ಕರೊನಾ ವಿರುದ್ಧ ಆಗಬೇಕಿದೆ ಸರ್ಜಿಕಲ್ ಸ್ಟ್ರೈಕ್!

Corona
Published on

‘ಸಕಾಲ ಸ್ಪಂದನೆಯೇ ಜೀವನ, ವಿಳಂಬವೇ ಮರಣ’.

ಈ ಎರಡು ಮಾತುಗಳ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಾದ ಮಹತ್ವದ ಕಾಲಘಟ್ಟದಲ್ಲಿ ಭಾರತ ನಿಂತಿದೆ. ಮನುಕುಲದ ಇತಿಹಾಸ ಹಿಂದೆಂದೂ ಕಾಣದಷ್ಟು ವೇಗದಲ್ಲಿ ಕರೊನಾ (ಕೋವಿಡ್-19) ಮಹಾಮಾರಿ ಪ್ರಪಂಚ ಮತ್ತು ಭಾರತದಲ್ಲಿ ಹರಡುತ್ತಿದೆ. ಅದು ವ್ಯಾಪಿಸುತ್ತಿರುವ ವೇಗ, ಅದರ ಪರಿಣಾಮ ಜಗತ್ತಿನ ಜನರಲ್ಲಿ ಆತಂಕದ ಸುನಾಮಿಯನ್ನೇ ಎಬ್ಬಿಸಿದೆ. ಜಗದಗಲದ ಆರೋಗ್ಯ ವ್ಯವಸ್ಥೆ ಅದರ ಮುಂದೆ ಮೊಣಕಾಲೂರಿ ನಿಂತಿದ್ದು ಸಾಮಾಜಿಕ ಅಂತರ (Social Distance) ಕಾಯ್ದುಕೊಳ್ಳುವುದೇ ಕರೊನಾ ಹಾವಳಿ ತಡೆಯಲು ಇರುವ ಏಕೈಕ ಮಾರ್ಗ ಎನ್ನುವ ಭಾವನೆ ವ್ಯಾಪಕವಾಗಿದೆ. ಆದರೆ ಸಾಮಾಜಿಕ ಅಂತರವು ಭಾರತದಲ್ಲಿ ನಾವು ಬಯಸಿದ ಪರಿಣಾಮ ತರುವುದಿಲ್ಲ ಎನ್ನುವುದಕ್ಕೆ ಸಾಕಷ್ಟು ಪುರಾವೆಯಿದೆ.

ಸಾಮಾಜಿಕ ಮಾಧ್ಯಮ ಪ್ರಸಾರ ಮಾಡುವ ಮಾಹಿತಿ ಒಂದು ದೊಡ್ಡ ಅಸ್ತ್ರವಿದ್ದಂತೆ. ಆದರೆ ಅದು ಅತಿಯಾದಾಗ ಹಾಗೂ ಅದರ ಫಲಿತಾಂಶ ಪಾರ್ಶ್ವವಾಯು ಬಡಿದ ರೀತಿ ಆದಾಗ ಅದು ಖಂಡಿತಕ್ಕೂ ಒಂದು ಅಸ್ತ್ರವಲ್ಲ. ಸದ್ಯಕ್ಕೆ ಶಿಕ್ಷಿತರು ಸಾಮಾಜಿಕ ಅಂತರ (ಎಸ್​ಡಿ)ವನ್ನು ಅರ್ಥಮಾಡಿಕೊಳ್ಳುತ್ತಾರೆ. ಅದನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಾರೆನ್ನುವುದು ಬೇರೆಯೇ ಪ್ರಶ್ನೆ. ಆದರೆ, ಅಶಿಕ್ಷಿತರು ಮತ್ತು ಸಾಮಾಜಿಕ-ಆರ್ಥಿಕವಾಗಿ ಬಡವರಾದ ಜನ ವಿಭಾಗಗಳು ಈ ಎಸ್​ಡಿಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥರು. ಆದ್ದರಿಂದ ಸಾಮಾಜಿಕ ಅಂತರದ ಪರಿಕಲ್ಪನೆಗೂ ಮಿಗಿಲಾದ ಕ್ರಮಕ್ಕೆ ನಾವು ಮುಂದಾಗಬೇಕಿದೆ.

ಸಾಮಾಜಿಕ ಅಂತರದ ರಾಮಬಾಣ ತನ್ನಷ್ಟಕ್ಕೆ ತಾನು ಕೆಲಸ ಮಾಡದು. ಚೀನಾ, ಇಟಲಿ ಮತ್ತಿತರ ದೇಶಗಳಿಂದ ಬರುತ್ತಿರುವ ಸುದ್ದಿಗಳು; ಸಾಂಕ್ರಾಮಿಕ ರೋಗ ತಜ್ಞರು, ಅಂಕಿಸಂಖ್ಯೆ ತಜ್ಞರು ಅವನ್ನು ಪರಿಷ್ಕರಿಸಿ ನೀಡುತ್ತಿರುವ ಮಾಹಿತಿ -ಇವೆಲ್ಲವೂ ‘ಅತ್ಯಂತ ಕೆಟ್ಟ ಪರಿಸ್ಥಿತಿಗೆ’ ಸಿದ್ಧರಾಗಿ ಎಂದು ಸೂಚಿಸುವಂತಿದೆ. ಆರೋಗ್ಯ ರಕ್ಷಣೆ ಕ್ಷೇತ್ರ ಹಿಂದೆಂದೂ ಕಾಣದಂಥ ರೋಗ ತಡೆಯುವ ಮಟ್ಟವೊಂದನ್ನು ಅವರು ನಿರ್ಧರಿಸಿದ್ದಾರೆ. ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ರೋಗ ವಾಸಿ ಮಾಡುವ ಔಷಧ ವಿಚಾರದಲ್ಲಿ ಭಾರತ ತುಂಬ ಹಿಂದುಳಿದಿದೆ ಎನ್ನುವುದನ್ನು ನಾವು ಪರಿಗಣಿಸಿದಾಗ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆನ್ನುವುದರ ಅರಿವಾಗುತ್ತದೆ.

ಕರೊನಾ ನಿಯಂತ್ರಣಕ್ಕೆ ಭಾರತ ಸರ್ಕಾರ ಘೊಷಿಸಿರುವ ಕ್ರಮಗಳಿಗೂ ದೇಶದಲ್ಲಿ ಅವುಗಳ ಅನುಷ್ಠಾನಕ್ಕೆ ಇರುವ ವ್ಯವಸ್ಥೆಗಳಿಗೂ ಅಜ-ಗಜ ಅಂತರವಿದೆಯೆನ್ನುವುದು ಮೇಲ್ನೋಟಕ್ಕೇ ಸಾಬೀತಾಗುವ ವಿಚಾರವಾಗಿದೆ.

ಸಾಮಾಜಿಕ ಅಂತರ: ಸಾಮಾಜಿಕ ಅಂತರವೆನ್ನುವ ಪದ ಈ ದಶಕದ ಒಂದು ಪದವಾಗಿ ಹೊರಹೊಮ್ಮಬಹುದೇನೋ. ಮನುಷ್ಯರು ಮನುಷ್ಯರಿಂದ ದೂರವುಳಿಯುವ ಪರಿಕಲ್ಪನೆಯನ್ನು ಅಷ್ಟು ಸುಲಭವಾಗಿ ಜಾರಿ ಮಾಡಲು ಸಾಧ್ಯವೇ?. ಮಾಸ್ಕ್, ಸ್ಯಾನಿಟೈಸರ್​ಗಳು ಮೊದಲಾದವು ಅಲಭ್ಯವಾಗಿರುವ ಬಡಜನತೆಯ ನಡುವೆ ಸಾಮಾಜಿಕ ಅಂತರ ಅನುಷ್ಠಾನ ಕಷ್ಟದ ಕೆಲಸ. ಪರಸ್ಪರ ಸಾಮೀಪ್ಯವೇ ಜೀವಾಳವಾಗಿರುವಲ್ಲಿ ಸಾಮಾಜಿಕ ಅಂತರವೆನ್ನುವುದು ತಿರುಕನ ಕನಸಾದೀತು. ಈ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ನಮ್ಮ ವ್ಯವಸ್ಥೆ ಇದನ್ನು ಗಮನಕ್ಕೆ ತೆಗೆದುಕೊಳ್ಳದಿದ್ದರೆ ರೋಗದ ಮುಂದಿನ ಅಲೆ ಅಸಹಾಯಕ ಬಡ ಜನರನ್ನು ಆಪೋಶನ ತೆಗೆದುಕೊಳ್ಳಲಿದೆ. ಮೊದಲಿಗೆ ಪ್ರಾಣಿಯಿಂದ ಮಾನವನಿಗೆ ಹರಡಿದ್ದೆಂದು ಹೇಳಲಾದ ಕೋವಿಡ್-19, ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುವಂಥದ್ದು ಎನ್ನಲಾಯಿತು. ಮುಂದೆ ಅದು ಹೆಚ್ಚಾಗಿ ವೃದ್ಧರು ಹಾಗೂ ರೋಗಪೀಡಿತರನ್ನು ಕಾಡುವ ಸಮಸ್ಯೆ ಎಂದು ಹೇಳಲಾಗುತ್ತಿದೆ. ಆದರೆ ವಿವಿಧ ಸಾಮಾಜಿಕ-ಆರ್ಥಿಕ ವಿಭಾಗಗಳಲ್ಲಿ ಅದರ ಹರಡುವಿಕೆಯನ್ನು ಸ್ಪಷ್ಟವಾಗಿ ಯಾರೂ ವ್ಯಾಖ್ಯಾನಿಸಿಲ್ಲ. ಕ್ಷಯ (ಟಿಬಿ), ಮಲೇರಿಯಾ ಮತ್ತು ಡೆಂಗ್ಯೂನಂಥ ಇದೇ ರೀತಿಯ ಭಯಾನಕ ರುಜಿನಗಳು ಕೂಡ ಭಾರತದ ಜನರನ್ನು ದುಃಸ್ವಪ್ನವಾಗಿ ಕಾಡಿದ್ದಿದೆ. ಆದರೆ ಸಾಂಕ್ರಾಮಿಕ ವ್ಯಾಧಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ದಾಖಲೆ ಭಾರತದಲ್ಲಿಲ್ಲ.

ಪರೀಕ್ಷೆಯ ಕೊರತೆ: ಯಾವುದೇ ಒಂದು ರೋಗವನ್ನು ಎದುರಿಸಬೇಕಾದರೆ ಮೊದಲು ಅದರ ನಿಜವಾದ ಗುಣವನ್ನು ಅರ್ಥೈಸಿಕೊಳ್ಳುವುದು ಅಗತ್ಯ. ಆಗ ಮಾತ್ರವೇ ಅದರ ವಿರುದ್ಧ ಹೋರಾಡಲು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕರೊನಾ ‘ಹೊಸ’ ವೈರಸ್ ಆಗಿರುವುದರಿಂದ ನಮ್ಮ ದೇಶದಲ್ಲಾಗಲೀ ಜಗತ್ತಿನ ಇತರೇ ಭಾಗಗಳಲ್ಲಾಗಲೀ ಅದರ ನೈಜ ಗುಣ ತಿಳಿಯುವ ಕಿಟ್​ಗಳಿಲ್ಲ. ಹೀಗಾಗಿ ವೈವಿಧ್ಯಮಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. 130 ಕೋಟಿ ಜನಸಂಖ್ಯೆಯುಳ್ಳ ಭಾರತದಂಥ ದೇಶದಲ್ಲಿ ‘ಮಿತವಾದ ಪ್ರಯೋಜನಕಾರಿ ಪರೀಕ್ಷೆ’ ನೀತಿಯನ್ನು ಸಲಹೆ ಮಾಡಲಾಗಿದೆ. ವಾಸ್ತವವಾಗಿ ಅದು ಕಣ್ಣು ರೆಪ್ಪೆ ಮಿಟುಕಿಸುವುದರೊಳಗೆ ಬದಲಾಗುತ್ತಿರುತ್ತದೆ. ನರ್ಸಿಂಗ್ ಹೋಂ, ಸಣ್ಣ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು, ಕಾರ್ಪೆರೇಟ್ ಆಸ್ಪತ್ರೆಗಳು- ಈ ರೀತಿಯಾಗಿ ನಮ್ಮ ದೇಶದಲ್ಲಿ ವೈವಿಧ್ಯಮಯ ಆಸ್ಪತ್ರೆಗಳಿದ್ದು ಅಲ್ಲಿನ ವ್ಯವಸ್ಥೆ ಹಾಗೂ ಚಿಕಿತ್ಸೆಗಳ ಗುಣ ಮಟ್ಟವೂ ವಿಭಿನ್ನವಾಗಿರುತ್ತವೆ. ಆರೋಗ್ಯ ರಕ್ಷಣೆ ವಿಚಾರದಲ್ಲಿ ವಿವಿಧ ಆರ್ಥಿಕ ಜನವಿಭಾಗಗಳ ನಡುವೆ ತಾರತಮ್ಯ ನಡೆಯುತ್ತದೆ. ಹೀಗಾಗಿ ಈಗ ನಮ್ಮ ಮುಂದೆ ಧುತ್ತೆಂದು ಉದ್ಭವಿಸಿರುವ ಕರೊನಾದಂಥ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಯೋಜನೆ ರೂಪಿಸುವುದು ಕಷ್ಟದ ಕೆಲಸವಾಗಿದೆ.

ಕಟುವಾಸ್ತವ: ನಮ್ಮ ಸರ್ಕಾರಿ ಆಸ್ಪತ್ರೆಗಳು ಕೋವಿಡ್-19ನಂಥ ಸಾಂಕ್ರಾಮಿಕ ರುಜಿನದ ವೈರಾಣುಗಳನ್ನು ನಿರ್ವಹಿಸಲು ಅಸಮರ್ಥವಾಗಿವೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯಾರೂ ದನಿಯೆತ್ತದಿರುವುದು ಶೋಚನೀಯ. ಖಾಸಗಿ ಆಸ್ಪತ್ರೆಗಳು ಕೋವಿಡ್ ಸಮಸ್ಯೆ ನಿಭಾಯಿಸಲು ಸಿದ್ಧತೆ ನಡೆಸುತ್ತಿವೆಯಾದರೂ ಅವುಗಳು ಸಂಪನ್ಮೂಲ ಕೊರತೆಯಿಂದ ಬಳಲುತ್ತಿವೆ. ಅಲ್ಲದೆ ಪರಿಸ್ಥಿತಿ ನಿಭಾಯಿಸಲು ಅಗತ್ಯವಾದಷ್ಟು ವೇಗದಲ್ಲಿ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡೂ ಕೋವಿಡ್-19 ರೋಗಿಗಳ ಪ್ರವಾಹವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ ಎನ್ನುವುದಂತೂ ಸತ್ಯ.

ಮೂರಂಶ ಸೂತ್ರ: ಕರೊನಾ ರೋಗದಂಥ ಮಹಾ ದುರಂತ ಎದುರಿಸಲು ಸರ್ಕಾರ ಮೂರು ‘ಪಿ’ ಸೂತ್ರ ಅನುಸರಿಸಬೇಕು. ಪಾಂಡೆಮಿಕ್, ಪ್ರಿಪೇರ್ ಮತ್ತು ಪೊ›ಟೆಕ್ಟ್ ಎನ್ನುವುದೇ ಆ ಸೂತ್ರವಾಗಿದೆ. 1. ಆಸ್ಪತ್ರೆಗಳನ್ನು ಪ್ರಿಪೇರ್ ಮಾಡುವುದು (ಸಿದ್ಧಗೊಳಿಸುವುದು) 2.ಆರೋಗ್ಯ ಕಾರ್ಯಕರ್ತರ ರಕ್ಷಣೆ (ಪೊ›ಟೆಕ್ಷನ್) ಮತ್ತು, 3. ವೈದ್ಯಕೀಯ ಸಿಬ್ಬಂದಿ ಸುರಕ್ಷತಾ ಸಾಧನ(ಪಿಪಿಇ).

ಕೋವಿಡ್-19 ಎದುರಿಸಲು ಒಂದು ಓಂಬುಡ್ಸ್​ಮನ್ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ. ಅವರು ಕರೊನಾ ವೈರಸ್ ವಿರುದ್ಧ ದಿನದ 24 ತಾಸೂ ಸರ್ಜಿಕಲ್ ಸ್ಟ್ರೈಕ್ ನಡೆಸುವ ಹೊಣೆಗಾರಿಕೆ ಹೊಂದಿರಬೇಕು. ಅವರಿಗೆ ಸರ್ಕಾರ ಮತ್ತು ಜನತೆಯ ಸಂಪೂರ್ಣ ಸಹಕಾರವಿರಬೇಕು.

ಬಡವ-ಬಲ್ಲಿದ, ಪ್ರಖ್ಯಾತರು-ಸಾಮಾನ್ಯರು, ಪುರುಷ-ಮಹಿಳೆ, ಸ್ಥಳ, ದೇಶ-ಖಂಡಗಳೆಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಸೋಂಕಿನ ತಾಂಡವನೃತ್ಯಕ್ಕೆ ತೆರೆ ಎಳೆಯಲು ಇದು ಅಗತ್ಯ.

ಪಿಪಿಇ ಮಹತ್ವ

ಒಳರೋಗಿಗಳ ಚಿಕಿತ್ಸೆ ಸಂಬಂಧದಲ್ಲಿ ಮೂಲಸೌಕರ್ಯ, ವೈದ್ಯರು, ದಾದಿಯರು ಮತ್ತಿತರ ಸಿಬ್ಬಂದಿಯ ವೈಯಕ್ತಿಕ ರಕ್ಷಣಾ ಸಲಕರಣೆ (ಪಿಪಿಇ)-ಇವು ಅತ್ಯಂತ ಮಹತ್ವದ್ದಾಗಿದ್ದು, ಭಾರಿ ಪ್ರಮಾಣದಲ್ಲಿ ರೋಗಿಗಳನ್ನು ನಿಭಾಯಿಸುವ ಸನ್ನಿವೇಶ ಉದ್ಭವಿಸಿದರೆ ಅದನ್ನು ಎದುರಿಸುವ ಸ್ಥಿತಿ ನಮ್ಮಲ್ಲಿಲ್ಲ.

  • ಕೋವಿಡ್-19 ನಿರ್ವಹಣೆಯಲ್ಲಿ ಭಾಗಿಯಾಗುವ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಪಿಪಿಇ ವಿತರಿಸುವ ಒಂದು ಮಿಲಿಟರಿ ಶಿಸ್ತಿನ ವ್ಯವಸ್ಥೆ ರೂಪುಗೊಳ್ಳಬೇಕು. ಒಂದಿಷ್ಟೂ ವೇಸ್ಟ್ ಆಗದಂತೆ ನೋಡಿಕೊಳ್ಳಬೇಕು.
  • ಪಿಪಿಇ ತಯಾರಿಕೆಗಾಗಿಯೇ ಒಂದು ತುರ್ತು ಕಾನೂನು ರೂಪಿಸಬೇಕು.
  • ಈ ರೋಗ ಚಿಕಿತ್ಸೆಗೆ ಅಗತ್ಯವಾದ ಲಸಿಕೆ ಮತ್ತು ಔಷಧಿಗಳ ಅಭಿವೃದ್ಧಿಗೆ ಕೂಡ ಇದೇ ರೀತಿಯ ತಂತ್ರಗಾರಿಕೆ ಅಗತ್ಯ.
  • ಹೊರಗಿನ ತಂಡಗಳು ಕೋವಿಡ್-19 ಕೇಂದ್ರಗಳ ತಪಾಸಣೆ ನಡೆಸಬೇಕು ಹಾಗೂ ಮಂಜೂರಾತಿ ನೀಡಬೇಕು. ಅವ್ಯವಹಾರ ಆಗುವುದನ್ನು ತಡೆಯಲು ಇದು ಅಗತ್ಯ.
  • ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡದಿದ್ದರೆ ಈ ಕೇಂದ್ರಗಳೇ ಸೋಂಕು ಹರಡುವ ಕೇಂದ್ರಗಳಾಗಿ ಅಮೂಲ್ಯ ಆರೋಗ್ಯ ರಕ್ಷಣೆ ಸಿಬ್ಬಂದಿಯ ಅಪಾಯಕ್ಕೆ ಕಾರಣವಾಗುತ್ತವೆ.
  • ಸಾಕಷ್ಟು ಸಿಬ್ಬಂದಿ ಹಾಗೂ ಪಿಪಿಇ ಇಲ್ಲದಿದ್ದರೆ ಈಗಿರುವ ಐಸೋಲೇಷನ್ ಬೆಡ್​ಗಳು ಒಂದು ತಿಂಗಳಿಗೂ ಪರಿಣಾಮಕಾರಿ ಆಗಿರುವುದಿಲ್ಲ.

(ಲೇಖಕರು ಬೆಂಗಳೂರಿನ ಅಪೋಲೊ ಆಸ್ಪತ್ರೆಯ ಪಲ್ಮನರಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net