನೂ ಆಗಿರಲಿಲ್ಲ. ಹಾಗೆ ನೋಡಿದರೆ ಭಾರತ ಮತ್ತು ಚೀನಿಯರ ನಡುವಿರುವ ಗಡಿ ಇದಮಿತ್ಥಂ ಎಂದು ಹೇಳುವಂತೆ ಇಲ್ಲ. ಎಲ್​ಎಸಿ ಎಂದು ಕರೆಯಲ್ಪಡುವ ಈ ಗಡಿಯ ಅನೇಕ ಜಾಗಗಳಲ್ಲಿ ಗೊಂದಲಗಳು ಹೇಗಿವೆ ಎಂದರೆ ಎರಡೂ ರಾಷ್ಟ್ರಗಳು ಅವುಗಳನ್ನು ತಮ್ಮವೆಂದೇ ಭಾವಿಸುತ್ತವೆ. ಇದನ್ನು ಆಯಾ ರಾಷ್ಟ್ರಗಳ ‘ಗ್ರಹಿಕೆಯ ಬಿಂದುಗಳು’ ಎಂದು ಭಾವಿಸಬಹುದು. ಕಳೆದ ಮೂರು ದಶಕಗಳಿಂದಲೂ ಈ ಬಿಂದುಗಳನ್ನು ಸೂಕ್ತವಾಗಿ ರ್ಚಚಿಸಿ ಖಾತ್ರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. 1993, 1996 ಮತ್ತು 2005ರಲ್ಲಿ ಈ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದರೂ ಉಪಯೋಗವಾಗಲಿಲ್ಲ. ಏಕೆಂದರೆ ಈ ಗೊಂದಲವಿದ್ದಷ್ಟೂ ಒಳನುಗ್ಗುವುದಕ್ಕೆ ಅನುಕೂಲವೆಂಬುದು ಚೀನಾಕ್ಕೆ ಗೊತ್ತಿದೆ. ಅನೇಕ ಬಾರಿ ಈ ಗ್ರಹಿಕೆಯ ಬಿಂದುಗಳಲ್ಲಿ ಒಳಬರುವುದು ಕಿತ್ತಾಡುವುದೂ ನಡೆಯುತ್ತದೆ. ಇಲ್ಲಿ ಯಾವುದಾದರೂ ರಾಷ್ಟ್ರದವರು ಒಳಬಂದರೆ ಅದನ್ನು ಅತಿಕ್ರಮಣ ಎನ್ನಲಾಗುತ್ತದೆ. ಎರಡೂ ಪಡೆಗಳು ಎದುರುಬದುರಾಗಿ ನಿಂತರೆ ಫೇಸ್ ಆಫ್ ಎನ್ನಲಾಗುತ್ತದೆ. ಎಂದಿನಂತೆ ಈ ಬಾರಿಯೂ ಈ ಗ್ರಹಿಕೆಯ ಬಿಂದುವಿನಲ್ಲಿ ಚೀನಾ ಒಂದಷ್ಟು ಸೈನಿಕರನ್ನು ಸೇರಿಸಿ ತಳವೂರಿತ್ತು. ಹೆಚ್ಚು ಕಡಿಮೆ ಈ ಹೊತ್ತಿನಲ್ಲೇ ಮೋದಿ ಆತ್ಮನಿರ್ಭರತೆಯ ಮಾತನಾಡುತ್ತ ಚೀನಾದಲ್ಲಿ ಬೀಡುಬಿಟ್ಟಿರುವ ವಿದೇಶಿ ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಯುದ್ಧ ಮಾಡದೇ ಭಾರತವನ್ನು ತನ್ನೆದುರು ಬಲಹೀನ ರಾಷ್ಟ್ರ ಎಂದು ಸಾಬೀತುಪಡಿಸುವ ಧಾವಂತ ಚೀನಾಕ್ಕಿತ್ತು. ತನ್ನ ಪಡೆಯನ್ನು ಅಲ್ಲಿಗೆ ತಂದು ಜಮಾವಣೆಗೊಳಿಸಿದ ಸುದ್ದಿ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಂಡ ಚೀನಾ ಈ ಕುರಿತಂತೆ ಗಲಾಟೆ ಮಾಡಲು ರಾಹುಲ್​ರನ್ನು ಪ್ರಚೋದಿಸಿತು. ಎಷ್ಟಾದರೂ ತಮ್ಮ ಸಂಸ್ಥೆಗೆ ಈ ಹಿಂದೆ ಸಹಕಾರ ಮಾಡಿದ ರಾಷ್ಟ್ರವಲ್ಲವೇ, ಇಲ್ಲವೆನ್ನುವುದು ಹೇಗೆ? ‘ಮೋದಿ ನಿಶ್ಶಕ್ತರು, ಚೀನಾ ಎದುರಿಸುವ ಸಾಮರ್ಥ್ಯ ಇಲ್ಲದವರು, ಹೇಡಿ’ ಎಂದೆಲ್ಲ ಬಿಂಬಿಸಿದ ಕಾಂಗ್ರೆಸ್ಸು ‘ತಾಕತ್ತಿದ್ದರೆ ಚೀನಿಯರನ್ನು ಹೊರದಬ್ಬಿ’ ಎಂದು ಗಲಾಟೆಗೆ ಸಿದ್ಧವಾಯ್ತು. ಇಂಥದ್ದನ್ನೆಲ್ಲ ಸಮರ್ಥವಾಗಿ ಎದುರಿಸುವ ಚಾಕಚಕ್ಯತೆ ಇದ್ದ ಮೋದಿ ಸೈನ್ಯಕ್ಕೆ ಪೂರ್ಣ ಅಧಿಕಾರ ಕೊಟ್ಟರು. ಆಗಲೇ ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರು ವೀರಗತಿ ಪಡೆಯುವ ಮುನ್ನ ಚೀನಾಕ್ಕೆ ಮುಟ್ಟಿಕೊಂಡು ನೋಡಬೇಕಾದ ಹೊಡೆತವನ್ನೇ ಕೊಟ್ಟರು. ಭಾರತ ತನ್ನೊಂದಿಗೆ ಮಾತುಕತೆಗೆ ಬರುತ್ತದೆ. ಆಗ ತನ್ನ ಸಾರ್ವಭೌಮತೆಯನ್ನು ಪ್ರದರ್ಶಿಸಬಹುದು. ಆ ಮೂಲಕ ಏಷ್ಯಾದ ಬಲಾಢ್ಯ ರಾಷ್ಟ್ರ ತಾನೇ ಎಂಬ ಸಂದೇಶ ನೀಡಿದಂತಾಗುತ್ತದೆ ಎಂದು ಕನಸು ಕಾಣುತ್ತಿದ್ದ ಚೀನಾಕ್ಕೆ ಸರಿಯಾದ ಕಪಾಳಮೋಕ್ಷವಾಗಿತ್ತು. ಮೋದಿ ತಡಮಾಡಲಿಲ್ಲ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಂದು ಗಡಿಯ ಗುಂಟ ನಿಲ್ಲಿಸಿಕೊಂಡರು. ರಸ್ತೆಗಳನ್ನು ವೇಗವಾಗಿ ನಿರ್ಮಾಣ ಮಾಡಿಸಿದರು. ಆಯಕಟ್ಟಿನಲ್ಲಿ ನಿರ್ವಿುಸಬೇಕಿದ್ದ ಸೇತುವೆಯನ್ನು ಐದೇ ದಿನದಲ್ಲಿ ಮುಗಿಸಿತು ಸೇನೆ. ರಕ್ಷಣಾ ಸಚಿವರು ರಷ್ಯಾಕ್ಕೆ ಹೋಗಿ ತಮಗೆ ಬರಬೇಕಿದ್ದ ಎಸ್-400 ಮಿಸೈಲ್ ಸಿಸ್ಟಮ್ಳನ್ನು ಆದಷ್ಟು ಬೇಗ ತಲುಪಿಸುವಂತೆ ವಿನಂತಿ ಮಾಡಿದ್ದಲ್ಲದೆ ಭರವಸೆಯನ್ನೂ ಪಡೆದುಕೊಂಡು ಬಂದುಬಿಟ್ಟರು. ಭಾರತವನ್ನು ಬೆದರಿಸಿ ಸಾರ್ವಭೌಮವಾಗ ಹೊರಟಿದ್ದ ಚೀನಾ ತಾನೇ ತೊಡಿದ ಹಳ್ಳದಲ್ಲಿ ಬಿತ್ತು. ಗಾಬರಿಗೆ ಒಳಗಾಗಿ ನೇಪಾಳವನ್ನು ಎತ್ತಿಕಟ್ಟಿತು. ನೇಪಾಳದಲ್ಲಿ ಚೀನಾಕ್ಕಿಂತಲೂ ಪ್ರಭಾವಿಯಾದ ನೆಟ್​ವರ್ಕ್ ಹೊಂದಿರುವ ಭಾರತಕ್ಕೆ ಅಲ್ಲಿನ ಪತ್ರಿಕೆಗಳು ನೇಪಾಳದ ಮೇಲೆ ಚೀನಾ ಮಾಡುತ್ತಿರುವ ದೌರ್ಜನ್ಯವನ್ನು ಪ್ರಕಟಿಸುವಂತೆ ನೋಡಿಕೊಳ್ಳಲು ಬಹಳ ಸಮಯ ಹಿಡಿಯಲಿಲ್ಲ. ನಮ್ಮ ವಿರುದ್ಧ ದನಿ ಎತ್ತಿದುದರ ಪರಿಣಾಮ ನೇಪಾಳದ ಪ್ರಧಾನಮಂತ್ರಿ ಓಲಿ ರಾಜೀನಾಮೆ ಕೊಟ್ಟರೂ ಕೊಡಬಹುದೆಂದು ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಚೀನಾಕ್ಕಿದ್ದದ್ದು ಪಾಕಿಸ್ತಾನವೊಂದೇ ಅಸ್ತ್ರ. ವಾಯವ್ಯ ಭಾಗದಲ್ಲಿ ತನ್ನದ್ದೇ ವಿಮಾನಗಳನ್ನು, ಡ್ರೋಣ್​ಗಳನ್ನು ಕಳಿಸಿ ಭಾರತ ಮಂಕಾಗುವಂತೆ ಮಾಡಬೇಕೆಂದು ಅದು ಆಲೋಚಿಸಿತು. ಆದರೆ ಚೀನಾ ಮರೆತಿದ್ದ ಒಂದೇ ಸಂಗತಿ ಎಂದರೆ ಭಾರತೀಯ ಸೇನೆ ಈಗ ಅಪಾರವಾದ ಅಂತಃಶಕ್ತಿಯಿಂದ ಬೆಳಗುತ್ತಿದೆ. ಏಕಕಾಲಕ್ಕೆ ಪಾಕಿಸ್ತಾನ ಮತ್ತು ಚೀನಾವನ್ನೆದುರಿಸುವ ಸಾಮರ್ಥ್ಯ ತನಗಿದೆ ಎಂದು ಅದು ಸಾಬೀತುಪಡಿಸಿದೆ. ಇತ್ತ ಚೀನಾದೊಂದಿಗೆ ಹೆಚ್ಚು-ಕಡಿಮೆ ಕದನಕ್ಕೆ ಸಜ್ಜಾಗುತ್ತಿರುವಾಗಲೇ ಅತ್ತ ಕಾಶ್ಮೀರದ ತ್ರಾಲ್ ಭಾಗದಲ್ಲಿ ಭಯೋತ್ಪಾದಕರನ್ನೆಲ್ಲ ಧ್ವಂಸಗೊಳಿಸಿ ಮೊದಲ ಬಾರಿಗೆ ಹಿಜ್ಬುಲ್ ಮುಜಾಹಿದ್ದೀನ್​ಗೆ ಸೇರಿದ ಒಬ್ಬನೇ ಭಯೋತ್ಪಾದಕನಿಲ್ಲದಂತೆ ಮಾಡಿಬಿಟ್ಟಿದೆ.

    ಮೋದಿ ಇಷ್ಟಕ್ಕೇ ನಿಲ್ಲಲಿಲ್ಲ. ಈ ಅವಕಾಶವನ್ನೇ ಬಳಸಿಕೊಂಡು ರಷ್ಯಾ, ಆಸ್ಟ್ರೇಲಿಯಾ, ಅಮೆರಿಕ, ಯುರೋಪ್, ಇಸ್ರೇಲ್​ಗಳೊಂದಿಗೆ ಬಾಂಧವ್ಯ ಗಟ್ಟಿಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಹಾಂಗ್​ಕಾಂಗ್​ನಲ್ಲಿ ಪ್ರತಿಭಟನೆ ತೀವ್ರವಾಗುವಂತೆ ಮಾಡಿ ತೈವಾನ್​ಗೆ

    ಜಾಗತಿಕ ಬೆಂಬಲ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಜಪಾನ್ ಚೀನಾದ ವಿರುದ್ಧ ಮಾತನಾಡಲಾರಂಭಿಸಿದೆ. ಇಷ್ಟೂ ಸಾಲದೆಂಬಂತೆ ಕರೊನಾದ ಮೂಲದ ಕುರಿತಂತೆ ತನಿಖೆ ನಡೆಯಬೇಕೆಂಬುದಕ್ಕೆ ಜಾಗತಿಕ ಮಟ್ಟದಲ್ಲಿ ಭಾರತ ದನಿಯಾಗಿ ನಿಂತಿದೆ. ಭಾರತವನ್ನು ಮುಟ್ಟಿ ಚೀನಾ ನಿಜಕ್ಕೂ ಕೈಸುಟ್ಟುಕೊಂಡಿದೆ.

    ಅಚ್ಚರಿ ಎಂದರೆ ಇಷ್ಟಾದರೂ ಭಾರತದಲ್ಲಿರುವ ಎಡಪಂಥೀಯರಿಗೆ ಇನ್ನೂ ಚೀನೀ ಸೈನಿಕರ ಮೇಲೆ ವಿಶ್ವಾಸವಿದೆ. ಒಪ್ಪಿಕೊಳ್ಳಬೇಕಾದ್ದೇ. ‘ಚೀನಾದ ಅಧ್ಯಕ್ಷ ನಮ್ಮ ಅಧ್ಯಕ್ಷ’ ಎಂದು ಬೊಬ್ಬೆ ಹಾಕುತ್ತಿದ್ದ ಕಮ್ಯುನಿಸ್ಟರಿಗೆ ಚೀನಾ ಧ್ವಂಸಗೊಂಡರೆ ತವರು ಮನೆಯೇ ಇಲ್ಲದಂತಾಗುತ್ತದೆ. ಆದರೆ ಕಾಂಗ್ರೆಸ್ಸಿಗರೇಕೆ ಚೀನಾ ಪರವಾಗಿ ಇಷ್ಟು ವಾದ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಬಹುಶಃ ಉಪ್ಪಿನ ಋಣ ತೀರಿಸಬೇಕಾದ ಅನಿವಾರ್ಯತೆ ಅವರಿಗಿರಬಹುದು. ಸೋನಿಯಾ ಅಧ್ಯಕ್ಷತೆಯ ಫೌಂಡೇಶನ್​ಗೆ

    ಒಂದು ಕೋಟಿ ಕೊಟ್ಟಿದೆಯಲ್ಲ ಚೀನಾ ಅದಕ್ಕಾಗಿ ಕೃತಜ್ಞತೆಯನ್ನು ಹೀಗೇ ತೋರಿಸಬೇಕಲ್ಲವೇ? ಪರಿವಾರವೊಂದಕ್ಕೆ ಜೀತ ಮಾಡುತ್ತೇವೆಂದು ನಿಶ್ಚಯಿಸಿಬಿಟ್ಟರೆ ದೇಶವೂ ಗೌಣವಾಗಿಬಿಡೋದು ಹೀಗೆಯೇ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts