

ಬ್ರಿಟನ್ನಲ್ಲಿ ಅತ್ಯುನ್ನತ ರಾಜಕೀಯ ಸ್ಥಾನವನ್ನು ಭಾರತೀಯ ಮೂಲದ ಹಿಂದು ಸಮುದಾಯದ ರಿಷಿ ಸುನಕ್ ಅಲಂಕರಿಸಿದ್ದಾರೆ. ಇದೇ ರೀತಿ ಈ ದೇಶದ ಹಿಂದು ಸಮುದಾಯದ ಜನರು ಶಿಕ್ಷಣ, ವೃತ್ತಿ, ಉದ್ಯೋಗ, ಶ್ರೀಮಂತಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಕ್ರಿಶ್ಚಿಯನ್ನರಿಗಿಂತ ಉತ್ತಮ ಅರ್ಹತೆ ಹೊಂದಿದ್ದಾರೆ ಮತ್ತು ಹೆಚ್ಚು ಹಣ ಸಂಪಾದಿಸುತ್ತಾರೆ. ಹಿಂದೆ ನಮ್ಮನ್ನಾಳಿದವರ ನಾಡಿಗೆ ವಲಸೆ ಹೋಗಿ ಆಡಳಿತ ನಡೆಸುತ್ತಿದ್ದಾರೆ.
ಬ್ರಿಟನ್ನಲ್ಲಿ ಹಿಂದು ಸಮುದಾಯದ ಜನರನ್ನು ಬುದ್ಧಿವಂತರು, ಶ್ರೀಮಂತರು ಮತ್ತು ಉತ್ತಮ ನಡವಳಿಕೆ ಉಳ್ಳವರು ಎಂದೇ ಪರಿಗಣಿಸಲಾಗಿದೆ. 2021ರಲ್ಲಿ ದೇಶದ ಜೈಲುಗಳಲ್ಲಿ ಕೇವಲ 0.4 ಪ್ರತಿಶತದಷ್ಟು ಹಿಂದುಗಳು (ಅಂದರೆ ಸಾವಿರಕ್ಕೆ 4 ಮಂದಿ) ಕಂಡುಬಂದಿದ್ದಾರೆ. ಇದು ಬೇರೆ ಯಾವುದೇ ಧಾರ್ವಿುಕ ಸಮುದಾಯದ ಜನರಿಗೆ ಹೋಲಿಸಿದರೆ ತೀರ ಕಡಿಮೆ ಪ್ರಮಾಣ.
ರಿಷಿ ಸುನಕ್ ಅವರು ಬ್ರಿಟನ್ನ ಮೊದಲ ಹಿಂದು ಪ್ರಧಾನಮಂತ್ರಿಯಾದ ನಂತರ ಮಾಧ್ಯಮವೊಂದು ಬ್ರಿಟಿಷ್ ಹಿಂದುಗಳ ಸ್ಥಿತಿಗತಿ ಕುರಿತ ಸಂಗತಿಗಳಿರುವ ವರದಿಯೊಂದನ್ನು ಪ್ರಕಟಿಸಿರುವುದು ಗಮನಸೆಳೆಯುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಅಂದಾಜು 9,83,000 ಹಿಂದುಗಳು ನೆಲೆಗೊಂಡಿದ್ದಾರೆ. ಹಿಂದುಗಳು ಕಳೆದ 500 ವರ್ಷಗಳಿಂದ ಭಾರತದಿಂದ ಬ್ರಿಟನ್ಗೆ ಬರುತ್ತಿದ್ದಾರೆ ಎಂಬುದನ್ನು ಇತಿಹಾಸ ತೋರಿಸುತ್ತದೆ.
‘ಇದು ವಲಸೆಯ ಯಶಸ್ಸಿನ ಕಥೆ. ಹಿಂದುಗಳು ಕ್ರಿಶ್ಚಿಯನ್ನರಿಗಿಂತ ಉತ್ತಮ ಅರ್ಹತೆ ಹೊಂದಿದ್ದಾರೆ ಮತ್ತು ಹೆಚ್ಚು ಗಳಿಸುತ್ತಾರೆ. ಬ್ರಿಟನ್ನಲ್ಲಿ ಕೇವಲ 329 ಹಿಂದುಗಳು ಜೈಲುಗಳಲ್ಲಿದ್ದಾರೆ’ ಎಂದು ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ವಲಸೆಯ ಅಲೆ: ಭಾರತದ ಸ್ವಾತಂತ್ರ್ಯ ಮತ್ತು ರಕ್ತಸಿಕ್ತ ವಿಭಜನೆಯ ನಂತರ 1947ರಲ್ಲಿ ಹಿಂದು ವಲಸೆಯ ಮೊದಲ ದೊಡ್ಡ ಅಲೆ ಬ್ರಿಟನ್ಗೆ ಬಂದಿತು. ಎರಡನೇ ಮಹಾಯುದ್ಧದ ನಂತರ ಕಾರ್ವಿುಕರ ಕೊರತೆಯನ್ನು ನೀಗಿಸಲು ಈ ವಲಸೆಯನ್ನು ಪೋ›ತ್ಸಾಹಿಸಲಾಗಿತ್ತು. ವಲಸೆವಿರೋಧಿ ನೀತಿ ಪ್ರತಿಪಾದಿಸುತ್ತಿದ್ದ ಎನೋಕ್ ಪೊವೆಲ್ ಕೂಡ ಆರೋಗ್ಯ ಸಚಿವರಾಗಿದ್ದ ಸಮಯದಲ್ಲಿ ಭಾರತೀಯ ಉಪಖಂಡದಿಂದ ಆರೋಗ್ಯ ಕಾರ್ಯಕರ್ತರನ್ನು ನೇಮಿಸಿಕೊಂಡರು.
ಉಗಾಂಡಾದಲ್ಲಿ ಏಷ್ಯಾದ ಜನರನ್ನು ಇದಿ ಅಮೀನ್ ಹೊರಹಾಕಿದಾಗ ಹಿಂದುಗಳ ಎರಡನೇ ವಲಸೆ ಅಲೆಯು 1970ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್ಗೆ ಬಂದಿತು. ಆಗ 4,500 ಹಿಂದುಗಳು ಭಾರತಕ್ಕೆ ಪಲಾಯನ ಮಾಡಿದರೆ, 27,000 ಹಿಂದುಗಳು ಬ್ರಿಟನ್ನಲ್ಲಿ ಪುನರ್ವಸತಿ ಪಡೆದರು. 1990ರ ದಶಕದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ವಲಸೆ ಕಾನೂನುಗಳನ್ನು ಬ್ರಿಟನ್ ಸಡಿಲಗೊಳಿಸಿದ ನಂತರ ಮೂರನೇ ವಲಸೆ ಅಲೆ ಬಂದಿತು.
ನಗರವಾಸ: ಹೆಚ್ಚಿನ ಧಾರ್ವಿುಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರಂತೆ, ಹಿಂದುಗಳು ಸಹ ದೊಡ್ಡ ನಗರಗಳ ಸುತ್ತ ಕೇಂದ್ರೀಕೃತರಾಗಿದ್ದಾರೆ. 47 ಪ್ರತಿಶತದಷ್ಟು ಬ್ರಿಟಿಷ್ ಹಿಂದುಗಳು ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಇದು ರಾಜಧಾನಿ ಜನಸಂಖ್ಯೆಯ 5 ಪ್ರತಿಶತವಾಗುತ್ತದೆ. ಲಿಸೆಸ್ಟರ್ನಂತಹ ನಗರಗಳ ಸುತ್ತ ಕೇಂದ್ರೀಕೃತವಾಗಿರುವ ಈಸ್ಟ್ ಮಿಡ್ಲ್ಯಾಂಡ್ಸ್ ಪ್ರದೇಶವು ಒಟ್ಟಾರೆ ಬ್ರಿಟನ್ನ ಶೇಕಡಾ 10ರಷ್ಟು ಹಿಂದುಗಳಿಗೆ ನೆಲೆಯಾಗಿದೆ. ಹೀಗಿದ್ದರೂ ಕಳೆದ 50 ವರ್ಷಗಳಲ್ಲಿ ಹಿಂದುಗಳು ದೇಶದ ಬಹುತೇಕ ಮೂಲೆಗಳಲ್ಲಿ ಚೆದುರಿ ಹೋಗಿದ್ದಾರೆ ಎಂದು ವರದಿ ಹೇಳಿದೆ.
‘ದೇಶದ ವಿವಿಧೆಡೆ ಹರಡಿಹೋಗುವ ಪ್ರವೃತ್ತಿ ಕಳೆದ ಪೀಳಿಗೆಯಿಂದ ಹೆಚ್ಚಾಗಿದೆ’ ಎಂದು ಬ್ರಿಟಿಷ್ ಫ್ಯೂಚರ್ ಥಿಂಕ್ ಟ್ಯಾಂಕ್ನ ಸಂಸ್ಥಾಪಕ ಸುಂದರ್ ಕತ್ವಾಲಾ ಹೇಳುತ್ತಾರೆ. ಭಾರತೀಯ ವೈದ್ಯರು, ಪತ್ರಿಕೆ ಮಾರಾಟಗಾರರು ಮತ್ತು ಬೀದಿಬದಿ ಅಂಗಡಿ ಮಾಲೀಕರು ಹೊಸ ಪ್ರದೇಶಗಳಿಗೆ ಹೋಗುವುದು ಈ ಹರಡುವಿಕೆಗೆ ನೆರವಾಯಿತು ಎಂದೂ ಅವರು ಹೇಳುತ್ತಾರೆ.
ಉನ್ನತ ಶಿಕ್ಷಣ, ಹುದ್ದೆ
2018ರ ಅಂಕಿಅಂಶಗಳ ಪ್ರಕಾರ, 59 ಪ್ರತಿಶತದಷ್ಟು ಬ್ರಿಟಿಷ್ ಹಿಂದುಗಳು ಉನ್ನತ ಶಿಕ್ಷಣ ಪಡೆದಿದ್ದಾರೆ. ಇದು ಕ್ರಿಶ್ಚಿಯನ್ನರಿಗೆ ಹೋಲಿಸಿದರೆ ದುಪ್ಪಟ್ಟು ಪ್ರಮಾಣ. ಕೇವಲ ಶೇಕಡಾ 5.5ರಷ್ಟು ಬ್ರಿಟಿಷ್ ಹಿಂದುಗಳಿಗೆ ಯಾವುದೇ ಔಪಚಾರಿಕ ಶೈಕ್ಷಣಿಕ ಅರ್ಹತೆಗಳಿಲ್ಲ ಎಂದು ವರದಿ ಹೇಳಿದೆ. ಮೊದಲ ಹಂತದಲ್ಲಿ ವಲಸೆ ಬಂದ ಭಾರತೀಯರಿಗೆ ಬ್ರಿಟನ್ನ ಕೌಶಲರಹಿತ ಕಾರ್ವಿುಕ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ತುಂಬಲು ಬಳಸಿಕೊಂಡು ಕಡಿಮೆ ವೇತನವನ್ನು ನೀಡಲಾಯಿತು. ಕಡಿಮೆ ವೇತನ ಮತ್ತು ಕೆಲಸದ ತಾರತಮ್ಯದಿಂದ ತಪ್ಪಿಸಿಕೊಳ್ಳಲು ಅನೇಕರು ಸ್ವಂತ ವ್ಯವಹಾರಗಳನ್ನು ಆರಂಭಿಸಿದರು. ಇತ್ತೀಚಿನ ಜನಗಣತಿಯ ಪ್ರಕಾರ, ಶೇ. 15.4 ರಷ್ಟು ಬ್ರಿಟಿಷ್ ಭಾರತೀಯರು, ಇವರಲ್ಲಿ ಅರ್ಧದಷ್ಟು ಹಿಂದುಗಳು ವೃತ್ತಿಪರ ಮತ್ತು ಉನ್ನತ ವ್ಯವಸ್ಥಾಪಕ (ಮ್ಯಾನೇಜರ್) ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರಿಟನ್ನಿನ ಯಾವುದೇ ಧಾರ್ವಿುಕ ಸಮುದಾಯದಲ್ಲಿ ಅತ್ಯಧಿಕ ಪ್ರಮಾಣ ಇದಾಗಿದೆ. 2018ರಲ್ಲಿ, ಶೇ. 40ಕ್ಕಿಂತ ಹೆಚ್ಚು ಬ್ರಿಟಿಷ್ ಹಿಂದುಗಳು ಉನ್ನತ ಕೌಶಲದ ಉದ್ಯೋಗದಲ್ಲಿದ್ದಾರೆ. ಯಹೂದಿ ಸಮುದಾಯದವರು ಮಾತ್ರ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಬ್ರಿಟಿಷ್ ಸಿಖ್ಖರು ಹಿಂದುಗಳ ನಂತರ ಮೂರನೇ ಸ್ಥಾನದಲ್ಲಿದ್ದಾರೆ ಎಂದು ವರದಿ ಹೇಳಿದೆ.
ಕನ್ಸರ್ವೆಟಿವ್ ಪಕ್ಷಕ್ಕೆ ಬೆಂಬಲ
ಆರಂಭದಲ್ಲಿ ಬ್ರಿಟನ್ಗೆ ಬಂದ ಏಷ್ಯಾದ ವಲಸಿಗರು ಬಹುತೇಕವಾಗಿ ಲೇಬರ್ ಪಕ್ಷದೊಂದಿಗೆ ಗುರುತಿಸಿ ಕೊಂಡಿದ್ದರು. ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ಈ ಪಕ್ಷಕ್ಕೆ ಹಿಂದುಗಳಲ್ಲಿ ಬೆಂಬಲ ಕುಸಿದು, ಈ ಸಮುದಾಯವು ಕನ್ಸರ್ವೆಟಿವ್ (ಟೋರಿ) ಪಕ್ಷದತ್ತ ಒಲವು ಬದಲಿಸಿಕೊಂಡಿತು. ದಕ್ಷಿಣ ಏಷ್ಯಾದ ಮುಸ್ಲಿಮರು ಮತ್ತು ಸಿಖ್ಖರು ಲೇಬರ್ ಪಕ್ಷದ ಜತೆ ಈಗಲೂ ಗುರುತಿಸಿಕೊಂಡಿದ್ದಾರೆ.
ಸಮುದಾಯದ ಹೆಗ್ಗಳಿಕೆ
2021ರಲ್ಲಿ ಬ್ರಿಟನ್ನಲ್ಲಿ ಕೇವಲ 0.4 ಪ್ರತಿಶತ (ಸಾವಿರಕ್ಕೆ ನಾಲ್ಕು) ಕೈದಿಗಳನ್ನು ಹಿಂದು ಎಂದು ಗುರುತಿಸಲಾಗಿದೆ. ಇದು ಬೇರಾವುದೇ ಧಾರ್ವಿುಕ ಸಮುದಾಯಕ್ಕೆ ಹೋಲಿಸಿದರೆ ತೀರ ಕಡಿಮೆ ಪ್ರಮಾಣದ್ದಾಗಿದೆ. ಉನ್ನತ ಶಿಕ್ಷಣದ ಸಾಧನೆ, ಉತ್ತಮ ಸಾಮಾಜಿಕ- ಆರ್ಥಿಕ ಸ್ಥಿತಿ ಹೊಂದಿರುವವರು ಸಾಮಾನ್ಯವಾಗಿ ಅಪರಾಧಗಳನ್ನು ಮಾಡುವ ಸಾಧ್ಯತೆ ಕಡಿಮೆ. ಆದ್ದರಿಂದ ಕಡಿಮೆ ಅಪರಾಧ ಅಂಕಿಅಂಶಗಳು ಹಿಂದು ಸಾಮಾಜಿಕ ಚಲನಶೀಲತೆಯ ಪರಿಣಾಮವಾಗಿರಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬ್ರಿಟನ್ನ ಹಿಂದು ಫೋರಮ್ ಅಧ್ಯಕ್ಷೆ ತೃಪ್ತಿ ಪಟೇಲ್, ‘ದೃಢವಾದ ನಂಬಿಕೆಯು ಬಲವಾದ ಸಮುದಾಯದ ಸಂಬಂಧಗಳೊಂದಿಗೆ ಅಪರಾಧವನ್ನು ತಡೆಯುತ್ತದೆ’ ಎಂದು ಹೇಳುತ್ತಾರೆ. ಯಾರಾದರೂ ಏನಾದರೂ ಕೆಟ್ಟದ್ದನ್ನು ಮಾಡುತ್ತಿದ್ದರೆ ಇಡೀ ಸಮುದಾಯವು ಎದ್ದುನಿಂತು, ‘ಇದು ಸಂಪೂರ್ಣವಾಗಿ ತಪ್ಪು, ನೀವು ಇದನ್ನು ಮಾಡಬಾರದು’ ಎಂದು ಹೇಳುತ್ತದೆ. ಅವಮಾನದ ಭಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಅವರು ಹೇಳುತ್ತಾರೆ. ಹಿಂದುಗಳು ದೊಡ್ಡ ಕುಟುಂಬಗಳಲ್ಲಿ ವಾಸಿಸಲು ಒಲವು ತೋರುತ್ತಾರೆ. ಬ್ರಿಟನ್ನಲ್ಲಿ ಒಂದು ಕುಟುಂಬದಲ್ಲಿ ಸರಾಸರಿ 2.4 ಜನರಿದ್ದರೆ, ಬ್ರಿಟಿಷ್ ಹಿಂದುಗಳು 3.2 ಇದ್ದಾರೆ.
ಗಂಟೆಗೆ 1300 ರೂ. ಗಳಿಕೆ
2012ರ ಹೊತ್ತಿಗೆ ಲಂಡನ್ನಲ್ಲಿ ವಾಸಿಸುವ ಹಿಂದುಗಳು ಉತ್ತಮ ಸಂಪತ್ತನ್ನು ಹೊಂದಿದ್ದು, ಶ್ರೀಮಂತಿಕೆಯಲ್ಲಿ ಯಹೂದಿಗಳ ನಂತರದ ಸ್ಥಾನದಲ್ಲಿ ಬರುತ್ತಾರೆ. ಯಹೂದಿಗಳು ಮತ್ತು ಕ್ರಿಶ್ಚಿಯನ್ನರ ನಂತರ ಹಿಂದುಗಳು ಕಡಿಮೆ ಬಡತನ ದರವನ್ನು ಹೊಂದಿದ್ದಾರೆ. ಹಿಂದುಗಳು ಪ್ರತಿ ಗಂಟೆಗೆ 13.80 ಪೌಂಡ್ (1300 ರೂಪಾಯಿ) ಗಳಿಸುತ್ತಾರೆ. ಯಹೂದಿ ಸಮುದಾಯದ ನಂತರ ಪ್ರತಿ ಗಂಟೆಗೆ ಹೆಚ್ಚು ಗಳಿಸುವ ಧಾರ್ವಿುಕ ಸಮುದಾಯ ಹಿಂದುಗಳದ್ದಾಗಿದೆ. ‘ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡುವುದನ್ನು ನಮ್ಮ ಮಕ್ಕಳು ನೋಡಿದ್ದಾರೆ. ದಿನವಿಡೀ, ವಾರದಲ್ಲಿ ಏಳು ದಿನಗಳ ಕಾಲ, ದಿನಕ್ಕೆ ಸುಮಾರು 12 ಗಂಟೆಗಳ ಕಾಲ. ಈಗ ಅವರು ಹಾಗೆ ಕೆಲಸ ಮಾಡಲು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತಿರುವುದರಿಂದ ನೀವು ಮಾಡಬೇಕಾಗಿ ಬರುವುದಿಲ್ಲ ಎಂದು ನಾನು ಯಾವಾಗಲೂ ಅವರಿಗೆ ಹೇಳುತ್ತಿದ್ದೆ’ ಎಂದು ಅಂಗಡಿಯೊಂದರ ಮಾಲಿಕ ಪ್ರೀತ್ ಹೇಳುತ್ತಾರೆ.