

ಪ್ರತಿಯೊಂದು ನಾಡಿಗೂ ಅದರ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯೇ ಜೀವಾಳ. ನಮ್ಮ ಕನ್ನಡ ನಾಡು ಕೂಡ ಇಂತಹ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ಊರು, ಬೆಟ್ಟಗಳು, ದೇವಾಲಯ ಒಂದು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಕಲೆಗಳು ನಮ್ಮ ಪೂರ್ವಜರ ಜೀವನದ ನಂಬಿಕೆ, ಪರಂಪರೆ, ಮೌಲ್ಯಗಳ ಕಥೆಗಳನ್ನು ಹೇಳುತ್ತವೆ. ಹಾಗಾಗಿ ಕನ್ನಡ ನಾಡು ಎಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ, ಬದಲಾಗಿ ಕನ್ನಡಿಗರ ಜೀವಂತಿಕೆಯ ದರ್ಶನವಾಗಿದೆ.
ಕನ್ನಡ ನಾಡಿನ ಇತಿಹಾಸವನ್ನು ಓದಿದರೆ, ಅದೊಂದು ಮಹಾಕಾವ್ಯದಂತೆ ಭಾಸವಾಗುತ್ತದೆ. ಅದೆಷ್ಟೋ ಧೀಮಂತ ನಾಯಕರ ಚರಿತ್ರೆ ನಮ್ಮ ಕಣ್ಣ ಮುಂದಿದೆ. ಚಾಲುಕ್ಯರು, ಹೊಯ್ಸಳರು, ಕದಂಬರು, ವಿಜಯನಗರ ಅರಸರು, ಮೈಸೂರು ಮಹಾರಾಜರು ಹೀಗೆ ಅನೇಕ ರಾಜ ವಂಶಸ್ಥರು, ಸಂಸ್ಥಾನಗಳು ನಮ್ಮ ನೆಲದ ಇತಿಹಾಸದ ವೈಭವ ಸಾರುತ್ತವೆ. ನಮ್ಮ ನಾಡಿನ ಸಂಸ್ಕೃತಿ, ಕಲಾವೈಭವವನ್ನು ಗಟ್ಟಿಗೊಳಿಸಿ ಸಿರಿವಂತಿಕೆಯನ್ನು ಹೆಚ್ಚಿಸಿವೆ. ವೈಭವದ ಇತಿಹಾಸದ ಹೆಜ್ಜೆಗುರುತುಗಳೇ ನಮ್ಮ ಪಾಲಿಗೆ ಹೆಮ್ಮೆ ಮೂಡಿಸುತ್ತದೆ. ಮೈಸೂರು ದಸರಾ ಪರಂಪರೆಯು ಕನ್ನಡ ನಾಡಿನ ವೈಭವದ ಒಂದು ಪ್ರತೀಕವಾಗಿದೆ. ಹೀಗೆ ನಾಡನ್ನಾಳಿದ ರಾಜರೆಲ್ಲ ಕೇವಲ ರಾಜ್ಯಭಾರ ಮಾಡಲಿಲ್ಲ. ಶತ್ರುಗಳೊಂದಿಗೆ ಹೋರಾಡಲು ಶಕ್ತಿ, ಸಾಮರ್ಥ್ಯ ಮಾತ್ರ ಹೆಚ್ಚಿಸಿಕೊಳ್ಳಲಿಲ್ಲ. ಬದಲಾಗಿ ಕಲೆ ಮತ್ತು ಸಾಹಿತ್ಯದ ಪೋ›ತ್ಸಾಹ ಹಾಗೂ ಪೋಷಣೆಯಲ್ಲೂ ಮಹತ್ತರ ಪಾತ್ರ ವಹಿಸಿದರು. ಬೇಲೂರಿನ ಶಿಲಾಬಾಲಿಕೆಗಳು, ಹಂಪಿಯ ವೈಭವದ ಶಿಲ್ಪ, ಸ್ಮಾರಕಗಳು, ಬಾದಾಮಿ ಗುಹೆಗಳು ಇವೆಲ್ಲ ಕೇವಲ ಕಲ್ಲಿನ ಕೆತ್ತನೆಗಳಲ್ಲ, ಕನ್ನಡ ನಾಡಿನ ವೈಭವನ್ನು ಸಾರುವ ಸೃಜನಶೀಲ ಕಲಾಪ್ರಾಕಾರಗಳಾಗಿವೆ.
ಶಿಲ್ಪಕಲೆಯ ಜೊತೆಗೆ ಸಾಹಿತ್ಯದ ಪೋಷಣೆಯೂ ಜೊತೆ-ಜೊತೆಯಾಗಿ ಸಾಗಿ ಬಂದಿದೆ. ಆದಿಕವಿ ಪಂಪ, ರನ್ನ, ಪೊನ್ನರ ಕಾವ್ಯದಿಂದ ಆರಂಭವಾಗಿ ಬಸವಣ್ಣನ ವಚನಗಳು, ಶಿಶುನಾಳ ಶರೀಫನ ಕವನಗಳು, ದಾಸರ ಕೀರ್ತನೆಗಳು, ಸರ್ವಜ್ಞನ ತ್ರಿಪದಿಗಳು ಹೀಗೆ ಎಲ್ಲವೂ ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ರಾಷ್ಟ್ರಕವಿ ಕುವೆಂಪು, ಶಿವರಾಮ ಕಾರಂತರು, ದ.ರಾ. ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ, ಭೈರಪ್ಪನವರಂತಹ ಹಿರಿಯ ಸಾಹಿತಿಗಳ ಕೊಡುಗೆ ಸ್ಮರಣೀಯವಾದುದು. ಕಾಲಕಾಲಕ್ಕೆ ಸಾಹಿತಿಗಳಿಂದ ಸಾಹಿತ್ಯ ಹೊಸ ದೃಷ್ಟಿ, ಹೊಳಪನ್ನು ಪಡೆದು, ಸಾಹಿತ್ಯ ಎಂದರೆ ಕೇವಲ ಅಕ್ಷರಗಳ ಸಾಲು ಅಲ್ಲ. ಅದನ್ನು ಜನರ ಹೃದಯದ ಧ್ವನಿಯನ್ನಾಗಿಸಿದ್ದಾರೆ.
ಕರಾವಳಿ, ಮಲೆನಾಡು, ಉತ್ತರಕನ್ನಡ, ಉತ್ತರಕರ್ನಾಟಕ, ಬಯಲು ಸೀಮೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಹೀಗೆ ವಿವಿಧ ಪ್ರದೇಶಗಳಲ್ಲಿ ಭಾಷಾ ವೈಶಿಷ್ಟ್ಯ, ಉಚ್ಚರಣೆ, ಸಂಸ್ಕೃತಿ, ಸಂಪ್ರದಾಯ, ಹಬ್ಬದ ಆಚರಣೆಗಳಲ್ಲಿ ಭಿನ್ನತೆ ಇದ್ದರೂ ಮನಸ್ಸು ಮಾತ್ರ ನಾವೆಲ್ಲ ಕನ್ನಡಿಗರು ಎಂದೇ ಹೇಳುತ್ತದೆ. ಮಾನವೀಯತೆ, ಆತ್ಮೀಯತೆ, ಸಹಜತೆ ಎಲ್ಲ ಕನ್ನಡಿಗರಲ್ಲೂ ಬೇರೂರಿದೆ. ಕನ್ನಡ ನಮ್ಮ ಜೀವನದ ಉಸಿರಾಗಿದೆ. ಜಾನಪದ ಕಲೆ-ಸಾಹಿತ್ಯಗಳು ಕನ್ನಡದ ಹೃದಯವಾಗಿದೆ. ಜನರ ಜನಜೀವನದ ಭಾಗವಾಗಿದೆ. ಯಕ್ಷಗಾನ, ಗೊಂಬೆಯಾಟ, ಜಾನಪದ ಹಾಡುಗಳು, ಲಾವಣಿ, ಗಾದೆ ಮಾತುಗಳು, ಸಂಕೀರ್ತನೆಗಳು, ಕಿನ್ನರಮೇಳ, ಸುಗ್ಗಿ ಕುಣಿತ, ಬೂತಕೋಲ, ಹುತ್ತರಿ, ಕರಗ ನೃತ್ಯ, ಹೀಗೆ ಅನೇಕ ಕಲಾ-ಸಾಹಿತ್ಯ ಪ್ರಾಕಾರಗಳು ಕನ್ನಡ ನಾಡನ್ನು ಸಮೃದ್ಧಗೊಳಿಸಿವೆ. ಈ ಕಲೆಯಲ್ಲಿರುವ ಸಾಹಿತ್ಯ, ಸಂಗೀತ ಮತ್ತು ನೃತ್ಯಗಳು ಜನರ ಬದುಕಿನ ಕಥೆಗಳನ್ನು ಹೇಳುತ್ತವೆ. ಹಳ್ಳಿಗಳ ಹೊಲಗದ್ದೆಗಳಲ್ಲಿ, ಹಬ್ಬಹರಿದಿನಗಳಲ್ಲಿ, ಜಾತ್ರೆಗಳಲ್ಲಿ, ನಮ್ಮ ಜನರು ತಮ್ಮ ಸಂತೋಷ, ದುಃಖ, ಭಕ್ತಿ ಮತ್ತು ಮುಂತಾದ ಭಾವನೆಗಳನ್ನು ಹಾಡು, ನೃತ್ಯ ಮತ್ತು ಕಲೆಗಳ ಮೂಲಕ ಅಭಿವ್ಯಕ್ತಪಡಿಸುತ್ತಾರೆ.
ಹೀಗೆ ಜಾನಪದ ಕಲೆಯ ಸೊಗಡು ನಮ್ಮ ಮಣ್ಣಿನ ಪರಿಮಳವನ್ನು ಉಳಿಸುತ್ತದೆ. ನಾಡಹಬ್ಬ ದಸರಾ, ಜನಪದ ಕ್ರೀಡೆ ಕಂಬಳ, ಹೋಳಿಹಬ್ಬ ಮುಂತಾದ ಸಂಸ್ಕೃತಿ-ಕಲಾ ಸ್ವರೂಪವೇ ನಮ್ಮ ಕನ್ನಡನಾಡಿನ ನಾಡಿ ಮಿಡಿತ ಎಂದರೆ ಅತಿಶಯವಲ್ಲ. ಕನ್ನಡ ಭಾಷೆಗೆ 1500 ವರ್ಷಗಳ ಲಿಖಿತ ಇತಿಹಾಸವಿದೆ. ಇಂತಹ ಶ್ರೀಮಂತ ಕನ್ನಡ ನುಡಿ ಇತರ ಭಾಷೆಗಳ ಅಬ್ಬರದ ನಡುವೆ ನಲುಗುತ್ತಿದೆ ಎಂದೆನಿಸುತ್ತದೆ. ಶತಮಾನ ಕಂಡ ಕನ್ನಡ ಶಾಲೆಗಳು ಮರೆಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿರುತ್ತವೆ. ಶ್ರೀ ಕ್ಷೇತ್ರಕ್ಕೆ ಬಂದ ಭಕ್ತರೊಬ್ಬರು ಕನ್ನಡ ಶಾಲೆಗಳ ಬಗ್ಗೆ ಮಾತನಾಡುತ್ತ ತಮ್ಮ ಅನುಭವವನ್ನು ಹಂಚಿಕೊಂಡರು. ಅವರ ಹಳ್ಳಿ ಮಧ್ಯದಲ್ಲಿದ್ದ ಶತಮಾನದುದ್ದಕ್ಕೂ ಅನೇಕರಿಗೆ ವಿದ್ಯಾರ್ಜನೆ ನೀಡಿದ ಶಾಲೆ ಬಾಗಿಲು ಮುಚ್ಚಿದೆ. ಶಾಲೆಯ ಗೋಡೆ ಬಿರುಕು ಬಿಟ್ಟಿದೆ, ಹೆಂಚುಗಳು ನೆಲಕ್ಕುದುರಿವೆ. ಘಂಟೆ ಮೌನವಾಗಿದೆ. ಅದೆಷ್ಟೋ ಮಕ್ಕಳ ಬದುಕಿಗೆ ಮೆಟ್ಟಿಲಾದ ಶಾಲಾ ಮೆಟ್ಟಿಲು ಹುಲ್ಲು, ಕಳೆ ತುಂಬಿ ಕಾಣದಾಗಿದೆ. ಅನೇಕ ಪೀಳಿಗೆಯವರು ಆ ಶಾಲೆಯಲ್ಲಿ ಅಕ್ಷರಜ್ಞಾನ ಪಡೆದು ಉನ್ನತ ಹುದ್ದೆ ಅಲಂಕರಿಸಿ ಬದುಕು ಬೆಳಗಿಸಿಕೊಂಡಿದ್ದಾರೆ. ಆದರೆ ಇಂದು ಮಕ್ಕಳಿಲ್ಲದ ಕಾರಣ ಶಾಲೆ ಮುಚ್ಚಿ ಕತ್ತಲ ಕೂಪದಲ್ಲಿ ಮಾಯವಾಗಿದೆ ಎನ್ನುತ್ತ ಗದ್ಗದಿತರಾದರು.
ಹೌದು ಅದೆಷ್ಟೋ ಮಕ್ಕಳ ಕನಸನ್ನು ನನಸಾಗಿಸಿದ ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿ. ಹೀಗೆ ಅನೇಕ ಕಡೆ ಕನ್ನಡ ಶಾಲೆಗಳು ಮುಚ್ಚಿವೆ. ಕೆಲವಡೆ ಮಕ್ಕಳಿದ್ದರೂ ಅಧ್ಯಾಪಕರಿಲ್ಲದೆ ಮುಚ್ಚುವ ಹಂತದಲ್ಲಿವೆ. ಕಾರಣ ಅನೇಕ ಇರಬಹುದು. ಮಕ್ಕಳು ಇಂಗ್ಲಿಷ್ ಕಲಿಯಬೇಕು ಎಂದು ಪಾಲಕರು ಚಿತ್ತ ಹರಿಸಿರುವುದು, ಇಂಗ್ಲಿಷ್ ಶಾಲೆಗಳ ಆಕರ್ಷಣೆ, ಇಂಗ್ಲಿಷ್ ಕಲಿತರೆ ಮಾತ್ರ ಭವಿಷ್ಯವಿದೆ ಎಂಬ ಮನಸ್ಥಿತಿ, ಸೌಲಭ್ಯಗಳ ಕೊರತೆ, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಹೀಗೆ ಅನೇಕ ಕಾರಣಗಳಿಂದ ಕನ್ನಡ ಶಾಲೆಗಳ ಬಾಗಿಲು ಮುಚ್ಚುತ್ತಿವೆ. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿಯೇ ಕಳೆದ 30 ವರ್ಷಗಳ ಹಿಂದೆ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ’ ಜಾರಿಗೆ ತಂದೆವು. ಈ ಮೂಲಕ ಶಾಲಾ ಶಿಕ್ಷಣಮಟ್ಟ ಸುಧಾರಣೆ ಹಾಗೂ ಕಲಿಕಾ ವಾತಾವರಣ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಶಾಲಾ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಶೌಚಗೃಹ, ಆಟದ ಮೈದಾನ, ಶಾಲಾ ಆವರಣ, ವಿದ್ಯುದ್ಧೀಕರಣ, ಕುಡಿಯುವ ನೀರು, ರಂಗಮಂದಿರ, ಶಾಲಾ ಕಟ್ಟಡಗಳ ದುರಸ್ತಿ, ಡೆಸ್ಕ್-ಬೆಂಚ್ಗಳ ಒದಗಣೆ ಮೊದಲಾದವುಗಳಿಗೆ ಶ್ರೀಕ್ಷೇತ್ರದಿಂದ ಸಹಾಯಧನ ನೀಡಲಾಗುತ್ತಿದೆ. ಶಿಕ್ಷಕರ ಕೊರತೆ ಇರುವ ಸರ್ಕಾರಿ ಹಾಗೂ ಆಯ್ದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂ ಸೇವಕ ಶಿಕ್ಷಕ/ಶಿಕ್ಷಕಿಯರನ್ನು ಒದಗಿಸಿ, ಸಂಸ್ಥೆಯ ವತಿಯಿಂದ ನೆರವು ನೀಡುತ್ತ ಬರಲಾಗಿದೆ.
ಈ ಶಿಕ್ಷಕರ ಸೇವೆಯು ಗ್ರಾಮೀಣ ಶಾಲಾ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗುವುದನ್ನು ತಡೆಗಟ್ಟಲು ಸಹಕಾರಿಯಾಗುತ್ತಿದೆ. ಈ ಶಿಕ್ಷಕರಿಗೆ ಮಾಸಿಕ ಗೌರವಧನವನ್ನು ಶ್ರೀ ಕ್ಷೇತ್ರದ ವತಿಯಿಂದಲೇ ಭರಿಸಲಾಗುತ್ತಿದೆ. ಇದು ಕನ್ನಡ ಶಾಲೆಗಳ ಅಭಿವೃದ್ಧಿಯಾದರೆ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನವನ್ನು ಕಳೆದ ಒಂಭತ್ತು ದಶಕಗಳಿಂದ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ವಿವಿಧ ಪ್ರಕಟಣೆಗಳು, ಪುಸ್ತಕಗಳ ಪ್ರಕಾಶನಗಳು, ಹಸ್ತಪ್ರತಿ-ತಾಡೋಲೆ ಮುಂತಾದ ಗ್ರಂಥಗಳ ಸಂರಕ್ಷಣೆ ಕೂಡ ಶ್ರೀ ಕ್ಷೇತ್ರ ಮೂಲಕ ನಡೆಯುತ್ತಿದೆ. ಹೀಗೆ ಸಾಹಿತ್ಯಕ್ಕೆ ಶ್ರೀ ಕ್ಷೇತ್ರ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಒಂದೆಡೆ ಕನ್ನಡ ಉಳಿಸುವ ನಿಟ್ಟಿನಲ್ಲಿ ಹೋರಾಟವಾದರೆ ಮತ್ತೊಂದೆಡೆ ಕನ್ನಡದ ಕಂಪು ಅಂತಾರಾಷ್ಟ್ರೀಯ ಮಟ್ಟಕ್ಕೂ ಪಸರಿಸಿದೆ. ಕನ್ನಡ ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಸಾಕಷ್ಟು ಕನ್ನಡಿಗರಿಂದ ಆಗಿದೆ. ಆಗುತ್ತಲೇ ಇದೆ. ಇಂದಿನ ದಿನದಲ್ಲಿ, ಕನ್ನಡಿಗರು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕನ್ನಡತನದ ಕಂಪನ್ನು ಪಸರಿಸಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಯುಕೆ, ದುಬೈ, ಸಿಂಗಾಪುರ, ಕೆನಡಾ ಎಲ್ಲೆಡೆ ಕನ್ನಡ ಸಂಘಗಳು, ಕನ್ನಡ ಶಾಲೆಗಳು, ಮತ್ತು ಕನ್ನಡ ಸಾಂಸ್ಕೃತಿಕ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ.
‘ವಿಶ್ವ ಕನ್ನಡ ಸಮ್ಮೇಳನ’ಗಳು ಕನ್ನಡದ ಕೀರ್ತಿಯನ್ನು ಜಾಗತಿಕ ವೇದಿಕೆಗೆ ತಂದು ನಿಲ್ಲಿಸಿವೆ. ಇವುಗಳ ಮೂಲಕ ಕನ್ನಡದ ಸಾಹಿತ್ಯ, ಸಂಗೀತ, ನಾಟಕ, ಸಿನಿಮಾ ಮತ್ತು ವಿಜ್ಞಾನ ಕ್ಷೇತ್ರಗಳ ಸಾಧನೆಗಳನ್ನು ವಿಶ್ವಕ್ಕೆ ಪರಿಚಯಿಸಲಾಗಿದೆ. ಡಿಜಿಟಲ್ ಯುಗದಲ್ಲಿ ಕನ್ನಡ ತನ್ನ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಿದೆ. ಕನ್ನಡದಲ್ಲಿ ಬ್ಲಾಗ್ಗಳು, ಯೂಟ್ಯೂಬ್ ಚಾನೆಲ್ಗಳು, ಆಪ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಕನ್ನಡಿಗರು ದಿನನಿತ್ಯ ಸಂವಹನ ಮಾಡುತ್ತಿದ್ದಾರೆ. ಯುನಿಕೋಡ್ ತಂತ್ರಾಂಶದಿಂದ ಅಂತರ್ಜಾಲದಲ್ಲಿ ಕನ್ನಡ ಅಕ್ಷರಗಳು ಬಳಸಲು ಸುಲಭ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗವೂ ಜಾಗತಿಕ ಮಟ್ಟದಲ್ಲಿ ಕೀರ್ತಿಯನ್ನು ಗಳಿಸಿದೆ. ನಮ್ಮ ನಾಡಿನ ಅನೇಕರು ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವುದು ಕೂಡ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ವಿದೇಶಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮ ತಾಯ್ನಾಡಿನ ಸೊಗಡನ್ನು ಉಳಿಸಿಕೊಳ್ಳಲು ಕನ್ನಡದ ಹಬ್ಬಗಳು, ಯಕ್ಷಗಾನ, ನವರಾತ್ರಿ, ದೀಪಾವಳಿ ಉತ್ಸವಗಳನ್ನು ಹಮ್ಮಿಕೊಳ್ಳುತ್ತಾರೆ. ಅವರಿಂದ ಕಸ್ತೂರಿ ಕನ್ನಡದ ಘಮವು ವಿದೇಶಿಯರಿಗೂ ತಲುಪುತ್ತಿದೆ ಮತ್ತು ಕನ್ನಡದ ಮೇಲೆ ಅಭಿಮಾನ ಹುಟ್ಟಿಸುವಂತೆ ಮಾಡುತ್ತಿದೆ.
ಕನ್ನಡ ಈಗ ಕೇವಲ ಕರ್ನಾಟಕದ ಗಡಿಗಳೊಳಗೆ ಸೀಮಿತವಾಗಿಲ್ಲ. ಅದು ವಿಶ್ವದ ಭಾಷಾ ಸಂಸ್ಕೃತಿಯ ಒಂದು ಬೆಳಕು. ಕನ್ನಡದ ನಾದ, ಸಾಹಿತ್ಯ, ಸಂಗೀತ ಮತ್ತು ಕಲೆಗಳು ವಿಶ್ವದ ಮನಸ್ಸುಗಳನ್ನೂ ರ್ಸ³ಸುತ್ತಿವೆ. ನಮ್ಮ ತನು ಕನ್ನಡ, ನಮ್ಮ ನುಡಿ ಕನ್ನಡ, ನಮ್ಮ ಮನ ಕನ್ನಡ ನಮ್ಮ ಮಣ್ಣು ಕನ್ನಡ. ಈ ಸಂಸ್ಕೃತಿಯ ಸೊಗಡಿನಲ್ಲೇ ನಾವು ಬೆಳೆದಿದ್ದೇವೆ. ನಾವು ಎಲ್ಲೆಡೆ ಹೋದರೂ, ಕನ್ನಡದ ನಾದ ನಮ್ಮೊಳಗೆ ಜೀವಂತವಾಗಿಯೇ ಇರುತ್ತದೆ. ಕನ್ನಡ ನಮ್ಮ ಮನೆ ಮಾತು ಮಾತ್ರವಲ್ಲ, ಅದು ನಮ್ಮ ಮನಸ್ಸಿನ ಮಾತು. ಅದನ್ನು ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ. ನವೀನತೆಯ ಈ ಯುಗದಲ್ಲೂ, ನಾವು ನಮ್ಮ ಮೂಲವನ್ನು ಮರೆಯಬಾರದು.