ಟಿ20 ವಿಶ್ವಕಪ್​ನಲ್ಲಿ ಟ್ರೀ ಬೈಕ್ ಸದ್ದು!; ಸ್ವದೇಶಿ ಸ್ವಾಭಿಮಾನಿ ಜೋಶ್

Masth 2
Published on

| ಸಂದೀಪ್ ಸಾಲ್ಯಾನ್ ಬಂಟ್ವಾಳ

ಅಡಕೆ ಮರ ಏರುವ ಬೈಕ್ ಆವಿಷ್ಕರಿಸಿ ಗಮನ ಸೆಳೆದಿದ್ದ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮದ ಪ್ರಗತಿಪರ ಕೃಷಿಕ, ಸಂಶೋಧಕ ಗಣಪತಿ ಭಟ್ ಭಾರತ ಟಿ-20 ಅಂತಾರಾಷ್ಟ್ರೀಯ ತಂಡಕ್ಕೆ ಚಿಯರ್ಸ್ ಹೇಳಲಿದ್ದಾರೆ. ಮುಂದಿನ ತಿಂಗಳು ನಡೆಯುವ ವಿಶ್ವಕಪ್ ಟಿ20 ಕ್ರಿಕೆಟ್​ನಲ್ಲಿ ಭಾರತ ಗೆದ್ದು ಬರುವ ಆಶಯದ ವಿಡಿಯೋದಲ್ಲಿ ಗಣಪತಿ ಭಟ್ ಕಾಣಿಸಿಕೊಳ್ಳಲಿದ್ದಾರೆ. ಗ್ರಾಮೀಣ ಭಾಗದ ಕೃಷಿಕನಿಗೆ ಸ್ಟಾರ್ ಸ್ಪೋರ್ಟ್ಸ್ ಚಾನಲ್ ಈ ಅವಕಾಶ ನೀಡಿದ್ದು, ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡು ತಾವೇ ಆವಿಷ್ಕರಿಸಿದ ಟ್ರೀ ಬೈಕ್​ನಲ್ಲಿ ಅಡಕೆ ಮರವೇರುತ್ತ ಭಾರತ ತಂಡವನ್ನು ಗಣಪತಿ ಭಟ್ ಹುರಿದುಂಬಿಸಲಿದ್ದಾರೆ. ಸಜೀಪಮೂಡದ ಕೋಮಾಲಿ ಎಂಬಲ್ಲಿಯ ಗಣಪತಿ ಭಟ್ ಕೃಷಿ ಕಾರ್ವಿುಕರ ಸಮಸ್ಯೆ ಬಗೆಹರಿಸಲು 2019ರಲ್ಲಿ ಇಂಧನ ಚಾಲಿತ ದೇಸಿ ಟ್ರೀ ಬೈಕ್ ಆವಿಷ್ಕರಿಸಿದ್ದರು. ಸುಧಾರಿತ ವಿಧಾನದ ಈ ಬೈಕ್ ಕಡಿಮೆ ಅವಧಿಯಲ್ಲಿ ರೈತರ ಗಮನ ಸೆಳೆದು, ದೇಶ-ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿತ್ತು. ಇದರಿಂದ ಪ್ರೇರಿತಗೊಂಡಿರುವ ಸ್ಟಾರ್ ಸ್ಪೋರ್ಟ್ಸ್ ಚಾನಲ್ ಟಿ20 ವಿಶ್ವಕಪ್​ನಲ್ಲಿ ಭಾರತದ ಆಟಗಾರರನ್ನು ಹುರಿದುಂಬಿಸಲು ಜಾಹೀರಾತಿನಲ್ಲಿ ದೇಸಿ ನಿರ್ವಿುತ ‘ಟ್ರೀ ಬೈಕ್’ ಬಳಸಲು ತೀರ್ವನಿಸಿದೆ.

ಶೂಟಿಂಗ್ ಪೂರ್ಣ: ಸ್ಟಾರ್ ಸ್ಪೋರ್ಟ್ಸ್ ಚಾನಲ್​ನ ತಂಡ ಮೂರು ದಿನ ಗಣಪತಿ ಭಟ್ ಅವರ ಮನೆಯಲ್ಲಿ ಉಳಿದು ಶೂಟಿಂಗ್ ಪೂರ್ಣಗೊಳಿಸಿದೆ. ಗಣಪತಿ ಭಟ್, ಮಗಳು ಸುಪ್ರಿಯಾ ಭಟ್ ಹಾಗೂ ಮಗ ಶ್ರೀವರ ಭಟ್ ಇರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಅಡಕೆ ತೋಟ, ಮನೆಯಂಗಳ, ಒಳಾಂಗಣದಲ್ಲಿ ಕ್ರಿಕೆಟ್ ಆಡುವ ದೃಶ್ಯಗಳ ಚಿತ್ರೀಕರಣ ನಡೆಸಿದ್ದು ಇಂಗ್ಲಿಷ್, ಹಿಂದಿ, ಕನ್ನಡ ಮಾತ್ರವಲ್ಲದೆ ತುಳು ಭಾಷೆಯಲ್ಲೂ ಕ್ರಿಕೆಟ್ ತಂಡವನ್ನು ಹುರಿದುಂಬಿಸುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. 5 ನಿಮಿಷದ ಈ ತುಣುಕು ಕ್ರಿಕೆಟ್ ವಿರಾಮದ ವೇಳೆ ಪ್ರಸಾರಗೊಳ್ಳಲಿದೆ.

ರೈತರು ನಾವು ಕೂಡ ಕ್ರಿಕೆಟ್ ಅಭಿಮಾನಿಗಳು, ಹೇಗೆ ನಮ್ಮ ಭಾರತದ ಆವಿಷ್ಕಾರವಾದ ಟ್ರೀ ಬೈಕ್ ದೇಶ ವಿದೇಶಗಳಲ್ಲಿ ಯಶಸ್ವಿಯಾಗಿದೆಯೋ ಅದೇ ರೀತಿ ನಮ್ಮ ದೇಶದ ಕ್ರಿಕೆಟ್ ತಂಡವೂ ವಿಶ್ವದೆಲ್ಲೆಡೆ ಗೆದ್ದು ಬರಲಿ ಎಂಬ ಸಂದೇಶ ವಿಡಿಯೋದಲ್ಲಿದೆ. ಟೀಮ್ ಇಂಡಿಯಾವನ್ನು ಹುರಿದುಂಬಿಸುವುದು ನಿಜಕ್ಕೂ ಹೆಮ್ಮೆಯ ವಿಷಯ.

| ಗಣಪತಿ ಭಟ್ ಸಜೀಪಮೂಡ ಪ್ರಗತಿಪರ ಕೃಷಿಕ, ಟ್ರೀ ಬೈಕ್ ಸಂಶೋಧಕರು

ಸಂಚಲನ ಮೂಡಿಸಿದ ಟ್ರೀ ಬೈಕ್

ಗಣಪತಿ ಭಟ್ ಆವಿಷ್ಕರಿಸಿದ ಅಡಕೆ ಮರವೇರುವ ಬೈಕ್​ಗೆ ದೇಶ ವಿದೇಶಗಳಿಂದ ಬೇಡಿಕೆ ಬರುತ್ತಿದೆ. ಎರಡು ವರ್ಷಗಳಲ್ಲೇ 800ಕ್ಕೂ ಅಧಿಕ ಟ್ರೀ ಬೈಕ್ ತಯಾರಿಸಿ ಮಾರಾಟ ಮಾಡಿದ್ದಾರೆ. ಇದೇ ಮಾದರಿಯಲ್ಲಿ ತೆಂಗಿನ ಮರ ಏರುವ ಬೈಕನ್ನೂ ಆವಿಷ್ಕರಿಸಿದ್ದು ಅದಕ್ಕೂ ಬೇಡಿಕೆಯಿದೆ. ತೆಂಗಿನ ಮರ ಏರುವ ಟ್ರೀ ಬೈಕ್​ಗೆ ಸರ್ಕಾರದ ಸಬ್ಸಿಡಿಯೂ ಲಭ್ಯವಿದೆ. ಈ ಯಂತ್ರ ತಯಾರಿಸಿ ಲಾಭ ಪಡೆಯುತ್ತಿಲ್ಲ, ಬದಲಾಗಿ ಅದರ ನಿರ್ಮಾಣ ವೆಚ್ಚವಷ್ಟೇ ಪಡೆಯುತ್ತಿದ್ದೇನೆ, ಹೆಚ್ಚು ಗ್ರಿಪ್ ಹಾಗೂ ಮೋಲ್ಡೆಡ್ ಟಯರ್ ಇರುವ ಸುಧಾರಿತ ವಿಧಾನದ ಟ್ರೀ ಬೈಕ್ ಈಗ ಲಭ್ಯವಿದೆ ಎನ್ನುವ ಗಣಪತಿ ಭಟ್ ರೈತರಿಗೆ ಉಚಿತ ಪ್ರಾತ್ಯಕ್ಷಿಕೆ ನೀಡಲು ಸಿದ್ಧನಿರುವುದಾಗಿ ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net