ಹೊಸ ವ್ಯವಸ್ಥೆಯ ಹೊಸ್ತಿಲಲ್ಲಿ ಜಗತ್ತು

ವಿಜಯವಾಣಿ (4)
Published on

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ದ್ವಿತೀಯ ಮಹಾಯುದ್ಧದ ತರುವಾಯ ಮಹಾಶಕ್ತಿಗಳಾದ ಅಮೆರಿಕಾ ಮತ್ತು ಸೋವಿಯತ್ ಯೂನಿಯನ್ ಎದುರುಬದುರಾಗಿ ನಿಂತು, ಆ ದಿನಗಳ ಇತರ ಪ್ರಮುಖ ದೇಶಗಳು ಅವುಗಳ ಹಿಂಬಾಲಕರಾಗಿ ಹಂಚಿಹೋದದ್ದರಿಂದ ಸೃಷ್ಟಿಯಾದ ‘ದ್ವಾಧ್ರುವೀಯ ಜಾಗತಿಕ ವ್ಯವಸ್ಥೆ’ (Bi-polar Global Order) 1990-91ರಲ್ಲಿ ಸೋವಿಯತ್ ಯೂನಿಯನ್ ಪತನಗೊಂಡು, ಅಮೆರಿಕಾ ಏಕೈಕ ಮಹಾಶಕ್ತಿಯಾಗಿ ಉಳಿದ ಕಾರಣ ‘ಏಕಧ್ರುವೀಯ ಜಾಗತಿಕ ವ್ಯವಸ್ಥೆ’

(Bi-polar Global Order) ಆಗಿ ಮಾರ್ಪಾಡುಗೊಂಡಿತು. ಆದರೆ ಅನತಿ ಕಾಲದಲ್ಲೇ ಚೀನಾ ದೊಡ್ಡ ಶಕ್ತಿಯಾಗಿ ಬೆಳೆದು, ಅದರ ಜತೆಗೆ ರಷ್ಯಾ, ಬ್ರಿಟನ್, ಜರ್ಮನಿ ಮತ್ತು ಭಾರತ ತಂತಮ್ಮ ಮಿತಿಯೊಳಗೆ ಸ್ವತಂತ್ರವಾಗಿ ಜಾಗತಿಕ ಹಾಗೂ ಪ್ರಾದೇಶಿಕ ಆಗುಹೋಗುಗಳನ್ನು ನಿರ್ದೇಶಿಸುವ ಮಟ್ಟಕ್ಕೆ ಬೆಳೆಯತೊಡಗಿದಾಗ ‘ಬಹುಧ್ರುವೀಯ ಜಾಗತಿಕ ವ್ಯವಸ್ಥೆ’ (Bi-polar Global Order) ಮೈದಳೆಯುತ್ತಿರಬಹುದಾದ ಸನ್ನಿವೇಶ ಉಂಟಾಗಿತ್ತು. ಆದರೆ ಅದು ಪೂರ್ಣರೂಪ ತಳೆಯುವ ಮೊದಲೇ ಈಗ ಸ್ಪಷ್ಟವಾಗಿ ಹೆಸರಿಸಲು ಸಾಧ್ಯವಿಲ್ಲದ ಹೊಸದೊಂದು ಜಾಗತಿಕ ವ್ಯವಸ್ಥೆ ವೇಗವಾಗಿ ಅನಾವರಣಗೊಳ್ಳತೊಡಗಿದೆ. ಸದ್ಯಕ್ಕಿದು ಅಮೆರಿಕಾ ಚಕ್ರಾಧಿಪತಿಯ ಜತೆಗೆ ರಷ್ಯಾ ಮತ್ತು ಭಾರತಗಳ ಮಾಂಡಳೀಕತ್ವದಲ್ಲಿ ಜಾಗತಿಕ ಮತ್ತು ಪ್ರಾದೇಶಿಕ ಆಗುಹೋಗುಗಳು ನಿರ್ದೇಶಿತವಾಗಬಹುದೆನ್ನುವ ಈ ವ್ಯವಸ್ಥೆಯನ್ನು ರೂಪಿಸುತ್ತಿರುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಹೀಗಾಗಿ ಈ ವ್ಯವಸ್ಥೆಗೆ ತನ್ನದೇ ಆದ ಮಿತಿಗಳಿವೆ. ಇದು ಪೂರ್ಣಪ್ರಮಾಣದಲ್ಲಿ ಸೃಷ್ಟಿಯಾಗಬಹುದು ಅಥವಾ ಅಮೆರಿಕಾ ರಾಜಕೀಯದಲ್ಲಿ ಹಾಗೂ ಪಶ್ಚಿಮದ ರಾಜಕಾರಣದಲ್ಲಿ ಅನಿರೀಕ್ಷಿತವಾಗಿ ಉಂಟಾಗಬಹುದಾದ ತಿರುವುಗಳಿಂದಾಗಿ ಮೊಳಕೆಯಲ್ಲೇ ಮುರುಟಿಹೋಗಬಹುದು ಅಥವಾ ಮಾರ್ಪಾಡುಗೊಳ್ಳಬಹುದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಹೊಸ ಜಾಗತಿಕ ವ್ಯವಸ್ಥೆಯ ಸ್ಥೂಲ ಚಿತ್ರಣವೊಂದನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸೋಣ. ಒಂದು ಕಾಲದಲ್ಲಿ ಸದೃಢವೆನಿಸಿದ್ದ ಪಶ್ಚಿಮದ ಆರ್ಥಿಕ-ಸೇನಾ ಒಕ್ಕೂಟ ಈಗ ಶಿಥಿಲಗೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಬಲಾಢ್ಯ ಸೇನಾಕೂಟ ನ್ಯಾಟೋ ಸ್ಥಾಪಕ ಸದಸ್ಯರಾಷ್ಟ್ರಗಳಲ್ಲೊಂದಾದ ಕೆನಡಾವನ್ನು ಅಮೆರಿಕಾದ ಐವತ್ತೊಂದನೆಯ ರಾಜ್ಯವಾಗಿಸಲು ಹಾಗೂ ಮತ್ತೊಂದು ಸ್ಥಾಪಕ ಸದಸ್ಯರಾಷ್ಟ್ರವಾದ ಡೆನ್ಮಾರ್ಕ್​ನ ಪರಮಾಧಿಕಾರಕ್ಕೆ ಒಳಪಟ್ಟಿರುವ ಗ್ರೀನ್​ಲ್ಯಾಂಡ್ ದ್ವೀಪವನ್ನು ಅಮೆರಿಕಾದ ಭಾಗವಾಗಿಸುವ ಕುರಿತಾಗಿ ಅಧ್ಯಕ್ಷ ಟ್ರಂಪ್, ಉಪಾಧ್ಯಕ್ಷ ವ್ಯಾನ್ಸ್ ಮತ್ತವರ ರಿಪಬ್ಲಿಕನ್ ಸಹಯೋಗಿಗಳು ಆಡುತ್ತಿರುವ ಮಾತುಗಳು ನ್ಯಾಟೋದಲ್ಲಿ ಕಂಪನಗಳನ್ನು ಉಂಟುಮಾಡಿವೆ ಮತ್ತು ಆ ಸಂಘಟನೆ ತನ್ನ ಭವಿಷ್ಯದ ಬಗ್ಗೆ ಗೊಂದಲಗೊಳ್ಳುವಂತೆ ಮಾಡುತ್ತಿವೆ.

94 ಲಕ್ಷ ಚ.ಕಿ.ಮೀ. ವಿಸ್ತಾರದೊಂದಿಗೆ (ಸರಿಸುಮಾರು ಭಾರತದ ಮೂರುಪಟ್ಟು!) ಜಗತ್ತಿನ ನಾಲ್ಕನೆಯ ಅತಿದೊಡ್ಡ ದೇಶವಾದ ಅಮೆರಿಕಾ ನೆಲದಾಹದ ಹುಚ್ಚಿಗೆ ಸಿಲುಕಿದೆಯೇ? ಹಾಗೇನೂ ಇಲ್ಲ. ಕೆನಡಾ ಮತ್ತು ಗ್ರೀನ್​ಲ್ಯಾಂಡ್​ಗಳನ್ನು ಟ್ರಂಪ್ ಬಯಸುತ್ತಿರುವುದು ಆ ದೇಶಗಳ ಅಗಾಧ ಪ್ರಾಕೃತಿಕ ಸಂಪತ್ತಿನ ಮೇಲೆ ಒಡೆತನ ಸ್ಥಾಪಿಸುವ ಉದ್ದೇಶದಿಂದಲ್ಲ. ಅವರಿಗೆ ಉತ್ತರದ ಕೆನಡಾ ಮತ್ತು ಈಶಾನ್ಯದ ಗ್ರೀನ್​ಲ್ಯಾಂಡ್ ಬೇಕಾಗಿರುವುದು ಇಂದು ವೇಗವಾಗಿ ಬದಲಾಗುತ್ತಿರುವ ಜಾಗತಿಕ ಭೂ-ಸಾಮರಿಕ ವಾಸ್ತವಗಳು ಒಡ್ಡಲಿರುವ ಗಂಭೀರ ಸವಾಲುಗಳನ್ನು ನಿಭಾಯಿಸಲು ಅಮೆರಿಕಾವನ್ನು ಸಜ್ಜುಗೊಳಿಸುವುದಕ್ಕಾಗಿ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಟ್ರಂಪ್​ರ ಕಣ್ಣಿರುವುದು ಕೆನಡಾ ಮತ್ತು ಗ್ರೀನ್​ಲ್ಯಾಂಡ್​ಗಳ ಆಚೆ ಇರುವ, ಉತ್ತರ ಧ್ರುವವನ್ನು ಸುತ್ತುವರಿದಿರುವ ಆರ್ಕ್​ಟಿಕ್ ಸಾಗರದ ಮೇಲೆ. ಅಲ್ಲಿಗೆ ನೇರ ಹಾಗೂ ನಿರ್ಬಾಧಿತ ಸಂಪರ್ಕ ಹೊಂದಬೇಕಾದರೆ ಅಮೆರಿಕಾಗೆ ಆ ಎರಡು ಪ್ರದೇಶಗಳು ಬೇಕು.

ಈ ಪ್ರಾರಂಭಿಕ ಮಾತುಗಳೊಂದಿಗೆ ವಿಷಯದ ಆಳಕ್ಕಿಳಿಯಲು ಪ್ರಯತ್ನಿಸೋಣ. ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಆರ್ಕ್​ಟಿಕ್ ಸಾಗರದ ಹಿಮ ಕರಗುತ್ತಿದೆ. ಹೀಗಾಗಿ ಇಲ್ಲಿ ನೌಕಾಯಾನ ಸಾಧ್ಯವಾಗಲಿದೆ. ಇದರೊಂದಿಗೆ ಈ ಪ್ರದೇಶದಲ್ಲಿರುವ ಅಗಾಧ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಳ್ಳುವ ಅವಕಾಶಗಳ ಬಾಗಿಲುಗಳೂ ತೆರೆದುಕೊಳ್ಳುತ್ತವೆ. ಅದಕ್ಕಾಗಿ ಇಲ್ಲಿ ಸೇನಾ ಚಟುವಟಿಕೆಗಳು ಹೆಚ್ಚಾಗುತ್ತವೆ! ಇದರಿಂದಾಗಿ ಜಾಗತಿಕ ಸುಭದ್ರತೆಗೆ ಎರಗಬಹುದಾದ ಅಪಾಯಗಳನ್ನೂ ಟ್ರಂಪ್ ಮುಂಗಾಣುತ್ತಿದ್ದಾರೆ. ಅಮೆರಿಕಾದ ಜಿಯಲಾಜಿಕಲ್ ಸರ್ವೆ (ಯುಎಸ್​ಜಿಎಸ್) ಸಂಸ್ಥೆಯೇ ಅಂದಾಜು ಮಾಡಿರುವ ಪ್ರಕಾರ ಆರ್ಕ್​ಟಿಕ್ ಸಾಗರ ಪ್ರದೇಶದಲ್ಲಿ 90 ಬಿಲಿಯನ್ ಬ್ಯಾರೆಲ್​ಗಳಷ್ಟು ಕಚ್ಚಾತೈಲನಿಕ್ಷೇಪ ಇದೆಯಂತೆ. ಇದು ಜಗತ್ತಿನಲ್ಲಿ ಲಭ್ಯವಿರುವ ತೈಲದ 22%! ಜತೆಗೆ 1,669 ಟ್ರಿಲಿಯನ್ ಘನ ಅಡಿಗಳಷ್ಟು ಅನಿಲ ಹಾಗೂ 44 ಬಿಲಿಯನ್ ಬ್ಯಾರೆಲ್​ಗಳಷ್ಟು ದ್ರವ ಅನಿಲ ಸಹ ಇದೆಯಂತೆ! ಇವೆಲ್ಲ ಪ್ರಾರಂಭಿಕ ಅಂದಾಜಷ್ಟೇ. ವಾಸ್ತವವಾಗಿ ಈ ಪ್ರಮಾಣ ಇನ್ನೂ ಅಧಿಕವಾಗಿರಬಹುದು. ಈ ಸಂಪನ್ನೂಲಗಳು ಈಗ ಯಾರ ಕೈಯಲ್ಲಿವೆ ಮತ್ತು ಮುಂದೆ ಯಾರ ಕೈ ಸೇರಲಿವೆ?

ಆರ್ಕ್​ಟಿಕ್ ಸಾಗರತೀರದ 53% ಅಂದರೆ ಅರ್ಧಕ್ಕಿಂತಲೂ ಹೆಚ್ಚು ರಷ್ಯಾದ್ದಾಗಿದೆ. ಉಳಿದ 47%ನಲ್ಲಿ ಅರ್ಧದಷ್ಟು ಭಾಗ ಅಟ್ಲಾಂಟಿಕ್ ಸಾಗರಕ್ಕೆ ಅಂಟಿಕೊಂಡಿದೆ. ಇನ್ನುಳಿದ ಅರ್ಧಭಾಗ ಅಂದರೆ ಒಟ್ಟಾರೆ ತೀರದ ಕಾಲುಭಾಗವನ್ನು ಅಮೆರಿಕಾದ ಅಲಾಸ್ಕಾ, ಕೆನಡಾದ ಉತ್ತರ ದ್ವೀಪಗಳು, ಗ್ರೀನ್​ಲ್ಯಾಂಡ್, ಐಸ್​ಲ್ಯಾಂಡ್ ಮತ್ತು ನಾರ್ವೆಗಳು ಹಂಚಿಕೊಳ್ಳುತ್ತವೆ. ಈ ವಿವರಗಳಿಂದ ತಿಳಿಯುವುದು ಆ ವಲಯದಲ್ಲಿ ರಷ್ಯಾ ಅನುಕೂಲಕರ ಸ್ಥಿತಿಯಲ್ಲಿದೆ ಎಂದು. ಆದರೆ ವಿಶಾಲ ರಷ್ಯಾದಲ್ಲಿ ಪ್ರಾಕೃತಿಕ ಸಂಪತ್ತು ಈಗಾಗಲೇ ಅಧಿಕವಾಗಿದೆ. ಅದಕ್ಕೇ ಗಿರಾಕಿಗಳನ್ನು ಹುಡುಕುವುದು ರಷ್ಯಾಗೆ ಕಷ್ಟವೇ ಆಗಿದೆ. ಈ ಪರಿಸ್ಥಿತಿಯಲ್ಲಿ ಆರ್ಕ್​ಟಿಕ್ ವಲಯದ ಪ್ರಾಕೃತಿಕ ಸಂಪತ್ತನ್ನು ಉಪಯೋಗಿಸುವ ಯಾವ ಆತುರವೂ ರಷ್ಯಾಗಿಲ್ಲ. ಜತೆಗೆ, ಇಪ್ಪತ್ತನಾಲ್ಕು ಸಾವಿರ ಕಿಲೋಮೀಟರ್​ಗಳಷ್ಟು ಅಗಾಧ ಉದ್ದದ ತನ್ನ ಆರ್ಕ್​ಟಿಕ್ ತೀರದುದ್ದಕ್ಕೂ ರಷ್ಯಾ ನಲವತ್ತಕ್ಕೂ ಹೆಚ್ಚಿನ ನೌಕಾಸೇನಾ, ವಾಯುಸೇನಾ, ಭೂಸೇನಾ ನೆಲೆಗಳನ್ನು ಹೊಂದಿದ್ದರೂ ಅವುಗಳನ್ನೇನೂ ಮಾಸ್ಕೋ ಇಂದು ನಿರ್ವಿುಸಲಿಲ್ಲ. ಅವೆಲ್ಲವೂ ಶೀತಲಸಮರ ಕಾಲದಲ್ಲೇ ಆ ದಿನಗಳ ಅಗತ್ಯಕ್ಕೆ ಅನುಗುಣವಾಗಿ ನಿರ್ಮಾಣಗೊಂಡಿದ್ದವು. ಹೀಗಾಗಿ ಅರ್ಕ್​ಟಿಕ್ ವಲಯದಲ್ಲಿ ಆತಂಕಪಡುವಷ್ಟು ಅಪಾಯವನ್ನು ರಷ್ಯಾದಿಂದ ಟ್ರಂಪ್ ನಿರೀಕ್ಷಿಸುತ್ತಿಲ್ಲ. ಅವರ ಆತಂಕದ ಮೂಲವೇ ಬೇರೆ.

ಯೂರೋಪ್​ನ ಮಾಂಟೆನೀಗ್ರೋ ಸಹ ಸೇರಿದಂತೆ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳಿಗೆ ವ್ಯರ್ಥಯೋಜನೆಗಳಿಗಾಗಿ ಅಧಿಕ ಬಡ್ಡಿದರದಲ್ಲಿ ಅಪಾರ ಪ್ರಮಾಣದ ಸಾಲ ನೀಡಿ ಅವುಗಳನ್ನು ತನ್ನ ಸಾಲಸಂಕೋಲೆಯಲ್ಲಿ ಸಿಲುಕಿಸಿಕೊಂಡು ಅವುಗಳ ಆಯಕಟ್ಟಿನ ಬಂದರುಗಳು ಮತ್ತು ವಿಮಾನನಿಲ್ದಾಣಗಳನ್ನು ಕಬಳಿಸಿ, ಆ ಬಡಪಾಯಿ ದೇಶಗಳ ಪ್ರಾಕೃತಿಕ ಸಂಪತ್ತಿನ ಮೇಲೆ ಹಿಡಿತ ಸ್ಥಾಪಿಸಿ, ಜಾಗತಿಕ ಪಿಡುಗಾಗಿ ಬೆಳೆದಿರುವ ಕಮ್ಯೂನಿಸ್ಟ್ ಚೀನಾದ ಕಾಕದೃಷ್ಟಿ ಈಗ ಆರ್ಕ್​ಟಿಕ್ ಸಾಗರದ ಮೇಲೆ ಬಿದ್ದಿದೆ! ಅಲ್ಲಿನ ಅಗಾಧ ತೈಲ ಮತ್ತು ಅನಿಲವನ್ನು ತನ್ನದಾಗಿಸಿಕೊಳ್ಳುವ ಇರಾದೆ ಬೀಜಿಂಗ್​ನದು. ಅದಕ್ಕಾಗಿಯೇ ಅದು ರಷ್ಯಾದ ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಈಗಾಗಲೇ ಹನ್ನೆರಡು ಬಿಲಿಯನ್ ಡಾಲರ್​ಗಳನ್ನು ಹೂಡಿದೆ. ಇದೆಲ್ಲವನ್ನೂ ಟ್ರಂಪ್ ಸಹಜವಾಗಿಯೇ ಅನುಮಾನದಿಂದ ನೋಡುತ್ತಿದ್ದಾರೆ. ಆರ್ಕ್​ಟಿಕ್ ವಲಯದ ಪ್ರಾಕೃತಿಕ ಸಂಪತ್ತು ಹಾಗೂ ರಷ್ಯನ್ ಸೇನಾ ನೆಲೆಗಳು ಚೀನಾದ ಕೈಗೆ ಬಿದ್ದರೆ ಆ ದುರುಳ ದೇಶದ ಜಗತ್​ಕಂಟಕ ಮನಸ್ಥಿತಿಗೆ ಇನ್ನೆಷ್ಟು ಉತ್ತೇಜನ ದೊರೆಯಬಹುದು ಎನ್ನುವುದು ಟ್ರಂಪ್​ರ ಆತಂಕ. ಅಂದರೆ ಆರ್ಕ್ ಟಿಕ್ ವಲಯದಲ್ಲಿನ ತನ್ನ ಪ್ರಾಕೃತಿಕ ಸಂಪತ್ತು ಹಾಗೂ ಸೇನಾಸೌಲಭ್ಯಗಳನ್ನು ಬಳಸಿಕೊಳ್ಳಲು ಚೀನಾಗೆ ರಷ್ಯಾ ಅವಕಾಶ ಮಾಡಿಕೊಡುತ್ತದೆಯೇ? ಟ್ರಂಪ್​ರ

ಆತಂಕಕ್ಕೆ ಆಧಾರವಿದೆಯೇ? ಕಳೆದ ನಾಲ್ಕು ವರ್ಷಗಳಲ್ಲಿ ಜೋ ಬೈಡೆನ್ ಆಡಳಿತ ಅನುಸರಿಸಿದ ಮತ್ತು ಪಶ್ಚಿಮ ಯೂರೋಪಿಯನ್ ದೇಶಗಳು ಈಗಲೂ ಅನುಸರಿಸುತ್ತಲೇ ಇರುವ ನೀತಿಗಳು ಟ್ರಂಪ್​ರ ಆತಂಕಗಳನ್ನು ನಿಜವೆನಿಸುತ್ತವೆ. ವಾಸ್ತವವಾಗಿ ಜಗತ್ತಿನ ಎರಡನೆಯ ಬೃಹತ್ ಅರ್ಥವ್ಯವಸ್ಥೆ ಮತ್ತು ಸೇನಾಶಕ್ತಿಯೂ ಆಗಿರುವ ಕಮ್ಯೂನಿಸ್ಟ್ ಚೀನಾದಿಂದ ಬರಬಹುದಾದ ಅಪಾಯದ ಅರಿವು ರಷ್ಯನ್ ಅಧ್ಯಕ್ಷ ವ್ಲಾದಿಮೀರ್ ಪುತಿನ್ ಅವರಿಗೆ ಇದ್ದೇ ಇತ್ತು. ಹೀಗಾಗಿಯೇ ಚಾಣಾಕ್ಷರಾದ ಅವರು ಚೀನಾವನ್ನು ದೂರದಲ್ಲೇ ಇಟ್ಟಿದ್ದರು. ಆದರೆ ಆ ನಿಲುವನ್ನು ಬದಲಿಸಿದ್ದು ಅಮೆರಿಕಾದ್ದೇ ಮಾಜಿ ಅಧ್ಯಕ್ಷ ಜೋ ಬೈಡೆನ್. ರಷ್ಯಾ ವಿರುದ್ಧ ಯೂಕ್ರೇನ್ ಅನ್ನು ಪ್ರಚೋದಿಸಿ ಅಧ್ಯಕ್ಷ ಪುತಿನ್​ರನ್ನು ಕೆರಳಿಸಿ ಅವರು ಬೇರೆ ದಾರಿ ಕಾಣದೇ ಯುದ್ಧಕ್ಕಿಳಿಯುವಂತೆ ಮಾಡಿದ್ದೇ ಬೈಡೆನ್. ಅವರ ಈ ಋಣಾತ್ಮಕ ನೀತಿನಿಲುವುಗಳಿಗೆ ಸಹಕಾರಿಯಾಗಿ ನಿಂತದ್ದು ಯೂರೋಪಿಯನ್ ಯೂನಿಯನ್.

ಅವೆಲ್ಲವುಗಳು ರಷ್ಯಾದ ಮೇಲೆ, ರಷ್ಯನ್ನರ ಮೇಲೆ ಮತ್ತು ರಷ್ಯನ್ ಸಂಸ್ಥೆಗಳ ಮೇಲೆ ವಿಧಿಸಿರುವ ದಿಗ್ಬಂಧನಗಳ ಸಂಖ್ಯೆ ಇಪ್ಪತ್ತನಾಲ್ಕು ಸಾವಿರವನ್ನು ದಾಟುತ್ತದೆ! ಇದರಿಂದಾಗಿ ರಷ್ಯಾದ ಅರ್ಥವ್ಯವಸ್ಥೆ ಘಾಸಿಗೊಳಗಾಗುತ್ತದೆ ಎಂದು ಸಹಜವಾಗಿಯೇ ಆತಂಕ ಪಟ್ಟ ಪುತಿನ್ ಅನಿವಾರ್ಯವಾಗಿ ಚೀನಾದ ಹತ್ತಿರ ಸರಿದರು. ಅಂದರೆ ಆರ್ಥಿಕವಾಗಿ ಜಗತ್ತಿಗೆ ಮತ್ತು ಅಮೆರಿಕಾದ ಹಿತಾಸಕ್ತಿಗಳಿಗೆ ಯಾವ ಚೀನಾದಿಂದ ಅಪಾಯವಿದೆಯೋ ಆ ಚೀನಾದ ಮಗ್ಗುಲಿಗೇ ರಷ್ಯಾವನ್ನು ದೂಡಿ ಚೀನಾಗೇ ಅನುಕೂಲವಾಗುವಂತೆ ಮಾಡಿದ್ದು ಬೈಡೆನ್. ಚೀನಾದಿಂದ ಬರಬಹುದಾದ ಅಪಾಯವನ್ನು ಮನಗಂಡೇ ಟ್ರಂಪ್ ಆ ದೇಶದ ಆರ್ಥಿಕ ರೆಕ್ಕೆಗಳನ್ನು ಕತ್ತರಿಸಿ ಆ ಮೂಲಕ ಅದರ ಸೇನಾ ಹುಮ್ಮಸ್ಸನ್ನೂ ತಗ್ಗಿಸಲು ಯೋಜನೆಗಳನ್ನು 2017-21ರ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ರೂಪಿಸಿ ಅನುಷ್ಠಾನಗೊಳಿಸಿದ್ದರು. ಅವು ಸಾಕಷ್ಟು ಫಲ ನೀಡಿದ್ದವು ಸಹ. ಆದರೆ ಇದೆಲ್ಲವನ್ನೂ ಹಾಳುಮಾಡಿ ರಷ್ಯಾವನ್ನು ಚೀನಾದ ತೆಕ್ಕೆಗೆ ದೂಡಿ ಷಿ ಜಿನ್​ಪಿಂಗ್​ರ ಕುಬುದ್ಧಿಗೆ ಉತ್ತೇಜನ ನೀಡಿದ್ದು ಬೈಡೆನ್. ಇದರಿಂದಾಗಿಯೇ ತಿಂಗಳ ಹಿಂದೆ ಯೂಕ್ರೇನ್ ಅಧ್ಯಕ್ಷ ವೊಲೊದಿಮೀರ್ ಝೆಲೆನ್​ಸ್ಕಿಯವರೊಂದಿಗಿನ ವಾಗ್ವಾದದಲ್ಲಿ ಬೈಡೆನ್​ರನ್ನು ‘ಸ್ಟುಪಿಡ್ ಪ್ರೆಸಿಡೆಂಟ್’ ಎಂದು ಟ್ರಂಪ್ ಮತ್ತೆಮತ್ತೆ ಬಣ್ಣಿಸಿದ್ದು.

ಈಗ ಬೈಡೆನ್ ಶ್ವೇತಭವನದಲ್ಲಿಲ್ಲ. ಆದರೆ ಅವರು ಹುಟ್ಟುಹಾಕಿದ ವಿಷಬೀಜ ಅತಿವೇಗವಾಗಿ ಮರವಾಗಿ ಬೆಳೆದುನಿಂತಿದೆ. ಯೂರೋಪಿಯನ್ ಯೂನಿಯನ್, ಮುಖ್ಯವಾಗಿ ಜರ್ಮನಿ, ಫ್ರಾನ್ಸ್, ಬ್ರಿಟನ್ ಮತ್ತು ಪೋಲ್ಯಾಂಡ್​ಗಳು ಯೂಕ್ರೇನ್ ಅನ್ನು ಇನ್ನೂ ಎತ್ತಿಕಟ್ಟುತ್ತಲೇ ಇವೆ ಮತ್ತು ಆ ಮೂಲಕ ಶಾಂತಿಯನ್ನು ದೂರದೂರಕ್ಕೇ ಅಟ್ಟುತ್ತಿವೆ. ಇದರಿಂದಾಗಿ ಚೀನಾದ ಲಾಭ ಹೆಚ್ಚಾಗುತ್ತಲೇ ಇದೆ. ರಷ್ಯಾದ ಆರ್ಕ್​ಟಿಕ್ ವಲಯದಲ್ಲಿ ಚೀನಾದ ಪ್ರಭಾವ ಇನ್ನಷ್ಟು ಏರುತ್ತ ಹೋಗಿ ಅದು ಟ್ರಂಪ್ ರ್ತಸುವಂತೆ ಜಗತ್ತಿನ ಸುಭದ್ರತೆಗೆ ಹಾಗೂ ಅಮೆರಿಕಾದ ಸುಭದ್ರತೆಗೆ ಧಕ್ಕೆ ತರುವ ಸಾಧ್ಯತೆ ಇಂದು ಹೆಚ್ಚಾಗಿದೆ. ಈ ಸನ್ನಿವೇಶದಲ್ಲಿ ಯೂಕ್ರೇನ್​ನಲ್ಲಿ ಯೂರೋಪಿಯನ್ ದೇಶಗಳ ಋಣಾತ್ಮಕ ರಾಜಕೀಯವನ್ನು ತೊಡೆದುಹಾಕುವುದು ಮತ್ತು ಆ ಮೂಲಕ ರಷ್ಯಾವನ್ನು ಚೀನಾದ ತೆಕ್ಕೆಯಿಂದ ದೂರ ತರುವುದು ಟ್ರಂಪ್​ರ ಯೋಜನೆ. ಈ ಯೋಜನೆಗೆ ತಮ್ಮ ಸಾಂಪ್ರದಾಯಿಕ ಯೂರೋಪಿಯನ್ ಸಹಯೋಗಿಗಳಿಗಿಂತಲೂ ರಷ್ಯಾ ಹೆಚ್ಚು ಸಹಕಾರಿ ಎಂದು ಟ್ರಂಪ್ ಗುರುತಿಸಿದ್ದಾರೆ. ಅವರ ಚೀನಾ ವಿರುದ್ಧದ ಕ್ರಮಗಳಿಗೆ ಯೂರೋಪಿಯನ್ ರಾಷ್ಟ್ರಗಳು ಸಹಕರಿಸುತ್ತಿಲ್ಲ, ಬದಲಾಗಿ ಚೀನಾದ ಜತೆ ವ್ಯಾಪಾರವನ್ನು ವೃದ್ಧಿಸಿಕೊಳ್ಳುತ್ತಲೇ ಹೋಗುತ್ತಿವೆ ಮತ್ತು ಆ ಮೂಲಕ ಚೀನಾಗೆ ಆರ್ಥಿಕವಾಗಿ ಭಾರಿ ಅನುಕೂಲ ಮಾಡಿಕೊಡುತ್ತಿವೆ.

ಜತೆಗೆ, ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್​ಗೆ ತಮ್ಮ ಸೇನೆಯನ್ನು ಕಳುಹಿಸುವ ಬಗ್ಗೆಯೂ ಫ್ರಾನ್ಸ್​ನಂತಹ ದೇಶಗಳು ಮಾತಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಆರ್ಕ್​ಟಿಕ್ ವಲಯದಲ್ಲೂ ಚೀನಾದ ಹಾಜರಿಯನ್ನು ತಡೆಯುವ ತಮ್ಮ ಯೋಜನೆಗೆ ಯೂರೋಪಿಯನ್ ರಾಷ್ಟ್ರಗಳ ಸಹಕಾರ ಇರುವುದಿಲ್ಲ ಎನ್ನುವುದು ಟ್ರಂಪ್​ರಿಗೆ ಅರ್ಥವಾಗಿಹೋಗಿದೆ. ಜತೆಗೆ, ಕೆನಡಾದ ಆಡಳಿತಾರೂಢ ಲಿಬರಲ್ ಪಕ್ಷ ಚೀನಾ ಜತೆ ರಹಸ್ಯ ಸಂಬಂಧ ಹೊಂದಿದೆ ಮತ್ತು ಕಳೆದೆರಡು ಚುನಾವಣೆಗಳಲ್ಲಿ ಅದರ ಆ ಪಕ್ಷದ ವಿಜಯದ ಹಿಂದೆ ಚೀನೀ ಹಣವಿದೆ ಎನ್ನುವ ವಿಷಯಗಳು ಹೇಳುವುದು ಚೀನಾ ವಿರುದ್ಧ ಲಿಬರಲ್ ಪಕ್ಷದ ಸರ್ಕಾರ ತಾನೂ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ, ಆ ವಿಷಯದಲ್ಲಿ ಅಮೆರಿಕಾಗೂ ಸಹಕಾರ ನೀಡುವುದಿಲ್ಲ ಎನ್ನವುದು. ಅದಕ್ಕಾಗಿಯೇ ಟ್ರಂಪ್ ಕೆನಡಾ ಜತೆ ಡೆನ್ಮಾರ್ಕ್​ನ ಪರಮಾಧಿಕಾರತ್ವದಲ್ಲಿರುವ ಗ್ರೀನ್​ಲ್ಯಾಂಡ್ ಅನ್ನೂ ಅಮೆರಿಕಾಗೆ ಸೇರಿಸಿಕೊಂಡು ಆರ್ಕ್​ಟಿಕ್ ಸಾಗರತೀರದ ಒಂದು ಭಾಗವನ್ನು ವಾಷಿಂಗ್​ಟನ್​ನ ಸೇನಾ ಹಿಡಿತಕ್ಕೆ ತರಲು ಹೊರಟಿರುವುದು. ಯಾಕೆಂದರೆ ಆರ್ಕ್​ಟಿಕ್ ವಲಯದಲ್ಲಿ ಚೀನಾದ ಪ್ರಭಾವ ವಿಸ್ತರಣೆಯಾಗಿ ಅದು ಈಗ ಪಶ್ಚಿಮ ಪೆಸಿಫೀಕ್ ವಲಯದಲ್ಲಿ ತೋರುತ್ತಿರುವ ದಬ್ಬಾಳಿಕೆಯ ನೀತಿಯನ್ನು ಉತ್ತರ ಧ್ರುವ ಪ್ರದೇಶದಲ್ಲೂ ಮಾಡಹೊರಟರೆ ಅದನ್ನು ತಡೆಯುವ ಸಾಮರ್ಥ್ಯ ಯೂರೋಪಿಯನ್ ರಾಷ್ಟ್ರಗಳಿಗೆ ಇರುವುದಿಲ್ಲ, ಮುಖ್ಯವಾಗಿ ಡೆನ್ಮಾರ್ಕ್​ಗಂತೂ

ಇರುವುದೇ ಇಲ್ಲ. ಪರಿಸ್ಥಿತಿ ಅಷ್ಟು ಹದಗೆಡುವ ಮೊದಲೇ ಕೆನಡಾ ಹಾಗೂ ಗ್ರೀನ್​ಲ್ಯಾಂಡ್ ಅನ್ನು ಅಮೆರಿಕಾದ ಸುಪರ್ದಿಗೆ ತೆಗೆದುಕೊಂಡು ಅಲ್ಲಿ ಅಗತ್ಯ ಸೌಲಭ್ಯಗಳನ್ನು ನಿರ್ವಿುಸುವುದು ಟ್ರಂಪ್​ರ ದೂರಗಾಮಿ ಯೋಜನೆ. ಹೀಗೆ ಆರ್ಕ್​ಟಿಕ್ ವಲಯಕ್ಕೆ ಹೆಚ್ಚಿನ ಗಮನ ನೀಡಬೇಕಾದ ಸಮಯ ಇದಾಗಿರುವುದರಿಂದ ಜಗತ್ತಿನ ಇತರ ಭಾಗಗಳತ್ತ ಅಗತ್ಯವಾದಷ್ಟು ಗಮನ ಹರಿಸುವುದು ತಮಗೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ವ್ಯವಹಾರಕುಶಲಿ ಟ್ರಂಪ್ ಅರಿತುಕೊಂಡಿದ್ದಾರೆ. ಹೀಗಾಗಿಯೇ ಪೂರ್ವ ಯೂರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ರಷ್ಯಾವನ್ನೂ, ದಕ್ಷಿಣ ಏಷ್ಯಾ ಹಾಗೂ ಹಿಂದೂ ಮಹಾಸಾಗರ ವಲಯದಲ್ಲಿ ಭಾರತವನ್ನೂ‘ಮಾಂಡಳಿಕ’ರಂತೆ ಗುರುತಿಸಿ ಆಯಾಯ ಪ್ರದೇಶಗಳಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡುವ ಜವಾಬ್ದಾರಿಯನ್ನು ಮಾಸ್ಕೋ ಮತ್ತು ನವದೆಹಲಿಗೆ ವಹಿಸಲು, ತಾವು ಅವುಗಳ ಬೆನ್ನಿಗೆ ನಿಲ್ಲಲು ಟ್ರಂಪ್ ಆಲೋಚಿಸುತ್ತಿರುವಂತಿದೆ. ಈ ವ್ಯವಸ್ಥೆಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳು ಹಾಗೂ ಪಶ್ಚಿಮ ಪೆಸಿಫೀಕ್ ವಲಯದಲ್ಲಿ ಜಪಾನ್ ಗಮನಾರ್ಹ ಪಾತ್ರ ವಹಿಸಬಹುದು ಎನ್ನವುದು ಖುದ್ದು ಟ್ರಂಪ್ ವಾಷಿಂಗ್​ಟನ್​ನಲ್ಲಿ ಮತ್ತು ಅವರ ಪಶ್ಚಿಮ ಏಷ್ಯಾ ದೂತ ಸ್ಟೀವ್ ವಿಟ್​ಕಾಫ್ ಫೆಬ್ರವರಿ ತಿಂಗಳಲ್ಲಿ ಪಶ್ಚಿಮ ಏಷ್ಯಾದ ವಿವಿಧ ರಾಜಧಾನಿಗಳಲ್ಲಿ ಹಾಗೂ ರಕ್ಷಣಾ ಕಾರ್ಯದರ್ಶಿ (ರಕ್ಷಾ ಮಂತ್ರಿ) ಪಿಟ್ ಹೆಗಾಸೆತ್ ಇದೇ ಮಾರ್ಚ್ 31ರಂದು ಟೋಕಿಯೋದಲ್ಲಿ ಆಡಿದ ಮಾತುಗಳಿಂದ ವೇದ್ಯವಾಗುತ್ತದೆ.

ತಮ್ಮದೇ ಆರ್ಥಿಕ ಸಂಕಷ್ಟಗಳಲ್ಲಿ ಮುಳುಗಿಹೋಗಿರುವ ಪಶ್ಚಿಮ ಯೂರೋಪಿಯನ್ ರಾಷ್ಟ್ರಗಳು ಟ್ರಂಪ್​ರ ಯೋಜನೆಗಳಿಗೆ ಪ್ರಬಲವಾಗಿ ಪ್ರತಿಭಟಿಸುವಂತೆ ಕಾಣುತ್ತಿಲ್ಲ. ಆದರೆ ಅವುಗಳ ಮನಸ್ಥಿತಿ ಬದಲಾಗಬಹುದಾದ ಸಾಧ್ಯತೆಯನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಜತೆಗೆ, ನಾಲ್ಕು ದಶಕಗಳ ಹಿಂದೆ ಚಾಣಾಕ್ಷ ಡೆಂಗ್ ಷಿಯಾವೊಪಿಂಗ್ ಹೇಳಿಕೊಟ್ಟ ‘Hide your strength, bide your time’ ಎಂಬ ಬುದ್ಧಿಮಾತನ್ನು ವೇದವಾಕ್ಯದಂತೆ ಪಾಲಿಸುತ್ತಿರುವ ಷಿ ಜಿನ್​ಪಿಂಗ್ ನಾಳೆ ಏನು ಮಾಡುತ್ತಾರೆಂದು ಈಗಲೇ ಊಹಿಸಲಾಗದು. ಇದೆಲ್ಲವೂ ಟ್ರಂಪ್​ರಿಗೆ ತಿಳಿಯದು ಎಂದಲ್ಲ. ಜಾಗತಿಕ ರಾಜಕಾರಣ ಎಂಬ ಚದುರಂಗದಾಟದಲ್ಲಿ ಎದುರಾಳಿಗಳ ಚಲನೆಗಳಿಗೆ ಆ ವ್ಯವಹಾರನಿಪುಣ ಹೇಗೆ ಪ್ರತಿಚಲನೆ ತೋಡುತ್ತಾರೆನ್ನುವುದರ ಮೇಲೆ ಹೊಸ ಜಾಗತಿಕ ವ್ಯವಸ್ಥೆ ರೂಪಗೊಳ್ಳುತ್ತದೆ. ಕಾದುನೋಡೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net