

ಭಾರತ ಪಾಕಿಸ್ತಾನವನ್ನು ಸೋಲಿಸಿ 53 ವರ್ಷಗಳ ಹಿಂದೆ ‘ಸ್ವತಂತ್ರ ಬಾಂಗ್ಲಾದೇಶ’ವನ್ನು ಅಸ್ತಿತ್ವಕ್ಕೆ ತಂದಿತು. ಆದರೆ, ಸ್ವತಂತ್ರವಾಗುವ ತಮ್ಮ ಇಚ್ಛೆ ಪೂರ್ಣಗೊಂಡ ಮೇಲೆ ಕೃತಘ್ನ ನೀತಿಯನ್ನು ಸಾಮಾನ್ಯ ಬಾಂಗ್ಲಾದೇಶೀ ಮುಸ್ಲಿಮರು ಭಾರತದ ಬಗೆಗಷ್ಟೇ ಅಲ್ಲ, ಶೇಖ್ ಮುಜೀಬುರ್ ರಹಮಾನ್ ಬಗೆಗೂ ತೋರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಅಂದಿನಿಂದಲೂ ಆ ಮುಸ್ಲಿಂಬಾಹುಳ್ಯ ದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮುಸ್ಲಿಂ ಮೂಲಭೂತವಾದಿ ಜಮಾತ್-ಎ-ಇಸ್ಲಾಮಿ ಮತ್ತದರ ವಿದ್ಯಾರ್ಥಿ ಅಂಗ ಇಸ್ಲಾಮಿಕ್ ಛಾತ್ರ ಶಿಬಿರ್ ಹಾಗೂ ರಾಜಕೀಯ ಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ಮತ್ತದರ ವಿದ್ಯಾರ್ಥಿ ಅಂಗ ಬಾಂಗ್ಲಾದೇಶ್ ಜಾತೀಯೊಬಾದಿ ಛಾತ್ರದಲ್ ಅವ್ಯಾಹತವಾಗಿ ದೌರ್ಜನ್ಯಗಳನ್ನೆಸಗುತ್ತಿವೆ. ಇಸ್ಕಾನ್ ಮುಖ್ಯಸ್ಥ ಚಿನ್ಮಯ್ ಕೃಷ್ಣದಾಸ್ ಮತ್ತು ಇತರ ನಾಲ್ವರು ಹಿಂದೂ ಸಂತರನ್ನು ಬಂಧಿಸಲಾಗಿದೆ. ಅವರ ಜಾಮೀನಿಗಾಗಿ ಪ್ರಯತ್ನಿಸಹೊರಟ ವಕೀಲ ರಾಮೇನ್ ರಾಯ್ ಮೇಲೆ ದೈಹಿಕ ಹಲ್ಲೆಯಾಗಿ ಅವರು ಜೀವನ್ಮರಣಗಳ ಹೋರಾಟದಲ್ಲಿದ್ದಾರೆ. ಆ ನೆರೆನಾಡಿನಲ್ಲಿ ಘಟಿಸುತ್ತಿರುವ ದುಷ್ಕೃತ್ಯಗಳನ್ನು ವಿರೋಧಿಸಿ ಶ್ರೀನಗರವೂ ಸೇರಿದಂತೆ ಭಾರತದಾದ್ಯಂತ ಪ್ರದರ್ಶನಗಳಾಗಿವೆ, ಆಗುತ್ತಿವೆ. ‘ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ನಿಲುಗಡೆ ತರುವ ಪ್ರಯತ್ನ ಮಾಡಿ’ ಎಂಬ ಭಾರತ ಸರ್ಕಾರದ ವಿನಂತಿಯನ್ನು ಢಾಕಾದಲ್ಲಿನ ಸರ್ಕಾರ ತಿರಸ್ಕರಿಸಿದೆ. ‘ಹಿಂದೂಗಳ ಮೇಲೆ ಯಾವುದೇ ದೌರ್ಜನ್ಯ ನಡೆಯುತ್ತಿಲ್ಲ, ಬಾಂಗ್ಲಾದೇಶದಲ್ಲಿ ಆ ಸಮುದಾಯ ಸುರಕ್ಷಿತವಾಗಿದೆ, ಅವರ ವಿರುದ್ಧ ದೌರ್ಜನ್ಯದ ಸುದ್ದಿಗಳಲ್ಲಿ ಹುರುಳಿಲ್ಲ, ಅವೆಲ್ಲ ಭಾರತದ ಸುದ್ದಿಮಾಧ್ಯಮಗಳು ಸೃಷ್ಟಿಸುತ್ತಿರುವ ಕಟ್ಟುಕಥೆಗಳು’ ಎಂದು ಮಹಮದ್ ಯೂನುಸ್ ನೇತೃತ್ವದ ಉಸ್ತುವಾರಿ ಸರ್ಕಾರ ಮತ್ತೆಮತ್ತೆ ಹೇಳುತ್ತಿದೆ. ಜತೆಗೆ, ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳಲ್ಲಿ ಭಾರತ ಅನಗತ್ಯವಾಗಿ ಕೈ ತೂರಿಸುತ್ತಿರುವುದಾಗಿಯೂ ಆಪಾದಿಸಿದೆ. ಅದಕ್ಕೆ ಸ್ಪಂದಿಸಿ ಅಲ್ಲಿನ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರೂ ಭಾರತದ ವಿರುದ್ಧ ಬೀದಿಬೀದಿಗಳಲ್ಲಿ ಘೊಷಣೆ ಕೂಗುತ್ತಿದ್ದಾರೆ, ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪೂವೋತ್ತರ ಭಾರತವನ್ನು ತಮ್ಮ ಕೈವಶ ಮಾಡಿಕೊಂಡು ಬಾಂಗ್ಲಾದೇಶಕ್ಕೆ ಸೇರಿಸಿಕೊಳ್ಳುವುದಾಗಿಯೂ ದನಿಯೆತ್ತರಿಸಿ ಕೂಗುತ್ತಿದ್ದಾರೆ.
ಬಿಎನ್ಪಿ ಜಂಟಿ ಕಾರ್ಯದರ್ಶಿ ರುಹೂಲ್ ಕಬೀರ್ ರಿಜ್ವಿ ಅಹ್ಮದ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಹಾಗೂ ಒಡಿಶಾಗಳನ್ನೂ ಬಾಂಗ್ಲಾದೇಶದ ಭಾಗವಾಗಿಸುವುದಾಗಿ ಅರಚಿದ್ದಾರೆ! ಇಡೀ ಪ್ರಕರಣದಲ್ಲಿ ಎದ್ದುಕಾಣುವುದು ಬಾಂಗ್ಲಾದೇಶೀ ಮುಸ್ಲಿಮರ ಹಿಂದೂ-ದ್ವೇಷ ಹಾಗೂ ಭಾರತ-ದ್ವೇಷ. ಇದು ಹೊಸದೇ?
ಹಿಂದೂಗಳು ಮತ್ತು ಭಾರತದ ಕುರಿತಾಗಿನ ಬಾಂಗ್ಲಾದೇಶೀಯರ ದ್ವೇಷ ಮನೋಭಾವ ಪ್ರಸಕ್ತ ತಲೆಮಾರಿನ ಭಾರತೀಯರಿಗೆ ಹೊಸದೆನಿಸಬಹುದು. ಆದರೆ ಅದೇನೂ ಹೊಸದಲ್ಲ, ಅದಕ್ಕೆ ಕನಿಷ್ಟ ನೂರು ವರ್ಷಗಳ ಇತಿಹಾಸವಿದೆ ಎನ್ನುವುದು ಇತಿಹಾಸದ ಅವಲೋಕನದಿಂದ ತಿಳಿಯುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಬಾಂಗ್ಲಾದೇಶೀಯರ ಹಿಂದೂ-ದ್ವೇಷ ಪಾಕಿಸ್ತಾನೀಯರಿಗಿಂತಲೂ ದೀರ್ಘವಾದುದು ಮತ್ತು ಆಳವಾದುದು! ಪ್ರಸಕ್ತ ವಿದ್ಯಮಾನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಮಗೆ ಇತಿಹಾಸದ ಸ್ಥೂಲ ಪರಿಚಯ ಅಗತ್ಯ. ಹದಿಮೂರನೆಯ ಶತಮಾನದ ಆದಿಯಲ್ಲಿ ಮಹಮದ್ ಘೊರಿಯ ಸೇನಾಧಿಕಾರಿ ಬಕ್ತಿಯಾರ್ ಖಿಲ್ಜಿ ಬಂಗಾಳವನ್ನು ಆಕ್ರಮಿಸಿಕೊಂಡ ನಂತರ ಅಲ್ಲಿ ಇಸ್ಲಾಂ ಧರ್ಮದ ಪ್ರಚಾರ ಹಾಗೂ ಇಸ್ಲಾಮಿಕ್ ಅರಸರ ಆಳ್ವಿಕೆ ನಿರಂತರವಾಗಿ ಜರುಗಿ ಬ್ರಿಟಿಷ್ ವಸಾಹತುಶಾಹಿ ಆಡಳಿತ ಆರಂಭವಾಗುವ ಹೊತ್ತಿಗೆ ಪ್ರದೇಶದ ಪೂರ್ವಭಾಗ ಮುಸ್ಲಿಂ ಬಹುಸಂಖ್ಯಾತವಾಗಿಹೋಗಿತ್ತು ಮತ್ತು ಪಶ್ಚಿಮ ಭಾರತ ಬಹುತೇಕ ಹಿಂದೂವಾಗಿಯೇ ಉಳಿಯಿತು. ಹತ್ತೊಂಬತ್ತನೇ ಶತಮಾನದುದ್ದಕ್ಕೂ ಇಂದಿನ ಬಿಹಾರ್, ಜಾರ್ಖಂಡ್ ಮತ್ತು ಒಡಿಶಾಗಳೂ ಬಂಗಾಳ ಪ್ರಾಂತ್ಯದ ಭಾಗಗಳಾಗಿಯೇ ಇದ್ದವು ಎನ್ನುವುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು.
ತಮ್ಮ ಒಡೆದು ಆಳುವ ನೀತಿಗನುಗುಣವಾಗಿ ಬ್ರಿಟಿಷ್ ಸತ್ತೆ ಬಂಗಾಳವನ್ನು ಧರ್ಮಕ್ಕನುಗುಣವಾಗಿ 1905ರಲ್ಲಿ ವಿಭಜಿಸಿತು. ವೈಸ್ರಾಯ್ ಲಾರ್ಡ್ ಕರ್ಜನ್ರ ಈ ವಂಗಭಂಗಕ್ಕೆ ಇಡೀ ಪ್ರಾಂತ್ಯದಲ್ಲಿ ವಿರೋಧವೆದ್ದಿತು. ಪರಿಣಾಮವಾಗಿ 1911ರಲ್ಲಿ ಬಂಗಾಳವನ್ನು ಮತ್ತೆ ಒಂದುಗೂಡಿಸಲಾಯಿತು. ಆದರೆ ಬ್ರಿಟಿಷ್ ಸರ್ಕಾರದ ಈ ನಡೆಯ ಹಿಂದೆ ಘಾತಕ ಹುನ್ನಾರವೊಂದಿತ್ತು. ಅದು ಅನಾವರಣಗೊಂಡದ್ದು ಮರುವರ್ಷವೇ.
1912ರಲ್ಲಿ ಬಂಗಾಳವನ್ನು ಬೇರೊಂದು ಬಗೆಯಲ್ಲಿ ವಿಭಜಿಸಿದ ಬ್ರಿಟಿಷ್ ಸರ್ಕಾರ (ಇಂದಿನ ಜಾರ್ಖಂಡವೂ ಸೇರಿದ್ದ) ಬಿಹಾರ ಮತ್ತು ಒಡಿಶಾಗಳನ್ನು ಬಂಗಾಳದಿಂದ ಪ್ರತ್ಯೇಕಿಸಿತು. ಉಳಿದ ಬಂಗಾಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರು. ಇದರೊಂದಿಗೆ 1906ರಲ್ಲಿ ಸ್ಥಾಪನೆಯಾಗಿದ್ದ ಮುಸ್ಲಿಂ ಲೀಗ್ಗೆ ‘ಹೊಸ’ ಮುಸ್ಲಿಂ ಬಹುಸಂಖ್ಯಾತ ಬಂಗಾಳದಲ್ಲಿ ಪ್ರಭಾವ ಗಳಿಸಿಕೊಳಲು ಅವಕಾಶವಾಯಿತು. ಬ್ರಿಟಿಷ್ ಸತ್ತೆಯೊಂದಿಗಿನ ಹೊಂದಾಣಿಕೆಯಿಂದಾಗಿ ಮುಸ್ಲಿಂ ಲೀಗ್ ಬಂಗಾಳದಲ್ಲಿ ರಾಜಕೀಯ ಬೇರುಗಳನ್ನೂ ಭದ್ರವಾಗಿ ಬೆಳೆಸಿಕೊಂಡಿತು. ಇದರ ಘಾತಕ ಪರಿಣಾಮವೆಂದರೆ ಭಾರತದ ವಿಭಜನೆ ಮತ್ತು ಪಾಕಿಸ್ತಾನದ ಸೃಷ್ಟಿಗೆ ಅತಿ ದೊಡ್ಡ ಜನಬೆಂಬಲ ಬಂಗಾಳದಲ್ಲಿ ಮೂಡಿತು. ಇದು ವ್ಯಕ್ತವಾದದ್ದು 1937ರ ಪ್ರಾಂತೀಯ ಶಾಸನಸಭೆಗಳ ಚುನಾವಣೆಗಳಲ್ಲಿ.
ಮಹಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ತನ್ನ ಪಾಕಿಸ್ತಾನ ಬೇಡಿಕೆಯಲ್ಲಿ ಪೂರ್ವದ ಬಂಗಾಳದ ಜತೆ ಪಶ್ಚಿಮದ ಪಂಜಾಬ್, ಸಿಂಧ್, ಗಡಿನಾಡು ಪ್ರಾಂತ್ಯ ಮತ್ತು ಬಲೂಚಿಸ್ತಾನಗಳನ್ನು ಪ್ರಮುಖವಾಗಿ ಸೇರಿಸಿದ್ದರೂ ಆ ಬೇಡಿಕೆಗೆ ಪಶ್ಚಿಮದ ಪ್ರಾಂತ್ಯಗಳಲ್ಲಿ ಬೆಂಬಲವಿರಲಿಲ್ಲ. ಸಿಂಧ್ನ ಹೊರತಾಗಿ ಪಶ್ಚಿಮದ ಯಾವುದೇ ಪ್ರಾಂತ್ಯದಲ್ಲಿ ಮುಸ್ಲಿಂ ಲೀಗ್ಗೆ ಭದ್ರ ನೆಲೆಯೂ ಇರಲಿಲ್ಲ. 1937ರ ಚುನಾವಣೆಗಳಲ್ಲಿ ಬಂಗಾಳದಲ್ಲಿ ಮುಸ್ಲಿಂ ಲೀಗ್ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಿತು. ಪಶ್ಚಿಮದಲ್ಲಿ ಅದಕ್ಕೆ ಕ್ಷೀಣ ಬಹುಮತ ದೊರೆತದ್ದು ಸಿಂಧ್ನಲ್ಲಿ ಮಾತ್ರ. ಪಂಜಾಬ್ ಮತ್ತು ಗಡಿನಾಡಿನ ಜನತೆ ಲೀಗ್ ಅನ್ನು ತಿರಸ್ಕರಿಸಿದರು. ದೇಶೀಯ ಸಂಸ್ಥಾನಗಳಿಂದ ಕೂಡಿದ ಬಲೂಚಿಸ್ತಾನ್ ಪ್ರದೇಶದಲ್ಲಿ ನೆಲೆಯೂರುವ ಅವಕಾಶವನ್ನು ಅಲ್ಲಿನ ಮುಸ್ಲಿಂ ಅರಸರು ಲೀಗ್ಗೆ ನೀಡಿರಲಿಲ್ಲ. 1946ರ ಚುನಾವಣೆಗಳಲ್ಲೂ ಇದೇ ಸ್ಥಿತಿ, ಪಂಜಾಬ್ನ ಜನತೆ ಸಿಖ್-ಹಿಂದೂ-ಮುಸ್ಲಿಂ ಐಕ್ಯತೆಯ ಸೆಂಟ್ರಿಸ್ಟ್ ಪಾರ್ಟಿಗೆ ಮತ ನೀಡಿದರೆ ಗಡಿನಾಡು ಪ್ರಾಂತ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಮುಸ್ಲಿಂ ಲೀಗ್ನ ಭದ್ರಕೋಟೆ ಬಂಗಾಳ ಮಾತ್ರ. ಈ ಅಸ್ತ್ರವನ್ನು ಬಳಸಿಕೊಂಡು ಪಾಕಿಸ್ತಾನದ ಬೇಡಿಕೆಯನ್ನು ಉಗ್ರವಾಗಿಸುವ ಉದ್ದೇಶದಿಂದ ಮುಸ್ಲಿಂ ಲೀಗ್ 1946ರ ಆಗಸ್ಟ್ 16ರಂದು ‘ನೇರ ಕಾರ್ಯಾಚರಣೆಯ ದಿನ’ (ಈಜ್ಟಿಛ್ಚಿಠಿ ಅಠಿಜಿಟ್ಞ ಈಚಢ) ಎಂಬ ಕರಾಳ ಕಾರ್ಯಕ್ರಮವನ್ನು ಆಯೋಜಿಸಿತು. ಅಂದು ಎಚ್.ಎಸ್.ಸುಹ್ರವರ್ದಿ ನೇತೃತ್ವದ ಬಂಗಾಳದ ಪ್ರಾಂತೀಯ ಸರ್ಕಾರದ ಬೆಂಬಲ ಹಾಗೂ ಸಹಕಾರದಿಂದ ಮುಸ್ಲಿಂ ದಂಗೆಕೋರರು ಕೊಲ್ಕತಾದಲ್ಲಿ ನಡೆಸಿದ ಮಾರಣಹೋಮದಲ್ಲಿ ಒಂದೇ ದಿನ ನಾಲ್ಕು ಸಾವಿರದಷ್ಟು ಹಿಂದೂಗಳು ಹತರಾದರು. ಎರಡು ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ ಹಿಂದೂಗಳ ಮತ್ತೊಂದು ಭೀಕರ ಹತ್ಯಾಕಾಂಡ ಪೂರ್ವ ಬಂಗಾಳದ ನೌಖಾಲಿಯಲ್ಲಿ ಘಟಿಸಿತು. ಉಪಖಂಡದ ಹಿಂದೂಗಳು ಮತ್ತು ಮುಸ್ಲಿಮರು ಒಂದಾಗಿರುವುದು ಅಸಾಧ್ಯ ಎಂಬ ಸ್ಥಿತಿಯನ್ನು ನಿರ್ವಿುಸಿದ್ದು ಇತಿಹಾಸದಲ್ಲಿ ‘ದ ಗ್ರೇಟ್ ಕಲ್ಕಟ್ಟಾ ಕಿಲ್ಲಿಂಗ್ಸ್’ ಎಂದು ದಾಖಲಾಗಿರುವ ಈ ನರಸಂಹಾರ. ಇದಕ್ಕೆ ಪ್ರತಿಕ್ರಿಯೆಯಾಗಿ ನೆರೆಯ ಕಾಂಗ್ರೆಸ್ ಆಡಳಿತದ ಬಿಹಾರದಲ್ಲಿ ಹಿಂದೂಗಳು ತಿರುಗಿಬಿದ್ದು ಸುಮಾರು ಎಂಟುಸಾವಿರ ಮುಸ್ಲಿಂರನ್ನು ಹತ್ಯೆಗೈದರು. ಆಗೆಲ್ಲ ಪಶ್ಚಿಮದಲ್ಲಿ ಸರಿಸುಮಾರು ಶಾಂತಸ್ಥಿತಿಯೇ ಇತ್ತು.
ಅಂತಿಮವಾಗಿ 1947ರ ಜೂನ್ 3ರಂದು ಭಾರತವನ್ನು ವಿಭಜಿಸಿ ಸ್ವಾತಂತ್ರ್ಯ ನೀಡುವ ಮಸೂದೆಯನ್ನು ಬ್ರಿಟಿಷ್ ಸಂಸತ್ ಅಂಗೀಕರಿಸಿದ ತರುವಾಯ ಪಂಜಾಬ್ನಲ್ಲಿ ನೆಲೆಯೂರಲು ನಿರ್ಧರಿಸಿದ ಮುಸ್ಲಿಂ ಲೀಗ್ ಅಲ್ಲಿನ ಮುಸ್ಲಿಂ ಜಮೀನುದಾರರು ಮತ್ತು ಶ್ರೀಮಂತರನ್ನು ತನ್ನೊಳಗೆ ಸೇರಿಸಿಕೊಂಡು ಅವರಿಗೆ ಸ್ಥಳೀಯ ಘಟಕಗಳಿಂದ ಹಿಡಿದು ಪ್ರಾಂತೀಯ ಹಂತದವರೆಗಿನ ಅಧ್ಯಕ್ಷ, ಕಾರ್ಯದರ್ಶಿ ಮುಂತಾದ ಸ್ಥಾನಗಳನ್ನು ಹಂಚಿಬಿಟ್ಟಿತು ಮತ್ತು ಪಾಕಿಸ್ತಾನದ ಸೃಷ್ಟಿ ಯಾವಯಾವ ರಾಜಕೀಯ ಹಾಗೂ ಆರ್ಥಿಕ ಲಾಭಗಳನ್ನು ತಮಗೆ ತರಬಹುದೆಂಬ ಲೆಕ್ಕಾಚಾರದಲ್ಲಿ ಅವರೆಲ್ಲರೂ ಗಂಭೀರವಾಗಿ ತೊಡಗುವಂತೆ ಹುನ್ನಾರ ಹೂಡಿತು. ಪಂಜಾಬ್ನಲ್ಲಿ ಕೋಮುಹಿಂಸಾಚಾರ ಆರಂಭವಾದದ್ದು ಆಗ. ಬಂಗಾಳದಲ್ಲಿ ಧರ್ಮದ್ವೇಷ ತಾನಾಗಿಯೇ ಮೊಳೆತು ಬಂದಿದ್ದರೆ ಪಂಜಾಬ್ನಲ್ಲಿ ಅದು ಹೊರಗಿನಿಂದ ಹೂಡಿದ ಸಂಚಾಗಿತ್ತು.
ಅಂತಿಮವಾಗಿ ಪಾಕಿಸ್ತಾನ ಸ್ಥಾಪನೆಯಾದಾಗ ಬಂಗಾಳ ವಿಭಜನೆಯಾಗಿ ಪೂರ್ವ ಭಾಗ ಪೂರ್ವ ಪಾಕಿಸ್ತಾನವಾಯಿತು. ಅತ್ತ ಪಂಜಾಬ್ ಸಹ ವಿಭಜನೆಗೊಂಡು ಪಶ್ಚಿಮದ ದೊಡ್ಡ ಭಾಗ ಪಶ್ಚಿಮ ಪಾಕಿಸ್ತಾನದಲ್ಲಿ ಸೇರಿತು. ವಿಪರ್ಯಾಸವೆಂದರೆ ಭೌಗೋಳಿಕವಾಗಿ ಪೂರ್ವ ಪಾಕಿಸ್ತಾನಕ್ಕಿಂತ ಪಶ್ಚಿಮ ಪಾಕಿಸ್ತಾನ ಆರು ಪಟ್ಟು ಹೆಚ್ಚು ವಿಸ್ತಾರವಾಗಿದ್ದರೆ ಜನಸಂಖ್ಯೀಯವಾಗಿ ಪೂರ್ವ ಪಾಕಿಸ್ತಾನ ದೊಡ್ಡದಾಗಿತ್ತು. 56% ಪಾಕಿಸ್ತಾನೀಯರು ಪೂರ್ವದಲ್ಲಿದ್ದರು! ಆದರೆ ನವರಾಷ್ಟ್ರದ ಎಲ್ಲ ಅಧಿಕಾರ ಕೇಂದ್ರಗಳೂ ಪಶ್ಚಿಮದಲ್ಲೇ ಸ್ಥಾಪಿತಗೊಂಡವು. ಕರಾಚಿ ರಾಜಕೀಯ ರಾಜಧಾನಿಯಾದರೆ ಸೇನಾ ಮುಖ್ಯಾಲಯ ರಾವಲ್ಪಿಂಡಿಯಲ್ಲೇ ಉಳಿಯಿತು. ಹಾಗೆಯೇ ಪ್ರಮುಖ ರಾಜಕೀಯ, ಆಡಳಿತಾತ್ಮಕ ಹಾಗೂ ಸೇನಾ ಅಧಿಕಾರ ಸ್ಥಾನಗಳೂ ಪಶ್ಚಿಮದವರ ಪಾಲಿಗೇ. ತಾವೇ ದೊಡ್ಡಪಾತ್ರ ವಹಿಸಿ ಸೃಷ್ಟಿಸಿದ ಪಾಕಿಸ್ತಾನದಲ್ಲಿ ತಾವು ಎರಡನೇ ದರ್ಜೆಯ ಪ್ರಜೆಗಳಾದವೆಂದು ಪೂರ್ವ ಪಾಕಿಸ್ತಾನೀಯರಿಗೆ ಅಂದರೆ ಬಂಗಾಳಿಗಳಿಗೆ ಅರಿವಾದದ್ದು ಆಗ.
ಈ ನಿರಾಸೆ ಹಾಗೂ ಅಸಂತೋಷವನ್ನು ತಾರಾಮಾರು ಏರಿಸಿದ್ದು ಬಹುಸಂಖ್ಯಾತ ಪಾಕಿಸ್ತಾನೀಯರ ಭಾಷೆಯಾದ ಬಂಗಾಳಿಯನ್ನು ನಿರ್ಲಕ್ಷಿಸಿ ಕೇವಲ 3% ಜನರ, ಅದೂ ಭಾರತದಿಂದ ವಲಸೆಹೋದವರ ಭಾಷೆಯಾದ ಉರ್ದುವನ್ನು ‘ರಾಷ್ಟ್ರೀಯ ಭಾಷೆ’ಯಾಗಿ ಕರಾಚಿ ಸರ್ಕಾರ ಆಯ್ಕೆ ಮಾಡಿದಾಗ. ಆಗ ಪೂರ್ವದಲ್ಲಿ ವ್ಯಾಪಕ ವಿರೋಧ, ಹಿಂಸಾಚಾರಗಳು ಘಟಿಸಿ ಪೂರ್ವ-ಪಶ್ಚಿಮಗಳ ನಡುವಿನ ಕಂದರ ಆಳವಾಯಿತು.
ಆರ್ಥಿಕ ವಿಷಯಕ್ಕೆ ಬಂದರೆ ಬಂಗಾಳಿಗಳಿಗೆ ಅಲ್ಲೂ ಅನ್ಯಾಯವೇ. ಪಾಕಿಸ್ತಾನ ತನ್ನ ವಿದೇಶಿ ವಿನಿಮಯದ 70% ಭಾಗವನ್ನು ಗಳಿಸುತ್ತಿದ್ದುದು ಪೂರ್ವ ಪಾಕಿಸ್ತಾನದ ಉತ್ಪಾದನೆಗಳಿಂದ. ಆದರೆ ದೇಶದ 80% ಆದಾಯ ಬಳಕೆಯಾಗುತ್ತಿದ್ದುದು ಪಶ್ಚಿಮ ಪಾಕಿಸ್ತಾನದ ಅಭಿವೃದ್ಧಿಗಾಗಿ! ‘ಪೂರ್ವ ಪಾಕಿಸ್ತಾನವನ್ನು ನಾವು ಒಂದು ವಸಾಹತುವಿನಂತೇ ನೋಡುತ್ತೇವೆ’ ಎಂದು ಪಶ್ಚಿಮದ ಕೆಲ ನಾಯಕರು ಬಹಿರಂಗವಾಗಿಯೇ ಹೇಳತೊಡಗಿದರು!
ಆಗ ಬಂಗಾಳಿಗಳಿಗೆ ನೆನಪಾದದ್ದು ಭಾರತ. ಆ ನೆನಪನ್ನು ಆರ್ದ್ರವಾಗಿಸಿದ್ದು 1965ರ ಯುದ್ಧದಲ್ಲಿ ಭಾರತ ಅನುಸರಿಸಿದ ನೀತಿ. ಪೂರ್ವ ಪಾಕಿಸ್ತಾನದಲ್ಲಿದ್ದ ಪಾಕ್ ವಾಯುಪಡೆ ಭಾರತದ ವಿರುದ್ಧ ಕಾರ್ಯಾಚರಣೆ ಕೈಗೊಂಡರೂ ಭಾರತ ಪ್ರತಿಕ್ರಿಯಿಸಲಿಲ್ಲ. ಒಂದೇ ಹೊಡೆತಕ್ಕೆ ಇಡೀ ಪೂರ್ವ ಪಾಕಿಸ್ತಾನವನ್ನು ಅಪೋಷನ ತೆಗೆದುಕೊಳ್ಳುವ ಅವಕಾಶ ಹಾಗೂ ಸಾಮರ್ಥ್ಯ ಭಾರತಕ್ಕಿದ್ದರೂ ಅದು ತನ್ನ ಇಡೀ ಗಮನವನ್ನು ಕೇಂದ್ರೀಕರಿಸಿದ್ದು ಪಶ್ಚಿಮದತ್ತ ಮಾತ್ರ. ಹೀಗಾಗಿ ಭಾರತ ವಿರೋಧಿಸುವುದು ಪಶ್ಚಿಮ ಪಾಕಿಸ್ತಾನೀಯರನ್ನಷ್ಟೇ, ತಮ್ಮನ್ನಲ್ಲ ಎಂಬ ಅಭಿಪ್ರಾಯ ಪೂರ್ವ ಪಾಕಿಸ್ತಾನೀಯರಲ್ಲಿ ಉಂಟಾಯಿತು. ಹಾಗೆಯೇ, ಬಹುಸಂಖ್ಯಾತರಾದ ತಮ್ಮನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನಡೆಸಿಕೊಳ್ಳುತ್ತಿರುವ ಪಶ್ಚಿಮ ಪಾಕಿಸ್ತಾನೀಯರಿಂದ ಸ್ವಾತಂತ್ರ್ಯ ಪಡೆಯಲು ಭಾರತದಿಂದ ಸಹಾಯ ಪಡೆಯಬಹುದು ಎಂಬ ನಿರೀಕ್ಷೆಯೂ ಅವರಲ್ಲಿ ಉಂಟಾಯಿತು. ಇದು ಭಾರತದ ವಿದೇಶ ಹಾಗೂ ರಕ್ಷಣಾ ನೀತಿಗೆ ಅನುಕೂಲಕರವಾಗಿ ಕಂಡುಬಂದದ್ದರಿಂದ ಇಂದಿರಾ ಗಾಂಧಿ ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತು. ಪೂರ್ವದಲ್ಲಿ ಭುಗಿಲೆದ್ದ ಆಂದೋಲನದ ಪರವಾಗಿ ನಿಲ್ಲುವುದು ಭಾರತದ ನಿಲುವಾಯಿತು. ಅಮೆರಿಕದ ವಿರೋಧವನ್ನು ಎದುರಿಸಿಯೂ ಭಾರತ ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿ 53 ವರ್ಷಗಳ ಹಿಂದೆ ಪೂರ್ವ ಪಾಕಿಸ್ತಾನವನ್ನು ವಿಮೋಚನೆಗೊಳಿಸಿ ‘ಸ್ವತಂತ್ರ ಬಾಂಗ್ಲಾದೇಶ’ವನ್ನು ಅಸ್ತಿತ್ವಕ್ಕೆ ತಂದಿತು.
ಇದರರ್ಥ ಬಂಗಾಳಿ ಮುಸ್ಲಿಮರು ಕಳೆದ ಐದಾರು ದಶಕಗಳಿಂದಲೂ ಉಗ್ರವಾಗಿ ಅನುಸರಿಸಿಕೊಂಡು ಬಂದಿದ್ದ ಹಿಂದೂ-ದ್ವೇಷ ಮತ್ತದು ಹುಟ್ಟುಹಾಕಿದ್ದ ಭಾರತ-ದ್ವೇಷ ಅಂತ್ಯಗೊಂಡಿತು ಎಂದೇ? ಹಾಗೇನೂ ಇಲ್ಲ. ಸ್ವತಂತ್ರವಾಗುವ ತಮ್ಮ ಇಚ್ಛೆ ಪೂರ್ಣಗೊಂಡ ಮೇಲೆ ಕೃತಘ್ನ ನೀತಿಯನ್ನು ಸಾಮಾನ್ಯ ಬಾಂಗ್ಲಾದೇಶೀ ಮುಸ್ಲಿಮರು ಭಾರತದ ಬಗೆಗಷ್ಟೇ ಅಲ್ಲ, ಸ್ವಾತಂತ್ರ್ಯಹೋರಾಟದ ಮುಂಚೂಣಿಯಲ್ಲಿದ್ದ ಶೇಖ್ ಮುಜೀಬುರ್ ರಹಮಾನ್ ಬಗೆಗೂ ತೋರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
1971ರಲ್ಲಿ ಸುಮಾರು ಮೂವತ್ತು ಲಕ್ಷ ಬಂಗಾಳಿಗಳ ಮಾರಣಹೋಮಗೈಯಲು ಪಾಕ್ ಸೇನಾ ಸರ್ವಾಧಿಕಾರಿ ಜ. ಯಾಹ್ಯಾ ಖಾನ್ರನ್ನು ಪ್ರೇರೇಪಿಸಿದ್ದು ಝುುಲ್ಪಿಕಾರ್ ಆಲಿ ಭುಟ್ಟೋ. ಆತ 1974ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ನಡೆದದದ್ದೇನು ಎನ್ನುವುದನ್ನು ಹೇಳಿದರೆ ನಂಬಲು ನಿಮಗೆ ಕಷ್ಟವಾಗಬಹುದು. ಭುಟ್ಟೋರನ್ನು ಸ್ವಾಗತಿಸಲು ಬಾಂಗ್ಲಾದೇಶೀ ಜನ ಸಹಸ್ರಗಟ್ಟಲೆಯಲ್ಲಿ ವಿಮಾನನಿಲ್ದಾಣದ ಹೊರಗೆ ಕಾದುನಿಂತಿದ್ದರು. ಭುಟ್ಟೋರಿಗೆ ಜಯಕಾರ ಕೂಗುತ್ತ ಅಲ್ಲಿದ್ದ್ ಶೇಖ್ ಮುಜೀಬುರ್ ರಹಮಾನ್ರ ಕಾರಿಗೆ ಚಪ್ಪಲಿ ಹಾರ ಹಾಕಿದರು! ಭಾರತೀಯ ರಾಯಭಾರಿ ಸುಬಿಮಲ್ ದತ್ ಅವರ ಕಾರಿನ ಬಾನೆಟ್ ಮೇಲೆ ದಬದಬ ಗುದ್ದಿದರು!
ಮುಂದಿನ ದೊಡ್ಡ ಕಥೆಯನ್ನು ಚಿಕ್ಕದಾಗಿಸಿ ಹೇಳುವುದಾರೆ ಮರುವರ್ಷವೇ ಮುಜೀಬುರ್ ರಹಮಾನ್ ಪತ್ನಿ, ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ಕಗ್ಗೊಲೆಯಾದರು. ನಂತರ ಬಂದ ಸರ್ಕಾರವು ಗಂಗಾನದಿ ನೀರು ಹಂಚಿಕೆ, ನ್ಯೂ ಮೂರ್ ದ್ವೀಪ, ತೀನ್ ಬಿಘಾ ಕಾರಿಡಾರ್ ವಿಷಯಗಳಿಗಾಗಿ ಭಾರತದೊಂದಿಗೆ ತಗಾದೆಗಿಳಿದವು. ಬಂಗಾಳಿ ಮುಸ್ಲಿಮರ ಭಾರತ-ದ್ವೇಷ ಹೊಸದೇನಲ್ಲ ಎನ್ನುವ ಐತಿಹಾಸಿಕ ವಾಸ್ತವದ ಅರಿವಿನೊಂದಿಗೆ ಪ್ರಸಕ್ತ ಬೆಳವಣಿಗೆಗಳನ್ನು ಅವಲೋಕಿಸಿದರೆ ಸತ್ಯವನ್ನು ಅರ್ಥಮಾಡಿಕೊಳ್ಳುವುದು ನಮಗೆ ಸುಲಭ. ಅದನ್ನು ಮುಂದಿನವಾರ ಮಾಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)