

ಒಂದು ದಿನ ಬೀಡಿನಲ್ಲಿ ಕುಳಿತುಕೊಂಡಿದ್ದಾಗ ಒಬ್ಬರು ಬಂದು ನನ್ನನ್ನು ಭೇಟಿಯಾಗಿ ‘ಸ್ವಾಮಿ ನಮ್ಮ ಪೂರ್ವಜರ ಜಮೀನು, ಒಡವೆ, ಆಸ್ತಿ ಸರಿಯಾಗಿ ಪಾಲು ಮಾಡಲಾಗಿಲ್ಲ. ಬಹಳ ತಕರಾರಿದೆ. ಸುಖಾಸುಮ್ಮನೆ ತಕರಾರು ಮಾಡುತ್ತಾರೆ. ಸಮಪಾಲಿಗಿಂತ ಸ್ವಲ್ಪ ಜಾಸ್ತಿಯೇ ಕೊಟ್ಟರೂ ಸಾಕಾಗಿಲ್ಲ ಎಂದು ತಕರಾರಿಗೆ ಬರುತ್ತಾರೆ. ಅವರಿಗೆ ಸ್ವಾಮಿಯೇ ಬುದ್ಧಿ ಹೇಳಬೇಕು’ ಎಂದು ಅಳಲು ತೋಡಿಕೊಂಡರು. ನನಗೆ ಆಗ ತೋಚಿದ ವಿಚಾರವೆಂದರೆ ಜೀವನದಲ್ಲಿ ಸಾಕು ಮತ್ತು
ಸಾಕು-ಬೇಕು ಎಂಬ ಭಾವನೆ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ‘ಅವನಿಗೆ ಸಿರಿ ಸಂಪತ್ತು ಎಷ್ಟಿದ್ದರೂ ಸಾಕಾಗುವುದಿಲ್ಲ. ಮತ್ತಷ್ಟು ಬೇಕು ಎಂದು ಹಾತೊರೆಯುತ್ತಾನೆ. ಒಂಚೂರೂ ದಾನ ಮಾಡುವುದಿಲ್ಲ, ಜಿಪುಣ’ ಎಂದು ಅನೇಕರು ಹೇಳುವುದನ್ನು ಕೇಳಿದ್ದೇವೆ. ಮನುಷ್ಯನಿಗೆ ಅತಿ ಆಸೆ ಎನ್ನುವುದು ಇರಬಾರದು. ಎಲ್ಲ ಸಿರಿ ಸಂಪತ್ತುಗಳು ತನಗೇ ಬೇಕು ಎನ್ನುವ ಪ್ರವೃತ್ತಿ ಹೊಂದಿರಬಾರದು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಗಾದೆ ಅರಿತಾಗ ಮಾತ್ರ ಸಾಕು-ಬೇಕುಗಳ ಬಗೆಗಿನ ಅರಿವೂ ಮೂಡಬಹುದು. ದುಃಖವನ್ನು ಯಾರೂ ಬಯಸುವುದಿಲ್ಲ, ಸಾಕು-ಸಾಕು ಎನ್ನುತ್ತಾರೆ. ಆದರೆ ಸಂತೋಷವನ್ನು ಬೇಕು-ಬೇಕು ಎಂದು ಕರೆಯುತ್ತಾರೆ. ದಾರಿದ್ರ್ಯವನ್ನು ಸಾಕು ಎಂದು ದೂರ ಮಾಡಿದರೆ ಲಕ್ಷ್ಮೀಯನ್ನು ಬೇಕು ಎಂದು ಬಾಚಿಕೊಳ್ಳಲು ಪ್ರಯತ್ನಿಸುವವರೇ ಹೆಚ್ಚು. ಯಾವುದೇ ಸಂಪತ್ತು, ಧನ ಕೊಟ್ಟರೂ ಮನುಷ್ಯನನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಇನ್ನಷ್ಟು ಬೇಕು, ಇನ್ನಷ್ಟು ಪಡೆಯಬಹುದಿತ್ತಲ್ಲ ಎಂದು ಆತನಿಗೆ ಅನಿಸಬಹುದು. ಆದರೆ ಅನ್ನದಾನ ಸ್ವೀಕರಿಸುವಾಗ ಮಾತ್ರ ಮನುಷ್ಯ ಸಾಕು ಎನ್ನುತ್ತಾನೆ. ಹಾಗಾಗಿ ಅನ್ನ ದಾನ ಶ್ರೇಷ್ಠ ಎನ್ನುತ್ತಾರೆ. ಒಂದು ಬಾರಿ ಹೊಟ್ಟೆ ತುಂಬಿದ ಮೇಲೆ ಎಷ್ಟು ಸಾರಿ ಬೇಕೇ ಎಂದು ಕೇಳಿದರೂ ಬೇಡ, ಸಾಕು ಎನ್ನುತ್ತಾರೆ. ಅನ್ನದಾನ ಒಂದು ಬಾರಿಗೆ ತೃಪ್ತಿಯನ್ನು ಕೊಡುತ್ತದೆ. ಸಾಕೋ ಸಾಕು ಎಂಬ ಉದ್ಘಾರ ಬರುತ್ತದೆ. ಎಷ್ಟೇ ಸ್ವಾದಿಷ್ಟವಾದ ಭೋಜನ ಇದ್ದರೂ ಹೊಟ್ಟೆ ತುಂಬಿ ತೃಪ್ತರಾದ ಮೇಲೆ ಯಾರೂ ಬೇಕೆಂದು ಹೇಳಲಾರರು. ಸಾಕು ಎನ್ನುವ ಶಬ್ದಕ್ಕೆ ನಿಜವಾದ ಅರ್ಥ ಬರುವಂತಹದ್ದು ಭೋಜನದಲ್ಲಿ. ಸಾಕು ಎನ್ನುವುದರಿಂದ ಸುಖ ಇದೆ, ನೆಮ್ಮದಿ ಇದೆ ಎಂದು ಅನ್ನದಾನ ತೋರಿಸಿಕೊಡುತ್ತದೆ. ಊಟ ಮಾಡುವವ ಸಾಕು ಎಂದಾಗ ಉಣ್ಣುವವನಿಗೂ ತೃಪ್ತಿ ಬಡಿಸುವವನಿಗೂ ತೃಪ್ತಿ.
ಬೇಕು ಬೇಕು ಎಂಬ ಹಾವಳಿಯ ನಡುವೆ ಈ ಸಾಕು ಎನ್ನುವುದು ಮನುಷ್ಯ ಬದುಕಿನಲ್ಲಿ ಆಗಾಗ ಸುಳಿಯುತ್ತದೆ. ಅಂತಹ ಸಾಕುಗಳು ನಮಗೆ ಸದಾ ತೃಪ್ತಿಯನ್ನು ಒದಗಿಸುತ್ತವೆ. ಉದಾಹರಣೆಗೆ ಬಡತನದಲ್ಲೇ ಜೀವನ ಸಾಗಿಸಿ ಸಿರಿತನ ಪ್ರಾಪ್ತಿಯಾದಾಗ ‘ಸಾಕಪ್ಪ ಬಡತನ. ನನಗೆ ಇನ್ನಾದರೂ ದೇವರು ಸಿರಿತನ ಉಳಿಸಲಿ’ ಅನ್ನುವಾಗ ದೊರೆಯುವ ತೃಪ್ತಿ ನಿಜಕ್ಕೂ ಸಾಕು ಎನ್ನುವುದರಲ್ಲೂ ತೃಪ್ತಿ ಇದೆ ಎಂದು ತೋರಿಸುತ್ತದೆ. ಆದರೆ ಸಿರಿತನ ಪ್ರಾಪ್ತಿಯಾದಾಗ ನಮ್ಮಲ್ಲಿ ಅಹಂ ಸುಳಿಯಬಾರದು. ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದರೆ ಅಲ್ಪನಿಗೆ ಐಶ್ವರ್ಯ ಬಂದಾಗ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದಂತಾಗುತ್ತದೆ.
ಕೌಟುಂಬಿಕ ಜೀವನದಲ್ಲಿ ನಮಗೆ ಬೇಕುಗಳ ಪಟ್ಟಿ ದೊಡ್ಡದಿರುತ್ತದೆ. ಸಂಸಾರದಲ್ಲಿನ ದುಃಖ, ಕಷ್ಟ ಯಾರಿಗೂ ಬೇಡ. ಆದರೆ ಸುಖ-ದುಃಖಗಳ ನಡುವೆಯೇ ಜೀವನ ಸಾಗುವುದು ಎನ್ನುವುದನ್ನು ಅರಿತುಕೊಂಡವರು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತಾರೆ. ಕಷ್ಟ ಕಾಲವನ್ನು ಧೃತಿಗೆಡದೆ ಸಂಭಾಳಿಸುತ್ತಾರೆ. ದುಃಖ, ಬಡತನವನ್ನು ಸಾಕು ಎನ್ನುತ್ತೇವೆ ಆದರೆ ಭೋಗ-ಭಾಗ್ಯಗಳನ್ನು ಬೇಕು ಎನ್ನುತ್ತೇವೆ. ಸಂಸಾರದಲ್ಲಿ ನೆಮ್ಮದಿ ಇರಬೇಕಾದರೆ ಪ್ರೀತಿ, ವಾತ್ಸಲ್ಯ ಮತ್ತು ಪ್ರೇಮ ಸದಾ ಬೇಕು ಎನ್ನುತ್ತೇವೆ. ದಾಂಪತ್ಯದಲ್ಲಿ ಪ್ರೀತಿ ಪ್ರೇಮ ಬೇಕು, ಮಕ್ಕಳಿಗೆ ವಾತ್ಸಲ್ಯ ಬೇಕು. ತಂದೆ-ತಾಯಿಯ ಪ್ರೀತಿಯನ್ನು ಎಷ್ಟು ಹೊತ್ತು ಸ್ವೀಕಾರ ಮಾಡಿದರೂ ಬೇಕು ಬೇಕು ಎಂದು ಅನ್ನಿಸುತ್ತದೆ. ಅದು ಎಂದಿಗೂ ಬೇಡ ಎಂದು ಅನ್ನಿಸುವುದೇ ಇಲ್ಲ.
ರಾಮಾಯಣದಲ್ಲಿ ದಶರಥನಿಗೆ ಕೌಸಲ್ಯ, ಸುಮಿತ್ರೆ ಮತ್ತು ಕೈಕೇಯಿ ಎಂಬ ಮೂವರು ಪತ್ನಿಯರಿದ್ದರು. ಅವರಿಗೆ ಮಕ್ಕಳಿರಲಿಲ್ಲವಾದ್ದರಿಂದ, ಮಕ್ಕಳನ್ನು ಪಡೆಯುವ ಸಲುವಾಗಿ ದಶರಥನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ. ಆಗ ದಿವ್ಯ ಪಾಯಸದಿಂದ ತುಂಬಿರುವ ಒಂದು ಬಟ್ಟಲು ದಶರಥನಿಗೆ ದೊರೆಯಿತು. ರಾಣಿಯರನ್ನು ಕರೆದು ಆ ಪಾಯಸವನ್ನು ಸೇವಿಸುವಂತೆ ತಿಳಿಸಿದ ಹಾಗೂ ಕೌಸಲ್ಯೆಗೆ ನೀಡಿದ. ಕೌಸಲ್ಯೆಯು ಸ್ವಲ್ಪ ಪಾಯಸವನ್ನು ಕುಡಿದು ತನಗೆ ಸಾಕೆಂದು ಸುಮಿತ್ರೆ, ಕೈಕೇಯಿಗೆ ನೀಡಿದಳು. ಅದರ ಫಲವಾಗಿ ಕೌಸಲ್ಯೆಯು ಶ್ರೀರಾಮನಿಗೆ ಜನ್ಮ ನೀಡಿದಳು. ಹಾಗೆಯೇ ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಘ್ನರೂ, ಕೈಕೇಯಿಗೆ ಭರತನೂ ಹುಟ್ಟಿದರು. ತಾನೊಬ್ಬಳೇ ಪಾಯಸವನ್ನು ಕುಡಿಯುವ ಅವಕಾಶವಿದ್ದರೂ ಅವರಿಗೂ ಮಕ್ಕಳಾಗಲಿ ಎಂದು ಹಂಚಿಕೊಂಡಿದ್ದು ಗಮನಾರ್ಹ.
ಮಹಾಭಾರತದಲ್ಲಿ ಕುಂತಿಗೆ ಪುತ್ರೋತ್ಸವ ಆದ ಸುದ್ದಿಯನ್ನು ಕೇಳಿದ ಗಾಂಧಾರಿಯು ತನಗೆ ಈಗಲೇ ಮಗು ಜನಿಸಬೇಕೆಂದು ಹೊಟ್ಟೆಯನ್ನು ಕಿವಿಚುಕೊಳ್ಳುತ್ತಾಳೆ. ಆದಷ್ಟು ಬೇಗನೆ ಮಗು ಬೇಕೆಂಬ ಆಕೆಯ ಅತಿ ಆಸೆಯು ನೂರು ಮಂದಿ ಕೌರವರ ಜನನಕ್ಕೆ ಕಾರಣವಾಗುತ್ತದೆ. ಸಾಕು ಎಂದ ಕೌಸಲ್ಯೆಗೆ ಅವತಾರ ಪುರುಷ ಶ್ರೀರಾಮನು ಮಗನಾದರೆ ಬೇಕು ಎಂದು ಆಸೆಪಟ್ಟ ಗಾಂಧಾರಿಗೆ ದುಷ್ಟಗುಣಗಳನ್ನು ಹೊಂದಿದ ದುರ್ಯೂಧನ ಸೇರಿದಂತೆ ಎಲ್ಲ ಕೌರವರು ಜನಿಸುತ್ತಾರೆ. ಮಕ್ಕಳ ಬದುಕು ಹಸನಾಗಬೇಕು ಎಂದು ತಂದೆ-ತಾಯಂದಿರು ತಮ್ಮ ಕಷ್ಟ, ನೋವುಗಳನ್ನು ನುಂಗಿಕೊಂಡು ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರಿಗೆ ಮದುವೆ ಮಾಡಿ ಹೆತ್ತವರ ಬದುಕಿನಲ್ಲಿ ಸಾಕುಗಳಿಂದ ಸಾಕ್ಷಾತ್ಕಾರ ಕಂಡುಕೊಳ್ಳುತ್ತಾರೆ. ‘ಅಬ್ಬ. ಮಗಳ/ಮಗನ ಮದುವೆ ಮಾಡಿದೆ. ಸಾಕು, ಬದುಕು ಪರಿಪೂರ್ಣವಾಯಿತು’ ಎನ್ನುತ್ತಾರೆ. ತಮ್ಮ ಬಹುದೊಡ್ಡ ಜವಾಬ್ದಾರಿ ಯಿಂದ ವಿಮುಖರಾದಂತೆ ಸುಖ ಅನುಭವಿಸುತ್ತಾರೆ. ಮೊಮ್ಮಕ್ಕಳಾದರೆ ಅವರೊಂದಿಗೆ ಆಡುತ್ತಾ ಜೀವನದ ಎಲ್ಲ ಜಂಜಾಟಗಳು ಸಾಕು, ಎಲ್ಲವನ್ನೂ ಮಗನೋ/ಮಗಳೋ ನೋಡಿಕೊಳ್ಳಲಿ, ನಾನು ಮೊಮ್ಮಕ್ಕಳೊಂದಿಗೆ ನೆಮ್ಮದಿಯಾಗಿ ಆಡುತ್ತಿರುತ್ತೇನೆ ಎನ್ನುತ್ತಾರೆ. ಹಾಗಾಗಿ ಬೇಕುಗಳಂತೆ ಸಾಕುಗಳು ನಮ್ಮ ಬದುಕಿಗೆ ಬೇಕು. ಅವು ಬದುಕಿನ ಅಂಗವಾಗಿವೆ.
ಈ ದಾಂಪತ್ಯ ಎನ್ನುವುದು ಬಹಳ ಸ್ವಾರಸ್ಯ. ಸಾಕು-ಬೇಕುಗಳ ಸಮಪಾಕದ ಮಿಶ್ರಣ. ಮದುವೆ ಬಗ್ಗೆ ಸಾಕಷ್ಟು ನಂಬಿಕೆಗಳು ಇರುವಂತೆ ಅಪನಂಬಿಕೆಗಳೂ ಇವೆ. ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಮದುವೆ ಎಂಬುದು ಶಿಕ್ಷೆಯೇ ಸರಿ. ಲೈಫ್ ಮುಗೀತು. ಹೆಣ್ಣಿಗೆ ಸ್ವಾತಂತ್ರ್ಯ ಇರುವುದಿಲ್ಲ. ಗಂಡಸು ಸಂಸಾರದ ಜಂಜಾಟದಲ್ಲಿ ಬೀಳುತ್ತಾನೆ ಎಂದೆನ್ನುತ್ತಾ ಮದುವೆಯನ್ನು ಅಣಕ ಮಾಡುತ್ತಾರೆ. ಮಾತ್ರವಲ್ಲದೆ ಇಷ್ಟವಿದ್ದಷ್ಟು ದಿನ ಲಿವಿಂಗ್ ಟುಗೆದರ್ ನಡೆಸಿ ಬಳಿಕ ಯಾವ ಸಂಬಂಧವೂ ಇಲ್ಲವೆಂಬಂತೆ ತಮ್ಮ ತಮ್ಮ ದಾರಿ ನೋಡಿಕೊಳ್ಳುತ್ತಾರೆ. ಎಲ್ಲಾ ಪಾಶ್ಚಾತ್ಯರು ದಾಂಪತ್ಯ ಜೀವನಕ್ಕೆ ಬೆಲೆ ಕೊಡುವುದಿಲ್ಲ ಎನ್ನುವುದು ತಪ್ಪು. ಅವರಲ್ಲಿಯೂ ಸಾಕಷ್ಟು ಜನರಿಗೆ ದಾಂಪತ್ಯದ ಕುರಿತು ಗೌರವ ಇದೆ. ಪ್ರೀತಿ ಇದೆ. ಸಾಕಷ್ಟು ಗಮನವನ್ನೂ ಹರಿಸುತ್ತಾರೆ.
ಭಾರತೀಯ ಸಂಪ್ರದಾಯದಲ್ಲಿ ಮದುವೆ ಬದುಕಿನ ಅವಿಭಾಜ್ಯ ಸಂಗತಿಯಾಗಿದೆ. ಇಂದಿಗೂ ಮದುವೆ ಮಹೋನ್ನತ ಗೌರವ ಹೊಂದಿದೆ. ಪರಸ್ಪರ ಪ್ರೀತಿ-ಪ್ರೇಮವನ್ನು ಉಣಿಸುತ್ತಾ ಜೀವನ ರಥವನ್ನು ಇಬ್ಬರೂ ಸೇರಿ ಒಟ್ಟಿಗೆ ಸಾಗಿಸುವುದಾಗಿದೆ. ಸಂಸಾರ ನಡೆಸುತ್ತಾ ವೃದ್ಧರಾಗುತ್ತಾ ಹೋದಂತೆ ಪ್ರೀತಿಯಲ್ಲಿ ಸವಿ ಹೆಚ್ಚಾಗುತ್ತದೆ. ಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ಗಂಡನಿಗೆ ಹುಷಾರು ತಪ್ಪಿದರೆ ಹೆಂಡತಿ ತಾನೇ ನಿದ್ದೆ ಬಿಟ್ಟು ಗಂಡ ಬೇಗ ಸುಧಾರಿಸಿಕೊಳ್ಳಲಿ ಎಂದು ಆರೈಕೆ ಮಾಡುತ್ತಾಳೆ. ಗಂಡನೂ ಅಷ್ಟೇ, ಎಲ್ಲಿ ಹೆಂಡತಿಗೆ ಬೇಜಾರು ಆಗುತ್ತದೋ ಎಂದು ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆಯಲಾರ. ಅನೇಕ ಹಿರಿಯ ಹೆಂಗಸರ ಭಯವೇನೆಂದರೆ ಒಂದು ವೇಳೆ ನಾನು ಸತ್ತರೆ ನನ್ನ ಗಂಡನನ್ನು ಯಾರು ನೋಡಿಕೊಳ್ಳುತ್ತಾರೆ? ಹೇಗೆ ನೋಡಿಕೊಳ್ಳುತ್ತಾರೆ ಎಂಬುದೇ ಆಗಿರುತ್ತದೆ. ಅಂದರೆ ಅವರ ಪ್ರೀತಿ ಅಷ್ಟು ಗಾಢವಾಗಿರುತ್ತದೆ. ವೃದ್ಧರಾದಷ್ಟು ಪರಸ್ಪರ ಅವಲಂಬನೆ ಜಾಸ್ತಿಯಾಗುತ್ತದೆ. ಬಾಂಧವ್ಯವನ್ನು ಸದಾ ಬೇಕು ಎನ್ನುತ್ತೇವೆ. ಇದು ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯ.
ಬಾಲ್ಯ, ಯೌವನ, ಸಂಸಾರ, ಸಂನ್ಯಾಸ ಇವು ಎಲ್ಲರ ಜೀವನದ ಘಟ್ಟಗಳು. ಇವುಗಳಲ್ಲಿ ಬಾಲ್ಯ, ಯೌವನದ ಕಾಲಘಟ್ಟದಲ್ಲಿ ಬೇಕು ಎಂಬ ಭಾವನೆ ಹೆಚ್ಚಾಗಿರುತ್ತದೆ. ಮಕ್ಕಳಿಗೆ ಜಾತ್ರೆಗೆ ಮಾತ್ರವಲ್ಲ ಪೇಟೆಗೆ ಹೋದಾಗಲೂ ಕಂಡಿದ್ದೆಲ್ಲ ಬೇಕು, ಆಟ ಆಡಬೇಕು, ಹೀಗೆ ಬೇಕುಗಳ ಪಟ್ಟಿ ಹೆಚ್ಚಿರುತ್ತದೆ. ಹಾಗೆಯೇ ಯೌವನದಲ್ಲಿಯೂ ಕೆಲಸಕ್ಕೆ ಸೇರಬೇಕು, ಬೈಕ್ ತಗೋಬೇಕು, ಹುಡುಗ/ಹುಡುಗಿಯನ್ನು ಪ್ರೀತಿಸಬೇಕು, ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮನೆ ಕಟ್ಟಿಸಬೇಕು ಹೀಗೆ ಹಲವು ಕನಸುಗಳೆಲ್ಲ ಬೇಕು ಎಂಬುದೇ ಆಗಿರುತ್ತದೆ. ಸಂಸಾರಕ್ಕೆ ಬರುವಾಗ ಸಾಕು-ಬೇಕುಗಳೆರಡೂ ಹೆಚ್ಚು ಬಳಕೆಯಾಗುತ್ತವೆ. ಕುಟುಂಬ ನಿರ್ವಹಣೆ ಮಾಡಲು ಸಂಪಾದನೆ, ಹಣದ ಕೊರತೆಯಿದ್ದಾಗ ಅದು ಬೇಕು, ಇದು ಬೇಕು ಎಂಬ ಆಸೆಗಳನ್ನೂ ಸಾಕು ಎಂದು ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಹೆಂಡತಿ-ಮಕ್ಕಳ ಸುಖಕ್ಕೋಸ್ಕರ ಇನ್ನಷ್ಟು ದುಡಿಯಬೇಕು, ಕಷ್ಟಪಡಬೇಕು ಎಂದಾಗುತ್ತದೆ. ಅದನ್ನೇ ಹಿರಿಯರು ಬೇಕು ಎಂಬ ಪದ ನಮ್ಮನ್ನು ಗಾಣದ ಎತ್ತಿನ ಹಾಗೆ ದುಡಿಯುವಂತೆ ಮಾಡುತ್ತದೆ ಎಂದು ಹೇಳುತ್ತಾರೆ. ಇನ್ನು ವಾನಪ್ರಸ್ಥವೆಂದರೆ ಬೇಕು ಎಂಬುದು ಕಡಿಮೆಯಾಗಿ ಎಲ್ಲವೂ ಸಾಕು, ಇನ್ಯಾಕೆ ಬೇಕು ಎಂಬ ಭಾವನೆ ತಳೆಯುವುದಾಗಿದೆ. ‘ದುಡಿಯುವ ಸಮಯದಲ್ಲಿ ದುಡಿದು ಸಂಪತ್ತನ್ನು ಕೂಡಿ ಹಾಕಿ, ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಮದುವೆ ಮಾಡಿಸಿ ನನ್ನೆಲ್ಲ ಕರ್ತವ್ಯಗಳನ್ನು ಪೂರೈಸಿದ್ದೇನೆ. ಮನೆ ಹೊಲ ಎಲ್ಲವನ್ನು ಮಕ್ಕಳೇ ನೋಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಜೀವನದಲ್ಲಿ ವಿಶ್ರಾಂತಿ ಪಡೆಯೋಣ. ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ದೇವರ ಪೂಜೆ, ಜಪ ತಪ ಮಾಡಿಕೊಂಡೋ, ಆಶ್ರಮ, ಶಾಲೆ, ದೇವಾಲಯಗಳಲ್ಲಿ ಸೇವಾ ಕಾರ್ಯ ಮಾಡಿಕೊಂಡೋ ನೆಮ್ಮದಿಯಾಗಿರುವ’ ಎಂದು ಮನದಲ್ಲಿ ಒಡಮೂಡುವುದಾಗಿದೆ.
ಉತ್ತರ ಭಾರತದ ಕಡೆ ಹೆಚ್ಚಿನವರು ಪ್ರಾಪ್ತ ವಯಸ್ಸಿಗೆ ಬಂದಾಕ್ಷಣ ಮದುವೆಯಾಗುತ್ತಾರೆ. ಹಾಗಾಗಿ ಅವರಿಗೆ 40 ವರ್ಷವಾಗುವಾಗ ಮಕ್ಕಳು ದುಡಿಯಲು ಪ್ರಾರಂಭಿಸಿರುತ್ತಾರೆ. ಆಗ ತಂದೆಯಾದವನು ತನ್ನ ವ್ಯಾಪಾರ, ವ್ಯವಹಾರಗಳನ್ನು ಮಕ್ಕಳ ಕೈಗಿತ್ತು ಮೇಲ್ವಿಚಾರಣೆ ಮಾಡುತ್ತಿರುತ್ತಾನೆ. ನಂತರ ವರುಷಗಳು ಉರುಳಿದಂತೆ ಮಕ್ಕಳಿಗೆ ಎಲ್ಲ ವ್ಯವಹಾರ ನೀನೇ ನೋಡಿಕೋ ಎಂದು ಹೇಳಿ ಲೆಕ್ಕಚಾರ, ಲಾಭ ನಷ್ಟ, ವ್ಯವಹಾರ ಬಗ್ಗೆ ತಲೆ ಹಾಕದೆ ಎಲ್ಲವನ್ನೂ ಸಾಕು ಮಾಡಿ ವಿಶ್ರಾಂತಿ ಜೀವನ ನಡೆಸುತ್ತಾರೆ. ಇದನ್ನೇ ವಾನಪ್ರಸ್ಥ ಎನ್ನಬಹುದು. ಹಿಂದೆಲ್ಲ ವಾನಪ್ರಸ್ಥ ಎಂದರೆ ಎಲ್ಲವನ್ನು ಬಿಟ್ಟು ಕಾಡಿಗೆ ಹೋಗುವುದು ಎಂಬ ಭಾವನೆಯಿತ್ತು. ಈ ಆಧುನಿಕ ಯುಗದಲ್ಲಿ ಅವೆಲ್ಲವನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ವಾನಪ್ರಸ್ಥದ ಅರ್ಥವನ್ನು ತಿಳಿದುಕೊಂಡು ಜೀವನಾವಧಿಯ ಕೊನೆಯ ಕ್ಷಣಗಳನ್ನು ನೆಮ್ಮದಿ ಸಂತೃಪ್ತಿಯಿಂದ ಕಳೆಯುವಂತಾಗಬೇಕು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)