

ಒಮ್ಮೆ ಜೋಗ ಜಲಪಾತವನ್ನು ನೋಡಲು ಹೋಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರು ‘‘ಎಷ್ಟೊಂದು ಶಕ್ತಿ ಪೋಲಾಗುತ್ತಿದೆ!’’ ಎಂದು ಉದ್ಗರಿಸಿದ್ದರಂತೆ. ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದಲ್ಲ ಎಂಬ ಲೆಕ್ಕಾಚಾರ ಅವರಿಗಿತ್ತು. ಈಗ ಅಲ್ಲಲ್ಲಿ ಒಣ ಎಲೆಗಳನ್ನು ಜನರು ಬೆಂಕಿ ಹಾಕಿ ಸುಡುವುದನ್ನು ನೋಡಿದರೆ ಹಾಗೇ ಅನಿಸುತ್ತದೆ. ಒಣ ಎಲೆಗಳು ಕಸ ಎಂದು ಜನ ತಿಳಿದುಕೊಂಡಿದ್ದಾರೆ. ಆದರೆ ಅದು ಕಸದ ರೂಪದಲ್ಲಿರುವ ಚಿನ್ನ!
ಕೃಷಿ ಭೂಮಿಗೆ ಬಹಳ ಮುಖ್ಯವಾಗಿ ಬೇಕಾದದ್ದು ಸಾವಯವ ಇಂಗಾಲ. ನಮ್ಮಲ್ಲಿ ಎಷ್ಟು ಜನ ರೈತರಿಗೆ ಇಂತಹ ಒಂದು ಅಂಶ ಇದೆ ಎಂಬುದು ತಿಳಿದಿದೆ? ಮಣ್ಣು ಪರೀಕ್ಷೆ ಮಾಡಿಸಿ ರಾಸಾಯನಿಕ ಗೊಬ್ಬರಗಳನ್ನು ಹಾಕಲಾಗುತ್ತದೆ. ಕೀಟನಾಶಕಗಳನ್ನು ಹಾಗೂ ಇತರ ಅನೇಕ ಬಗೆಯ ವಿಷಗಳನ್ನು ಭೂಮಿಗೆ ಸುರಿಯಲಾಗುತ್ತದೆ. ಆದರೆ, ಅತಿ ಮುಖ್ಯವಾದ ಸಾವಯವ ಇಂಗಾಲದ ಕುರಿತಾಗಿ ಯಾರೂ ಹೇಳುವುದೇ ಇಲ್ಲ. ಕೃಷಿ ಸಂತ ದಿ. ಡಾ. ನಾರಾಯಣ ರೆಡ್ಡಿ ಅವರು ಸಾವಯವ ಇಂಗಾಲದ ಕುರಿತು ಹೀಗೆ ಹೇಳಿದ್ದಾರೆ. ‘‘ಈ ದೇಶದಲ್ಲಿ ಆಗಬೇಕಾಗಿರುವುದು ಇಷ್ಟೇ.
ರೈತರಿಗೆ ಯಾವ ಸಬ್ಸಿಡಿಯೂ ಬೇಡ, ಸಾಲಮನ್ನಾನೂ ಬೇಡ. ಈ ನಾಟಕಗಳನ್ನು ಬೇಕಾದಷ್ಟು ನೋಡಿ ಆಗಿದೆ. ರೈತರಿಗೆ ಬೇಕಾಗಿರುವುದು ಸಾವಯವ ಕಾರ್ಬನ್. ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳಲು ಬೇಕಾದ ಶಕ್ತಿಯನ್ನು ಈ ಸಾವಯವ ಕಾರ್ಬನ್ ಕೊಡುತ್ತದೆ. ಅದು ಶೇಕಡ ಎರಡರಷ್ಟು ಬಂದರೂ ಈ ದೇಶದ ರೈತರು ಉಳಿಯುತ್ತಾರೆ...’’ ಇದು ಡಾ. ರೆಡ್ಡಿಯವರ ಸ್ಪಷ್ಟ ನುಡಿ.
ಸಾವಯವ ಇಂಗಾಲ ಅರ್ಥಾತ್ ಸಾಯಿಲ್ ಕಾರ್ಬನ್, ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಗುಣವನ್ನು ಹೆಚ್ಚಿಸುತ್ತದೆ. ಮಣ್ಣಿನ ಸ್ಥಿರತೆ ಮತ್ತು ಫಲವತ್ತತೆಯನ್ನು ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದನ್ನು ತಿಳಿಯದೆ, ಸರಿಪಡಿಸದೆ ಎಷ್ಟು ಗೊಬ್ಬರ, ಕೀಟನಾಶಕ ಹಾಕಿದರೂ ಪ್ರಯೋಜನವಾಗುವುದಿಲ್ಲ.
ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಶೇಕಡ ಎರಡರಷ್ಟಾದರೂ ಇರಬೇಕು. ಆದರೆ, ನಮ್ಮಲ್ಲಿ ಇದು ಎಷ್ಟೋ ಕಡೆ 0.2, 0.1 ಇದೆ! ಇದನ್ನು ಉತ್ತಮಪಡಿಸುವುದು ಹೇಗೆ? ಡಾ. ನಾರಾಯಣ ರೆಡ್ಡಿಯವರೇ ಹೇಳುತ್ತಾರೆ... ‘‘ಮರಗಿಡಗಳಿಂದ ಉದುರಿದ ಎಲೆಗಳನ್ನು ಭೂಮಿಯ ಮೇಲೆಯೇ ಬಿಡಿ. ಇದು ಕೆಳಗೆ ಬಿದ್ದ ಹಣವನ್ನು ಎತ್ತಿ ಮತ್ತೆ ಜೇಬಿಗೆ ಹಾಕಿಕೊಂಡಂತೆ! ಮಣ್ಣಿನ ಸಾರವನ್ನು ಹೀರಿಕೊಂಡು ಬೆಳೆದ ಎಲೆಗಳನ್ನು, ಅವು ಉದುರಿದ ಮೇಲೆ ಮಣ್ಣಿನಲ್ಲೇ ಇರಲು ಬಿಡಬೇಕು ಅಷ್ಟೇ’’. ಇದರ ಮಹತ್ವವನ್ನು ಅರಿತಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಓ) ‘ಸಾಯಿಲ್ ಆರ್ಗ್ಯಾನಿಕ್ ಕಾರ್ಬನ್- ದ ಹಿಡನ್ ಪೊಟೆನ್ಷಿಯಲ್’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ಅದು ಜಾಲತಾಣಗಳಲ್ಲಿ ಜನರಿಗೆ ಫ್ರೀಯಾಗಿ ಸಿಗುವಂತೆ ಮಾಡಿದೆ. ಭಾರತ ಸರ್ಕಾರವೂ ಮಣ್ಣಿನ ಗುಣಮಟ್ಟದ ಸಂಶೋಧನೆಗೆ ಸಂಸ್ಥೆಗಳನ್ನೇ ಸ್ಥಾಪಿಸಿದೆ. ಭೋಪಾಲ್ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯಿಲ್ ಸೈನ್ಸ್ ಅಂಥ ಸಂಸ್ಥೆಗಳಲ್ಲೊಂದು.
ಇಷ್ಟು ಪ್ರಾಮುಖ್ಯತೆಯಿರುವ ಸಾವಯವ ಇಂಗಾಲವನ್ನು ಮಣ್ಣಿಗೆ ಸೇರಿಸಲು ನಾವು ಮಾಡಬೇಕಾಗಿರುವುದು ಇಷ್ಟೆ... ಗಿಡಮರಗಳಿಂದ ಉದುರಿಬಿದ್ದ ಎಲೆಗಳನ್ನು ಸುಡದೇ, ಮತ್ತೆ ಮಣ್ಣಿಗೆ ಸೇರುವಂತೆ ನೋಡಿಕೊಳ್ಳಬೇಕು. ಅಂದರೆ ಒಣಗಿದ ಎಲೆಗಳು ಕಸವಲ್ಲ, ಕಸವರ (ಚಿನ್ನ)! ಇದನ್ನು ನಮ್ಮ ತೋಟಗಾರಿಕೆ ಹಾಗೂ ಕೃಷಿ ವಿಭಾಗದವರು ಗಮನಿಸಿ ಸೂಕ್ತ ಕ್ರಮಗಳನ್ನು ಕೈಗೊಂಡು ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಎಲೆಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯ, ಉಸಿರಾಟದ ಕಾಯಿಲೆಗಳು ಹಾಗೂ ಹತ್ತಿರದ ಮರಗಳು ಸುಟ್ಟುಹೋಗುವಂತಹ, ಸಮೀಪದಲ್ಲಿ ಕಾಡಿದ್ದರೆ ಬೆಂಕಿ ಪಸರಿಸುವಂತಹ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಭೂಮಿಗೆ ಉದುರಿದ ಎಲೆ ಜೈವಿಕ ವಿಘಟನೆಗೊಳಗಾಗಿ ಅತ್ಯುತ್ತಮ ಪೋಷಕಾಂಶವಾಗುತ್ತದೆ. ಎಲೆಗಳನ್ನೆಲ್ಲ ಸಂಗ್ರಹಿಸಿ ಗೊಬ್ಬರ ತಯಾರಿಸಲು ಅವಕಾಶವಿಲ್ಲದಿದ್ದರೆ, ಅವುಗಳನ್ನು ಬಿದ್ದಲ್ಲೇ ಬಿಟ್ಟರೂ ಸಾಕು. ಆವರಣದ ಸೌಂದರ್ಯಕ್ಕೆ ಧಕ್ಕೆ ಎನಿಸಿದರೆ ಅದನ್ನು ಸೂಕ್ತವಾಗಿ ಹರಡಬಹುದು. ಉಳಿದ ಕಾರ್ಯವನ್ನು ಪ್ರಕೃತಿಯೇ ಮಾಡುತ್ತದೆ.
ಭೂಮಿಗೆ ಅತ್ಯಮೂಲ್ಯ ಪೋಷಕಾಂಶ ಕೊಡಬಹುದಾದ ಅದೆಷ್ಟೋ ಟನ್ ಒಣ ಎಲೆಗಳ ರಾಶಿಯನ್ನು ಜನರು ಕಸವೆಂದು ತಿಳಿದು ನಾಶ ಮಾಡುತ್ತಿದ್ದಾರೆ. ಪರಿಸರಕ್ಕೆ ಶಕ್ತಿ ಊಡಬಹುದಾದ ಒಣ ಎಲೆಗಳು ಇಂದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಅವು ನಿಧಾನವಾಗಿ ಕರಗಿ ಮುಂದೆ ಹುಟ್ಟುವ ಸಸ್ಯಕ್ಕೆ ಗೊಬ್ಬರವಾಗುವುದೇ ಒಂದು ಪ್ರಾಕೃತಿಕ ಸೌಂದರ್ಯ. ಒಣ ಎಲೆಗಳನ್ನು ಗೊಬ್ಬರವನ್ನಾಗಿಸಿ ಎಲ್ಲ ಉದ್ಯಾನಗಳಿಗೆ ಕಳಿಸುವ ವ್ಯವಸ್ಥೆಯನ್ನು ತೋಟಗಾರಿಕಾ ಇಲಾಖೆ ಮಾಡಬಹುದು. ಸಾಧ್ಯವಾಗದಿದ್ದರೆ ಆ ಎಲೆಗಳನ್ನು ಸಂಗ್ರಹಿಸುವುದೇ ಬೇಡ. ಅವು ಬಿದ್ದಲ್ಲಿಯೇ ಗೊಬ್ಬರವಾಗುತ್ತದೆ. ವ್ಯವಸಾಯದಲ್ಲಿ ತೊಡಗಿರುವವರಂತೂ ಈ ಅಮೂಲ್ಯ ಮಾಹಿತಿಯನ್ನು ಗಮನಿಸಲೇಬೇಕು.
(ಲೇಖಕರು ತರಬೇತಿ ಪಡೆದ ಸಂರಕ್ಷಣಾ ಶಿಕ್ಷಕ, ವಿಜ್ಞಾನ ಶಿಕ್ಷಕ ಹಾಗೂ ಸಂವಹನಗಾರ)