

ಭಾರತ 5 ಸಾವಿರ ವರ್ಷಗಳಿಗೂ ಮೀರಿದ ಸಂಸ್ಕೃತಿಯನ್ನು ಹೊಂದಿದ ದೇಶ. 6452 ಜಾತಿಗಳು, 6 ಮತಗಳು, 52 ಬುಡಕಟ್ಟುಗಳಲ್ಲಿ ಹಂಚಿ ಹೋಗಿರುವ, 29 ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ, 1618 ಭಾಷೆಗಳನ್ನು ಮಾತನಾಡುವ ವೈವಿಧ್ಯಮಯ ದೇಶ. 5,68,000 ಹಳ್ಳಿಗಳು, 600 ಜಿಲ್ಲೆಗಳನ್ನು ಹೊಂದಿರುವ ಬೃಹತ್ ರಾಷ್ಟ್ರ. ಸಾವಿರಾರು ವರ್ಷಗಳಿಂದಲೂ ಬಹುಧರ್ಮ, ಬಹುಸಂಸ್ಕೃತಿಗಳನ್ನು ಒಳಗೊಂಡಿದ್ದ ಒಂದೇ ರಾಷ್ಟ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸಂಸತ್ತಿನ ರಚನೆ, ನಿರೂಪಣೆ ಹಾಗೂ ಸಾಗಿಬಂದ ಹಾದಿಯನ್ನು ಅವಲೋಕಿಸಬೇಕಿದೆ.
ಭಾರತಕ್ಕೆ ಸಂಸತ್ತು ಅಥವಾ ಸಂಸತ್ತಿನಲ್ಲಿ ನಡೆಯುವ ವಿಧಿವಿಧಾನಗಳು ಗೊತ್ತಿರಲಿಲ್ಲ ಎಂದಲ್ಲ. ಬೌದ್ಧಭಿಕ್ಷುಗಳ ಸಂಘಗಳ ರಚನೆಯನ್ನು ಅಧ್ಯಯನ ಮಾಡಿದರೆ ನಮ್ಮಲ್ಲಿ ಆ ಸಂಘಗಳಿಗೆ ಪರ್ಯಾಯವಾಗಿ ಸಂಘಗಳು ಇವೆ ಮತ್ತು ಸಂಘಗಳು ಎಂದರೆ ಸಂಸತ್ತುಗಳೇ ಹೊರತು ಇನ್ನೇನೂ ಅಲ್ಲ ಎಂದು ವೇದ್ಯವಾಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ‘ಅನುಭವ ಮಂಟಪ’ದಲ್ಲಿ 770 ಅಮರಗಣಂಗಳು, 1,96,000 ಶರಣರು, 330 ಮಂದಿ ವಚನಕಾರರು ಮತ್ತು 33 ಮಂದಿ ವಚನಗಾರ್ತಿಯರು ಒಂದೇ ವೇದಿಕೆಯಲ್ಲಿ ಕುಳಿತು, ರ್ಚಚಿಸಿ ಅಧ್ಯಾತ್ಮ ಸಾಧನೆ ಮಾಡಿದ ಘಟನೆ ಪ್ರಪಂಚದಲ್ಲೆಲ್ಲೂ ಇಲ್ಲ.
ನಮ್ಮ ಸಂವಿಧಾನ ರಚನೆಯಾದ ಮತ್ತು ಸ್ವೀಕೃತವಾದ ಸಂದರ್ಭದಲ್ಲಿ ಸಂಭ್ರಮದ ಜೊತೆಗೇ ದೇಶದಲ್ಲಿ ಜಾತಿ-ವರ್ಣ-ವರ್ಗ-ಲಿಂಗ-ಅಭಿವೃದ್ಧಿಗಳಲ್ಲಿನ ಅಸಮಾನತೆ, ಭಾವೈಕ್ಯತೆಯ ಕೊರತೆ ಮುಂತಾದ ಸವಾಲುಗಳಿತ್ತು. ಯಾವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಲಾಯಿತು ಎಂಬುದರ ಅರಿವು ಇಂದಿನ ನವಪೀಳಿಗೆಯಲ್ಲಿ ಇಲ್ಲ. ರಾಜಕೀಯ ಸ್ವಾತಂತ್ರ್ಯ ಬಂತು; ಆದರೆ ‘ಸಮಾನತೆ’ಯ ನಿಟ್ಟಿನಲ್ಲಿ ನಮ್ಮ ಪ್ರಜಾಪ್ರಭುತ್ವ ಇನ್ನೂ ಪಕ್ವಗೊಂಡಿಲ್ಲ. ಆದರೆ, ಎಲ್ಲ ಬಗೆಯ ಸಂದಿಗ್ಧತೆಗಳಿಗೂ ನಮ್ಮ ಸಂವಿಧಾನ ಮತ್ತು ಕಾನೂನುಗಳಲ್ಲಿ ಸ್ಪಷ್ಟ ಮಾರ್ಗದರ್ಶನವಿದೆ. ಆದರೂ, ಸಂವಿಧಾನದ ಪ್ರಮುಖ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿನ ತಾಳಮೇಳ ಲಯ ತಪ್ಪುತ್ತಿದೆ. ಅಲ್ಲದೆ, ಸಂವಿಧಾನವನ್ನೇ ದಿಕ್ಕು ತಪ್ಪಿಸುವಂಥ ಮೇಧಾವಿತನ ಯಾಕೆ ವೃದ್ಧಿಯಾಗುತ್ತಿದೆ? ಎಂಬುದೇ ಈ ಹೊತ್ತಿನ ಜಿಜ್ಞಾಸೆ.
ಬ್ರಿಟಿಷರ ವಸಾಹತುಷಾಹಿ ಆಳ್ವಿಕೆ ಮತ್ತು ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರವು ಸಾರ್ವಜನಿಕ ಜೀವನವನ್ನು ಕಟ್ಟಲು ‘ಸಂಸತ್ತು’ ಒಂದು ಸೂಕ್ತವಾದ ಸಂಸ್ಥೆ ಎನ್ನುವ ಒಮ್ಮತಾಭಿಪ್ರಾಯ ಮೂಡಿತು. ಡಬ್ಲ್ಯು.ಎಚ್.ಮೊರಿಸ್ ಜೋನ್ಸ್ ಮತ್ತು ಜೇಮ್ಸ್ ಮನೋರ್ರಂಥ ವಿದ್ವಾಂಸರುಗಳು, ‘ವಸಾಹತುಷಾಹಿಯ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಸಾಂವಿಧಾನಿಕ ಪ್ರಾತಿನಿಧಿಕ ಸಂಸ್ಥೆಗಳು ಭಾರತದಲ್ಲಿ ಪ್ರಜಾಪ್ರಭುತ್ವ ಬೇರುಬಿಡುವುದಕ್ಕೆ ಕಾರಣವಾದವು’ ಎಂದು ಪ್ರತಿಪಾದಿಸಿದ್ದಾರೆ.
ಸಂವಿಧಾನ ರಚನಾಸಭೆಯ ಚರ್ಚೆಯಲ್ಲಿ ಭಾರತ ಅಧ್ಯಕ್ಷೀಯ ಸರ್ಕಾರವನ್ನು ಆರಿಸಿಕೊಳ್ಳಬೇಕೇ ಅಥವಾ ಸಂಸದೀಯ ಸರ್ಕಾರವನ್ನೇ ಅಥವಾ ಈ ಎರಡೂ ಮಾದರಿಗಳ ಅಂಶವನ್ನು ಒಳಗೊಂಡ ಒಂದು ಸುಧಾರಿತ ಸರ್ಕಾರವನ್ನೇ ಎನ್ನುವುದರ ಕುರಿತು ಸವಿಸ್ತಾರ ಚರ್ಚೆ ನಡೆದು ಕೊನೆಗೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ನಮ್ಮ ಈಗಿನ ಸಂಸದೀಯ ಪ್ರಜಾಪ್ರಭುತ್ವ ಪದ್ಧತಿಯನ್ನು ರೂಪಿಸಲಾಯಿತು.
ಪ್ರಸ್ತುತ ಕಾಲಘಟ್ಟ ಹಾಗೂ ಮಜಲುಗಳು: ವೈವಿಧ್ಯತೆಯನ್ನು ಒಳಗೊಳ್ಳುವ ಸಾಮರ್ಥ್ಯ ಭಾರತದಲ್ಲಿರುವ ಪ್ರಾತಿನಿಧ್ಯ ವ್ಯವಸ್ಥೆಯ ಮುಖ್ಯ ಗುಣ ಮತ್ತು ದೊಡ್ಡ ಸಾಧನೆಯಾಗಿದೆ. ಸಮಾಜದಲ್ಲಿ ಸೃಷ್ಟಿಯಾಗುವ ಬೇಡಿಕೆಗಳಿಗೆ ಪ್ರತಿಕ್ರಿಯಿಸುವಾಗ ಭಿನ್ನಾಬಿಪ್ರಾಯ ಹಾಗೂ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸುವುದು; ವ್ಯವಸ್ಥೆಯ ಎಲ್ಲ ಹಂತಗಳಲ್ಲಿ ನಾಯಕತ್ವವನ್ನು ಒದಗಿಸುವುದು; ಸಣ್ಣ ಅಲ್ಪಸಂಖ್ಯಾತ ಗುಂಪುಗಳಿಗೂ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶ ಕಲ್ಪಿಸುವುದು; ಪಕ್ಷ ಪದ್ಧತಿ ಬಲವಾಗಿ ಬೇರೂರುವಂತೆ ಮಾಡಿರುವುದು ಹಾಗೂ ಒಟ್ಟಾರೆಯಾಗಿ ಉತ್ತರದಾಯಿತ್ವ ಖಾತ್ರಿಪಡಿಸಿರುವುದು ಇದರ ಇನ್ನಿತರ ಗುಣಗಳಾಗಿ ಗುರುತಿಸಲ್ಪಟ್ಟಿವೆ.
ಪ್ರಜಾಪ್ರಭುತ್ವದಲ್ಲಿ ಮುಂದುವರಿದ ರಾಷ್ಟ್ರಗಳೆಂದು ಕರೆಸಿಕೊಳ್ಳುವ ಅಮೆರಿಕ ಮಹಿಳೆಯರಿಗೆ ಮತ್ತು ಕಪು್ಪವರ್ಣೀಯರಿಗೆ ಮತದಾನದ ಹಕ್ಕು ನೀಡಲು 144 ವರ್ಷ ಮತ್ತು ಬ್ರಿಟನ್ 128 ವರ್ಷಗಳಷ್ಟು ಸುದೀರ್ಘ ಸಮಯವನ್ನು ತೆಗೆದುಕೊಂಡಿದ್ದವು. ಆದರೆ, ಭಾರತ ಪ್ರಜಾಪ್ರಭುತ್ವ ಸಂವಿಧಾನವನ್ನು ಒಪ್ಪಿಕೊಂಡ ಬೆನ್ನಲ್ಲೇ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿತು. ಇದು ಭಾರತೀಯ ಸಂವಿಧಾನ ದೇಶದ ಜನರ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸದ ಪ್ರತೀಕ. ಭಾರತದ ಪ್ರಜಾಪ್ರಭುತ್ವ ಹಲವಾರು ಸವಾಲು, ಸಂಕಷ್ಟ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ದಾಟಿಬಂದಿದೆ. ಸ್ಥೂಲವಾಗಿ ಹೇಳುವುದಾದರೆ;
ಜನಪ್ರಾತಿನಿಧ್ಯತೆಯಲ್ಲಿನ ಬದಲಾವಣೆಗಳು: ಭಾರತೀಯ ಸಂಸತ್ತು ಕೇವಲ ಕಾನೂನು ರಚಿಸುವ ಅಂಗವಲ್ಲ; ತಾವು ಪ್ರತಿನಿಧಿಸುವ ಕ್ಷೇತ್ರದ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳ ಕರ್ಮಕ್ಷೇತ್ರ. ಹಲವಾರು ವೈವಿಧ್ಯಮಯ ಹಿತಾಸಕ್ತಿಗಳು ಸಂಸತ್ತಿನಲ್ಲಿ ಅಭಿವ್ಯಕ್ತಿಗೊಂಡರೂ, ಸಂಸತ್ತಿನ ಶಾಸನೀಯ ಕಾರ್ಯಗಳು ಹಾಗೂ ಹಿತಾಸಕ್ತಿಗಳ ಪ್ರಾತಿನಿಧ್ಯ ಇವೆರಡರ ನಡುವೆ ಸದಾಕಾಲ ಘರ್ಷಣೆ ಇರುತ್ತದೆ. ಭಾರತೀಯ ಸಂಸತ್ತು ಕಳೆದ 70 ವರ್ಷಗಳಲ್ಲಿ ಅನೇಕ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಬದಲಾಗುತ್ತಿರುವ ಪ್ರಾತಿನಿಧ್ಯ, ಪ್ರತಿನಿಧಿಸಲ್ಪಡುವ ಹಿತಾಸಕ್ತಿಗಳಲ್ಲಿನ ಬದಲಾವಣೆಯ ಸ್ವರೂಪ, ಇಡೀ ರಾಷ್ಟ್ರದ ಬಗೆಗಿನ ದೃಷ್ಟಿಕೋನದಲ್ಲಾಗಿರುವ ಬದಲಾವಣೆ, ಗತಕಾಲದ ಸಾಮಾಜಿಕ ಸಂಬಂಧಗಳಲ್ಲಿ ಬೃಹತ್ತಾದ ಬದಲಾವಣೆ... ಹೀಗೆ ಬೇಕಷ್ಟಿವೆ.
ಪಕ್ಷಾಂತರ ನಿಷೇಧ ಕಾಯ್ದೆ: ಪಕ್ಷಾಂತರ ಇಂದು ಬಹುದೊಡ್ಡ ಪಿಡುಗಾಗಿದೆ. 1985ರಲ್ಲಿ ಜಾರಿಯಾದ ಪಕ್ಷಾಂತರ ನಿಷೇಧ ಕಾಯ್ದೆಗೆ ಹಲವಾರು ತಿದ್ದುಪಡಿಗಳಾಗಿದ್ದರೂ, ಅದರ ಮೂಲ ಉದ್ದೇಶವನ್ನು ಸಾಧಿಸಲಾಗಿಲ್ಲ. ಸಭಾಧ್ಯಕ್ಷರುಗಳ ಪಕ್ಷಪಾತದ ವರ್ತನೆ, ಶಾಸಕರು ರಾಜೀನಾಮೆ ನೀಡಿ ಬೇರೆ ಪಕ್ಷದಿಂದ ಮರುಆಯ್ಕೆಯಾಗುವುದು- ಹೀಗೆ ಹತ್ತು ಹಲವಾರು ನಡವಳಿಕೆಗಳು ಇಂದಿನ ಪ್ರಜಾಪ್ರಭುತ್ವದ ದೊಡ್ಡ ಕಳಂಕ.
ನ್ಯಾಯಾಂಗದ ಪಾತ್ರ ಮತ್ತು ಕಾರ್ಯವೈಖರಿ: ಭಾರತದ ಸಂಸದೀಯ ಪ್ರಜಾಪ್ರಭುತ್ವದ ನಿರ್ವಣದಲ್ಲಿ ಸಂಸತ್ತು ಹಾಗೂ ನ್ಯಾಯಾಂಗಗಳ ನಡುವಿನ ಸಂಬಂಧ ಮುಖ್ಯ ಅಂಶವಾಗಿದೆ. ಈ ಎರಡೂ ಸಂಸ್ಥೆಗಳು ಪರಸ್ಪರ ಪೂರಕವಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಸಂಸದೀಯ ಪ್ರಜಾಪ್ರಭುತ್ವವನ್ನು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನಾಗಿ ಪರಿವರ್ತಿಸುವಲ್ಲಿ ನ್ಯಾಯಾಂಗ ಪ್ರಮುಖ ಪಾತ್ರವಹಿಸಿದೆ. ಕಾರ್ಯಾಂಗದ ಪ್ರಾಬಲ್ಯ ಮತ್ತು ಏಕಸ್ವಾಮ್ಯ: ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಸುಖೀ ಹಾಗೂ ಅಭಿವೃದ್ಧಿಶೀಲ ಪ್ರಭುತ್ವ ಸಾರ್ವಜನಿಕ ಕ್ಷೇತ್ರದ ಮೂಲೆಮೂಲೆಗೂ ವಿಸ್ತರಿಸುತ್ತ ಹೋದಂತೆ, ಜೊತೆಗೆ ತ್ವರಿತಗತಿಯಲ್ಲಿ ಜಾಗತೀಕರಣಗೊಳ್ಳುತ್ತಿರುವ ಆರ್ಥಿಕತೆ ಮಾರುಕಟ್ಟೆಗಳ ಪ್ರಾಬಲ್ಯವನ್ನು ಹೆಚ್ಚಿಸುತ್ತಿರುವ ಈ ಪರಿಸರದಲ್ಲಿ ಸಂಸತ್ತಿಗಿಂತ ಕಾರ್ಯಾಂಗ ಹೆಚ್ಚು ಪ್ರಬಲವಾಗುತ್ತಿದ್ದು, ಕಾರ್ಯಾಂಗಕ್ಕೆ ದೊರಕಿದ ಈ ಸವಲತ್ತು ಕ್ರಮೇಣ ಸಂಸತ್ತಿನ ಪ್ರಭಾವವನ್ನು ಕಡಿಮೆ ಮಾಡುತ್ತಿದೆ. ಭಾರತದ ಪ್ರಜಾಪ್ರಭುತ್ವ ಮಾದರಿಯಲ್ಲಿನ ಸೋಲಿನ ಕಾರಣಗಳನ್ನು ಹೀಗೆ ಪ್ರಸ್ತಾಪಿಸಬಹುದು.
ಪಕ್ಷಗಳು ಅನುಸರಿಸುತ್ತಿರುವ ‘ವಿಪ್’ ಪದ್ಧತಿ ಮತ್ತು ಪಕ್ಷಾಂತರ ತಡೆ ಕಾಯ್ದೆ: ಈಗಿನ ಪರಿಸ್ಥಿತಿಯಲ್ಲಿ ಪಕ್ಷದ ಆದೇಶವನ್ನು ಯಾರೂ ಮೀರುವಂತಿಲ್ಲದ ಪರಿಣಾಮ; ಸಂಸತ್ತಿಗೆ ಆಯ್ಕೆಯಾದ ವ್ಯಕ್ತಿಗಳ ವೈಯಕ್ತಿಕ, ವೈಚಾರಿಕ ಸ್ವಾತಂತ್ರ್ಯವನ್ನೇ ಈ ವಿಪ್ ಪದ್ಧತಿ ಹರಣಮಾಡುತ್ತದೆ.
ಸ್ಪೀಕರ್: ಆಳುವ ಪಕ್ಷದ ಸದಸ್ಯರೊಬ್ಬರನ್ನು ಸಂಸತ್ತಿನ ಸ್ಪೀಕರ್ ಆಗಿ ಆಯ್ಕೆ ಮಾಡುವುದರಿಂದ ಎಷ್ಟೇ ವಸ್ತುನಿಷ್ಠವಾಗಿರಬೇಕೆಂದು ಬಯಸಿದರೂ ಅದು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಸಕಾಲಿಕ: ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರದ ನಿಯಂತ್ರಣ
ರಾಷ್ಟ್ರೀಯ ಅತ್ಯುನ್ನತ ಸ್ಥಾನಗಳು: ಸೇನೆಯ ಅತ್ಯುಚ್ಚ ಅಧಿಕಾರಿಗಳು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ರಿಸರ್ವ್ ಬ್ಯಾಂಕ್ ಗವರ್ನರ್, ಸಿಬಿಐ ನಿರ್ದೇಶಕರು ಮುಂತಾದವರು ನಿವೃತ್ತಿಯಾದ ನಂತರ ಮತ್ತೆ ಯಾವುದೇ ಅಧಿಕಾರ ಸ್ಥಾನ ಪಡೆಯಲು ಸಾಧ್ಯವಿರಬಾರದು. ಹಾಗಿದ್ದಾಗ ಮಾತ್ರ ತಮ್ಮ ಸೇವಾ ವಧಿಯ ಕೊನೆಯ ಘಟ್ಟದಲ್ಲಿಯೂ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ.
ಬಹುಮತದ ಅಹಂ: ಕಳೆದ 50 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಅರ್ಹ ಮತಗಳ ಪೈಕಿ ಶೇಕಡ 50ರಷ್ಟು ಮತಗಳನ್ನು ಯಾವ ಪಕ್ಷವೂ ಗಳಿಸಿಲ್ಲ. ಈ ಅಂಶವನ್ನು ಆಡಳಿತ ಪಕ್ಷಗಳು ಯಾವಾಗಲೂ ನೆನಪಿನಲ್ಲಿಟ್ಟುಕೊಂಡರೆ, ಭಿನ್ನ ಕಾಲಘಟ್ಟಗಳಲ್ಲಿ ಆಡಳಿತಾರೂಢ ಪಕ್ಷಗಳು ಸರ್ವಾಧಿಕಾರಿಯಂತೆ ಮೆರೆಯುವುದು ತಪ್ಪುತ್ತದೆ.
ಚುನಾವಣಾ ಭ್ರಷ್ಟಾಚಾರ: ಪ್ರಜಾಪ್ರಭುತ್ವದ ಆಶಯಗಳು ಚುನಾವಣೆಯಿಂದ ಚುನಾವಣೆಗೆ ಅರ್ಥ ಕಳೆದುಕೊಳ್ಳುತ್ತಿವೆ. ಸಮಾಜವಾದಿ ಜಯಪ್ರಕಾಶ್ ನಾರಾಯಣರ ಸಾರಥ್ಯದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಪಾಂಚಜನ್ಯ ಮೊಳಗಿಸಿದ ಮಾಜಿ ಸಮಾಜವಾದಿಗಳು ನೆಹರು-ಇಂದಿರಾ ಕುಟುಂಬ ನಾಚಿ ತಲೆತಗ್ಗಿಸುವ ಹಾಗೆ ಸಂತತಿಯ ಸಾಮ್ರಾಜ್ಯ ಪೋಷಿಸಿ ಬೆಳೆಸುತ್ತಿದ್ದಾರೆ. ನಿರ್ದಿಷ್ಟ ರಾಜಕೀಯ ಸಿದ್ಧಾಂತದ ನೆಲೆಯಲ್ಲಿ ಸ್ಥಾಪನೆಗೊಂಡ ಅನೇಕ ಪ್ರಾದೇಶಿಕ ಪಕ್ಷಗಳು ಈಗ ವ್ಯಕ್ತಿಕೇಂದ್ರಿತ ಇಲ್ಲವೇ ಕುಟುಂಬಕೇಂದ್ರಿತ ರಾಜಕೀಯ ಪಕ್ಷಗಳಾಗಿವೆ. ಇದನ್ನೂ ಓದಿ: 15ನೇ ಶತಮಾನದ ಶ್ರೀರಾಮ-ಸೀತಾ-ಲಕ್ಷ್ಮಣನ ವಿಗ್ರಹಗಳನ್ನು ಹಸ್ತಾಂತರಿಸಿದ ಯುಕೆ; ಯಾವಾಗ ಕಳವಾಗಿದ್ದವು ಗೊತ್ತಾ?
ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯ: ನ್ಯಾಯಯುತವಾದ ವ್ಯವಸ್ಥೆಯನ್ನು ರೂಪಿಸುವ ಹಾಗೂ ಕಾರ್ಯಾಂಗ ಹೊಣೆಗಾರರಾಗಿರುವಂತೆ ನೋಡಿಕೊಳ್ಳುವ ಸಾಮರ್ಥ್ಯವನ್ನು ಸಂಸತ್ತು ಇನ್ನೂ ನಿರೂಪಿಸಬೇಕಾಗಿದೆಯಾದರೂ ಭಾರಿ ಜನಸಂಖ್ಯೆಯ, ಸಂಕೀರ್ಣ, ಅತ್ಯಂತ ವೈವಿಧ್ಯಮಯವಾದ ಹಾಗೂ ಎಲ್ಲೆಡೆಯೂ ಅಸಮಾನತೆಯಿಂದ ಕೂಡಿದ ಸಮಾಜದ ದನಿಯಾಗಿ ಅದು ಕ್ರಮಿಸಿರುವ ದೂರ ವಿಶ್ವದ ಯಾವುದೇ ರಾಷ್ಟ್ರ ಅಸೂಯೆಪಡುವಂತೆ ಮಾಡಿದೆ. ಭಾರತದಲ್ಲಿ 4120 ಎಂಎಲ್ಎಗಳು ಮತ್ತು 543 ಲೋಕಸಭಾ ಸದಸ್ಯರಿದ್ದಾರೆ. ಪ್ರತಿ ಲೋಕಸಭಾ ಸದಸ್ಯ ಸರಾಸರಿ 20 ಲಕ್ಷ ನಾಗರಿಕರ ಜವಾಬ್ದಾರಿ ಹೊತ್ತಿರುತ್ತಾರೆ. ಕೆಲವೇ ಮಂದಿ ಎಂ.ಪಿ.ಗಳು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅದರ ಪರಿಣಾಮ ಲಕ್ಷಾಂತರ ಜನರ ಮೇಲೆ! ಈ ಪರಿಯ ಅಗಾಧತೆ ನಮ್ಮ ಪ್ರಜಾಪ್ರಭುತ್ವದ್ದು. ಇಷ್ಟೆಲ್ಲ ಸವಾಲು, ವೈರುಧ್ಯಗಳ ಮಧ್ಯೆಯೂ ಜಗತ್ತಿನೆಲ್ಲೆಡೆಯ ರಾಜಕೀಯ ಶಾಸ್ತ್ರಜ್ಞರುಗಳ ಭವಿಷ್ಯವಾಣಿಯನ್ನು ಸುಳ್ಳುಮಾಡುವ ರೀತಿಯಲ್ಲಿ ಪ್ರಬುದ್ಧತೆಯನ್ನು ಸಾಧಿಸಿದೆ. ವಿಶ್ವದೆಲ್ಲೆಡೆ ವಿವಿಧ ರಾಜಕೀಯ ವ್ಯವಸ್ಥೆಗಳು, ಪ್ರಯೋಗಗಳು ವಿಫಲವಾಗುತ್ತಿರುವ ಹೊತ್ತಿನಲ್ಲಿ ನಮ್ಮ ಪ್ರಜಾಪ್ರಭುತ್ವ ದಿನಕಳೆದಂತೆ ಭದ್ರವಾಗಿ ಬೇರೂರುತ್ತಿರುವುದು ಭಾರತದ ಮಣ್ಣಿನಲ್ಲೇ ಪ್ರಜಾಪ್ರಭುತ್ವದ ಸಾರಸತ್ವ ಮಿಳಿತವಾಗಿದ್ದನ್ನು ಪುಷ್ಟೀಕರಿಸುತ್ತದೆ.
ಉತ್ತರದಾಯಿತ್ವ: ವಿಶ್ವದಲ್ಲಿ ಪ್ರಯೋಗ ಕಂಡ ಎಲ್ಲ ಆಡಳಿತ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿಯೇ ಹೆಚ್ಚು ಸೂಕ್ತ ಎಂಬ ನೆಲೆಯಲ್ಲಿ ಭಾರತ ಇದನ್ನು ಅಳವಡಿಸಿಕೊಂಡಿತು. ಏನೇ ವೈರುಧ್ಯ, ವೈಫಲ್ಯಗಳಿದ್ದರೂ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ದೇಶದ ಜನತೆಗೆ ಉತ್ತರದಾಯಿತ್ವ ಹೊಂದಿರುವುದೇ ಭಾರತೀಯ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ. ಈ ಮೂರೂ ಅಂಗಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಉತ್ತರದಾಯಿತ್ವವನ್ನು ಮರೆತಿರುವಂತೆ ವರ್ತಿಸುತ್ತಿರುವುದು ಈಗಿನ ಮಹಾ ಲೋಪ. ಈ ಲೋಪವನ್ನು ಆದಷ್ಟು ಶೀಘ್ರದಲ್ಲಿ ನಿವಾರಿಸುವ ಕಾರ್ಯ ಆಗಬೇಕಿದ್ದು, ಜಾಗೃತ ನಾಗರಿಕಪ್ರಜ್ಞೆಗೆ ಇದೇನೂ ಅಂತಹ ಅಸಾಧ್ಯ ಕೆಲಸವೇನಲ್ಲ.
(ಲೇಖಕರು ವಿಧಾನಪರಿಷತ್ ಮಾಜಿ ಸಭಾಪತಿಗಳು)