

| ರಾಜೇಶ್ವರಿ ಹಿರೇಮಠ
ಮಾತೃತ್ವವು ಮಾನವ ಅಸ್ತಿತ್ವದ ಶುದ್ಧ ರೂಪ. ತಾಯಿಯಾಗಿರುವುದು ಎಂದರೆ ಪ್ರೀತಿ, ಸಂತೋಷ, ಜವಾಬ್ದಾರಿ ಮತ್ತು ನಿಸ್ವಾರ್ಥತೆಯ ಅಗಾಧ ಅನುಭವ. ತನಗಾಗಿ ಎಂದೂ ಬೇಡಿಕೊಳ್ಳದೆ ಮಕ್ಕಳಿಗಾಗಿ ಬೇಡಿಕೊಳ್ಳುವ ಸ್ವಾರ್ಥವಿಲ್ಲದ ಜೀವವೇ ತಾಯಿ. ತಾಯ್ತನ ಸುಲಭದ ಪ್ರಯಾಣವಲ್ಲ, ಆದರೆ ದುರದೃಷ್ಟವಶಾತ್ ಒಂಟಿ ತಾಯಂದಿರಿಗೆ ಇದು ಇನ್ನೂ ಕಷ್ಟಕರವಾಗಿರುವ ಕಠಿಣ ಪ್ರಯಾಸ. ಒಂಟಿ ತಾಯಂದಿರು ಅನೇಕ ಸಂಘರ್ಷಣೆ ಮತ್ತು ಮಾನಸಿಕ ಒತ್ತಡ ಎದುರಿಸುತ್ತಾರೆ.
ಒಂಟಿ ತಾಯಂದಿರ ಮಾನಸಿಕ ಶಕ್ತಿ ಮತ್ತು ಜೀವನವನ್ನು ಎದುರಿಸುವ ಗುಣ ವಿಸ್ಮಯಕಾರಿ ಮತ್ತು ಪ್ರಶಂಸನೀಯ. ಆದರೆ ಇವರು ತೀವ್ರ ಬಳಲಿಕೆ ಮತ್ತು ಭಾವನಾತ್ಮಕ ಒತ್ತಡ ಅನುಭವಿಸುತ್ತಾರೆ. ಒಂಟಿ ತಾಯಂದಿರಿಗೆ ಕುಟುಂಬದ ಬೆಂಬಲ ಇಲ್ಲದಿದ್ದರೆ ಇವರ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ.
ಸಮತೋಲನ: ಒಂಟಿ ತಾಯಂದಿರಿಗೆ ಕೆಲಸ ಮತ್ತು ವಿರಾಮ ಸಮಯದ ಸಮತೋಲನ ಕಷ್ಟ. ಏಕೆಂದರೆ ಇವರಿಗೆ ಮಕ್ಕಳು ಮತ್ತು ಮನೆ ಎರಡನ್ನೂ ನಿಭಾ ಯಿಸುವ ಜವಾಬ್ದಾರಿ ಇರುತ್ತದೆ. ಒಂಟಿತನ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಇದರ ನಡುವೆಯೂ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಜೀವನ ನಡೆಸಲು ಹೆಣಗಾಡುತ್ತಲೇ ಇರುತ್ತಾರೆ.
ಹಣಕಾಸಿನ ಕಾಳಜಿ: ಮಕ್ಕಳ ಬೇಡಿಕೆ ಪೂರೈಸಲು ಜೀವನವನ್ನೇ ಮುಡುಪಾಗಿಟ್ಟು ಕೆಲಸ ಮಾಡುತ್ತಾರೆ. ಮಕ್ಕಳ ಬೆಳವಣಿಗೆ ಸಂದರ್ಭದಲ್ಲಿ ಅವರೊಂದಿಗೆ ಇರಬೇಕಾದರೂ ಹೊರಗೆ ದುಡಿಯುವ ಅನಿವಾರ್ಯತೆ ಎದುರಾಗು ತ್ತದೆ. ಮನೆಕೆಲಸ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು, ನೌಕರಿ ಮಾಡುತ್ತ, ಮನೆ ಹೊರಗಿನ ಜವಾಬ್ದಾರಿ ಪೂರೈಸುವುದರಲ್ಲೇ ಸಮಯ ಕಳೆದು ಹೋಗುತ್ತದೆ.
ಬೆಂಬಲ ಅಗತ್ಯ: ಮಾತೃತ್ವದಲ್ಲಿ ಕಷ್ಟದ ಸಮಯದಲ್ಲಿ ಕುಟುಂಬ ಮತ್ತು ಸ್ನೇಹಿತರ ಮೇಲೆ ಅವಲಂಬಿತರಾಗಿರುವುದು ಅತ್ಯಗತ್ಯ. ಇಂತಹ ಸಮಯದಲ್ಲಿ ಸಹಾಯ ಬೇಕು ಎಂದು ಕೇಳುವುದು ತಪ್ಪಲ್ಲ. ಸ್ವಯಂ ಕಾಳಜಿ ಮುಖ್ಯ: ಮಾನಸಿಕ ಮತ್ತು ದೈಹಿಕ ಬಳಲಿಕೆ ಮತ್ತು ಆಯಾಸ ಕಡಿಮೆ ಮಾಡಿಕೊಳ್ಳಲು ಸ್ವಯಂ ಕಾಳಜಿಯ ಅಗತ್ಯವಿದೆ. ಪ್ರತಿದಿನ ಸಿಕ್ಕ ಸಮಯದಲ್ಲಿ ಪುಸ್ತಕ ಓದುವುದು, ಉತ್ತಮ ಸಿನಿಮಾ ನೋಡುವುದು, ಎಲ್ಲ ಸಮಸ್ಯೆಗಳನ್ನು ಬದಿಗಿರಿಸಿ ಸ್ನೇಹಿತರೊಂದಿಗೆ ಕಾಲ ಕಳೆಯುವುದು, ಧ್ಯಾನ, ಆಧ್ಯಾತ್ಮದಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಾನಸಿಕ ಶಾಂತತೆ ಮತ್ತು ಸ್ಥಿರತೆ ಕಾಪಾಡಿಕೊಳ್ಳಬಹುದು.
(ಹವ್ಯಾಸಿ ಬರಹಗಾರ್ತಿ)