ಇಂದು ಈದ್​ ಮಿಲಾದ್​: ಮಾನವೀಯತೆ ಪಸರಿಸಿದ ಪ್ರವಾದಿ(ಸ)

ವಿಜಯವಾಣಿ-4-2
Published on
ಕಾರ್ಗತ್ತಲಿನಿಂದ ಕೂಡಿದ ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿಸಿದವರು ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ). ಹುಟ್ಟಿದ ಮಗು ಹೆಣ್ಣಂದರಿತ ಕೂಡಲೇ ಜೀವಂತವಾಗಿ ಹೂತು ಹಾಕಲ್ಪಡುತ್ತಿದ್ದ ಸಮೂಹದ ನಡುವೆ ‘ಹೆಣ್ಣು ನಿಮ್ಮ ಮನೆಗೆ ಶಾಪವಲ್ಲ, ಹೆಣ್ಣುಮಗು ನಿಮ್ಮ ಮನೆಯ ಬೆಳಕು’ ಅಂತ ಜಗತ್ತಿಗೆ ಸಾರಿ ಹೇಳಿದ ವಿಶ್ವ ಪ್ರವಾದಿ (ಸ) ‘ತಾಯಿಯ ಕಾಲಡಿಯಲ್ಲಾಗಿದೆ ಸ್ವರ್ಗ’ ಎಂದರು. ಆಸ್ತಿಯಲ್ಲಿ ಹೆಣ್ಣಿಗೆ ಪಾಲು ಕೊಡದ ಅರೇಬಿಯನ್ನರಿಗೆ ಹೆಣ್ಣಿಗೂ ಪಾಲು ನೀಡಬೇಕೆಂದು ಕಲಿಸಿಕೊಟ್ಟರು.

ಪ್ರಸಕ್ತವಾಗಿ ಇಸ್ಲಾಮಿನಲ್ಲಿ ಸ್ತ್ರೀ ಶೋಷಣೆಗೊಳಪಡುತ್ತಿದ್ದಾಳೆ ಎನ್ನುವಂಥ ಅರ್ಥವಿಲ್ಲದ ಕೂಗಿಗೆ ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ಸ) ಉತ್ತರವನ್ನು ಕಂಡುಕೊಂಡು, ಆಕೆಗೆ ಮಾಣಿಕ್ಯಗಿಂತಲೂ ಅಧಿಕವಾದ ಸ್ಥಾನಮಾನವನ್ನು ನೀಡಿ ಗೌರವಿಸಿದರು. ಇಸ್ಲಾಮಿನಲ್ಲಿ ಒಂದಕ್ಕಿಂತ ಹೆಚ್ಚು ಮದುವೆ ಆಗಬಹುದೆಂದು ಹೇಳುವವರು ಪ್ರವಾದಿ ಮುಹಮ್ಮದರ ಆಗಮನ ಕಾಲದ ಬಗ್ಗೆ ತುಟಿಪಿಟಿಕ್ಕೆನ್ನುವುದಿಲ್ಲ. ಪ್ರವಾದಿ ಆಗಮನ ಪೂರ್ವದಲ್ಲಿ ಅರೇಬಿಯನ್ನರು ಹತ್ತರಿಂದ ನೂರು, ಇನ್ನೂರು ಹೆಣ್ಮಕ್ಕಳನ್ನು ಮದುವೆಯಾಗುತ್ತಿದ್ದರು. ಆಗ ಪೈಗಂಬರ್ ಮುಹಮ್ಮದ್ ಅವರು ಅರೇಬಿಯನ್ನರಿಗೆ, ‘ಒಂದುವೇಳೆ ಒಂದಕ್ಕಿಂತ ಜಾಸ್ತಿ ಮದುವೆ ಆಗಲೇಬೇಕೆಂದರೆ 4 ಮದುವೆ ಮಾತ್ರ ಆಗಬಹುದು’ ಎಂದು ಹೇಳುತ್ತ ಅದಕ್ಕೆ ನೂರಾರು ಷರತ್ತುಗಳನ್ನು ವಿಧಿಸಿದರು. ಇಂದಿಗೂ ಋತುಮತಿಯಾದ ಹೆಣ್ಣನ್ನು ಮನೆಯ ಹೊರಗಡೆ ಮಲಗಿಸುವ ಅಮಾನವೀಯ ಪದ್ಧತಿ, ಗಂಡ ಮರಣ ಹೊಂದಿದರೆ ಜೀವನಪರ್ಯಂತ ವಿಧವೆಯಾಗಿ ಜೀವಿಸುವಂತಹ ವ್ಯವಸ್ಥೆ ಜಾರಿಯಲ್ಲಿದ್ದರೂ, ತಲಾಕ್​ನ ಸಾಧಕ, ಬಾಧಕಗಳ ಕುರಿತು ಅರಿಯದೆ ‘ಇಸ್ಲಾಮಿನಲ್ಲಿ ಸ್ತ್ರೀ ಸ್ವಾತಂತ್ರ್ಯವಿಲ್ಲ’ ಎಂದು ವಾದ ನಡೆಸುವವರು ಪ್ರವಾದಿ (ಸ) ಜಗತ್ತಿಗೆ ತೋರಿಸಿಕೊಟ್ಟ ಮಾದರಿಯೋಗ್ಯ ನಡೆ, ಮಹಿಳೆಯರಿಗೆ ಕಲ್ಪಿಸಿದ ಸ್ಥಾನಮಾನಗಳ ಕುರಿತು ಅಧ್ಯಯನ ನಡೆಸಬೇಕಾಗಿದೆ.

‘ನಿನ್ನ ನೆರೆಯವನು ಹಸಿದಿರುವಾಗ (ಅವನೊಬ್ಬ ಸಹೋದರ ಧರ್ವಿುಯನಾಗಿದ್ದರೂ) ಹೊಟ್ಟೆ ತುಂಬ ಉಣ್ಣುವವನು ಮುಸ್ಲಿಮನಲ್ಲ’ ಎಂದು ಕಲಿಸಿಕೊಟ್ಟರೆ ಹೊರತು ‘ನಿನ್ನ ನೆರೆಯಲ್ಲಿ ಹಸಿದಿರುವನು ಮುಸ್ಲಿಮನಾಗಿದ್ದರೆ ಮಾತ್ರ ನೀನು ಸಹಾಯ ಮಾಡು’ ಎಂದು ಕಲಿಸಿಕೊಟ್ಟಿಲ್ಲ.

ಕೆಲವರು ಪ್ರವಾದಿ ಪೈಗಂಬರ್​ರನ್ನು ಯುದ್ಧಪ್ರಿಯರಾಗಿ ಗುರುತಿಸುತ್ತಾರೆ. ಆದರೆ ಅವರ 23 ವರ್ಷಗಳ ಇತಿಹಾಸದಲ್ಲಿ ಒಟ್ಟು ಯುದ್ಧ ಮಾಡಿದ್ದು 74 ಮತ್ತು ಅದರಲ್ಲಿ ನೇರವಾಗಿ ಭಾಗಿಯಾಗಿದ್ದು 27 ಯುದ್ಧಗಳಲ್ಲಿ. ಆದರೆ ಈ 74ಯುದ್ಧಗಳೂ ಅವರಾಗಿ ಪ್ರೇರಣೆ ಕೊಟ್ಟು ಮಾಡಿದ್ದಲ್ಲ, ಪೈಗಂಬರ್​ರನ್ನು ಮತ್ತು ಅನುಯಾಯಿಗಳನ್ನು ಕೊಲೆ ಮಾಡಿಯೇ ಸಿದ್ಧವೆಂದು ತೀರ್ಮಾನ ಮಾಡಿ ಬಂದವರ ವಿರುದ್ಧ ಮತ್ತು ಅನಾಚಾರ, ಅಕ್ರಮಕ್ಕೆ ಪ್ರೋತ್ಸಾಹ ನೀಡಿ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿದವರ ವಿರುದ್ಧ ಪ್ರತಿರೋಧವಾಗಿ ಈ ಯುದ್ಧಗಳು ನಡೆದಿವೆ. ಅಂದರೆ ಸ್ವಯಂ ಆತ್ಮರಕ್ಷಣೆಗೆ ಈ ಯುದ್ಧಗಳನ್ನು ಮಾಡಿರುವುದು. ಈ 74 ಯುದ್ಧಗಳಲ್ಲಿ ಮರಣ ಹೊಂದಿದವರ ಒಟ್ಟು ಸಂಖ್ಯೆ 1018 ಆಗಿತ್ತು. ಅದರಲ್ಲಿ 400 ಜನರು ಅವರ ಸ್ವಂತ ಸಂಗಡಿಗರು ಆಗಿದ್ದರು ಎಂಬ ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ಇತರ ಯುದ್ಧಗಳಿಂದ ಆಗುವ ಅಪಾರ ಸಾವು-ನೋವು, ನಷ್ಟಗಳ ನಡುವೆ ಈ ಲೆಕ್ಕಾಚಾರಗಳು ಪ್ರಸ್ತುತವಾಗುತ್ತವೆ. ಆ ಯುದ್ಧಗಳಲ್ಲಿ ಪ್ರವಾದಿಯು ಪಾಲಿಸಿದ ನೀತಿ ಎಲ್ಲರಿಗೂ ಮಾದರಿಯೋಗ್ಯ.

ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ಸ) ಮುನ್ನೆಚ್ಚರಿಕೆ ನೀಡಿದ್ದರು. ‘ಅದೊಂದು ಕಾಲ ಬರಲಿದೆ. ಅಂದು ಕೊಲೆಗೈಯುವವನಿಗೆ ಗೊತ್ತಿರಲಿಕ್ಕಿಲ್ಲ, ನಾನು ಯಾಕೆ ಕೊಲೆಗೈಯುತ್ತಿದ್ದೇನೆಂದು, ಕೊಲೆಗೈಯಲ್ಪಟ್ಟವನಿಗೆ ನಾನು ಯಾಕೆ ಕೊಲೆಗೈಯಲ್ಪಡುತ್ತಿದ್ದೇನೆ ಅಂತ ಗೊತ್ತಿರುವುದಿಲ್ಲ’ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ವರ್ಣಭೇದದ ಹೆಸರಿನಲ್ಲಿ ಕರಿಯರನ್ನು ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಕರಿಯನಾದ ಬಿಲಾಲ್ ರ.ಅ ಅವರನ್ನು ಮಸೀದಿಯಲ್ಲಿ ಬಾಂಗ್ ಕರೆ ನೀಡಲು ಆಜ್ಞಾಪಿಸಿ ಕರಿಯನಿಗೂ-ಬಿಳಿಯನಿಗೂ, ಬಡವನಿಗೂ-ಶ್ರೀಮಂತನಿಗೂ ಒಂದೇ ಸ್ಥಾನಮಾನ ನೀಡಿ ವರ್ಣಭೇದ ನೀತಿಗೆ ಅಂತ್ಯಹಾಡಿದರು. ಇಂದಿಗೂ ಮಸೀದಿಗಳಲ್ಲಿ ಬಡವ-ಶ್ರೀಮಂತ, ಕರಿಯ -ಬಿಳಿಯ ಎಂಬ ತಾರತಮ್ಯವಿಲ್ಲದೆ ಪರಸ್ಪರ ಭುಜಕ್ಕೆ ಭುಜ ಸೇರಿಸಿ ನಮಾಝ್ ಮಾಡುವ ದೃಶ್ಯಗಳನ್ನು ಕಾಣಲು ಸಾಧ್ಯವಿದೆ.

‘ಒಬ್ಬ ನಿರಪರಾಧಿಯನ್ನು ಕೊಂದರೆ ಸಕಲ ಮಾನವಕುಲವನ್ನೇ ಕೊಂದಂತೆ’ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿ ಮನುಷ್ಯ ಮನಸ್ಸುಗಳ ನಡುವಿನ ಸಂಬಂಧಗಳ ಕುರಿತಾದ ಮಹತ್ವವನ್ನು ಈ ಜಗತ್ತಿನ ಮುಂದೆ ತೆರೆದಿಟ್ಟಿದ್ದರು. ‘ಕಾರ್ವಿುಕನ ಬೆವರು ಆರುವ ಮುನ್ನವೇ ಆತನಿಗೆ ಆತನ ದುಡಿಮೆಯ ವೇತನವನ್ನು ನೀಡಿ’ ಎಂದು ಪ್ರವಾದಿ (ಸ) ಆಜ್ಞಾಪಿಸಿದ್ದು ಕಾರ್ವಿುಕವರ್ಗದ ಭಾವನೆಯನ್ನು ಅರ್ಥೈಸಿಕೊಂಡಿದ್ದಕ್ಕೆ ಸಾಕ್ಷಿ.

ತನ್ನ ಕರುಳಕುಡಿಯಾದ ಫಾತಿಮಾ ರ.ಅ ಕದ್ದರೂ ಆಕೆಯ ಕೈಯನ್ನು ಕಡಿಯದೆ ಬಿಡಲಾರೆ ಎಂದು ಖಡಾಖಂಡಿತವಾಗಿ ಹೇಳಿದ ಪ್ರವಾದಿ (ಸ) ನ್ಯಾಯಪಾಲನೆಯಲ್ಲಿ ಎಂದೂ ತಾರತಮ್ಯ ನೀತಿಯನ್ನು ಅನುಸರಿಸಿದವರಲ್ಲ. ಅಲ್ ಅಮೀನ್ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತಿದ್ದ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ) ಅವರ ಜನ್ಮದಿನದ ಪ್ರಯುಕ್ತವಾಗಿ ಮುಸ್ಲಿಂ ಜಗತ್ತಿಗೆ ಪ್ರವಾದಿಯವರ (ಸ) ಆದರ್ಶ, ಅವರು ಕಲಿಸಿಕೊಟ್ಟ ಹಾದಿಯನ್ನು ತಿಳಿಸಿಕೊಡುವ ಪ್ರಯತ್ನ ನಡೆಯಬೇಕಿದೆ. ಪ್ರವಾದಿಯವರನ್ನು (ಸ) ಪ್ರೀತಿಸುವುದು, ಅವರ ಕೀರ್ತನೆಗಳನ್ನು ಹೇಳುವುದು, ಅವರ ಚರ್ಯುಗಳನ್ನು ಪಾಲಿಸುವುದು ಒಬ್ಬ ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ. ಕೆಲವು ಸಂಘಟನೆಗಳ ಟೀಕೆ, ನಿಂದನೆಯ ಮಾತ್ರಕ್ಕೆ ಇಲ್ಲಿ ಇಸ್ಲಾಮಿನ ಬೆಳವಣಿಗೆಯನ್ನೋ, ಪ್ರವಾದಿಯವರ (ಸ) ಮೇಲಿನ ಪ್ರೀತಿಯನ್ನೋ ಇಲ್ಲವಾಗಿಸಲು ಸಾಧ್ಯವಿಲ್ಲ.

ಪ್ರವಾದಿ(ಸ) ಅವರನ್ನು ಯಾರೆಲ್ಲ ವಿಮಶಿಸಲು ಪ್ರಯತ್ನಿಸುತ್ತಾರೋ ಆವಾಗಲೆಲ್ಲ ಜನರು ಆ ಪ್ರವಾದಿಯನ್ನು ಅರಿಯಲು ಪ್ರಯತ್ನಿಸುತ್ತಾರೆ. ಪರಿಣಾಮ ಅವರು ಆ ಪ್ರವಾದಿಯಯವರ (ಸ) ಆದರ್ಶದಲ್ಲಿ ಸತ್ಯವನ್ನು ಮನಗಂಡು ಇಸ್ಲಾಮಿನತ್ತ ಆಕರ್ಷಿತರಾಗುತ್ತಿದ್ದಾರೆ. ಕೇವಲ ಒಂದು ತಿಂಗಳಿಗೋ, ಅಥವಾ ದಿನದ ಮಟ್ಟಿಗೋ ಪ್ರವಾದಿ ಪ್ರೇಮಿಗಳಾಗಿ ಮೆರೆಯದೆ ಪ್ರವಾದಿಯವರು(ಸ) ಕಲಿಸಿಕೊಟ್ಟ ಸತ್ಯದ ಹಾದಿಯನ್ನು, ಆದರ್ಶವನ್ನು ಮೈಗೂಡಿಸಿಕೊಂಡು ಜೀವಿಸಬೇಕು. ನೈಜ ಪ್ರವಾದಿ ಪ್ರೇಮಿಗಳಾಗಿ, ಯಾರಿಗೂ ತೊಂದರೆ, ಅನ್ಯಾಯಗಳಾಗದೆ ಪ್ರವಾದಿ (ಸ) ಜನ್ಮದಿವನ್ನು ಕೊಂಡಾಡೋಣ. ನಾಡಿನ ಸರ್ವ ಬಾಂಧವರಿಗೂ ಈದ್ ಮಿಲಾದ್ ಶುಭಾಶಯಗಳು.

| ಲೇಖಕರು, ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯ ನಿಕಟಪೂರ್ವ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net