

‘ಶ್ರೀರಾಮ ಶ್ರೀರಾಮ’ ಎಂಬ ನಾಮ ಉಚ್ಚಾರದಿಂದ ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿದ ಫಲದ ಪುಣ್ಯ ದೊರೆಯುತ್ತದೆ. ಶ್ರೀರಾಮ ಪಾದುಕೆಯಲ್ಲಿ ವಿಶೇಷವಾದ ಪುಣ್ಯ ಸಂಚಯವಾಗಿದೆ. ಶ್ರೀರಾಮನ ಪಾದಸ್ಪರ್ಶವಾದರೆ ಮಹಾಪಾಪ ನಾಶವಾಗಿ ಶಾಪ ವಿಮೋಚನೆ ಆಗುತ್ತದೆ. ಇದಕ್ಕೆ ಉದಾಹರಣೆ ಅಹಲ್ಯೆ.
‘ರಾಮನಿಲ್ಲದ ಅಯೋಧ್ಯೆಯಲ್ಲಿ ನಾನು ಇರಲಾರೆ’ ಎಂದ ಭರತ. ಆಗ ವಸಿಷ್ಠರು ಆತನಿಗೆ ಸಲಹೆ ನೀಡಿ ಶ್ರೀರಾಮನನ್ನು ಭೇಟಿಯಾಗಿ ಆತನ ಪಾದುಕೆಯನ್ನು ತೆಗೆದುಕೊಂಡು ಬರುವಂತೆ ಹೇಳಿದರು. ಅದರಂತೆ ಭರತನು ಶ್ರೀರಾಮನನ್ನು ಭೇಟಿಯಾಗಿ ಅಯೋಧ್ಯೆಗೆ ಮರಳುವಂತೆ ದೈನ್ಯದಿಂದ ಬೇಡಿಕೊಂಡನು. ಆದರೆ ಶ್ರೀರಾಮನು ತಂದೆಯ ಆಜ್ಞೆಯಂತೆ 14 ವರ್ಷ ವನವಾಸ ಮುಗಿಸಿಯೇ ಅಯೋಧ್ಯೆಗೆ ಮರಳುವೆ; ಇದು ತನ್ನ ಅಚಲ ನಿರ್ಧಾರ ಎಂದು ತಿಳಿಸಿದ. ಆಗ ಭರತನು-‘ವನವಾಸ ಮುಗಿದ ಕೂಡಲೇ ರಾಜಧಾನಿಗೆ ಹಿಂತಿರುಗಬೇಕು. ನಿನ್ನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು ಕೇವಲ ನಿನ್ನ ಪ್ರತಿನಿಧಿಯಾಗಿ ರಾಜ್ಯಾಡಳಿತ ನಡೆಸುವೆ’ ಎಂದು ಹೇಳಿ ಶ್ರೀರಾಮನ ಪಾದುಕೆಗಳನ್ನು ಪಡೆದನು. ಅದರಂತೆ ರಾಜ್ಯಭಾರವನ್ನು ನಡೆಸಿದನು.
‘ರಾಮ’ ಎಂಬ ಎರಡಕ್ಷರದಲ್ಲಿ ಅಪಾರವಾದ ಶಕ್ತಿ ಇದೆ. ‘ಓಂ ನಮೋ ನಾರಾಯಣ’ ಎಂಬ ಅಷ್ಟಾಕ್ಷರಿ ಮಹಾಮಂತ್ರದಿಂದ ‘ರಾ’ ಅಕ್ಷರವನ್ನು, ‘ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರದಿಂದ ‘ಮ’ ಅಕ್ಷರವನ್ನು ತೆಗೆದುಕೊಂಡು ‘ರಾಮ’ ಎಂದು ವಸಿಷ್ಠ ಮಹರ್ಷಿಗಳು ನಾಮಕರಣ ಮಾಡಿದರು. ಶ್ರೀರಾಮಚಂದ್ರನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ಪುನರ್ವಸು ನಕ್ಷತ್ರದಲ್ಲಿ ಜನಿಸಿದನು.
ಅನಂತ ಸಂಸಾರ ಸಮುದ್ರತಾರ ನೌಕಾಯಿತಾಭ್ಯಂ ಗುರು ಭಕ್ತಿದಾಭ್ಯಾಮ್
ವೈರಾಗ್ಯ ಸಾಮ್ರಾಜ್ಯದ ಪೂಜನಾಭ್ಯಾಂ ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್
ಅರ್ಥ: ಸ್ವಯಂ ದಾಟಲು ಸಾಧ್ಯವಾದ ಜನನ-ಮರಣ ರೂಪವಾಗಿರುವ ಸಂಸಾರ ಸಾಗರವನ್ನು ದಾಟಿಸುವ ನೌಕೆಯಂತೆ ಇರುವ ಗುರುವಿನಲ್ಲಿ ಶ್ರದ್ಧಾ, ಭಕ್ತಿಗಳನ್ನು ಮೂಡಿಸುವ, ಪೂಜಿಸುವವರಿಗೆ ವಿವೇಕ, ವೈರಾಗ್ಯಗಳನ್ನು ದಯಪಾಲಿಸುವ ಶ್ರೀಗುರು ಪಾದುಕೆಗಳೆರಡಕ್ಕೆ ಮತ್ತೆ ಮತ್ತೆ ನಮಿಸುವೆ.
ಗುರುವು ಪಾದಗಳನ್ನು ಇಟ್ಟು ಅದರ ಮೇಲೆ ದೇಹದ ಭಾರವನ್ನು ಹೊರುತ್ತ, ರಕ್ಷಿಸುತ್ತ, ಹೆಜ್ಜೆ ಹೆಜ್ಜೆಗೆ ತಾಳ ಹಾಕುತ್ತ ದಾರಿ ಸವೆಸುವ ಸಾಧನವೇ ಗುರು ಪಾದುಕೆ. ಅದರ ಮಹತ್ವ ಮನಗಂಡು, ಜೀವನ ಧನ್ಯವಾಗಿಸಿಕೊಳ್ಳೋಣ.
| ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.
(ಲೇಖಕರು ಆಧ್ಯಾತ್ಮಿಕ ಚಿಂತಕರು)