

ನಮ್ಮಲ್ಲಿ ಹಳ್ಳಿ ಎಂದರೆ ಅಥವಾ ಊರೆಂದರೆ ಹೀಗೇ ಎನ್ನುವ ಯಥಾವತ್ ಚಿತ್ರಣ ಕಣ್ಮುಂದೆ ಬರುತ್ತದೆ. ಆದರೆ ಲಂಡನ್ ಹೊರವಲಯಕ್ಕೆ ಹೋಗಿ ನೋಡುವ, ಊರು ಕೇರಿ ದಾಟಿ ಹೊರಬರುವ ಇರಾದೆಯೊಂದಿಗೆ ಒಂದೆರಡು ತಾಸುಗಳ ಗ್ರೇಟ್ ವೆಸ್ಟರ್ನ್ ರೈಲ್ವೆ ಪಯಣ ಮಾಡಲು ಸಿದ್ಧರಿದ್ದರೆ ಎರಡೂ ಕಡೆಯಲ್ಲಿ ಕಲಾವಿದನೊಬ್ಬ ಬರೆದಿಟ್ಟ ದೃಶ್ಯಕಾವ್ಯ ಪಕ್ಕಾ. ಇದೆಲ್ಲ ಹೇಳಲಿಕ್ಕೆ ಸಾಧ್ಯವಿಲ್ಲದ ಆದರೆ, ಬರೆದೂ ವಿವರಿಸಲಾಗದ ನೋಡುತ್ತಲೇ ಇರೋಣ ಎನ್ನಿಸುವ ಅಪ್ಪಟ ಪೇಂಟಿಂಗ್ ತರಹದ ರಂಗಭೀರಂಗಿ ಊರುಗಳು. ಬಣ್ಣದ ಚಿತ್ತಾರವೇ ಮೈವೆತ್ತಂತೆ ಒಂದಕ್ಕಿಂತ ಒಂದು ಚೆಂದದ ಮನೆಗಳನ್ನು ಹೊಂದಿದ್ದ ಊರು ದಾಟಿ ಮುಂದಿನ ಊರಿಗೆ ಕಾಲಿಕ್ಕಿದರೆ, ಅಲ್ಲಿ ಮನೆ ಸಾಯಲಿ ಜನರೂ ಕಾಣುವುದೇ ಇಲ್ಲ.
ಕಾರಣ ಈ ಊರು ಥೇಟ್ ನಮ್ಮ ಮಲೆನಾಡ ತೋಟದ ಮನೆಗಳಿದ್ದಂತೆ. ಆದರೆ ಇಲ್ಲಿ ಎತ್ತರೆತ್ತರದ ಪಾಗಾರ ಹಾಕುವ ಪದ್ಧತಿ ಇಲ್ಲವೇ ಇಲ್ಲವಾದ್ದರಿಂದ, ಎಲ್ಲವನ್ನೂ ರಸ್ತೆಯ ಮೇಲೆ ನಿಂತು ನೋಡುತ್ತ ಸಾಗಬಹುದು. ಪ್ರತಿ ಮನೆಯಿಂದ ಮನೆಗೆ ಬದಲಾಗುವ ಚಿತ್ರಕಾವ್ಯ ವಿವರಿಸಲಸಾಧ್ಯವಾದ ಜೋಡಣೆ ಎಂದರೆ ತಪ್ಪಾಗಲಾರದು.
ಕೇಂದ್ರ ಲಂಡನ್ನಿಂದ ಕಾರ್ಡಿಫ್ನತ್ತ ಹೊರಟಿದ್ದ ನನಗೆ ದಾರಿಯ ಮಧ್ಯೆ, ಪ್ರತಿ ವರ್ಷ ಏನಿಲ್ಲ ಎಂದರೂ ನಾಲ್ಕು ಲಕ್ಷ ಅಲೆಮಾರಿಗಳನ್ನು ಆಕರ್ಷಿಸುವ ವಿಭಿನ್ನ ಗ್ರಾಮಗಳಿವೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಮರುದಿನ ಬೆಳಗ್ಗೆಯೇ ನೇರ ರೈಲನ್ನು ರದ್ದುಗೊಳಿಸಿ ಕಾರ್ಟ್್ಸರ್ಲ್್ಡ ಹೋಗುವ ವೆಸ್ಟರ್ನ್ ರೈಲು ಹಳಿಗೆ ಸೇರಿಕೊಂಡಿದ್ದೆ. (ಟ್ಯಾಕ್ಸಿ ಅಂದರೆ ಏನಿಲ್ಲ ಏಂದರೂ ಹತ್ತಾರು ಸಾವಿರದ ಬಾಬತ್ತು ಇಲ್ಲಿಗೆ) ಹಾಗೆ ಕಾರ್ಟ್್ಸರ್ಲ್್ಡ ಹೊರಡಲು ನಾನಿದ್ದ ಹಾನ್ಸ್ಲೋದಿಂದ 91 ನಂಬರಿನ ಬಸ್ ಹಿಡಿದರೆ, ಐದೇ ನಿಮಿಷದಲ್ಲಿ ಆಸ್ಟರ್ಲೀ ರೈಲು ನಿಲ್ದಾಣ. ಅಲ್ಲಿಂದ ಪಿಕಿಡಿಲ್ಲಿ ಲೈನ್ ಮೂಲಕ ಚಲಿಸಿದರೆ ಕಿಂಗ್ ಕ್ರಾಸ್ ಪಾಂಕ್ರಾಸ್ ಎಂಬ ಅಂತಾರಾಷ್ಟ್ರೀಯ ನಿಲ್ದಾಣದವರೆಗೂ ಹೋಗಿಬಿಡಬಹುದು. ಹೆಚ್ಚಿನ ಹೊರವಲಯದ ರೈಲುಗಳೆಲ್ಲ ಇದೇ ನಿಲ್ದಾಣದಿಂದ ಹೊರಡುತ್ತವೆ. ಮುಖ್ಯ ಹೊರದೇಶಗಳಿಗೂ ಇದು ಕೇಂದ್ರ ನಿಲ್ದಾಣ. ಹಾಗಾಗಿ ಟ್ಯೂಬ್ ಮತ್ತು ಹೊರವಲಯದ ರೈಲನ್ನೂ ಕ್ರಮಿಸಲು ಆಯಾ ಮಾರ್ಗದ ಮಾಹಿತಿ ಅವಶ್ಯ.
ಕಾರ್ಟ್್ಸರ್ಲ್್ಡ್ನು ಜಗತ್ಪ್ರಸಿದ್ಧಿ ಮಾಡಿದ ಹಳ್ಳಿಗಳಾದ ಫಾಸ್ಕಾಟ್, ಬೌಲ್ಡ್, ಇಲ್ಬುರೀ, ಅಪ್ಪರ್ ರೆಸಿಂಗ್ಟನ್, ಲಿಟ್ಟಲ್ ರೆಸಿಂಗಟನ್ (ಈ ರೆಸಿಂಗ್ಟನ್ಗಳ ಕತೆ ಮುಂದೊಮ್ಮೆ ಬರೆಯುತ್ತೇನೆ. ಕಾರಣ ತೀರ ನಾವು ನೀವೆಲ್ಲ ನೋಡಿರುವ, ಕೆಲವೊಮ್ಮೆ ಸಿನಿಮಾ ಸೆಟ್ ಎನ್ನುವ ಕುದುರೆ ಸಾಕುವ ಗೋಲದ ಗ್ರೌಂಡ್ಗಳ ಸಮೇತ ಚಕ್ರದ ಮನೆಗಳು ಈಗಲೂ ಸಕ್ರಿಯವಾಗಿವೆ.) ಲಿಂಭ್ರಿಕ್, ಹೀಗೆ ಹಲವು ಹಳ್ಳಿಗಳ ಮೂಲಕ ಹಾಯ್ದು ಇನ್ನೇನು ಬಾರ್ಟನ್ ಆನ್ ವಾಟರ್ ತಲುಪಬೇಕು. ಅದಕ್ಕೂ ಮೊದಲೇ ನನ್ನನ್ನು ಇಳಿಸಿಕೊಂಡಿದ್ದು, ಮಾರ್ಷ ವಿಲ್ಲೇಜು.
ಅಲ್ಲಿಗೆ ತಲುಪಲು ಕಾರಣ ಸಿನಿಮಾ ಸೆಟ್ನಂತಹ ರೈಲು ನಿಲ್ದಾಣ ಕಿಂಗ್ಹ್ಯಾಮ್ ಇದು ಇದ್ದಿದ್ದೆ ಇವಾನ್ಲೋಡ್ ನದಿ ದಂಡೆಗೆ. ಅಲ್ಲಿಂದ ಹೊರಗೆ ಬಂದರೆ ಫ್ರೀ ಸೈಕಲ್ಲುಗಳ ಸ್ಟಾ್ಯಂಡು ನಿಮ್ಮನ್ನು ಆಕರ್ಷಿಸುತ್ತದೆ. ಕಾರಣ ಬಸ್ ಅಥವಾ ಟ್ಯಾಕ್ಸಿಯಲ್ಲಿ ಈ ಹಳ್ಳಿಗಳ ಚೆಂದ ನೋಡಲು ಸಾಧ್ಯವೇ ಇಲ್ಲ. ಅದಕ್ಕೆ ಹತ್ತಾರು ಸೈಕಲ್ಲುಗಳನ್ನು ಅಲ್ಲಲ್ಲಿ ಇರಿಸಿದ್ದಾರೆ. ನೀವು ಅದನ್ನೇರಿ ನೋಡುತ್ತ ಮುಂದಿನ ಯಾವುದಾದರೂ ನಿಲ್ದಾಣದಲ್ಲಿ ಸ್ಟಾ್ಯಂಡಿಗೆ ನೇತು ಹಾಕಿ ಹೋದರಾಯಿತು. (ಇದು ಆಮೇಲೆ ಗೊತ್ತಾಗಿದ್ದರಿಂದ ನಾನು ಅದರ ಆಸೆಗಾಗಿ ಕೊನೆಯಲ್ಲೊಮ್ಮೆ ಎರಡು ಕಿ.ಮೀ. ರೈಡ್ ಮಾಡಿ ಬಂದೆ) ಪಕ್ಕದಲ್ಲೇ ಬಸ್ ನಿಲ್ದಾಣ. ಸಮಯಕ್ಕೆ ಸರಿಯಾಗಿ ರೂಟ್ 801 ನನ್ನನ್ನು ಹತ್ತಿಸಿಕೊಂಡದ್ದೆ ಮಾರ್ಷ್ವರೆಗೂ ಹೊರಡುವ ಮುನ್ನವೇ ಒಂದು ದೊಡ್ಡ ಕ್ಯಾನ್ವಾಸನ್ನು ನನ್ನೆದುರಿಗೆ ತೆರೆದಿರಿಸಿತ್ತು. ಕಾರಣ ಈ ಬಸ್ಸು ಮಾರ್ಷ್ ತಲುಪುವ ಮೊದಲು, ದಾರಿಯ ಮೇಲೆ ಮುಗರ್ಸ್ಬರೀ ಮತ್ತು ಸ್ಟವ್ ಆನ್ ವರ್ಲ್ಡ್ ಮೂಲಕ ಹಾಯ್ದು, ಮಾರ್ಟ್ ಆನ್ ಮಾಷ್ ಎಂಬ ಸ್ಟೇಶನ್ ದರ್ಶನ ಮಾಡಿಸಿತ್ತು. ಒಂದಕ್ಕಿಂತ ಒಂದು ಚೆಂದದ ಕಲಾತ್ಮಕ ಸೆಟ್ಗಳು ಇವೆಲ್ಲ. ತಂತಮ್ಮ ಜಮೀನು ಮತ್ತು ಅದಕ್ಕೆ ತಮ್ಮತಮ್ಮ ಕಲಾ ಶ್ರೀಮಂತಿಕೆ ಮೆರೆದು ಅಂದಗೊಳಿಸಿದ ಪರಿಗೆ, ಜಗತ್ತಿನ ನಾಲ್ಕು ಲಕ್ಷಕ್ಕೂ ಹೆಚ್ಚು ಅಲೆಮಾರಿಗಳನ್ನು ಈ ರಸ್ತೆಗಳು ಆಕರ್ಷಿಸುತ್ತವೆ.
ಮೂಲತಃ ತನ್ನ ಮನೆಯ ಗೇಟಿನಿಂದ ಕನಿಷ್ಠ ಕಿ.ಮೀ. ದೂರ ಇರುವ ಕೇಂದ್ರಸ್ಥಾನದಲ್ಲಿ ಮಾಲೀಕ ತನ್ನ ಹಿರಿಮೆ ಗರಿಮೆಗೆ ತಕ್ಕಂತೆ, ಬ್ರಿಟಿಷರ ವಿಪರೀತ ಆಸ್ಥೆಯ ಕ್ಯಾಸಲ್ಗಳ ಮಾದರಿಯಲ್ಲಿ ಖಾಸಗಿ ಬಂಗಲೆ ಹೊಂದಿದ್ದರೆ, ಅದರ ಅಕ್ಕಪಕ್ಕ ಮತ್ತು ಸುತ್ತಮುತ್ತಲಲ್ಲೆ ಹತ್ತಾರು ವಿಭಿನ್ನ ವಿಚಿತ್ರಾಕಾರದ ಹಿರಿಕಿರಿ ಮನೆಗಳು ಆಯಾ ಮಾಲೀಕನ ಆಸಕ್ತಿಯಂತೆ ಹೂಡಲಾಗಿರುತ್ತದೆ.
ಅದರಲ್ಲಿ ಮುಖ್ಯವಾಗಿ ಕುರಿಗಳ ಮಂದೆಯದ್ದು ಬೇರೆ, ಕುದುರೆ ಲಾಯವೇ ಬೇರೆ, ಅದರಾಚೆಗೆ ಆದರೆ ಕುರಿಗಳ ಮೇಲೆ ನಿಗಾ ಇಡಲು ಪಕ್ಕದಲ್ಲೆ ನಾಯಿಗಾಗಿ ಇರುವ ಛತ್ರಿಯಾಕಾರದ ತುಸು ಎತ್ತರದ ಮನೆಯ ರಂಗೇ ಬೇರೆ, ಅದರಾಚೆಗೆ ಮಾಂಸಕ್ಕಾಗಿ ಸಾಕುವ ಹಂದಿಗಳ ಸಂಸಾರಕ್ಕೆ ಮತ್ತೊಂದು ಪಡಿಮಾಡಿನ ಮನೆ, ಮಗ್ಗುಲಿಗೆ ಕಟ್ಟಿಗೆ ಪೇರಿಸಿಡಲು ಮತ್ತು ಅದರ ಬುಡದಲ್ಲೆ ಕೋಳಿಗಳ ಸಂಸಾರಕ್ಕೆ ಒಂದು ‘ಗಟ್ ಹಟ್’ ಸಾಲು, ಅದರ ಮುಂದೆ ನಿಂತು ಮೊಟ್ಟೆ ಹೆಕ್ಕಲು ಒಂದು ಚಿತ್ರಾವಳಿ ಬರೆದು ಕೊರೆಯಲಾದ ಕಪ್ಪು ಕಲ್ಲಿನ ಹೊರಾವರಣದ ಹಾಸು, ಅದಿನ್ನಿಷ್ಟು ಚೆಂದ ಕಾಣಬೇಕೆಂದು ಎತ್ತರೆತ್ತರದ ಮತ್ತೆರಡು ಕಲ್ಲಿನ ಕಂಬಗಳು, ಮನೆಯ ತೀರ ಮುಂದೆ ಆದರೆ ಬಾಗಿಲಿಗೆ ಅಡ್ಡ ಆಗದಂತೆ ಸಾಲಾಗಿ ವಾಹನ ನಿಲ್ಲಿಸುವ ಅರಮನೆಯ ವಸ್ತು ಸಂಗ್ರಹಾಲಯ ಮಾದರಿಯ ಬಾತುಕೊಳಿ ಮೂತಿಯ ಗರಾಜು.
ಅದರ ಪಕ್ಕ ಹೊಲದ ಕೆಲಸಕ್ಕೆ ಬಳಸುವ ಟಿಲ್ಲರ್ ತರಹದ್ದೊಂದು ಮಶೀನು, ಅದನ್ನು ಹೂಡಲು ಬಳಸುವ ಟ್ರಾಕ್ಟರು, ಗದ್ದೆಯ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ಬಳಸುವ ಪಿಕ್ಅಪ್ ಮಾದರಿಯ ವಾಹನ, ಏನಿಲ್ಲ ಎಂದರೆ ಎಜ್ಡೀ ತರಹದ ಎರಡು ಒಂಟೆಯಂತಹ ಮೊಬೈಕ್ಗಳು ಹೀಗೆ ಗರಾಜೆಂಬ ಮನೆಯಲ್ಲಿ ಸಾಲು ಸಾಲು ವಿಂಟೆಜ್ ಜಾತ್ರೆಯಂತೆ ನಿಂತ ವಾಹನಗಳ ಮೋಜು.
ಪ್ರತಿ ಮನೆಯ ಈ ಆವರಣಗಳು ಶುದ್ಧ ರಂಗು ರಂಗಿನ ಚಿತ್ತಾರದ ಕೈ ಚಳಕಕ್ಕೆ ಸಿಕ್ಕು ಹುಬ್ಬೇರಿಸುವಂತೆ ಕಲರ್ಫುಲ್ ಆಗಿದ್ದರೆ ಮನೆಯ ಮತ್ತೊಂದು ಭಾಗದಲ್ಲಿ ದೊಡ್ಡದಾದ ತಿರುಗುತ್ತಿರುವ ಕಟ್ಟಿಗೆಯ ರಾಟೆ, ಆಕಾಶಕ್ಕೆ ಮುಖ ಮಾಡಿ ಸುತ್ತುತ್ತಿದ್ದರೆ, ರಸ್ತೆಯ ಮೇಲೆ ನಿಂತು ನೋಡುವ ನೀವು ಅದನ್ನೊಮ್ಮೆ ಕ್ಲಿಕ್ಕಿಸದೆ ಹೋಗಲಾರಿರಿ. ಚಕ್ರದ ಕಟ್ಟಿಗೆಯ ಮಾದರಿ ಸೋಲಾರ್ ದೂರದಿಂದಲೇ ನಮ್ಮನ್ನು ಆಕರ್ಷಿಸುವ ಮೊದಲ ಐಟಂ ಕೂಡ. ಹೆಚ್ಚಿನ ಬ್ರಿಟಿಷ್ ಕಾಲದ ಅಥವಾ ವಿದೇಶಿ ಪೇಂಟಿಂಗ್ಗಳನ್ನು ಗಮನಿಸಿದರೆ ಈ ರೀತಿಯ ಚಿತ್ರ ನೋಡಿರುತ್ತೇವೆಲ್ಲ. ಅದೆಲ್ಲ ಇಲ್ಲಿ ಸಚಿತ್ರವಾಗಿ ಜೀವಂತ ಎದ್ದು ಹಸಿರು ಉದ್ದಾನುಉದ್ದದ ಪಟ್ಟಿ ಹೊಲಗಳ ಮಧ್ಯೆ ಥೇಟ್ ಅರಳಿಸಿ ಇಟ್ಟಂತೆ. ಅವುಗಳ ಮಧ್ಯೆ ಶುಭ್ರ ನೀರಿನ ಹರವಿನ ಮೇಲೆ ಕಮಾನು ಆಕಾರದ ಕಟ್ಟಿಗೆ ಸಣ್ಣಸಣ್ಣ ಸೇತುವೆಗಳಂತೂ ಓಡಿ ಹೋಗಿ ಅಲ್ಲೊಂದು ಸೆಲ್ಪಿ ತೆಗೆದುಕೊಳ್ಳಲೇಬೇಕೆನ್ನಿಸುವಷ್ಟು ಆಕರ್ಷಕ.
ಬಾಂಬು, ದೇವದಾರು, ಬರಾಯಿ, ದಾರಾಫಿನ್ ಹೀಗೆ ಆಕರ್ಷಕ ಮರದ ದಿಮ್ಮಿಗಳ ಕೊರೆದು ಮಾಡಿದ ಈ ಸೇತುವೆಗಳದ್ದೇ ಒಂದು ಕತೆಯಾದೀತು. ಹತ್ತಾರು ಅಡಿಯ ಕಮಾನು ಪಕ್ಕ ಅಲ್ಲೆ ಕುಳಿತು ಚಿತ್ರ ತೆಗೆಯುವಂಥವೇ. ಅವುಗಳ ಅಕ್ಕಪಕ್ಕ ಹಬ್ಬಿಸಲಾದ ಬಳ್ಳಿಗಳು, ಪ್ರವೇಶಿಕೆಯಲ್ಲಿ ಅದರದ್ದೇ ಕಮಾನು ಹೀಗೆ ಚೆಂದಕ್ಕೆ ಬಳಸುವ ವಿನ್ಯಾಸಗಳು ಒಂದಾ ಎರಡಾ...?
ಅಲ್ಲಲ್ಲಿ ಹಕ್ಕಿಗಳ ಹಾರಾಟ ತಡೆಯಲು ಸಿಕ್ಕಿಸಿ ನಿಲ್ಲಿಸಲಾಗಿದ್ದ ಬಿಳಿ ಬಾವುಟದ ರಂಗಿನ ಗತ್ತೆ ಬೇರೆ. ಹೀಗೆ ಸುತ್ತ ಹಸಿರು, ಮಧ್ಯೆ ಹಳದಿ ರಂಗಿನ ಮನೆ, ಅದಕ್ಕೂ ಅಕ್ಕಪಕ್ಕ ಸಾಲುಸಾಲು ಮಾದರಿ ಎನ್ನಿಸುವ ಕಣ್ಣೋಟಗಳ, ನೀರ ಹರಿವಿನ ಕಾಲುಗಳು, ಏರಿಳಿತದ ಕ್ಯಾನ್ವಾಸ್ ಶೈಲಿಯ ಕಿ.ಮೀ. ಉದ್ದದ ಪ್ರಾಪರ್ಟಿಯ ಮೂಲೆಯಲ್ಲಿ ಸಂಜೆಯ ಬಿಸಿಲಿಗೆ ಮೈಯೊಡ್ಡಿರುವ ಹತ್ತಾರು ಬಿಳಿ ಕುರಿಗಳ ಬುಡಕ್ಕೆ ಕೆಂಪು ರಂಗು ಬಳಿದಿದ್ದು ಎದ್ದು ಕಾಣುತ್ತಿದ್ದರೆ, ಅವೆಲ್ಲ ಈ ನೆಲದ ಪ್ರಾಪರ್ಟಿ ಎಂಬ ಗುರುತು.
ಹೀಗೆ ಮನೆಗೆ ಬಳಸುವ ಕಲ್ಲು, ಅದರ ಚಿತ್ತಾರ, ವಿಭಿನ್ನ ಚಿಮಣಿ ಮತ್ತು ಗೋಪುರಗಳ (ಹೆಚ್ಚಿನ ಮನೆಗಳ ಮಾಡು ಮತ್ತು ಚಿಮಣಿ ಗೋಪುರದ ಕಲಾತ್ಮಕತೆಯೇ ದೂರದಿಂದ ನಮ್ಮನ್ನು ರಸ್ತೆಯ ಪಕ್ಕ ನಿಂತು ಈ ಚಿತ್ರಣವನ್ನು ನೋಡಲು ಪ್ರೇರೇಪಿಸುತ್ತವೆ) ಪ್ರತಿ ಸಣ್ಣ ದೊಡ್ಡ ಎಂಬ ವ್ಯತ್ಯಾಸವಿಲ್ಲದೆ ಕಲಾತ್ಮಕತೆ ಮರೆಯುವ ಮನೆಗಳು, ನಿಂತಲ್ಲಿ ನೋಡಿದಲ್ಲೆಲ್ಲ ಬೆರಗು ಹುಟ್ಟಿಸುವ ಸ್ಥಳಗಳು. ಒಂದು ಅರ್ಧ ದಿನದ ಪ್ರವಾಸದಲ್ಲಿ ಹೆಚ್ಚೆಂದರೆ ನಾಲ್ಕಾರು ಮನೆಯ ಸುತ್ತ ಹಾಯಬಹುದಷ್ಟೆ ಎಂದರೆ ವಿಸ್ತಾರ ಮತ್ತು ಬೆರಗು ಊಹಿಸಿ. ಹಾಗಾಗಿ ವಿದೇಶ ಪ್ರವಾಸ ಎಂದರೆ ಬೇರೇನೂ ಇಲ್ಲದಿದ್ದರೂ ಮೊದಲೊಮ್ಮೆ ಅಲ್ಲಿನ ಹಳ್ಳಿಗಳನ್ನು ನೋಡಲೇಬೇಕು. ಹೀಗೆ ಇವೆಲ್ಲ ಬೆಳದದ್ದು ನಿನ್ನೆ ಮೊನ್ನೆಯಲ್ಲ, ಹಳ್ಳಿಗಳನ್ನು ತಮ್ಮ ಪರಿಸರವನ್ನೂ ಹೀಗೇ ಬೆಳೆಸಿ ಉಳಿಸಬೇಕೆನ್ನುವುದು ಇಲ್ಲಿನ ಪರಂಪರೆ ಕೂಡ.
(ಲೇಖಕರು ಕತೆಗಾರರು)