ಕ್ರೀಡಾ ರಂಗದಲ್ಲಿ ಕರ್ನಾಟಕದ ಮಹಿಳಾ ಕಣ್ಮಣಿಗಳು

women's player mar 20
Published on

ಕರ್ನಾಟಕ ಸಾಕಷ್ಟು ಪ್ರತಿಭಾಶಾಲಿ ಮಹಿಳೆಯರನ್ನು ಕ್ರೀಡಾಜಗತ್ತಿಗೆ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್​ನಲ್ಲಿ ದೊಡ್ಡ ಮಟ್ಟದ ಪ್ರಗತಿ ಕಾಣುತ್ತಿರುವ ಮಹಿಳಾ ತಂಡಕ್ಕೆ ಇಬ್ಬರು ನಾಯಕಿಯರನ್ನು ಕರ್ನಾಟಕ ನೀಡಿದೆ. ಶಾಂತಾ ರಂಗಸ್ವಾಮಿ ಹಾಗೂ ಮಮತಾ ಮಾಬೆನ್. ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊದಲ ಮಹಿಳೆಯಾಗಿಯೂ ಶಾಂತಾ ರಂಗಸ್ವಾಮಿ ಗುರುತಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಜನಿಸಿದ ಶಾಂತಾ ರಂಗಸ್ವಾಮಿ, ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಮೊದಲ ನಾಯಕಿ ಹಾಗೂ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕಿ ಎನಿಸಿದ್ದಾರೆ. 1993ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಬಳಿಕ ನಾಯಕಿಯೂ ಆದ ಮಮತಾ ಮಾಬೆನ್ ಈ ಸಾಲಿನಲ್ಲಿ ಇನ್ನೊಬ್ಬರು. ವೃತ್ತಿಜೀವನಕ್ಕೆ ಕಂಟಕವಾದ ಭುಜದ ಗಾಯದ ನಡುವೆಯೂ ಎಂಟು ವರ್ಷಗಳ ಬಳಿಕ ಕ್ರಿಕೆಟ್​ಗೆ ಮರಳಿ, ಯಶಸ್ಸು ಸಂಪಾದಿಸಿದ ತಾರೆ ಮಾಬೆನ್. ಇದೇ ಸಾಲಿನಲ್ಲಿ ಪ್ರಸ್ತುತ ವಿಶ್ವ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಕನ್ನಡದ ಇಬ್ಬರು ಕುವರಿಯರು ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್. ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ಭಾರತ ತಂಡದ ಪರ ಇವರು ಆಡಲಿದ್ದಾರೆ. ಅದರೊಂದಿಗೆ ಕರುಣಾ ಜೈನ್ ಹಾಗೂ ಭವಿಷ್ಯದ ಆಟಗಾರ್ತಿ ವಿಆರ್ ವನಿತಾರನ್ನೂ ಸಾಧಕ ಮಹಿಳೆಯರ ಪಟ್ಟಿಯಲ್ಲಿ ಹೆಸರಿಸಬಹುದು.

ಅಥ್ಲೆಟಿಕ್ಸ್​ನಲ್ಲಿ ಒಲಿಂಪಿಯನ್​ಗಳಾದ ಅಶ್ವಿನಿ ನಾಚಪ್ಪ, ಜೆಜೆ ಶೋಭಾ, ವಂದನಾ ಶಾನ್​ಭಾಗ್, ರೀತ್ ಅಬ್ರಾಹಂ, ಎಂಎಆರ್ ಪೂವಮ್ಮ, ಸಹನಾ ಕುಮಾರಿ, ಮೂಲತಃ ಚಿಕ್ಕಬಳ್ಳಾಪುರದವರಾದ ಒಲಿಂಪಿಯನ್ ಶೂಟರ್ ಸುಮಾ ಶಿರೂರು, ಪ್ಯಾರಾಲಿಂಪಿಯನ್ ಮಾಲತಿ ಹೊಳ್ಳ ಕೂಡ ನಮಗೆಲ್ಲ ಸ್ಪೂರ್ತಿಯಾಗಿ ನಿಲ್ಲುವಂಥ ಮಹಿಳಾ ಕ್ರೀಡಾ ತಾರೆಯರು. ಬ್ಯಾಡ್ಮಿಂಟನ್​ನಲ್ಲಿ ವಿಶ್ವದ ಅಗ್ರ ಡಬಲ್ಸ್ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಪೊನ್ನಪ್ಪ, 2011ರ ವಿಶ್ವ ಚಾಂಪಿಯನ್​ಷಿಪ್​ನ ಮಹಿಳಾ ಡಬಲ್ಸ್​ನಲ್ಲಿ ಕಂಚಿನ ಪದಕ ಗೆದ್ದ ತಾರೆ. ಕಬಡ್ಡಿಯಲ್ಲಿ ಮಮತಾ ಪೂಜಾರಿ, ತೇಜಸ್ವಿನಿ ಬಾಯಿ ಹಾಗೂ ಉಷಾ ರಾಣಿ ಹಲವು ಏಷ್ಯಾಡ್​ಗಳಲ್ಲಿ ತಂಡಕ್ಕೆ ಸ್ವರ್ಣ ಪದಕ ಗೆದ್ದುಕೊಡುವಲ್ಲಿ ಶ್ರಮಿಸಿದ್ದಾರೆ. 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್​ನ ಭಾರತೀಯ ಸ್ವಿಮ್ಮಿಂಗ್ ತಂಡದಲ್ಲಿದ್ದ ಏಕೈಕ ಸದಸ್ಯೆ ಕರ್ನಾಟಕದ ನಿಶಾ ಮಿಲ್ಲೆಟ್. ಸ್ವಿಮ್ಮಿಂಗ್​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರೂ, ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ 2004ರಲ್ಲಿ ಕ್ರೀಡೆಯನ್ನು ತೊರೆದರು. ಇನ್ನು ಗಾಲ್ಪ್ ಕ್ರೀಡೆಯಲ್ಲಿ ಗಮನಸೆಳೆಯುತ್ತಿರುವ ಶರ್ವಿುಳಾ ನಿಕೊಲೆಟ್ ಹಾಗೂ ಅದಿತಿ ಅಶೋಕ್ ಇಬ್ಬರೂ ಬೆಂಗಳೂರಿನವರು. ತಮ್ಮ 18ನೇ ವರ್ಷದಲ್ಲಿಯೇ 2009ರಲ್ಲಿ ಲೇಡೀಸ್ ಯುರೋಪಿಯನ್ ಟೂರ್​ಗೆ ಅರ್ಹತೆ ಪಡೆಯುವ ಮೂಲಕ ಅತಿ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಭಾರತೀಯ ಗಾಲ್ಪರ್ ಎನಿಸಿಕೊಂಡಿದ್ದರು. 2016ರ ಒಲಿಂಪಿಕ್ಸ್​ನಲ್ಲಿ ಸ್ಪರ್ಧೆ ಮಾಡಿದ್ದ ಅದಿತಿ ಅಶೋಕ್, 21ನೇ ವರ್ಷಕ್ಕೆ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ಸಂತೋಷ್ ನಾಯ್ಕ್​ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net