

ಕಪ್ಪಾನ ಕಪ್ಪು ಕತ್ತಲೆಯೊಳಗೆ ತಮ್ಮ ಹೊಟ್ಟೆಯಲ್ಲೇ ಪುಟ್ಟದೊಂದು ದೀಪ ಹತ್ತಿಸಿಕೊಂಡು ಹಾರಾಡುತ್ತಿದ್ದ, ನಿರುಪದ್ರವಿಗಳು, ಮೃದು, ಮುಗ್ಧ ಚಿಟ್ಟೆಗಳು! ನಮ್ಮ ಬಾಲ್ಯದಲ್ಲಿ ನಾವು ಅದೆಷ್ಟು ಸಿರಿವಂತರಾಗಿದ್ದೆವು ಅಂದರೆ ಕತ್ತಲಲ್ಲಿ ಮೆತ್ತಗೆ ಕೈಬೀಸಿ ಈ ಮಿಣುಕು ಹುಳಗಳನ್ನು ಹಿಡಿದು ಮುಷ್ಟಿಯಲ್ಲಿ ಮುಚ್ಚಿ ಬೆರಳುಗಳ ಸಂದಿನಲ್ಲಿ ಅವುಗಳ ತಂಪು ಬೆಳಕನ್ನು ನೋಡುತ್ತಾ ಕೂರುತ್ತಿದ್ದೆವು, ಅವೇ ಹುಳುಗಳನ್ನು ನಮ್ಮ ಜೇಬಿನೊಳಗೆ ಬಿಟ್ಟುಕೊಂಡು ಅವುಗಳ ಮಿಣುಕು ಬೆಳಕನ್ನು ಹೊರಗಿನಿಂದಲೇ ನೋಡಿ ನೋಡಿ ಆನಂದ ಪಡುತ್ತಿದ್ದೆವು. ಈಗವು ಎಲ್ಲಿ ಹೋದವು? ನಮ್ಮ ಮಕ್ಕಳು, ಮೊಮ್ಮಕ್ಕಳು ಆ ಮಿಣುಕು ಜೀವಿಗಳನ್ನು ಕಂಡಿಲ್ಲ. ಅವರಿಗೆ ತೋರಿಸಬೇಕು ಎಂದರೆ ಅವು ಕಾಣಿಸುತ್ತಿಲ್ಲವಲ್ಲ! ಬಹುಶಃ ಈ ವಿದ್ಯುತ್ತಿನ ಬುರುಡೆಗಳ ಅಹಂಕಾರ ಪ್ರಕಾಶಕ್ಕೆ ಹೆದರಿ ಎಲ್ಲಿಗೋ ಹಾರಿಹೋಗಿ ಅಡಗಿ ಕೂತಿರಬೇಕು!
ಕಾಡಿನಲ್ಲಿ ಜಿಂಕೆಗಳೆನ್ನುವ ಆ ಮುದ್ದು ಜೀವಿಗಳನ್ನು ನೋಡುವಾಗ ಅಯ್ಯೊ ಪಾಪ! ಅನ್ನಿಸುತ್ತದೆ. ಆ ಜಿಂಕೆಗಳ ಪಾಡು ನೋಡಿ, ಎಲ್ಲಿ ನಿಂತರೂ, ಕುಂತರೂ, ಮಲಗಿದರೂ ಭಯ, ಭಯ ಭಯ! ಆನಂದವಾಗಿ ಹುಲ್ಲು ಮೇಯುವುದಕ್ಕೂ ಭಯ. ಯಾವ ಹುಲಿ, ಸಿಂಹ, ಚಿರತೆ, ಕಿರುಬ ಎಲ್ಲಿಂದ ಹಾರಿ ಕುತ್ತಿಗೆ ಹಿಡಿಯುವುದೋ ಎಂಬ ದಿಗಿಲು. ಅದಕ್ಕೇ ಅವು ಅಲ್ಲೆಲ್ಲೋ ತರಗೆಲೆ ಗಿರಕೆಂದರೂ ನಿಂತ ನಿಲುವಿನಲ್ಲೇ ಫೇರಿ ಕೀಳುತ್ತವೆ. ಕಾಡಿನಲ್ಲಿ ದೊಡ್ಡ ದನಿ, ದೊಡ್ಡ ಬಲ ಇದ್ದವರದೇ ರಾಜ್ಯ. ಕಾಡಿನಲ್ಲೇನೋ ಸರಿ, ಊರಿನಲ್ಲಿ ತಾನೇ ಇನ್ನಾ್ಯವ ನ್ಯಾಯವಿದೆ? ಅದೇ ನ್ಯಾಯ, ಕಾಡು ನ್ಯಾಯ! ದೊಡ್ಡ ಮೀನು ಸಣ್ಣ ಮೀನುಗಳನ್ನು ನುಂಗಿ ಹಾಕುವುದು ಸಮುದ್ರ ನ್ಯಾಯ. ಅಂತೂ ಎಲ್ಲ ಕಡೆ ಇದೇ ಆಯಿತು. ಜೋರು ಬಲವಿದ್ದವರದು ರಾಜ್ಯ, ಜೋರು ಗಂಟಲಿನವನೇ ರಾಜ. ಹೇಳಿ ಕೇಳಿ ಇದು ವಾಣಿಜ್ಯ ಪ್ರಪಂಚ. ಸುಲಭ ಭೋಗ ಮತ್ತು ಸುಲಭ ಲಾಭ ಈಗ ಪ್ರಾಪಂಚಿಕರಿಗೆ ಆದರ್ಶ.
ವಿಚಿತ್ರವೆಂದರೆ ಈಗ ಜಗತ್ತು ತನಗೆ ಸಾಧ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು ದೊಡ್ಡ ದನಿಯಲ್ಲಿ ಇದನ್ನೇ ಬೋಧಿಸುತ್ತಿದೆ. ನಮ್ಮ ಮುಂದಿನ ತಲೆಮಾರು ಇದನ್ನೇ ಬದುಕಿನ ತತ್ವ ಸಿದ್ಧಾಂತ ಅಂತ ಸ್ವೀಕರಿಸಿ ನಡೆಯುತ್ತಿದೆ. ಒಂದು ಮಾತಿದೆ. Begin to live as you think. If you don't, sooner or later you will end up by thinking as you have lived. ( ನೀವು ಹೇಗೆ ಆಲೋಚಿಸುತ್ತೀರೋ ಹಾಗೆ ಬದುಕಿ. ಇಲ್ಲವಾದರೆ ಕಾಲಾನಂತರದಲ್ಲಿ ನೀವು ಹೇಗೆ ಬದುಕಿದ್ದೀರೋ ಹಾಗೇ ಆಲೋಚಿಸುತ್ತೀರಿ.) ಈಗ ಆಗಿರುವುದೂ ಅದೇ.
ಇನ್ನೊಂದು ಮಾತು- ಮೇಲಿನ ಸಾಲುಗಳನ್ನು ಓದಿದವರಿಗೆ ಇಡೀ ಜಗತ್ತು ಖುಲ್ಲಂ ಖುಲ್ಲಾ ಸ್ವಾರ್ಥಿಯಾಗಿಬಿಟ್ಟಿದೆ, ದಿಕ್ಕೇ ಇಲ್ಲದೆ ಓಡುತ್ತಿದೆ ಎಂಬ ಅಭಿಪ್ರಾಯವಾಗಿಬಿಟ್ಟರೆ ದಯವಿಟ್ಟು ಕ್ಷಮಿಸಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಭಾಷೆ ಅಂತ ಸದಾ ಕನವರಿಸುವ, ಚಿಂತಿಸುವ, ಬದುಕುವ ಪುಣ್ಯಾತ್ಮರು ಈಗಲೂ ಈ ಜಗದಲ್ಲಿ ಇಲ್ಲವೇ ಇಲ್ಲವೆಂದಲ್ಲ. ಇದ್ದಾರೆ,ಅಲ್ಲಲ್ಲಿ ಇದ್ದಾರೆ, ವಿದ್ಯುತ್ತಿನ ಹೊನಲು ಬೆಳಕಿನ ಮಧ್ಯದ ಹಣತೆಗಳ ಹಾಗೆ, ಕತ್ತಲ ಹೊಟ್ಟೆಯ ಮಿಣುಕು ಹುಳಗಳ ಹಾಗೆ. ಮಾತು ಎಲ್ಲೆಲ್ಲೋ ಹೋಯಿತು ಅಂದುಕೊಳ್ಳಬೇಡಿ.
ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ವಿಶ್ವದ ಸಾಂಸ್ಕೃತಿಕ ವೈವಿಧ್ಯ, ಭಾಷಾ ಬಹುತ್ವವನ್ನು ಗೌರವಿಸಲು ಹಾಗೂ ದೊಡ್ಡದಿರಲಿ, ಸಣ್ಣದಿರಲಿ, ಜಗತ್ತಿನ ಸಕಲ ಭಾಷಿಕ ಸಮುದಾಯಗಳೂ ತಮ್ಮ ಮಾತೃಭಾಷೆಯ ಅಸ್ಮಿತೆ, ಮಹತ್ವ ಅರಿತುಕೊಳ್ಳಲಿ ಎಂಬ ದೃಷ್ಟಿಯಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007ರ ಮೇ 16ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಮಾನ್ಯ ಮಾಡಿ ಘೊಷಿಸಿದೆ.
ಈ ದಿನವನ್ನು ಆಚರಿಸಬೇಕೆಂದು ವಿಶ್ವಸಂಸ್ಥೆಯ ಮುಂದೆ ಮೊದಲು ಪ್ರಸ್ತಾವ ಮಂಡಿಸಿದ್ದು ಬಾಂಗ್ಲಾದೇಶ. ಇದಕ್ಕೊಂದು ಇತಿಹಾಸವಿದೆ. ಸ್ವಾತಂತ್ರಾ್ಯನಂತರದಲ್ಲಿ ಪೂರ್ವ ಪಾಕಿಸ್ತಾನವೆಂದು ಹೆಸರಾದ ( ಈಗಿನ ಬಾಂಗ್ಲಾದೇಶ ) ರಾಜ್ಯದ ಬಂಗಾಳಿ ಭಾಷಿಕರು ತಮ್ಮ ಬಂಗಾಳಿ ಭಾಷೆಗೆ ಮಾನ್ಯತೆ ಮತ್ತು ಗೌರವ ಸಲ್ಲಬೇಕೆಂದು 1952ರ ಫೆಬ್ರವರಿ 21ರಂದು ದೊಡ್ಡ ಹೋರಾಟವನ್ನು ಆರಂಭಿಸಿದರು. ಆ ದಿನದ ಸ್ಮರಣಾರ್ಥವಾಗಿ ಪ್ರತೀವರ್ಷದ ಫೆಬ್ರವರಿ 21ನೇ ದಿನವನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಘೊಷಿಸಿದೆ. ವಿಶ್ವಸಂಸ್ಥೆ ಈ ದಿನವನ್ನು ಘೊಷಿಸುವ ಮೊದಲೇ ಬಾಂಗ್ಲಾದೇಶವಲ್ಲದೆ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಜಾರ್ಖಂಡ್, ನಾಗಾಲ್ಯಾಂಡ್, ತ್ರಿಪುರಾ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲೂ ಇದೇ ದಿನವನ್ನು ‘ಮಾತೃಭಾಷಾ ದಿನ’ವೆಂದು ಆಚರಿಸಲಾಗುತ್ತಿತ್ತು.
ಬಿ.ಎಂ.ಶ್ರೀ ನೆನಪಾಗುತ್ತಿದ್ದಾರೆ-ಮೊದಲು ತಾಯ ಹಾಲ ಕುಡಿದುಲಲ್ಲೆಯಿಂದ ತೊದಲು ನುಡಿದುಕೆಳೆಯರೊಡನೆ ಬೆಳೆದು ಬಂದಮಾತದಾವುದು?ನಲ್ಲೆಯೊಳವ ತೆರೆದು ತಂದಮಾತದಾವುದು?
ಬಿ.ಎಂ.ಶ್ರೀ ಅವರ ಪ್ರಕಾರ ಮಾತೃಭಾಷೆ ಎಂದರೆ ಇದು. ಜಗತ್ತಿನಲ್ಲಿ ದೊಡ್ಡ ದೇಶ, ದೊಡ್ಡ ಸಮುದಾಯಗಳಿರುವ ಹಾಗೇ ಸಣ್ಣ ಸಣ್ಣ ದೇಶಗಳೂ ಸಣ್ಣ ಸಣ್ಣ ಸಮುದಾಯಗಳೂ ಇವೆ. ಅವೆಲ್ಲವೂ ತಮ್ಮ ತಮ್ಮ ಭಾಷೆಯಲ್ಲಿ, ಸಂಸ್ಕೃತಿಯಲ್ಲಿ ಬದುಕುತ್ತಿವೆ. ಈ ಸಣ್ಣ ಸಮುದಾಯಗಳು ದೊಡ್ಡ ಸಮುದಾಯಗಳ ಪ್ರಭಾವಕ್ಕೊಳಗಾಗುವುದು ಅಥವಾ ದೊಡ್ಡ ಸಮುದಾಯಗಳು ಸಣ್ಣ ಸಮುದಾಯಗಳನ್ನು ಆಪೋಷನ ತೆಗೆದುಕೊಂಡುಬಿಡುವುದು ಇದು ನಡೆಯುತ್ತಲೇ ಇರುತ್ತದೆ. ಇದನ್ನೇ ಈ ಹಿಂದೆ ಸಮುದ್ರ ನ್ಯಾಯ ಅಂದದ್ದು. ಈಗ ಈ ದೊಡ್ಡ ದೇಶ, ಸಮಾಜಗಳು, ಸಣ್ಣವನ್ನು ನುಂಗಿಹಾಕಲು ಮದ್ದು, ಗುಂಡು, ಬಾಂಬು, ಸೈನ್ಯ,ರಾಕೆಟ್ಟು ಇವನ್ನೆಲ್ಲ ತೆಗೆದುಕೊಂಡು ಹೋಗಬೇಕಾಗಿಲ್ಲ. ಬದಲಾಗಿ ಸಣ್ಣ ದೇಶ, ಸಮಾಜಗಳ ಜನಬದುಕಿನೊಳಗೆ ಮೆಲ್ಲಗೆ, ಗೊತ್ತೇ ಆಗದಂತೆ, ಕೈಯಿಟ್ಟು ಕಲಕಿ ಅಲ್ಲಿಯ ಊಟ, ಬಟ್ಟೆ, ಆಚಾರ, ವಿಚಾರ, ನಡೆವಳಿಕೆ, ಕಲೆ, ಸಾಹಿತ್ಯ, ಭಾಷೆ ಇಂಥವುಗಳ ಬಗ್ಗೆ ಅಲ್ಲಿಯ ಜನರಿಗೇ ಕೀಳರಿಮೆ ಬರುವಂತೆ ಮಾಡಿದರೆ ಸಾಕು.
ಆ ದೇಶವನ್ನು ಗೆದ್ದ ಹಾಗೇ. ಈಗ ನಮ್ಮ ಕಣ್ಣೆದುರಿಗೇ ಆಗುತ್ತಿರುವುದು ಇದೇ. ಕನ್ನಡಕ್ಕಿಂತ ಇಂಗ್ಲಿಷ್ ಅದ್ಭುತ ಭಾಷೆ, ನಮ್ಮ ಪಂಪ, ರನ್ನ, ಕುವೆಂಪು ಬೇಂದ್ರೆಯವರಿಗಿಂತ ಶೇಕ್ಸ್ಪಿಯರ್, ಶೆಲ್ಲಿ, ವರ್ಡ್ಸ್ವರ್ಥ್, ಕೀಟ್ಸ್ ಶ್ರೇಷ್ಠರು, ನಮ್ಮ ಅನ್ನ, ಮುದ್ದೆ, ರೊಟ್ಟಿ, ದೋಸೆಗಿಂತ ಪೀಜಾ, ಪಾಸ್ತಾ, ಬ್ರೆಡ್ಡು ಜಾಮು, ಮೋಮೋ, ಮಂಚೂರಿಗಳು ಶ್ರೇಷ್ಠ, ನಮ್ಮ ಅಂಗಿ, ಧೋತಿ, ಸೀರೆ, ಕುಪ್ಪಸ, ಲಂಗ ದಾವಣಿಗಳಿಗಿಂತ ಸೂಟು, ಟೈ, ಜೀನ್ಸು ಗೀನ್ಸುಗಳು ಚೆಂದ- ಈ ಥರದ ಕೀಳರಿಮೆ ನಮ್ಮ ಸಮಾಜಕ್ಕೇ ಬಂದುಬಿಟ್ಟರೆ ಪಾಶ್ಚಿಮಾತ್ಯರು ನಮ್ಮ ಮೇಲೆ ಸವಾರಿ ಮಾಡುವುದಕ್ಕೆ ಸೈನ್ಯವೇಕೆ ಬೇಕು?
ಒಂದು ಸಮುದಾಯದ ಆತ್ಮ ಅಂದರೆ ಅದು ಅವರ ಮಾತೃಭಾಷೆ. ಭಾಷೆ ಅನ್ನುವುದು ಒಂದು ಸಂವಹನ ಮಾಧ್ಯಮ ( medium of communication) ಅಷ್ಟೇ ಎಂದು ಭಾವಿಸಿದರೆ ಅದು ಭಾಷೆಯ ಬಗೆಗಿನ ಪ್ರಾಥಮಿಕ ತಿಳಿವಳಿಕೆ ಅಷ್ಟೆ. ಅದನ್ನು ಒಂದು ಸಮಾಜದ, ಸಮುದಾಯದ ಆತ್ಮ ಎಂದು ಕರೆದದ್ದು ಏಕೆಂದರೆ, ಭಾಷೆಯಲ್ಲಿ ಒಂದು ಜನಬದುಕಿನ ಸಕಲ ವಿವರಗಳೂ ಅಂತರ್ಗಾಮಿಯಾಗಿ ಹರಿಯುತ್ತಿರುತ್ತವೆ. ಈಗ ನಮ್ಮ ಮಾತೃಭಾಷೆ ಕನ್ನಡವನ್ನೇ ತೆಗೆದುಕೊಳ್ಳಿ, ಇದು ಈ ಹೊತ್ತಿನ ನಮ್ಮ ವ್ಯವಹಾರಕ್ಕೆ, ವಿಚಾರಕ್ಕೆ ಮಾತ್ರ ಇರುವಂಥದಲ್ಲ, ಬದಲಾಗಿ ಈ ಕನ್ನಡ ಎಂಬ ಭಾಷಾ ಸಮುದಾಯವು ಈವರೆಗೆ ಪಡೆದಿರುವ ಜ್ಞಾನ, ಅನುಭವ, ನಡೆಸಿರುವ ಬದುಕು, ಬವಣೆ, ಹೋರಾಟ, ಬರೆದ ಸಾಹಿತ್ಯ, ಆಡಿದ ನಾಟಕ, ಸೃಷ್ಟಿಸಿದ ಕಲೆ, ಗಳಿಸಿರುವ ಸುಖ ಸಂಪತ್ತು ಇತ್ಯಾದಿಗಳೆಲ್ಲವೂ ಕನ್ನಡ ಭಾಷೆಯಲ್ಲಿ ಅಂತರ್ನಿಹಿತವಾಗಿರುತ್ತವೆ. ಆದ್ದರಿಂದ ನಾವು ಕನ್ನಡದಲ್ಲಿ ಮಾತಾಡಿದರೆ, ವ್ಯವಹರಿಸಿದರೆ, ಬದುಕಿದರೆ, ಕನ್ನಡದ ಭೂತ, ವರ್ತಮಾನ, ಭವಿಷ್ಯತ್ತುಗಳೆಲ್ಲವೂ ಬದುಕಿವೆ ಎಂದರ್ಥ.
ಇದು ಜಾಗತೀಕರಣದ ಕಾಲ. ಇದು ನಮಗೆ ಬೇಕು ಅಥವಾ ಬೇಡ ಎಂಬ ಆಯ್ಕೆಯ ಸ್ವಾತಂತ್ರ್ಯ ಕೂಡ ಜಗತ್ತಿನ ಯಾವ ದೇಶಕ್ಕೂ ಉಳಿದಿಲ್ಲ. ಜಾಗತೀಕರಣ ಅಂದರೆ ಅದು ಕೇವಲ ಅಮೆರಿಕೀಕರಣ ಎಂದು ಹೇಳುವವರೂ ಇದ್ದಾರೆ. ಅದು ನಿಜ ಕೂಡ. ಅಮೆರಿಕವನ್ನು ಜಗತ್ತಿನ ಬಹು ದೊಡ್ಡ ಕರಗಿಸುವ ಕಡಾಯಿ (Melting Pot) ಎಂದು ಕರೆಯುತ್ತಾರೆ. ನಿಜವಾಗಿ ಅದೇ ಆಗುತ್ತಿದೆ. ಜಗತ್ತಿನ ಜನ ಬದುಕಿನ ವಿವಿಧ ನಡಾವಳಿಗಳೆಲ್ಲ ಈ ಮೆಲ್ಟಿಂಗ್ ಪಾಟ್ಗೆ ಬಿದ್ದು ಕರಗಿ ತಮ್ಮ ತಮ್ಮ ಆಕಾರ, ಅಸ್ತಿತ್ವಗಳನ್ನೇ ಕಳೆದುಕೊಂಡರೆ ಜಗತ್ತಿನ ಜನಬದುಕಿನ ಅಸ್ಮಿತೆಯನ್ನು ವೈವಿಧ್ಯವನ್ನು, ಬಹುತ್ವವನ್ನು ಕಾಪಾಡಿಕೊಳ್ಳುವುದು ಹೇಗೆ? ಮಾತೃಭಾಷಾ ದಿನವನ್ನು ಆಚರಿಸುವ ಹೊತ್ತು ನಾವು ಚಿಂತಿಸಬೇಕಾದ ವಿಷಯಗಳು ಇವು.
ಸ್ವಲ್ಪ ಸಮಯದ ಹಿಂದೆ ನಾನು ಶಾಲಾ ಅಧ್ಯಾಪಕರ ಸಮಾವೇಶದಲ್ಲಿ ಭಾಷಣ ಮಾಡಲು ಹೋಗಿದ್ದೆ. ಅಧ್ಯಕ್ಷತೆ ವಹಿಸಿದ್ದವರು ಆ ಕ್ಷೇತ್ರದ ಎಮ್ಮೆಲ್ಲೆ. ವೇದಿಕೆ ಮೇಲೆ ಕುಳಿತಿದ್ದಾಗ ಅವರು ನನ್ನೊಂದಿಗೆ ಒಂದು ಮಾತು ಹೇಳಿದರು- ‘ನೋಡಿ, ನಮ್ಮ ಸರ್ಕಾರಿ ಶಾಲೆಗಳೆಲ್ಲ ವೇಷ್ಟು. ಈ ಮೇಷ್ಟ್ರುಗಳಿಗೆಲ್ಲಾ ಸಂಬಳ ಕೊಡುವುದೂ ವೇಷ್ಟು. ಈ ಕನ್ನಡ ಮೀಡಿಯಮ್ಮಿನ ಸರ್ಕಾರಿ ಶಾಲೆಗಳನ್ನ ಸಾಕುವುದಕ್ಕೇ ನಮ್ಮ ಸರ್ಕಾರಕ್ಕೆ ಸಾವಿರಾರು ಕೋಟಿ ಖರ್ಚು ಬೀಳುತ್ತೆ. ಏನ್ ಪ್ರಯೋಜನ ಹೇಳಿ. ಎಂಥಾ ಬಡವರೂ ಈಗ ಕನ್ನಡ ಮೀಡಿಯಮ್ಮಿನ ಶಾಲೆಗಳಿಗೆ ಮಕ್ಕಳನ್ನ ಸೇರಿಸ್ತಾ ಇಲ್ಲ. ಹತ್ತಿರದ ಟೌನ್ಗಳಿಂದ ಇಂಗ್ಲಿಷ್ ಮೀಡಿಯಂ ಸ್ಕೂಲುಗಳ ಹಳದಿ ವ್ಯಾನುಗಳು ಬಂದು ಹಳ್ಳಿ ಮಕ್ಕಳನ್ನೆಲ್ಲ ಬೆಳಗ್ಗೆ ತುಂಬಿಕೊಂಡು ಹೋಗಿ ಸಂಜೆಗೆ ತಂದು ಬಿಡ್ತವೆ.
ನನಗನ್ನಿಸುತ್ತೆ, ನಾವು ಈ ಸರ್ಕಾರಿ ಕನ್ನಡ ಮೀಡಿಯಂ ಶಾಲೆಗಳನ್ನೆಲ್ಲ ಹಂತ ಹಂತವಾಗಿ ಮುಚ್ಚಿ, ಪ್ರತೀ ಹಳ್ಳಿಗೂ ಫ್ರೀ ಬಸ್ ಬಿಟ್ ಬಿಟ್ರೆ ಮಕ್ಕಳು ಆರಾಮವಾಗಿ ಇಂಗ್ಲಿಷ್ ಮೀಡಿಯಂನಲ್ಲಿ ಓದಿಕಂಡ್ ಬರ್ತವೆ... ಅಲ್ವೆ?’ ಅಂದರು. ನಾನು ಅದು ಹಾಗಲ್ಲಾ, ಹೀಗೆ ಅಂತ ಏನೋ ಹೇಳಲು ಹೋದೆ. ಅವರು ಒಂದೇ ಮಾತು ಹೇಳಿದರು-‘ನಿಮುಗ್ ತಿಳಿಯಾಕಿಲ್ಲ ಬುಡಿ. ಮಕ್ಕಳು ಕಲೀಬೇಕಾಗಿರದು ನಿಮ್ ಪಂಪ, ರನ್ನ ಅಲ್ಲ, ಕಂಪ್ಯೂಟರ್! ಕಂಪ್ಯೂಟರ್!!’ ಅವರು ಇನ್ನೂ ಎಮ್ಮೆಲ್ಲೆ ಅಷ್ಟೆ. ಸದ್ಯೋಭವಿಷ್ಯದಲ್ಲಿ ಅವರು ಮಂತ್ರಿಯಾಗಬಹುದು, ಶಿಕ್ಷಣ ಮಂತ್ರಿಯೇ ಆದರೂ ಆಶ್ಚರ್ಯವಿಲ್ಲ! ಮಾತೃಭಾಷಾ ದಿನಕ್ಕೆ ಜಯವಾಗಲಿ.