

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಪರಿಗಣಿಸದೆ, ನಿರ್ಲಕ್ಷಿಸಿ ರಾಜ್ಯ ಸರ್ಕಾರ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ಮಾಡಲು ಆದೇಶಿಸಿದೆ. ಇದರಿಂದ ಅತಿಥಿ ಉಪನ್ಯಾಸಕರ ಬದುಕು ಬೀದಿಪಾಲಾಗುವುದರಲ್ಲಿ ಸಂದೇಹವೇ ಇಲ್ಲ. ಕರೊನಾ ಮಹಾಮಾರಿಯ ಪರಿಣಾಮ ಕಳೆದ ಎರಡು ವರ್ಷಗಳಿಂದ ಅತಿಥಿ ಉಪನ್ಯಾಸಕರು ತಲ್ಲಣ, ಸಂಕಷ್ಟ ಎದುರಿಸುತ್ತಿದ್ದು, ಅತಂತ್ರದ ಜೀವನ ಸಾಗಿಸುತ್ತಿದ್ದಾರೆ. ಅನೇಕ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಕರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಮತ್ತೆ ಕೆಲವರು ಬೀದಿಬದಿಯಲ್ಲಿ ಹೋಟೆಲ್, ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇಂತಹ ಸಂಕಷ್ಟದ ನಡುವೆ ಅತಿಥಿ ಉಪನ್ಯಾಸಕರ ಸೇವೆಯನ್ನು ಪರಿಗಣಿಸಬೇಕಿತ್ತು. ಆದರೆ, ಸೇವಾಭದ್ರತೆ ನೀಡದಿರುವುದು ಮತ್ತು ನೇಮಕಾತಿಯ ಪ್ರಕ್ರಿಯೆಯಲ್ಲಿ ಯಾವುದೇ ಅನುಕಂಪ ತೋರದಿರುವುದು ಸರಿಯಾದ ಕ್ರಮವಲ್ಲ.
ಚಿಂತಕ ಬರಗೂರು ರಾಮಚಂದ್ರಪ್ಪ, ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ ಮುಂತಾದವರು ಹಾಗೂ ಅತಿಥಿ ಉಪನ್ಯಾಸಕರ ರಾಜ್ಯ ಒಕ್ಕೂಟವು ‘ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಕೆಲಸವನ್ನು ಪರಿಗಣಿಸಬೇಕು’ ಎಂದು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. 15-20 ವರ್ಷಗಳಿಂದ ಕಡಿಮೆ ಸಂಬಳದಲ್ಲಿಯೂ ವೃತ್ತಿಬದ್ಧತೆ ಮೆರೆದ, ಪಾಠ, ಬೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಸರ್ಕಾರ ಪರಿಗಣಿಸದೆ ಇರುವುದು ವಿಷಾದನೀಯ. ನಾಡಿನ ಶಿಕ್ಷಣ ಚಿಂತಕರು, ಕಾನೂನು ತಜ್ಞರು, ರಾಜಕೀಯ ಧುರೀಣರು ಮುಂತಾದವರು ಸೇರಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕಲ್ಪಿಸಿಕೊಡಲು ಪ್ರಯತ್ನಿಸಬೇಕು.
| ರಾಘವೇಂದ್ರ ಹಾರಣಗೇರಾ ಉಪನ್ಯಾಸಕರು, ಶಹಾಪುರ