

ಮಳೆಗಾಲದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು. ನದಿಗಳು, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದವು. ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತು. ನದಿಪಾತ್ರದಲ್ಲಿನ ಜನರು ಪ್ರವಾಹಕ್ಕೆ ಹೆದರಿ ಮನೆ ಬಿಟ್ಟು ಸುರಕ್ಷಿತ ಸ್ಥಳದೆಡೆಗೆ ತೆರಳಲು ಪ್ರಾರಂಭಿಸಿದರು. ಒಂದಷ್ಟು ಜನರು ದೂರದಲ್ಲೇ ನಿಂತು ನದಿಯ ಅಪಾಯದ ಮಟ್ಟದ ಬಗ್ಗೆ ವಿಶ್ಲೇಷಿಸುತ್ತಿದ್ದರು. ಊರಿಗೆ ಊರೇ ನದಿಯ ಸಾಮೀಪ್ಯದಿಂದ ದೂರ ಸರಿಯಿತು. ಪ್ರವಾಹ ಪರಿಸ್ಥಿತಿ ವಾರಗಟ್ಟಲೆ ಮುಂದುವರಿದು ನದಿ ರೌದ್ರಾವತಾರದ ಪ್ರತೀಕವಾಯಿತು. ನದಿ ತನ್ನ ಒಡನಾಡಿಗಳಾದ ಪ್ರಾಣಿ, ಪಕ್ಷಿ, ಮನುಷ್ಯರ ಬಾಂಧವ್ಯವನ್ನು ಕಳೆದುಕೊಂಡಿತು.
ಋತುಮಾನದ ಬದಲಾವಣೆ ಎಂಬಂತೆ ಮಳೆಗಾಲ ಕಳೆದು ಬೇಸಿಗೆಕಾಲ ಬಂದಿತು. ನದಿಯು ಬಂಡೆಗಳ ಇಕ್ಕೆಲಗಳಲ್ಲಿ ಝುುಳುಝುುಳು ನಿನಾದ ಮಾಡುತ್ತಾ, ತಿಳಿಯಾಗಿ ಪ್ರಶಾಂತವಾಗಿ ಹರಿಯತೊಡಗಿತು. ಪ್ರಾಣಿ-ಪಕ್ಷಿಗಳು ನದಿಯ ನೀರು ಕುಡಿಯಲು, ತಟದಲ್ಲಿ ವಿಹರಿಸಲು ಪ್ರಾರಂಭಿಸಿದವು. ಎಳೆಯ ಮಕ್ಕಳು ಬಂಡೆಗಳ ನಡುವೆ ಸೀಳಿ ಬರುತ್ತಿದ್ದ ನೀರಿನಲ್ಲಿ ಆಟವಾಡತೊಡಗಿದರು. ಜನರು ನದಿಯ ಸೌಂದರ್ಯವನ್ನು ಆಸ್ವಾದಿಸತೊಡಗಿದರು. ನದಿಯ ಒಡನಾಡಿಗಳೆಲ್ಲರೂ ಮತ್ತೆ ಬಾಂಧವ್ಯ ಬೆಸೆದುಕೊಂಡರು.
ನದಿಗೂ ಎಲ್ಲಿಲ್ಲದ ಸಂತೋಷವಾಯಿತು. ‘ಮಳೆಗಾಲದ ಅಧಿಕ ವರ್ಷಧಾರೆಗೆ ಅಬ್ಬರಿಸಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಸಿದಾಗ ನನಗೂ ಸಂತೋಷವಿರಲಿಲ್ಲ. ನನ್ನ ಒಡನಾಡಿಗಳಿಗೂ ಸಂತೋಷವಿರಲಿಲ್ಲ. ಆಗ ಯಾರೂ ನನ್ನ ಬಳಿ ಬರಲು ಬಯಸುತ್ತಿರಲಿಲ್ಲ. ಆದರೆ ಈಗ ಝುುಳುಝುುಳು ನಿನಾದದೊಂದಿಗೆ ನನ್ನ ಇತಿಮಿತಿಯಲ್ಲಿ ಹರಿಯುವಾಗ ಎಲ್ಲರೂ ನನ್ನ ಸ್ನೇಹಿತರಾಗಿದ್ದಾರೆ. ಎಲ್ಲರಿಗೂ ನನ್ನೊಂದಿಗೆ ಆತ್ಮೀಯ ಭಾವ ಬೆಳೆದಿದೆ. ರೌದ್ರತೆಯಲ್ಲಿ ಯಾವ ಸುಖ-ಸಂತೋಷವೂ ಇಲ್ಲ, ಸಮಾಧಾನದ ಹರಿವು ಸಂತಸದ ದಿನಗಳನ್ನು ತಂದಿದೆ’ ಎಂದು ನದಿ ಮನದಲ್ಲೇ ಅಂದುಕೊಂಡಿತು. ಒಡನಾಡಿಗಳೊಂದಿಗೆ ತಾನೂ ಆನಂದದಿಂದ ಇರತೊಡಗಿತು.
ನದಿಯ ಹರಿವಿನಂತೆ ನಮ್ಮ ಜೀವನದ ಓಟವೂ ಸಾಗುತ್ತದೆ. ಅನೇಕ ಒತ್ತಡಗಳು, ಅನಿವಾರ್ಯ ಪರಿಸ್ಥಿತಿಗಳು ನಮ್ಮ ತಾಳ್ಮೆಯನ್ನು ಕಿತ್ತುಕೊಳ್ಳುತ್ತವೆ. ಆಗ ನಮ್ಮ ನಡೆ-ನುಡಿಗಳೆಲ್ಲವೂ ಕೋಪ-ತಾಪದಿಂದ ವ್ಯಕ್ತಗೊಳ್ಳುತ್ತವೆ. ತಾಳ್ಮೆ ತಪ್ಪಿದ ಸಿಡುಕಿನ ವರ್ತನೆ ನಮ್ಮದಾದಾಗ ಸಹಜವಾಗಿ ಬಂಧುಗಳು, ಸ್ನೇಹಿತರು ನಮ್ಮಿಂದ ದೂರವಾಗುತ್ತಾರೆ. ಆಗ ಸಂಪತ್ತು, ಅಧಿಕಾರ, ಅಂತಸ್ತು ಇದ್ದರೂ ನೆಮ್ಮದಿಯ ಜೀವನ ಪಡೆಯಲು ಸಾಧ್ಯವಿಲ್ಲ. ನಮ್ಮ ಮಾತಿನಲ್ಲಿ ವಿನಯ, ವರ್ತನೆಯಲ್ಲಿ ಆಪ್ತತೆ, ಪ್ರೀತಿ-ವಿಶ್ವಾಸ ಇದ್ದಾಗ ಸರ್ವರೂ ಸ್ನೇಹ ಬೆಳೆಸುತ್ತಾರೆ. ಸ್ನೇಹ ತುಂಬಿದ ಬದುಕಿನಲ್ಲಿ ಸುಖ-ಶಾಂತಿ ಸದಾ ನೆಲೆಸಿರುತ್ತದೆ.
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ|
ಹಿತವಿರಲಿ ವಚನದಲಿ, ಋತವ ಬಿಡದಿರಲಿ||
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ|
ಎಂಬ ಕಗ್ಗದ ಸಾಲುಗಳಂತೆ, ನಮ್ಮ ಮುಖದಲ್ಲಿ ಸದಾ ಮಂದಹಾಸವಿರಬೇಕು, ಆದರೆ ಅದು ಅಟ್ಟಹಾಸದ ನಗುವಾಗಿರಬಾರದು. ಮಾತಿನಲ್ಲಿ ಹಿತವಿರಬೇಕು, ಆದರೆ ಅದು ಸತ್ಯವಾಗಿರಬೇಕು. ಸುಖದುಃಖಗಳ ಅನುಭವದಲ್ಲಿ ಒಂದು ಮಿತಿಯಿರಬೇಕು. ಅತಿಭೋಗದಲ್ಲಿ ಉಬ್ಬುವುದು, ಅತಿಸಂತಾಪದಲ್ಲಿ ಕುಗ್ಗುವುದು ಸರಿಯಲ್ಲ. ಎಲ್ಲಾ ಸಮಯ ಸಂದರ್ಭಗಳಲ್ಲೂ ಯಾವುದೂ ಅತಿಯಾದ ವರ್ತನೆಯಾಗದೆ ಹಿತಕರವಾದ ಮಧುರ ಬಾಂಧವ್ಯ ಬೆಸೆಯುವ ಬಾಳ್ವೆ ನಮ್ಮದಾಗಬೇಕು.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)