ಮಾಲದ್ವೀಪಕ್ಕೆ ಮೂಲಭೂತವಾದ ಬಂದದ್ದು ಹೀಗೆ

maldives
Published on
ಜಗದಗಲ
ಇಂದಿನ ಮಾಲ್ದೀವ್ಸ್​ನ ಜನತೆ ಎರಡು ಸಹಸ್ರಮಾನಗಳಿಗೂ ಹಿಂದೆ ನೈರುತ್ಯ ಭಾರತದ ತೀರದಿಂದ ವಲಸೆ ಬಂದ ಬೆಸ್ತ ಜನಾಂಗಗಳ ವಂಶಜರು. ದ್ವೀಪಸ್ತೋಮದಲ್ಲಿ ಜನವಸತಿ ಆರಂಭವಾದ ಅನತಿಕಾಲದಲ್ಲೇ ಪ್ರಾಚೀನ ಮಾಲ್ಚೀವಿಯನ್ನರು ಸಮುದ್ರದಲ್ಲಿ ಉತ್ತರಕ್ಕೆ ಸಂಚರಿಸಿ ಸಿಂಧ್ ಮತ್ತು ಗುಜರಾತ್ ತೀರಗಳ ನಿವಾಸಿಗಳ ಜತೆ ನಿಕಟ ಹೊಕ್ಕುಬಳಕೆಯನ್ನು ಸ್ಥಾಪಿಸಿಕೊಂಡು, ದೋಣಿನಿರ್ವಣ, ಭಾಷೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಸಾಮ್ಯತೆ ರೂಢಿಸಿಕೊಂಡರು. ಸುಮಾರು ಒಂದು ಸಹಸ್ರಮಾನದ ಹಿಂದಿನವರೆಗೂ ಮಾಲ್ದೀವ್ಸ್ ಅಥವಾ ಮಾಲಾ ದ್ವೀಪಗಳಲ್ಲಿ ಹಿಂದೂ ಧರ್ಮವಲ್ಲದೆ ಬೌದ್ಧಧರ್ಮದ ಮಹಾಯಾನ, ಹೀನಯಾನ ಹಾಗೂ ವಜ್ರಯಾನಗಳು ಪ್ರಚಲಿತವಿದ್ದದ್ದಕ್ಕೆ ವಿಪುಲ ಸಾಕ್ಷ್ಯಗಳು ದೊರೆತಿವೆ.

ಹನ್ನೆರಡನೆಯ ಶತಮಾನದಲ್ಲಿ ಮಾಲ್ದೀವ್ಸ್​ಗೆ ಇಸ್ಲಾಂನ ಆಗಮನವಾಯಿತು. ತನ್ನ ಭೌಗೋಳಿಕ ಸ್ಥಾನದಿಂದಾಗಿ ಆಗ್ನೇಯ ಏಷ್ಯಾದ ಸಾಂಬಾರ ದ್ವೀಪಗಳು ಮತ್ತು ಪಶ್ಚಿಮ ಏಷ್ಯಾ ನಡುವಿನ ವ್ಯಾಪಾರದ ಸಮುದ್ರಮಾರ್ಗದ ಪ್ರಮುಖ ತಂಗುದಾಣವಾಗಿದ್ದ ಮಾಲ್ದೀವ್ಸ್​ಗೆ ಅರಬ್ ವರ್ತಕರ ಸಂಪರ್ಕ ಸಹಜವಾಗಿಯೇ ನಿಕಟವಾಗಿತ್ತು ಮತ್ತದಕ್ಕೆ ಶತಮಾನಗಳ ಇತಿಹಾಸವೂ ಇತ್ತು. ಕ್ರಿ.ಶ. ಏಳನೆಯ ಶತಮಾನದಲ್ಲಿ ಅರೇಬಿಯಾ ಇಸ್ಲಾಂ ಅನ್ನು ಅಪ್ಪಿಕೊಂಡ ಪರಿಣಾಮವಾಗಿ ಸಹಜವಾಗಿಯೇ ಈ ಹೊಸ ಧರ್ಮ ಅರಬ್ ವರ್ತಕರ ಮೂಲಕ ಮಾಲ್ದೀವ್ಸ್​ಗೂ ಪರಿಚಯಿಸಲ್ಪಟ್ಟಿತು. ಅದೇ ಸಮಯದಲ್ಲಿ, ಅದೇ ಬಗೆಯಲ್ಲಿ ಇಸ್ಲಾಂ ಕೇರಳಕ್ಕೂ ಕಾಲಿಟ್ಟು ಇಂದಿನ ತ್ರಿಸ್ಸೂರ್ ಪ್ರದೇಶದ ಹಿಂದೂ ಅರಸ ಕೊಡಂಗಲ್ಲೂರಿನಲ್ಲಿದ್ದ ತನ್ನದೊಂದು ದೇವಸ್ಥಾನವನ್ನು ಕ್ರಿ.ಶ. 629ರಲ್ಲಿ ಅರಬ್ ಮುಸ್ಲಿಂ ವರ್ತಕರಿಗೆ ಮಸೀದಿಯನ್ನಾಗಿಸಿಕೊಳ್ಳಲು ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇಷ್ಟಾಗಿಯೂ, ಮಾಲ ದ್ವೀಪಗಳಲ್ಲಿ ಇಸ್ಲಾಂನ ಪ್ರಸಾರ ನಿಧಾನವಾಗಿ ಸಾಗಿತು. ದ್ವೀಪವಾಸಿಗಳನ್ನು ಅಂತಿಮವಾಗಿ ದೊಡ್ಡ ಪ್ರಮಾಣದಲ್ಲಿ ಇಸ್ಲಾಂಗೆ ಮತಾಂತರಿಸಿದವರು ಅರಬ್ಬರೋ ಅಥವಾ ಪರ್ಶಿಯನ್ನರೋ ಎಂಬ ಗೊಂದಲವಿದೆ. ಇರಾನ್​ನ ತೆಬ್ರೀಜ್ ಪಟ್ಟಣದ ನಿವಾಸಿಯಾದ ಯೂಸುಫ್ ತೆಬ್ರೀಜಿ ಎನ್ನುವಾತ ಹನ್ನೆರಡನೇ ಶತಮಾನದಲ್ಲಿ ಮಾಲ್ದೀವಿಯನ್ನರನ್ನು ಮತಾಂತರಿಸಿದ ಎಂದು ಒಂದು ವಾದವಿದೆ. ಆದರೆ ಹದಿನಾಲ್ಕನೇ ಶತಮಾನದಲ್ಲಿ ಪೌರ್ವಾತ್ಯ ಮುಸ್ಲಿಂ ದೇಶಗಳನ್ನು ಸಂದರ್ಶಿಸಿದ ಮೊರಾಕ್ಕೋದ ಪ್ರಸಿದ್ಧ ಯಾತ್ರಿಕ ಅಬು ಅಬ್ದುಲ್ಲಾ ಮಹಮದ್ ಇಬ್ನ್ ಬತೂತಾ ಹೇಳುವುದೇ ಬೇರೆ. ಅವನ ಪ್ರಕಾರ ಅಬು ಅಲ್-ಬರಕಾತ್ ಅಲ್-ಬರ್ಹಾರಿ ಎಂಬ ಉತ್ತರ ಆಫ್ರಿಕಾದ ನಿವಾಸಿಯೊಬ್ಬ ಹನ್ನೆರಡನೆಯ ಶತಮಾನದಲ್ಲಿ ಮಾಲ್ದೀವಿಯನ್ನರನ್ನು ಇಸ್ಲಾಂಗೆ ಮತಾಂತರಿಸಿದನಂತೆ. ಈ ವಾದದಲ್ಲಿ ಹುರುಳಿರಬಹುದು. ಯಾಕೆಂದರೆ ದಕ್ಷಿಣ ಏಷ್ಯಾದ ಬಹುತೇಕ ಎಲ್ಲ ಮುಸ್ಲಿಂ ಅರಸರು ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾನ್ಯ ಮಾಡಿದ್ದರೆ ಮಾಲ್ದೀವ್ಸ್​ನಲ್ಲಿ ಮಾತ್ರ ಹದಿನೇಳನೆಯ ಶತಮಾನದವರೆಗೂ ಅರೇಬಿಕ್ ಭಾಷೆ ಆಡಳಿತ ಭಾಷೆಯಾಗಿತ್ತು. ಅಲ್ಲದೆ, ಉತ್ತರ ಆಫ್ರಿಕಾದಲ್ಲಿ ಪ್ರಚಲಿತವಿದ್ದ ಮಲೀಕಿ ನ್ಯಾಯವ್ಯವಸ್ಥೆ ಮಾಲ್ದೀವ್ಸ್​ನಲ್ಲಿಯೂ ಪ್ರಚಲಿತವಿತ್ತು. ಇಬ್ನ್ ಬತೂತಾ ಹೇಳುವುದನ್ನು ಮಾಲ್ದೀವ್ಸ್ ಅಧಿಕೃತವಾಗಿ ಒಪ್ಪಿಕೊಂಡಂತೆಯೂ ಇದೆ. 1154 ಫೆಬ್ರವರಿ 11ರಂದು ಕಾಲವಾದನೆಂದು ನಂಬಲಾದ ಅಬು ಬರಕಾತ್​ನ ಸಮಾಧಿ ಈಗಲೂ ಮಾಲ್ದೀವ್ಸ್​ನಲ್ಲಿದೆ.

ಒಟ್ಟಿನಲ್ಲಿ ಹನ್ನೆರಡನೆಯ ಶತಮಾನದಿಂದೀಚೆಗೆ ಮಾಲ್ದೀವ್ಸ್ ತನ್ನ ಬೌದ್ಧಸ್ವರೂಪವನ್ನು ತೊರೆದು ಸಂಪೂರ್ಣವಾಗಿ ಇಸ್ಲಾಂಮಯವಾಗಿಹೋಯಿತು. ಇಷ್ಟಾಗಿಯೂ ಅಲ್ಲಿನ ಸ್ತ್ರೀಯರು ಸ್ವಚ್ಛಂದ ಬದುಕು ಸಾಗಿಸುತ್ತಿದ್ದರೆಂಬ ವಿವರಗಳನ್ನು ಇಬ್ನ್ ಬತೂತಾ ನೀಡುತ್ತಾನೆ. ಅವರು ಹೊರಗಿನ ವ್ಯಾಪಾರಿಗಳು ಮತ್ತು ನಾವಿಕರ ಜತೆ ತಾತ್ಕಾಲಿಕ ವಿವಾಹಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಜತೆಗೆ, ಬಟ್ಟೆಯನ್ನೂ ಸರಿಯಾಗಿ ಧರಿಸುತ್ತಿರಲಿಲ್ಲವಂತೆ. ಸರಿಯಾಗಿ ಮೈ ಮುಚ್ಚಿಕೊಳ್ಳುವಂತೆ ಮಾಲ್ದೀವಿಯನ್ ಸ್ತ್ರೀಯರ ಮನವೊಲಿಸುವುದರಲ್ಲಿ ತಾನು ವಿಫಲಗೊಂಡದ್ದಾಗಿ ಬತೂತಾ ಬರೆಯುತ್ತಾನೆ! ಅಂದರೆ ಮಾಲ್ದೀವ್ಸ್ ಇಸ್ಲಾಮೀಕರಣಗೊಂಡು ಕನಿಷ್ಟ ಎರಡು ಶತಮಾನಗಳು ಕಳೆದ ಮೇಲೂ ಅಲ್ಲಿ ಇಸ್ಲಾಂನ ಎಲ್ಲ ನಿಯಮಗಳೂ ಪಾಲನೆಯಾಗುತ್ತಿರಲಿಲ್ಲವೆಂದು ತಿಳಿಯುತ್ತದೆ. ಹದಿನೇಳನೆಯ ಶತಮಾನದಲ್ಲಿ ಮಾಲ್ದೀವ್ಸ್​ಗೆ ಯುರೋಪಿಯನ್ ವಸಾಹತುಶಾಹಿಗಳ ಆಗಮನ ಆರಂಭವಾಯಿತು.

1965ರಲ್ಲಿ ಬ್ರಿಟಿನ್​ನಿಂದ ಸ್ವಾತಂತ್ರ್ಯ ಪಡೆದ ನಂತರ ಮಾಲ್ದೀವ್ಸ್ ತನ್ನ ಆಡಳಿತ ಹಾಗೂ ನ್ಯಾಯಿಕ ವ್ಯವಸ್ಥೆಗಳನ್ನು ಇಸ್ಲಾಂನ ಆಧಾರದ ಮೇಲೆ ಕಟ್ಟಿಕೊಳ್ಳತೊಡಗಿತು. ಮೂರು ವರ್ಷಗಳ ರಾಜಪ್ರಭುತ್ವವನ್ನು ಅಂತ್ಯಗೊಳಿಸಿ, 1968ರ ನವೆಂಬರ್​ನಲ್ಲಿ ಅನುಷ್ಠಾನಗೊಂಡ ಸಂವಿಧಾನ ಮಾಲ್ದೀವ್ಸ್ ಅನ್ನು ‘ಇಸ್ಲಾಮಿಕ್ ಗಣರಾಜ್ಯ’ ಎಂದು ಘೊಷಿಸಿತು. ಇಸ್ಲಾಂ ಅಲ್ಲದೆ ಬೇರೆ ಯಾವುದೇ ಧರ್ಮದ ಆಚರಣೆ ಹಾಗೂ ಪ್ರಚಾರವನ್ನು ಸಂವಿಧಾನ ಪ್ರತಿಬಂಧಿಸುತ್ತದೆ. ಇಸ್ಲಾಂಗೆ ಹೊರತಾದ ಯಾವುದೇ ಧಾರ್ವಿುಕ ಸಂಕೇತಗಳು ತನ್ನ ನೆಲದಲ್ಲಿ ಕಾಣಿಸಿಕೊಳ್ಳುವುದನ್ನು ಮಾಲ್ದೀವ್ಸ್ ಸರ್ಕಾರ ಸಹಿಸುವುದಿಲ್ಲ. ಸೌದಿ ಅರೇಬಿಯಾ, ಇರಾನ್​ಗಳಿಗಿಂತಲೂ ಕಟ್ಟಾ ಇಸ್ಲಾಮಿಕ್ ನಿಯಮಗಳನ್ನು ಪಾಲಿಸುವ ಮಾಲ್ದೀವ್ಸ್ ಮುಸ್ಲಿಂ ಅಲ್ಲದವರಿಗೆ ತನ್ನ ನಾಗರಿಕತೆ ನೀಡುವುದಿಲ್ಲ. ಆದಾಗ್ಯೂ, ಅಲ್ಲಿನ ಸುಮಾರು 6 ಲಕ್ಷ ನಾಗರಿಕರಲ್ಲಿ 1,400 ಕ್ರಿಶ್ಚಿಯನ್ನರು ಇರುವುದಾಗಿ ಇತ್ತೀಚಿನ ಜನಗಣತಿ ಹೇಳಿರುವುದು ಸೋಜಿಗದ ವಿಷಯ.

ಮಾಲ್ದೀವ್ಸ್​ನಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಜಾಸತ್ತಾತ್ಮಕ ವಿಧಾನದಲ್ಲಿ ಮೊದಲಿಗೆ ನಡೆದದ್ದು 2008ರಲ್ಲಿ. ಅಲ್ಲಿಯವರೆಗೆ ಮೂರು ವರ್ಷಗಳ ರಾಜಪ್ರಭುತ್ವ, ನಂತರ ಇಬ್ಬರು ಅಧ್ಯಕ್ಷರ ನಲವತ್ತು ವರ್ಷಗಳ ಆಳ್ವಿಕೆಯನ್ನು ಆ ದ್ವೀಪರಾಷ್ಟ್ರ ಕಂಡಿತ್ತು. 1978ರಲ್ಲಿ ಅಧ್ಯಕ್ಷರಾದ ಮಾಮೂನ್ ಅಬ್ದುಲ್ ಗಯೂಮ್ ಈಜಿಪ್ಟ್​ನ ಅಲ್ ಅಜರ್ ಧಾರ್ವಿುಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. ಮಾಲ್ದೀವ್ಸ್ ಗೋಚರವಾಗುವಂತೆ ಇಸ್ಲಾಮೀಕರಗೊಳ್ಳತೊಡಗಿದ್ದು ಅವರ ಆಡಳಿತಾವಧಿಯಲ್ಲಿ. ಮಾಲ್ದೀವ್ಸ್ ಸಾಂವಿಧಾನಿಕವಾಗಿ ಇಸ್ಲಾಮಿಕ್ ರಾಷ್ಟ್ರವಾಗಿದ್ದರೂ ಅಲ್ಲಿ ಇಸ್ಲಾಮೀಕರಣ ತನ್ನ ನಿರ್ದೇಶನದಲ್ಲೇ ಆಗಬೇಕೆನ್ನುವುದು ಅಧ್ಯಕ್ಷ ಗಯೂಮ್ ಸ್ಪಷ್ಟ ನಿಲುವಾಗಿತ್ತು. ಈ ವಿಷಯದಲ್ಲಿ ಮತ್ತಾರದೇ ಕೈವಾಡವನ್ನು ಗಯೂಮ್ ಉಗ್ರವಾಗಿ ದಮನಿಸಿದ್ದು ಆಧುನಿಕ ಮಾಲ್ದೀವ್ಸ್ ಇತಿಹಾಸದ ಒಂದು ಅವಿಭಾಜ್ಯ ಭಾಗ.

ಹೀಗೆ ಸಾಂವಿಧಾನಾತ್ಮವಾಗಿ ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾದ, ಅದನ್ನು ಅನುಷ್ಠಾನಗೊಳಿಸಲು ಕಟಿಬದ್ಧವಾದ ಸರ್ಕಾರವಿದ್ದ, ಇಸ್ಲಾಂಗೆ ಯಾವುದೇ ಅಪಾಯ ಅಥವಾ ಪ್ರತಿರೋಧ ಇಲ್ಲದ ಮಾಲ್ದೀವ್ಸ್ನಲ್ಲಿ ಇಸ್ಲಾಮಿಕ್ ಮೂಲಭೂತವಾದ ಕಾಣಿಸಿಕೊಂಡದ್ದೊಂದು ಕುತೂಹಲಕರ ಬೆಳವಣಿಗೆ. ಇಸ್ಲಾಮಿಕ್ ಗಣರಾಜ್ಯದ ಸಾರಥಿಯಾದ ಅಧ್ಯಕ್ಷ ಮಾಮೂನ್ ಅಬ್ದುಲ್ ಗಯೂಮ್ ತನ್ನ ವಿರೋಧಿಗಳು ಧರ್ಮವನ್ನೇ ತನ್ನ ವಿರುದ್ಧ ಅಸ್ತ್ರವಾಗಿ ಬಳಸಬಹುದೆಂಬ ಅಂದರೆ ತನ್ನ ಸರ್ಕಾರ ಇಸ್ಲಾಂಗೆ ಪೂರ್ಣವಾಗಿ ಬದ್ಧವಾಗಿಲ್ಲವೆಂದು ಇತರರು ಆಪಾದಿಸಿ ತನ್ನ ಜನಪ್ರಿಯತೆಯನ್ನು ಕುಗ್ಗಿಸಿ ಅಧ್ಯಕ್ಷಗಿರಿಗೆ ಕುತ್ತು ತರಬಹುದೆಂದು ಆತಂಕ ಪಟ್ಟದ್ದುಂಟು. ಇಸ್ಲಾಮೀಕರಣ ತನ್ನ ಸರ್ಕಾರದ ನಿಯಂತ್ರಣದಲ್ಲೇ ಸಾಗಬೇಕೆಂದು ಲೆಕ್ಕ ಹಾಕಿದ್ದ ಗಯೂಮ್ ಇತರರಿಂದ ಮೂಲಭೂತವಾದದ ಬೋಧನೆ ಹಾಗೂ ಜಿಹಾದ್ ಕರೆಗಳನ್ನು ಮೊಳಕೆಯಲ್ಲೇ ಚಿವುಟಿಹಾಕಲು ಪ್ರಯತ್ನಿಸಿದ್ದರು. ಅದು ದೊಡ್ಡದಾಗಿ ವ್ಯಕ್ತವಾದದ್ದು ಜಿಹಾದಿ ಧರ್ಮಗುರು ಶೇಖ್ ಇಬ್ರಾಹಿಂ ಫರೀದ್ ವಿಷಯದಲ್ಲಿ. ಗಯೂಮ್ ನಿಜವಾದ ಧರ್ಮನಿಷ್ಠರಲ್ಲ, ಅವರ ಆಡಳಿತದಲ್ಲಿ ಮಾಲ್ದೀವ್ಸ್ ಇಸ್ಲಾಂ ಮಾರ್ಗದಿಂದ ದೂರ ಸರಿಯುತ್ತಿದೆ ಎಂದು ಪ್ರಚಾರ ಆರಂಭಿಸಿದ್ದ ಶೇಖ್ ಫರೀದ್​ರನ್ನು ಬಂಧಿಸಿ ಉದ್ದನೆಯ ಗಡ್ಡಕ್ಕೆ ಮೆಣಸಿನಕಾಯಿ ಚಟ್ನಿಯನ್ನು ಶೇವಿಂಗ್ ಕ್ರೀಮ್ಂತೆ ಹಚ್ಚಿ ಬೋಳಿಸಲಾಯಿತು ಮತ್ತು ಅವರನ್ನು ದೂರದ ಹಿಮಾಂದು ದ್ವೀಪಕ್ಕೆ ಅಟ್ಟಲಾಯಿತು. ಅಲ್ಲಿಗೆ ಆ ಜಿಹಾದಿಯ ಅಂತ್ಯವಾಯಿತು ಎಂದು ಗಯೂಮ್ ಅಂದುಕೊಂಡದ್ದೊಂದು ದೊಡ್ಡ ತಪ್ಪಾಯಿತು. ಶೇಖ್ ಫರೀದ್ ಆ ದ್ವೀಪದಲ್ಲೇ 1996ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ಥಾಪಿಸಿದ್ದ ಇಸ್ಲಾಮಿಕ್ ಕ್ಯಾಲಿಫೇಟ್​ನಂತಹ ವ್ಯವಸ್ಥೆಯನ್ನು ಸ್ಥಾಪಿಸಹೊರಟರು. ಅವರ ಮಾತಿನ ಮೋಡಿಗೆ ಸಿಕ್ಕಿದ ದ್ವೀಪದ ಗಂಡಸರು ಗಡ್ಡ ಬೆಳೆಸಿದರು, ದೊಗಳೆ ಉಡುಪು ತೊಟ್ಟರು, ತಲೆಯನ್ನು ಅರಬ್ ಮಾದರಿಯ ಶಿರವಸ್ತ್ರದಿಂದ ಅಲಂಕರಿಸಿಕೊಂಡರು. ಹೆಂಗಸರು ಬುರುಗಾ ಅಂದರೆ ಬುರ್ಕಾದೊಳಗೆ ತಳ್ಳಲ್ಪಟ್ಟರು. ಫರೀದ್​ರ ಈ ಎಲ್ಲ ಕೃತ್ಯಗಳಲ್ಲಿ, ಗಯೂಮ್ ಪೊಲೀಸರು ಮತ್ತು ಬೇಹುಗಾರರ ಕಣ್ಣು ತಪ್ಪಿಸಿ ಹಿಮಾಂದು ದ್ವೀಪಕ್ಕೆ ಹರಿದುಬಂದ ಪಾಕಿಸ್ತಾನಿ ಮತ್ತು ಮಧ್ಯಪ್ರಾಚ್ಯದ ಹಣ ದೊಡ್ಡ ಪಾತ್ರವಹಿಸಿತು.

ಹಿಮಾಂದು ದ್ವೀಪದಲ್ಲಿ ಶೇಖ್ ಫರೀದ್ ಹುಟ್ಟುಹಾಕಿದ ವ್ಯವಸ್ಥೆ 1996ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸೃಷ್ಟಿಸಿದ ಇಸ್ಲಾಮಿಕ್ ಕ್ಯಾಲಿಫೇಟ್ ವ್ಯವಸ್ಥೆಯಂತೇ ಇತ್ತು. ಅನತಿಕಾಲದಲ್ಲೇ ಶೇಖ್ ಫರೀದ್​ರ ಮೂಲಭೂತವಾದಿ ಚಿಂತನೆಗಳು ಹಿಮಾಂದು ದ್ವೀಪವನ್ನು ದಾಟಿ ಮಾಲ್ದೀವ್ಸ್​ನ ಇತರೆಡೆ ಹಬ್ಬಿದವು. ಈಗ ಅವುಗಳನ್ನು ನಿಗ್ರಹಿಸುವ ಸಾಮರ್ಥ್ಯ ಗಯೂಮ್​ಗೆ ಇರಲಿಲ್ಲ. ಜತೆಗೆ, ಅವರು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಿದ್ದ ಜಿಹಾದ್ ಪರವಾಗಿನ ಪಾಠಗಳನ್ನು ಓದಿದ ಯುವಜನತೆಗೆ ಆಪ್ಯಾಯಮಾನವಾದದ್ದು ಮೌಲ್ವಿ ಶೇಖ್ ಫರೀದ್​ರ ಮೂಲಭೂತವಾದಿ ಮಾತುಗಳು! ವಿರೋಧಾಭಾಸವೆಂದರೆ ಇದು.

ವಿದೇಶಿ ಪ್ರವಾಸಿಗರಿಂದ ರಾಜಧಾನಿ ಮಾಲೆಯಲ್ಲಿ ಕ್ರಿಸ್​ವುಸ್ ಆಚರಣೆ ಮಾಲ್ದೀವ್ಸ್​ನ ಇಸ್ಲಾಮಿಕ್ ಅಸ್ಮಿತೆಯ ವಿರುದ್ಧ ಪಶ್ಚಿಮದ ದೇಶಗಳು ಎಸಗುತ್ತಿರುವ ಹುನ್ನಾರಗಳ ಭಾಗ ಎಂಬ ಕೂಗು ಶೇಖ್ ಫರೀದ್​ರ ಅನುಯಾಯಿಗಳಿಂದ ಡಿಸೆಂಬರ್ 1998ರಲ್ಲಿ ಎದ್ದಾಗ ಅಧ್ಯಕ್ಷ ಗಯೂಮ್ ಮಾಲ್ದೀವಿಯನ್ ಜನವಸತಿಯಿರುವ ದ್ವೀಪಗಳಲ್ಲಿ ಕ್ರಿಸ್​ವುಸ್ ಆಚರಣೆಯನ್ನು ಪ್ರತಿಬಂಧಿಸಿದರು. ಅಮೆರಿಕ 9/11 ದಾಳಿಗೊಳಗಾದಾಗ ಅದನ್ನು ವೈಭವೀಕರಿಸುವ ಘೊಷಣಾಫಲಕಗಳು ಮಾಲ್ದೀವ್ಸ್​ನ ಹಲವಡೆ ಕಾಣಿಸಿಕೊಂಡಾಗಲೇ ಅಲ್ಲಿಗೆ ಅಲ್-ಖಯೀದಾ ಕಾಲಿಟ್ಟಿರುವ ಸೂಚನೆಯೂ ಸಿಕ್ಕಿತ್ತು. ಅದೇ ವರ್ಷ ಅಮೆರಿಕನ್ ಬೇಹುಗಾರರ ತಂಡ ಇಬ್ರಾಹಿಂ ಫೌಜಿ ಎಂಬ ಮಾಲ್ದೀವಿಯನ್​ನನ್ನು ಕರಾಚಿಯಲ್ಲಿ ಬಂಧಿಸಿದಾಗ ಅಲ್-ಖಯೀದಾದ ಮಾಲ್ದೀವ್ಸ್ ಸಂಪರ್ಕದ ಸ್ಪಷ್ಟ ಸೂಚನೆ ಅಮೆರಿಕನ್ನರಿಗೆ ಸಿಕ್ಕಿತು. ಅನಂತರ ಅದು ಒಸಾಮಾ ಬಿನ್ ಲಾಡೆನ್​ನ ಗುಪ್ತನಿವಾಸದಲ್ಲಿ ಅಮೆರಿಕನ್ ಸೈನಿಕರಿಗೆ ದೊರಕಿದ ದಾಖಲೆಗಳಲ್ಲಿ ಬಹಿರಂಗವಾಯಿತು. ಮಾಲ್ದೀವಿಯನ್ ಸಹೋದರರು ಸಾಕಷ್ಟು ಸಂಖ್ಯೆಯಲ್ಲಿ ತನ್ನ ಜತೆ ಕೈ ಜೋಡಿಸಿದ್ದಾರೆಂದು ಆತ ಬರೆದಿದ್ದ! ನಂತರ ಮಾಲ್ದೀವಿಯನ್ನರು ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಭಯೋತ್ಪಾದಕ ಸಂಘಟನೆಯತ್ತ ತಿರುಗಿದರು. ಐಸಿಸ್ ಸೇರಲು 423 ಮಾಲ್ದೀವಿಯನ್ನರು ಪ್ರಯತ್ನಿಸಿದರೆಂದೂ, ಅವರಲ್ಲಿ 173 ಜನ ಯಶಸ್ವಿಯಾದರೆಂದು ಪೊಲೀಸ್ ಕಮೀಷನರ್ ಮಹಮದ್ ಹಮೀದ್ 2019ರಲ್ಲಿ ಹೇಳಿದ್ದು ಇಲ್ಲಿ ಉಲ್ಲೇಖನೀಯ. ನೂರಾರು ಮಾಲ್ದೀವಿಯನ್ ಯುವಕರು ಜಿಹಾದಿಗಳ ಜತೆಗೂಡಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ತೆರಳಿದ್ದಾರೆಂದೂ, ಮಾಲ್ದೀವ್ಸ್​ನಲ್ಲಿ ಸುಮಾರು 1,400 ಕಟ್ಟಾ ಐಸಿಸ್ ನಿಷ್ಠರಿದ್ದಾರೆಂದೂ, ಅವರು ಪಕ್ಕದಲ್ಲಿರುವವನ ಜೀವ ತೆಗೆಯಲು ಹಿಂಜರಿಯುವವರಲ್ಲ ಎಂದೂ ಕಮೀಷನರ್ ಹಮೀದ್ ಹೇಳಿದ್ದಾರೆ!

ಆಲಿ ಅಶಾಶಮ್ ಎಂಬ ಮಾಲ್ದೀವಿಯನ್ 2005ರಲ್ಲಿ ಲಷ್ಕರ್-ಎ-ತೋಯ್ಬಾ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ಮೇಲೆ ಎಸಗಿದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ. 2006ರಲ್ಲಿ ಮಾಲ್ದೀವಿಯನ್ ಯುವಕ ಆಲಿ ಜಲೀಲ್ ಪಾಕಿಸ್ತಾನದ ಐಎಸ್​ಐ ಮುಖ್ಯಾಲಯದ ಮೇಲೆ ಅಲ್-ಖಯೀದಾ ಪರವಾಗಿ ಆತ್ಮಹ್ಯಾ ದಾಳಿಯೆಸಗಿದ. ದಾಖಲೆಯಂತೆ ಇವನು ಮಾಲ್ದೀವ್ಸ್​ನ ಮೊದಲ ಸೂಯಿಸೈಡ್ ಬಾಂಬರ್. ಮರುವರ್ಷ ಮಹಮದ್ ಫಸೀಹೂ ಮತ್ತು ಶಿಫಾಹು ಅಬ್ದುಲ್ ವಹೀದ್ ಎಂಬ ಇಬ್ಬರು ಮಾಲ್ದೀವಿಯನ್ನರು ಕಾಶ್ಮೀರಿ ಉಗ್ರಗಾಮಿಗಳೊಂದಿಗೆ ಸೇರಿ ಹೋರಾಡುತ್ತ 2007ರಲ್ಲಿ ಭಾರತೀಯ ಸುರಕ್ಷಾ ಪಡೆಗಳಿಂದ ಹತರಾದರು.

ಈ ನಡುವೆ 2004ರ ಸುನಾಮಿ ಧರ್ಮದ ಹಾದಿಯನ್ನು ತೊರೆದದ್ದಕ್ಕೆ ಅಲ್ಲಾ ನೀಡಿದ ಶಿಕ್ಷೆ ಎಂಬ ಫರೀದ್ ಮತ್ತವರ ಶಿಷ್ಯರ ಮಾತುಗಳನ್ನು ಸಾಕಷ್ಟು ಜನ ನಂಬಿದರು. ಇಸ್ಲಾಮಿಕ್ ಮೂಲಭೂತವಾದ ಮಾಲ್ದೀವ್ಸ್​ನಲ್ಲಿ ಭದ್ರವಾಗಿ ಬೇರೂರಿತು. 1959ರಲ್ಲಿ ತೂದೂ ದ್ವೀಪದಲ್ಲಿ ಪುರಾತತ್ವಶಾಸ್ತ್ರಜ್ಞರು ಬುದ್ಧನ ವಿಗ್ರಹವೊಂದನ್ನು ಪತ್ತೆಹಚ್ಚಿದಾಗ ದ್ವೀಪವಾಸಿಗಳು ಅದು ದುಷ್ಟಶಕ್ತಿಗಳಿಗೆ ಸಂಬಂಧಿಸಿದ ಮಾಟದ ವಸ್ತುವೆಂದು ಪರಿಗಣಿಸಿ ಒಡೆದುಹಾಕಿದರು. ವಿಗ್ರಹದ ತಲೆಯನ್ನು ಹೇಗೋ ಉಳಿಸಿಕೊಂಡು ಅದನ್ನು ಮಾಲೆಯ ಮ್ಯೂಸಿಯಂಗೆ ತಂದಿರಿಸಲಾಯಿತು. ಐವತ್ತಮೂರು ವರ್ಷಗಳ ನಂತರ 2012ರಲ್ಲಿ ಮ್ಯೂಸಿಯಂಗೆ ನುಗ್ಗಿದ ಮೂಲಭೂತವಾದಿಗಳು ವಿಗ್ರಹದ ತಲೆಯನ್ನು ಇಸ್ಲಾಂಗೆ ವಿರುದ್ಧದ ಸಂಕೇತ ಎಂದು ಬಣ್ಣಿಸಿ ಒಡೆದುಹಾಕಿದರು. ಒಂದು ಕಾಲದಲ್ಲಿ ತಮ್ಮ ಪೂರ್ವಜರು ಭಕ್ತಿಯಿಂದ ಆರಾಧಿಸಿದ್ದ ಬುದ್ಧನ ವಿಗ್ರಹಕ್ಕೆ ಇಂದಿನ ಮಾಲ್ದೀವಿಯನ್ನರು ಈ ಗತಿ ಕಾಣಿಸಿದರು.

ಒಂದುಕಾಲದ ವಿರಾಮ ಬದುಕಿನ, ಹೆಚ್ಚಿನ ಕಟ್ಟುಪಾಡುಗಳಿಗೆ ತಮ್ಮನ್ನು ಒಡ್ಡಿಕೊಳ್ಳದ ಸರಳ ಮಾಲದ್ವೀಪವಾಸಿಗಳು ಧಾರ್ವಿುಕ ಮೂಲಭೂತವಾದಿಗಳಾಗಿ ಬದಲಾದ, ಆ ಸುಂದರ ದ್ವೀಪರಾಷ್ಟ್ರ ಜಿಹಾದಿಗಳ ಆಡಂಬೋಲವಾಗತೊಡಗಿದ ಬಗೆ ಇದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net