

’ಇಂಗು- ತೆಂಗು ಇದ್ದರೆ ಕೊಂಗಿಯೂ ಅಡುಗೆ ಮಾಡ್ತಾಳೆ’ ಎಂಬುದು ಗ್ರಾಮೀಣ ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇರುವ ಒಂದು ಮಾತು. ಅಂದರೆ ತೆಂಗಿನಕಾಯಿ ಇದ್ದರೆ ಯಾರು ಬೇಕಾದರೂ ಆರಾಮಾಗಿ ಊಟಕ್ಕೆ ರೆಡಿ ಮಾಡಬಹುದು ಎಂದು ಇದರ ಸೂಚ್ಯಾರ್ಥ. ರುಚಿಗೆ ಇಂಗು ಇಂಬು ನೀಡುತ್ತದೆ.
ಅಡುಗೆ ಒಂದು ಕಲೆ. ದೂಸ್ರಾ ಮಾತೇ ಇಲ್ಲ. ಬಗೆ ಬಗೆ ಖಾದ್ಯ ಪದಾರ್ಥಗಳನ್ನು ತಯಾರಿಸಲು ಯಾರು ಹೆಚ್ಚು ಪರಿಣತರು? ಪುರುಷರೋ? ಮಹಿಳೆಯರೋ? ಸಾಮಾನ್ಯವಾಗಿ ಮಹಿಳೆಯರ ಪರವಾಗಿ ಹೆಚ್ಚು ಮತ ಬೀಳುತ್ತದೆ. ಆದರೆ, ಬದಲಾದ ಕಾಲದಲ್ಲಿ, ಪ್ರಪಂಚದ ಬೇರೆ ಬೇರೆ ಭಾಗದ ಆಹಾರ ವೈವಿಧ್ಯಗಳು ಸೀಮೋಲ್ಲಂಘನ ಮಾಡಿ, ಅನ್ಯ ದೇಶಗಳ ಮನೆಗಳ ಬಟ್ಟಲಲ್ಲಿ ಸ್ಥಾನ ಪಡೆದ ನಂತರ, ಫುಡ್ ವೆರೈಟಿಯನ್ನು ಜನರು ಇಷ್ಟಪಡತೊಡಗಿದ ಮೇಲೆ ಇಂತಹ ಹೋಟೆಲುಗಳ ಸಂಖ್ಯೆ ಹೆಚ್ಚಿ, ಬಾಣಸಿಗರಿಗೆ ಭರ್ಜರಿ ಬೇಡಿಕೆ ಬಂದು ಪುರುಷರು ಸಹ ಪಾಕ ಮೇಲಾಟದಲ್ಲಿ ತಾವೂ ಹಿಂದಿಲ್ಲ ಎಂದು ಸಾಬೀತುಪಡಿಸಿದರು. ’ಭೀಮಸೇನ ನಳ ಮಹಾರಾಜರು ಗಂಡಸರಲ್ಲವೆ’ ಎಂದು ತಮ್ಮ ಪಾಕ ನೈಪುಣ್ಯದ ಬಗ್ಗೆ ಹೆಮ್ಮೆಪಟ್ಟರು.
ಈಗೆಲ್ಲ ಬಾಣಸಿಗರ ಸಂಬಳ ಕಡಿಮೆ ಏನಿಲ್ಲ. ಅದರಲ್ಲೂ ಸ್ಟಾರ್ ಹೋಟೆಲುಗಳ ಬಾಣಸಿಗರು( ಷೆಫ್) ಲಕ್ಷದ ಲೆಕ್ಕದಲ್ಲಿ ವೇತನ ಪಡೆಯುತ್ತಾರೆ. ಹಳ್ಳಿ ಭಾಗಗಳಲ್ಲಿ ಕೂಡ ಅಡುಗೆ ಮಾಡುವವರಿಗೆ ಸಕತ್ ಡಿಮಾಂಡ್. ಜನರ ಉದರತೃಪ್ತಿಯಲ್ಲಿ ತನ್ನದೇ ರೀತಿಯಲ್ಲಿ ಪಾತ್ರ ನಿರ್ವಹಿಸುವ ಈ ವೃತ್ತಿಗೆ ಗೌರವದ ಸ್ಥಾನ ಪ್ರಾಪ್ತವಾದುದು ಉಚಿತವಾದ್ದೇ ಎನ್ನಬಹುದು.
ಇದೆಲ್ಲ ಏನೆ ಇರಲಿ, ಅಡುಗೆ ಕಲೆಯನ್ನು ಅರಿತ ನಮ್ಮ ಗೃಹಿಣಿಯರು ಕಸದಿಂದ ರಸ ತೆಗೆಯಬಲ್ಲ ಜಾಣೆಯರು ಎಂಬುದರಲ್ಲಿ ಅನುಮಾನವಿಲ್ಲ. ಹಳ್ಳಿ ಕಡೆ ಅನಿರೀಕ್ಷಿತ ವಾಗಿ ಅತಿಥಿಗಳ ಆಗಮನವಾಗುವುದು ಮಾಮೂಲು. ಆಗೆಲ್ಲ ಇರುವ ಸಾಮಗ್ರಿಯಲ್ಲೇ ಅಡುಗೆ ಮಾಡುವುದರಲ್ಲಿ ಹೆಣ್ಮಕ್ಕಳದು ಎತ್ತಿದ ಕೈ. ಆ ಮೂಲಕ ಅತಿಥಿಗೆ ರುಚಿರುಚಿ ಊಟದ ಸಂತೃಪ್ತಿ ಸಿಕ್ಕರೆ, ಯಜಮಾನನಿಗೆ ಮನೆಯ ಮರ್ಯಾದೆ ಉಳಿದ ಸಮಾಧಾನ.
ಮೇಲೆ ಉಲ್ಲೇಖಿಸಿದ ಉಕ್ತಿಯನ್ನು ‘ಹಲಸಿನ ಕಾಯಿ, ಮಾವಿನಕಾಯಿ ಇದ್ದರೆ ಯಾರು ಬೇಕಾದರೂ ಅಡುಗೆ ಮಾಡಬಹುದು’ ಎಂದು ಬದಲಿಸಿದರೆ ತಪ್ಪೇನೂ ಆಗದು. ಅಡುಗೆಯಲ್ಲಿ ಇವುಗಳ ಪಾತ್ರವೇ ಹಾಗಿದೆ. ಇವನ್ನು ಬಗೆ ಬಗೆಯಾಗಿ ಬಳಸುವುದನ್ನು ಕಲಿತಿದ್ದರೆ ಆ ಸೀಸನ್ನಿನಲ್ಲಿ ಬೇರೆ ತರಕಾರಿಯೇ ಬೇಡ ಎಂದರೆ ಅತಿಶಯೋಕ್ತಿಯೇನೂ ಆಗದು. ಅದರಲ್ಲೂ ಹಲಸಿನ ಕಾಯಿ ಒಂದು ಕೈ ಮೇಲೆ. ಇದರಿಂದ ಮಾಡಬಹುದಾದ ಪದಾರ್ಥಗಳ ಹೆಸರು ಕೇಳಿದರೇ ಬಾಯಲ್ಲಿ ನೀರೂರುತ್ತದೆ. ಹಾಗಾಗಿಲ್ಲ ಎಂದಾದಲ್ಲಿ ಅಂಥವರ ಬಾಯಿರುಚಿ ಕೆಟ್ಟಿದೆ ಎಂತಲೇ ಅರ್ಥ!
ಹಲಸಿನ ಹುಳಿ, ಸಾಂಬಾರು ಪಲ್ಯ, ಹಸಿ.... ಹೀಗೆ ಸಾಗುತ್ತದೆ ಈ ಪದಾರ್ಥಗಳ ಯಾದಿ. ಇದರ ಜತೆಗೆ ’ಕಳಚೆ ಹುಳಿ’ ಎಂಬುದೊಂದಿದೆ. ಆಹಾ! ಇದರ ರುಚಿಯ ಬಲ್ಲವರೆ ಬಲ್ಲರು. ಹಲಸಿನ ಕಾಯಿ ಬೆಳೆದಿದ್ದಷ್ಟು ರುಚಿ ಅಧಿಕ; ಸ್ವಲ್ಪ ಹಣ್ಣಾದರೂ ಒರಿಜಿನಲ್ ಟೇಸ್ಟ್ ಬರುವುದಿಲ್ಲ. ಹಲಸಿನ ಕಾಯಿ ಸೋಯಿಸಿ, ತೊಳೆ ಬಿಡಿಸಿ ಅದನ್ನು ಹೆಚ್ಚಿ ಉಪ್ಪು- ನೀರು ಹಾಕಿ ಬೇಯಿಸಬೇಕು. ನಂತರ ತೆಂಗಿನಕಾಯಿ, ಸ್ವಲ್ಪ ಸಾಸಿವೆ, ಅರಿಶಿನ , ಸೂಜಿಮೆಣಸು ಹಾಕಿ ನುಣ್ಣಗೆ ರುಬ್ಬಿ, ತೊಳೆ ಹಾಕಿ ಕುದಿಸಬೇಕು. ಬಳಿಕ ಸ್ವಲ್ಪ ಮಜ್ಜಿಗೆ ಸೇರಿಸಿ ಕರಿಬೇವು, ಇಂಗು, ಸಾಸಿವೆಯ ಒಗ್ಗರಣೆ ಹಾಕಬೇಕು. ಕಳಚೆ ಹುಳಿ ರೆಡಿ. ಊಟ ಮಾಡುವಾಗ ತಾಜಾ ನಿಂಬೆರಸವನ್ನು ಸೇರಿಸಿಕೊಂಡರೆ ರುಚಿ ಮತ್ತಷ್ಟು ಹೆಚ್ಚು. ಇದರ ಜತೆಗೆ ಹಲಸಿನ ಹಪ್ಪಳ ಇದ್ದರೆ ಅದರ ಮಜವೇ ಬೇರೆ. ಇಲ್ಲಿ ನೀಡಿದ ರೆಸಿಪಿ ಕೇಳಿದರೆ ಓ ಇಷ್ಟೇನಾ, ಯಾರು ಬೇಕಾದರೂ ಮಾಡಬಹುದು ಎನಿಸಿ ಟ್ರೖೆ ಮಾಡಲು ಹೋಗದಿರಿ. ಏಕೆಂದರೆ ಹೇಳುವುದು ಸುಲಭ. ಮತ್ತೊಮ್ಮೆ ಮಗದೊಮ್ಮೆ ಹಾಕಿಸಿಕೊಳ್ಳುವಂತೆ ರುಚಿಕಟ್ಟಾ ಗಿ ಮಾಡುವುದು ಎಲ್ಲರ ಕೈಲೂ ಆಗದ ಕೆಲಸ. ’ಡಯಟ್ ಮಾಡ್ತಿದಿನಿ. ಸ್ವಲ್ಪ ಬಡಿಸಿ’ ಎನ್ನುವವರು ಸಹ ಆ ವ್ರತ ಮುರಿಯದಿದ್ದರೆ ಹೇಳಿ! ಹೊರಗೆ ಮಳೆ ಸುರಿಯುತ್ತಿರುವಾಗ ಒಳಗೆ ಈ ಪದಾರ್ಥದ ರುಚಿ ಸವಿಯುವುದು ಒಂದು ಹಿತಾನುಭವ.
ಕಳಚೆ ಎಂಬುದು ಯಲ್ಲಾಪುರ ತಾಲೂಕಿನ ಒಂದು ಹಳ್ಳಿ. ಬಹುಶಃ ಅಲ್ಲಿ ಈ ಪದಾರ್ಥದ ಉಗಮವಾಗಿದ್ದರಿಂದ ಈ ಹೆಸರು ಬಂದಿರಬೇಕು. ಎರಡು ವರ್ಷಗಳ ಹಿಂದೆ ಭೂ ಕುಸಿತದಿಂದಾಗಿ ಬಹಳ ಸುದ್ದಿಯಾಗಿತ್ತು. ಅಷ್ಟಕ್ಕೂ ಆಯಾ ಪ್ರದೇಶಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವುದು ಹಾಗೂ ಖಾದ್ಯ ಅಥವಾ ತಿನಿಸು ತಯಾರಿಸುವುದು ನಾಡಿನ ಎಲ್ಲ ಕಡೆ ಕಂಡುಬರುವ ಪ್ರವೃತ್ತಿ.
ಇನ್ನು ಮಾವಿನಕಾಯಿ ಕೂಡ ಕಡಿಮೆ ಏನಲ್ಲ. ಇದರಿಂದ ಮಾಡಬಹುದಾದ ಪದಾರ್ಥಗಳ ಪಟ್ಟಿ ಸಹ ದೀರ್ಘವಿದೆ. ಮಾವಿನಕಾಯಿ ಚಟ್ನಿ , ಬಜ್ಜಿ, ಅಪ್ಪೆ ಹುಳಿ, ತಂಬುಳಿ, ಸಾಸ್ಮೆ, ಬೂತಗೊಜ್ಜು... ಹೀಗೆ ಸಾಗುತ್ತದೆ. ಮಾವಿನಕಾಯಿ ಉಪ್ಪಿನಕಾಯಿಯ ರುಚಿಯನ್ನಂತೂ ವರ್ಣಿಸಲಾಗದು!
ಸರಿಯಾಗಿ ಅಡುಗೆ ಗೊತ್ತಿರುವ ಮಹಿಳೆಯರು ಮನೆ ಸುತ್ತಮುತ್ತಲಿನ ತರಕಾರಿ ಹಾಗೂ ಸಸ್ಯಗಳನ್ನು ಬಳಸಿಕೊಂಡೇ ಉತ್ತಮವಾಗಿ ಅಡುಗೆ ಮಾಡಬಲ್ಲರು. ಹಣವೂ ಉಳಿತಾಯ; ಆರೋಗ್ಯಕ್ಕೂ ಉತ್ತಮ. ಈ ಪೈಕಿ ಅನೇಕವು ಆಯುರ್ವೆದ ಔಷಧ ಗಳಲ್ಲಿ ಸಹ ಬಳಕೆಯಾಗುವಂತಹವು. ಹೀಗೆ ಸ್ಥಳೀಯವಾಗಿ ಬೆಳೆಯುವುದು ಅಥವಾ ಬೆಳೆಯುವುದನ್ನು ಬಳಸುವುದು ಸಹ ಒಂದು ರೀತಿಯಲ್ಲಿ ಆತ್ಮನಿರ್ಭರವೇ.
ಆದರೆ, ಇಲ್ಲೊಂದು ವಿಷಾದದ ಆಯಾಮ ಸಹ ಇದೆ. ಮಾನವಕೃತ ಮತ್ತು ಪ್ರಾಕೃತಿಕ ಕಾರಣದಿಂದಾಗಿ, ಮನೆ ಆಸುಪಾಸಿನಲ್ಲಿ ತರಕಾರಿ, ಸೊಪ್ಪು ಬೆಳೆಯುವ ರೂಢಿ ಕಡಿಮೆಯಾಗುತ್ತಿದೆ. ಮೊದಲು ನಗರದಲ್ಲಿ ಕಂಡುಬರುತ್ತಿದ್ದ ತರಕಾರಿ ಸಂತೆ ಈಗ ಗ್ರಾಮೀಣಕ್ಕೂ ಹಬ್ಬಿದೆ. ಇದರಿಂದಾಗಿ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆ ಚಲನಶೀಲವಾಗುತ್ತದೆ ಎನ್ನುವುದು ಹೌದಾದರೂ, ರೂಢಿಗತ ಅಭ್ಯಾಸಗಳು ಹಿನ್ನಡೆ ಕಾಣುವುದನ್ನು ಸಹ ಇದು ಸಂಕೇತಿಸುತ್ತದೆ. ಹಿಂದೆಲ್ಲಾ ಹಳ್ಳಿ ಗಳಲ್ಲಿ ತರಕಾರಿ ಖರೀದಿ ಎಂಬುದೇ ಅಪರೂಪದ ವಿದ್ಯಮಾನವಾಗಿತ್ತು. ಈಗ ಮಾಮೂಲು ಎನಿಸಿದೆ.
ಇನ್ನೊಂದು ಕಡೆ, ಮಂಗನ ಹಾವಳಿಯಿಂದಾಗಿ ಏನು ಮಾಡಬೇಕೆಂದು ತಿಳಿಯದೆ ಕೃಷಿಕರು ಕಂಗಾಲಾಗಿದ್ದಾರೆ.
ಹಿಂದೆ ಅಡಕೆ ತೋಟದಲ್ಲಿ ಕಾಳುಮೆಣಸು, ಬಾಳೆಕಾಯಿ ಮತ್ತು ಏಲಕ್ಕಿ ಇವು ಉಪ ಬೆಳೆಗಳಾಗಿ ರೈತನಿಗೆ ಆದಾಯ ತರುತ್ತಿದ್ದವು. ಇವುಗಳಲ್ಲಿ ಕಾಳುಮೆಣಸು ಕಟ್ಟೆ ರೋಗದಿಂದ ಕ್ರಮೇಣ ಅವಸಾನ ಕಂಡರೆ, ಏಲಕ್ಕಿ ಮತ್ತು ಬಾಳೆಕಾಯಿ ಮಂಗನ ಕಾಟದಿಂದಾಗಿ ತೋಟದಿಂದ ಕಾಲ್ತೆಗೆಯಬೇಕಾಯಿತು. ಮೊದಲೆಲ್ಲ ಬಾಳೆಕಾಯಿಯನ್ನು ಮಾರುತ್ತಿದ್ದವರು ಈಗ ಕೊಂಡು ತರುವಂತಾಗಿದೆ. ಮನೆಯ ವಿಶೇಷಕ್ಕೆ ಏಲಕ್ಕಿ ಯನ್ನು ಪೇಟೆಯಿಂದ ತರಬೇಕಾದ ಸ್ಥಿತಿ. ವಾನರಗಳ ಹಾವಳಿ ಎಷ್ಟು ಹೆಚ್ಚಿದೆ ಎಂದರೆ ಮನೆ ಸುತ್ತ ಸಹ ಏನೂ ಬೆಳೆಯದಂತಾಗಿದೆ. ಮಳೆಗಾಲದಲ್ಲಿ ಮಲೆನಾಡ ಮನೆಗಳ ಎದುರು ಸೋಡಿಗೆ ಬಳ್ಳಿ ಸಾಮಾನ್ಯವಾಗಿತ್ತು. ಸುತ್ತಲಿನ ಹೂಗಿಡಗಳ ಜತೆಗೆ ವಿಧ ವಿಧ ತರಕಾರಿ ಬೆಳೆಯುವುದು ಮಾಮೂಲಾಗಿತ್ತು. ಈಗ ಬೀನ್ಸ್ ಬಳ್ಳಿಗಳು ಮಾಯ; ಹಳ್ಳಿ ಗೃಹಿಣಿಗೂ ಪೇಟೆ ತರಕಾರಿ ಅನಿವಾರ್ಯ. ತರಕಾರಿ ಕತೆ ಒತ್ತಟ್ಟಿಗಿರಲಿ, ಮನೆಯ ಹಂಚು ತೆಗೆದು ಒಳಗಿಳಿಯುವ ಮಂಗಗಳು ಮೀನಿನ ಸಾರನ್ನು ಸಹ ಇಡುತ್ತಿಲ್ಲ ಎಂಬುದು ಕೆಲವರ ಗೋಳು. ಏನೆಲ್ಲ ಉಪಾಯ ಮಾಡಿದರೂ ವಾನರ ಕಾಟ ತಡೆಯಲಾಗದೆ ರೈತರಿಗೆ ದೊಡ್ಡ ಪ್ರಮಾಣದ ಆದಾಯ ನಷ್ಟ ಆಗುತ್ತಿರುವುದು, ಮೊದಲೇ ಕೃಷಿ ಬಗ್ಗೆ ಆಸಕ್ತಿ ಕುಂದುತ್ತಿರುವಾಗ, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೃಷಿ ಕಾರ್ವಿುಕರ ಕೊರತೆ ನಡುವೆ ಈ ಸಮಸ್ಯೆ ರೈತರನ್ನು ಕಂಗೆಡಿಸಿರುವುದು ಸುಳ್ಳಲ್ಲ. ವಿಧಾನಸಭೆಯಲ್ಲಿಯೂ ಇದು ಮಾರ್ದನಿಸಿದೆ. ಆದರೆ ಪರಿಹಾರ ಮಾತ್ರ ಮರೀಚಿಕೆಯೇ. ಹಾಗೆ ನೋಡಿದರೆ, ಎಲ್ಲ ಕೃಷಿ ಬೆಳೆಗಳಿಗೂ ಒಂದಲ್ಲ ಒಂದು ಸಮಸ್ಯೆ ಇದ್ದುದೇ; ಸಮಸ್ಯೆಗಳ ಸ್ವರೂಪ ಮತ್ತು ಕಾರಣ ಮಾತ್ರ ಬೇರೆ ಬೇರೆ ಅಷ್ಟೇ. ಈ ನಡುವೆಯೂ ಕೃಷಿ ಕಾಯಕ ಬಿಡದವರಿಗೆ ಒಂದು ಸಲಾಮು ಸಲ್ಲಲೇಬೇಕು.
ಕಾಳು ಮೆಣಸಿಗೆ ಸಾಮಾನ್ಯವಾಗಿ ಐದಾರು ವರ್ಷಕ್ಕೆ ಒಮ್ಮೆ ದರ ಏರುತ್ತದೆ. ಈಗ ಕ್ವಿಂಟಾಲಿಗೆ 60,000 ರೂ.ದಷ್ಟು ದರ ಬಂದಿದೆ. ಆದರೆ ತೋಟದಲ್ಲಿ ್ಮೆಣಸಿನ ಬಳ್ಳಿಯೇ ಕಾಣುತ್ತಿಲ್ಲ. ಇದು ರೈತರ ಪರಿಸ್ಥಿತಿ.
ಇತರ ಜನವರ್ಗದಂತೆ ಕೃಷಿಕರ ಜೀವನ ಮಟ್ಟವೂ ಏರಿದೆ, ಖರ್ಚು ಜಾಸ್ತಿ ಯಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ವ್ಯಯಿಸಬೇಕಾಗಿದೆ. ಆದರೆ ಇದಕ್ಕೆ ತಕ್ಕಂತೆ ಆದಾಯ ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಇರುವುದಿಲ್ಲ. ಬೆಲೆ ಏರಿಳಿತ ಕೌಟುಂಬಿಕ ಬಜೆಟ್ಟನ್ನು ಏರುಪೇರು ಮಾಡುತ್ತದೆ.
ಮಂಗಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ’ಮಂಕಿ ಪಾಕ್’ ನಿರ್ಮಾಣ ಮಾಡುವ ಪ್ರಸ್ತಾಪ ಸಹ ಬಂದಿತ್ತು. ಇದಕ್ಕೆ ಪರ-ವಿರೋಧ ಸಹ ವ್ಯಕ್ತವಾಗಿದೆ. ಆದರೆ ಈ ಆಲೋಚನೆ ಕಾರ್ಯರೂಪಕ್ಕೆ ಬಂದಿಲ್ಲ.
ಕೊನೇ ಮಾತು: ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತ ಸಮೃದ್ಧ ಮಳೆಗಾಲವನ್ನು ಸೂಚಿಸುವಂತೆ ಕೆಲವೊಮ್ಮೆ ಅಪಾಯವನ್ನೂ ತಂದಿಡುತ್ತವೆ. ಕೃಷಿಗೆ ಅಪಾಯಗಳು ದೂರವಾಗಿ ಸಮೃದ್ಧವಾಗಿ ಬೆಳೆಯುವಂತಾಗಲಿ ಎಂಬುದು ಈ ಸಮಯದ ಪ್ರಾರ್ಥನೆ. ಏಕೆಂದರೆ ಕೃಷಿ ಕಾಣೆಯಾದರೆ ಮನುಕುಲವೂ ಕಾಣೆಯಾದಂತೆ!
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)