

ಇದಕ್ಕೆ ಸಂಬಂಧಿಸಿ ಕಥೆಯೊಂದನ್ನು ಕೇಳಿ-ಒಂದೂರಿನಲ್ಲಿ ಕಟ್ಟಿಗೆ ಡಿಪೋ ಇತ್ತು. ಅಲ್ಲೊಬ್ಬ ಬಹಳ ವರ್ಷಗಳಿಂದ ಬಿಡುವೇ ಇಲ್ಲದಂತೆ ಕಟ್ಟಿಗೆ ಕಡಿಯುವ ಕೆಲಸ ಮಾಡಿಕೊಂಡಿದ್ದ. ಅಲ್ಲಿ ಹೊಸದಾಗಿ ಸೇರಿದ ಯುವಕನೊಬ್ಬ ಇವನಿಗಿಂತ ಕಡಿಮೆ ಸಮಯ ಕಟ್ಟಿಗೆ ಕಡಿದು ಹೆಚ್ಚಿನ ಕೂಲಿ ತೆಗೆದುಕೊಳ್ಳುತ್ತಿದ್ದ. ಇದರಿಂದ ಬೇಸರಗೊಂಡ ಹಳಬ ಪ್ರಶ್ನಿಸಿದ್ದಕ್ಕೆ ಯಜಮಾನ, ‘ನೀನು ಹೆಚ್ಚು ಗಂಟೆ ಕೆಲಸ ಮಾಡುತ್ತಿರುವುದು ನಿಜ. ಆದರೆ ನಿನ್ನ ಮೊಂಡು ಕೊಡಲಿಯಿಂದ ಹೆಚ್ಚಿನ ಕೆಲಸ ಸಾಗುತ್ತಿಲ್ಲ. ವರ್ಷಾನುಗಟ್ಟಲೆ ಕೊಡಲಿಯನ್ನು ಸರಿಯಾಗಿ ಹರಿತ ಮಾಡದೆ ಕೆಲಸ ಮಾಡುತ್ತಿದ್ದೀಯಾ. ಆದರೆ ಅವನು ಆಗಾಗ್ಗೆ ಕೊಡಲಿಯನ್ನು ಹರಿತ ಮಾಡುತ್ತ ಕೆಲಸ ಮಾಡುತ್ತಿದ್ದಾನೆ. ಆದ ಕಾರಣ ಆತ ಆರಾಮಾಗಿ ಕಡಿಮೆ ಸಮಯ ಕೆಲಸ ಮಾಡಿದರೂ ಜಾಸ್ತಿ ಕಟ್ಟಿಗೆ ಕಡಿಯುತ್ತಿದ್ದಾನೆ’ ಅಂತ ಅಂದ.
ಯಾವುದೇ ಕೆಲಸವನ್ನು ಹೆಚ್ಚು ಶ್ರಮವಿಲ್ಲದೆ, ಉತ್ತಮವಾಗಿ ಮಾಡಿ ಮುಗಿಸುವ ಚಾಕಚಕ್ಯತೆ, ಬುದ್ಧಿವಂತಿಕೆ ಹೊಂದಿದ್ದರೆ ನಿಮ್ಮ ಬೆಲೆ ಹೆಚ್ಚಾಗುತ್ತ ಹೋಗುತ್ತದೆ. ಕೆಲಸಕ್ಕೆ ಸಂಬಂಧಪಟ್ಟ ಹೊಸ ವಿಚಾರಗಳನ್ನು ಕಲಿಯಿರಿ. ‘ಅದಕ್ಕೆ ಟೈಮಿಲ್ಲ, ನನ್ನಿಂದ ಆಗಲ್ಲ’ ಅಂತ ಸಬೂಬುಗಳನ್ನು ಕೊಟ್ಟುಕೊಂಡಲ್ಲಿ ನಿಮ್ಮ ಬೆಳವಣಿಗೆ ಕುಂಠಿತವಾಗುತ್ತದೆ. ‘ನಾನು ದಿನಕ್ಕೆ 10 ಗಂಟೆ ಕೆಲ್ಸ ಮಾಡ್ತೀನಿ ಗೊತ್ತಾ?’ ಅನ್ನುವವರು ಇರ್ತಾರೆ. ನೀವು ಕನಿಷ್ಟ 12 ಗಂಟೆ ಕೆಲಸ ಮಾಡುತ್ತಿದ್ದರೆ ಏರಬಯಸಿದ ಎತ್ತರವನ್ನು ಏರಬಹುದು. ನಾನು ದಿನಕ್ಕೆ 16 ಗಂಟೆ ಕೆಲಸ ಮಾಡಿದ್ದಿದೆ. ಬೆಲೆ ಅಪ್ಪಟ ಬಂಗಾರಕ್ಕೇ ಹೊರತು ಕಾಗೆಬಂಗಾರಕ್ಕಲ್ಲ.
ಕೆಲವು ಉಪಯುಕ್ತ ಸಲಹೆಗಳು: ಹೊಸದಾಗಿ ಉದ್ಯಮ ಪ್ರಾರಂಭಿಸುವ ಅನೇಕರು ನನ್ನಲ್ಲಿ ಮಾರ್ಗದರ್ಶನಕ್ಕಾಗಿ ಬರುತ್ತಾರೆ. ಇತ್ತೀಚೆಗೆ ‘ದರೋಡೆ’ ಚಿತ್ರದ ನಾಯಕನಟ ವಿನೋದ್ ಕಾಮತ್ ಮಕ್ಕಳ ಕೌಶಲವನ್ನು ಹೆಚ್ಚಿಸುವ ಐಟಂಗಳ ಬಾಕ್ಸ್ನ್ನು ತಯಾರಿಸಿ ಮಾರಾಟ ಮಾಡುವ ಬಗ್ಗೆ ಸಂರ್ಪಸಿದ. ಯಾವುದೇ ವಸ್ತುವನ್ನು ತಯಾರಿಸುವುದು ಸುಲಭ. ಮಾರಾಟ ಕಷ್ಟಸಾಧ್ಯ. ಬಂಡವಾಳ ಹಾಕಲು ಸಾಕಷ್ಟು ದುಡ್ಡು ಇದೆ ಎಂದು ಗೊತ್ತಾದರೆ ಏನೇನೋ ಸಲಹೆಗಳನ್ನು ಕೊಟ್ಟು ನಿಮ್ಮನ್ನು ದಾರಿ ತಪ್ಪಿಸುವವರು ಸಾಕಷ್ಟು ಸಿಗುತ್ತಾರೆ. ಇಂಥವರ ಬಗ್ಗೆ ಜಾಗರೂಕರಾಗಿರಿ. ಇತ್ತೀಚೆಗೆ ಎಷ್ಟೋ ಬೋಗಸ್ ಕಂಪನಿಗಳು ಮೋಸ ಮಾಡುತ್ತಿರುವುದನ್ನು ಕೇಳಿರಬಹುದು. ‘ಸಾಗುವಾನಿ, ಗಂಧದ ಗಿಡಗಳನ್ನು ಬೆಳೆಸಿ ಕೋಟ್ಯಧೀಶರಾಗಿ. ಹತ್ತು ವರ್ಷಗಳಲ್ಲಿ ಮರಗಳನ್ನು ನಾವೇ ಉತ್ತಮ ಬೆಲೆಗೆ ಕೊಳ್ಳುತ್ತೇವೆ’ ಅಂತೆಲ್ಲ ಆಸೆ ಹುಟ್ಟಿಸಿ ಅವರ ಗಿಡಗಳನ್ನು ನಮ್ಮ ತಲೆಗೆ ಕಟ್ಟಿ, ಕೊನೆಗೆ ಕಂಪನಿ ಮುಚ್ಚಿ ನಾಪತ್ತೆಯಾಗುತ್ತಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಗಂಧವನ್ನೋ, ಸಾಗುವಾನಿಯನ್ನೋ ಬೆಳೆಸಿದರೂ ಅದನ್ನು ಕಳ್ಳರಿಂದ ರಕ್ಷಿಸಲು ಸಾಧ್ಯವೇ? ಯೋಚಿಸಿ.
ಅವರಿಗೆ ತಮ್ಮ ವಸ್ತುಗಳನ್ನು ಹೇಗಾದರೂ ಮಾರುವುದೇ ಮುಖ್ಯ ಗುರಿಯಾಗಿರುತ್ತದೆ. ಇದು ಮೋಸದಲ್ಲಿ ಇನ್ನೊಂದು ಬಗೆ.
ಮೊದಲು ನಿಮ್ಮ ವಸ್ತುವಿಗೆ ಖರೀದಿದಾರರನ್ನು ಹುಡುಕಬೇಕು. ಅದಕ್ಕೆ ಬಾಕ್ಸಿನ ಒಳಗೆ ಯಾವ ವಸ್ತುಗಳನ್ನು ಇಡುತ್ತೇವೆಂಬುದನ್ನು ನಿರ್ಧರಿಸಿ, ಮಾರುಕಟ್ಟೆಯಲ್ಲಿ ಸಿಗುವ ಬೋರ್ಡ್ಗಳಲ್ಲಿ ನಮಗೆ ಯಾವ ದಪ್ಪದ ಬೋರ್ಡ ಬೇಕೋ ಅದನ್ನು ಆರಿಸಿ ಒಂದು ಮಾದರಿ ಬಾಕ್ಸನ್ನು (ಪ್ರೊಟೊಟೈಪ್) ಮಾಡಬೇಕು. ನಂತರ ಬಾಕ್ಸಿಗೆ ಒಂದು ಒಳ್ಳೆಯ ಡಿಸೈನ್ ಇರುವ ಸ್ಟಿಕ್ಕರ್ ಹಚ್ಚಬೇಕು. ಕಂಟೈನರ್ ತುಂಬ ಮುಖ್ಯ. ಡಿಸೈನ್ ಅಂತಿಮವಾಗಿ ಅಪ್ರೂವ್ ಆದ ನಂತರ ಸಾವಿರ ಸಂಖ್ಯೆಯಲ್ಲಿ ಸ್ಟಿಕ್ಕರ್ಗಳನ್ನು ಆಫ್-ಸೆಟ್ ಪ್ರಿಂಟಿಂಗ್ ಮಾಡಿಸಿದಲ್ಲಿ ದುಡ್ಡು ಉಳಿತಾಯವಾಗುತ್ತದೆ. ಬಾಕ್ಸಿನಲ್ಲಿ ಇರಬೇಕಾದ ಎಲ್ಲ ವಸ್ತುಗಳನ್ನು ಹಾಕಿ ನೋಡಿ. ಸರಿಹೋದಲ್ಲಿ ಬಾಕ್ಸಿನ ಮತ್ತು ಇನ್ನಿತರ ವಸ್ತುಗಳ ಪಂಚಿಂಗ್ ಡೈಯನ್ನು ಮಾಡಿಸಬೇಕು. ಯಾವುದೇ ಮಾಹಿತಿ ಬೇಕಾದಲ್ಲಿ ನನ್ನನ್ನು ಸಂರ್ಪಸಿದರೆ (90080-28382) ಉಚಿತವಾಗಿ ಮಾರ್ಗದರ್ಶನ ಮಾಡುತ್ತೇನೆ.
ಇದನ್ನೂ ಓದಿ: ಹಣ-ಝಣ ಅಂಕಣ: ಜೀವನದಲ್ಲಿ ಯಾವುದೂ ಪುಕ್ಕಟೆ ಬರುವುದಿಲ್ಲ…
ಯಾವುದೋ ಕೆಲಸಕ್ಕಾಗಿ ಒಬ್ಬರ ಹತ್ತಿರ ಕೊಟೇಶನ್ ತೆಗೆದುಕೊಳ್ಳುತ್ತೀರಿ ಅಂತಿಟ್ಟುಕೊಳ್ಳಿ. ಆತ ಕೊಟ್ಟ ಮೊತ್ತ ಕಡಿಮೆ ಅನ್ನಿಸಿದರೂ ತಕ್ಷಣ ಆರ್ಡರನ್ನು ಕೊಟ್ಟು ಬಿಡಬೇಡಿ. ಕೊಟೇಶನ್ ಕೊಟ್ಟಾತನಿಗೆ, ‘ಅಯ್ಯೊ, ನಾನು ಇನ್ನೂ ಸ್ವಲ್ಪ ಜಾಸ್ತಿ ಹೇಳುತ್ತಿದ್ದರೂ ಒಪ್ಪಿಕೊಳ್ಳುತ್ತಿದ್ದರೋ ಏನೋ’ ಅಂತ ಅನ್ನಿಸಿ, ಮುಂದಿನ ಆರ್ಡರುಗಳಿಗೆ ಜಾಸ್ತಿ ಕೊಟೇಶನ್ ಕೊಡಲು ಶುರು ಮಾಡುತ್ತಾರೆ. ಸ್ವಲ್ಪವಾದರೂ ಕಮ್ಮಿಗೆ ಕೇಳಿ. ಕೊಡದೇ ಇದ್ದಲ್ಲಿ ಆಮೇಲೆ ಒಪ್ಪಿಕೊಳ್ಳಿ.
ತರಕಾರಿ, ಹಣ್ಣಿನ ವ್ಯಾಪಾರಿಗಳಿಂದ ಈ ರಹಸ್ಯವನ್ನು ಕಲಿಯಬಹುದು. ‘ಕೆಜಿಗೆ ಎಷ್ಟು’ ಅಂತ ಕೇಳಿ. ‘100 ರೂಪಾಯಿ’ ಎನ್ನುತ್ತಾನೆ. ‘80ಕ್ಕೆ ಕೊಡು’ ಅಂದ್ರೆ ‘ಅಯ್ಯೋ ಸ್ವಾಮಿ, ನಮ್ಮ ಅಸಲೇ 90, 95ಕ್ಕೆ ಕಮ್ಮಿ ಇಲ್ಲಾ’ ಅಂತಾನೆ. ‘80ಕ್ಕೆ ಕೊಡುತ್ತೀ ಆದ್ರೆ ಕೊಡು’ ಅನ್ನಿ. ವ್ಯಾಪಾರಿ ನಷ್ಟಕ್ಕೆ ಕೊಡುವವನಂತೆ ನಟಿಸುತ್ತ ‘ಎಷ್ಟು ಬೇಕು’ ಅಂತ ಕೇಳ್ತಾನೆ. ‘ಒಂದು ಕೆಜಿ’ ಅಂದ್ರೆ, ‘ಎರಡು ಕೇಜಿ ತಗೋತೀರಾದ್ರೆ ಕೊಡ್ತೀನಿ’ ಅಂತಾನೆ. ಕೊನೆಗೆ ‘ನಂಗೆ ಒಂದೇ ಕೆಜಿ ಸಾಕು, ಕೊಡ್ತೀ ಆದ್ರೆ ಕೊಡು, ಇಲ್ಲಾಂದ್ರೆ ಬೇಡಾ’ ಅಂದಾಗ 80 ರೂ.ಗೆ ಕೊಟ್ಟು ಬಿಡ್ತಾನೆ. ಅವನ ಅಸಲು ಎಷ್ಟೇ ಅನ್ನಲಿ, ನೀವು ನಿಮ್ಮ ಬೆಲೆಗೆ ಕೇಳಿ. ಇದು ಎಲ್ಲ ಕಡೆ ನಡಿಯೋಲ್ಲಾ. ಮಂಗಳೂರಿನ ಕಡೆ ಚೌಕಾಸಿ ಮಾಡಿದರೆ ಕೆಕ್ಕರಿಸಿ ನೋಡುತ್ತಾರೆ. ದೆಹಲಿಯಲ್ಲಿ ಚೌಕಾಸಿ ಮಾಡಿದರೆ ಅರ್ಧಕ್ಕಿಂತ ಕಡಿಮೆಗೆ ಕೊಟ್ಟುಬಿಡುತ್ತಾರೆ.
ಇದನ್ನೂ ಓದಿ: ಗೆಲುವಿನ ಸೂತ್ರಗಳು ಕ್ಲಿಷ್ಟವಲ್ಲ, ತುಂಬ ಸರಳ
ಜೋಕು: ನನ್ನ ಅಕ್ಕ ಶೋಭಾ ದೆಹಲಿಯ ಸದರ್ ಬಜಾರಿನ ವ್ಯಾಪಾರಿ ಬಳಿ ಕೊಡೆಯ ಬೆಲೆ ವಿಚಾರಿಸಿದಳು. ‘100 ರೂ.’ ಎಂದ. ಆಕೆ ಅರ್ಧಕ್ಕೆ ಕೇಳಿದಳು. ಆತ ಒಪ್ಪಿದ. ಕೂಡಲೇ ಆಕೆ 25ಕ್ಕೆ ಕೇಳಿದಳು. ಅವನಿಗೆ ತಮಾಷೆಗೆ ‘ಹೂಂ’ ಅಂದ. ಇದೂ ಜಾಸ್ತಿ ಆಯಿತೇನೋ ಅನ್ನಿಸಿ ಹನ್ನೆರಡುವರೆಗೆ ಕೇಳಿದಳು. ಅವನಿಗೆ ಸಿಟ್ಟು ಬಂದು, ‘ದುಡ್ಡು ಕೊಡುವುದೇ ಬೇಡಾ, ಒಂದನ್ನಾ ಫ್ರೀಯಾಗಿ ತಗೊಳ್ಳಿ’ ಅಂದಾಗ ಶೋಭಕ್ಕ ‘ಕೊಡೋದಾದ್ರೆ ಎರಡು ಕೊಡು, ಇಲ್ಲದಿದ್ರೆ ಬೇಡವೇ ಬೇಡಾ’ ಅಂದಳು.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)