ಕೃತಘ್ನನಿಗೆಂದಿಗೂ ಕ್ಷಮೆ ಇಲ್ಲ

Manollasa 1
Published on

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಮನುಷ್ಯ ಮಾಡುವ ತಪ್ಪುಗಳು ನೂರಾರು. ಆದರೆ ಕ್ಷಮೆ ಇಲ್ಲದ ಒಂದು ಪಾಪವೆಂದರೆ ಜೀವನದಲ್ಲಿ ಕೃತಘ್ನನಾಗಿ ಬಾಳುವುದು. ಉಪಕಾರ ಮಾಡಿದವರಿಗೆ ಅಪಕಾರ ಮಾಡುವುದಾಗಲಿ, ಮಾಡಿದ ಉಪಕಾರವನ್ನು ಸ್ಮರಣೆ ಮಾಡದೆ ಇರುವುದಾಗಲೀ ಎರಡೂ ಕೃತಘ್ನತ್ವದ ಲಕ್ಷಣಗಳೇ.

ಒಂದು ಬಾರಿ ಚಾಂಡಾಲನೊಬ್ಬ ಸ್ಮಶಾನದಲ್ಲಿ ಮಾಂಸವನ್ನು ಬೇಯಿಸುತ್ತಿದ್ದ. ಆ ದಾರಿಯಲ್ಲಿ ತಪಸ್ವಿಯೊಬ್ಬ ಬರುವುದನ್ನು ನೋಡಿ ತಕ್ಷಣವೇ ಅದನ್ನು ಮುಚ್ಚಿ, ತಾನೂ ಸಹ ಅದಕ್ಕೆ ಅಡ್ಡಗಟ್ಟಿ ನಿಂತ. ಆ ತಪಸ್ವಿ ‘ಏನಪ್ಪಾ ಮಹಾನುಭಾವ, ನೀನು ಮಾಡುತ್ತಿರುವುದೇ ಅನರ್ಥಕಾರಿ. ನನ್ನ ದೃಷ್ಟಿ ಬೀಳಬಾರದೆಂದು ಅಡ್ಡಗಟ್ಟಿ ನಿಂತಿರುವುದೇಕೆ?’ ಎಂದು ಕೇಳಿದ. ಅದಕ್ಕೆ ಆತ, ‘ಅಯ್ಯೋ, ನಿನ್ನ ನೆರಳು ಬಿದ್ದರೂ ನಾನು ಮಾಡುತ್ತಿರುವ ಅಡಿಗೆ ಅಶುದ್ಧವಾಗುತ್ತದೆ’ ಎಂದ. ತಪಸ್ವಿ ಕೋಪಗೊಂಡ. ಚಂಡಾಲನು ಮಾತು ಮುಂದುವರಿಸಿದ.

‘‘ಒಂದು ದಿನ ಕಾಡಿನಲ್ಲಿ ನಾನು ಆಹಾರಕ್ಕಾಗಿ ಹುಡುಕುತ್ತಿದ್ದಾಗ ದೂರದಿಂದ ಒಂದು ಘಟನೆ ಕಂಡೆ. ಹುಲಿ ನಿನ್ನನ್ನು ಹಿಂಬಾಲಿಸಿದಾಗ ಅದರ ಬಾಯಿಗೆ ಸಿಗಬಾರದೆಂದು ನೀನು ಮತ್ತು ನಿನ್ನ ಜೊತೆ ಒಂದು ಕರಡಿ ಇಬ್ಬರೂ ಮರವನ್ನು ಹತ್ತಿದಿರಿ. ಓಡಿ ಆಯಾಸಗೊಂಡ ಭರದಲ್ಲಿ ನಿನಗೆ ನಿದ್ರೆ ಬಂದಿತ್ತು. ಆಗ ಆ ಕರಡಿ, ‘ಹೆದರಬೇಡ ಗೆಳೆಯ ನಾನು ನಿನ್ನನ್ನು ಕಾಯುವೆ. ನೀನು ಮಲಗು’ ಎಂದಿತು. ನೀನು ಮಲಗಿದೆ. ನೀನು ಎದ್ದ ತಕ್ಷಣವೇ ಕರಡಿ ಕೇಳಿತು, ‘ನನಗೂ ಆಯಾಸವಾಗಿದೆ ಗೆಳೆಯ. ನಾನು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲಾ’ ಎಂದು. ನೀನು ಸರಿ ಎಂದೆ. ಆದರೆ ಕೆಳಗೆ ಕಾಯುತ್ತ ಕುಳಿತ ಹುಲಿ ಇದನ್ನೆಲ್ಲ ಗಮನಿಸುತ್ತಿತ್ತು.

ಕರಡಿ ನಿದ್ರೆಗೆ ಜಾರಿದ ಮೇಲೆ ಆ ಹುಲಿ ನಿನ್ನನ್ನು ಕೇಳಿತು, ‘ಏಯ್ ತಪಸ್ವಿ, ನಿನ್ನ ಜೀವ ಉಳಿಯಬೇಕೆಂದರೆ ಆ ಕರಡಿಯನ್ನು ಮೇಲಿಂದ ನೂಕಿಬಿಡು. ನಾನು ನಿನ್ನನ್ನು ಏನೂ ಮಾಡುವುದಿಲ್ಲ’ ಅದಕ್ಕೆ ನೀನು, ‘ಹೌದಾ, ಆಪತ್ತಿನಲ್ಲಿ ನನ್ನ ಜೀವ ಉಳಿದರೆ ಸಾಕು. ಇನ್ನೊಬ್ಬರ ಬಗ್ಗೆ ಯಾರು ಚಿಂತೆ ಮಾಡಿಯಾರು’ ಎಂದು ತಕ್ಷಣವೇ ಆ ಕರಡಿಯನ್ನು ಕೆಳಗೆ ನೂಕಿಬಿಟ್ಟೆ. ನಿನಗೆ ಉಪಕಾರ ಮಾಡಿದ ಆ ಕರಡಿ ಅನ್ಯಾಯವಾಗಿ ಹುಲಿಯ ಆಹಾರವಾಯಿತು. ಇಂತಹ ಕೃತಘ್ನ ಜೀವ ನಿನ್ನದು. ನನ್ನ ಆಹಾರ ಎಷ್ಟೇ ಅಶುದ್ಧವಿದ್ದರೂ ನಿನ್ನ ಮನಸ್ಸಿನಷ್ಟು ಅಶುದ್ಧವಲ್ಲ ಎಂದ.’

ಬೇಕಾದಷ್ಟು ಅಧ್ಯಯನ, ತಪಸ್ಸು, ಸಮಾಜಸೇವೆ ಅಥವಾ ಇನ್ನೇನೋ ಸಮಾಜದ ಕಣ್ಣಿಗೆ ಕಾಣುವಂತೆ ಸತ್ಕಾರ್ಯಗಳನ್ನು ಮಾಡಿದರೂ ಜೀವನದಲ್ಲಿ ಕೃತಘ್ನ ಎಂಬ ಪಟ್ಟ ಪಡೆದರೆ ಅವನು ಮಾಡಿದ ಎಲ್ಲ ಪುಣ್ಯಕಾರ್ಯಗಳು ಹೊಳೆಯಲ್ಲಿ ಹುಣಸೆಹಣ್ಣು ಹರಿದುಬಿಟ್ಟಂತೆ. ಏಕೆಂದರೆ ಕ್ಷಮೆ ಇಲ್ಲದ ಏಕೈಕ ಅಪರಾಧ ಅದು ಕೃತಘ್ನನಾಗುವುದು. ಆ ಭಗವಂತನ ನ್ಯಾಯಾಲಯದಲ್ಲಿ ಬಹುಶಃ ಎಲ್ಲ ತಪ್ಪುಗಳಿಗೂ ಕ್ಷಮೆ ಇರಬಹುದು. ಆದರೆ ಕೃತಘ್ನರನ್ನು ಆ ನ್ಯಾಯಾಲಯದ ಒಳಗೂ ಪ್ರವೇಶ ಮಾಡಿಸುವುದಿಲ್ಲವೆಂಬುದು ಶಾಸ್ತ್ರಗಳ ಸಂದೇಶ.

(ಲೇಖಕರು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net