

ಪ್ರಸ್ತುತ ನಿದರ್ಶನದಲ್ಲಿ ನಾನು ಮುಖ್ಯವಾಗಿ ನಿಮಗೆ ಹೇಳಬಹುದಾದುದಿಷ್ಟೇ. ನಿಮಗೆ ನೀವೇ ಮಿತಿಯನ್ನು ಹಾಕಿಕೊಂಡು ವಿಲಿವಿಲಿ ಒದ್ದಾಡಬೇಡಿ. ಉದಾಹರಣೆಗೆ, ಮನುಷ್ಯ ಚಂದ್ರನಲ್ಲಿ ಇಳಿಯಬಹುದು, ಅಮೆರಿಕದಲ್ಲಿ ಕುಳಿತಿದ್ದಂತೆಯೇ ಭಾರತದಲ್ಲಿ ಏನೇನಾಗುತ್ತಿದೆ ಎಂಬುದನ್ನು ನೋಡಬಹುದು, ಕತ್ತರಿಸಿದ ಅಂಗಾಂಗಗಳನ್ನು ಮತ್ತೆ ಎಂದಿನಂತೆಯೇ ಜೋಡಿಸಬಹುದು ಎಂದೆಲ್ಲ ಯಾರಾದರೂ ಶತಮಾನದ ಹಿಂದೆ ಊಹಿಸಿದ್ದರೆ? ಆದರೆ ಪ್ರಯತ್ನಪಟ್ಟಂತೆಲ್ಲ ಮನುಷ್ಯ ಒಂದೊಂದನ್ನೇ ಸಾಧಿಸುತ್ತ ಬಂದ. ಮನುಷ್ಯ ಜನಾಂಗದ ವಿಷಯದಲ್ಲಿ ನಿಜವಾದದ್ದು ವೈಯಕ್ತಿಕ ಜೀವನದಲ್ಲೂ ಸಾಧ್ಯವಾಗಬಹುದು.
ಯಾವುದೇ ಕೆಲಸಕ್ಕೆ ಎಷ್ಟು ಸಮಯ ವ್ಯಯಿಸ್ತೀರಿ, ಎಷ್ಟು ಮಾಹಿತಿ ಸಂಗ್ರಹಿಸ್ತೀರಿ, ಎಷ್ಟು ಜನರ ಅನುಭವವನ್ನು ಅದಕ್ಕೆ ಅಳವಡಿಸಿಕೊಳ್ತೀರಿ ಎನ್ನುವುದರ ಮೇಲೆ ಆ ಕೆಲಸದ ಬಗ್ಗೆ ನಿಮಗೆ ಇರುವ ಅಗಾಧ ಅನುಭವದ ಪ್ರಮಾಣವನ್ನು ತಿಳಿದುಕೊಳ್ಳಬಹುದು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಕೆಲವರು ವಯಸ್ಸಲ್ಲಿ ಹಿರಿಯರಾಗಿರ್ತಾರೆ, ಆದರೆ ತೀರಾ ದಡ್ಡರಾಗಿರ್ತಾರೆ. ಯಾವುದೋ ಓಬೀರಾಯನ ಕಾಲದ ಅನುಭವ ಹೇಳುತ್ತಾ ಕೇಳುಗರ ತಲೆ ಚಿಟ್ಟು ಹಿಡಿಸ್ತಾರೆ. ಅವರ ಆ ಅನುಭವ ಪ್ರಕೃತಕ್ಕೆ ಅಪ್ರಸ್ತುತವಾಗಿರ್ತದೆ.
ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗ್ಬೇಕು. ನನಗೆ ವಿದ್ಯೆ ಇಲ್ಲ, ದುಡ್ಡಿಲ್ಲ ಎಂದುಕೊಳ್ತಾ ಕೊರಗೋದು ಸರಿಯಲ್ಲ. ಬಡತನದಲ್ಲಿ ಹುಟ್ಟೋದು ತಪ್ಪಲ್ಲ, ಆದ್ರೆ ಬಡತನದಲ್ಲಿ ಜೀವಿಸೋದು, ಅದ್ರಲ್ಲೇ ಸಾಯೋದು ತಪು್ಪ ಅನ್ನೋದು ನನ್ನ ಅಭಿಪ್ರಾಯ.
ನಾಮಬಲದಿಂದಲೇ ಎಲ್ಲವೂ ಸಾಧ್ಯವಿಲ್ಲ. ಸಿನಿಮಾ ಕ್ಷೇತ್ರವನ್ನೇ ನೋಡಿ. ರವಿಚಂದ್ರನ್ಗೆ ತನ್ನ ತಮ್ಮ ಬಾಲಾಜಿಯನ್ನು ಹಾಗೂ ತನ್ನ ಸ್ವಂತ ಮಕ್ಕಳನ್ನು ಹೀರೋ ಮಾಡಲು ಎಷ್ಟು ಕಷ್ಟ ಆಗ್ತಾ ಇದೆ! ದುಡ್ಡಿದೆ, ಚಿತ್ರ ಹಂಚಿಕೆದಾರರಿದ್ದಾರೆ. ಬೇಕಾದ ಎಲ್ಲ ಸೌಕರ್ಯಗಳಿದ್ದರೂ...
ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ದ್ವಾರಕೀಶ್, ಹಂಸಲೇಖಾ ಮುಂತಾದವರು ತಮ್ಮ ಮಕ್ಕಳನ್ನು ಹೀರೋ ಮಾಡಿದ್ರು, ಆದರೆ ಯಶಸ್ಸು ಗಳಿಸಲಾಗಲಿಲ್ಲ. ಇದು ಸುಲಭದ ಮಾತಲ್ಲ. ‘ನಾನು ಅಂಥವರ ಮಗನಾಗಿ ಹುಟ್ಟಿದ್ದರೆ’, ‘ನನಗೆ ಅಂತಹ ಸೌಕರ್ಯಗಳು ಸಿಕ್ಕಿದ್ದರೆ’ ಎಂಬುದಾಗಿ ಮನಸ್ಸಲ್ಲಿ ಅಂದುಕೊಂಡು ಕೊರಗಬಹುದಾದ್ರೂ, ಸಮಾಧಾನ ಮಾಡಿಕೊಳ್ಳಬಹುದಾದ್ರೂ ಸ್ವಯಂಪ್ರತಿಭೆ, ಪರಿಶ್ರಮಗಳಿಲ್ಲದೆ ಯಾರೂ ಬೆಳಕಿಗೆ ಬರೋದು ಅಸಾಧ್ಯ.
ನಟ ಉಪೇಂದ್ರ ಬಹಳ ಕಷ್ಟಪಟ್ಟು ಮೇಲೇರಿದವರು. ಡಾ.ರಾಜ್ಕುಮಾರ್ ನಾಟಕ ರಂಗದಿಂದ ಬಂದವರು. ಅವರ ಸ್ವಪ್ರಯತ್ನವೇ ನಟಸಾರ್ವಭೌಮನಾಗಲು ಕಾರಣವಾಯ್ತು. ಎಲ್ಲರೂ ಹೋಗೋ ದಾರಿಯಲ್ಲಿ ನೀವು ಹೋಗ್ಬೇಡಿ. ನಿಮ್ಮ ದಾರಿಯೇ ಬೇರೆಯಾಗಿರ್ಲಿ. ಎಲ್ಲರೂ ಹೋಗುವ ದಾರಿಯ ಬದಿಯಲ್ಲಿರುವ ಹಣ್ಣುಗಳನ್ನು ದಾರಿಹೋಕರು ಕೊಯ್ದಿರ್ತಾರೆ. ಆದರೆ ನೀವು ದಟ್ಟ ಪೊದೆಯೊಳಗೆ ನುಗ್ಗಿದರೆ ಮೈಕೈಗೆ ಗಾಯಗಳಾದರೂ ಯಾರೂ ಮುಟ್ಟಿರದ ಉತ್ತಮವಾದ ಹಣ್ಣುಗಳು ಸಿಗುತ್ತವೆ. ಅಂದರೆ ಕಷ್ಟಪಟ್ಟಾಗ ಉತ್ತಮ ಪ್ರತಿಫಲ ಸಿಗುತ್ತೆ. ಯಶಸ್ಸಿನತ್ತ ಪಯಣಿಸಲು ನೀವು ನಿಮ್ಮೆಲ್ಲ ಸುಖ, ಸಂತೋಷಗಳನ್ನೂ ತ್ಯಜಿಸಬೇಕಾಗುತ್ತೆ. ಹಡಗೊಂದು ಶಾಂತ ಸಮುದ್ರದ ನಡು ಸೇರಲು ದಡದ ಅಲೆಗಳನ್ನು ಭೇದಿಸಿ ಮುನ್ನುಗ್ಗೋ ಥರ, ವಿಮಾನವೊಂದು ಮೇಲೇರಲು ರನ್ವೇಯಲ್ಲಿ ಅತಿರಭಸವಾಗಿ ಓಡೋ ಥರ ನಿಮ್ಮ ಪ್ರಯತ್ನ ಇರ್ಬೇಕು.
ನಾವು ಎಷ್ಟೋ ಕೆಲಸಗಳನ್ನು ಮಾಡಬೇಕು ಅಂದುಕೊಂಡಿರ್ತೇವೆ. ಆದರೆ ಯಾವ್ಯಾವುದೋ ಕಾರಣಗಳಿಗಾಗಿ ಮುಂದೂಡುತ್ತಲೇ ಇರ್ತೇವೆ. ಒಬ್ಬ ವ್ಯಕ್ತಿಗೆ ಅನುಭವವೆಂಬುದು ಇಷ್ಟು ವರ್ಷದಲ್ಲೇ ಆಗುತ್ತೆ ಎಂದು ಹೇಳೋಕಾಗಲ್ಲ. ಮೂರು ದಶಕದ ಹಿಂದೆ ನಾನು ಮಾಡುತ್ತಿದ್ದ ಯಾವುದೋ ಒಂದು ಮ್ಯಾಜಿಕ್ ಟ್ರಿಕ್ಕನ್ನು ನೋಡಿ ಒಬ್ಬರು, ‘ಇದನ್ನು ಮಾಡಲು ಎಷ್ಟು ವರ್ಷ ಬೇಕು’ ಎಂದು ಕೇಳಿದರು. ಇದಕ್ಕೆ ನಾನು, ‘ದಿನಕ್ಕೆ 3 ಗಂಟೆ ಮಾಡಿದಲ್ಲಿ 30 ವರ್ಷ ಬೇಕು’ ಅಂದೆ. ತಕ್ಷಣ ಅವರು, ‘ನಿಮಗಿನ್ನೂ 30 ವರ್ಷವೇ ಆಗಿಲ್ಲ, ಅದು ಹೇಗೆ ಸಾಧ್ಯ’ ಅಂದರು. ಅದಕ್ಕೆ, ‘ದಿನಕ್ಕೆ 3 ಗಂಟೆ ಆದ್ರೆ 30 ವರ್ಷ, 6 ಗಂಟೆ ಆದ್ರೆ 15 ವರ್ಷ ಬೇಕು. ಹಾಗೇನೆ ನಾನು ದಿನಕ್ಕೆ 14 ರಿಂದ 15 ಗಂಟೆ ಮಾಡಿದೀನಿ, ಆದ್ರಿಂದ್ಲೇ ಸಾಧ್ಯವಾಯ್ತು’ ಅಂದೆ.
ಸಿರಿವಂತರಾಗಬೇಕಾದರೆ ಸಾಫ್ವೇರ್ ಎಂಜಿನಿಯರ್ರೇ ಆಗಬೇಕಿಲ್ಲ. ಸರ್ಕಾರಿ ನೌಕರಿಯಲ್ಲೇ ಇರಬೇಕಾಗಿಲ್ಲ. ಮಂತ್ರಿಯೋ, ಶಾಸಕನೋ ಆಗಲೇಬೇಕು ಎಂದೇನೂ ನಿಯಮವಿಲ್ಲ. ಮಾಡುವ ಕೆಲಸದಲ್ಲಿ ನಿಷ್ಠೆಯಿದ್ದರೆ ಕ್ಷೌರಿಕ ಕೂಡ ಲಕ್ಷಾಧಿಪತಿ ಆಗಬಲ್ಲ. ಈ ಮಾತಿಗೆ ಉದಾಹರಣೆಯಾಗಿ ನಮ್ಮ ಕಣ್ಮುಂದೆ ಕ್ಷೌರಿಕ ಮುತ್ತುರಾಜ್ ಇದ್ದಾರೆ. ಬೆಂಗಳೂರಿನ ಬನಶಂಕರಿ ಕಾಂಪ್ಲೆಕ್ಸ್ನಲ್ಲಿ ಅವರ ‘ಅಮೆರಿಕನ್ ಹೇರ್ ಡ್ರೆಸ್ಸರ್ಸ್ ಸಲೂನ್’ ಇದೆ. ಇವತ್ತು 20 ಮಂದಿ ನೌಕರರನ್ನು ಜತೆಗಿಟ್ಟುಕೊಂಡು ಜೇನುಹುಳಕ್ಕಿಂತ ಬಿಜಿಯಾಗಿ ಕೆಲಸ ಮಾಡುತ್ತಿದ್ದಾರೆ ಮುತ್ತುರಾಜ್. ಈಗ ಕೈ ತುಂಬ ಆದಾಯವಿದೆ. ಮನದ ತುಂಬ ತೃಪ್ತಿಯಿದೆ, ಸ್ವಂತದ ಮನೆಯಿದೆ. ಎರಡು ಹೊಸ ಕಟ್ಟಡಗಳ ನಿಮಾಣ ಕಾರ್ಯ ನಡೆಯುತ್ತಿದೆ. ಇದರ ಜತೆಯಲ್ಲೇ ‘ಸಮಾಜಸೇವೆ’ಯೂ ನಡೆಯುತ್ತಿದೆ!
ಇವತ್ತು ಬೆಂಗಳೂರಿನಲ್ಲಿ ‘ವರ್ಲ್ಡ್ ಫೇಮಸ್’ ಆಗಿರುವ ಮುತ್ತುರಾಜ್ ಮೊದಲು ಎಮ್ಮೆಗೆ ಕ್ಷೌರ ಮಾಡಿದರಂತೆ! ನಂತರ ಹಸೀ ಮಣ್ಣಿನ ಮಡಕೆಗೆ ಕ್ಷೌರ ಮಾಡಿ ಕೆಲಸ ಕಲಿತರಂತೆ. ಆರಂಭದಲ್ಲಿ ಎಲ್ಲರೂ ಇದನ್ನು, ಇವರ ವೃತ್ತಿಯನ್ನು ಹೀಯಾಳಿಸಿದರು. ತಮ್ಮಷ್ಟಕ್ಕೆ ತಾವೇ ನಕ್ಕರು. ಊಹೂಂ, ಈ ಟೀಕೆಗೆ ಮುತ್ತುರಾಜ್ ಬಗ್ಗಲಿಲ್ಲ. ಅಪಮಾನಕ್ಕೆ ಕುಗ್ಗಲಿಲ್ಲ. ಬದಲಿಗೆ, ಒಂದೊಂದು ಅಪಮಾನ ಕೈ ಜಗ್ಗಿದಾಗಲೂ ಮತ್ತಷ್ಟು ಗೆಲುವಾದರು. ಕಾಯಕವೇ ಕೈಲಾಸ ಎಂದು ಮುಂದುವರಿದರು...
ಪರಿಣಾಮ, ಇವತ್ತು ಮುತ್ತುರಾಜ್ ಬಳಿ ಚೆಂದದ ಕಾರ್ ಇದೆ. ಲಕ್ಷಗಟ್ಟಲೇ ಹಣ ಕೈ ಸೇರಿದೆ. ಸಂತೋಷ ಜತೆಗೇ ಇದೆ! ಎಲ್ಲ ಗೆಲುವಿನ ಬೀಜಮಂತ್ರ ಪಕ್ಕಾ ಗುರಿ, ಅಚಲ ಆತ್ಮವಿಶ್ವಾಸ, ಛಲ ಬಿಡದ ಪರಿಶ್ರಮ, ಕಷ್ಟಸಹಿಷ್ಣುತೆ. ಇವೆಲ್ಲವೂ ನಿಮ್ಮದಾಗಿಸಿಕೊಂಡರೆ ಯಶಸ್ಸು ಗ್ಯಾರಂಟಿ. ಇನ್ನು ಏನು ಯೋಚಿಸ್ತಾ ಇದ್ದೀರಾ. ಹೊರಡಿ-ಗೆಲುವಿನ ಬೇಟೆಗೆ.
ಜೋಕು-ಒಬ್ಬಾತ ‘ನಾಳೆ ಡ್ರಾ ಆಗುವ ಲಾಟರಿಯಲ್ಲಿ ಕೋಟಿ ರೂಪಾಯಿ ದುಡ್ಡು ಬಂದರೆ ತಿಮ್ಮಪ್ಪನಿಗೆ 50 ಲಕ್ಷ ರೂಪಾಯಿ ಕೊಡ್ತೀನಿ’ ಅಂತ ರಾತ್ರಿ ಹರಕೆ ಹೊತ್ತುಕೊಳ್ತಾನೆ. ನಂತರ ಹೆಂಡ್ತಿ ಮಾತು ಕೇಳಿ ತನಗೆ ಕಮ್ಮಿ ಹಣ ಸಾಕೆಂದು ಮನಸ್ಸು ಬದಲಾಯಿಸ್ತಾ ತಿಮ್ಮಪ್ಪನಿಗೆ ಕೊಡಬೇಕಾದ ದಕ್ಷಿಣೆಯನ್ನು 60, 70, 80 ಲಕ್ಷಕ್ಕೆ ಏರಿಸುತ್ತಾನೆ. ಕೊನೆಗೆ ದೇವರಿಗೆ 90 ಲಕ್ಷ ಕೊಡಲು ತಯಾರಾಗುತ್ತಾನೆ. ಇಷ್ಟು ಆಗುವಾಗ ಬೆಳಗಾಗುತ್ತದೆ. ದೇವರು ಪ್ರತ್ಯಕ್ಷನಾಗಿ ತನ್ನ ಭಕ್ತನಿಗೆ ‘ಲಾಟ್ರಿ ಟಿಕೆಟ್ ತಗೊಂಡಿದ್ದೀಯಾ’ ಎಂದು ಕೇಳ್ತಾನೆ. ‘ಇನ್ನೂ ಇಲ್ಲಾ’ ಅಂತಾನೆ. ‘ಮೂರ್ಖ, ಲಾಟರಿ ಹೊಡೀಬೇಕು ಅಂದ್ರೆ ಮೊದಲು ಟಿಕೇಟು ತಗೊಬೇಕು’ ಅಂತ ಹೇಳಿ ದೇವರು ಮಾಯವಾಗುತ್ತಾನೆ. ಹೌದಲ್ವ? ನಮ್ಮಲ್ಲಿ ಎಷ್ಟೋ ಜನ ಪೂರ್ವಸಿದ್ಧತೆ ಇಲ್ಲದೆ ಕನಸು ಕಾಣುತ್ತಾ ಇರ್ತಾರೆ!
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)