

ಪುಷ್ಪಕ ವಿಮಾನದ ಬಿಡಿಭಾಗಗಳನ್ನು ಜೋಡಿಸುವ ವಿವರಣೆ ನೋಡಿದರೆ ವಿಜ್ಞಾನದ ಜ್ಞಾನ ಮಹರ್ಷಿ ವಾಲ್ಮೀಕಿಗೆ ಅಗಾಧವಾಗಿದೆ. ಪ್ರಾಣಿ ಪಕ್ಷಿಗಳ ಸ್ವಭಾವ, ಪರಿಸರದ ಆಗುಹೋಗುಗಳ ಸ್ಪಷ್ಟ ಅರಿವು ವಾಲ್ಮೀಕಿಗೆ ಇರುವುದು ರಾಮಾಯಣದಿಂದ ತಿಳಿಯುತ್ತದೆ.
| ಡಾ.ಕವಿತಾ ಶಿ. ಕುಸುಗಲ್ಲ
ಕೂಜಂತಂ ರಾಮ ರಾಮೇತಿ ಮಧುರ ಮಧುರಾಕ್ಷರಂ
ಆರುಹ್ಯ ಕವಿತಾ ಶಾಖಂ ವಂದೇ ವಾಲ್ಮೀಕಿ ಕೋಕಿಲಂ
‘ಕಾವ್ಯವೆಂಬ ಹೆಮ್ಮರದ ಕೊಂಬೆ ಮೇಲೆ ಕುಳಿತು ರಾಮಾ ರಾಮಾ ಎಂಬ ಮಧುರ ಅಕ್ಷರಗಳನ್ನು ಸುಮಧುರ ಧ್ವನಿಯಲ್ಲಿ ಹಾಡುವ ವಾಲ್ಮೀಕಿ ಕೋಗಿಲೆಗೆ ನಮನಗಳು’ ಎಂದು ಕೌಶಿಕ ಮುನಿ ಪ್ರಾರ್ಥಿಸುತ್ತಾರೆ. ವಾಲ್ಮೀಕಿಯ ಧ್ವನಿ ಮಾಧುರ್ಯದ ಬಗ್ಗೆ ಒಂದನೇ ಶತಮಾನದ ಕವಿ ಅಶ್ವಘೊಷ ಕೂಡಾ ತನ್ನ ‘ಬುದ್ಧಚರಿತೆ’ಯಲ್ಲಿ ಉಲ್ಲೇಖಿಸಿದ್ದಾನೆ.
ಸುಪ್ರಸಿದ್ಧವಾದ ಕೌಶಿಕ ಮುನಿಯ ಈ ಸಾಲುಗಳು ವಾಲ್ಮೀಕಿ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತವೆ. ಆದಿಕವಿ ವಾಲ್ಮೀಕಿಯ ಕುರಿತ ಸಾಲುಗಳನ್ನು ಉಚ್ಚರಿಸುತ್ತಾ ರಾಮ ಸೀತೆಯರ ಬಗ್ಗೆಯೇ ಮಾತನಾಡುವ ನಾವು ಕೃತಿಕಾರನ ಬಗ್ಗೆ ತಲೆಕೆಡಿಸಿಕೊಂಡಿದ್ದು ಕಡಿಮೆ. ಕ್ರಿ.ಶ. 1495ರಲ್ಲೇ ರಾಮಾಯಣದ ಪ್ರಾಚೀನ ಮೂಲಪ್ರತಿ ಲಂಡನ್ನಲ್ಲಿ ಇತ್ತು (ಜಿ. ಎಸ್. ಅಲ್ತೇಕರ) ಎಂದರೆ ಜಗತ್ತಿನ ಅತಿ ಪ್ರಸಿದ್ಧ ಲೇಖಕರ ಮೇಲೆ ಮಹರ್ಷಿ ವಾಲ್ಮೀಕಿಯ ವಿಚಾರಗಳ ಪ್ರಭಾವ ರಾಮಾಯಣದ ಮೂಲಕ ಆಗಿರಲೇಬೇಕು. ವಾಲ್ಮೀಕಿ ಬಾಲ್ಯದಿಂದಲೇ ಒಳ್ಳೆಯ ಹಾಡುಗಾರನಾಗಿದ್ದು ಕೈಯಲ್ಲಿ ವಲ್ಲಕಿ ಎಂಬ ದ್ವಿತಂತ್ರಿ ವಾದ್ಯ ನುಡಿಸುತ್ತಾ ತನ್ನ ಶಿಷ್ಯಂದಿರಾದ ಲವ ಕುಶರೊಂದಿಗೆ ರಾಮನ ಕುರಿತು ಲೋಕಗೀತೆ ಹಾಡುತ್ತಾ ಅಯೋಧ್ಯೆಗೆ ಬಂದ ಸಮಯದಲ್ಲಿ ರಾಮನ ಆಸ್ಥಾನಕವಿ ಚವನನಿಗಿಂತಲೂ ಮಧುರವಾದ, ಹೆಚ್ಚು ಸಾಹಿತ್ಯಿಕವಾದ ನುಡಿಗಳು ವಾಲ್ಮೀಕಿಯವು ಎಂದು ಕೌಶಿಕ ಮುನಿ ಹೊಗಳುತ್ತಾರೆ. ಪ್ರಚಲಿತವಿರುವ ಅನೇಕ ಜನಪದ ರಾಮಾಯಣಗಳಿಗೆ ವಾಲ್ಮೀಕಿಯ ಲೋಕಗೀತೆಗಳೇ ಮೂಲವಾಗಿರುವ ಸಾಧ್ಯತೆ ಇದೆ.
ತಾನು ಪ್ರಚೇತಸ ಮುನಿಯ ಹತ್ತನೆಯ ಮಗ ಎಂಬುದಾಗಿ ಸ್ವತಃ ವಾಲ್ಮೀಕಿಯೇ ರಾಮಾಯಣದ ಉತ್ತರಕಾಂಡದಲ್ಲಿ ಹೇಳಿಕೊಂಡಿದ್ದಾರೆ. ಜಂಬೂ ದ್ವೀಪದಲ್ಲಿ ಸಾಮ್ರಾಜ್ಯ ಕಟ್ಟಿ ಆಳಿದ ಬುಡಕಟ್ಟು ಜನಾಂಗದ ಪ್ರಥಮ ವಂಶ ಪ್ರಚೇತಸ ವಂಶ (ಪ್ರೊ. ಶ್ರೀಕಾಂತ ತಳಗೇರಿ). ತಂದೆ ಹವಿರ್ಧನರಾಜ ಹಾಗೂ ತಾಯಿ ಸುವರ್ಣರ ಮರಣಾನಂತರ ಗೆಜ್ಜಲು ಅಥವಾ ಗೆದ್ದಿಲು ಗೋತ್ರದ ಪ್ರಚೇತಸರಾಜ ಭಾರ್ಗವ ಗೋತ್ರದ ಹೆಂಡತಿ ಅನುತಾದೇವಿ ಹಾಗೂ ಮಕ್ಕಳೊಂದಿಗೆ ರಾಜ್ಯವನ್ನು ತೊರೆದು ಆಶ್ರಮವಾಸಿಯಾಗುತ್ತಾರೆ. ಅವರ ಹತ್ತನೆಯ ಮಗ ವಲ್ಲಕಿಯ ಜನ್ಮ ಆಗುವುದು ಆಗಲೇ. ಹುಟ್ಟುತ್ತಲೇ ಮಧುರವಾದ ಧ್ವನಿಯಿಂದ ಅತ್ತ ಕೂಸಿಗೆ ತಾಯಿ ‘ವಲ್ಲಕಿ’ ಎಂದು ನಾಮಕರಣ ಮಾಡುತ್ತಾಳೆ. ವಲ್ಲಕಿ ಎಂದರೆ ಎರಡು ತಂತಿಯ ವಾದ್ಯ. ವಾಲಿ ಎಂಬ ಹೆಸರಿಗೂ ವಲ್ಲಕಿಯೇ ಮೂಲ ಎಂಬ ವಾದ ಇದೆ. ಅಣ್ಣಂದಿರಾದ ಕೃಣು, ಋಷ, ಶಂಖು, ನಳ, ಅಗ್ನಿ, ಸುಸೇನ, ಶರಾರಿ, ಚೇತಸ, ಸುಚೇತಸ ಹಾಗೂ ಅಕ್ಕಂದಿರಾದ ಚರಣಿ, ರಿಷ್ಯ ಇವರನ್ನು ಪ್ರೀತಿಯಿಂದ ವಾಲ್ಯ ಎಂದು ಕರೆಯುತ್ತಾರೆ. ಗೆದ್ದಿಲು ಗೋತ್ರದವನಾದ್ದರಿಂದಲೂ, ತಾಯಿಯಿಂದ ವಲ್ಲಕಿ ನುಡಿಸಲು ಕಲಿತು ಸರಾಗವಾಗಿ ಹಾಡುಕಟ್ಟಿ ಹಾಡುವ ವಾಲ್ಯನನ್ನು ವಸಿಷ್ಠರು ವಾಲ್ಮೀಕಿಯೆಂದು ಕರೆದಿರಬಹುದು. ಇಲ್ಲವೆ ವಾಲ್ಯ ಋಷಿ ಎಂಬುದು ವಾಲ್ಮೀಕಿಯಾಗಿರಬಹುದು. ಕಾಡಿನಲ್ಲಿಯೇ ಬೆಳೆದ ಬೇಡ ವಾಲ್ಮೀಕಿ ಬೇಟೆಗಾರನಾಗಿ ಕಾಡಿನ ಪರಿಸರದಲ್ಲಿ ಎಲ್ಲ ಅನುಭವಗಳನ್ನು ಹೊಂದಿದವರಾಗಿಯೂ ತಂದೆ ತಾಯಿಯಿಂದ ಸಿಕ್ಕ ಸಂಸ್ಕಾರ ಇವರನ್ನು ಆಶುಕವಿಯಾಗಿ, ಹಾಡುಗಾರನಾಗಿ ಮಾಡುತ್ತದೆ. ಸಾಮಂತ ರಾಜನ ಮಗಳು ರತ್ನಮಾಲಳನ್ನು ವರಿಸಿದ ವಾಲ್ಮೀಕಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಸಂತಾನ ಆಗುತ್ತವೆ. ರಾಮಾಯಣದ ಕೊನೆಯ ಭಾಗ ಲವಕುಶರ ಪಟ್ಟಾಭಿಷೇಕವನ್ನು ಬರೆಯುವಲ್ಲಿ ಮೊಮ್ಮಗಳು ಕುಶಜಾಳ ಕೊಡುಗೆಯೂ ಇರುವುದಾಗಿ ಅಲ್ತೇಕರ ಅವರು ಉಲ್ಲೇಖಿಸಿದ್ದಾರೆ. (152. ಡಾ. ಪಂಗಣ್ಣವರ)
ವ್ಯಾಧ ರಾಜನ ವಿನಂತಿ ಮೇರೆಗೆ ವಾಲ್ಮೀಕಿ ನಿಷಾಧ ಸಾಮ್ರಾಜ್ಯದ ಗಡಿ ರಕ್ಷಣೆ ಮಾಡುತ್ತಿದ್ದ್ದ ಸಂದರ್ಭದಲ್ಲೇ ವಸಿಷ್ಠ ಮುನಿಗಳು ಆಗಮಿಸುತ್ತಾರೆ. ಆಗ ನಡೆದ ಸಂವಾದದಲ್ಲಿ ಬಾಲಕ ವಾಲ್ಮೀಕಿಯ ಜ್ಞಾನಕ್ಕೆ ಬೆರಗಾಗುತ್ತಾರೆ. ತಂದೆ ತಾಯಿ ವಾಲ್ಮೀಕಿಯ ಮೊದಲ ಗುರುಗಳಾದರೆ ವಸಿಷ್ಠರು ಎರಡನೆಯ ಗುರುಗಳು. ವಸಿಷ್ಠರ ಪ್ರಭಾವಕ್ಕೆ ಒಳಗಾಗಿದ್ದ ವಾಲ್ಮೀಕಿ ಅವರನ್ನು ಕಾಣಲು ಅಯೋಧ್ಯೆಗೆ ಹೋಗಿರುತ್ತಾರೆ. ಅದೇ ಸಂದರ್ಭದಲ್ಲಿ ಬಾಲರಾಮ ಕಾರಣಾಂತರಗಳಿಂದ ವೈರಾಗ್ಯದ ಕಡೆ ವಾಲಿದ್ದರಿಂದ ದಶರಥ ಮಹಾರಾಜ ಈ ಸಮಸ್ಯೆಗೆ ಪರಿಹಾರ ಕೋರಿ ವಸಿಷ್ಠರ ಮೊರೆಹೋಗುತ್ತಾನೆ. ಅಯೋಧ್ಯೆಯ ಆಸ್ಥಾನದಲ್ಲಿ ಇಪ್ಪತ್ತೆರಡು ದಿನಗಳ ಕಾಲ ವಸಿಷ್ಠ, ಸುತಿಕ್ಷ್ಣ, ವಿಶ್ವಾಮಿತ್ರ ಮತ್ತು ವಾಲ್ಮೀಕಿ ಮುನಿಗಳ ಜೊತೆ ನಡೆದ ಬಾಲರಾಮನ ಸಂವಾದ, ವಸಿಷ್ಠರ ಅಧ್ಯಾತ್ಮ ಬೋಧನೆ ‘ಯೋಗವಾಸಿಷ್ಠ’ ಕೃತಿಗೆ ವಸ್ತು. ಮೂವತ್ತೆರಡು ಸಾವಿರ ಶ್ಲೋಕಗಳನ್ನು ವೈರಾಗ್ಯ ಕಾಂಡ, ಮೋಕ್ಷ ಬಯಕೆಯ ಕಾಂಡ, ಸೃಷ್ಟಿ ಕಾಂಡ, ಸ್ಥಿತಿ ಕಾಂಡ, ಉಪಶಮನ ಕಾಂಡ ಹೀಗೆ ಆರು ಕಾಂಡಗಳಲ್ಲಿ ಹಿಡಿದಿಟ್ಟ ಯೋಗವಾಸಿಷ್ಠ ಕೃತಿಯನ್ನು ‘ಮಹಾರಾಮಾಯಣ’ ಅಂತಲೂ ಕರೆಯುತ್ತಾರೆ. ‘ಆತ್ಮೋದ್ಧಾರ ಮತ್ತು ಆತ್ಮ ವಿಮೋಚನೆ’ಯ ಮಾರ್ಗಗಳನ್ನು ದರ್ಶಿಸುವುದರ ಮೂಲಕ ವಿಶ್ವದ ಎಲ್ಲ ಧರ್ಮಗಳಿಗೆ ಅಧ್ಯಾತ್ಮದ ಅಡಿಪಾಯ ಹಾಕಿದ ಶ್ರೇಯಸ್ಸು ವಾಲ್ಮೀಕಿ ಮುನಿಗೆ ಸಲ್ಲುತ್ತದೆ. ಉತ್ತರ ಭಾರತ ಮತ್ತು ಅದರಾಚೆಗೂ ಈ ಕೃತಿಯ ಪ್ರಭಾವ ಎಷ್ಟಾಗುತ್ತದೆ ಎಂದರೆ ವಾಲ್ಮೀಕಿ ಮುನಿ ಮಹರ್ಷಿಯಾಗಿ ಪ್ರಸಿದ್ಧಿ ಪಡೆಯುತ್ತಾರೆ. ಇದರಿಂದ ಅವರ ಶಿಷ್ಯಬಳಗವೂ ಹೆಚ್ಚುತ್ತದೆ. ಭಾರದ್ವಾಜರು ಮಹರ್ಷಿ ವಾಲ್ಮೀಕಿಯ ಶಿಷ್ಯರಲ್ಲಿ ಒಬ್ಬರು.
ಮೋಕ್ಷ ಕಾಂಡದಲ್ಲಿ ‘ಆತ್ಮದಿಂದ ಬರುವ ಅಣುಗಳು ಮೂರು ಲೋಕಗಳನ್ನು ಸೃಷ್ಟಿಸುವುವು. ಅವುಗಳನ್ನು ಎಣಿಸುವುದು ಅಸಾಧ್ಯ’ ಎಂದಿದ್ದಾರೆ. ಸೃಷ್ಟಿ ಕಾಂಡದ ಸರ್ಗ 3 ಮತ್ತು ಶ್ಲೋಕ 20 ರಲ್ಲಿ ‘ಮನುಷ್ಯನ ನಿರಾಕಾರ ಮನವೇ ಬ್ರಹ್ಮ. ಮನದ ದೈವೀಶಕ್ತಿಯೇ ಬ್ರಹ್ಮ. ಅವನನ್ನು ಪುರುಷನೆಂದು ವ್ಯಕ್ತೀಕರಣಗೊಳಿಸದೆ, ಅವನು ನಿರಾಕಾರ, ಅವನು ಕೇವಲ ಮನಃರೂಪಿ ಆತ್ಮ. ಎಲ್ಲ ಲೋಕಗಳ ಕರ್ತ ಅವನೇ’ ಎಂದು ಬ್ರಹ್ಮರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ವೇದಗಳ ರಚನೆಗೆ ಬಳಸಿದ ಕ್ಲಿಷ್ಟ ಗಾಯತ್ರಿ ಛಂದಸ್ಸಿನ ಹಂಗನ್ನು ತೊರೆದು ಹೊಸ ಛಂದಸ್ಸನ್ನು ಹುಟ್ಟು ಹಾಕುತ್ತಾರೆ. ಅದೇ ಛಂದಸ್ಸಿನಲ್ಲಿ ರಾಮಾಯಣವನ್ನು ಬರೆಯುತ್ತಾರೆ. ವಾಲ್ಮೀಕಿಯ ‘ಅನುಷ್ಟುಭ ಛಂದಸ್ಸ್ ಶಾಸ್ತ್ರ’ ಕಾವ್ಯಶಾಸ್ತ್ರ ಲೋಕಕ್ಕೆ ಅದ್ವಿತೀಯ ಕೊಡುಗೆ ಎಂಬುದಾಗಿ ಡಾ. ಅರ್ಜುನ ಪಂಗಣ್ಣವರ ತಮ್ಮ ಕೃತಿಯಲ್ಲಿ ಹೇಳಿದ್ದಾರೆ. ಮಹರ್ಷಿ ವಾಲ್ಮೀಕಿಯ ಮೂರನೆಯ ಕೃತಿ ರಾಮಾಯಣ. ಮನುಷ್ಯರ ಚರಿತೆ ಕುರಿತು ಬರೆದ ಪ್ರಥಮ ಕಾವ್ಯ. ಜೋತಿಷ್ಯಶಾಸ್ತ್ರ, ಖಗೋಳಶಾಸ್ತ್ರ, ಮಹಿಳಾ ಸಂವೇದನೆ, ಅರ್ಥಶಾಸ್ತ್ರ, ಛಂದಸ್ಸ್ ಶಾಸ್ತ್ರ, ಅಧ್ಯಾತ್ಮ, ಮನೋವಿಜ್ಞಾನಿ, ಸಮಾಜಶಾಸ್ತ್ರಜ್ಞ ಹೀಗೆ ಹಲವು ಮಗ್ಗುಲುಗಳಲ್ಲಿ ವಾಲ್ಮೀಕಿಯ ವಿದ್ವತ್ತಿನ ದರ್ಶನವನ್ನು ಈ ಮೂರು ಕೃತಿಗಳು ಮಾಡಿಸುತ್ತವೆ.
ಅದಾಗಲೇ ಕಾವ್ಯಲೋಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾಲ್ಮೀಕಿ ರಾಮಾಯಣ ರಚನೆಯ ಮೊದಲು ದರೋಡೆ ಮಾಡುತ್ತಿದ್ದ, ಕೊಲ್ಲುತ್ತಿದ್ದನೆಂಬ ಕಥೆ ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿದ್ದು. ತರ್ಕಕ್ಕೂ ದೂರವೇ. ಗೆದ್ದಿಲು ಗೋತ್ರದ ವಾಲ್ಯನೆಂಬ ಋಷಿಯು ವಾಲ್ಮೀಕಿಯಾಗಿದ್ದು ಸಹಜ. ಪಂಜಾಬ್ ಮತ್ತು ಹರಿಯಾಣದ ಉಚ್ಚ ನ್ಯಾಯಾಲಯಗಳು ಮತ್ತು ಭಾರತದ ಸವೋಚ್ಚ ನ್ಯಾಯಾಲಯ 2010ರಲ್ಲಿ ‘ವಾಲ್ಮೀಕಿ ದರೋಡೆಕೋರ ನಾಗಿದ್ದನೆಂಬುದಕ್ಕೆ ಯಾವ ಆಧಾರವೂ ಇಲ್ಲ. ಅದೊಂದು ಕಟ್ಟುಕಥೆ’ ಎಂದು ತೀರ್ಪು ನೀಡಿವೆ. ರಾಮಾಯಣ ಕೇವಲ ಇಪ್ಪತ್ನಾಲ್ಕು ಸಾವಿರ ಶ್ಲೋಕಗಳನ್ನು ಏಳು ಕಾಂಡಗಳಲ್ಲಿ ಹೊಂದಿರುವ ಮಹಾಕಾವ್ಯ. ನಂತರದಲ್ಲಿ ಅನೇಕರು ತಮಗೆ ತಿಳಿದಂತೆ ಶ್ಲೋಕಗಳನ್ನು ಸೇರಿಸುತ್ತಾ ಹೋಗಿರುವುದರಿಂದ ಅವೆಲ್ಲ ಉದ್ದೇಶ ಪೂರ್ವಕವಾದ ಕಟ್ಟುಕಥೆಗಳೇ. ಪುಷ್ಕರ ಭಟ್ನಾಗರ ಅವರ ಸಂಶೋಧನೆಗಳ ಪ್ರಕಾರ ರಾಮ, ವಾಲ್ಮೀಕಿ ಮತ್ತು ರಾಮಾಯಣದ ಕಾಲ ಕ್ರಿಸ್ತಪೂರ್ವ ಆರನೇ ಸಹಸ್ರಮಾನ. ನವಶಿಲಾಯುಗದ ಅವಧಿ. ಆ ಕಾಲದಲ್ಲಿದ್ದ ರಥಗಳು, ಆಯುಧಗಳು, ಆಭರಣಗಳು, ತಂತ್ರಜ್ಞಾನ, ನಾಗರಿಕತೆಗಳ ವಿವರ ರಾಮಾಯಣದಲ್ಲಿ ಸಿಗುತ್ತದೆ.
ರಾಬರ್ಟ್ ಪಿ. ಗೋಲ್ಡ್ಮನ್ರ ಪ್ರಕಾರ ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ರಾಮಾಯಣದ ರಚನೆಯಾಗಿದೆ. ಪ್ರೊ. ಕೆ. ವಾಟನಬೆರ ಪ್ರಕಾರ ರಾಮಾಯಣವು ಪ್ರಥಮವಾಗಿ ಕಾಣಿಸಿದ್ದು ಪ್ರಾಚೀನ ಚೀನ ಭಾಷೆಯ ಬೌಧ್ಧ ಗ್ರಂಥಗಳಲ್ಲಿ. ಕ್ರಿಸ್ತಪೂರ್ವ ಮೂರನೇ ಶತಮಾನದ ‘ದಶರಥ ಜಾತಕ’ ಎಂಬ ಬೌದ್ಧ ಗ್ರಂಥದಲ್ಲಿ ರಾಮಾಯಣದ ಉಲ್ಲೇಖವಿದೆ. ರಾಮಾಯಣದ ಪ್ರಾಚೀನತೆಯ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಬಲ್ಕೆ ಕಮಿಲ್ಲರ ಪ್ರಕಾರ ರಾಮಾಯಣದ ಮುನ್ನೂರು ಅವತರಣಿಕೆಗಳಿವೆ. ಅವೆಲ್ಲವುಗಳಿಗೂ ವಾಲ್ಮೀಕಿ ರಾಮಾಯಣವೇ ಮೂಲಾಧಾರ. ಪುಷ್ಪಕ ವಿಮಾನದ ಬಿಡಿಭಾಗಗಳನ್ನು ಜೋಡಿಸುವ ವಿವರಣೆ ನೋಡಿದರೆ ವಿಜ್ಞಾನದ ಜ್ಞಾನ ಮಹರ್ಷಿ ವಾಲ್ಮೀಕಿಗೆ ಅಗಾಧವಾಗಿದೆ. ಪ್ರಾಣಿ ಪಕ್ಷಿಗಳ ಸ್ವಭಾವ, ಪರಿಸರದ ಆಗುಹೋಗುಗಳ ಸ್ಪಷ್ಟ ಅರಿವು ವಾಲ್ಮೀಕಿಗೆ ಇರುವುದು ರಾಮಾಯಣದಿಂದ ತಿಳಿಯುತ್ತದೆ. ಕಿಷ್ಕಿಂದ ಕಾಂಡದಲ್ಲಿ ವನ ನರ ಅಂದರೆ ಕಾಡುಜನರಿಗೆ ಕಪಿ, ಕುದುರೆ, ಆನೆ, ಪಕ್ಷಿಗಳಿಗೆ ಯುದ್ಧತರಬೇತಿ ನೀಡುವ ಕಲೆ ಕರಗತವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ರಾಲ್ಪ ಎಚ್. ಓ. ಗ್ರಿಫ್ಟಿಥ್ (1870) ಹಾಗೂ ಎಂ.ಎನ್.ದತ್ತ (1894) ಅವರು ವಾಲ್ಮೀಕಿ ರಾಮಾಯಣದ ಮೂಲ ಕೃತಿಗೆ ಸಂಬಂಧಿಸಿದಂತೆ ಪಾಲಿ, ಪ್ರಾಕೃತ ಹಾಗೂ ಸಂಸ್ಕೃತ ಪ್ರತಿಗಳನ್ನು ಸಂಶೋಧಿಸಿ ಇಂಗ್ಲೀಷಿನಲ್ಲಿ ಅನುವಾದಿಸಿದ್ದಾರೆ. 2009ರಲ್ಲಿ ಸಂಸ್ಕೃತದ ವಾಲ್ಮೀಕಿ ರಾಮಾಯಣವನ್ನು ಇಂಗ್ಲಿಷಿಗೆ ಅನುವಾದ ಮಾಡಿ ಅದನ್ನು ಅಂತರ್ಜಾಲಕ್ಕೆ ಅಳವಡಿಸಿದ್ದು ದೇಸಿರಾಜು ಹಣಮಂತರಾವ, ಕೆ.ಎಂ.ಕೆ. ಮೂರ್ತಿ, ಶ್ರೀಮತಿ ದೇಸುರಾಜುಕುಮಾರಿ ಮತ್ತು ಕೆ. ರಾಜೇಶ್ವರಿ. ಈಗಾಗಲೇ ಆಗಿರುವ ಸಂಶೋಧನೆಯ ಮೇಲೆ ಬೆಳಕು ಚೆಲ್ಲುವ ಹಾಗೂ ಇನ್ನೂ ಹೆಚ್ಚಿನ ವಸ್ತುನಿಷ್ಠ ಸಂಶೋಧನೆ ಆಗಬೇಕಿದೆ (ಡಾ. ಅರ್ಜುನ ಪಂಗಣ್ಣವರ ಅವರ ಆದಿಕವಿ ವಾಲ್ಮೀಕಿ ಬದುಕು ಬರಹಗಳು). ಪ್ರೊ. ತೇಜಸ್ವಿ ಕಟ್ಟೀಮನಿ ಅವರು ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ.
ಇತಿಹಾಸಪೂರ್ವ ಭಾರತದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಭೌಗೋಳಿಕ, ವೈಜ್ಞಾನಿಕ, ಆರ್ಥಿಕ ಚಿತ್ರಣವನ್ನು ತಮ್ಮ ಕೃತಿಗಳ ಮೂಲಕ ಕಟ್ಟಿಕೊಟ್ಟ ಆದಿಕವಿ ವಾಲ್ಮೀಕಿಯನ್ನು ಮೊದಲ ಇತಿಹಾಸಕಾರರೆನ್ನಬಹುದು.ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಬೇಕಾದರೆ ಹಾರ, ತುರಾಯಿ, ಮೈಕು-ಕುಣಿತ ರ್ಚವಿತ ಚರ್ವಣ ಕಟ್ಟುಕಥೆಗಳನ್ನು ಬಿಟ್ಟು ಇಂದಿನ ಪೀಳಿಗೆ ಹೊಸ ಸಂಶೋಧನೆಗೆ ತೊಡಗಬೇಕಾದ ತುರ್ತು ಇದೆ. ಕೆಲ ಸಂಘಟನೆಗಳು ಮೂಢನಂಬಿಕೆಗಳ ನಿಮೂಲನೆಗೆ, ಹೊಸ ಆಲೋಚನೆಗಳಿಗೆ ಯುವಕರನ್ನು ತೊಡಗಿಸುವಲ್ಲಿ ದುಡಿಯುತ್ತಿರುವುದು ಆಶಾದಾಯಕ.
(ಲೇಖಕರು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು)