

ನಮಗೆ ಅರಿವಿದ್ದೋ ಅಥವಾ ಇಲ್ಲದೆಯೋ, ಅವರಂತೆಯೇ ನಾವು ಕೂಡಾ ನಮ್ಮ ಪರಮ ಗಮ್ಯವಾದ ಆಧ್ಯಾತ್ಮಿಕ ಪರಿಪೂರ್ಣತೆ ಅಥವಾ ಆತ್ಮಜ್ಞಾನದ ಪಥದಲ್ಲಿ ಎಷ್ಟೋ ಜನ್ಮಗಳಿಂದ ಮುಂದೆ ಸಾಗುತ್ತಿದ್ದೇವೆ.
ಸನಾತನ ಧರ್ಮದ ಒಂದು ಅದ್ಭುತ ವಿಷಯವೇನೆಂದರೆ, ಅದು ನಮಗೆ ಆಧ್ಯಾತ್ಮಿಕ ಪಥದಲ್ಲಿ ನಾವು ಮಾಡಿದ ಯಾವುದೇ ಪರಿಶ್ರಮ-ಪ್ರಯತ್ನಗಳು ಎಂದೂ ವ್ಯರ್ಥವಾಗುವುದಿಲ್ಲ. ನಮ್ಮ ಸಾಧನೆಗೆ ತಕ್ಕ ಫಲ ಇಂದೇ ಸಿಗದಿದ್ದರೂ, ಒಂದಲ್ಲ ಒಂದು ದಿನ ಸಿಕ್ಕಿಯೇ ತೀರುತ್ತದೆ ಎಂಬ ಆಶ್ವಾಸನೆಯನ್ನು ನೀಡುತ್ತದೆ.
ಇದು ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣನು ಮಾನವ ಜನಾಂಗಕ್ಕೆ ನೀಡಿರುವ ಆಶ್ವಾಸನೆ:
ನೇಹಾಭಿಕ್ರಮನಾಶೋಸ್ತಿ ಪ್ರತ್ಯವಾಯೋ ನ ವಿದ್ಯತೇ|
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ|| 2.40||
ಈ ಪಥದಲ್ಲಿ ಹೂಡಲ್ಪಟ್ಟ ಯಾವುದೇ ಪರಿಶ್ರಮವು ಎಂದಿಗೂ ನಷ್ಟವಾಗುವುದಿಲ್ಲ, ಅಥವಾ ಅದರಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಈ ಧರ್ಮ ಪಥದಲ್ಲಿ ನಾವು ಮಾಡಿದ ಸ್ವಲ್ಪ ಪ್ರಯತ್ನವೂ ನಮ್ಮನ್ನು ಮಹತ್ತರವಾದ ಭಯಗಳಿಂದ ರಕ್ಷಿಸುತ್ತದೆ!
ಒಬ್ಬ ಮಾನವನು ಆತ್ಮಜ್ಞಾನವನ್ನು ಪಡೆಯಲು ಎಷ್ಟೋ ಸಾಧನೆ ಮಾಡಿದರೂ, ಒಂದು ವೇಳೆ ಅವನು ಅದನ್ನು ಪಡೆಯುವ ಮೊದಲೇ ಮರಣ ಹೊಂದಿದರೆ, ಅವನ ಗತಿಯೇನು? ಎಂದು ಪ್ರಶ್ನಿಸಿದ ಅರ್ಜುನನಿಗೆ, ಶ್ರೀ ಕೃಷ್ಣನು ನೀಡಿದ ವಚನವು ಅತ್ಯಂತ ಅಭಯ ಪ್ರದಾಯಕವಾಗಿದೆ.
ಇದು ಅರ್ಜುನನ ಪ್ರಶ್ನೆ:
ಅಯತಿಃ ಶ್ರದ್ಧಯೋಪೇತೋ ಯೋಗಾತ್ ಚಾಲಿತಮಾನಸಃ |
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ || 6.37 ||
ಕಚ್ಚಿನ್ನೋಭಯವಿಭ್ರಷ್ಟಃ ಛ್ಛಿನ್ನಾಭ್ರಮಿವ ನಶ್ಯತಿ|
ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಾಹ್ಮಣಃ ಪಥಿ ||6.38||
ಓ ಕೃಷ್ಣ, ಶ್ರದ್ಧಾವಂತನಾದರೂ ಯೋಗದ ಪಥದಿಂದ ಅವನ ಮನಸ್ಸು ಚ್ಯುತವಾದರೆ, ಸಂಸಿದ್ಧಿಯನ್ನು ಪಡೆಯದ ಅಂತಹ ಸಾಧಕನ ಪಾಡೇನು? ಅವನು ಉಭಯ ಭ್ರಷ್ಟನಾಗಿ ಬ್ರಹ್ಮಪಥದಲ್ಲಿ ದಿಕ್ಕು ತೋರದೇ ಚೂರಾಗಿ ಚದುರಿದ ಮೋಡದಂತೆ ಆಶ್ರಯಹೀನನಾಗಿ ನಾಶವಾಗುವುದಿಲ್ಲವೇ?
ಅರ್ಜುನನ ಈ ಸಂದೇಹಕ್ಕೆ ಭಗವಂತನ ಆಶ್ವಾಸನೆ:
ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ|
ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಚತಿ||6.40||
ಓ ಪಾರ್ಥ, ಉತ್ತಮನಿಗೆ ಈ ಲೋಕದಲ್ಲಾಗಲೀ ಪರಲೋಕದಲ್ಲಾಗಲೀ ನಾಶವಿಲ್ಲ. ಏಕೆಂದರೆ ಒಳ್ಳೆಯದನ್ನು ಮಾಡಿದವನು ಎಂದಿಗೂ ದುರ್ಗತಿಯನ್ನು ಹೊಂದುವುದಿಲ್ಲ!
ಶ್ರೀ ಕೃಷ್ಣನು ಮುಂದುವರಿದು ತನ್ನ ಆಶ್ವಾಸನೆಯು ಹೇಗೆ ಫಲಿಸುವುದೆಂಬುದನ್ನು ವಿವರಿಸುತ್ತಾನೆ:
ಪ್ರಾಪ್ಯ ಪುಣ್ಯಕೃತಾಂ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ|
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋಭಿಜಾಯತೇ|| 6.41||
ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್
ಏತದ್ದಿ ದುರ್ಲಭತರಂ ಲೊಕೇ ಜನ್ಮ ಯದೀದೃಶಮ್ || 6.42||
ವಿಫಲರಾದ ಯೋಗಿಗಳು ಮರಣದ ನಂತರ, ಪುಣ್ಯವಂತರ ಲೋಕಕ್ಕೆ ಹೋಗುತ್ತಾರೆ. ಹಲವು ಕಾಲ ಅಲ್ಲಿ ಸುಖವಾಗಿ ಜೀವಿಸಿ, ತದನಂತರ ಅವರು ಮತ್ತೆ ಭೂಮಿಯಲ್ಲಿ ಧರ್ಮನಿಷ್ಠ ಹಾಗೂ ಶ್ರೀಮಂತ ಕುಟುಂಬದಲ್ಲಿ ಮರುಜನ್ಮ ತಾಳುತ್ತಾರೆ. ಅಥವಾ ಮೇಧಾವಿಗಳಾದ ಯೋಗಿಗಳ ಕುಟುಂಬದಲ್ಲಿ ಅವರು ಜನಿಸುತ್ತಾರೆ. ಅಂತಹ ಜನ್ಮವನ್ನು ಈ ಜಗತ್ತಿನಲ್ಲಿ ದುರ್ಲಭ. ಅಷ್ಟೇ ಅಲ್ಲದೆ, ಅವರ ಆಧ್ಯಾತ್ಮಿಕ ಸಾಧನೆಯು ಹಿಂದಿನ ಜನ್ಮದಲ್ಲಿ ಅವರು ಸಾಧಿಸಿದ್ದ ಹಂತದಿಂದ ಮುಂದುವರಿದುಕೊಂಡು ಹೋಗುತ್ತದೆ.
ಸದಾಚಾರಿಗಳಿಗೆ ಭಗವಂತನ ಇನ್ನೊಂದು ಮಹತ್ತರ ಭರವಸೆಯೆಂದರೆ:
ಕ್ಷಿಪ್ರಂ ಭವತಿ ಧರ್ವತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ |
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ||9.31||
ಓ ಕುಂತೀಪುತ್ರನೇ, ಎಂತಹ ದುರಾಚಾರಿಗಳಾದರೂ ನನ್ನಲ್ಲಿ ಶರಣಾದರೆ, ಅವರು ಶೀಘ್ರವಾಗಿ ಧರ್ವತ್ಮರಾಗಿ ಶಾಶ್ವತ ಶಾಂತಿಯನ್ನು ಪಡೆಯುತ್ತಾರೆ. ನನ್ನ ಭಕ್ತನಿಗೆ ಎಂದೂ ನಾಶವಿಲ್ಲ. ಇದು ನನ್ನ ಪ್ರತಿಜ್ಞೆ!
ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯ ಪ್ರಸಂಗವನ್ನು ನಾವು ಕೇಳಿದ್ದೇವೆ. ನರಹಂತಕ ಚೋರನಾಗಿದ್ದ ಅವನು ನಾರದನ ಉಪದೇಶದಂತೆ ರಾಮನಾಮವನ್ನು ಶ್ರದ್ದಾ-ಭಕ್ತಿಯಿಂದ ಜಪಿಸಿ, ಪರಮ ಪದವಿಯನ್ನೂ, ಶಾಶ್ವತ ಸತ್ಕೀರ್ತಿಯನ್ನೂ ಪಡೆದನು.
ಆದ್ದರಿಂದ, ದಿವ್ಯತ್ವದ ಪಥದಲ್ಲಿ ಒಬ್ಬ ವ್ಯಕ್ತಿಯು ಹೂಡಿದ ಪರಿಶ್ರಮ-ಪ್ರಯತ್ನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಸದಾಚಾರಿಗಳಿಗೆ ಎಂದೂ ವಿನಾಶವಿಲ್ಲ. ಸಜ್ಜನರಿಗೆ ಮತ್ತು ಸತ್ಪಥದಲ್ಲಿರುವ ಸಾಧಕರಿಗೆ ಇದಕ್ಕಿಂತ ಹೆಚ್ಚಿನ ಪೋ›ತ್ಸಾಹ-ಆಶ್ವಾಸನೆಗಳು ಬೇಕೇ?
ಜ್ಞಾನಿಗಳು ಹೇಳುವಂತೆ, ದೇವರ ಆಸ್ಥಾನದಲ್ಲಿ ನಮ್ಮ ಪ್ರಾರ್ಥನೆಗಳಿಗೆ ಉತ್ತರವು ಕೆಲವೊಮ್ಮೆ ವಿಳಂಬವಾಗಬಹುದೇ ಹೊರತು, ಎಂದಿಗೂ ಅದು ಲಭ್ಯವಾಗದೇ ಹೋಗುವುದಿಲ್ಲ.
ಇದು ನಮಗೆ ಭಗವಂತನು ನೀಡಿರುವ ಇನ್ನೊಂದು ಆಶ್ವಾಸನೆ:
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ || 4.38||
ಈ ಜಗತ್ತಿನಲ್ಲಿ ಆತ್ಮಜ್ಞಾನಕ್ಕೆ ಸಮವಾದ ಪವಿತ್ರ ವಸ್ತುವು ಮತ್ತೊಂದಿಲ್ಲ. ಅದನ್ನು ಸಾಧಕನು ಕಾಲಕ್ರಮೇಣ ಯೋಗಸಂಸಿದ್ಧನಾಗಿ ಪಡೆದೇ ಪಡೆಯುತ್ತಾನೆ!
ಸಾಕ್ಷಾತ್ ಭಗವಂತನೇ ನೀಡಿರುವ ಇಂತಹ ಆಶ್ವಾಸನೆಗಳು ನಮಗೆ ಜೀವನಪಥದಲ್ಲಿ ದಾರಿದೀಪಗಳಾಗಲಿ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)