

| ಅಶ್ವಿನಿ ಎಚ್.ಆರ್. ಬೆಂಗಳೂರು
ತ್ರಿಫಲವು ಅನೇಕ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿ ಯಾಗಿದ್ದು, ಈ ಆಯುರ್ವೆದ ಔಷಧವನ್ನು ಭಾರತೀಯರು ಅನಾದಿ ಕಾಲದಿಂದಲೂ ಬಳಸಿಕೊಂಡು ಬಂದಿದ್ದಾರೆ. ಇದು ವಿರೇಚಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಾಗಾಗಿ ಬಹುತೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇಂದಿಗೂ ತ್ರಿಫಲವನ್ನೇ ಬಳಸುತ್ತಾರೆ. ಅಂದಹಾಗೆ ಈ ಲೇಖನದಲ್ಲಿ ತ್ರಿಫಲದಿಂದ ಏನೆಲ್ಲಾ ಪ್ರಯೋಜನಗಳಿವೆ ಹಾಗೂ ಅಡ್ಡಪರಿಣಾಮಗಳಿವೆಯೇ? ಎಂಬ ಮಾಹಿತಿ ಕೊಡಲಾಗಿದೆ.
ಆಯುರ್ವೆದ ಗ್ರಂಥದಲ್ಲಿ ಉಲ್ಲೇಖ: ತ್ರಿಫಲ ಹೆಸರು ಸಂಸ್ಕೃತದಿಂದ ಬಂದಿದೆ. ತ್ರಿ ಎಂದರೆ ಮೂರು, ಫಲ ಎಂದರೆ ಹಣ್ಣು. ಇದರರ್ಥ ತ್ರಿಫಲವು ಮೂರು ಹಣ್ಣುಗಳ ಮಿಶ್ರಣವಾಗಿದೆ. ಆಯುರ್ವೆದದ ಪ್ರಕಾರ, ತ್ರಿಫಲ ಮೂರು ದೋಷಗಳಾದ ವಾತ, ಪಿತ್ತ ಮತ್ತು ಕಫಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಪ್ರಾಚೀನ ಆಯುರ್ವೆದ ಗ್ರಂಥ ಚರಕ ಸಂಹಿತೆಯಲ್ಲಿ ತ್ರಿಫಲವನ್ನು ಉಲ್ಲೇಖಿಸಲಾಗಿದೆ. ತ್ರಿಫಲದಲ್ಲಿಯೂ ಸಹ ಸ್ವಲ್ಪ, ಮಧುರ, ಸುಗಂಧಿ ಎಂದು ಮೂರು ವಿಧಗಳಿವೆ.
ಹಲ್ಲಿನ ಕುಳಿಗಳ ವಿರುದ್ಧ ರಕ್ಷಣೆ: ಅಧ್ಯಯನವು ಮೌತ್ವಾಶ್ ಆಗಿ ತ್ರಿಫಲ ಉಪಯೋಗಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪ್ಲೇಕ್ ಮತ್ತು ಒಸಡುಗಳ ಉರಿಯೂತ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ಟೈಪ್ 2 ಡಯಾಬಿಟಿಸ್ಗೆ ಮದ್ದು: ಮಧುಮೇಹ ಹೊಂದಿರುವ 150 ಜನರ ಮೇಲೆ ಅಧ್ಯಯನ ನಡೆಸಿದಾಗ ತ್ರಿಫಲಾ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿಯಲಾಗಿದೆ. ಅಷ್ಟೇ ಅಲ್ಲ, ತ್ರಿಫಲದಲ್ಲಿರುವ ಆಮ್ಲವು ಮಧುಮೇಹ ತಡೆಗಟ್ಟಲು ಸಹಾಯ ಮಾಡುವ ಆಂಟಿಡಯಾಬಿಟಿಕ್ ಗುಣಲಕ್ಷಣಗಳನ್ನು ಸಹ ಹೊಂದಿದೆ.
ತ್ವಚೆಯ ಆರೋಗ್ಯಕ್ಕೆ: ತ್ರಿಫಲದಲ್ಲಿ ಫ್ಲೇವನಾಯ್್ಡಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ತ್ವಚೆ ಕಪ್ಪಾಗುವುದು, ಹಾನಿಯಾಗುವುದು ಮತ್ತು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಕೆಲವು ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಕಾರಿ: ತ್ರಿಫಲದಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮತ್ತು ಹೈಡ್ರಾಕ್ಸಿಲ್ ಮತ್ತು ನೈಟ್ರಿಕ್ ಆಕ್ಸೈಡ್ ರಾಡಿಕಲ್ಗಳು ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಮಲಬದ್ಧತೆ ನಿವಾರಣೆ: ತ್ರಿಫಲ ವಿರೇಚಕವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹ ಬಳಸಬಹುದು. ಇದು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳು ಇರುವವರು ಮಲಗುವ ಮುನ್ನ ಒಂದು ಚಮಚ ತ್ರಿಫಲ ಸೇವಿಸಬಹುದು.
ಯಾರೆಲ್ಲಾ ಸೇವಿಸಬಾರದು?: ತ್ರಿಫಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹಾಗೆಯೇ ಮಧುಮೇಹ ಹೊಂದಿರುವವರು ತ್ರಿಫಲ ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಸಂರ್ಪಸಿ. ಅಷ್ಟೆ ಅಲ್ಲ ಕೆಲವು ಅಧ್ಯಯನಗಳು ಗರ್ಭಿಣಿಯರಿಗೆ ತ್ರಿಫಲ ಸೂಕ್ತವಲ್ಲ ಎಂದು ಹೇಳಿವೆ.