

ಇಂದು ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ 129ನೇ ಜನ್ಮದಿನ. ಅವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲೊಬ್ಬರು. ವರಕವಿ, ಶಬ್ದಗಾರುಡಿಗ, ದಾರ್ಶನಿಕ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ದ.ರಾ. ಬೇಂದ್ರೆ ಧಾರವಾಡಿಗರಿಗೆ ಮಾತ್ರ ಸದಾ ಪ್ರೀತಿಯ ‘ಬೇಂದ್ರೆ ಅಜ್ಜ’ನಾಗಿ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಕುವಲಯ ಕಾವ್ಯನಾಮದಿಂದ ಪರಿಚಿತರಾದ 92 ವರ್ಷದ ಕುವಲಯ ಶ್ಯಾಮ ಶರ್ಮಾ (ಡಾ. ಕೆ.ಎಸ್. ಶರ್ವ) ಅವರು ಕಾರ್ವಿುಕ ಚಳವಳಿಯ ನೇತಾರರು. ಕ್ರೀಡಾಪಟು, ಹೋರಾಟಗಾರ, ಸಾಹಿತಿ, ನಾಟಕಕಾರ, ಕಲಾವಿದ, ಲೇಖಕ, ಪತ್ರಕರ್ತ, ಶಿಕ್ಷಣ ಪ್ರೇಮಿಯಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಹೋರಾಟದ ಫಲವಾಗಿ ಸರ್ಕಾರಿ ನೌಕರಿ ಪಡೆಯುವಲ್ಲಿ ಯಶಸ್ವಿಯಾದ ಸಾವಿರಾರು ಅಸಂಘಟಿತ ದಿನಗೂಲಿ ನೌಕರರು ಇವರನ್ನು ‘ದಿನಗೂಲಿ ದಿನಕರ’ ಎಂದೇ ಕರೆಯುತ್ತಾರೆ. ಡಾ. ಶರ್ಮಾ ಅವರು ಬೇಂದ್ರೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಆ ನೆನಪುಗಳ ಸಿಹಿಬುತ್ತಿ ಇಲ್ಲಿದೆ.
ಅದರಲ್ಲೂ ಗಣಿತದಲ್ಲಿ ಜ್ಞಾನ ಅಪರಿಮಿತ. ಪ್ರತಿಯೊಂದು ವಿಷಯದಲ್ಲಿಯೂ ಲೆಕ್ಕ ಹಾಕುತ್ತಿದ್ದರು. ಸಂಖ್ಯೆ ಎಂಬುದು ನಿಖರ, ಇದಕ್ಕೆ ಮತ್ತೊಂದು ಅರ್ಥ ಇರುವುದಿಲ್ಲ ಎಂದು ಹೇಳುತ್ತಿದ್ದರು. ಅವರ ಮನೆಗೆ ಬರುವ ಪತ್ರದಲ್ಲಿ ಒಂದು ಪುಟ ಖಾಲಿ ಇದ್ದರೆ ಅದರಲ್ಲಿಯೂ ಕವನ ಬರೆಯುತ್ತಿದ್ದರು. ಬಸ್ ಟಿಕೆಟ್ನಲ್ಲೂ ಬರೆದಿದ್ದಾರೆ. ಅವುಗಳನ್ನೆಲ್ಲ ಹುಡುಕುವ ಕೆಲಸ ನಾವು ಮಾಡಿದೆವು. ವಾಮನ ಬೇಂದ್ರೆ ಹಾಗೂ ಇತರರೊಂದಿಗೆ ಸೇರಿ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಈಗಲೂ ಅಂತಹ ಹಲವು ಕವನಗಳು ಸಿಕ್ಕಿವೆ. ಸಾಹಿತ್ಯ ಲಭ್ಯವಾಗಿದೆ. ಅವುಗಳನ್ನು ಕೂಡ ಪ್ರಕಟ ಮಾಡುವ ಆಶಯ ಇದೆ. 1981ರಲ್ಲಿ ಅವರು ನಿಧನರಾದರು. ಆದರೆ, ಅವರ ಸಾಹಿತ್ಯ, ಜ್ಞಾನವನ್ನು ಗುರುತಿಸುವ ಕೆಲಸ ಸರ್ಕಾರಗಳಿಂದ ಆಗಿಲ್ಲ ಎಂಬುದು ಬೇಸರದ ಸಂಗತಿ.
ತಾಯಿ ಹೃದಯ: ಬೇಂದ್ರೆ ಅವರದು ತಾಯಿ ಹೃದಯ. ಮಾನವೀಯ ಮೌಲ್ಯಗಳ ಖನಿಯಾಗಿದ್ದರು. ಅವರ ಪ್ರೀತಿ, ವಿಶ್ವಾಸ ಬಹಳ ದೊಡ್ಡದು. ನನ್ನಲ್ಲಿ ಕವಿತ್ವ, ಸಾಹಿತ್ಯ ಇದೆ ಎಂದು ಅವರು ಗುರುತಿಸಿ ಹುರಿದುಂಬಿಸಿ ಬರೆಸಿದರು. ಒಮ್ಮೆ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಬೇಂದ್ರೆ ಬಂದಿದ್ದರು. ನಾನು ಅಲ್ಲಿಗೆ ಹೋದಾಗ ಕಾರ್ಯಕ್ರಮಕ್ಕೆ ಬಂದಿದ್ದ ಶಿಕ್ಷಣ ಸಚಿವ ರಂಗನಾಥ ಅವರು ನನ್ನನ್ನು ನೋಡಿ, ‘ಏನು ಶರ್ಮಾ ಹುಚ್ಚನಂತೆ ಗಡ್ಡ ಬಿಟ್ಟಿಯಲ್ಲ’ ಎಂದರು. ಇದಕ್ಕೆ ನಾನು ಉತ್ತರಿಸುವ ಮೊದಲೇ ಬೇಂದ್ರೆ ಅವರು ‘ಏನಪಾ ರಂಗನಾಥ, ನಾನೂ ಗಡ್ಡ ಬಿಟ್ಟಿದಿನಲ್ಲ, ನನಗೂ ಹಾಗೇ ಕರೆಯುವೆಯಾ ನೀನು’ ಎಂದಿದ್ದರು. ಅವರ ಸಂಭಾಷಣೆ ನೋಡಿ ನಾನು ತಬ್ಬಿಬ್ಬಾಗಿದ್ದೆ. ಅಷ್ಟೊಂದು ವೈಯಕ್ತಿಕ ಬಾಂಧವ್ಯ ಅವರದು.
ಪರೀಕ್ಷೆಯೊಂದರ ತಯಾರಿಗೆ ಧಾರವಾಡದ ಕೆಲಗೇರಿಯಲ್ಲಿ ಕೆಲ ದಿನ ನೆಲೆಸಿದ್ದೆ. ಹಾಗೇ ವಾಕಿಂಗ್ ಸಲುವಾಗಿ ಕೆರೆ ಸುತ್ತ ಬಂದಾಗ ಬೇಂದ್ರೆ ಅವರು ಅಚ್ಚರಿಯೆಂಬಂತೆ ಎದುರು ಬಂದರು, ‘ಏನಪಾ ಇದು ಅಡ್ಡಾದಿಡ್ಡಿ ಗಡ್ಡ, ಮಂದಿ ತಪ್ಪು ತಿಳಿಬಾರದು, ಮೊದಲು ಗಡ್ಡಾ ಮಾಡಿಕೊ’ ಎಂದಿದ್ದರು.
ಬೇಂದ್ರೆಯೆಂಬ ಮೇಧಾವಿಯೊಂದಿಗೆ ಎರಡು ದಶಕ ಕಳೆದಿದ್ದೇನೆ ಎಂಬುದೇ ನನಗೆ ಹೆಮ್ಮೆಯ ಸಂಗತಿ. ನಾನು ಮೂಲತಃ ತೆಲುಗು ಭಾಷಿಕ, ಮಾತೃಭಾಷೆ ತೆಲುಗು. ಇಲ್ಲಿಗೆ ಬಂದು ಇಂಗ್ಲಿಷ್ನಲ್ಲಿ ಲೇಖನ ಬರೆಯುತ್ತಿದ್ದೆ. ಅವರನ್ನು ಭೇಟಿ ಮಾಡಿದಾಗ ‘ನೀನು ಬರೆಯಬಲ್ಲೆ’ ಎಂದು ಹೇಳಿದ್ದರು. ರಾತ್ರಿ ನನ್ನ ಕನಸಿನಲ್ಲಿ ಬಂದು ಎರಡು ಸಾಲು ಹೇಳುವ ಮೂಲಕ ಡಿಕ್ಟೇಟ್ ಮಾಡಿದ್ದರು. ಅದನ್ನು ಮುಂದುವರಿಸಿ ಕವನ ಬರೆದು ಅವರ ಮುಂದೆ ಪ್ರಸ್ತುತಪಡಿಸಿದ್ದೆ. ‘ಏನಪಾ ನೀನೇ ಬರೆದಿಯಾ?’ ಎಂದಿದ್ದರು. ಅವರು ನೀಡಿದ ಪ್ರೇರಣೆಯಿಂದ ನಾನು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. 50ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದೇನೆ. ಕನ್ನಡದಲ್ಲಿ ಏನೇ ಬರೆದಿದ್ದರೂ ಅದಕ್ಕೆ ಬೇಂದ್ರೆಯವರೇ ಕಾರಣ.
ಪುನರ್ವಸು ಬೇಂದ್ರೆ ಬೇಂದ್ರೆ ಮೊಮ್ಮಗಳು
ಅಜ್ಜನ ‘ನಾಕುತಂತಿ’ ಕವನ ಸಂಕಲನಕ್ಕೆ 60ರ ಸಂಭ್ರಮ. ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತು 50 ವರ್ಷಗಳಾದವು. ಆ ದಿನಗಳು ಇನ್ನೂ ಹಚ್ಚಹಸಿರಾಗಿವೆ. ಸುಮಾರು 10 ವರ್ಷದವಳಿದ್ದ ನಾನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕುಟುಂಬ ಸಮೇತ ದೆಹಲಿಗೆ ಹೋಗಿದ್ದೆ. ಅಜ್ಜನಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಇಡೀ ಕುಟುಂಬ ಸಂಭ್ರಮಿಸಿತ್ತು. ಆಗ ನಾನು ತಂದೆ ಪಾಂಡುರಂಗ ಬೇಂದ್ರೆ, ತಾಯಿ ಪದ್ಮಾ ಜತೆ ಪುಣೆಯಲ್ಲಿದ್ದೆ. ಅಜ್ಜ, ಚಿಕ್ಕಪ್ಪ ವಾಮನ ಬೇಂದ್ರೆ ಮತ್ತು ಚಿಕ್ಕಮ್ಮ ವಿಶಾಖಾ ಧಾರವಾಡದ ಸಾಧನಕೇರಿ ಮನೆಯಲ್ಲಿ ವಾಸವಾಗಿದ್ದರು. ‘ಪ್ರಶಸ್ತಿ ಸ್ವೀಕರಿಸಲು ಕುಟುಂಬ ಸಮೇತ ದೆಹಲಿಗೆ ಬರಬೇಕು’ ಎಂದು ಅಜ್ಜ ತಂದೆಗೆ ತಿಳಿಸಿದ್ದರು. ಪುಣೆಯಿಂದ ನಮ್ಮ ಕುಟುಂಬ ದೆಹಲಿ ತಲುಪಿತು. ಅಜ್ಜ, ಚಿಕ್ಕಪ್ಪ, ಚಿಕ್ಕಮ್ಮ ಧಾರವಾಡದಿಂದ ಮುಂಬೈ, ಅಲ್ಲಿಂದ ದೆಹಲಿಗೆ ಬಂದಿದ್ದರು. ದೆಹಲಿಯ ಸಾಹು ಜೈನ್ ಕುಟುಂಬದವರು ನೀಡುವ ಪ್ರತಿಷ್ಠಿತ ಪ್ರಶಸ್ತಿ ಇದು. ನಾವೆಲ್ಲ ಜೈನ್ ಅವರ ಮನೆಯಲ್ಲಿ ವಾಸವಾಗಿದ್ದೆವು. ಅಜ್ಜ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವಾಗ ಜತೆಯಲ್ಲಿ ಇದ್ದುದು ನನ್ನ ಸೌಭಾಗ್ಯ. ಕನ್ನಡಕ್ಕೆ ಇದುವರೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿವೆ. ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಬೇಕು. ವಿಶೇಷವಾಗಿ ಧಾರವಾಡದ ಸಾಹಿತಿಗಳು ಈ ಪ್ರಶಸ್ತಿಗೆ ಭಾಜನರಾಗಬೇಕು. ಈ ಮೂಲಕ ಕನ್ನಡ ಸಾಹಿತ್ಯ-ಸಾಹಿತಿಗಳು ಬೆಳಕಿಗೆ ಬರಬೇಕು.
ಬೇಂದ್ರೆಯವರ ಹೆಸರನ್ನು ಅಜರಾಮರವಾಗಿಸಲು ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವರ್ಷವಿಡೀ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದೆ. ಬೇಂದ್ರೆ ಗೀತಗಾಯನ, ನಾಟಕ, ಕಾರ್ಯಾಗಾರ ಆಯೋಜಿಸುತ್ತಿದೆ. ವಿಶೇಷವಾಗಿ ಬೇಂದ್ರೆಯವರ ಜನ್ಮದಿನವಾದ ಜ. 31ರಂದು ‘ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ವರ್ಷ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಹಾಗೂ ಹಿರಿಯ ಲೇಖಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ದಿನಾಂಕದ ಪ್ರಕಾರ ಅಜ್ಜನ ಜನ್ಮದಿನ ಜ. 31. ಆದರೆ, ನಮ್ಮ ಕುಟುಂಬ ಪ್ರತಿವರ್ಷ ಮರಾಠಿ ತಿಥಿಯ ಪ್ರಕಾರ ಫೆ.13ರಂದು ಆಚರಣೆ ಮಾಡುತ್ತಿದೆ.