ನಾವಾಡದ ಮಾತನ್ನು ಕದ್ದಾಲಿಸುವವರೂ ಇದ್ದಾರೆ…

brain hack
Published on
ಚೌಕ
ಚಿಲಿ ದೇಶವು 2021ರಲ್ಲಿ ‘ನರಹಕ್ಕುಗಳ ಕಾನೂನು’ ಅನ್ನು (ಘಛ್ಠಿ್ಟ ್ಟಜಜಠಿಠ) ಜಾರಿಗೆ ತಂದಿದೆ. ಇಂಥ ಕಾನೂನನ್ನು ಅಳವಡಿಸಿಕೊಂಡ ಮೊದಲ ದೇಶ ಎಂಬ ಖ್ಯಾತಿಯ ಜೊತೆಗೆ ಇದೊಂದು ದುಡುಕಿನ ನಿರ್ಧಾರ ಎಂಬ ಕಟುವಿಮರ್ಶೆಗಳೂ ಕೇಳಿಬಂದವು. ಆದರೆ ಇಂಥ ಕಾನೂನನ್ನು ಅಳವಡಿಸಿಕೊಳ್ಳುವ ಅಗತ್ಯ ಚಿಲಿಗೇಕೆ ಬಂತು? ಅದರ ಹಿನ್ನೆಲೆಯನ್ನು ಅರಿಯೋಣ.

ಅಮೆರಿಕ ಮೂಲದ ಮನಶಾಸ್ತ್ರಜ್ಞ ಜಾಕ್ ಗಾಲ್ಲಂಟ್ 2011ರಲ್ಲಿ ತನ್ನ ಶಿಷ್ಯಂದಿರೊಂದಿಗೆ ಸೇರಿ ನಡೆಸಿದ ಪ್ರಯೋಗಗಳ ಕುರಿತ ಪ್ರಬಂಧವನ್ನು ಕೆಲ ವರ್ಷಗಳ ಹಿಂದೆ ಪ್ರಕಟಿಸಿದ. ವೈದ್ಯಕೀಯ ಕ್ಷೇತ್ರದಲ್ಲಿ ಲಭ್ಯವಿರುವ ಸರಳ ಸಾಧನಗಳನ್ನಿಟ್ಟುಕೊಂಡು ಮಾನವನ ಮನಸ್ಸನ್ನು ಓದಲು ನಡೆಸಿದ ಪ್ರಯತ್ನಗಳ ಸಾರವೇ ಆ ಪ್ರಬಂಧ. ಪ್ರಯೋಗಗಳಲ್ಲಿ ಜಾಕ್ ಕೆಲವು ಸ್ವಯಂಸೇವಕರನ್ನು ಎಂಆರ್​ಐ ಯಂತ್ರದೊಳಗೆ ಮಲಗಿಸಿ ಅಲ್ಲಿಂದಲೇ ಕೆಲವು ದೃಶ್ಯಾವಳಿಗಳನ್ನು ವೀಕ್ಷಿಸಲು ಅನುವುಮಾಡಿಕೊಟ್ಟಿದ್ದ. ಸ್ವಯಂಸೇವಕರು ಆ ದೃಶ್ಯಾವಳಿಗಳನ್ನು ನೋಡುತ್ತಿರುವಾಗ ಯಂತ್ರವು ಅವರ ಮಿದುಳಿನಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸೂಕ್ಷ ್ಮಾಗಿ ಗಮನಿಸಿ, ಅವುಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸಿ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮತ್ತೆ ಆ ಮೂಲ ದೃಶ್ಯಾವಳಿಗಳ ರೂಪಕ್ಕಿಳಿಸುವ ಯೋಜನೆ ಅದಾಗಿತ್ತು. ಪರಿಪೂರ್ಣವೆನ್ನಲಾಗದಿದ್ದರೂ ಇದರಲ್ಲಿ ಜಾಕ್ ತಕ್ಕಮಟ್ಟಿಗೆ ಯಶಸ್ವಿಯಾದ.

ಬ್ರೆಜಿಲ್​ನಲ್ಲಿ 2014ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಉದ್ಘಾಟಿಸಿದ್ದು 29 ವರ್ಷದ ಜೂಲಿಯಾನೊ ಪಿಂಟೊ ಎಂಬ ಅಲ್ಲಿನ ಯುವಕ. ಅದರಲ್ಲೇನು ವಿಶೇಷ ಅಂತೀರಾ? ಈ ಜೂಲಿಯಾನೊ ಒಬ್ಬ ಅಂಗವಿಕಲ ಯುವಕ. ಈತನ ಸೊಂಟದ ಕೆಳಗಿನ ಭಾಗವು ಪಾರ್ಶ್ವವಾಯುಗೆ ತುತ್ತಾಗಿ, ನಿಯಂತ್ರಣ ಕಳೆದುಕೊಂಡಿದ್ದ. ಅವನಿಗೆ ಅಂತರಿಕ್ಷಯಾನಿಯಂತೆ ವೇಷಭೂಷಣ ತೊಡಿಸಿ ಆ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ನಡೆದ ಸಾವೊಪಾಲೋ ಮೈದಾನಕ್ಕೆ ಕರೆತರಲಾಗಿತ್ತು. ಆತ ಹಾಕಿಕೊಂಡಿದ್ದ ಶಿರಸ್ತ್ರಾಣವು ಮಿದುಳಿನ ಸಂಕೇತಗಳನ್ನು ಓದುವ ಉಪಕರಣವಾಗಿತ್ತು. ಅದು ಆತನ ಮಿದುಳಿನ ಅಣತಿಯಂತೆ ಪೂರಕ ಸಂಜ್ಞೆಗಳನ್ನು ಆತನ ಕಾಲುಗಳಿಗೆ ತೊಡಿಸಿದ್ದ ಯಂತ್ರಗಳಿಗೆ ರವಾನಿಸುತ್ತಿತ್ತು. ಅವುಗಳ ಮೂಲಕ ಆತ ಮೈದಾನದಲ್ಲಿ ನಡೆದು ಬಂದದ್ದಷ್ಟೇ ಅಲ್ಲದೆ ಕಾಲ್ಚೆಂಡನ್ನು ಒದ್ದು ವಿಶ್ವಕಪ್​ಗೆ ಚಾಲನೆ ನೀಡಿದ್ದ. ಜೂಲಿಯಾನೊ ಈ ಕಾಲ್ಚಳಕದ ಹಿಂದೆ ಇಪ್ಪತೆôದು ದೇಶಗಳ ಸುಮಾರು ನೂರೈವತ್ತು ತಂತ್ರಜ್ಞರ ಶ್ರಮವಿದ್ದು, ಅದು ಅಂಗವಿಕಲರಿಗೆ ಆಸರೆಯಾಗುವ ‘ವಾಕ್ ಅಗೇನ್’ ಎಂಬ ತಂತ್ರಜ್ಞಾನ ಯೋಜನೆಯ ಭಾಗವಾಗಿತ್ತು.

ಇಯಾನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಕಂಪನಿ ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ತನ್ನ ಮಹತ್ವಾಕಾಂಕ್ಷಿ ಯೋಜನೆಯು ಮಾನವರ ಮೇಲೆ ಪ್ರಯೋಗಿಸಲು ಅನುಮತಿ ಸಿಕ್ಕಿರುವುದಾಗಿ ಘೊಷಿಸಿಕೊಂಡಿದೆ. ಪಾರ್ಶ್ವವಾಯು ಪೀಡಿತ ರೋಗಿಗಳ ನೆರವಿಗಾಗಿ 2016ರಲ್ಲಿ ಆರಂಭವಾದ ‘ನ್ಯೂರಾಲಿಂಕ್’ ಚಿಕ್ಕಗಾತ್ರದ ಮೈಕ್ರೋಚಿಪ್​ನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ತಲೆಬುರುಡೆಯ ಒಳಗೆ ಶಸ್ತ್ರಚಿಕಿತ್ಸೆ ಮೂಲಕ ಕೂರಿಸಲಾಗುತ್ತದೆ. ಮಿದುಳಿನಲ್ಲಿ ಜರುಗುತ್ತಿರುವ ಆಲೋಚನೆಗಳನ್ನು ಈ ಚಿಪ್ ಗ್ರಹಿಸಿ ಅದನ್ನು ವಿದ್ಯುತ್​ಸಂಕೇತವನ್ನಾಗಿ ಪರಿವರ್ತಿಸಿ ಅದಕ್ಕನುಸಾರವಾಗಿ ರೋಗಿಗೆ ಅಳವಡಿಸಲಾಗಿರುವ ಸಂಬಂಧಪಟ್ಟ ಉಪಕರಣಗಳನ್ನು ನಿರ್ವಹಿಸುವ ಮೂಲಕ ಸೂಕ್ತ ಪ್ರತಿಕ್ರಿಯೆಯನ್ನಾಗಿ ಪರಿವರ್ತಿಸುತ್ತದೆ. ಉದಾಹರಣೆಗೆ ರೋಗಿಯ ಮನಸ್ಸಿನಲ್ಲಿ ಓಡುವ ಯೋಚನೆ ಬಂದಲ್ಲಿ ಚಿಪ್ ಅದನ್ನು ಗ್ರಹಿಸಿ ರೋಗಿಯ ಕಾಲಿಗೆ ಅಳವಡಿಸಿರುವ ಯಾಂತ್ರಿಕ ಉಪಕರಣಕ್ಕೆ ಸಂದೇಶ ರವಾನಿಸುವ ಮೂಲಕ ಆತ ಓಡುವಂತೆ ಮಾಡುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದುಭಾಷಿಯ ಕೆಲಸ ಮಾಡುವ ಚಿಪ್​ನಲ್ಲಿ ಬಾಹ್ಯವಾಗಿ ಮಿದುಳಿಗೆ ಸಂಕೇತಗಳನ್ನು ರವಾನಿಸುವ ವ್ಯವಸ್ಥೆಯೂ ಇದೆ. ಅಂದರೆ ಮೈಕ್ರೋಚಿಪ್​ಗೆ

ಕ್ಯಾಮರಾ ಮೂಲಕ ಸಂದೇಶಗಳನ್ನು ಕಳಿಸುವ ಮೂಲಕ ದೃಷ್ಟಿಹೀನನಿಗೆ ಕಾಣುವ ಹಾಗೆ ಮಾಡಬಹುದು. ನ್ಯೂರಾಲಿಂಕ್ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಆಪ್ ಮೂಲಕ ನೇರವಾಗಿ ಕಂಪ್ಯೂಟರ್​ಗೆ ಸಂರ್ಪಸಿ ಕೇವಲ ಮಿದುಳಿನ ಆಲೋಚನೆಗಳ ಮೂಲಕ ಆ ಕಂಪ್ಯೂಟರಿನ ಮೌಸ್​ನ್ನು ಚಲಿಸಬಹುದು ಅಥವಾ ಮೊಬೈಲ್ ಆಪ್​ಗಳನ್ನು ಉಪಯೋಗಿಸಬಹುದು. ಈ ರೀತಿ ಕೈ-ಕಾಲುಗಳ ಮೇಲೆ ನಿಯಂತ್ರಣ ಕಳೆದುಕೊಂಡವರೂ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್​ಗಳನ್ನು ಬಳಸುವುದಕ್ಕೆ ಆಸರೆಯಾಗಬಲ್ಲದು ನ್ಯೂರಾಲಿಂಕ್. ಇಷ್ಟೇ ಅಲ್ಲ, ಮಿದುಳಿನ ಸಂಕೇತಗಳನ್ನು ಧ್ವನಿಯನ್ನಾಗಿ ಮಾರ್ಪಡಿಸಿ ಮೂಕನನ್ನೂ ಮಾತಾಡಿಸಲೂಬಹುದು.

ಕೇಳಲು ಇಷ್ಟೊಂದು ಹಿತಕರವೆನಿಸುವ ನ್ಯೂರಾಲಿಂಕ್ ಅಥವಾ ಈ ಬಗೆಯ ತಂತ್ರಜ್ಞಾನ ನಿಜಕ್ಕೂ ಸುರಕ್ಷಿತವೇ? ಈಗಾಗಲೇ ಈ ಯೋಜನೆಯ ಪರೀಕ್ಷೆಗಳು ಮಂಗ, ಹೆಗ್ಗಣಗಳಂಥ ಪ್ರಾಣಿಗಳ ಮೇಲೆ ನಡೆದು ಅವುಗಳಲ್ಲಿ ಹಲವು ಸಾವನ್ನಪ್ಪಿವೆ ಎಂಬ ಪುಕಾರುಗಳ ನಡುವೆಯೂ ಸಂಸ್ಥೆಯು ಇದನ್ನು ಅಲ್ಲಗಳೆದು ಮಾನವನ ಮೇಲೆ ಪ್ರಯೋಗ ಮಾಡಲು ಸಜ್ಜಾಗುತ್ತಿದೆ. ನಮ್ಮ ಮಿದುಳಿಗೇ ಕನ್ನ ಹಾಕಲು ಹೊರಟಿರುವ ಎಲ್ಲ ತಂತ್ರಜ್ಞರಲ್ಲಿ ಹೆಚ್ಚಿನವರು ಬಳಸುವುದು ಒಂದೇ ಸೂತ್ರ. ಮಾನವನಲ್ಲಿ ಮಿದುಳು ಮತ್ತು ಸ್ನಾಯುಗಳ ನಡುವಿನ ಸಂಪರ್ಕವನ್ನು ನರಮಂಡಲವು ನಿರ್ವಹಿಸುತ್ತದೆ. ಜೀವಶಾಸ್ತ್ರದಲ್ಲಿ ನರಗಳ ಮೂಲಕ ಹರಿಯುವ ವಿದ್ಯುತ್ ಸಂಕೇತಗಳು ಮೂಲತಃ ಆಯಾನುಗಳಾಗಿವೆ. ನರಗಳ ವಿಶೇಷತೆಯೆಂದರೆ ಇವುಗಳು ವಿದ್ಯುತ್ ತಂತಿಜಾಲದಂತೇ ನಿರಂತರವಾಗಿರದೆ ತುಂಡುತುಂಡಾಗಿರುತ್ತವೆ ಮತ್ತು ವಿದ್ಯುತ್ ಜಾಲದಲ್ಲಿಯ ತಂತಿಯ ಕೆಲಸವನ್ನು ಈ ನರಕೋಶ (ನ್ಯೂರಾನ್) ಮಾಡುತ್ತದೆ. ನ್ಯೂರಾನ್ ಮೂಲಕ ಹಾದು ಹೋಗುವ ಸಂಕೇತಗಳು ಒಂದು ನ್ಯೂರಾನ್​ನಿಂದ ಮತ್ತೊಂದಕ್ಕೆ ದಾಟಿಸಲು ಎರಡು ನ್ಯೂರಾನುಗಳ ನಡುವೆ ಸೇತುವೆಯಂತೇ ಇರುವ ಸಿನಾಪ್ಸ್​ಗಳು ನೆರವಾಗುತ್ತವೆ. ಒಂದು ನ್ಯೂರಾನಿನ ಮೂಲಕ ಸಾಗಿಬಂದ ಸಂಕೇತವನ್ನು ಅದರ ಬಾಲದ ತುದಿಯಲ್ಲಿರುವ ಸಿನಾಪ್ಸ್ ಗ್ರಹಿಸಿ ಅದನ್ನು ರಾಸಾಯನಿಕ ಸಂಕೇತವನ್ನಾಗಿ ಪರಿವರ್ತಿಸುತ್ತದೆ. ಈ ರಾಸಾಯನಿಕವನ್ನು ಗ್ರಹಿಸುವ ಪಕ್ಕದ ನ್ಯೂರಾನು ಅದನ್ನು ಪುನಃ ಆಯಾನು ಅಂದರೆ ವಿದ್ಯುತ್ ಸಂಕೇತವನ್ನಾಗಿ ಬದಲಿಸಿ ಮುಂದಿನ ನ್ಯೂರಾನ್ನಿಗೆ ಸಿನಾಪ್ಸನ ಸೇತುವೆಯ ನೆರವಿನಿಂದ ಸಾಗಿಸುತ್ತದೆ. ಚೆಂಡನ್ನು ದಾಟಿಸುವ ಆಟದಂತೆ ಸಂಕೇತವು ನ್ಯೂರಾನ್​ನಿಂದ ನ್ಯೂರಾನಿಗೆ ಜಿಗಿಯುತ್ತ ಹೋಗಿ ಅದರ ವಿಳಾಸಕ್ಕೆ ತಲುಪುತ್ತದೆ.

ಮಿದುಳನ್ನು ಓದುವ ಪ್ರಕ್ರಿಯೆಗೆ ಕೈ ಹಾಕಿರುವ ವಿಜ್ಞಾನಿಗಳು ಅವಲಂಬಿಸಿರುವುದು ಈ ಸಿನಾಪ್ಸ್ ಗಳಲ್ಲಿ ಜರುಗುವ ರಾಸಾಯನಿಕ ಬದಲಾವಣೆಯ ಮೇಲೆ. ತಲೆಬುರುಡೆಯೊಳಗೆ ಅಳವಡಿಸಲಾಗುವ ಸಂವೇದಕಗಳು ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಸೂಕ್ತ ಸಂದೇಶಗಳನ್ನಾಗಿ ಪರಿವರ್ತಿಸಿ ಕಂಪ್ಯೂಟರಿಗೆ ರವಾನಿಸುತ್ತವೆ. ನ್ಯೂರಾಲಿಂಕ್ ಸಹ ಅಭಿವೃದ್ಧಿಗೊಳಿಸುತ್ತಿರುವುದು ಈ ಮಿದುಳು ಮತ್ತು ಕಂಪ್ಯೂಟರ್ ಅಂತರ ಸಂಪರ್ಕ ಸಾಧನ-ಬ್ರೇನ್ ಕಂಪ್ಯೂಟರ್ ಇಂಟರ್​ಫೇಸ್ (ಬಿಸಿಐ) ಗಳನ್ನೇ.

ತಲೆಬುರುಡೆಯೊಳಗೆ ಸೆನ್ಸರ್​ಗಳನ್ನು ತೂರಿಸಿ ಅಂಗವಿಕಲರಿಗೆ ಬಣ್ಣದ ಕನಸುಗಳನ್ನು ತೋರಿಸುವ ಪ್ರಯತ್ನಗಳು ಒಂದೆಡೆ ಜಾರಿಯಲ್ಲಿದ್ದರೆ, ಇನ್ನೊಂದೆಡೆ ನಮ್ಮ ಮಿದುಳಿನ ಮೇಲೆ ನಿಗಾ ಇಡುವ, ಧರಿಸಬಹುದಾದಂಥ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಮಿದುಳಿನ ವಿದ್ಯುತ್ ಸಂಕೇತಗಳನ್ನು ಬಾಹ್ಯವಾಗಿ ಅಳೆದು ವಿಮಶಿಸುವ ಈ ತಂತ್ರಜ್ಞಾನವನ್ನು ಛ್ಝಿಛ್ಚಿಠ್ಟಿಟ ಛ್ಞಿ್ಚಟಜಚ್ಝಟಜ್ಟಚಟಜಢ ( ಉಉಎ) ಎಂದು ಹೇಳಲಾಗುತ್ತದೆ. ಇದು ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಒತ್ತಡದ ಪರಿಸ್ಥಿತಿಯಲ್ಲಿ ಆಟಗಾರರ ನಡವಳಿಕೆಯನ್ನು ಗಮನಿಸಲು ಹೆಚ್ಚು ಬಳಕೆಯಾಗುತ್ತಿದೆ.

ಮಿದುಳಿನ ಓದು ತಪ್ಪು ಕೈಯಲ್ಲಿ ಸಿಕ್ಕಿಕೊಂಡಲ್ಲಿ ದೊಡ್ಡ ಪೆಡಂಭೂತವಾಗಿ ನಿಲ್ಲಬಲ್ಲ ಎಲ್ಲ ಸಾಧ್ಯತೆಗಳಿವೆ. ಯುದ್ಧದಲ್ಲಿ ಶತ್ರುಪಡೆಯ ಕೈಯಲ್ಲಿ ಸಿಕ್ಕಿಕೊಂಡ ಯೋಧನ ಅಥವಾ ಅಪಹರಣಕಾರರ ಕೈಯಲ್ಲಿ ಬಂಧಿಯಾಗಿರುವ ದೇಶದ ಪ್ರತಿಷ್ಠಿತ ವಿಜ್ಞಾನಿಯ ಪರಿಸ್ಥಿತಿಯನ್ನೊಮ್ಮೆ ಊಹಿಸಿ. ಅವರ ಬಾಯಿ ಬಿಡಿಸಲು ಯಾರೂ ಹೆಚ್ಚು ಕಷ್ಟ ಪಡುವುದೇ ಬೇಕಿಲ್ಲ. ಮಿದುಳಿಗೆ ಕನ್ನ ಕೊರೆದು ಆ ಪುಟ್ಟ ಪಾತಾಳಗರಡಿಯನ್ನು ಇಳಿಸಿದರೆ ಸಾಕು, ಅಷ್ಟೇ ಖೇಲ್ ಖತಂ.

ಇಂಥ ಪರಿಸ್ಥಿತಿಯನ್ನು ಊಹಿಸಿಕೊಂಡೇ ಚಿಲಿ ಚೆಲ್ಲುಚೆಲ್ಲಾಗಿ ಆಡದೆ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಇದೀಗ ಮೆಕ್ಸಿಕೋ, ಸ್ಪೇನ್, ಆಸ್ಟ್ರೇಲಿಯಾದಂಥ ಕೆಲ ದೇಶಗಳಲ್ಲಿ ಈ ಚಿಲಿ ಮಾಡೆಲ್ ಅನ್ನು ಅಳವಡಿಸಿಕೊಳ್ಳಲು ಚರ್ಚೆ ನಡೆದಿದೆ. ಈ ಕ್ಷೇತ್ರದಲ್ಲಿ ಖ್ಯಾತನಾಮರು ಭಾರಿ ಹೂಡಿಕೆಗೆ ತಯಾರಿ ನಡೆಸಿರುವ ಹಿನ್ನೆಲೆಯಲ್ಲಿ ಈ ಆತಂಕ ಇನ್ನೂ ಹೆಚ್ಚಾಗಿದ್ದು ಆಗಸ್ಟ್​ನಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಈ ತಂತ್ರಜ್ಞಾನಕ್ಕೆ ಬೇಲಿ ಹಾಕುವ ಕುರಿತು ಚರ್ಚೆ ನಡೆದಿದೆ.

ಈಗಾಗಲೇ ಮೊಬೈಲ್ ಇಂಟರ್​ನೆಟ್ ಹಾವಳಿಯಲ್ಲಿ ನಮ್ಮ ಖಾಸಗಿ ಮಾಹಿತಿಗಳನ್ನೆಲ್ಲ ಊರಿಗೆ ಹಂಚಿ ನಡುಬೀದಿಯಲ್ಲಿ ನಿಂತಿದ್ದೇವೆ. ಇನ್ನೂ ಬುರುಡೆಗೇ ಕನ್ನ ಹಾಕಿಕೊಂಡರೆ ಇನ್ನೇನು ಕಾದಿದೆಯೋ?

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net