ಜ್ಞಾನಸೂರ್ಯ ಅಸ್ತಂಗತನಾದ ದಿನವಿದು

Vivekananda
Published on

ಅಂದು ಮಧ್ಯಾಹ್ನ ವಿಶ್ರಾಂತಿಯ ನಂತರ ಸ್ವಾಮೀಜಿ ಬ್ರಹ್ಮಚಾರಿಗಳ ಕೋಣೆಗಳಿಗೆ ಹೋಗಿ ತಾವೇ ಅವರನ್ನು ಅಂದಿನ ಸಂಸ್ಕೃತ ವ್ಯಾಕರಣದ ತರಗತಿಗೆ ಕರೆತಂದರು. ತರಗತಿ ಸುಮಾರು ಮೂರು ಗಂಟೆಗಳಷ್ಟು ದೀರ್ಘಕಾಲ ನಡೆಯಿತು. ಆದರೆ ವ್ಯಾಕರಣದಂತಹ ನೀರಸ ವಿಷಯವೂ ಬೇಸರ ತರುವಂತಿರಲಿಲ್ಲ. ಇದಕ್ಕೆ ಕಾರಣ ಸ್ವಾಮೀಜಿಯವರು ವಿಷಯವನ್ನು ನಿರೂಪಿಸುತ್ತಿದ್ದ ರೀತಿ.

ಹೊಂಬೆಳಕು
ವಿಶ್ವವಿಜೇತ ಸ್ವಾಮಿ ವಿವೇಕಾನಂದರ ಮಹಾಸಮಾಧಿಯ ದಿನವಿದು. ಅವರ ಪ್ರತಿಯೊಂದು ಸ್ಮ ೃಯೂ ಅದ್ಭುತ ಮತ್ತು ಧ್ಯಾನ ಯೋಗ್ಯ. ಆ ದಿನದ ಘಟನಾವಳಿಗಳ ವಿವರಣೆ ಈ ಕೆಳಗೆ.

ಅಂದು 1902ರ ಜುಲೈ 4. ಅಮೆರಿಕದ ಸ್ವಾತಂತ್ರೊ್ಯೕತ್ಸವವೂ ಅಂದೇ. ಅದೇ ಸ್ವಾಮೀಜಿಯವರ ಅಂತಿಮ ದಿನ. ಅಂದಿನ ಅವರ ನಡೆನುಡಿಗಳೆಲ್ಲ ಉದ್ದಿಶ್ಯಪೂರ್ಣವಾಗಿದ್ದವು, ಅರ್ಥಪೂರ್ಣವಾಗಿದ್ದವು. ಅವರು ಎಂದಿನಂತೆ ಬೇಗ ಎದ್ದರು. ಚಹಾದ ವೇಳೆಗೆ ತಮ್ಮ ಗುರುಭಾಯಿಗಳೊಂದಿಗೆ ಹಿಂದಿನ ದಿನಗಳ ಅನೇಕ ಮಧುರ ಸ್ಮ ೃಗಳನ್ನು ಮೆಲುಕು ಹಾಕಿದರು. ಎಂಟು ಗಂಟೆಯ ವೇಳೆಗೆ ದೇವಾಲಯಕ್ಕೆ ಹೋಗಿ ಧ್ಯಾನಕ್ಕೆ ಕುಳಿತರು. ಹನ್ನೊಂದು ಗಂಟೆಯವರೆಗೆ, ಎಂದರೆ ಸುಮಾರು ಮೂರು ಗಂಟೆಗಳ ಕಾಲ ಅಪೂರ್ವ ಧ್ಯಾನದಲ್ಲಿ ಮುಳುಗಿಹೋದರು. ಅದೊಂದು ಗಮನೀಯ ಅಂಶ. ಅಲ್ಲದೆ, ಅವರು ಧ್ಯಾನಕ್ಕೆ ಕುಳಿತ ಸ್ವಲ್ಪ ಹೊತ್ತಿನ ಮೇಲೆ ಮಠದ ಸಂನ್ಯಾಸಿಗಳು ನೋಡುತ್ತಾರೆ, ಅವರು ಒಳಗಿನಿಂದ ಕಿಟಕಿ, ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡುಬಿಟ್ಟಿದ್ದಾರೆ! ಅಲ್ಲಿ ಒಳಗೆ ಏನು ನಡೆಯುತ್ತಿದೆಯೆಂದು ಯಾರು ತಾನೆ ಅರಿಯಬಲ್ಲರು? ಅವರ ಆ ದಿವ್ಯಧ್ಯಾನದಲ್ಲಿ, ಅವರು ಯಾವ ಜಗನ್ಮಾತೆಯನ್ನೂ ಶ್ರೀರಾಮಕೃಷ್ಣರನ್ನೂ ಒಂದೇ ಶಕ್ತಿಯ ಎರಡು ಮುಖಗಳೆಂದು ಅರಿತಿದ್ದರೋ ಆ ಇಬ್ಬರೂ ಅಲ್ಲಿ ಜ್ಯೋತಿರೂಪರಾಗಿ ಕಾಣಿಸಿಕೊಂಡಿರಬೇಕು. ಏಕೆಂದರೆ, ಧ್ಯಾನದಿಂದೆದ್ದು ಹೊರಬಂದಾಗ ಅವರು, ಹೃದಯ ಮಿಡಿಯುವಂತಹ ದೇವೀಪರವಾದ ಹಾಡೊಂದನ್ನು ಹೇಳಿಕೊಳ್ಳುತ್ತಿದ್ದರು-‘ಮಾ ಕಿ ಅಮಾರ್​ಕಾಲೊ? ಕಾಲೊ ರೂಪೆ ಹೃದಿಪದ್ಮ ಕೊರೆ ಅಲೊ...’ ‘ನನ್ನ ತಾಯಿ ಕಪ್ಪಗಿಹಳೆ? ಅವಳು ಕಪ್ಪಗಿದ್ದರೂ ನನ್ನ ಹೃದಯಪದ್ಮವನ್ನು ಮಾತ್ರ ಬೆಳಗುತ್ತಿರುವಳಲ್ಲ!’ ಈ ಹಾಡಿನಲ್ಲಿ ಅತ್ಯುನ್ನತ ಭಕ್ತಿಯೊಂದಿಗೆ ಅತ್ಯುನ್ನತ ಜ್ಞಾನ ಸಮರಸವಾಗಿ ಮಿಳಿತಗೊಂಡಿದೆ.

ದೇವಮಂದಿರದಿಂದ ಕೆಳಗಿಳಿದು ಬಂದ ಸ್ವಾಮೀಜಿಯವರು ವಿಶಾಲವಾದ ಹುಲ್ಲುಹಾಸಿನ ಮೇಲೆ ಭಾರವಾದ ಹೆಜ್ಜೆಗಳನ್ನಿಡುತ್ತ ನಡೆದಾಡತೊಡಗಿದರು. ಅವರ ಮನಸ್ಸು ಸಂಪೂರ್ಣ ಅಂತಮುಖವಾಗಿದೆ. ಅಲ್ಲೇ ವರಾಂಡದಲ್ಲಿ ಸ್ವಾಮಿ ಪ್ರೇಮಾನಂದರು ಕಾತರದ ಕಣ್ಣಿನಿಂದ ಅವರನ್ನೇ ವೀಕ್ಷಿಸುತ್ತ ನಿಂತಿದ್ದಾರೆ. ಇದ್ದಕ್ಕಿದ್ದಂತೆ ಸ್ವಾಮೀಜಿ ನಿಂತರು. ಅವರ ಅಂತರಾಳದ ಭಾವನೆಯೊಂದು ಮೌನವನ್ನು ಸೀಳಿಕೊಂಡು ಪಿಸುದನಿಯಾಗಿ ಕೇಳಿಬಂದಿತು: ‘ಇನ್ನೊಬ್ಬ ವಿವೇಕಾನಂದನಿದ್ದಿದ್ದರೆ ಅವನಿಗೆ ತಿಳಿಯುತ್ತಿತ್ತು- ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು. ಇರಲಿ, ಕಾಲಾಂತರದಲ್ಲಿ ಮತ್ತೆಷ್ಟು ಮಂದಿ ವಿವೇಕಾನಂದರು ಉದಿಸಲಿರುವರೋ!’ ಇದನ್ನು ಕೇಳಿದ ಪ್ರೇಮಾನಂದರು ಸ್ತಂಭೀಭೂತರಾದರು. ಏನಿದಕ್ಕೆಲ್ಲ ಅರ್ಥ?!

ಅಂದು ಇನ್ನೊಂದು ವಿಶೇಷ ಘಟನೆ ನಡೆಯಿತು. ಸ್ವಾಮೀಜಿಯವರು ಯಾವಾಗಲೂ ತಮ್ಮ ಕೋಣೆಯಲ್ಲೇ ಊಟ ಮಾಡುವ ಪರಿಪಾಠವಿಟ್ಟುಕೊಂಡಿದ್ದವರು. ಆದರೆ ಅಂದು ಅವರು ಆಶ್ರಮವಾಸಿಗಳೆಲ್ಲರೊಂದಿಗೆ ಕುಳಿತು ಉಲ್ಲಾಸಭರಿತರಾಗಿ ಮಾತನಾಡುತ್ತ ಊಟ ಮಾಡಿದರು ಮತ್ತು ಆನಂದದಿಂದ ಅಡುಗೆಯನ್ನು ಆಸ್ವಾದಿಸಿದರು. ‘ನಾನೆಂದೂ ಇಷ್ಟು ತೃಪ್ತಿಯಾಗಿ ಉಂಡಿಲ್ಲ’ ಎಂದರು.

ಈಗ ಅವರು ತಮ್ಮ ಸಾಕ್ಷಾತ್ ಶಿಷ್ಯರೂ, ಮಹಾ ಮೇಧಾವಿಗಳೂ ಆದ ಸ್ವಾಮಿ ಶುದ್ಧಾನಂದರಿಗೆ ವಾಚನಾಲಯದಿಂದ ಶುಕ್ಲಯಜುರ್ವೆದ ಗ್ರಂಥವನ್ನು ತರುವಂತೆ ಹೇಳಿದರು, ಶುದ್ಧಾನಂದರು ಅದನ್ನು ತಂದೊಡನೆ ಅದರಲ್ಲಿ ‘ಸುಷುಮ್ಣಃ ಸೂರ್ಯ ರಶ್ಮಿ’ ಎಂದು ಪ್ರಾರಂಭವಾಗುವ ಶ್ಲೋಕವನ್ನೂ ಅದರ ಭಾಷ್ಯವನ್ನೂ ಓದುವಂತೆ ಹೇಳಿದರು. ಅದು ವಾಜಸನೇಯೀ ಸಂಹಿತೆ ಮಾಧ್ಯಂದಿನ ಶಾಖೆಯ 18ನೇ ಆಧ್ಯಾಯದ 40ನೇ ಶ್ಲೋಕ.

ಆ ಶ್ಲೋಕ ಹೀಗಿದೆ:
ಸುಷುಮ್ಣಃ ಸೂರ್ಯರಶ್ಮಿಶ್ಚಂದ್ರಮಾ ಗಂಧರ್ವಸ್ತಸ್ಯ
ನಕ್ಷತ್ರಾಣ್ಯಪ್ಸರಸೋ ಭೇಕುರಯೋ ನಾಮ |
ಸನ ಇದಂ ಬ್ರಹ್ಮಕ್ಷತ್ರಂ ಪಾತು
ತಸ್ಮೈ ಸ್ವಾಹಾ ವಾಟ್ ತಾಭ್ಯಃ ಸ್ವಾಹಾ ಛಿ

ಇದಕ್ಕೆ ಖ್ಯಾತ ಭಾಷ್ಯಕಾರ ಮಹೀಧರನ ವ್ಯಾಖ್ಯೆ ಹೀಗಿದೆ: ‘ಯಾರು ಸುಷುಮ್ನವಾಗಿದ್ದಾನೆಯೋ (ಅರ್ಥಾತ್, ಯಜ್ಞಗಳನ್ನು ಮಾಡುವವರಿಗೆ ಅತ್ಯಾನಂದವನ್ನು ನೀಡುತ್ತಾನೆಯೋ), ಯಾರ ಕಿರಣಗಳು ಸೂರ್ಯಕಿರಣಗಳಿಗೆ ಸಮನಾಗಿವೆಯೊ, ಅಂತಹ ಗಂಧರ್ವರೂಪಿಯಾದ ಚಂದ್ರನು ನಮ್ಮನ್ನು ಪೊರೆಯಲಿ. ಅವನಿಗೆ ನಮ್ಮ ಭಕ್ತಿಪೂರ್ವಕ ನಮನಗಳು. ಮತ್ತು ಆ ಚಂದ್ರನ ಅಪ್ಸರೆಯರೂ ಸ್ವಯಂಪ್ರಕಾಶದಿಂದ ವಿರಾಜಿಸುತ್ತಿರುವವರೂ ಆದ ನಕ್ಷತ್ರಗಳಿಗೆ ನಮ್ಮ ಭಕ್ತಿಪೂರ್ವಕ ನಮನಗಳು.

ಸ್ವಾಮಿ ಶುದ್ಧಾನಂದರು ಇದನ್ನು ಓದಿ ಮುಗಿಸುತ್ತಿದ್ದಂತೆಯೇ ಸ್ವಾಮೀಜಿ ಹೇಳಿದರು- ‘ನೋಡು, ಈ ಮಂತ್ರದ ವ್ಯಾಖ್ಯಾನ ನನಗೆ ಒಪ್ಪಿಗೆಯಾಗಲಿಲ್ಲ. ಸುಷುಮ್ನದ ವಿಷಯದಲ್ಲಿ ಭಾಷ್ಯಕಾರನ ಅಭಿಪ್ರಾಯ ಹಾಗಿರಲಿ ; ವೇದಗಳ ರಚನೆಯ ಎಷ್ಟೋ ಕಾಲದ ಬಳಿಕ ರಚಿತವಾದ ತಂತ್ರಗಳಲ್ಲಿ ಸುಷುಮ್ನಾ ನಾಡಿ ಎಂದು ಯಾವುದನ್ನು ವಿವರಿಸಲಾಗಿದೆಯೋ, ಅದರ ಭಾವನೆಯೇ ಈ ಶ್ಲೋಕದಲ್ಲಿ ಬೀಜರೂಪದಲ್ಲಿ ಅಡಕವಾಗಿದೆ. ನನ್ನ ಶಿಷ್ಯರಾದ ನೀವು ಈ ಮಂತ್ರಗಳ ನಿಜವಾದ ಅರ್ಥವನ್ನು ಸಂಶೋಧಿಸಿ ತೆಗೆದು ಇವುಗಳ ಮೇಲೆ ನಿಮ್ಮ ಅನುಭವಪೂರ್ಣವಾದ ಸ್ವಂತ ಭಾಷ್ಯಗಳನ್ನು ಬರೆಯಬೇಕು’. ಯೋಗಿಗಳಿಗೆ ಈ ಸುಷುಮ್ನಾ ನಾಡಿ ಎಂಬುದು ತುಂಬ ಮುಖ್ಯವಾದದ್ದು. ಸ್ವಾಮೀಜಿಯವರು ಯೋಗದ ಮೂಲಕ ತಮ್ಮ ಶರೀರವನ್ನು ತ್ಯಜಿಸುವ ದಿನದಂದೇ ಸುಷುಮ್ನಾ ನಾಡಿಯ ವಿಷಯವಾಗಿ ಹೇಳಿದುದು ಒಂದು ಗಮನಾರ್ಹ ಅಂಶ.

ಅಂದು ಮಧ್ಯಾಹ್ನ ವಿಶ್ರಾಂತಿಯ ನಂತರ ಸ್ವಾಮೀಜಿ ಬ್ರಹ್ಮಚಾರಿಗಳ ಕೋಣೆಗಳಿಗೆ ಹೋಗಿ ತಾವೇ ಅವರನ್ನು ಅಂದಿನ ಸಂಸ್ಕೃತ ವ್ಯಾಕರಣದ ತರಗತಿಗೆ ಕರೆತಂದರು. ತರಗತಿ ಸುಮಾರು ಮೂರು ಗಂಟೆಗಳಷ್ಟು ದೀರ್ಘಕಾಲ ನಡೆಯಿತು. ಆದರೆ ವ್ಯಾಕರಣದಂತಹ ನೀರಸ ವಿಷಯವೂ ಬೇಸರ ತರುವಂತಿರಲಿಲ್ಲ. ಇದಕ್ಕೆ ಕಾರಣ ಸ್ವಾಮೀಜಿಯವರು ವಿಷಯವನ್ನು ನಿರೂಪಿಸುತ್ತಿದ್ದ ರೀತಿ. ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯೆಮಧ್ಯೆ ಏನಾದರೂ ವಿನೋದದ ಕಥೆಗಳೋ, ಚಾತುರ್ಯದ ನುಡಿಗಳೋ ಇದ್ದೇ ಇರುತ್ತಿದ್ದವು. ಯಾವುದಾದರೊಂದು ಸೂತ್ರದ ಪದಲಾಲಿತ್ಯವನ್ನು ಉಪಯೋಗಿಸಿಕೊಂಡು ಅದನ್ನು ಅವರು ವಿಶಿಷ್ಟ ಹಾವಭಾವಗಳೊಂದಿಗೆ ವಿವರಿಸಿದರೆ ಎಂಥವನೂ ಅದನ್ನು ಮರೆಯುವಂತಿರಲಿಲ್ಲ.

ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಸ್ವಾಮೀಜಿಯವರು ಪ್ರೇಮಾನಂದರನ್ನೊಡಗೂಡಿಕೊಂಡು ಬೇಲೂರು ಬಜಾರಿನವರೆಗೆ ನಡೆದುಕೊಂಡು ಹೋದರು. ದಾರಿಯಲ್ಲಿ ಅವರು ಅನೇಕ ವಿಚಾರಗಳ ಕುರಿತಾಗಿ ಮಾತನಾಡಿದರು. ಮಠದಲ್ಲಿ ವೇದಾಂತ ಕಾಲೇಜೊಂದನ್ನು ಸ್ಥಾಪಿಸುವ ವಿಷಯ ಪ್ರಸ್ತಾಪಕ್ಕೆ ಬಂದಿತು. ಈ ವಿಷಯದಲ್ಲಿ ಅವರ ನಿಲುವನ್ನು ಸ್ಪಷ್ಟವಾಗಿ ಅರಿಯಲು ಪ್ರೇಮಾನಂದರು ಕೇಳಿದರು, ‘ಸ್ವಾಮೀಜಿ, ಈ ವೇದಗಳನ್ನು ಅಧ್ಯಯನ ಮಾಡುವುದರಿಂದ ಪ್ರಯೋಜನವೇನು?’ ಸ್ವಾಮೀಜಿಯವರ ನೇರ ಗಂಭೀರ ಉತ್ತರ ಬಂದಿತು- ‘ಅದು ನಮ್ಮ ಬುದ್ಧಿಗಂಟಿದ ಮೂಢನಂಬಿಕೆಗಳನ್ನು ನಾಶಗೊಳಿಸುತ್ತದೆ’. ವೇದಗಳ ಬಗ್ಗೆ ಆಳವಾದ ಅಧ್ಯಯನವಿಲ್ಲದ ತಮ್ಮ ವೈಯಕ್ತಿಕ ಅಭಿಪ್ರಾಯ ಮಂಡನೆಗಳಲ್ಲಿ ಅತ್ಯುತ್ಸಾಹದಿಂದ ನುಗ್ಗುವ ಅಪ್ರಬುದ್ಧರಿಗೆ ವಿವೇಕಾನಂದರ ಈ ಮಾತು ಕಣ್ಣುತೆರೆಸಬೇಕು. ಸ್ವಯಂ ಶಿವನೇ ವೇದಗಳನ್ನು ಕುರಿತು ವ್ಯಾಖ್ಯಾನಿಸುತ್ತಿರುವಾಗ ಸಂದೇಹಿಸುವ ಧೈರ್ಯ ಯಾರಿಗಿದ್ದೀತು!

ನಡೆದಾಟ ಮುಗಿಸಿ ಸ್ವಾಮೀಜಿ ಮಠಕ್ಕೆ ಹಿಂದಿರುಗಿದರು. ಸ್ವಲ್ಪ ಹೊತ್ತು ಇತರ ಸಂನ್ಯಾಸಿಗಳೊಂದಿಗೆ ಮಾತನಾಡಿದರು. ಈ ಮಾತುಗಳೇ ಸ್ವಾಮೀಜಿಯವರ ಕೊನೆಯ ಮಾತುಗಳು ಎನ್ನುವುದು ಆ ಸಂನ್ಯಾಸಿಗಳಿಗೇನಾದರೂ ಗೊತ್ತಿದ್ದರೆ ಅವರು ತಮ್ಮ ಪ್ರಿಯ ನಾಯಕನ ತುಟಿಗಳಿಂದ ಹೊರಹೊಮ್ಮುತ್ತಿದ್ದ ಆ ನುಡಿಗಳನ್ನು ಇನ್ನಷ್ಟು ಎಚ್ಚರಿಕೆಯಿಂದ ಕೇಳಿ ಅವುಗಳನ್ನು ತಮ್ಮ ಹೃದಯಗಳಲ್ಲಿ ಕಾಪಾಡಿಕೊಳ್ಳುತ್ತಿದ್ದರೋ ಏನೋ!

ಸಂಜೆ ಸಮೀಪಿಸಿತು. ಸ್ವಾಮೀಜಿಯವರ ಮನಸ್ಸು ಹೆಚ್ಚು ಹೆಚ್ಚು ಅಂತಮುಖವಾಗುತ್ತ ಬಂದಿತು. ಸಂಜೆಯ ಆರತಿಯ ಘಂಟಾನಾದ ಕೇಳುತ್ತಿದ್ದಂತೆಯೇ ಅವರು ತಮ್ಮ ಕೋಣೆಗೆ ಹಿಂದಿರುಗಿದರು. ತಮ್ಮ ಪರಿಚರ್ಯು ಮಾಡುತ್ತಿದ್ದ ಬ್ರಹ್ಮಚಾರಿಗೆ ಜಪಮಾಲೆಯನ್ನು ತರುವಂತೆ ಹೇಳಿದರು. ಬ್ರಹ್ಮಚಾರಿಗೆ ಹೊರಗೆ ಕುಳಿತು ಧ್ಯಾನಮಾಡುವಂತೆ ಹೇಳಿ ಕಿಟಕಿಗಳನ್ನೆಲ್ಲ ಮುಚ್ಚಿಕೊಂಡು ತಾವೂ ಜಪಕ್ಕೆ ಕುಳಿತರು. ಅಂದು ಅವರು ಗಂಗೆಗೆ ಅಭಿಮುಖವಾಗಿ ಕುಳಿತದ್ದನ್ನು ಬ್ರಹ್ಮಚಾರಿ ಗಮನಿಸಿದ. ಅವರು ಎಂದೂ ಆ ದಿಕ್ಕಿಗೆ ತಿರುಗಿಕೊಂಡು ಕುಳಿತವರಲ್ಲ! ಇಂದು ಹಾಗೆ ಕುಳಿತದ್ದು ಒಂದು ವಿಶೇಷ.

ಒಂದು ಗಂಟೆಯ ಬಳಿಕ ಸ್ವಾಮೀಜಿ ಬ್ರಹ್ಮಚಾರಿಯನ್ನು ಒಳಕರೆದು ಸ್ವಲ್ಪ ಗಾಳಿ ಹಾಕುವಂತೆ ಹೇಳಿ ಜಪಮಾಲೆ ಹಿಡಿದೇ ಮಲಗಿಕೊಂಡರು, ಸ್ವಲ್ಪ ಹೊತ್ತಾದ ಮೇಲೆ, ‘ಗಾಳಿ ಹಾಕಿದ್ದು ಸಾಕು, ಈ ಪಾದಗಳನ್ನು ಸ್ವಲ್ಪ ತಿಕ್ಕು’ ಎಂದು ಹೇಳಿ ನಿದ್ರೆಯಲ್ಲಿ ಮುಳುಗಿದರು. ಹೀಗೆಯೇ ಮತ್ತೆ ಒಂದು ಗಂಟೆ ಕಳೆಯಿತು. ಬಳಿಕ ಅವರ ಕೈ ಸ್ವಲ್ಪ ಮಾತ್ರ ಅಲುಗಿತು. ಆಗ ಅವರು ಒಂದು ದೀರ್ಘವಾದ ಉಸಿರೆಳೆದರು. ಮತ್ತೆರಡು ನಿಮಿಷಗಳ ಕಾಲ ನಿಶ್ಯಬ್ದ. ಮತ್ತೊಮ್ಮೆ ಅವರು ದೀರ್ಘವಾಗಿ ಉಸಿರೆಳೆಯುತ್ತಿದ್ದಂತೆ ಅವರ ದೃಷ್ಟಿ ಎರಡೂ ಹುಬ್ಬುಗಳ ನಡುವೆ ಕೇಂದ್ರಿತವಾಯಿತು. ಮುಖದಲ್ಲಿ ಅಲೌಕಿಕ ದಿವ್ಯತೆಯೊಂದು ಮೂಡಿಬರುತ್ತಿದ್ದಂತೆಯೇ ಅವರು ಇನ್ನಿಲ್ಲವಾದರು. ಇದನ್ನು ಕಂಡ ಬ್ರಹ್ಮಚಾರಿ ವಿಭ್ರಾಂತರಾದರು. ಸ್ವಾಮೀಜಿ ಸಮಾಧಿಮಗ್ನರಾಗಿರಬಹುದೆ ಎಂದೆನ್ನಿಸಿತು ಅವರಿಗೆ. ತಕ್ಷಣ ಓಡಿಹೋಗಿ ಹಿರಿಯ ಸಾಧುಗಳಾದ ಸ್ವಾಮಿ ಅದ್ವೈತಾನಂದರಿಗೆ ಸುದ್ದಿ ಕೊಟ್ಟರು. ರಾತ್ರಿಯ ಊಟಕ್ಕೆ ಸಿದ್ಧರಾಗುತ್ತಿದ್ದ ಸಾಧು ಬ್ರಹ್ಮಚಾರಿಗಳೆಲ್ಲ ಓಡಿಬಂದರು. ಸ್ವಾಮೀಜಿಯವರು ಉನ್ನತ ಸಮಾಧಿಸ್ಥಿತಿಗೇರಿರಬೇಕೆಂದು ಊಹಿಸಿ ಎಲ್ಲರೂ ಗಟ್ಟಿಯಾಗಿ ರಾಮಕೃಷ್ಣನಾಮವನ್ನು ಉಚ್ಚರಿಸ ತೊಡಗಿದರು. ಈ ಉಪಾಯ ಹಿಂದೆ ಎಷ್ಟೋ ಸಲ ಕೆಲಸ ಮಾಡಿತ್ತು. ಆದರೆ ಇಂದಿನ ಅವರ ಈ ಸಮಾಧಿಯು, ಮತ್ತೆ ಹಿಂದಿರುಗಿ ಬರಲಾಗದ ಮಹಾಸಮಾಧಿಯಾಗಿತ್ತು. ಸ್ವಾಮಿ ಅದ್ವೈತಾನಂದರು ಬೋಧಾನಂದರಿಗೆ ನಾಡಿ ಪರೀಕ್ಷಿಸುವಂತೆ ಹೇಳಿದರು. ಸ್ವಲ್ಪ ಹೊತ್ತು ನಾಡಿಹಿಡಿಯಲು ಪ್ರಯತ್ನಿಸಿದ ಬೋಧಾನಂದರು ಕಡೆಗೆ ಎದ್ದು ನಿಂತು ರೋದಿಸಲಾರಂಭಿಸಿದರು. ಕೂಡಲೇ ಡಾ. ಮಹೇಂದ್ರನಾಥ ಮಜುಮ್ದಾರರಿಗೂ, ಗಂಗೆಯ ಆಚೆಯ ದಡದಲ್ಲಿದ್ದ ಸ್ವಾಮಿ ಬ್ರಹ್ಮಾನಂದರು ಮತ್ತು ಸ್ವಾಮಿ ಶಾರದಾನಂದರಿಗೂ ಸುದ್ದಿ ಕಳಿಸಲಾಯಿತು. ಗುರುಭಾಯಿಗಳು ಬರುವ ವೇಳೆಗೆ ರಾತ್ರಿ ಹತ್ತೂವರೆಯಾಗಿತ್ತು. ಬ್ರಹ್ಮಾನಂದರು ದುಃಖೋದ್ವೇಗದಿಂದ ತಮ್ಮ ಪ್ರಿಯ ನರೇಂದ್ರನ ಎದೆಯ ಮೇಲೆ ಮುಖವಿರಿಸಿ ಅಳತೊಡಗಿದರು. ಅವರನ್ನು ಇತರರು ಸಮಾಧಾನ ಪಡಿಸಿ ದೂರಕ್ಕೆ ಸೆಳೆಯಬೇಕಾಯಿತು. ಬ್ರಹ್ಮಾನಂದರು ಬಿಕ್ಕುತ್ತ ನುಡಿದರು, ‘ಓಹ್! ಹಿಮಾಲಯವು ನಮ್ಮಿಂದ ಕಣ್ಮರೆಯಾಯಿತು!

ಸ್ವಲ್ಪ ಹೊತ್ತಿಗೆಲ್ಲ ಡಾಕ್ಟರು ಬಂದರು. ಸ್ವಾಮೀಜಿಯವರನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು. ಉಸಿರಾಟವಿಲ್ಲದಿರುವುದನ್ನು ಗಮನಿಸಿ, ಕೃತಕ ಉಸಿರಾಟದ ಪ್ರಯೋಗ ನಡೆಸಿದರು. ಆದರೆ ಯಾವುದರಿಂದಲೂ ಏನೂ ಪ್ರಯೋಜನವಾಗಲಿಲ್ಲ. ಕಡೆಗೆ ಮಧ್ಯರಾತ್ರಿಯ ವೇಳೆಗೆ ಡಾಕ್ಟರು. ’ಸ್ವಾಮೀಜಿ ಶರೀರವನ್ನು ಬಿಟ್ಟುಬಿಟ್ಟಿದ್ದಾರೆ’ ಎಂದು ಘೊಷಿಸಿದರು.

ಅಂದಿಗೆ ಸ್ವಾಮೀಜಿಯವರ ವಯಸ್ಸು ಕೇವಲ ಮೂವತ್ತೊಂಬತ್ತು ವರ್ಷ, ಐದು ತಿಂಗಳು, ಇಪ್ಪತ್ತನಾಲ್ಕು ದಿನ. ‘ನಾನು ನಲ್ವತ್ತನೆಯ ವರ್ಷವನ್ನು ಕಾಣುವುದಿಲ್ಲ’ ಎಂಬ ಅವರ ಭವಿಷ್ಯವಾಣಿ ಸತ್ಯವಾಗಿತ್ತು. ಆದರೆ ಈ ಭೀಕರ ವಾರ್ತೆಯನ್ನು ಎಲ್ಲಾದರೂ ನಂಬಲುಂಟೆ! ಬೇಲೂರು ಮಠದ ಸಂನ್ಯಾಸಿಗಳೆಲ್ಲ ದಿš್ಮೂಢರಾದರು. ಮಠ ಶೋಕಸಾಗರದಲ್ಲಿ ಮುಳುಗಿತು. ಬೆಳಗಾಗುತ್ತಿದ್ದಂತೆಯೇ ಎಲ್ಲೆಡೆಗಳಿಂದ ಜನ ಪ್ರವಾಹದೋಪಾದಿಯಲ್ಲಿ ಬರಲಾರಂಭಿಸಿದರು. ಎಲ್ಲೆಲ್ಲೂ ಶೋಕ, ಎಲ್ಲೆಲ್ಲೂ ಸಂತಾಪ. ಸ್ವಾಮೀಜಿಯವರ ಶರೀರ ಅವರ ಕೋಣೆಯಲ್ಲಿ ನಿಶ್ಚಲವಾಗಿ ಮಲಗಿತ್ತು. ಕೇವಲ ಎರಡು ದಿನಗಳ ಹಿಂದೆ ಅವರ ಸ್ಪೂರ್ತಿದಾಯಕ ಮಾತುಗಳನ್ನೂ ಅವರ ಭಾವಪೂರ್ಣ ನಡೆನುಡಿಗಳನ್ನೂ ಅವರ ಆನಂದದ ಅಟ್ಟಹಾಸವನ್ನೂ ಕೇಳಿದ್ದ ಜನರಿಗೆ ಅವರ ಮರಣದ ಸುದ್ದಿಯನ್ನು ನಂಬಲು ಸಾಧ್ಯವೇ ಆಗಲಿಲ್ಲ. ಅಲ್ಲಿಗೆ ಆಗಮಿಸಿದ ಸಾವಿರಾರು ಜನ ಸ್ವಾಮೀಜಿಯವರ ಶರೀರವನ್ನೇ ದಿಟ್ಟಿಸುತ್ತ ಅವರು ಮರಣ ಹೊಂದಿರುವ ವಿಷಯದಲ್ಲಿ ಇನ್ನೂ ಅನುಮಾನದಿಂದಲೇ ನಿಂತಿದ್ದರು. ಸ್ವಾಮೀಜಿಯವರ ಮುಖ ಅಷ್ಟು ಪ್ರಕಾಶಮಾನವಾಗಿತ್ತು! ಆ ವಿಶಾಲನಯನಗಳಲ್ಲಿ ಅದೇ ದಿವ್ಯಜ್ಯೋತಿ ಬೆಳಗುತ್ತಿತ್ತು! ಮಂಗಳಕರವಾದ ಸಾಕ್ಷಾತ್ ಸದಾಶಿವನೇ ಅಲ್ಲಿ ಒರಗಿಕೊಂಡಂತಿತ್ತು! ಆ ದಿವ್ಯ ಶರೀರವನ್ನು ದರ್ಶಿಸಿದ ಹಲವಾರು ಜನ ತಮ್ಮ ದುಃಖಗಳನ್ನು ಮರೆತು ಅಪೂರ್ವ ಶಾಂತಿಯನ್ನನುಭವಿಸಿದರು. ಇನ್ನು ಕೆಲವರಿಗೆ, ಸ್ವಾಮೀಜಿ ತಮ್ಮ ದೀರ್ಘಸಮಾಧಿಯಿಂದ ಇನ್ನೇನು ಇಳಿದುಬಂದಾರು ಎಂಬ ಭ್ರಮೆಯಿತ್ತು. ಆದ್ದರಿಂದ ಮರುದಿನ ಬೆಳಗ್ಗೆ ದೇಹವನ್ನು ಮೇಲಿನ ಕೋಣೆಯಲ್ಲಿ ತುಂಬ ಹೊತ್ತು ಬಿಡಲಾಗಿತ್ತು. ಆದರೆ ಹೊತ್ತು ಕಳೆದಂತೆ ಇನ್ನು ಯಾವ ಸಂಶಯವೂ ಉಳಿಯಲಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆಯೇ ನಿವೇದಿತೆಯೂ ಧಾವಿಸಿ ಬಂದಳು. ಹಿಂದಿನ ದಿನ ತಾನೆ ಸ್ವಾಮೀಜಿಯವರ ದೇಹಸ್ಥಿತಿ ತುಂಬ ಚೆನ್ನಾಗಿದೆಯೆಂದು ಆಕೆ ಕೇಳಿದ್ದಳು. ಆ ರಾತ್ರಿ ಅವಳು ಮನೆಯ ತಾರಸಿಯ ಮೇಲೆ ಬೇಲೂರಿಗೆ ಅಭಿಮುಖವಾಗಿ ಕುಳಿತು ಹಲವು ಗಂಟೆಗಳ ಕಾಲ ಧ್ಯಾನ ಮಾಡಿದ್ದಳು. ಆದರೆ ಮಲಗಿ ನಿದ್ರಿಸುತ್ತಿದ್ದಂತೆಯೇ ಆಕೆಗೊಂದು ಕನಸಾಗಿತ್ತು. ಅದರಲ್ಲವಳು ಶ್ರೀರಾಮಕೃಷ್ಣರು ಮತ್ತೊಮ್ಮೆ ದೇಹತ್ಯಾಗ ಮಾಡಿದ್ದಂತೆ ಕಂಡಿದ್ದಳು. ಈಗ ಬೆಳಗಾಗುತ್ತಲೇ ಅವಳಿಗೆ ಸಿಕ್ಕಿದ ಸುದ್ದಿ ಇದು. ತಕ್ಷಣವೇ ಹೊರಟು ಬೇಲೂರು ಮಠಕ್ಕೆ ಬಂದಳು.

ಅವಳ ದುಃಖ, ರೋದನೆಗಳನ್ನು ಬಣ್ಣಿಸಬಲ್ಲವರಾರು ಬಕಿಂಗ್​ಹ್ಯಾಮ್ ಅರಮನೆಯಲ್ಲಿ ಕಾರ್ಯಕ್ರಮವೊಂದರ ನಿಮಿತ್ತ ತಂಗಿದ್ದ ಸ್ವಾಮೀಜಿಯವರ ಸೋದರಿ ಸ್ನೇಹಿತೆಯಂತಿದ್ದ ಜೋಸೆಫಿನ್ನಳಿಗೆ ಖಡಿಚಞಜ್ಜಿಜಿ ಚಠಿಠಿಚಜ್ಞಿಛಿಛ ಘಜ್ಟಿಡಚ್ಞಚ ಎಂದು ತಂತಿ ಕಳಿಸಿದಳು. ದಶಕಗಳೇ ಬೇಕಾಯಿತು ಈ ದುಃಖದಿಂದ ಸ್ವಾಮೀಜಿಯವರ ಶಿಷ್ಯರು ಪಾರಾಗಲು. ಗುರು-ಶಿಷ್ಯರ ಸಂಬಂಧವೇ ಹಾಗೆ ತಾನೆ! ಹೀಗಿತ್ತು ಆ ವೀರಸಂನ್ಯಾಸಿ, ವಿಶ್ವವಿಜೇತ, ವಿಶ್ವಗುರುವಿನ ಅಂತಿಮ ದಿನ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net