

ಸಮಾನತೆ, ಸಾಹಚರ್ಯ, ಅಸ್ತಿತ್ವ, ಅಸ್ಮಿತೆ ಎಲ್ಲದರಲ್ಲೂ ತನ್ನತನ ಉಳಿಸಿಕೊಂಡೇ ಪುರುಷಸಾಂಗತ್ಯದ ಜತೆಗೆ ಸಾಧನೆಯ ಶಿಖರ ಏರುವುದು ಮುಖ್ಯ. ಪ್ರತಿ ಹೆಜ್ಜೆ, ಪ್ರತಿ ತಿರುವು, ಪ್ರತಿ ಹಂತದಲ್ಲೂ ತನ್ನ ಹಿತ ಕಾಪಾಡಿಕೊಂಡೇ ಸಮಷ್ಟಿಹಿತದತ್ತ ಗಮನ ಹರಿಸಬೇಕು... ಇದು ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ವಿಜಯವಾಣಿಯ ಬೆಂಗಳೂರು ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಹೊರಹೊಮ್ಮಿದ ಒಮ್ಮತಾಭಿಪ್ರಾಯ. ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಚಲನಚಿತ್ರ ನಟಿ-ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಹಾಗೂ ಲಿಡ್ಕರ್ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಈ ಸಂವಾದದಲ್ಲಿ ಪಾಲ್ಗೊಂಡು ಮುಕ್ತ ಮನಸ್ಸಿನಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ದೇಶದ ರಾಜಕೀಯ ಕ್ಷೇತ್ರದಲ್ಲಿ ಸ್ತ್ರೀಯರ ಪಾತ್ರ ಹಾಗೂ ನಾಯಕತ್ವ ಹೊಂದಲು ಶೇ. 33ರಷ್ಟು ಮಹಿಳಾ ಮೀಸಲಾತಿಯಿಂದ ಹೆಚ್ಚಿನ ಅನುಕೂಲ ಆಗಲಿದೆ. ಸ್ಥಳೀಯ ಮಟ್ಟದಿಂದ ಶಾಸನಸಭೆಯವರೆಗೂ ನಾಯಕತ್ವವನ್ನು ಬೆಳೆಸಲು ಅದು ವೇದಿಕೆ ಕಲ್ಪಿಸಲಿದ್ದು, ಮಹಿಳಾ ಸಮೂಹವು ಪುರುಷರ ಸರಿಸಮನಾಗಿ ಬೆಳೆಯಲು ಅದರಿಂದ ಸಾಧ್ಯವಾಗಲಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಪ್ರತಿಪಾದಿಸಿದ್ದಾರೆ. 2023ರಲ್ಲೇ ಸಂಸತ್ನಲ್ಲಿ ಶೇ. 33 ಮೀಸಲು ವಿಧೇಯಕ ಒಪ್ಪಿಗೆ ಪಡೆದಿದೆ. ಇನ್ನೂ ಜಾರಿಗೆ ಬಂದಿಲ್ಲ. 2029ರ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ವೇಳೆ ಅದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಮೀಸಲಿನಿಂದ ಎಷ್ಟು ಸೀಟುಗಳು ಮಹಿಳೆಯರಿಗೆ ಲಭ್ಯವಾಗಲಿವೆ ಎಂಬುದು ನಿಖರವಾಗಿ ತಿಳಿಯಲಿದೆ.
ಸರ್ಕಾರದ ನೀತಿ ಹಾಗೂ ಯೋಜನೆಗಳನ್ನು ರೂಪಿಸುವಲ್ಲಿ ಹೆಚ್ಚಿನ ಮಹಿಳೆಯರ ಪ್ರಾತಿನಿಧ್ಯ ಇದ್ದಲ್ಲಿ ಸ್ತ್ರೀ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸ್ಪಷ್ಟತೆ ಹಾಗೂ ಅರಿವಿರುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ ಸರಿಯಾದ ತಿದ್ದುಪಡಿ ಮಾಡಬಹುದು. ಎಲ್ಲ ಪಾಲುದಾರರ ಸಹಕಾರದೊಂದಿಗೆ ಯಾವ ಯೋಜನೆಗಳನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕೆಂಬುದನ್ನು ನಿರ್ಧರಿಸಲು ಹೆಚ್ಚಿನ ಅನುಕೂಲವಾಗಲಿದೆ. ಒಂದು ವೇಳೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವಂತೆ ಶೇ. 50 ಮಹಿಳಾ ಮೀಸಲು ಶಾಸನಸಭೆಗಳಿಗೂ ಅನ್ವಯಿಸಿದರೆ ಚುನಾವಣೆಗೆ ಮುನ್ನವೇ ಸರಿಯಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಬಹುದು. ಕೆಳಹಂತದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಬಹುದು.
ಎಲ್ಲ ಪಕ್ಷಗಳಲ್ಲೂ ಯುವ ಮಹಿಳೆಯರ ದನಿಗೆ ಸೂಕ್ತ ಪ್ರಾತಿನಿಧ್ಯ ನೀಡಿ ಮಾರ್ಗದರ್ಶನ ಮಾಡಿದರೆ ಉತ್ತಮ ನಾಯಕಿಯರು ಹೊರಹೊಮ್ಮುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಅತ್ಯುತ್ತಮ ಅಭ್ಯರ್ಥಿಗಳು ಸಿಗುತ್ತಾರೆ. ಅವರೇನು ರಬ್ಬರ್ ಸ್ಟಾಂಪ್ ಆಗಿರುವುದಿಲ್ಲ, ಅವರದ್ದೇ ಆದ ಮೈಂಡ್ ಸೆಟ್ ಇರುತ್ತದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ (ಇಂಕ್ಲೂಸಿವ್ ಡೆವಲಪ್ವೆುಂಟ್) ಹೆಣ್ಣುಮಕ್ಕಳು ಕಾರ್ಯ ನಿರ್ವಹಿಸಲು ಮೀಸಲು ಸೌಲಭ್ಯದಿಂದ ಸಾಧ್ಯವಿದೆ ಎಂಬುದು ಅವರ ಅಭಿಮತ. ಹಿಂದಿನ ದಿನಗಳಲ್ಲಿ ಭ್ರೂಣಹತ್ಯೆ ನಡೆದಿದ್ದರ ಪರಿಣಾಮ ಈಗ ಗಂಡುಮಕ್ಕಳಿಗೆ ಹೆಣ್ಣು ಸಿಗದ ಪರಿಸ್ಥಿತಿ ಕಾಣುತ್ತಿದ್ದೇವೆ. ಆಧುನಿಕ ಸಮಾಜದಲ್ಲೂ ಇದು ಸ್ವಲ್ಪ ಪ್ರಮಾಣದಲ್ಲಿ ಮುಂದುವರಿದಿದೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯ ಕರಾಳವಾಗಲಿದೆ. ಹೆಣ್ಣು ಹುಟ್ಟಿದಾಗ ಬೇಡವೆಂದು ರಸ್ತೆ ಬದಿಗೆ ಎಸೆಯುವವರು ಶಿಶುಪಾಲನಾ ಕೇಂದ್ರಗಳಿಗಾದರೂ ಒಪ್ಪಿಸಲಿ.
| ಡಾ. ಪ್ರಭಾ ಮಲ್ಲಿಕಾರ್ಜುನ, ಸಂಸದೆ
ನಗರಗಳಲ್ಲಿ ವಾಸಿಸುವ ಪಾಲಕರು ಉದ್ಯೋಗದಲ್ಲಿರುವ ಕಾರಣ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾರೆ. ಮಕ್ಕಳ ಬೆಳವಣಿಗೆಗೆ ಅವಕಾಶಗಳೂ ಹೆಚ್ಚು. ಆದರೆ, ಹಳ್ಳಿಗಳಲ್ಲಿನ ಪಾಲಕರು ಕಷ್ಟಪಟ್ಟು ದುಡಿದು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಉನ್ನತ ಶಿಕ್ಷಣಕ್ಕೆ ಸೀಟು ಲಭಿಸಿದರೂ, ವ್ಯಾಸಂಗ ಮುಂದುವರಿಸಲು ಆರ್ಥಿಕ ಸ್ಥಿತಿ ಅಡ್ಡಿಯಾಗುತ್ತದೆ. ಸಂಪ್ರದಾಯ, ಸಂಸ್ಕೃತಿ ಜತೆಗೆ ಕೆಲವು ಮೂಢನಂಬಿಕೆಗಳು ಆಚರಣೆಯಲ್ಲಿರುತ್ತವೆ. ಮಗಳನ್ನು ಹಾಸ್ಟೆಲ್ಗೆ ಸೇರಿಸಲು ಅಪ್ಪ ಸಮಾಜಕ್ಕೆ ಹೆದರಿ ಕೂರುವ ಸ್ಥಿತಿ ಇದೆ. ಹಾಗಾಗಿ ಸಂಪ್ರದಾಯವು ಜನರಿಗೆ ಶಕ್ತಿ ನೀಡಬೇಕೇ ವಿನಾ ಕಾಲಿಗೆ ಸರಪಳಿ ಆಗಬಾರದು.
ಪುರುಷರು ತಮ್ಮ ಓರಗೆಯ ಮಹಿಳೆಯರನ್ನು ಮಾತ್ರವಲ್ಲ ತಾಯಿ, ಸೋದರಿ, ಪುತ್ರಿ ಹೀಗೆ ಎಲ್ಲರನ್ನೂ ಗೌರವದಿಂದ ಕಾಣಬೇಕು. ಸಮಾಜದಲ್ಲಿ ಈಗ ಕಂಡುಬರುತ್ತಿರುವ ಮನಸ್ಥಿತಿ ಬದಲಾಗಬೇಕು. ಮುಖ್ಯವಾಗಿ ಪುರುಷರು ಮಹಿಳೆಯರನ್ನು ಪ್ರೋತ್ಸಾಹಿಸುವ ವಿಶಾಲ ಮನೋಭಾವ ಹೊಂದಿರಬೇಕು. ಇದರಿಂದ ಮಹಿಳೆಯರ ಬಗ್ಗೆ ಕೆಲವು ತಪು್ಪಕಲ್ಪನೆಗಳು ನಿವಾರಣೆಯಾಗಲು ಸಾಧ್ಯವಿದೆ.
ಗ್ರಾಪಂ, ಜಿಪಂ, ತಾಪಂ ಸಹಿತ ಎಲ್ಲ ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಬೇಕೇ ಬೇಕು. ಆದರೆ, ಎಲೆಕ್ಷನ್ಗೆ ನಿಂತು ದುಡ್ಡು ಖರ್ಚು ಮಾಡಿ ಹೆಣ್ಣುಮಕ್ಕಳು ಗೆಲ್ಲಲು ಸಾಧ್ಯವೇ? ಅವರೆಲ್ಲರೂ ಸಮರ್ಥ ಅಭ್ಯರ್ಥಿಗಳಾಗಿರುತ್ತಾರೆಯೆ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇದಕ್ಕಾಗಿ ಕೆಳಹಂತದಿಂದಲೇ ಮಹಿಳಾ ನಾಯಕತ್ವವನ್ನು ಬೆಳೆಸಬೇಕಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ಕೆಲಸವನ್ನು ಮಾಡುತ್ತಿದ್ದೇವೆ. ಎಐಸಿಸಿ, ಕೆಪಿಸಿಸಿಗೆ ಮಹಿಳಾ ನೋಂದಣಿ ಹೆಚ್ಚಿಸುವ ಜತೆಗೆ ಪಕ್ಷದ ವತಿಯಿಂದ ಸ್ವ ಸಹಾಯ ಗುಂಪುಗಳನ್ನು ರಚಿಸುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಈಗ ಲೋಕಸಭೆಯಲ್ಲಿ ಇತರ ರಾಜ್ಯಗಳಿಂದ ಗೆದ್ದು ಬಂದಿರುವ ಮಹಿಳೆಯರು ಯುವ ಕಾಂಗ್ರೆಸ್ನಲ್ಲಿ ಹಲವು ವರ್ಷ ದುಡಿದು ಈ ಸ್ಥಾನಕ್ಕೆ ಬಂದಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ತಳಮಟ್ಟದಲ್ಲಿ ಕಾರ್ಯಕರ್ತೆಯರನ್ನು ಬೆಳೆಸುವುದರಿಂದ ಮಹಿಳಾ ನಾಯಕಿಯರ ಕೊರತೆ ನೀಗಿಸಬಹುದು.
ಸಿನಿಮಾಗಳಲ್ಲಿನ ಅಶ್ಲೀಲತೆಯ ವಿಚಾರ, ದೃಶ್ಯಾವಳಿಗಳನ್ನು ಸೆನ್ಸಾರ್ ಮಂಡಳಿ ನಿಯಂತ್ರಿಸುತ್ತದೆ. ಆದರೆ, ಸಾಮಾಜಿಕ ತಾಣಗಳಲ್ಲಿನ ಅಶ್ಲೀಲತೆಯು ನಿಜಕ್ಕೂ ದಬ್ಬಾಳಿಕೆಯಾಗಿದೆ. ಸ್ವಯಂ ನಿಯಂತ್ರಿಸಿಕೊಳ್ಳದ ಹೊರತು ಸಾಮಾಜಿಕ ತಾಣಗಳ ದಬ್ಬಾಳಿಕೆಗೆ ಪರಿಹಾರವಿಲ್ಲ ಎಂಬುದು ಚಿತ್ರ ನಿರ್ದೇಶಕಿ, ನಿರ್ವಪಕಿ ವಿಜಯಲಕ್ಷ್ಮೀ ಸಿಂಗ್ ಅವರ ಸ್ಪಷ್ಟ ಅಭಿಮತ. ಸಿನಿಮಾಗಳಲ್ಲಿನ ಹೆಣ್ಣನ್ನು ಭೋಗದ ವಸ್ತುವಾಗಿ ತೋರಿಸುವ ದೃಶ್ಯಗಳು ಹಾಗೂ ಸಂಭಾಷಣೆಗಳನ್ನು ನೋಡಿ ಸೆನ್ಸಾರ್ ಮಂಡಳಿಯು ‘ಎ’, ಎ ಪ್ಲಸ್, ಯು ಪ್ರಮಾಣಪತ್ರಗಳನ್ನು ನೀಡುತ್ತದೆ. ಅದೇ ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂಗಳಂತಹ ಸಾಮಾಜಿಕ ತಾಣಗಳಿಗೆ ಯಾರೂ ನಿಯಂತ್ರಣ ಹೇರುವವರಿಲ್ಲ, ಇವುಗಳನ್ನು ನೋಡದೆ ತಾವೇ ನಿಯಂತ್ರಣ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ವಿಜಯಲಕ್ಷ್ಮೀ ಸಿಂಗ್.
ಕಾಸ್ಟಿಂಗ್ ಕೌಚ್ ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅದು ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ಅದನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡುತ್ತೇವೆಂಬುದು ಮುಖ್ಯವಾಗಲಿದೆ. ಸಿನಿಮಾ ಕ್ಷೇತ್ರದ ಕೆಲವರ ವೈಯಕ್ತಿಕ ವಿಚಾರಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಕಾಸ್ಟಿಂಗ್ ಕೌಚ್ ಎನ್ನುವುದು ಫಿಲ್ಮ್ ಇಂಡಸ್ಟ್ರಿಗೆ ಸೀಮಿತವಾಗಿದೆ ಎಂದು ಜನರು ಭಾವಿಸುತ್ತಾರೆ. ಆದರೆ, ಬೇರೆ ಕ್ಷೇತ್ರಗಳ ಪ್ರಕರಣಗಳು ಹೊರಗೆ ಬರುವುದಿಲ್ಲ.
ಎಷ್ಟೋ ಜನರು ಇಂದು ಮದುವೆ ಬೇಡ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಒಂದು ವೇಳೆ ಮದುವೆಯಾದ್ರೂ ತುಂಬಾ ದಿನ ದಾಂಪತ್ಯ ಜೀವನ ಮುಂದುವರಿಯುವುದಿಲ್ಲ. ಮಕ್ಕಳು ಬೇಕಾದರೆ ದತ್ತು ಪಡೆದುಕೊಳ್ಳೋಣ ಮದುವೆ ಬೇಡ ಎನ್ನುತ್ತಿದ್ದಾರೆ. ಲಿವಿನ್ ರಿಲೇಷನ್ನಲ್ಲಿದ್ದವರು ಮದುವೆಯಾಗಿ ಮೂರೇ ದಿನಕ್ಕೆ ವಿಚ್ಛೇದನ ಪಡೆದುಕೊಳ್ಳಲು ಕಾರಣ ಸಾಮಾಜಿಕ ತಾಣಗಳ ಪರಿಣಾಮಕ್ಕಿಂತ, ಇವತ್ತಿನ ಹೆಣ್ಣುಮಕ್ಕಳು ಜೀವನವನ್ನು ಎಂಜಾಯ್ ಮಾಡಬೇಕು, ಫ್ರೀಡಂ ಆಂಡ್ ಪ್ರೖೆವೆಸಿ (ಸ್ವಾತಂತ್ರ್ಯ, ಏಕಾಂತತೆ) ಇರಬೇಕು ಎನ್ನುವ ಭಾವನೆ. ಚಿಕ್ಕವರಿದ್ದಾಗ ತಂದೆ-ತಾಯಿಯ ಮಾತು ಕೇಳಬೇಕು. ಮದುವೆಯಾದ ನಂತರ ಗಂಡನ ಮಾತು ಕೇಳಬೇಕು ಎಂಬ ಮನಸ್ಥಿತಿ ಇದೆ. ಮದುವೆ ಎನ್ನುವುದು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದೆ ಎಂಬ ಮನಸ್ಥಿತಿ ಹೊಂದುತ್ತಿದ್ದಾರೆ. ಇದು ಬದಲಾಗಬೇಕು.
ಉಲ್ಲಾಸಭರಿತ ಜೀವನಕ್ಕೆ ಮಸಾಜ್ ಅವಶ್ಯ. ಕೆಲವರು ಮಸಾಜ್ ಅಂದಾಕ್ಷಣ ಹೈಫೈ ಜೀವನ ಮತ್ತು ಕೆಟ್ಟ ಭಾವನೆ ಹೊಂದುತ್ತಾರೆ. ನಗರದ ಒತ್ತಡದ ಬದುಕಿನಲ್ಲಿ ರಿಲ್ಯಾಕ್ಸ್ ಆಗಲು, ಉಲ್ಲಾಸದಿಂದಿರಲು ಮಸಾಜ್, ಫಿಜಿಯೋಥೆರಪಿಯಂತಹ ಚಿಕಿತ್ಸೆಗಳು ಅನಿವಾರ್ಯವಾಗುತ್ತವೆ.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುವ ಹೆಣ್ಣು ಮಕ್ಕಳು ತಮ್ಮವರ್ಕ್ಸ್ಟೈಲ್ ಬದಲಿಸಿಕೊಳ್ಳಬೇಕು. ಬಾಲಿವುಡ್ ಮಂದಿ ಕೆಲಸಕ್ಕೆ ಸಮಯ ನಿಗದಿಯಿಲ್ಲ. ನಮ್ಮಲ್ಲಿ ಸಂಜೆಯಾಯ್ತು, ಮನೆಗೆ ಹೋಗಬೇಕು ಎನ್ನುತ್ತಾರೆ. ಹೀಗಾದರೆ, ಕೆಲಸ ಮಾಡೋದು ಕಷ್ಟವಾಗಲಿದೆ. ಕೆಲವೊಂದು ವಿಷಯಗಳಲ್ಲಿ ಮೈಚಳಿ ಬಿಟ್ಟು ಕೆಲಸ ಮಾಡುವುದನ್ನು ಕಲಿಯಬೇಕಿದೆ.
ಇಂದಿನ ಸಂವಾದವು ನಮಗೆ ಮತ್ತಷ್ಟು ಹುರುಪು ನೀಡಿದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಮನಸ್ಥಿತಿಗೆ ಬಲ ಕೊಟ್ಟಿದೆ. ಮಹಿಳಾ ದಿನಾಚರಣೆ ಎಂಬುದು ವರ್ಷಪೂರ್ತಿ ನಡೆಯಬೇಕು ಎಂಬುದೇ ಅದ್ಭುತ ಕಲ್ಪನೆಯಾಗಿದೆ.
| ವಿಜಯಲಕ್ಷ್ಮೀ ಸಿಂಗ್, ಚಿತ್ರ ನಿರ್ದೇಶಕಿ
ಮಹಿಳಾ ಸುರಕ್ಷತೆ ಎಂದರೆ ಅದು ದೈಹಿಕ ಸುರಕ್ಷತೆ ಅಲ್ಲ, ಮಾನಸಿಕ ಭದ್ರತೆ ಒದಗಿಸುವುದು. ಹಲ್ಲೆ, ಪೆಟ್ಟು ಸೇರಿ ದೈಹಿಕವಾಗಿ ಅಪಾಯ ಆಗದಂತೆ ಕ್ರಮ ವಹಿಸಿದರೆ ಅದು ಮಹಿಳೆಗೆ ಸಂಪೂರ್ಣ ಸುರಕ್ಷತೆ ಸಿಕ್ಕಂತೆ ಆಗುವುದಿಲ್ಲ. ಬದಲಿಗೆ ಕುಟುಂಬದಲ್ಲಿ, ದುಡಿವ ಸ್ಥಳದಲ್ಲಿ ಮಾನಸಿಕ ಅಭದ್ರತೆ ಕಾಡದಂತಹ ವಾತಾವರಣ ನಿರ್ಮಾಣ ಆಗಬೇಕು ಎನ್ನುವುದು ಲಿಡ್ಕರ್ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಅವರ ಸ್ಪಷ್ಟ ಅಭಿಪ್ರಾಯ.
ದೈಹಿಕ ಗಾಯಗಳು ದಿನ ಕಳೆದಂತೆ ಮರೆತು ಹೋಗಬಹುದೇನೋ? ಆದರೆ, ಮನಸ್ಸಿಗೆ ಆಗುವ ಹಿಂಸೆ ಆಕೆಯನ್ನು ದೈಹಿಕವಾಗಿ ಕೃಶ ಮಾಡುತ್ತದೆ. ಆತ್ಮವಿಶ್ವಾಸವನ್ನು ಕಸಿಯುತ್ತದೆ. ನಿರ್ಧಾರಗಳಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಹಾಗಾಗಿ ಮಹಿಳಾ ಸುರಕ್ಷತೆ ಎಂದಾಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಎರಡೂ ರೀತಿಯಲ್ಲಿ ಇರಬೇಕು. ಇದು ಕೇವಲ ಕುಟುಂಬ ಅಥವಾ ಕೆಲಸದ ಸ್ಥಳದಲ್ಲಿ ಮಾತ್ರವಲ್ಲ. ಇಡೀ ಸಮಾಜ ಇದರ ಬಗ್ಗೆ ಅರಿವು ಹೊಂದಬೇಕಿದೆ ಎಂದು ಪ್ರತಿಪಾದಿಸಿದರು. ಮಾನಸಿಕ ಸ್ಥೈರ್ಯ ಮಹಿಳೆಯನ್ನು ಎಂತಹುದೇ ಅಪಾಯಗಳನ್ನು ಎದುರಿಸುವಂತೆ ಮಾಡುತ್ತದೆ. ನೀನು ಹೆಣ್ಣು, ನಿನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ಮನೆ ಕೆಲಸಕ್ಕೆ ಸೀಮಿತವಾಗಿಸದೆ, ಆಕೆಯ ಕನಸಿಗೆ ರೆಕ್ಕೆ ಕೊಟ್ಟು ಹಾರುವ ಅವಕಾಶ ಕಲ್ಪಿಸಬೇಕಿದೆ. ಹಗಲಾಗಲಿ, ರಾತ್ರಿಯಾಗಲಿ ಯಾವುದೇ ಪಾಳಿಯಲ್ಲೂ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಸೃಷ್ಟಿಸಬೇಕು. ಮಹಿಳೆಗೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಹೆಣ್ಣಿಗೆ ಅವಕಾಶ ಎನ್ನುವುದು ಮೊದಲು ಮನೆಯಲ್ಲಿ ದೊರೆಯಬೇಕು. ಮಗಳಿಗೆ ಮನೆ ಕೆಲಸ ನೀನೇ ಮಾಡಬೇಕು ಎಂದು ಹೇಳುವ ಬದಲು, ಮಗನಿಗೂ ಮನೆ ಕೆಲಸಗಳಲ್ಲಿ ನೆರವಾಗುವುದನ್ನು ಕಲಿಸಬೇಕು. ಹೆಣ್ಣು ಮಕ್ಕಳನ್ನು ಗೌರವಿಸುವ, ಅವರ ಸಮಸ್ಯೆಗಳನ್ನು ತಿಳಿಸಿಕೊಡುವ ಕೆಲಸ ಮೊದಲು ಮನೆಯಲ್ಲಿ ಆದರೆ, ಆಗ ಹೊರಗೂ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುತ್ತಾರೆ.
ಹೆಣ್ಣು ಮಕ್ಕಳ ಗುರಿ ಸಾಧನೆಗೆ ಶಿಕ್ಷಣ ಮೊದಲ ಮೆಟ್ಟಿಲು. ಶಿಕ್ಷಣದಿಂದ ಆಕೆಯ ಜ್ಞಾನ ವಿಸ್ತಾರವಾಗುವುದಲ್ಲದೆ, ಉದ್ಯೋಗಕ್ಕೆ ದಾರಿಯಾಗುತ್ತದೆ. ಆರ್ಥಿಕ ಸಬಲಳನ್ನಾಗಿಸುತ್ತದೆ. ಹಾಗಾಗಿ ಪ್ರತಿ ಹೆಣ್ಣು ಮಕ್ಕಳಿಗೂ ಶಿಕ್ಷಣ ಒದಗಿಸುವಲ್ಲಿ ಆದ್ಯತೆ ನೀಡಬೇಕು.
ವಂಚಕರ ಬಗ್ಗೆ ಜಾಗೃತಿ ಅಗತ್ಯ: ಮಹಿಳೆಯನ್ನು ನೈತಿಕವಾಗಿ, ಆರ್ಥಿಕವಾಗಿ ಕುಗ್ಗಿಸುವ ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರ ಮೇಲೆ ನಡೆಯುತ್ತಿರುವ ವಂಚನೆ, ಮೋಸದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.
ಮಹಿಳೆ ಸಿಕ್ಕ ಅವಕಾಶ ಬಳಸಿ ಗುರಿ ಸಾಧಿಸಬೇಕು. ಹಾಗಾಗುತ್ತಲೇ ಕುಟುಂಬದಿಂದ ದೂರ ಉಳಿದು ಒಬ್ಬಂಟಿಯಾಗಿ ಜೀವನ ನಡೆಸುತ್ತೇನೆ ಎನ್ನುವ ನಿರ್ಧಾರಕ್ಕೆ ಬರುವುದು ಸಲ್ಲ. ಅದು ಹುಂಬತನ ಎನ್ನಿಸಿಬಿಡುತ್ತದೆ. ಒಂಟಿ ಜೀವನ ಹೇಳುವಷ್ಟು ಸುಲಭವಲ್ಲ. ಹಾಗಾಗಿ ಕುಟುಂಬದೊಂದಿಗೆ ಇದ್ದುಕೊಂಡೇ ಎಲ್ಲರ ವಿಶ್ವಾಸ ಪಡೆದು ಗುರಿ ಸಾಧನೆ ಮಾಡಬೇಕು.
| ಡಾ. ಕೆ.ಎಂ. ವಸುಂಧರಾ, ವ್ಯವಸ್ಥಾಪಕ ನಿರ್ದೇಶಕಿ, ಲಿಡ್ಕರ್
ಎಸ್ಎಸ್ಎಲ್ಸಿ ನಂತರ ಉನ್ನತ ಶಿಕ್ಷಣಕ್ಕೆ ಹೋಗುವ ಮುನ್ನ ಯಾವ ಕೋರ್ಸ್ ಮಾಡಿದರೆ ಒಳಿತು ಎಂಬುದರ ಬಗ್ಗೆ ಹೆಣ್ಣು ಮಕ್ಕಳು ಶಿಕ್ಷಕರು, ಪಾಲಕರು ಹಾಗೂ ಹಿತೈಷಿಗಳೊಂದಿಗೆ ರ್ಚಚಿಸಬೇಕು. ಆದರೆ, ಅಂತಿಮ ನಿರ್ಧಾರ ಹಾಗೂ ಆಯ್ಕೆ ನಿಮ್ಮದೇ ಆಗಿರಬೇಕು. ಆಯ್ಕೆಯೊಂದಿಗೆ ಕಠಿಣ ಶ್ರಮವೂ ಇದ್ದಾಗ ನೀವು ಅಂದುಕೊಂಡ ಕ್ಷೇತ್ರದಲ್ಲಿ ಅವಕಾಶ ಹೊಂದಲು ಹಾಗೂ ಯಶಸ್ಸು ಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.