

ವಿಶ್ವದ ಅತಿ ಪ್ರಾಚೀನ ನಾಗರಿಕತೆಯಾದ ನಮ್ಮ ಭಾರತ ದೇಶವು ಇಡೀ ಪ್ರಪಂಚಕ್ಕೆ ಎಲ್ಲಾ ರಂಗಗಳಲ್ಲಿ ಮುಂದಾಳತ್ವ ವಹಿಸಿ ವಿಶ್ವಗುರು ಸ್ಥಾನ ಅಲಂಕರಿಸುವ ಕಾಲ ಇದೀಗ ಸನ್ನಿಹಿತವಾಗಿದೆ. ಯುವಜನರನ್ನೇ ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿರುವುದರಿಂದ, ಭಾರತವು ಜನಸಂಖ್ಯಾ ಲಾಭಾಂಶದಲ್ಲಿ (ಛಛಿಞಟಜ್ಟಚಟಜಜ್ಚಿ ಛಜಿಡಜಿಛಛ್ಞಿಛ) ಇತರ ದೇಶಗಳಿಗಿಂತ ಮುಂದಿರುವುದು ನಮ್ಮ ಪ್ರಧಾನ ಶಕ್ತಿಯಾಗಿದೆ. ಆದರೆ, ತಮ್ಮ ಸಂಭಾವ್ಯ ಶಕ್ತಿ-ಸಾಮರ್ಥ್ಯಗಳನ್ನು ಕಾರ್ಯರೂಪಕ್ಕೆ ತಂದು, ಅವುಗಳ ಪೂರ್ಣ ಲಾಭ ಪಡೆಯಲು ನಮ್ಮ ಯುವ ಪೀಳಿಗೆ ಯೋಗ್ಯ ಜ್ಞಾನ-ಕೌಶಲಗಳೊಂದಿಗೆ ಸಜ್ಜಾಗಿದೆಯೇ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾಗಿದೆ!
2022 ರಲ್ಲಿ ನಡೆದ ಅಖಿಲ ಭಾರತ ಉನ್ನತ ಶಿಕ್ಷಣದ ಸಮೀಕ್ಷಾ ವರದಿಯು ದೇಶದ ಉನ್ನತ ಶಿಕ್ಷಣರಂಗದಲ್ಲಿನ ಕುಂದು-ಕೊರತೆಗಳನ್ನು ಎತ್ತಿ ತೋರುತ್ತಾ, ಅವಕಾಶಗಳ ಅಭಾವ ಮತ್ತು ದುಬಾರಿ ವೆಚ್ಚಗಳಿಂದಾಗಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವು ಬಹುಮಂದಿ ಯುವಜನರಿಗೆ, ಅದರಲ್ಲೂ ಯುವತಿಯರಿಗೆ ಅಲಭ್ಯವಾಗಿದೆಯೆಂದು ತಿಳಿಸಿದೆ. ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಪ್ರಮಾಣ ನಮ್ಮ ದೇಶ ಹಾಗೂ ಪ್ರಾಂತ್ಯಗಳಲ್ಲಿ ಕೇವಲ ಶೇಕಡಾ 27 ರಷ್ಟಿದೆ. ಇದರಿಂದ ಸ್ಪಷ್ಟವಾಗುವ ಒಂದು ವಿಷಯವೆಂದರೆ, ಶೇಕಡಾ 75 ರಷ್ಟು ವಿದ್ಯಾರ್ಥಿಗಳು 10 ಅಥವಾ 12 ನೇ ತರಗತಿಯ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿಲ್ಲ.
ಸ್ವಾತಂತ್ರ್ಯ ಶತಮಾನೋತ್ಸವದ ಸಮಯಕ್ಕೆ ಅಂದರೆ 2047-48 ರ ಹೊತ್ತಿಗೆ ನಮ್ಮ ದೇಶ ಆರ್ಥಿಕವಾಗಿ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದು, ಸುಮಾರು 26 ಟ್ರಿಲಿಯನ್ ಡಾಲರುಗಳಷ್ಟು ಜಿಡಿಪಿಯನ್ನು ಹೊಂದಿರಲಿದೆಯೆಂಬುದು ದೇಶದ ನಾಯಕರ ಮತ್ತು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಈ ಮಟ್ಟಕ್ಕೆ ಪ್ರಜೆಗಳ (ಈ ಪೈಕಿ ಶೇಕಡಾ 50 ರಷ್ಟು ಸ್ತ್ರೀಯರು) ಉತ್ಪಾದಕತೆಯನ್ನು ಏರಿಸಬೇಕಾದರೆ, ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಅವರ ಪೈಕಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ದೇಶದ ಉನ್ನತ ಶಿಕ್ಷಣ ರಂಗದ ನೀತಿ-ಧೋರಣೆಗಳಲ್ಲಿ ಗಣನೀಯ ಬದಲಾವಣೆಗಳನ್ನು ತರಬೇಕಾಗಿದೆ. ಎಲ್ಲಾ ಯುವಜನರಿಗೆ, ಅದರಲ್ಲೂ ಯುವತಿಯರಿಗೆ ಗುಣಮಟ್ಟದ ಉನ್ನತ ಶಿಕ್ಷಣಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಭಾರಿ ಪರಿಶ್ರಮ ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಗೂ ತನಗೆ ಅಭಿರುಚಿ ಮತ್ತು ಆಸಕ್ತಿಯಿರುವ ವಿಷಯ ಆಯ್ದುಕೊಳ್ಳುವ ಅವಕಾಶ ಕಲ್ಪಿಸಿ, ಅವರವರ ರಂಗಗಳಲ್ಲಿ ಪ್ರತಿಭೆಯ ಪೂರ್ಣ ವಿಕಸನಕ್ಕೆ ನೆರವಾಗಬೇಕು. ಆಗ ಮಾತ್ರ ಪ್ರತಿಯೊಬ್ಬ ಪ್ರಜೆಯಿಂದ ಪೂರ್ಣ ಉತ್ಪಾದಕತೆಯನ್ನು ನಿರೀಕ್ಷಿಸಬಹುದು. ಉದಾಹರಣೆಗೆ, ಸಂಗೀತದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಯ ಮೇಲೆ ಒತ್ತಾಯ ಹೇರಿ, ಇಂಜಿನಿಯರಿಂಗ್ ಶಿಕ್ಷಣಕ್ಕೆ ಕಳುಹಿಸಿದರೆ, ಸಮಾಜಕ್ಕೆ ಒಬ್ಬ ಉತ್ತಮ ಸಂಗೀತಗಾರನ ನಷ್ಟವಾಗುವುದರ ಜೊತೆಗೆ, ಒಬ್ಬ ಅಸಮರ್ಥ ಇಂಜಿನಿಯರ್ ದೊರೆತಂತಾಗುತ್ತದೆ. ಇದನ್ನು ತಪ್ಪಿಸಬೇಕಾದರೆ, ಉನ್ನತ ಶಿಕ್ಷಣ ರಂಗದಲ್ಲಿ ಇನ್ನೂ ಹೆಚ್ಚಿನ ವೈವಿಧ್ಯತೆ ತರಬೇಕಾಗುತ್ತದೆ.
ನಮ್ಮ ಪ್ರಾಚೀನ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಪ್ರತಿಯೊಬ್ಬರಿಗೂ ಅರವತ್ನಾಲ್ಕು ರೀತಿಯ ವಿದ್ಯೆಗಳನ್ನು (ಚತುಷಷ್ಠಿ ಕಲಾಃ) ಕಲಿಯುವ ಅವಕಾಶವಿತ್ತೆಂಬ ಉಲ್ಲೇಖವಿದೆ. ಅದರಲ್ಲಿ ಸಂಗೀತ, ನೃತ್ಯ, ಪಾಕನೈಪುಣ್ಯ, ಸಂಭಾಷಣಾ ಸಾಮರ್ಥ್ಯ, ಪುಷ್ಪಾಲಂಕಾರ ಮುಂತಾದ ಕೌಶಲಗಳನ್ನು ಬೋಧಿಸಲಾಗುತ್ತಿತ್ತು. ಶಿಕ್ಷಣದ ಇಂತಹ ವೈವಿಧ್ಯತೆ ಪ್ರಸ್ತುತ ಮಾಯವಾಗಿದೆಯಷ್ಟೆ.
ಇಂದು ಶಿಕ್ಷಣವು ಉದ್ಯೋಗ ಪಡೆಯಲು ಒಂದು ಸಾಧನವಾಗಿದ್ದು, ಅದರ ಅತ್ಯಮೂಲ್ಯ ಉದ್ದೇಶವನ್ನು ಕಳೆದುಕೊಂಡಿದೆ. ನಮ್ಮ ಸನಾತನ ಶಿಕ್ಷಣ ಪದ್ಧತಿಯ ಪ್ರಕಾರ ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಕೌಶಲಗಳನ್ನು ಕಲಿಸುವ ಸಾಧನವಾಗಿರದೆ, ಮಾನವ ಜೀವನದ ಪರಮೋದ್ದೇಶವಾದ ಆತ್ಮಜ್ಞಾನದ ಮಾರ್ಗ ತೋರುವ ದಿವ್ಯಜ್ಯೋತಿಯಾಗಿತ್ತು.
ತತ್ಕರ್ಮ ಯತ್ ನ ಬಂಧಾಯ ಸಾ ವಿದ್ಯಾ ಯಾ ವಿಮುಕ್ತಯೇ
ಆಯಾಸಾಪರಂ ಕರ್ಮ ವಿದ್ಯಾಠನ್ಯಾ ಶಿಲ್ಪನೈಪ್ಯಣಂ
-ವಿಷ್ಣುಪುರಾಣ, ಪ್ರಥಮ ಸ್ಕಂದ, ಹತ್ತೊಂಬತ್ತನೇ ಅಧ್ಯಾಯ
‘ಯಾವ ಕರ್ಮವು ಮೋಹದ ಬಂಧನವನ್ನುಂಟುಮಾಡುವುದಿಲ್ಲವೋ, ಅದುವೇ ನಿಜವಾದ ಕರ್ಮ. ಉಳಿದ ಕರ್ಮಗಳೆಲ್ಲ ದೇಹಮನಸ್ಸುಗಳಿಗೆ ಆಯಾಸವನ್ನು ಮಾತ್ರ ತರುತ್ತವೆ. ಯಾವ ವಿದ್ಯೆಯು ಮಾನವನನ್ನು ಸಕಲ ಶೋಕಗಳಿಂದ ಮುಕ್ತನನ್ನಾಗಿ ಮಾಡುತ್ತದೆಯೋ, ಅದುವೇ ನಿಜವಾದ ವಿದ್ಯೆ. ಉಳಿದ ವಿದ್ಯೆಗಳೆಲ್ಲ ಕೇವಲ ತೋರಿಕೆಯ ಕಲೆಗಾರಿಕೆಯಷ್ಟೆ.’
ಸನಾತನ ಆದರ್ಶದ ಪ್ರಕಾರ, ಶಿಕ್ಷಣವು ವಿದ್ಯಾರ್ಥಿಗೆ ಉದ್ಯೋಗಾರ್ಹತೆಯನ್ನು (ಛಿಞಟ್ಝಟಢಚಚಿಜ್ಝಿಜಿಠಿಢ) ನೀಡುವುದು ಮಾತ್ರವಲ್ಲದೆ, ಅದಕ್ಕಿಂತಲೂ ಮಿಗಿಲಾಗಿ ಜ್ಞಾನೋದಯದ (ಛ್ಞಿ್ಝಜಜಠಿಛ್ಞಿಞಛ್ಞಿಠಿ) ಸಾಧನವಾಗಬೇಕು. ಈ ಆದರ್ಶವನ್ನು ದೃಷ್ಟಿಯಲ್ಲಿಟ್ಟುಕೊಂಡು, ನಮ್ಮ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಅಳವಡಿಸಲಾಗಿರುವ ಶಿಕ್ಷಣ ಕ್ರಮವು, ವಿದ್ಯಾರ್ಥಿಗಳಿಗೆ ಯೋಗ್ಯ ಉದ್ಯೋಗ ಪಡೆಯಲು ಸಹಾಯ ಮಾಡುವುದಲ್ಲದೆ, ಆತ್ಮಜ್ಞಾನದ ಪಥವನ್ನೂ ತೋರಿಸುತ್ತದೆ.
ಶಿಕ್ಷಣ: ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಆಹಾರ-ವಸತಿಗಳೊಂದಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಪದವಿ ಶಿಕ್ಷಣದ ನಂತರ ಎರಡು ವರ್ಷಗಳ ವೇತನಸಹಿತ ಇಂಟರ್ನ್ಶಿಪ್ ವ್ಯವಸ್ಥೆಮಾಡಲಾಗಿದೆ. ತದನಂತರ ಸ್ಟೈಪಂಡ್ಸಹಿತ ಉಚಿತ ಸ್ನಾತಕೋತ್ತರ ಶಿಕ್ಷಣ ನೀಡುವ ಬೆನ್ನಲ್ಲೇ ಉದ್ಯೋಗವನ್ನು ಸಹ ಒದಗಿಸಲಾಗುತ್ತಿದೆ. ತಮ್ಮ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಆಸಕ್ತಿಯಿಲ್ಲದ ಗ್ರಾಮೀಣ ಪ್ರದೇಶದ ಪಾಲಕರ ಮನವೊಲಿಸಲು ಈ ವ್ಯವಸ್ಥೆ ತುಂಬಾ ಸಹಾಯಕವಾಗಿದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಶೇಕಡಾ 50 ರಷ್ಟು ಹೆಣ್ಣುಮಕ್ಕಳಿದ್ದು, ಜುಲೈ 2022ರ ಘಟಿಕೋತ್ಸವದಲ್ಲಿ ಪದವಿ ಪಡೆದ ಹೆಣ್ಣುಮಕ್ಕಳ ಪೈಕಿ ಅರ್ಧದಷ್ಟು ಮಂದಿ ತಮ್ಮ ಕುಟುಂಬಗಳಲ್ಲಿ ಮೊದಲ ತಲೆಮಾರಿನ ಅಕ್ಷರಸ್ಥರಾಗಿದ್ದಾರೆ. ಪ್ರತಿ ವರ್ಷ ನೂತನ ಅಧ್ಯಯನ ವಿಭಾಗಗಳನ್ನು ಅಳವಡಿಸಿ, ಶಿಕ್ಷಣದಲ್ಲಿ ಹೆಚ್ಚಿನ ವೈವಿಧ್ಯತೆ ತಂದು ತನ್ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ದು ಅಧ್ಯಯನ ಮುಂದುವರಿಸಲು ಅನುವು ಮಾಡಿಕೊಡುವುದು, ಇತ್ಯಾದಿ ಕ್ರಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನುಉನ್ನತ ಶಿಕ್ಷಣದೆಡೆಗೆ ಸೆಳೆಯಲು ಸಾಧ್ಯವಾಗುತ್ತಿದೆ. ಸಂಗೀತ ಮತ್ತು ಲಲಿತ ಕಲೆಗಳು, ವೇದೋಪನಿಷತ್ತುಗಳು, ದಾದಿಯ ವೃತ್ತಿ (uಠಜ್ಞಿಜ) ಮತ್ತು ಇತರ ಆರೋಗ್ಯ ಶುಶ್ರೂಷೆಯ ಸಹವೃತ್ತಿಗಳು (ಚ್ಝ್ಝಛಿಛ ಜಛಿಚ್ಝಠಿಜ ಠ್ಚಜಿಛ್ಞಿ್ಚಠ), ದೈಹಿಕ ಮತ್ತು ಯೋಗ ಶಿಕ್ಷಣ, ಅಲ್ಲದೆ ಇತರ ಕೌಶಲಾಭಿವೃದ್ಧಿ ಕಾರ್ಯಕ್ರಮಗಳ ವಿಭಾಗಗಳನ್ನು ತೆರೆದು, ಅವುಗಳಲ್ಲಿ ಉನ್ನತ ಡಾಕ್ಟರೇಟ್ ಪದವಿ ಮತ್ತು ಯೋಗ್ಯ ಉದ್ಯೋಗಕ್ಕೆ ಅವಕಾಶಗಳನ್ನು ಕಲ್ಪಿಸಿರುವುದರಿಂದ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಳೆದುಕೊಳ್ಳುವ ಭೀತಿಯಿಲ್ಲದೆ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಸಾಧ್ಯವಾಗಿದೆ. ಇದಲ್ಲದೆ, ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಶಿಕ್ಷಣ ನೀಡುವ ವಿಶ್ವದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗಲಿದೆ.
ಉದ್ಯೋಗ: ನಮ್ಮ ದೇಶದಲ್ಲಿ ಇಂದು ಎದ್ದುಕಾಣುತ್ತಿರುವ ಒಂದು ವಿಪರ್ಯಾಸವೆಂದರೆ, ಒಂದೆಡೆ ಬೃಹತ್ ನಿರುದ್ಯೋಗ ಸಮಸ್ಯೆಯಿದ್ದರೆ, ಇನ್ನೊಂದೆಡೆ ಶಾಲಾಮಟ್ಟದಲ್ಲಿ ಸುಮಾರು 19 ಲಕ್ಷದಷ್ಟು ಶಿಕ್ಷಕರ ಕೊರತೆ ಹಾಗೂ ಉನ್ನತ ಶಿಕ್ಷಣ ಮಟ್ಟದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚಿನ ಉಪನ್ಯಾಸಕರ ಹುದ್ದೆಗಳು ಖಾಲಿಯಿರುವುದು! ಈ ಅಸಮತೋಲನವನ್ನು ಸ್ವಲ್ಪ ಮಟ್ಟಿಗಾದರೂ ಪರಿಹರಿಸಲು ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಯತ್ನಪಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅತ್ಯುತ್ತಮ ಗುಣಮಟ್ಟದ ಶಾಲಾ ಮತ್ತು ವಿಶ್ವವಿದ್ಯಾಲಯ ಮಟ್ಟದ ಅಧ್ಯಾಪಕರ ನಿರ್ವಣವು ನಮ್ಮಒಂದು ಮುಖ್ಯ ಧ್ಯೇಯವಾಗಿದೆ. ಇದು ಶಿಕ್ಷಕರ ಮತ್ತು ಉಪನ್ಯಾಸಕರ ಅಭಾವವನ್ನು ನೀಗುವುದಷ್ಟೇ ಅಲ್ಲದೆ, ಗ್ರಾಮೀಣ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸಲು ಸಹಕಾರಿಯಾಗುತ್ತದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಪ್ರಥಮ ತಂಡದ ಎಲ್ಲಾ 20 ಪದವೀಧರರು, ಈಗ ಪಿಎಚ್.ಡಿ. ಪದವಿಗೆ ನೋಂದಾಯಿಸಿಕೊಂಡಿರುವುದಲ್ಲದೆ, ನಮ್ಮ ವಿವಿಧ ಸಂಸ್ಥೆಗಳಲ್ಲಿ, ಸಂಸ್ಥೆಯ ಮುಖ್ಯಸ್ಥರೊಂದಿಗೆ ಕಾರ್ಯವೆಸಗುವ ಅವಕಾಶವನ್ನೂ ಪಡೆದುಕೊಂಡಿದ್ದಾರೆ.
ಜ್ಞಾನೋದಯ: ಪ್ರಾಚೀನ ಕಾಲದಿಂದಲೂ ಭಾರತೀಯ ಶಿಕ್ಷಣದ ಮುಖ್ಯ ಉದ್ದೇಶವೆಂದರೆ, ವಿದ್ಯಾರ್ಥಿಗೆ ಸಕಲ ಸೃಷ್ಟಿ-ಅಸ್ತಿತ್ವಗಳ ಮೂಲವಾದ ದಿವ್ಯತೆಯ ಪರಮ ಜ್ಞಾನವನ್ನು ಮೂಡಿಸುವುದೇ ಆಗಿತ್ತು. ಗೀತೆಯಲ್ಲಿ ಶ್ರೀ ಕೃಷ್ಣನು ಘೊಷಿಸುವಂತೆ, ‘ಆಧ್ಯಾತ್ಮ ವಿದ್ಯಾ ವಿದ್ಯಾನಾಂ’- ‘ಎಲ್ಲಾ ವಿದ್ಯೆಗಳ ಪೈಕಿ ಆಧ್ಯಾತ್ಮಿಕ ವಿದ್ಯೆಯೇ ನಾನು.’ ಎಂದರೆ, ಆಧ್ಯಾತ್ಮಿಕ ವಿದ್ಯೆಯೇ ಎಲ್ಲಾ ರೀತಿಯ ವಿದ್ಯೆಗಳಿಗೆ ಬುನಾದಿ. ಮಾನವ ಜೀವನದ ನಾಲ್ಕು ಪುರುಷಾರ್ಥಗಳು ಅಥವಾ ಪರಮೋಚ್ಚ ಗುರಿಗಳೆಂದರೆ- ಧರ್ಮ (ಪ್ರತಿ ಸಂದರ್ಭದಲ್ಲೂ ಸರಿಯಾದದ್ದನ್ನೇ ಮಾಡುವುದು), ಅರ್ಥ (ಧರ್ಮಮಾರ್ಗದಲ್ಲಿ ಅವಶ್ಯಕತೆಗಳಿಗನುಗುಣವಾಗಿ ಧನ ಸಂಪಾದನೆ), ಕಾಮ (ಧರ್ಮಬದ್ದವಾದ ಆಸೆಗಳನ್ನು ಪೂರೈಸಿಕೊಳ್ಳುವುದು) ಮತ್ತು ಮೋಕ್ಷ (ದಿವ್ಯತೆಯ ಪರಮ ಜ್ಞಾನ ಪಡೆದು ಸಕಲ ಬಂಧನಗಳಿಂದ ಮುಕ್ತನಾಗುವುದು). ಶಿಕ್ಷಣವು ಮಕ್ಕಳಿಗೆ ಈ ನಾಲ್ಕು ಪುರುಷಾರ್ಥ ಸಾಧಿಸಲು ಸಹಾಯಕವಾಗಬೇಕು. ಶ್ರೀ ಸತ್ಯಸಾಯಿ ಗುರುಕುಲ ವಿದ್ಯಾ ಸಂಸ್ಥೆಗಳಲ್ಲಿ ಭಗವದ್ಗೀತೆ, ಉಪನಿಷತ್ತುಗಳಂತಹ ಪಠ್ಯಕ್ರಮವನ್ನೊಳಗೊಂಡ ಪರಾವಿದ್ಯಾ ತರಗತಿಗಳು ವಿದ್ಯಾರ್ಥಿಗಳಿಗೆ ಧರ್ಮವನ್ನು ಮನದಟ್ಟು ಮಾಡಿಸುತ್ತವೆ. ಪದವಿ ಶಿಕ್ಷಣದ ನಂತರ ವೇತನಸಹಿತ ಕಾರ್ಯತರಬೇತಿ ಅವಧಿ (ಜ್ಞಿಠಿಛ್ಟಿ್ಞಜಜಿಟ ಡಿಜಿಠಿಜ ಠಠಿಜಿಟಛ್ಞಿಛ) ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣದ ನಂತರ ಕಲ್ಪಿಸಿರುವ ಉದ್ಯೋಗಾವಕಾಶಗಳು ಜೀವನಕ್ಕೆ ಅನಿವಾರ್ಯವಾದ ಅರ್ಥವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳಲ್ಲಿ ಜಾಗೃತವಾದ ನೈತಿಕ ಪ್ರಜ್ಞೆಯು ಅವರಲ್ಲಿ ಧರ್ಮಬದ್ಧವಾದ ಕಾಮವನ್ನು ಮಾತ್ರ ಬೆಳೆಸುತ್ತದೆ ಹಾಗೂ ಅಂತಿಮವಾಗಿ ಆಧ್ಯಾತ್ಮಿಕ ತಳಹದಿಯ ನಿಸ್ವಾರ್ಥ ಸೇವಾಮಯ ಜೀವನವು ಅವರನ್ನು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ.
ಯುವಜನರನ್ನು ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ಪ್ರಸ್ತುತ ಕಾಲಕ್ಕೆ ಸರಿಹೊಂದುವ ವ್ಯಾವಹಾರಿಕ ಶಿಕ್ಷಣದೊಂದಿಗೆ ಶಕ್ತಿಶಾಲಿಗಳನ್ನಾಗಿಸುವುದು ಇಂದಿನ ಪ್ರಧಾನ ಅಗತ್ಯ, ಅನಿವಾರ್ಯ. ಉದ್ಯೋಗಾರ್ಹತೆ ಮತ್ತು ಉದ್ಯೋಗಾವಕಾಶಗಳ ನಡುವಿನ ಅಂತರ ತೊಲಗಿಸಿ, ನಿಸ್ವಾರ್ಥ ಹಾಗೂ ಧರ್ಮಬದ್ಧ ಜೀವನ ನಡೆಸಲು ಸಾಧ್ಯವಾಗುವಂತೆ ಉತ್ತಮ ಚಾರಿತ್ರ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ತನ್ಮೂಲಕ ಅವರು ಪರಮೋಚ್ಚ ಜ್ಞಾನವನ್ನು ಅರಿಯಬೇಕು.
ಭಾರತದ ವಿಶ್ವಗುರುವಿನ ಕನಸು ನನಸಾಗಬೇಕಾದರೆ, ನಾವು ವಿದ್ಯಾವಂತ ಹಾಗೂ ಉದ್ಯೋಗಸ್ಥ ಪ್ರಜೆಗಳನ್ನು ಮಾತ್ರ ನಿರ್ವಿುಸಿದರೆ ಸಾಲದು, ಅವರು ಜ್ಞಾನಸಂಪನ್ನರೂ ಆಗಿರಬೇಕು! ಇದನ್ನು ಸಾಧಿಸಲು ಇರುವ ಒಂದೇ ಮಾರ್ಗವೆಂದರೆ, ದೇಶದ ಶಾಲಾ ಹಾಗೂ ಉನ್ನತ ಶಿಕ್ಷಣ ರಂಗದಲ್ಲಿ ಸೂಕ್ತ ಸುಧಾರಣೆಗಳನ್ನು ತರುವುದು. ಇದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ -
‘ನಾನ್ಯಃ ಪಂಥಾಃ ವಿದ್ಯತೇ ಅಯನಾಯ!’
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)