ಭಾರತದಲ್ಲಿ ಇಲ್ದೇ ಇರೋದು ಪಾಕ್​ನಲ್ಲೇನಿದೆ ಕಲಿಯೋಕೆ?!

Masth
Published on
ವಿದೇಶ ವ್ಯಾಸಂಗ ಎಂದ ಕೂಡಲೇ ಸಾಮಾನ್ಯವಾಗಿ ಒಂದು ಪ್ರತಿಷ್ಠೆಯ ಚಿತ್ರಣ ಚಿತ್ತಭಿತ್ತಿಯಲ್ಲಿ ಮೂಡುವುದು ಸಹಜ. ಯಾಕೆಂದರೆ ‘ವಿದೇಶ’ ಎಂದ ಕೂಡಲೆ ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಚೀನಾ, ರಷ್ಯಾ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳ ಚಿತ್ರ ಕಣ್ಣ ಮುಂದೆ ಹಾದು ಹೋಗಿಬಿಡುತ್ತದೆ. ಆದರೆ ವಾಸ್ತವ ಹಾಗಿಲ್ಲ. ಇದರ ನೋವು-ನಲಿವಿನ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

| ಉಮೇಶ್ ಕುಮಾರ್ ಶಿಮ್ಲಡ್ಕ

ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವವರನ್ನು ಹೆಮ್ಮೆಯಿಂದ ನೋಡುವ ವರ್ಗ ಒಂದೆಡೆ. ಅದೇ ರೀತಿ, ಇಲ್ಲಿ ಸೀಟುಗಿಟ್ಟಿಸಿಕೊಳ್ಳಲಾಗಿಲ್ಲ. ಅದಕ್ಕೆ ವಿದೇಶಕ್ಕೆ ಹೋಗ್ತಿದ್ದಾರೆ. ದುಡ್ಡು ಕೊಟ್ಟು ಸರ್ಟಿಫಿಕೇಟ್ ತಗೊಂಡು ಬರ್ತಾರೆ ಎಂಬಿತ್ಯಾದಿ ತುಚ್ಛ ಭಾವದಿಂದ ನೋಡುವ ವರ್ಗ ಇನ್ನೊಂದೆಡೆ. ಒಟ್ಟಿನಲ್ಲಿ ವಿದೇಶ ವ್ಯಾಸಂಗ ಎಂಬುದು ಹೂವಿನ ಹಾಸಿಗೆಯಲ್ಲ ಎಂಬುದು ವಾಸ್ತವ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಭಾರತದ ಜನಸಂಖ್ಯೆಯನ್ನು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಾದುದು ಅವಶ್ಯ. ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಸರ್ಕಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿದೇಶದಲ್ಲಿ ವ್ಯಾಸಂಗಕ್ಕೆ ತೆರಳಿದ ಭಾರತೀಯರ ದತ್ತಾಂಶವನ್ನು ಉಲ್ಲೇಖಿಸಲಾಗಿದೆ. ಇದರ ಪ್ರಕಾರ, 11,33,749 ಭಾರತೀಯರು ವಿದೇಶಕ್ಕೆ ತೆರಳಿ ವ್ಯಾಸಂಗ ಮಾಡುತ್ತಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ , ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಯುನೈಟೆಡ್ ಕಿಂಗ್​ಡಂ, ಒಮಾನ್, ನ್ಯೂಜಿಲೆಂಡ್, ಚೀನಾ, ಜರ್ಮನಿ - ಇವು ಭಾರತದ ವಿದ್ಯಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿರುವ ಟಾಪ್ 10 ರಾಷ್ಟ್ರಗಳು. ಇದೇ ರೀತಿ ರೆಡ್​ಸೀರ್ ಎಂಬ ಸಂಸ್ಥೆಯ ಅಂದಾಜಿನಂತೆ ವಿದೇಶ ವ್ಯಾಸಂಗಕ್ಕೆ ತೆರಳುವ ಭಾರತದ ವಿದ್ಯಾರ್ಥಿಗಳ ವಾರ್ಷಿಕ ವೆಚ್ಚ ಪ್ರಮಾಣ 2019ರ ಲೆಕ್ಕಾಚಾರ ಪ್ರಕಾರ 28 ಶತಕೋಟಿ ಡಾಲರ್ ಅಂದರೆ ಅಂದಾಜು 2,14,194 ಕೋಟಿ ರೂಪಾಯಿ. 2024ರ ವೇಳೆ ಇದು 80 ಶತಕೋಟಿ ಡಾಲರ್ ಆಗಲಿದೆ ಎಂದು ಅದು ತನ್ನ ‘ಹೈಯರ್ ಎಜುಕೇಶನ್ ಅಬ್ರಾಡ್’ ವರದಿಯಲ್ಲಿ ತಿಳಿಸಿದೆ.

ಮಾನವ ಸಂಪನ್ಮೂಲಕ್ಕೆ ಅಗತ್ಯ ಶಿಕ್ಷಣ

ಭಾರತದಲ್ಲೇ ಇಷ್ಟೆಲ್ಲ ಸೌಕರ್ಯವಿದ್ದರೂ ವಿದೇಶ ವ್ಯಾಸಂಗದ ಕನಸಿನ ಬೆನ್ನೇರಿ ಹೋಗುವುದೇಕೆ ಎಂಬ ಪ್ರಶ್ನೆ ಉತ್ತರ ಕಂಡುಕೊಳ್ಳಲು ರಾಜ್ಯದ ಮತ್ತು ಇತರೆ ರಾಜ್ಯಗಳ ಕೆಲವು ಪಾಲಕರನ್ನು ಸಂರ್ಪಸಿದ ವೇಳೆ ಅವರು ಹೇಳಿದ್ದಿಷ್ಟು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಈ ಸನ್ನಿವೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳದೇ ಹೋದರೆ, ಆತ್ಮನಿರ್ಭರ ಭಾರತ ನಿರ್ವಣಕ್ಕೆ ಬೇಕಾದ ಮಾನವ ಸಂಪನ್ಮೂಲ ಸಿದ್ಧವಾಗದು. ಉತ್ತಮ ಗುಣಮಟ್ಟದ ಶಿಕ್ಷಣ ಪ್ರತಿ ಯೊಬ್ಬರಿಗೂ ಸಿಗುವಂತಾಗಬೇಕು. ಅದಕ್ಕೆ ಬೇಕಾದಂತೆ ಶಿಕ್ಷಣದ ಮೂಲಸೌಕರ್ಯ ಹೆಚ್ಚಿಸುವ ಕಡೆಗೆ ಸರ್ಕಾರ ಗಮನಹರಿ ಸುವುದು ಇಂದಿನ ತುರ್ತು ಅಗತ್ಯ ಎಂಬುದು ಬಹುತೇಕ ಪಾಲಕರು ಮತ್ತು ವಿದ್ಯಾರ್ಥಿ ಯುವಜನರ ಅಭಿಪ್ರಾಯ.

ನೀಟ್ ಪಾಸಾದ ಇವರು ಎಲ್ಲಿ ಕಲಿಯಬೇಕು?

ಎಂಬಿಬಿಎಸ್ ಪದವಿಗೆ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆ ಕಡಿಮೆ. ಸರ್ಕಾರಿ ಕಾಲೇಜುಗಳಿದ್ದರೂ ಸೌಕರ್ಯವಿಲ್ಲ. ಖಾಸಗಿ ಕಾಲೇಜುಗಳ ಲಾಬಿ ಹೆಚ್ಚು ಪ್ರಭಾವಿ ಆಗಿದ್ದು, ವೈದ್ಯ ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿಕೊಂಡಿವೆ. ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್ (ನೀಟ್)ಗೆ ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಈ ಪೈಕಿ ಶೇಕಡ 50 ವಿದ್ಯಾರ್ಥಿಗಳು ಅಂದರೆ 7.5 ಲಕ್ಷ ವಿದ್ಯಾರ್ಥಿಗಳು ನಿಶ್ಚಿತ ಅಂಕ ಪಡೆದು ಮೆಡಿಕಲ್ ಶಿಕ್ಷಣ ಪಡೆಯುವ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಲಭ್ಯವಿರುವ ಒಟ್ಟು ಮೆಡಿಕಲ್ ಸೀಟುಗಳು 84,869. ಉಳಿದ ಆರು ಲಕ್ಷ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಎಲ್ಲಿಗೆ ಹೋಗಬೇಕು?

ಭಾರತದಲ್ಲಿ ಯಾಕೆ ಇದು ಸಾಧ್ಯವಿಲ್ಲ?

ನಮ್ಮ ದೇಶದಲ್ಲಿ ಶಿಕ್ಷಣ ಬೇಕೆಂದು ಹೇಳುವವರಿಗೆ ನೂರೆಂಟು ನಿಯಮಗಳು. ಹೀಗಾಗಿ ಕಲಿಕೆ ಇಲ್ಲಿ ಕಷ್ಟ. ವಿದೇಶದಲ್ಲಿ ದುಡ್ಡು ಮತ್ತು ಪ್ರಾಥಮಿಕ ಅರ್ಹತೆಗಳು ಇದ್ದರೆ ಅಷ್ಟೇ ಸಾಕು. ವೈದ್ಯ ಶಿಕ್ಷಣ ಮತ್ತು ಇತರೆ ಸಾಮಾನ್ಯ ಶಿಕ್ಷಣ ಕೂಡ ಸುಲಭವಾಗಿ ಪಡೆಯಬಹುದು. ನೀರಿನ ಪೈಪ್, ಗೋಡೆ ಮತ್ತು ಸಿಕ್ಕ ಸಿಕ್ಕಲ್ಲಿ ನೋಟಿನ ಕಂತೆಗಳನ್ನು, ಚಿನ್ನದ ಗಟ್ಟಿಗಳನ್ನು ಸಂಗ್ರಹಿಸಿಡುವ ದುರಾಸೆಯ ಜನರ ಅಧೀನದಲ್ಲಿ ಶಿಕ್ಷಣ ವ್ಯವಸ್ಥೆ ಇರುವಷ್ಟು ಕಾಲ ಜನ ಸಾಮಾನ್ಯರ ಪಾಲಿಗೆ ನಮ್ಮ ದೇಶದಲ್ಲಿ ಎಂಬಿಬಿಎಸ್, ಇಂಜಿನಿಯರಿಂಗ್ ಓದು ಗಗನ ಕುಸುಮವೇ ಸರಿ. ವಿದೇಶಗಳಲ್ಲಿ ಕಡಿಮೆ ಶುಲ್ಕದಲ್ಲಿ ಎಂಬಿಬಿಎಸ್ ಕೋರ್ಸ್ ಒದಗಿಸುವುದು ಸಾಧ್ಯವಿದೆ ಎಂದಾದರೆ ಭಾರತದಲ್ಲಿ ಯಾಕೆ ಇದು ಸಾಧ್ಯವಿಲ್ಲ? ಬಹುತೇಕ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ಚುನಾಯಿತ ಜನಪ್ರತಿನಿಧಿಗಳ ಅಧೀನದಲ್ಲೇ ಇದೆ. ಹಾಗಾಗಿ ಇದು ರಾಜಕೀಯ ಇಚ್ಛಾಶಕ್ತಿ ಮತ್ತು ಖಾಸಗಿ ಕಾಲೇಜುಗಳವರ ಮನಸ್ಥಿತಿಯನ್ನು ಹೊಂದಿಕೊಂಡಿದೆ ಎನ್ನುತ್ತಾರೆ ನಾವು ಮಾತನಾಡಿಸಿದ ಬೆಳಗಾವಿ, ಚಿತ್ರದುರ್ಗ ಮತ್ತು ದಾವಣಗೆರೆಯ ಪಾಲಕರು.

ದುಡ್ಡೇ ದೊಡ್ಡಪ್ಪ...

ಉನ್ನತ ವ್ಯಾಸಂಗದ ವಿಚಾರಕ್ಕೆ ಬಂದಾಗ ದುಡ್ಡು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ವಿದೇಶಿ ಕರೆನ್ಸಿಗಳ ಎದುರು ಭಾರತದ ರೂಪಾಯಿ ಮೌಲ್ಯ ಕೂಡ ಪರಿಗಣಿಸಲ್ಪಡುತ್ತದೆ. ಶ್ರೀಮಂತರ ಮಕ್ಕಳು ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ, ಯುಎಇ, ಜರ್ಮನಿ ಮುಂತಾದ ರಾಷ್ಟ್ರಗಳಿಗೆ ವ್ಯಾಸಂಗಕ್ಕಾಗಿ ಹೋಗುತ್ತಾರೆ. ಆದರೆ, ಯೂಕ್ರೇನ್, ಪಾಕಿಸ್ತಾನದಂತಹ ದೇಶಗಳಿಗೆ ವಿದ್ಯಾರ್ಥಿಗಳನ್ನು ಕಲಿಕೆಗೆ ಕಳುಹಿಸುತ್ತಿರುವ ಭಾರತೀಯ ಪಾಲಕರು ಶ್ರೀಮಂತರೇನೂ ಅಲ್ಲ; ಮಧ್ಯಮ ವರ್ಗದವರು. ಇಲ್ಲಿಯ ದುಬಾರಿ ಶುಲ್ಕಕ್ಕಿಂತ ತಮ್ಮ ಕೈಗೆಟಕುವ ದರದ ಶಿಕ್ಷಣ ವಿದೇಶದಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೆ ಅವರು ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಿದ್ದಾರೆ ಎಂಬುದು ಕೂಡ ವಾಸ್ತವ.

ಅವಕಾಶ ವಂಚಿತರು...

ಯೂಕ್ರೇನ್ ಸನ್ನಿವೇಶವನ್ನು ಗಮನಿಸಿದಾಗ ಕೆಲವು ವಿದ್ಯಾರ್ಥಿಗಳು ದೇಶದ ಬಗ್ಗೆ ಅಭಿಮಾನ ಹೀನರಾಗಿ ವರ್ತಿಸಿದ್ದು ಕಂಡುಬಂತು. ಆದರೆ ವಿದೇಶ ವ್ಯಾಸಂಗಕ್ಕೆ ತೆರಳಿದ ಎಲ್ಲರನ್ನೂ ದೇಶಾಭಿಮಾನ ಇಲ್ಲದವರೆಂದು ಪೂರ್ವಗ್ರಹ ಪೀಡಿತರಾಗಿ ನೋಡುವುದು ಸರಿಯಲ್ಲ. ಅಷ್ಟೇ ಅಲ್ಲ, ವಿದೇಶಗಳಲ್ಲಿ ಓದಲು ಹೋಗುವವರು ಕಲಿಕೆಯಲ್ಲಿ ಹಿಂದುಳಿದವರು ಎಂಬ ನಂಬಿಕೆ ಒಂದಿದೆ. ಆದರೆ ಅದು ತಪು್ಪ. ಭಾರತದಲ್ಲಿ ಓದಲು ಇಚ್ಛಿಸುವ ವಿದ್ಯಾರ್ಥಿಗಳು ಮತ್ತು ಸೀಮಿತ ಸೀಟುಗಳ ಕಾರಣ ಸಮತೋಲನವಿಲ್ಲ. ಹೀಗಾಗಿ ಅನಗತ್ಯವಾದ ಸ್ಪರ್ಧೆ ಇದೆ. ಬೇಡಿಕೆ ತಕ್ಕಷ್ಟು ಸೀಟುಗಳು ಇಲ್ಲದಿರುವುದು ಒಂದೆಡೆ, ಇನ್ನೊಂದೆಡೆ ದುಬಾರಿ ಶುಲ್ಕ. ಹೀಗಿರುವಾಗ ವಿದೇಶಗಳ ಕಡೆಗೆ ವಿದ್ಯಾರ್ಥಿಗಳ ಚಿತ್ತ ಹರಿಯುವುದು ಸಹಜ. ಅಲ್ಲಿ ಕೆಲವು ದೇಶಗಳು ಪೌರತ್ವ ಕೊಟ್ಟು ಶಿಕ್ಷಣದ ವೆಚ್ಚವನ್ನೂ ಭರಿಸಿ ತಮ್ಮ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ಭಾರತೀಯ ವಿದ್ಯಾರ್ಥಿಗಳನ್ನು ಕೇಳಿಕೊಳ್ಳುತ್ತಿವೆ ಎಂಬುದೂ ವಾಸ್ತವ.

ಪ್ರಾಕ್ಟಿಕಲ್ ಕಲಿಕೆಗೆ ಎಂದರೆ...

ಶಿಕ್ಷಣ ವ್ಯವಸ್ಥೆಯಲ್ಲೂ ಭಾರತ ಮತ್ತು ವಿದೇಶಗಳ ಶಿಕ್ಷಣವನ್ನು ತುಲನೆ ಮಾಡಿದರೆ, ಭಾರತದಲ್ಲಿ ಥಿಯರಿಗೇ ಹೆಚ್ಚು ಪ್ರಾಮುಖ್ಯತೆ. ಇಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಎಂಎಸ್ ಕೂಡ ಇಲ್ಲೇ ಮಾಡಿದರೆ ಉದ್ಯೋಗ ಸೇರುವಾಗ ಪ್ರಾಯೋಗಿಕ ಅನುಭವ ಇರುವುದೇ ಇಲ್ಲ. ಪ್ರಾಕ್ಟಿಕಲ್ ಎಂದರೆ ಯಾವುದೋ ಹಳೆಯ ಪ್ರಯೋಗವನ್ನು ಮಾಡಲು ಕೊಟ್ಟು, ಕೊನೆಗೊಂದು ಪ್ರಮಾಣ ಪತ್ರವನ್ನು ಕೊಟ್ಟುಬಿಡುತ್ತಾರೆ. ಪ್ರಾಧ್ಯಾಪಕರು ಅಪ್ಡೇಟ್ ಆಗಿರದ ಕಾರಣ ಹೀಗೆ. ವಿದೇಶಗಳಲ್ಲಿ ಪ್ರಾಕ್ಟಿಕಲ್​ಗೆ ಹೆಚ್ಚು ಆದ್ಯತೆ. ಭಾರತದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಎಂಎಸ್ ಮಾಡಲು ವಿದೇಶಕ್ಕೆ ಹೋದರೆ ಅಲ್ಲಿ ಪ್ರಾಯೋಗಿಕ ಅನುಭವ ಸಿಕ್ಕು ಉದ್ಯೋಗ ಸೇರಲು ಅನುಕೂಲವಾಗುತ್ತದೆ. ಅಲ್ಲಿ ವಾರದ ಐದು ದಿನ ನಿತ್ಯ ಬದುಕಿನ ಸಮಸ್ಯೆಗಳದ್ದೇ ಪ್ರಾಜೆಕ್ಟ್ ಕೊಟ್ಟುಬಿಡುತ್ತಾರೆ. ಅದನ್ನು ಬಗೆಹರಿಸುವ ಪ್ರಯತ್ನದಲ್ಲಿ ವಾರದ ಕೊನೆಗೆ ನೇರ ಮುಖಾಮುಖಿ ಸಂವಾದ ಪ್ರಾಧ್ಯಾಪಕರ ಜತೆಗೆ ಇರುತ್ತದೆ. ಇದು ಪ್ರಾಕ್ಟಿಕಲ್ ಅನುಭವವನ್ನು ಕೊಡುತ್ತದೆ ಎನ್ನುತ್ತಾರೆ ಕಾಸರಗೋಡು ಜಿಲ್ಲೆಯ ಪಾಲಕರೊಬ್ಬರು.

ಪಾಕಿಸ್ತಾನದಲ್ಲೂ 230 ಮಂದಿ!

ಸರ್ಕಾರದ ದತ್ತಾಂಶಗಳನ್ನು ಗಮನಿಸಿದರೆ ಭಾರತದ 230 ವಿದ್ಯಾರ್ಥಿಗಳು ಪಾಕಿಸ್ತಾನದಲ್ಲಿ ಓದುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವ್ಯಾಸಂಗ ಮಾಡುವುದಕ್ಕೆ ಹೋದರೆ ಅಚ್ಚರಿ ಏನೂ ಇಲ್ಲ. ಆದರೆ ಭಾರತದಲ್ಲಿ ಇಲ್ಲದೇ ಇರುವಂತಹ ಶಿಕ್ಷಣ ಪಾಕಿಸ್ತಾನದಲ್ಲಿ ಏನು ಸಿಗುತ್ತಿದೆ ಎಂಬುದೇ ಅಚ್ಚರಿ. ಈ ವಿದ್ಯಾರ್ಥಿಗಳು ಯಾರು ? ಅವರು ಅಲ್ಲಿ ಏನು ಓದುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.

ಉಚಿತ ಶಿಕ್ಷಣ ಸಿಗುವಾಗ

ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಪ್ರಾಥಮಿಕ ಶೈಕ್ಷಣಿಕ ಅರ್ಹತೆ ಇದ್ದರೆ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟೋರಲ್ ಪದವಿ ವ್ಯಾಸಂಗವನ್ನು ಕನಿಷ್ಠ ವೆಚ್ಚದಲ್ಲಿ ಮುಂದುವರಿಸುವುದಕ್ಕೆ ಕೆಲವು ರಾಷ್ಟ್ರಗಳು ಅವಕಾಶ ಮಾಡಿಕೊಡುತ್ತವೆ. ಜರ್ಮನಿ, ನಾರ್ವೆ, ಸ್ವೀಡನ್, ಆಸ್ಟ್ರಿಯಾ, ಫಿನ್ಲೆಂಡ್, ಝೆಕ್ ರಿಪಬ್ಲಿಕ್, ಫ್ರಾನ್ಸ್ (ಫ್ರೆಂಚ್ ಭಾಷೆ ಕಲಿಯಬೇಕು), ಬೆಲ್ಜಿಯಂ, ಗ್ರೀಸ್, ಸ್ಪೇನ್ ಇಂತಹ ಕೆಲವು ರಾಷ್ಟ್ರ ಗಳು. ಕನಿಷ್ಠ ವೆಚ್ಚ ಭರಸಿಕೊಂಡು ಬಹುತೇಕ ಉಚಿತ ಶಿಕ್ಷಣ ನೀಡುವ ಇಂತಹ ರಾಷ್ಟ್ರಗಳ ಸಾಲಿಗೆ ಭಾರತ ಸೇರುವುದು ಯಾವಾಗ?

ಸರ್ಕಾರ ಮಾಡಬೇಕಾದ್ದೇನು?

ಮೇಲ್ನೋಟಕ್ಕೆ ಹೇಳುವುದಾದರೆ, ಶಿಕ್ಷಣ ಸಂಸ್ಥೆಗಳು ಮತ್ತು ವಿಷಯವಾರು ಸೀಟುಗಳ ಲಭ್ಯತೆ ಹೆಚ್ಚಿಸಬೇಕು ಎನ್ನಬಹುದು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಇತಿಹಾಸ ಇನ್ನು ಡೇಟಾಗಳ ಮೂಲಕವೇ ನಿರೂಪಿತವಾಗುತ್ತದೆ ಎಂದು ಇತ್ತೀಚೆಗೆ ಹೇಳಿದ್ದರು. ಕಾರ್ಪೆರೇಟ್ ಜಗತ್ತು ಕೂಡ ಇಂದು ಡೇಟಾ ಸೈನ್ಸ್ ಆಧಾರಿತವಾಗಿ ವ್ಯವಹರಿಸಲಾರಂಭಿಸಿದೆ. ಹೀಗಾಗಿ, ದೇಶದಲ್ಲಿ ಪ್ರತಿವರ್ಷ ಪಿಯು ಶಿಕ್ಷಣ ಮುಗಿಸಿ ಹೊರಬರುವ ವಿದ್ಯಾರ್ಥಿಗಳ ಅಂಕಿ ಸಂಖ್ಯೆ, ನೀಟ್ ಮತ್ತು ಇತರೆ ಸಿಇಟಿಗಳನ್ನು ಬರೆಯುವ ವಿದ್ಯಾರ್ಥಿಗಳ ಅಂಕಿ ಸಂಖ್ಯೆ ಕಲೆ ಹಾಕಬೇಕು. ಉನ್ನತ ವ್ಯಾಸಂಗಕ್ಕೆ ಇರುವ ಅವಕಾಶ ಅಂದರೆ ಕಾಲೇಜುಗಳು ಮತ್ತು ಪ್ರತಿ ವಿಷಯವಾರು ಕಲಿಕೆಗೆ ಲಭ್ಯವಿರುವ ಮೂಲಸೌಕರ್ಯ (ಸೀಟು ಮತ್ತು ಇತರೆ ಸೌಕರ್ಯ)ಗಳ ಡೇಟಾ ಸಂಗ್ರಹಿಸಬೇಕು. ಈ ಡೇಟಾವನ್ನು ಡೇಟಾ ಅನಾಲಿಸಿಸ್ ಟೀಮ್ೆ ಕೊಟ್ಟು, ಬಿಜಿನೆಸ್ ಅನಲಿಸ್ಟ್​ಗಳ ಮೂಲಕ ಸಮಸ್ಯೆಗೆ ಪರಿಹಾರದ ಶಿಫಾರಸು ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಕಡೆಗೆ ಸರ್ಕಾರ ಗಮನಹರಿಸಬೇಕು. ಈ ರೀತಿಯಾಗಿ ಪರಿಸ್ಥಿತಿ ಕೈ ಮೀರುವ ಮುನ್ನ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಹಿತ ಕಾಪಾಡಬಹುದು, ದೇಶದ ಮಾನವ ಸಂಪನ್ಮೂಲ ಬಲಪಡಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net