

ಆಂಧ್ರಪ್ರದೇಶ ಹೈಕೋರ್ಟ್ ಅಲ್ಲಿನ ಸರ್ಕಾರ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತೆರಯಲು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ್ದು ಸ್ವಾಗತಾರ್ಹ.
ಕರ್ನಾಟಕದಲ್ಲಿ ಕಳೆದ ವರ್ಷ ಹಿಂದಿನ ಸರ್ಕಾರ ಒಂದು ಸಾವಿರ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿದ್ದು, ಅದನ್ನು ಈಗಿನ ಸರ್ಕಾರ ರದ್ದು ಮಾಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿ, ಮತ್ತೆ ಎಂಟು ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಈ ವರ್ಷ ಹೊಸದಾಗಿ ಇಂಗ್ಲಿಷ್ ಮಾಧ್ಯಮ ತೆರೆಯುವುದಾಗಿ ಘೊಷಿಸಿದೆ. ಆಂಧ್ರಪ್ರದೇಶ ಹೈಕೋರ್ಟಿನ ತೀರ್ಪಿನಲ್ಲಿ, ‘ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಪ್ರಾರಂಭವು ಕಡ್ಡಾಯ ಶಿಕ್ಷಣ ಮಸೂದೆ ಮತ್ತು ಹೊಸ ಶಿಕ್ಷಣ ನೀತಿಗೆ ವಿರುದ್ಧವಾಗಿದೆ’ ಎಂದು ಹೇಳಿರುವುದನ್ನು ನಮ್ಮ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಪೋಷಕರ ಸಂಘಗಳು ಶಿಕ್ಷಣ ಮಾಧ್ಯಮ ಯಾವುದಿರಬೇಕು ಎಂಬುದನ್ನು ನಿರ್ಧರಿಸಲಾಗದು ಎಂದು ಹೇಳಿ, ಸರ್ಕಾರಿ ಶಾಲೆಗಳಲ್ಲಿ ಬಡವರಿಗೆ ಇಂಗ್ಲಿಷ್ ಮಾಧ್ಯಮ ದೊರೆತಂತಾಗುತ್ತದೆ ಎಂಬ ವಾದವನ್ನೂ ನ್ಯಾಯಾಲಯ ತಳ್ಳಿಹಾಕಿದೆ. ಶಿಕ್ಷಣ ಎಂದರೆ ಮಗುವಿನ ವ್ಯಕ್ತಿತ್ವವನ್ನು ಬೆಳೆಸಬೇಕು, ಅದು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ ಎಂಬ ತಜ್ಞರ ವಾದವನ್ನು ಎತ್ತಿ ಹಿಡಿದಿದೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಮಾತೃಭಾಷೆ/ಪ್ರಾದೇಶಿಕ ಭಾಷೆ ಶಿಕ್ಷಣ ಮಾಧ್ಯಮವಾಗಬೇಕು ಎಂದು ಹೇಳಿದೆ. ಆದರೆ ಕರ್ನಾಟಕದ ಬಿಜೆಪಿ ಸರ್ಕಾರ ಅದಕ್ಕೆ ತಿಲಾಂಜಲಿ ನೀಡಲು ಹೊರಟಿದೆ. ಕಡ್ಡಾಯ ಶಿಕ್ಷಣ ಮಸೂದೆಯಲ್ಲಿರುವ ಸಾಧ್ಯವಾದಷ್ಟೂ (ಚಠ ್ಛ್ಟ ಚಠ ಟಟಠಠಜಿಚ್ಝಿಛಿ) ಎನ್ನುವ ಪದಪ್ರಯೋಗದ ಬಗ್ಗೆ ಸ್ಪಷ್ಟನೆ ನೀಡಿರುವ ಹೈಕೋರ್ಟ್ ಅದು ಮುಕ್ತ ಅವಕಾಶವಾಗಿರದೆ ಅಪರೂಪದ ವಿವೇಚನೆ ಆಗಿರುತ್ತದೆ ಎಂದು ತಿಳಿಸಿದೆ. ಆಂಧ್ರದ ತೀರ್ಪು ಕರ್ನಾಟಕಕ್ಕೆ ಬಾಧ್ಯವಲ್ಲದಿದ್ದರೂ ತೀರ್ಪಿನ ತರ್ಕವನ್ನು ಸರಿಯಾಗಿ ಗ್ರಹಿಸಿ ನಮ್ಮ ರಾಜ್ಯ ಸರ್ಕಾರ ಕೂಡಲೇ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ರದ್ದುಗೊಳಿಸಿ, ಒಂದು ಭಾಷೆಯಾಗಿ ಇಂಗ್ಲಿಷನ್ನು ಚೆನ್ನಾಗಿ ಕಲಿಸಬೇಕು. ಕಳೆದ ವರ್ಷ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭವಾದಾಗ ಕನ್ನಡ ಮಾಧ್ಯಮದ ತರಗತಿಗಳಿಗೆ ದಾಖಲಾತಿ ಒಂದಂಕಿಗೆ, ಕೆಲವೆಡೆ ಸೊನ್ನೆಗೆ ಇಳಿದಿದೆ. ಹೀಗೆ ಪ್ರತಿವರ್ಷ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳು ವೃದ್ಧಿಸುತ್ತ ಹೋದರೆ ಇಂಗ್ಲಿಷ್ ಮಾಧ್ಯಮವೆಂಬ(ಭಾಷೆಯಲ್ಲ) ಕರೊನ ಕನ್ನಡದ ಕತ್ತು ಹಿಸುಕಲಿದೆ. ಆದ್ದರಿಂದ ಕನ್ನಡ(ಜೀವ)ವನ್ನು ಉಳಿಸಲು ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದ ಬಾಗಿಲು ಮುಚ್ಚುವುದು ಅಗತ್ಯ.
|ಮ. ಗು. ಸದಾನಂದಯ್ಯ, ಸ.ರ.ಸುದರ್ಶನ, ಕನ್ನಡ ಕ್ರಿಯಾಸಮಿತಿ, ಮೈಸೂರು