ಕಗ್ಗದ ಬೆಳಕು; ಹಿರಿತನವೆನ್ನುವುದು ವಯಸ್ಸಿಗಲ್ಲ, ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು

22
Published on
ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ|
ಹಸಿವನೊಂದುವನೆ ಹಿರಿಯನು? ನಲಿಯದಿಹನೆ?||
ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ|
ದೊಸೆದುನೋಳ್ಪನು ಜಾಣ-ಮಂಕುತಿಮ್ಮ||679||

ಮಕ್ಕಳು ಅವಲಕ್ಕಿಬೆಲ್ಲದ ರುಚಿಗೆ ಸಂಭ್ರಮಿಸುವುದನ್ನು ನೋಡಿದ ಹಿರಿಯ ವ್ಯಕ್ತಿಗೆ ಹಸಿವೆಯಾಗುತ್ತದೆಯೇನು? ಮುಗ್ಧ ಮಕ್ಕಳ ಸಂಭ್ರಮವನ್ನು ಕಂಡು ನಲಿಯುವುದಿಲ್ಲವೇ? ವಿಷಯಾಸಕ್ತಿಯಿಂದ ಕೂಡಿದ ಲೋಕವನ್ನು ಕಂಡು ಜಾಣನು ಅನಾಸಕ್ತಿಯನ್ನು ತೋರುತ್ತಾನೆ. ಆದರೂ ಅನಾದರವನ್ನು ತೋರದೆ, ಸಂತಸದಿಂದ ಬೆರೆಯುತ್ತಾನೆ ಎನ್ನುತ್ತದೆ ಈ ಕಗ್ಗ.

ಹೆಚ್ಚು ವಯಸ್ಸಾದವರನ್ನು ಹಿರಿಯರು ಎಂದು ಗುರುತಿಸುವುದು ರೂಢಿಗತ ಅಭ್ಯಾಸ. ಆದರೆ ಹಿರಿತನವೆನ್ನುವುದು ವಯಸ್ಸಿಗೆ ಸಂಬಂಧಿಸಿದುದಲ್ಲ, ವ್ಯಕ್ತಿತ್ವಕ್ಕೆ ಸಂಬಂಧಿಸಿದುದು. ಸಣ್ಣತನವಿಲ್ಲದ, ಉದಾರವಾಗಿ ಯೋಚಿಸಬಲ್ಲ, ಸಹನೆ, ಮಮತೆಗಳಿಂದ ಕೂಡಿದ ವ್ಯಕ್ತಿತ್ವವು ಎಳೆಯರಲ್ಲೂ ಇರಬಹುದು. ಪ್ರತಿಕ್ಷಣವೂ ಕೋಪಾವೇಶಗಳಿಂದ ಪ್ರತಿಕ್ರಿಯಿಸುವ, ಹೃದಯ ವೈಶಾಲ್ಯವಿಲ್ಲದ ಸಣ್ಣತನವು ಹಿರಿಯ ವ್ಯಕ್ತಿಗಳಲ್ಲಿ ಇರುವುದುಂಟು. ಇಂಥವರು ವಯಸ್ಸಿನಲ್ಲಷ್ಟೇ ವೃದ್ಧರಾಗಿರುತ್ತಾರೆ, ಜ್ಞಾನದಲ್ಲಿ ವೃದ್ಧರಾಗಿರುವುದಿಲ್ಲ.

ಅನುಭವ ಮತ್ತು ಅರಿವಿನಿಂದ ಮಾಗಿದ ಹಿರಿತನವು ಕಿರಿಯರನ್ನು ಸಂಯಮದಿಂದ ತಿದ್ದಿ ಮುನ್ನಡೆಸುತ್ತದೆ. ಪುಟ್ಟ ಮಗುವಿನ ತೊದಲು ನುಡಿಗೆ, ಮುಗ್ಧ ಪ್ರಶ್ನೆಗಳಿಗೆ ಹಿರಿತನವುಳ್ಳ ವ್ಯಕ್ತಿಯು ಸಿಟ್ಟುಗೊಳ್ಳುವುದಿಲ್ಲ. ಮಗುವಿನ ಮುಗ್ಧ ಆಟವನ್ನು ನೋಡುತ್ತಾ ತಾನೂ ಮಗುವಾಗುತ್ತಾನೆ, ತಪ್ಪೆಸಗಿದಾಗ ಬುದ್ಧಿಹೇಳಿ ತಿದ್ದುತ್ತಾನೆ. ಅವಲಕ್ಕಿ ಮತ್ತು ಬೆಲ್ಲವನ್ನು ಕಲಸಿ ತಿನ್ನುವ ಸಂಭ್ರಮದಲ್ಲಿರುವ ಮಕ್ಕಳನ್ನು ದೂರದಿಂದ ಗಮನಿಸುವ ಹಿರಿಯ ವ್ಯಕ್ತಿಯು ತನಗೂ ಆ ಸಿಹಿ ಬೇಕೆಂದು ಆಸೆ ಪಡುವುದಿಲ್ಲ, ತನಗಿಲ್ಲವಲ್ಲ ಎಂದು ಕರುಬುವುದೂ ಇಲ್ಲ. ತಿನ್ನುವ ಅವಸರದಲ್ಲಿರುವ ಮುಗ್ದ ಮಕ್ಕಳ ಸಹಜ ನಡೆ, ಹಠ, ನಗು, ಅಳುಗಳನ್ನು ಕಂಡು ಮುದಗೊಳ್ಳುತ್ತಾನೆ. ಅವರಿಂದ ತಪ್ಪುಗಳಾಗುತ್ತಿದ್ದರೆ ಬುದ್ಧಿ ಹೇಳಿ ಅವರ ಪಾಡಿಗವರು ಸಂಭ್ರಮಿಸಲು ಬಿಟ್ಟು ಬಿಡುತ್ತಾನೆ.

ವಿದ್ಯಾರ್ಥಿಗಳು ವಯೋಸಹಜವಾಗಿ ಮಾಡುವ ತಪ್ಪುಗಳಿಗೆ ನಿಜವಾದ ಶಿಕ್ಷಕನು ಕ್ರೋಧಿತನಾಗುವುದಿಲ್ಲ. ಪುಟ್ಟ ತಲೆಯೊಳಗೆ ಮೂಡುವ ಆಲೋಚನೆಗಳಿಗೆ, ಭಾವಾವೇಶದ ಮಾತುಗಳಿಗೆ, ಬಾಲಿಶ ನಡವಳಿಕೆಗೆ ನಸುನಗುತ್ತಾನೆ. ಅವರ ಸಮಸ್ಯೆಗಳು ಶಿಕ್ಷಕನಿಗೆ ಸಾಮಾನ್ಯವೆನ್ನಿಸಿದರೂ, ಅದನ್ನು ತಳ್ಳಿ ಹಾಕದೆ ಪರಿಹರಿಸುವ ಪ್ರೌಢಿಮೆಯನ್ನು ಮೆರೆಯುತ್ತಾನೆ. ಸರಿ-ತಪ್ಪುಗಳನ್ನು ತಿಳಿಸಿ ಹೇಳಿ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕನಾಗುತ್ತಾನೆ. ವಿದ್ಯಾರ್ಥಿಯು ಉದ್ಧಟತನವನ್ನು ತೋರಿದಾಗ ತಾನೂ ಆತನಂತೆಯೇ ಬಾಲಿಶವಾಗಿ ನಡೆದುಕೊಳ್ಳದೆ, ಸಂಯಮ ಮತ್ತು ಜಾಣ್ಮೆಯಿಂದ ವ್ಯವಹರಿಸಿ ಆದರ್ಶಪ್ರಾಯನಾಗುತ್ತಾನೆ.

ಹೀಗೆಯೇ ಲೋಕ ಜೀವಿತದಲ್ಲಿ ಜನರು ಭೋಗ-ಭಾಗ್ಯವನ್ನು ಬಯಸುವುದು, ಅದನ್ನು ಪಡೆಯುವುದೇ ನಿಜವಾದ ಸಾಧನೆ ಎಂದು ಭಾವಿಸಿರುವುದು ಸುಳ್ಳಲ್ಲ. ಸರಿ-ತಪ್ಪುಗಳನ್ನೂ ವಿವೇಚಿಸದೆ ಕ್ಷಣಿಕ ಸಂತೋಷಗಳನ್ನು ಬೆನ್ನತ್ತುವ ಸಾಮಾನ್ಯ ಜನರಲ್ಲಿ ಆಸೆಯು ಇಂಧನದಂತೆ ಬಳಕೆಯಾಗುತ್ತದೆ. ಹಾಗಾಗಿ ಸಾಮಾನ್ಯರಿಗೆ ಶರೀರ ಮತ್ತು ಲೌಕಿಕ ಜೀವನದ ಪ್ರಗತಿಯೆ ಮುಖ್ಯ. ಇವರು ದೇವರನ್ನು ನಂಬುವುದು ಕೂಡ ಆಸ್ತಿ-ಪಾಸ್ತಿ, ಕೀರ್ತಿ, ಅಧಿಕಾರವೇ ಮೊದಲಾದ ಬಹಿರಂಗದ ಯಶಸ್ಸನ್ನು ಪಡೆಯಲೋಸುಗವೇ ಹೊರತು ಆತ್ಮೋನ್ನತಿಯನ್ನು ಬಯಸಿ ಅಲ್ಲ. ಕ್ಷುಲ್ಲಕ ಆಸೆಗಳ ಈಡೇರಿಕೆಗೆ ಮತ್ತು ಬದುಕಿಗೊಂದು ನಂಬಿಕೆಗೆ ಜನರಿಗೆ ದೇವರು ಬೇಕು. ಹೀಗೆ ಕಾಮ, ಕ್ರೋಧ, ಮೋಹವೇ ಮೊದಲಾದ ಭಾವವಿಕಾರಗಳಿಗೆ ಒಳಗಾಗುತ್ತಾ, ಬದುಕಿನ ಜಂಜಾಟದಲ್ಲಿ ಮುಳುಗೇಳುವ ವಿಷಯಾಸಕ್ತರನ್ನು ನಿಜವಾದ ಜ್ಞಾನಿಯು ತುಚ್ಛವಾಗಿ ಕಾಣುವುದಿಲ್ಲ. ಭೋಗ ಜೀವಿತದಲ್ಲಿ ಕಳೆದು ಹೋದ ಅಜ್ಞಾನಿಗಳಿಗೆ ಅನಂತ ಶಕ್ತಿಯ ಪರಿಚಯವಿರುವುದಿಲ್ಲ, ತಿಳಿದುಕೊಳ್ಳುವ ಸಾಮರ್ಥ್ಯವೂ ಇರುವುದಿಲ್ಲ. ಈ ಬಗೆಯ ಮಾನಿಸರನ್ನು ಕಂಡು ಅಸಹ್ಯಪಟ್ಟುಕೊಳ್ಳದೆ, ನಿಂದಿಸದೆ ಕರುಣೆಯಿಂದ ಕಾಣಬಲ್ಲ ವ್ಯಕ್ತಿಯು ನಿಜವಾದ ಜ್ಞಾನಿಯಾಗಿರುತ್ತಾನೆ.

ವಿಷಯಾಸಕ್ತಿಯಲ್ಲಿ ಮೈಮರೆತವರನ್ನು ಕಂಡು ಆತನು ವಿಚಲಿತನಾಗುವುದಿಲ್ಲ, ಪ್ರಭಾವಕ್ಕೆ ಒಳಗಾಗಿ ತಾನೂ ಭೋಗಾಸಕ್ತವಾಗುವುದಿಲ್ಲ. ಮನಸ್ಸಿನ ದೃಢತೆಯನ್ನು ಕಳೆದುಕೊಳ್ಳದೆ, ಪ್ರತಿಕ್ಷಣದಲ್ಲೂ ಆತ್ಮೋನ್ನತಿಗಾಗಿ ಪ್ರಯತ್ನಿಸುತ್ತಾನೆ. ಇದಕ್ಕಾಗಿ ಸಾಮಾನ್ಯರ ಬದುಕಿನ ನೋವು-ನಲಿವುಗಳಿಗೆ ಸ್ಪಂದಿಸುವುದನ್ನು, ಸ್ಥಿತಪ್ರಜ್ಞನಾಗಿರುವುದನ್ನು ತಪಸ್ಸಿನಂತೆ ಪರಿಪಾಲಿಸುತ್ತಾನೆ. ಜೊತೆಗೆ ಲೋಕದ ಕೆಡುಕುಗಳನ್ನು ತಿದ್ದುವ, ಸತ್ಕಾರ್ಯಗಳನ್ನು ಮಾಡಲು ಪ್ರೇರೇಪಿಸುವ ಮೂಲಕ ಜನಸೇವೆಯನ್ನೂ ಮಾಡುತ್ತಾನೆ. ಎಲ್ಲರೊಳಗೊಂದಾಗಿ ಬದುಕುತ್ತಿದ್ದರೂ ಯಾವುದನ್ನೂಅತಿಯಾಗಿ ಹಚ್ಚಿಕೊಳ್ಳದೆ ನಿರ್ವೇಹಿಯಾಗಿ, ನಿಸ್ಸಂಗನಾಗಿ ಪರಮಹಂಸನಾಗುತ್ತಾನೆ. ಸಾಮಾನ್ಯರಿಗೆ ಮಾರ್ಗದರ್ಶಕನಾಗುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net