

ಕರ್ನಾಟಕ ಹಾಗೂ ರಾಷ್ಟ್ರದ ನಾನಾ ಕಡೆ ಅತ್ಯಾಚಾರದ ಅಮಾನವೀಯ ಕೃತ್ಯಗಳು ದಿನೇದಿನೇ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಅದರಲ್ಲೂ ಮೈಸೂರಿನಲ್ಲಿ ಯುವತಿ ಮೇಲೆ ನಡೆದಿರುವ ಗ್ಯಾಂಗ್ರೇಪ್ ಪ್ರಕರಣದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಪ್ರಕರಣಗಳನ್ನು ಗಮನಿಸಿದಾಗ, ಮನುಷ್ಯ ಯಾಕೆ ಹೀಗೆ ಮಾನವೀಯತೆಯನ್ನು ಮರೆತು ಮೃಗಿಯವರ್ತನೆಯಲ್ಲಿ ತೊಡಗುತ್ತಿದ್ದಾನೆ ಎಂಬುದು ತಿಳಿಯದಾಗಿದೆ. ಮಾನವ ತನ್ನ ಪ್ರೀತಿ, ಮಮತೆ, ವಾತ್ಸಲ್ಯ ಹಾಗೂ ಸ್ನೇಹಸಂಬಂಧಕ್ಕಿಂತ ಕಾಮಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಮೌಲ್ಯ, ಸಂಬಂಧಗಳನ್ನು ಗಾಳಿಗೆ ತೂರಿ ಈ ರೀತಿಯ ಪಾಪಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ತರವಲ್ಲ. ಅಲ್ಲದೆ ಕ್ಷಣಿಕ ಸುಖಕ್ಕಾಗಿ ಮನುಷ್ಯಧರ್ಮವನ್ನು ಮರೆಯುವುದು ಕೂಡ ಶೋಭೆ ತರುವಂತಹದಲ್ಲ. ಮಾನವ ತನ್ನ ವಕ್ರ ಕಾಮದೃಷ್ಟಿಯನ್ನು ತ್ಯಜಿಸಿ ಸಮಾಜದಲ್ಲಿ ಸಜ್ಜನ, ಸತ್ಪ್ರಜೆಯಾಗಿ ಸಹಬಾಳ್ವೆಯಿಂದ ಬಾಳಲು ಕಲಿತಾಗಲೇ, ಇಂಥ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು. ಅಂಥ ನೈತಿಕತೆ, ಒಳ್ಳೆಯ ಮೌಲ್ಯಗಳನ್ನು ಬಿತ್ತುವ, ಅಳವಡಿಸಿಕೊಳ್ಳುವ ಕೆಲಸವೂ ವಿವಿಧ ವ್ಯವಸ್ಥೆಗಳ ಮೂಲಕ ನಡೆಯಬೇಕು.
| ಹರಳಹಳ್ಳಿ ಪುಟ್ಟರಾಜು ಪಾಂಡವಪುರ
ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡಾಗ ಅಪಾರ ಪ್ರಮಾಣದಲ್ಲಿ ಅತ್ಯಾಧುನಿಕ ಯುದ್ಧ ಉಪಕರಣಗಳನ್ನು ಬಿಟ್ಟುಹೋಗಿದೆ. ಇವುಗಳಲ್ಲಿ ರಿವಾಲ್ವರ್, ಹೆಲಿಕಾಪ್ಟರ್ಗಳು, ಯುದ್ಧ ವಾಹನಗಳು ಸೇರಿವೆ. ಅಪ್ಘಾನಿಸ್ತಾನದಲ್ಲಿ ಸುವ್ಯವಸ್ಥೆ ನಿರ್ವಿುಸದೆ ಅರ್ಧಕ್ಕೆ ಪಲಾಯನಗೈದ ಅಮೆರಿಕ, ಈಗ ಶಸ್ತ್ರಾಸ್ತ್ರಗಳನ್ನು ಬಿಟ್ಟುಹೋಗುವ ಮೂಲಕ ಮತ್ತೊಂದು ದೊಡ್ಡ ತಪು್ಪ ಮಾಡಿದೆ. ಈ ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳು ಈಗ ತಾಲಿಬಾನ್ ಕೈವಶವಾಗಿವೆ ಎಂಬ ವರದಿಯಿದೆ. ಈ ಮೂಲಕ ಭಾರತಕ್ಕೆ ನುಸುಳಿ ಬರುವ ಉಗ್ರರಿಗೆ ವರದಾನವಾಗುವ ಸಂಭವ ಅಧಿಕ. ಕೇಂದ್ರದಲ್ಲಿ ಸಮರ್ಥ ಆಡಳಿತದ ಪರಿಣಾಮ ನಮ್ಮ ಗಡಿಗಳು ಭಾರೀ ಭದ್ರತೆ ಹೊಂದಿವೆ. ಆದರೂ ಮಗದಷ್ಟು ಎಚ್ಚರ ಅವಶ್ಯ. ಮತ್ತು ಉಗ್ರರಿಂದ ಈ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆಯಲು ಅಮೆರಿಕ ಕಾರ್ಯಾಚರಿಸಬೇಕು. ಇಲ್ಲವಾದಲ್ಲಿ ಇದರ ದುಷ್ಪರಿಣಾಮ ಜಾಗತಿಕವಾಗಿ ಬೀರುವುದರಲ್ಲಿ ಸಂಶಯವಿಲ್ಲ.
| ಸಂದೀಪ್ ನಾಯಕ್ ಸುಜೀರ್