ಮೋದಿ ಒಂದು ಹೆಜ್ಜೆ ಹಿಂದಿಟ್ಟಿರುವುದರಲ್ಲಿ ನಿಜಕ್ಕೂ ಅರ್ಥವಿದೆ!

Sulibele
Published on
ಕಳೆದ ವರ್ಷ ಇದೇ ವೇಳೆಗೆ ನಾವೆಷ್ಟು ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿದ್ದೆವೋ ಈ ವರ್ಷ ಅದಕ್ಕಿಂತಲೂ ಸುಮಾರು 15 ಪ್ರತಿಶತದಷ್ಟು ಹೆಚ್ಚು ರಫ್ತು ಮಾಡಲು ಸಾಧ್ಯವಾಗಿದೆ. ಅಂಕೆಗಳಲ್ಲೇ ಹೇಳಬೇಕೆಂದರೆ ಕಳೆದ ವರ್ಷ ಹತ್ತು ಸಾವಿರ ಮಿಲಿಯನ್ ಡಾಲರ್​ಗಳಷ್ಟು ರಫ್ತು ಮಾಡಿದ್ದರೆ ಈ ವರ್ಷ ಅದು ಹನ್ನೊಂದೂವರೆ ಸಾವಿರ ಮಿಲಿಯನ್ ಡಾಲರ್​ಗಳನ್ನು ದಾಟಿದೆ. ಅಕ್ಕಿಯ ರಫ್ತು ಐದೂಕಾಲು ಸಾವಿರ ಮಿಲಿಯನ್ ಡಾಲರ್​ಗಳಿಗೆ ಏರಿದೆ. ಹಣ್ಣು ಮತ್ತು ತರಕಾರಿಯ ರಫ್ತು ಕಳೆದ ವರ್ಷಕ್ಕಿಂತಲೂ ಏರಿಕೆ ಕಂಡಿದೆ. ಗುಜರಾತಿನ 91 ಪ್ರತಿಶತ ರೈತರು ಸರ್ಕಾರದ ಎಮ್​ಸ್ಪಿ ಮಾರಾಟ ಮಾಡದೇ ಖಾಸಗಿ ವಹಿವಾಟುದಾರರಿಗೆ ತಮ್ಮ ಬೆಳೆಯನ್ನು ಮಾರಿ ಲಾಭ ಗಳಿಸಿದ್ದಾರೆ. ಎಲ್ಲೆಡೆಯಿಂದಲೂ ಒಳ್ಳೆಯ ಸುದ್ದಿಯೇ ಬರುತ್ತಿರುವ ವೇಳೆಗೆ ಅಚಾನಕ್ಕು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರೂ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಮಾತನ್ನಾಡಿದ್ದಾರೆ. ಜೊತೆಗೆ ದೇಶದ ಜನರಲ್ಲಿ ಈ ಕುರಿತಂತೆ ಕ್ಷಮೆಯಾಚನೆ ಮಾಡಿ ದೇಶದ ಹಿತರಕ್ಷಣೆ ತನಗೆ ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ, ‘ರೈತರ ಒಳಿತಿಗಾಗಿ ಈ ಕಾನೂನು ತರಲಾಗಿತ್ತು. ಈಗ ದೇಶದ ಒಳಿತಿಗಾಗಿ ಇದನ್ನು ಮರಳಿ ಪಡೆಯಲಾಗುತ್ತಿದೆ’.

ಕಾನೂನನ್ನು ಮರಳಿ ಪಡೆಯುವುದರಲ್ಲಿ ದೇಶದ ಒಳಿತು ಏನಿರಬಹುದು ಎಂಬುದನ್ನು ಸ್ವಲ್ಪ ವಿಸ್ತಾರವಾಗಿಯೇ ಆಲೋಚಿಸಬೇಕಾಗಬಹುದು. ಮಿನ್ಹಾಜ್ ಮರ್ಚಂಟ್ ತಮ್ಮ ಇತ್ತೀಚಿನ ಲೇಖನದಲ್ಲಿ ಈ ಕಾನೂನನ್ನು ಹಿಂತೆಗೆದುಕೊಳ್ಳುವಲ್ಲಿ ಇರಬಹುದಾದ ಸಮಸ್ಯೆಗಳನ್ನು ಪಟ್ಟಿಮಾಡಿದ್ದಾರೆ. ಮೊದಲನೆಯದು ಅಕ್ಷರಶಃ ಈ ನಡೆ ನರೇಂದ್ರ ಮೋದಿಯವರನ್ನು ಕುಗ್ಗಿಸಲಿದೆ. ಯಾರಿಗೂ ಜಗ್ಗದ ಬಲವಾದ ವ್ಯಕ್ತಿ ಎಂಬ ಅವರ ಇಮೇಜ್​ಗೆ ಈ ಪ್ರಕರಣ ಬಲುದೊಡ್ಡ ಹೊಡೆತ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ, 2024ರ ಲೋಕಸಭಾ ಚುನಾವಣೆಯಲ್ಲಿಯೂ ಇದು ಖಂಡಿತವಾಗಿಯೂ ಚರ್ಚೆಗೆ ಬರಲಿದೆ. ಎರಡನೆಯದು ಯುಪಿಎ ತನ್ನ ಅಧಿಕಾರಾವಧಿಯ ಎಂಟನೇ ವರ್ಷದಲ್ಲಿ ಅಣ್ಣಾ ಹಜಾರೆಯವರ ಹೋರಾಟಕ್ಕೆ ಮಣಿದಿತ್ತು. ನರೇಂದ್ರ ಮೋದಿ ಈಗ ಈ ಹೋರಾಟಗಾರರಿಗೆ ಮಣಿದಿದ್ದಾರೆ. ಇನ್ನು ಮೂರನೆಯದು ಮೋದಿ ಅಗತ್ಯಬಿದ್ದರೆ ಆರ್ಥಿಕತೆಗಿಂತಲೂ ಹೆಚ್ಚು ಬೆಲೆಯನ್ನು ರಾಜಕೀಯಕ್ಕೆ ಕೊಡುತ್ತಾರೆ ಎಂಬ ಭಾವನೆಯೂ ಜನರಲ್ಲಿ ಬಲಿಯಬಹುದು. ಮೇಲ್ನೋಟಕ್ಕೆ ಇವೆಲ್ಲವೂ ನಿಜವೆನ್ನಿಸಿದರೂ ಮೋದಿ ತಮ್ಮ ವರ್ಚಸ್ಸನ್ನು ಕಾಲಕಾಲಕ್ಕೆ ಸಮಾಜದಲ್ಲಿ ಬಲಗೊಳಿಸಿಕೊಳ್ಳುತ್ತ ಹೋಗುವುದನ್ನು ಕಾಣುತ್ತಲೇ ಬಂದಿದ್ದೇವೆ. ಇಷ್ಟೆಲ್ಲ ಪ್ರತಿಪಕ್ಷಗಳ ಪ್ರಯತ್ನದ ನಂತರವೂ ಕಾಪ್-26 ಸಭೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಗೆ ಸಿಕ್ಕ ಗೌರವ ಇವರೆಲ್ಲರ ತಲೆ ಕೆಡಿಸಿರಲು ಸಾಕು. ಹಾಗೆಯೇ ಮನಮೋಹನ ಸಿಂಗರ ಸರ್ಕಾರ ಅಣ್ಣಾ ಹಜಾರೆಗೆ ಮಣಿದಿದ್ದು ಅವರ ಹೋರಾಟಗಳಿಗಲ್ಲ, ಬದಲಿಗೆ ಆಂತರಿಕವಾದ ಭಯಾನಕ ಭ್ರಷ್ಟಾಚಾರಕ್ಕೆ. ಇನ್ನು ಮೋದಿ ಆರ್ಥಿಕತೆಗಿಂತಲೂ ಹೆಚ್ಚು ಬೆಲೆಯನ್ನು ರಾಜಕಾರಣಕ್ಕೆ ಕೊಡುತ್ತಾರೆನ್ನುವುದು ಸುಲಭಕ್ಕೆ ಸ್ವೀಕರಿಸಲಾಗದು. ಪ್ರತಿಪಕ್ಷಗಳ ಇಷ್ಟೆಲ್ಲ ಹೋರಾಟದ ನಡುವೆಯೂ ಅವರು ವಿಕಾಸದ ಓಟದಲ್ಲಿ ಭಾರತವನ್ನು ಒಯ್ಯುತ್ತಿರುವ ರೀತಿ ಎಂಥವನಿಗೂ ಅಚ್ಚರಿ ತರುವಂಥದ್ದು. ಬಹುಶಃ ಸ್ವಾತಂತ್ರ್ಯದ ನಂತರ ವಿಕಾಸಕ್ಕಾಗಿ ಇಷ್ಟೊಂದು ಹಠವಾದಿಯಾಗಿರುವ ಮೊದಲ ಪ್ರಧಾನಿ ಇವರೇ. ಉತ್ತರಪ್ರದೇಶದಲ್ಲಿ ಅವರು ಲೋಕಾರ್ಪಣೆ ಮಾಡಿದ ಎಕ್ಸ್​ಪ್ರೆಸ್ ವೇ ಇದಕ್ಕೊಂದು ಸಮರ್ಥ ಉದಾಹರಣೆ.

ಆದರೆ ಒಂದಂತೂ ಸತ್ಯ. ರೈತರ ಹಿತಾಸಕ್ತಿಯ ನೆಪ ಮುಂದುಮಾಡಿಕೊಂಡು ಪ್ರತಿಪಕ್ಷಗಳು ರಾಷ್ಟ್ರವಿಭಜಕ ದಿಕ್ಕಿನತ್ತ ಮುನ್ನಡೆಯುತ್ತಿದ್ದುದು ಸ್ಪಷ್ಟವಾಗಿ ಕಾಣುತ್ತಿತ್ತು. ಸಿಎಎ ಕಾನೂನಿನ ವಿರುದ್ಧ ಮುಸಲ್ಮಾನರು ಪ್ರತಿಭಟನೆ ಮಾಡಿದ್ದು ಪ್ರತಿಪಕ್ಷಗಳಿಗೆ ಬಲುದೊಡ್ಡ ಲಾಭವೇನೂ ಆಗಲಿಲ್ಲ. ದೆಹಲಿಯಲ್ಲಿ ಮಾತ್ರ ಅವರ ಪ್ರತಿಭಟನೆ ಯಶಸ್ವಿಯಾಯ್ತು. ಏಕೆಂದರೆ ಅದು ಎಲ್ಲರ ಗಮನ ಸೆಳೆಯುವ ಕೇಂದ್ರವಾಗಿಬಿಟ್ಟಿತ್ತು. ಮಂಗಳೂರಿನಲ್ಲಿ ಪ್ರತಿಭಟನೆ ಮಾಡಲೆಂದು ಹೊರಟವರು ಹಿನ್ನಡೆ ಕಂಡಿದ್ದು ನಿಮಗೆ ನೆನಪಿರಬೇಕು. ಮೋದಿ ಸರ್ಕಾರ ಆಗ ಜಾಗತಿಕ ಮಟ್ಟದ ಗೌರವ ಕಾಪಾಡಿಕೊಳ್ಳುವ ಬೆದರಿಕೆಗೆ ಮಣಿದು ಸಿಎಎ ಕಾನೂನಿನ ನೀತಿ ನಿರೂಪಣೆಗೆ ಸ್ವಲ್ಪ ಕಾಲಾವಕಾಶ ತೆಗೆದುಕೊಂಡಿತು. ಪ್ರತಿಪಕ್ಷಗಳಿಗೆ ಯೋಜನೆ ರೂಪಿಸಲು ಇದು ಸುಗ್ಗಿಯ ಕಾಲ. ಆಗ ಅವರು ಆರಿಸಿಕೊಂಡಿದ್ದು ರೈತರನ್ನು. ರೈತರ ವಿರುದ್ಧ ಯಾರೂ ಮಾತನಾಡಲು ಸಾಧ್ಯವಿಲ್ಲ. ಅನ್ನದಾತನೆಂಬ ಗೌರವ ಕೊಟ್ಟಿರುವುದರಿಂದ ರೈತ ಎನ್ನುವ ಪದವೇ ಭಾವನಾತ್ಮಕವಾದದ್ದು. ಇದರ ಲಾಭವನ್ನು ಚೆನ್ನಾಗಿ ಪಡೆದುಕೊಂಡ ಪ್ರತಿಪಕ್ಷಗಳು ಅರಾಜಕತೆ ಸೃಷ್ಟಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡವು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಇದಕ್ಕೆ ಸಿಖ್-ಜಾಠ್ ಸಮುದಾಯದ ಹೋರಾಟ ಎಂಬ ರೂಪವನ್ನು ಕೊಟ್ಟು ಆಂದೋಲನಕ್ಕೆ ಮತ್ತೂ ವೇಗ ತುಂಬಿಬಿಟ್ಟರು. ಒಡೆದು ಆಳುವುದನ್ನು ಕಾಂಗ್ರೆಸ್ಸಿಗೆ ಯಾರೂ ಹೇಳಿಕೊಡಬೇಕಿಲ್ಲ. ಅದು ಬ್ರಿಟಿಷರಿಂದ ಬಂದ ಬಳುವಳಿ. ಆರಂಭದಿಂದಲೂ ಪಂಜಾಬಿಗಳನ್ನು ಇತರ ಹಿಂದಿ ಭಾಷಿಕರಿಂದ ಒಡೆದು ಆಳುವ ನೀತಿಯನ್ನು ಆರಂಭಿಸಿದ ಕಾಂಗ್ರೆಸ್ಸು ಆ ವಿಷಬೀಜದ ಫಲವನ್ನು ಖಲಿಸ್ತಾನದ ರೂಪದಲ್ಲಿ ಉಣ್ಣುವ ಕಾಲ ಬಂತು. ಇಂದಿರಾ ಗಾಂಧಿಯೇನೋ ಹೋರಾಟವನ್ನು ಮೆಟ್ಟಿನಿಲ್ಲುವ ಕಾರ್ಯ ಮಾಡಿದರು. ಆದರೆ ಖಲಿಸ್ತಾನಿ ಪ್ರದೇಶದ ಕನಸು ಶಾಶ್ವತವಾಗಿ ಉಳಿಯುವಂತೆ ಮಾಡಿಬಿಟ್ಟರು. ಸಿಖ್ಖರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಬೀದಿಗಿಳಿದಿರುವುದನ್ನು ನೋಡಿದ ವಿದೇಶದಲ್ಲಿ ಕುಳಿತ ಖಲಿಸ್ತಾನೀ ಸಮರ್ಥಕರು ಅಖಾಡಕ್ಕೆ ಬಂದರಲ್ಲದೆ ಹೋರಾಟಗಾರರಿಗೆ ಬೇಕಾದ ಎಲ್ಲ ವ್ಯವಸ್ಥೆಯ ಜವಾಬ್ದಾರಿಯನ್ನೂ ಹೊತ್ತರು. ಸರ್ಕಾರದ ಕಾದು ನೋಡುವ ತಂತ್ರಗಾರಿಕೆ ದುಬಾರಿಯಾಯ್ತು. ಸಿರಿವಂತ ರೈತರು ವಿಸ್ತಾರವಾಗಿರುವ ರಸ್ತೆಗಳ ಮೇಲೆಯೇ ಟೆಂಟ್ ಹಾಕಿಕೊಂಡು, ಅಲ್ಲಿಯೇ ಅಡುಗೆ ಮಾಡಿಕೊಂಡು ಕಾಲ ಕಳೆಯಲಾರಂಭಿಸಿದರು. ಪ್ರತಿಭಟನೆಯ ಆವರಣದಲ್ಲಿಯೇ ಹೆಣ್ಣುಮಕ್ಕಳ ಮಾನಭಂಗಗಳಾದವು. ಕಗ್ಗೊಲೆಗಳೂ ನಡೆದು ಹೋದವು. ಸರ್ಕಾರ ಯಾರನ್ನೂ ಶಿಕ್ಷಿಸುವ ಧೈರ್ಯ ತೋರಲಿಲ್ಲ. ಅಲ್ಲಿಗೆ ರೈತರ ವೇಷದಲ್ಲಿ ಸಮಾಜವಿರೋಧಿ ಶಕ್ತಿಗಳು ಬಲವಾಗಿಬಿಟ್ಟರು.

ಜನವರಿ 26ಕ್ಕೆ ನಡೆದ ಪ್ರಕರಣ ನೆನಪಿದೆಯಲ್ಲವೇ? ಟ್ರಾ್ಯಕ್ಟರ್ ಹೊತ್ತು ಕೆಂಪುಕೋಟೆಯತ್ತ ನುಗ್ಗಿದ ಈ ಮಂದಿ ಯಾವ ದಿಕ್ಕಿನಿಂದಲೂ ರೈತರಂತೆ ಕಾಣುತ್ತಿರಲಿಲ್ಲ. ಈ ಹೋರಾಟಕ್ಕೆ ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆದುಕೊಂಡ ಈ ಜನ ಟೂಲ್ಕಿಟ್​ನ ಮೂಲಕ ಎಲ್ಲರೆದುರು ಬೆತ್ತಲಾಗಿಬಿಟ್ಟಿದರು ಕೂಡ. ಆದರೂ ಕೆಲ ಮಾಧ್ಯಮಗಳು ಅವರ ಪರವಾಗಿಯೇ ನಿಂತು ಸರ್ಕಾರವನ್ನು ಕಂಠಮಟ್ಟ ವಿರೋಧಿಸಿದವು. ಒಬ್ಬ ಪತ್ರಕರ್ತನಂತೂ ಟ್ರಾ್ಯಕ್ಟರ್​ನಿಂದ ಬಿದ್ದು ತೀರಿಕೊಂಡ ರೈತನನ್ನು ಪೊಲೀಸರ ಗುಂಡೇಟಿಗೆ ಬಲಿಯಾದವ ಎಂದು ಹೇಳಿ ಅಶಾಂತಿ ಹರಡಲು ಬೇಕಾದ ವ್ಯವಸ್ಥೆ ರೂಪಿಸಿಬಿಟ್ಟ. ಆದರೆ, ಆ ರೈತನ ಸಾವಿನ ವಿಡಿಯೋ ತಕ್ಷಣಕ್ಕೆ ಸಿಕ್ಕಿತಲ್ಲದೆ ಆತ ಕುಡಿದ ಮತ್ತಿನಲ್ಲಿ ವೇಗವಾಗಿ ಟ್ರಾ್ಯಕ್ಟರ್ ಚಲಾಯಿಸಿ ಉರುಳಿಬಿದ್ದಿದ್ದು ಎಲ್ಲರ ಕಣ್ಣಿಗೂ ಬೀಳುವಂತಿತ್ತು. ಅಂದು ಒಂದು ಸಣ್ಣ ಅವಘಡ ನಡೆದಿದ್ದರೂ ಜಾಗತಿಕ ಮಟ್ಟದಲ್ಲಿ ಭಾರತವನ್ನು ಅವಹೇಳನ ಮಾಡಿಬಿಡುವ ಪ್ರಯತ್ನಗಳು ಸಿದ್ಧವಾಗಿಬಿಟ್ಟಿದ್ದವು. ಇದನ್ನು ಅಲ್ಲಗಳೆಯುವವರು ಟ್ರಂಪ್ ವಿರುದ್ಧ ನಡೆದ ಕೊನೆಯ ಹೋರಾಟವನ್ನು ನೆನಪಿಸಿಕೊಳ್ಳಿ. ಇಂದು ಬೈಡೆನ್ ಜನಪ್ರಿಯತೆ ದಿನೇ-ದಿನೇ ಕುಸಿಯುತ್ತಿರುವುದು ಅಮೆರಿಕದಲ್ಲಿ ಕಂಡುಬರುತ್ತಿದೆ. ಅಲ್ಲಿನ ಜನ ಈಗ ಟ್ರಂಪ್ ಅನುಪಸ್ಥಿತಿಯನ್ನು ಬೇಸರದಿಂದ ಸ್ಮರಿಸಿಕೊಳ್ಳುತ್ತಿದ್ದಾರೆ. ಏನು ಮಾಡಲು ಸಾಧ್ಯ, ಕಳಕೊಂಡಿದ್ದಂತೂ ಆಯ್ತಲ್ಲವೇ?

ಮೋದಿಗೂ ಹಾಗೆ ಮಾಡುವ ಇರಾದೆ ಇವರದ್ದು. ಆದರೆ ದೇಶ ಅವರಿಗೆ ಕೊಟ್ಟಿರುವ ಜನಾದೇಶ ಸಾಮಾನ್ಯವಾದದ್ದಲ್ಲ. ಮುಂದಿನ ಜನಾದೇಶಕ್ಕಾಗಿ ಇನ್ನೂ ಕೆಲವು ವರ್ಷ ಕಾಯಬೇಕು. ಅದಕ್ಕೂ ಮುಂಚೆಯೇ ಗಲಭೆಗಳನ್ನು ನಡೆಸಿ ಮೋದಿಯನ್ನು ಕೆಳಗಿಳಿಸಿಬಿಟ್ಟರೆ ಇವರ ಉದ್ದೇಶ ಈಡೇರಿದಂತೆ. ಅದು ಸಾಧ್ಯವಾಗದೇ ಹೋದಾಗ ಚೀನಾ ಪ್ರತ್ಯಕ್ಷ ಕದನಭೂಮಿಗಿಳಿಯಿತು. ಗಡಿಯಲ್ಲಿ ತಗಾದೆ ತೆಗೆದು ಮೋದಿಯ ಸಾಮರ್ಥ್ಯ ಕುಸಿಯುವಂತೆ ಮಾಡುವ ಪ್ರಯತ್ನ ಆರಂಭಿಸಿತು. ಗಲ್ವಾನ್ ಕಣಿವೆಯಲ್ಲಿ ಆರಂಭವಾದ ಗಲಾಟೆಗಳಿಂದ ಹಿಡಿದು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡ ಚೀನೀ ಗಡಿಯಲ್ಲಿ ಎರಡು ಹೊಸ ನಗರಗಳನ್ನು ನಿರ್ವಿುಸಿ ದೇಶವನ್ನು ಹೈರಾಣು ಮಾಡುವ ಪ್ರಯತ್ನವನ್ನು ಮಾಡಲಾಯ್ತು. ಈ ಹೊತ್ತಲ್ಲಿಯೇ ಅಮೆರಿಕ ಅಫ್ಘಾನಿಸ್ತಾನವನ್ನು ಅರ್ಧದಲ್ಲೇ ಕೈಬಿಟ್ಟು ಹೊರಟಿದ್ದು ಮತ್ತೊಂದು ದಿಕ್ಕಿನ ಹೊಡೆತ. ಇದರ ಲಾಭವನ್ನು ಪಡೆದುಕೊಂಡ ಪಾಕಿಸ್ತಾನ ಕಾಶ್ಮೀರದಲ್ಲಿರುವ ತನ್ನೆಲ್ಲ ಏಜೆಂಟುಗಳನ್ನು ಜಾಗೃತಗೊಳಿಸಿ ಎಲ್ಲ ದಿಕ್ಕುಗಳಿಂದಲೂ ದಾಳಿಗೆ ಪ್ರೇರೇಪಿಸಿತು. ಆರಂಭದಲ್ಲಿ ಹೊಡೆತ ತಿಂದ ಭಾರತಸೇನೆ ಕಾಲಕ್ರಮದಲ್ಲಿ ಭಯೋತ್ಪಾದಕರನ್ನು ಮಟ್ಟಹಾಕಲಾರಂಭಿಸಿತು ಮತ್ತು ಈ ಹೋರಾಟ ಈಗಲೂ ನಡೆಯುತ್ತಿದೆ. ಚೀನಾ ಇವೆಲ್ಲಕ್ಕೂ ತನ್ನ ಬೆಂಬಲ ಕೊಡುತ್ತಿದೆಯಲ್ಲದೆ ಮ್ಯಾನ್ಮಾರ್​ನ ನೆಲದಿಂದ ನಕ್ಸಲರನ್ನು ಒಳನುಗ್ಗಿಸಿ ಸೈನಿಕರನ್ನು ಕೊಲ್ಲುವ ಪ್ರಯತ್ನವನ್ನೂ ಮಾಡಿದೆ. ಒಟ್ಟಾರೆ ದೇಶದ ಆಂತರಿಕ ಸ್ಥಿತಿಯನ್ನು ಬಿಗಡಾಯಿಸುವ ಬಲುದೊಡ್ಡ ಪ್ರಯತ್ನ ಇಲ್ಲಿದೆ. ಒಂದೆಡೆ ಚೀನಾ, ಒಂದೆಡೆ ಪಾಕಿಸ್ತಾನ, ಅಂತಾರಾಷ್ಟ್ರೀಯ ಒತ್ತಡಗಳು ಮತ್ತೊಂದೆಡೆ, ಇವೆಲ್ಲದರ ನಡುವೆ ರೈತರನ್ನು ಮುಂದಿಟ್ಟುಕೊಂಡು ದೇಶದ ಜನರಿಗೆ ಅಭದ್ರತೆ ಕಾಡುವಂತೆ ಮಾಡುವ ಪ್ರತಿಪಕ್ಷಗಳ ಪ್ರಯತ್ನ. ದೇಶವನ್ನು ಉಳಿಸಲು ಮತ್ಯಾವ ಮಾರ್ಗವಿತ್ತು ಹೇಳಿ? ಅದಕ್ಕೆ ಮೋದಿ ಹೇಳಿದ್ದು, ‘ದೇಶದ ಒಳಿತಿಗಾಗಿ ಕಾನೂನನ್ನು ಹಿಂಪಡೆಯುತ್ತಿದ್ದೇನೆ’ ಅಂತ.

ಈ ನಡುವೆ ಸಿಖ್ಖರು ಮತ್ತು ಜಾಠರ ಹೆಗಲಮೇಲೆ ಕೈ ಹಾಕಿ ನಡೆಯುತ್ತಿರುವ ಮುಸಲ್ಮಾನರು ಆಂತರಿಕ ಭದ್ರತೆಗೆ ನಿಜಕ್ಕೂ ಸವಾಲೇ. ಸುದೀರ್ಘ ಕಾಲದಿಂದಲೂ ಜಾಠರು ಮತ್ತು ಮುಸಲ್ಮಾನರ ನಡುವಿನ ಕಂದಕ ಬೆಳೆದುಕೊಂಡು ಬಂದಿತ್ತು. ಈ ನೆಪದಲ್ಲಿ ಇಬ್ಬರೂ ಒಂದಾಗಿಬಿಟ್ಟಿರುವುದು ಬರಲಿರುವ ದಿನಗಳ ಭಯಾನಕ ಸ್ಥಿತಿಯ ಮುನ್ಸೂಚನೆ. ತ್ರಿಪುರಾದಲ್ಲಿ ಮಸೀದಿಯೊಂದನ್ನು ಉರುಳಿಸಿದ್ದಾರೆ ಎಂಬ ಸುಳ್ಳುಸುದ್ದಿಯ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ಅಹಿತಕರ ಘಟನೆಗಳೇ ನಡೆದುಹೋದವು. ಯಾರೂ ಮಿಸುಕಾಡಲಿಲ್ಲ. ಬಾಳಠಾಕ್ರೆಯ ಮಗನೆಂದು ಹೇಳಿಕೊಳ್ಳುವ ಉದ್ಧವ್ ತಂದೆಯ ಎಲ್ಲ ಸಿದ್ಧಾಂತಗಳಿಗೆ ಮಸಿಬಳಿದೇ ಕುರ್ಚಿಯ ಮೇಲೆ ಕುಳಿತಿದ್ದಾರೆ. ಇಷ್ಟು ಸಾಲದೆಂಬಂತೆ ಬೇರೆ-ಬೇರೆ ರಾಜ್ಯಗಳಲ್ಲಿ ಆಳುತ್ತಿರುವ ಪ್ರತಿಪಕ್ಷಗಳು ಹುಡು-ಹುಡುಕಿ ಮೋದಿ ಸಮರ್ಥಕರನ್ನು ಅವಹೇಳನ ಮಾಡುವ, ಟ್ರಾಲ್ ಮಾಡುವ, ಅಗತ್ಯಬಿದ್ದರೆ ಹೊಡೆದು, ಬಡಿದು ಕೊಲ್ಲುವ ಹಂತಕ್ಕೂ ಹೋಗುತ್ತಿದ್ದಾರೆ. ಬಂಗಾಳದ ಕಥೆಯನ್ನಂತೂ ನೋಡಿಯೇ ಇದ್ದೀರಿ. ಇತ್ತೀಚೆಗೆ ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯಾಗಿದೆ. ರಾಜಸ್ಥಾನದಲ್ಲೂ ಈ ಬಗೆಯ ಘಟನೆಗಳು ಕಂಡುಬಂದರೆ ಅಚ್ಚರಿ ಪಡಬೇಕಿಲ್ಲ. ಇದು 2024ರ ವೇಳೆಗೆ ಮುಕ್ತವಾಗಿ ಮೋದಿ ಸಮರ್ಥನೆ ಮಾಡುವ ವಿಚಾರಕ್ಕೆ ತಡೆಯೊಡ್ಡುವ ಪ್ರಯತ್ನ. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿಪಕ್ಷಗಳು ಶತಾಯ-ಗತಾಯ ಮೋದಿಯನ್ನು ಅಧಿಕಾರದಿಂದಿಳಿಸಲು ಪಣತೊಟ್ಟು ನಿಂತುಬಿಟ್ಟಿವೆ. ಆ ಮನುಷ್ಯ ಮಾತ್ರ ಏಕಪ್ರಕಾರವಾಗಿ ರಾಷ್ಟ್ರಕ್ಕಾಗಿ ದುಡಿಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಹೈದರಾಬಾದಿನಲ್ಲಿ ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅಜಿತ್ ದೊವಲ್, ‘ಹೊಸಬಗೆಯ ಯುದ್ಧನೀತಿ ಸ್ಥಳೀಯ ಜನರನ್ನು ಪ್ರಚೋದಿಸುವುದೇ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯರ ರಕ್ಷಣೆ ಮಾಡುವುದು ನಿಮ್ಮ ಹೊಣೆ’ ಎಂದಿದ್ದರು. ಈ ಮಾತು ಈ ಹಿಂದಿನ ಎಲ್ಲ ವಿವರಗಳನ್ನು ಓದಿದ ಮೇಲೆ ಖಂಡಿತ ಸ್ಪಷ್ಟವಾಗುತ್ತದೆ. ಮೋದಿ ಒಂದು ಹೆಜ್ಜೆ ಹಿಂದಿಟ್ಟಿರುವುದು ಈ ಕಾರಣದಿಂದಾಗಿ ಎನ್ನುವುದು ನಿಸ್ಸಂಶಯ. ಹಾಗಂತ ಅವರು ಸುಮ್ಮನಿಲ್ಲ. ಇನ್ನಷ್ಟು ಎಕ್ಸ್​ಪ್ರೆಸ್ ಕಾರಿಡಾರ್​ಗಳಿಗೆ ಅನುಮತಿ ಕೊಟ್ಟಿದ್ದಾರೆ. ಭಾರತದ ರಫ್ತು ನಿರಂತರವಾಗಿ ವೃದ್ಧಿಯಾಗುತ್ತಿದೆ. ಸೇನೆಗೆ ಭಾರತದಲ್ಲೇ ನಿರ್ವಣಗೊಂಡ ಲೈಟ್ ಕಂಬ್ಯಾಟ್ ಹೆಲಿಕಾಪ್ಟರ್​ಗಳನ್ನು ಸಮರ್ಪಿಸಿದ್ದಾರೆ. ನಮ್ಮ ಡಿಆರ್​ಡಿಒ ಅಭಿವೃದ್ಧಿಪಡಿಸಿದ ಶಕ್ತಿ ಎನ್ನುವ ಎಲೆಕ್ಟ್ರಾನಿಕ್ ವಾರ್​ಫೇರ್ ಸೂಟ್​ಅನ್ನು ಭಾರತೀಯ ನೌಕಾಸೇನೆಗೆ ಸಮರ್ಪಿಸಿದ್ದಾರೆ. ಭಾರತ ಇಂದು ಜಗತ್ತಿನ ಮೂರನೇ ಅತಿದೊಡ್ಡ ಆಂತರಿಕ ವಿಮಾನ ಮಾರುಕಟ್ಟೆಯಾಗಿ ಬೆಳೆದು ನಿಂತಿದೆ. ಆರ್ಥಿಕ ಪ್ರಗತಿ ಕುರಿತಂತೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಭಾರತದ ಕಡೆಗೆ ಗಮನ ಹರಿಸಿವೆಯಲ್ಲದೆ ಹೂಡಿಕೆದಾರರು ಧಾವಿಸಿ ಬರುತ್ತಿದ್ದಾರೆ. ಇಂತಹ ಹೊತ್ತಲ್ಲಿ ರೈತ ಕಾಯ್ದೆಯನ್ನು ಮುಂದಿಟ್ಟುಕೊಂಡು ದೇಶದ ಸ್ವಾಸ್ಥ್ಯ ಕೆಡಿಸುವ ದೇಶದ್ರೋಹಿಗಳೊಂದಿಗೆ ಕಿತ್ತಾಡುವ ಮನಸ್ಸು ಯಾರಿಗಿದ್ದೀತು ಹೇಳಿ? ಮೋದಿ ಒಂದು ಹೆಜ್ಜೆ ಹಿಂದಿಟ್ಟಿರುವುದರಲ್ಲಿ ನಿಜಕ್ಕೂ ಅರ್ಥವಿದೆ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net