ಡೆಲ್ಲಿ ಮೇಲ್​ ಅಂಕಣ: ಹಿರಿಯ ತಲೆಗಳ ಪ್ರತಿಷ್ಠೆಗೆ ಕಾಂಗ್ರೆಸ್ ಬಲಿಯಾಗುತ್ತಿದೆಯೇ?

Madya Pradesh Congress
Published on

2014ರ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಹೀನಾಯ ನಿರ್ವಹಣೆ ತೋರಿದ್ದ ವೇಳೆ ಕಮಲ್​ನಾಥ್ ‘ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದಿದ್ದರು. ಈ ಸಂದರ್ಭವನ್ನೇ ಬಳಸಿಕೊಂಡು ಜ್ಯೋತಿರಾದಿತ್ಯಗೆ ಪಕ್ಷದ ಜವಾಬ್ದಾರಿ ನೀಡುವ ಅವಕಾಶ ಹೈಕಮಾಂಡ್ ಮುಂದಿತ್ತು. ಆದರೆ, ರಾಹುಲ್ ಈ ದಿಶೆಯಲ್ಲಿ ಯೋಚಿಸಲೇ ಇಲ್ಲ.

ಮಧ್ಯಪ್ರದೇಶದಲ್ಲಿ 2004ರಿಂದ 3 ಬಾರಿ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ವಿರುದ್ಧ 2018ರ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಬಹುಮತ ಗಳಿಸಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತು. ಈ ಗೆಲುವಿಗೆ ಹಿರಿಯ ಕಮಲ್​ನಾಥ್​ರಂತೆ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾರದ್ದು ಗಮನಾರ್ಹ ಕೊಡುಗೆಯಿತ್ತು. ಆದರೆ ಚುನಾವಣಾ ಅಖಾಡದಲ್ಲಿ ಮೋದಿ-ಶಿವರಾಜ್ ಜುಗಲ್​ಬಂದಿ ನಡುವೆಯೂ ಗೆದ್ದಿದ್ದೇವೆ ಎಂಬ ಸಂಭ್ರಮ ಜ್ಯೋತಿರಾದಿತ್ಯರ ಮುಖದಲ್ಲಿ ಕಂಡಿರಲಿಲ್ಲ. ಪಕ್ಷದ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರಾಗಿ, ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಿಂಧಿಯಾಗೆ, ಸೋನಿಯಾ ಗಾಂಧಿ ಆಪ್ತವರ್ಗದಲ್ಲಿ ಗುರುತಿಸಿಕೊಂಡ ಕಮಲ್​ನಾಥ್​ರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದು ಪಥ್ಯವೆನಿಸಿರಲಿಲ್ಲ. ಸರ್ಕಾರ ರಚನೆಯಾದ ದಿನದಿಂದಲೇ ಸಿಂಧಿಯಾ ಒಳ ಮನಸ್ಸು ಕುದಿಯಲಾರಂಭಿಸಿತ್ತು.

ಕಮಲ್​ನಾಥ್​ಗೆ ಸಿಎಂ ಸ್ಥಾನ ನೀಡಿದ್ದನ್ನು ಒಲ್ಲದ ಮನಸ್ಸಿನಿಂದ ಒಪ್ಪಿದ್ದ ಸಿಂಧಿಯಾಗೆ ಹಿರಿಯರ ಪ್ರಭಾವಳಿಯಲ್ಲಿ ಅರ್ಹತೆಗೆ ತಕ್ಕ ಸ್ಥಾನಮಾನ ಸಿಕ್ಕಿರಲಿಲ್ಲ. ಹೀಗಾಗಿ, ರಾಜ್ಯಾಧ್ಯಕ್ಷ ಹುದ್ದೆ ನೀಡಲೇಬೇಕು ಎಂದು ಪಟ್ಟುಹಿಡಿದರು. ಕಮಲ್​ನಾಥ್ ಸರ್ಕಾರದಲ್ಲಿದ್ದ ಸಿಂಧಿಯಾ ಬೆಂಬಲಿಗ ಸಚಿವರು, ಶಾಸಕರು ಕೂಡ ‘ಸಿಂಧಿಯಾರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ’ ಎಂದು ಭೋಪಾಲ್​ನಿಂದ ದೆಹಲಿಗೆ ಸಂದೇಶ ರವಾನಿಸುತ್ತಲೇ ಇದ್ದರು. ಆದರೆ, ದೆಹಲಿಯ ಅಕ್ಬರ್ 24 ರಸ್ತೆ ಸುತ್ತಮುತ್ತ ಕಮಲ್​ನಾಥ್ ಪ್ರಭಾವಳಿಯೇ ಜೋರಾಗಿದ್ದರಿಂದ ಸಿಂಧಿಯಾ ನಿರೀಕ್ಷಿಸಿದ್ದ ಹುದ್ದೆ ದಕ್ಕಲಿಲ್ಲ. ರಾಹುಲ್ ಗಾಂಧಿಗೆ ಆಪ್ತರಾಗಿದ್ದರೂ ಸಿಂಧಿಯಾಗೆ ಮಾನ್ಯತೆ ಸಿಗಲಿಲ್ಲ. ಇದು ರಾಹುಲ್ ಗಾಂಧಿ ವೈಫಲ್ಯವೋ ಅಥವಾ ಕಮಲ್​ನಾಥ್ ಪ್ರಭಾವದ ಮುಂದೆ ರಾಹುಲ್ ಮಾತು ನಡೆಯಲಿಲ್ಲವೋ ಗೊತ್ತಿಲ್ಲ. ಆದರೆ, ಸಂಸತ್ತಿನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದ್ದ, ಕೇಂದ್ರ ಸಚಿವರಾಗಿ ಅನುಭವ ಗಳಿಸಿದ್ದ ಮತ್ತು ಭವಿಷ್ಯದ ನಾಯಕ ಎಂದು ಭರವಸೆ ಮೂಡಿಸಿದ್ದ ಸಿಂಧಿಯಾರನ್ನು ಕಾಂಗ್ರೆಸ್ ಕಳೆದುಕೊಂಡಿದೆ. ‘ಏನೇ ಆದರೂ ಅಧಿಕಾರ ಬಿಟ್ಟುಕೊಡಲಾರೆವು’ ಎಂಬ ಹಿರಿತಲೆಗಳ ಹಠ ಮತ್ತು ಪ್ರತಿಷ್ಠೆಯ ರಾಜಕಾರಣಕ್ಕೆ ಕಾಂಗ್ರೆಸ್ ನಲಗುತ್ತಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸಿಂಧಿಯಾ ಗುನಾ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಸೋತಿರಬಹುದು. ಹಾಗಂತ ರಾಜ್ಯಾದ್ಯಂತ ಅವರನ್ನು ಬೆಂಬಲಿಸುವ ಯುವ ಕಾರ್ಯಕರ್ತ ಪಡೆ ದೊಡ್ಡ ಸಂಖ್ಯೆಯಲ್ಲಿದೆ. ಮಧ್ಯಪ್ರದೇಶದಿಂದ 9 ಬಾರಿ ಲೋಕಸಭೆ ಸಂಸದರಾಗಿ, ಹಲವು ಬಾರಿ ಕೇಂದ್ರ ಸಚಿವರಾಗಿ ಮತ್ತು ಮುಖ್ಯವಾಗಿ 2018ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ನಂತರವೂ ಕಮಲ್​ನಾಥ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಜ್ಯೋತಿರಾದಿತ್ಯ ಸಿಂಧಿಯಾಗೆ ಸಿಗದಂತೆ ನೋಡಿಕೊಂಡರು. ಈ ಮೂಲಕ ಮಧ್ಯಪ್ರದೇಶದಲ್ಲಿ ಪಕ್ಷದ ಭವಿಷ್ಯವನ್ನೇ ಬಲಿಕೊಟ್ಟಿದ್ದಾರೆ ಎಂಬ ಆಕ್ರೋಶದ ದನಿ ಈಗ ಕಾಂಗ್ರೆಸ್ ನಡುಮನೆಯಲ್ಲೇ ಕೇಳಿಬಂದಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಹೀನಾಯ ನಿರ್ವಹಣೆ ತೋರಿದ್ದ ವೇಳೆ ಕಮಲ್​ನಾಥ್ ‘ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದಿದ್ದರು. ಈ ಸಂದರ್ಭವನ್ನೇ ಬಳಸಿಕೊಂಡು ಜ್ಯೋತಿರಾದಿತ್ಯಗೆ ಪಕ್ಷದ ಜವಾಬ್ದಾರಿ ನೀಡುವ ಅವಕಾಶ ಹೈಕಮಾಂಡ್ ಮುಂದಿತ್ತು. ಆದರೆ, ರಾಹುಲ್ ಈ ದಿಶೆಯಲ್ಲಿ ಯೋಚಿಸಲೇ ಇಲ್ಲ. ವಾಸ್ತವದಲ್ಲಿ ಕಮಲ್​ನಾಥ್​ಗೂ ಸಿಂಧಿಯಾ ವಾಪಸಾತಿ ಬೇಕಿರಲಿಲ್ಲ. ಐದು ವರ್ಷಗಳ ಕಾಲ ಸಂಸತ್ತಿನಲ್ಲಿ ರಾಹುಲ್ ಪಕ್ಕದಲ್ಲೇ ಕುಳಿತಿರುತ್ತಿದ್ದ ಸಿಂಧಿಯಾಗೆ ತಮ್ಮ ವಾಕ್ಚಾತುರ್ಯದ ಮೂಲಕ ಪಕ್ಷವನ್ನು ಸಮರ್ಥಿಸಿ, ಬಿಜೆಪಿಯನ್ನು ಮೂಲೆಗುಂಪು ಮಾಡುವ ಸಾಮರ್ಥ್ಯವಿತ್ತಾದರೂ, ಇವರು ರಾಹುಲ್ ಗಾಂಧಿಯನ್ನು ಮೀರಿ ಬೆಳೆಯಬಹುದು ಎಂಬ ಆತಂಕ ಗಾಂಧಿಪರಿವಾರಕ್ಕೆ ನಿಷ್ಠರಾಗಿರುವ ಹಿರಿಯ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಲೇ ಇತ್ತು. ವರ್ಚಸ್ಸು, ಜ್ಞಾನ, ವಾಕ್ಚಾತುರ್ಯದಲ್ಲಿ ರಾಹುಲ್ ಮತ್ತು ಸಿಂಧಿಯಾ ನಡುವೆ ಯಾರು ಶ್ರೇಷ್ಠ ಎಂದು ಕಾಂಗ್ರೆಸ್ಸಿಗರನ್ನು ಪಕ್ಕಕ್ಕೆ ಕರೆದು ಕೇಳಿದರೆ, ‘ಸಿಂಧಿಯಾ ಎಂದು ಪ್ರತ್ಯೇಕವಾಗಿ ಹೇಳಬೇಕೆ?’ ಎಂದು ನಗುತ್ತಾರೆ.

ಮಾರ್ಚ್ 26ಕ್ಕೆ ಮಧ್ಯಪ್ರದೇಶದ ಮೂರು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 114 ಶಾಸಕರ ಬಲವುಳ್ಳ ಕಾಂಗ್ರೆಸ್ ಇಬ್ಬರು ಪಕ್ಷೇತರರ ಬೆಂಬಲ ಗಳಿಸಿ ಮೂವರಲ್ಲಿ ಇಬ್ಬರನ್ನು ಸಂಸತ್ತಿನ ಮೇಲ್ಮನೆಗೆ ಕಳುಹಿಸಿಕೊಡಬಹುದಿತ್ತು. ಅಲ್ಲಿಯೂ ಕಮಲ್​ನಾಥ್ ಮತ್ತು ಹಿರಿಯ ಕಾಂಗ್ರೆಸ್ಸಿಗರ ಚೌಕಾಶಿ ರಾಜಕಾರಣಕ್ಕೆ ಸಿಂಧಿಯಾರನ್ನು ಹರಕೆ ಕುರಿ ಮಾಡುವ ಯತ್ನ ನಡೆಯಿತು. ದಿಗ್ವಿಜಯ ಸಿಂಗ್​ರನ್ನು ಪ್ರಥಮ ಆದ್ಯತೆ ಅಭ್ಯರ್ಥಿಯನ್ನಾಗಿ ರಾಜ್ಯಸಭೆಗೆ ಕಳಿಸಲು ಕಮಲ್​ನಾಥ್ ಶಿಫಾರಸು ಮಾಡಿದ್ದರು. ಹೈಕಮಾಂಡ್ ಮತ್ತು ಕಮಲ್​ನಾಥ್ ಗುಂಪಿನ ನಿರ್ಲಕ್ಷ್ಯದಿಂದ ಹತಾಶರಾಗಿದ್ದ ಸಿಂಧಿಯಾ, ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್​ನ ಆರಂಭಕ್ಕೆ ಕಾಲ ಪಕ್ವವಾಗಿದೆ ಎಂಬ ತೀರ್ವನಕ್ಕೆ ಬಂದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳಿಸಿದ ಮೋದಿ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದ ಸಿಂಧಿಯಾ ಭವಿಷ್ಯದ ನಡೆಯ ಬಗ್ಗೆ ಸುಳಿವು ನೀಡಿದ್ದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ; 2019ರ ಜನವರಿ ತಿಂಗಳಲ್ಲಿ ಶಿವರಾಜ್ ಸಿಂಗ್ ಚೌಹಾಣ್​ರೊಂದಿಗೆ ಸಿಂಧಿಯಾ ಒಂದು ಗಂಟೆ ಸಭೆ ನಡೆಸಿದ್ದರು. ಸಹಜವಾಗಿಯೇ ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಅವರನ್ನು ಸಮಾಧಾನ ಪಡಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಲಿಲ್ಲ.

ಕಮಲ್​ನಾಥ್​ರಂತೂ ‘ಹೋದರೆ ಹೋಗಲಿ ಬಿಡಿ’ ಎಂಬ ಧೋರಣೆ ಪ್ರದರ್ಶಿಸಿದರು. ಅದೇ ವರ್ಷದ ನವೆಂಬರ್​ನಲ್ಲಿ ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಪುಟದಲ್ಲಿ ಕಾಂಗ್ರೆಸ್ ನೀಡಿದ್ದ ಹುದ್ದೆಗಳ ವಿವರಣೆಯನ್ನು ಅಳಿಸಿ ಹಾಕಿದ್ದ ಸಿಂಧಿಯಾ, ತಾವು ಜನಸೇವಕ ಮತ್ತು ಕ್ರಿಕೆಟ್ ಅಭಿಮಾನಿ ಎಂದಷ್ಟೇ ಬರೆದುಕೊಂಡಿದ್ದರು. ಇವೆಲ್ಲವೂ ಕಾಂಗ್ರೆಸ್​ನಲ್ಲಿ ಸಿಂಧಿಯಾ ಖುಷಿಯಾಗಿಲ್ಲ ಎಂಬುದನ್ನೇ ಪ್ರತಿಬಿಂಬಿಸಿದ್ದವು. ಆದರೆ, ಹಿರಿತಲೆಗಳು ಮಾತ್ರ ಸಿಂಧಿಯಾರತ್ತ ಗಮನ ಕೊಡಲಿಲ್ಲ. ಸಿಂಧಿಯಾರನ್ನು ಕಡೆಗಣಿಸಿದ ಕಮಲ್​ನಾಥ್ ಪಕ್ಷದ ಭವಿಷ್ಯದ ಬಗ್ಗೆ ಯೋಚಿಸಿದರೇ? ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದ್ದರೆ ಪಕ್ಷದಲ್ಲಿ ತಮ್ಮ ಮಾತು ನಡೆಯದು ಎಂಬ ಭಯ ಅವರಲ್ಲಿತ್ತೆ? 75 ತುಂಬಿರುವ ಕಮಲ್​ನಾಥ್ ರನ್ನು ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಪ್ಪಿಕೊಳ್ಳಿ ಎಂದು ಮನವೊಲಿಸುವಲ್ಲಿ ಸೋನಿಯಾ ಗಾಂಧಿ ವಿಫಲರಾದರೆ? ಸಿಂಧಿಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು 2023ರ ಈ ಅವಧಿಯುದ್ದಕ್ಕೂ ಕಮಲ್​ನಾಥ್ ಸಿಎಂ ಆಗಿ ಮುಂದುವರಿಯಬಹುದಿತ್ತು. ಆದರೆ, ಹಾಗಾಗಲಿಲ್ಲ. ಪ್ರತಿಷ್ಠೆ-ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ಬಲಿಯಾಗಿದೆ ಅಷ್ಟೇ.

ಹಾಗೆ ನೋಡಿದರೆ, ಸಿಂಧಿಯಾರಂಥ ಪ್ರತಿಭೆಗಳನ್ನು ಪಕ್ಷದಲ್ಲಿ ಉಳಿಸಿ, ಬೆಳೆಸುವ ಇರಾದೆ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಯವರಲ್ಲಿ ಇಲ್ಲವೆಂದೇನಲ್ಲ. ಆದರೆ, ಅವರ ಸುತ್ತಮುತ್ತ ಗಿರಕಿ ಹೊಡೆಯುವ ಕೆಲ ಹಿರಿಯ ಮುಖಂಡರು, ಪಕ್ಷದಲ್ಲಿ ತಾವು ಪ್ರಸ್ತುತತೆ ಕಳೆದುಕೊಳ್ಳಬಹುದೇನೋ ಎಂಬ ಆತಂಕದಿಂದ ಹೊಸ ನಾಯಕರನ್ನು ಬೆಳೆಸಲು ಬಿಡುತ್ತಿಲ್ಲ. ಬಹುಶಃ ಇದೇ ಕಾರಣಕ್ಕೇನೋ ದೆಹಲಿಗೆ ಬರುವ ವಿವಿಧ ರಾಜ್ಯಗಳ ಪಕ್ಷದ ಮುಖಂಡರು, ಕಾರ್ಯಕರ್ತರು ಅಹ್ಮದ್ ಪಟೇಲ್, ಕಪಿಲ್ ಸಿಬಲ್, ಪಿ. ಚಿದಂಬರಂ, ಮೋತಿಲಾಲ್ ವೋಹ್ರಾ, ಮಧುಸೂಧನ್ ಮಿಸ್ತ್ರಿ, ಗುಲಾಂ ನಬೀ ಆಜಾದ್ ಸೇರಿ ಅನೇಕರ ಬಗ್ಗೆ ಕಿಡಿ ಕಾರುತ್ತಲೇ ಇರುತ್ತಾರೆ.

ಮಧ್ಯಪ್ರದೇಶದ ಸ್ಥಿತಿಗೆ ಬಿಜೆಪಿಯ ’ಆಪರೇಷನ್ ಕಮಲ’ಕ್ಕಿಂತ ಕಾಂಗ್ರೆಸ್ಸಿನ ಆಂತರಿಕ ಕಿತ್ತಾಟವೇ ಕಾರಣ. ಕರ್ನಾಟಕ ಕಾಂಗ್ರೆಸ್ ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸುತ್ತಿದೆ. ರಾಜ್ಯಾಧ್ಯಕ್ಷರ ನೇಮಕಾತಿ ವಿಷಯದಲ್ಲಿ ಆಂತರಿಕ ಗುಂಪುಗಾರಿಕೆ ತಾರಕಕ್ಕೇರಿದ್ದು, ಸಿದ್ಧರಾಮಯ್ಯ-ಡಿ.ಕೆ. ಶಿವಕುಮಾರ್ ಬಣ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಹಲ್ಲಿಲ್ಲದ ಹೈಕಮಾಂಡ್​ಗೆ ಸಿದ್ಧರಾಮಯ್ಯರ ಮಾತು ಕೇಳುವುದೋ, ಶಿವಕುಮಾರ್​ರನ್ನು ಆಯ್ಕೆ ಮಾಡುವುದೋ ಗೊತ್ತಾಗುತ್ತಿಲ್ಲ. ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯರಿಗೆ ಕಳೆದ ರಾಜ್ಯ ಚುನಾವಣೆ ಗೆಲ್ಲಲಾಗಲಿಲ್ಲ. ದೋಸ್ತಿ ಸರ್ಕಾರ ಪತನಗೊಳ್ಳಲು ಸಿದ್ಧರಾಮಯ್ಯರೇ ಕಾರಣ ಎಂದು ಕಾಂಗ್ರೆಸ್ಸಿಗರೇ ಮಾತನಾಡಿಕೊಳ್ಳುತ್ತಾರೆ. ಮುಂದೆಂದೂ ಚುನಾವಣೆ ಸ್ಪರ್ಧಿಸುವುದಿಲ್ಲ ಎನ್ನುವ ಸಿದ್ಧರಾಮಯ್ಯ, ಶಿವಕುಮಾರ್​ಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಶತಪ್ರಯತ್ನ ಮಾಡಿದ್ದಾರೆ ಮತ್ತು ಡಿಕೆಶಿ ಅಧ್ಯಕ್ಷರಾದರೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕವಾಗಲೇಬೇಕು ಎಂದು ವರಿಷ್ಠರ ಬೆನ್ನು ಹತ್ತಿದ್ದಾರೆ. ಮತ್ತೊಂದೆಡೆ ಶಿವಕುಮಾರ್, ಸಿದ್ಧರಾಮಯ್ಯರನ್ನು ಮೂಲೆಗುಂಪು ಮಾಡಲು ಪೂರ್ಣ ಸ್ವಾತಂತ್ರ್ಯದ ಅಧ್ಯಕ್ಷ ಸ್ಥಾನ ಬೇಕೆಂದು ಒತ್ತಾಯಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರ, ಜನಪ್ರಿಯತೆ ಜತೆಗೆ ರಾಜಕೀಯ ಹಿಡಿತವನ್ನೂ ಕಳೆದುಕೊಂಡಿರುವ ಸೋನಿಯಾ ಗಾಂಧಿ-ರಾಹುಲ್ ಗಾಂಧಿಗೆ ಇವೆಲ್ಲವೂ ಉತ್ತರ ಸಿಗದ ಪ್ರಶ್ನೆಗಳಾಗಿಯೇ ಕಾಡುತ್ತಿವೆ.

(ಲೇಖಕರು ವಿಜಯವಾಣಿ ದೆಹಲಿ ಪ್ರತಿನಿಧಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net