ಮನೋಲ್ಲಾಸ| ಶಕ್ತಿಯಿಂದಾಗದ್ದು ಯುಕ್ತಿಯಿಂದ

Mind
Published on

| ಸುಮಾವೀಣಾ

ಇದೊಂದು ಜನಪದರಲ್ಲಿ ಪ್ರಚಲಿತವಿರುವ ರಾಮಾಯಣದ ಸನ್ನಿವೇಶ. ವನವಾಸದಿಂದ ರಾಮ, ಸೀತೆ, ಲಕ್ಷ್ಮಣ ಅಯೋಧ್ಯೆಗೆ ಹಿಂತಿರುಗಿದ್ದಾರೆ. ಶ್ರೀರಾಮನ ಪಾದುಕೆಯ ಸಾನಿಧ್ಯದಲ್ಲಿ ಹದಿನಾಲ್ಕು ವರ್ಷ ಅಯೋಧ್ಯೆಯನ್ನು ಆಳಿದ ಭರತ ಅಣ್ಣನಿಗೆ ರಾಜ್ಯ ಬಿಟ್ಟು ಕೊಟ್ಟ ಸಂದರ್ಭ. ರಾಜ್ಯಾಧಿಕಾರ ವಹಿಸಿಕೊಂಡ ರಾಮನಿಗೆ ರಾಜ್ಯದ ಖಾಲಿ ಭಂಡಾರ ನೋಡಿ ಗಾಬರಿಯಾಯಿತು. ಭರತನನ್ನು ಕುರಿತು ‘ಆದಾಯ ಎಲ್ಲಿ, ತೆರಿಗೆ ಸಂಗ್ರಹ ಆಗಲಿಲ್ಲವೇ?’ ಎಂದರೆ ‘ಅಯ್ಯೋ ಅಣ್ಣಾ! ನೀನು ಇರಲಿಲ್ಲವಲ್ಲ ಬೇಜಾರಾಗಿ ನಾನೂ ತೆರಿಗೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಪ್ರಜೆಗಳೂ ಕೊಡಲಿಲ್ಲ!’ ಎಂದು ಬಿಟ್ಟ. ಆದರೆ ರಾಮನಿಗೆ ಚಿಂತೆ ಹೆಚ್ಚಾಗಿ ಅದರ ಕುರಿತೇ ಆಲೋಚಿಸತೊಡಗಿದ. ಭಂಡಾರ ಖಾಲಿ ಆಗಿರುವ ವಿಷಯವನ್ನು ಕೇಳಿದ ಸೀತೆ ‘ಈ ಸಮಸ್ಯೆಗೊಂದು ಉಪಾಯ ಮಾಡುತ್ತೇನೆ’ ಎಂದಳು.

ಮರುದಿನ ಒಂದು ಕುಂಬಳಕಾಯಿಯನ್ನು ಒಡೆದು ಅದರ ಬೀಜವನ್ನೆಲ್ಲ ಸಂಗ್ರಹಿಸಿ ರಾಮನ ಕೈಗೆ ಕೊಟ್ಟ ಸೀತೆ, ‘ಇದನ್ನು ಪ್ರಜೆಗಳಿಗೆ ಕೊಟ್ಟು ಕುಂಬಳ ಬಳ್ಳಿ ಬೆಳೆಸುವಂತೆ ಹೇಳಿ. ಕಾಯಿ ಬಿಟ್ಟ ಕೂಡಲೇ ಅರಮನೆಗೆ ಒಂದೊಂದು ಕುಂಬಳಕಾಯಿ ತಂದು ಕೊಡಬೇಕು. ಇಲ್ಲವಾದರೆ ಕುಂಬಳಕಾಯಿ ಗಾತ್ರದ ನಗ, ನಾಣ್ಯ ತಂದು ಒಪ್ಪಿಸಲು ತಿಳಿಸಿ’ ಎಂದಳು. ರಾಮ ಕುಂಬಳ ಬೀಜ ನೀಡಿದ ಮೇಲೆ ಪ್ರಜೆಗಳೆಲ್ಲ ಅದನ್ನು ಬಿತ್ತಿದರು. ಆದರೆ, ವಾರ ಕಳೆದು ಕೆಲ ತಿಂಗಳುಗಳು ಕಳೆದರೂ ಬೀಜವೇ ಮೊಳಕೆ ಒಡೆಯಲಿಲ್ಲ. ಇನ್ನು ರಾಜಾಜ್ಞೆಗೆ ಹೆದರಿ ಪ್ರಜೆಗಳೆಲ್ಲ ಕುಂಬಳಕಾಯಿ ಗಾತ್ರದಷ್ಟು ಹಣ ಇಲ್ಲವೆ ತಮ್ಮಲ್ಲಿದ್ದ ಆಭರಣಗಳನ್ನೇ ಒಯ್ದು ಅರಮನೆಗೆ ಒಪ್ಪಿಸಿದರು. ಕೇವಲ ನಾಲ್ಕೈದು ತಿಂಗಳಲ್ಲಿ ರಾಜಭಂಡಾರ ಭರ್ತಿಯಾಯಿತು.

ರಾಮ ಆಶ್ಚರ್ಯ ಮತ್ತು ಖುಷಿಯಿಂದ ಸೀತೆಯನ್ನು, ‘ನೀನು ಅದೇನು ಮಾಡಿದೆ? ಹೀಗಾಯ್ತಲ್ಲ ಅದೆಂಥ ಕುಂಬಳ ಬೀಜ ಕೊಟ್ಟಿದ್ದೆ? ಒಂದೂ ಕಾಯಿ ಬಿಡಲಿಲ್ಲವಂತೆ’ ಎಂದು ಕೇಳಿದ. ಸೀತೆ ‘ನಾನು ಕುಂಬಳಬೀಜವನ್ನು ಹುರಿದು ಕೊಟ್ಟಿದ್ದೆ’ ಎಂದಳು. ರಾಮನಿಗೆ ಸೀತೆಯ ಬುದ್ಧಿವಂತಿಕೆ ಕುರಿತು ಹೆಮ್ಮೆ ಎನಿಸಿತು. ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೆ ತೆರಿಗೆ ವಸೂಲಿಯಾಯಿತು. ಹೇಗಿದೆ ಸೀತಾಮಾತೆಯ ಯುಕ್ತಿ? ಬರಿದಾಗಿದ್ದ ಖಜಾನೆಯನ್ನು ಉಪಾಯದಿಂದ ತುಂಬಿಸಿದಳು ಅಲ್ಲವೇ? ನಮ್ಮ ಜೀವನ ಮತ್ತು ಸುತ್ತಮುತ್ತಲ ಸಮಾಜದಲ್ಲೂ ಇಂಥ ಸಂದರ್ಭಗಳು ಬರುತ್ತವೆ. ಹಿಡಿತ ಸಾಧಿಸುವ ಕಾನೂನುಗಳು ಎಲ್ಲ ಸಂದರ್ಭದಲ್ಲೂ ಯಶಸ್ವಿ ಆಗುವುದಿಲ್ಲ. ಕಟ್ಟುನಿಟ್ಟಿನ ಬುದ್ಧಿಮಾತು ಎಲ್ಲರಿಗೂ ಎಲ್ಲ ಸಂದರ್ಭದಲ್ಲೂ ರುಚಿಸುವುದಿಲ್ಲ. ಮುಳ್ಳಿನ ಮೇಲಿನ ವಸ್ತ್ರದ ಮೇಲೆ ಬಲಪ್ರಯೋಗಿಸಲು ಸಾಧ್ಯ ಇದೆಯೇ? ನಾಜೂಕಾಗಿ ನಿಭಾಯಿಸುವುದಿಲ್ಲವೇ? ಕಹಿಯಾದ ಮಾತ್ರೆಯನ್ನು ಸಿಹಿಲೇಪನದೊಂದಿಗೆ ಹೇಗೆ ಸ್ವೀಕರಿಸುತ್ತೇವೋ ಹಾಗೆ.

ಕಠಿಣ ಸಂದರ್ಭದಲ್ಲಿ ಕಠಿಣ ಮಾತು ಫಲಿಸುವುದಿಲ್ಲ, ನಯವಾದ ಮಾತು ಫಲಿಸುತ್ತದೆ. ಶಕ್ತಿ ಹಾಗೂ ಯುಕ್ತಿ ಒಂದೇ ನಾಣ್ಯದ ಎರಡು ಮುಖಗಳು. ಸಮಯ ನೋಡಿ ಸೂಕ್ತವಾದದ್ದನ್ನು ಬಳಸಿಕೊಳ್ಳಬೇಕು. ಆಗ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅಲ್ಲವೇ!

(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net