ಕನ್ನಡದಲ್ಲಿ ಪಿಯು ಶಿಕ್ಷಣದ ಕ್ರಾಂತಿಕಾರಿ ಕ್ರಮ

Edit 3
Published on
ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ವಿಜ್ಞಾನ ಸಂಯೋಜನೆಯಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಪಠ್ಯಪುಸ್ತಕಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಮುದ್ರಿಸಲು ಬಹಳ ವರ್ಷಗಳಿಂದಲೂ ಪ್ರಯತ್ನಿಸಲಾಗುತ್ತಿತ್ತು. ಈಗಿನ ರಾಜ್ಯ ಸರ್ಕಾರ ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದ ಪಠ್ಯಪುಸ್ತಕಗಳನ್ನು ಕನ್ನಡ ಭಾಷೆಗೆ ಅನುವಾದಿಸಿ, ಪಠ್ಯಪುಸ್ತಕಗಳ ಕನ್ನಡ ಅವತರಣಿಕೆಗಳನ್ನು ಲೋಕಾರ್ಪಣೆ ಮಾಡಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್​ಸಿಇಆರ್​ಟಿ) ಪ್ರಕಟಿಸಿದ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ. ಈಗಾಗಲೇ ಪ್ರಥಮ ಪಿಯುಸಿ ತರಗತಿಯ ಪಿಸಿಎಂಬಿ ಪಠ್ಯಪುಸ್ತಕಗಳ ಕನ್ನಡ ಅವತರಿಣಿಕೆಗಳು ಮುದ್ರಣಕ್ಕೆ ಸಿದ್ಧವಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಲೋಕಾರ್ಪಣೆಯಾಗಲಿವೆ. ರಾಜದ್ಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ಅಭ್ಯಾಸ ಮಾಡಬೇಕಾದರೆ ಅನಿವಾರ್ಯವಾಗಿ ಇಂಗ್ಲಿಷ್ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.

ಬಹುತೇಕ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಅಭ್ಯಾಸ ಮಾಡುವ ಆಸಕ್ತಿಯಿದ್ದರೂ ಇಂಗ್ಲಿಷ್ ಭಯದಿಂದ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪಿಯುಸಿಯ ವಿಜ್ಞಾನ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಒದಗಿಸಿರುವುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇನ್ನು ಮುಂದೆ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕಡೆ ಆಸಕ್ತಿಯನ್ನು ಕೇಂದ್ರೀಕರಿಸಿಕೊಳ್ಳುತ್ತಾರೆಂಬುದು ಸರ್ಕಾರದ ಆಶಯವಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಹಾಗೆಯೇ ಕನ್ನಡದಲ್ಲಿಯೇ ಪಿಯುಸಿ ವಿಜ್ಞಾನ ವಿಷಯದಲ್ಲಿ ಅಭ್ಯಾಸ ಮಾಡಿ, ಅತ್ಯಧಿಕ ಅಂಕಗಳಿಸಲು ಅನುಕೂಲವಾಗುತ್ತದೆ. ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪರಿಣಿತ ಅಧ್ಯಾಪಕರಿದ್ದಾರೆ. ಕನ್ನಡ ಭಾಷೆಯಲ್ಲಿ ಬೋಧನೆ ಮಾಡಿ, ವಿದ್ಯಾರ್ಥಿಗಳಿಗೆ ಸುಲಲಿತವಾಗಿ ಅರ್ಥೈಸಲು ಅವರಿಗೆ ಸಹಕಾರಿಯಾಗುತ್ತದೆ. ಹಲವೆಡೆ ಕನ್ನಡದಲ್ಲಿ ಬೋಧನೆ ಮಾಡಿ ಇಂಗ್ಲಿಷ್​ನಲ್ಲಿ ನೋಟ್ಸ್ ಕೊಡುತ್ತಿದ್ದಾರೆ. ಸರ್ಕಾರದ ಈ ಕ್ರಮದಿಂದಾಗಿ ಅಧ್ಯಾಪಕರ ಮೇಲೆ ಒತ್ತಡ ಕಡಿಮೆಯಾಗುವುದಲ್ಲದೆ ಮಾತೃಭಾಷೆಯಲ್ಲಿಯೇ ವಿದ್ಯಾರ್ಥಿಗಳು ವಿಜ್ಞಾನದ ವಿಷಯಗಳನ್ನು ಮನನ ಮಾಡಿಕೊಂಡು ಪರೀಕ್ಷೆಗೆ ತಯಾರಾಗುತ್ತಾರೆ. ಸಿಇಟಿ, ಎನ್​ಇಇಟಿ ಪ್ರಶ್ನೆಪತ್ರಿಕೆಗಳು ಕನ್ನಡದಲ್ಲಿ ಇರುವುದರಿಂದ, ಸುಲಭವಾಗಿ ಅರ್ಥೈಸಿಕೊಂಡು ಹೆಚ್ಚು ಅಂಕಗಳಿಸಲು ಅನುಕೂಲವಾಗುತ್ತದೆ. ಆ ಮೂಲಕ ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸಗಳ ಪ್ರವೇಶಕ್ಕೆ ನಾಂದಿಯಾಗಲಿದೆ. ಇಂಗ್ಲಿಷ್ ಮಾಧ್ಯಮ ಎನ್ನುವ ಹಿಂಜರಿಕೆಯ ಕಾರಣದಿಂದ ಗ್ರಾಮೀಣ ಪ್ರದೇಶದ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದಿಂದ ವಿಮುಖರಾಗುತ್ತಿದ್ದರು. ಇದನ್ನೂ ಓದಿ: VIDEO: ನೀರಿನೊಳಗೆ ಕುಳಿತ ಯುವಕನ ಕೈಯ್ಯಲ್ಲಿ ರೂಬಿಕ್​​ ಕ್ಯೂಬ್ಸ್​; ಆತನ ಹೆಸರು ಈಗ ಗಿನ್ನೀಸ್​ ದಾಖಲೆಯಲ್ಲಿ

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ನೆಲ, ಜಲ, ಭಾಷೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಕಂಕಣಬದ್ಧವಾಗಿದೆ. ಪಿಯುಸಿ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಒದಗಿಸಿ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ, ಮಾತೃಭಾಷೆಯ ಅಭಿಮಾನವನ್ನು ಇಮ್ಮಡಿಗೊಳಿಸಿದೆ.

ಇದಲ್ಲದೆ, ಅನೇಕ ನಿರ್ಣಯ, ಕ್ರಮಗಳ ಮೂಲಕ ಕನ್ನಡ ಭಾಷೆಯ ಅಧ್ಯಯನ, ಸಂಶೋಧನೆಗೆ ನೆರವು ನೀಡಲಾಗುತ್ತಿದೆ. ಹೊರರಾಜ್ಯಗಳಲ್ಲಿರುವ ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷಾ ಅಧ್ಯಯನ ಪೀಠಗಳು ಭಾಷೆ ಕಲಿಕೆಯಲ್ಲಿ ನೆರವಾಗುತ್ತಿವೆ. ಕನ್ನಡ ಕಲಿಕಾ ತರಗತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯಲು ಹಾಗೂ ಕನ್ನಡ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಮುಂದಿನ ಪೀಳಿಗೆಗಳಿಗೂ ಬಳುವಳಿ ಆಗಿಸುವಂತೆ ಮಾಡಲು ಸರ್ಕಾರ ಶ್ರಮಿಸುತ್ತಿದೆ.

ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿ ಹಲವೆಡೆ ಈಗಲೂ ವಿದ್ಯಾರ್ಥಿಗಳು ಅವರ ಪ್ರಾದೇಶಿಕ ಭಾಷೆ/ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ತಮಿಳುನಾಡು ಸರ್ಕಾರ ಪಠ್ಯಪುಸ್ತಕಗಳನ್ನು ಒದಗಿಸಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣವನ್ನು ಕೂಡ ಮಾತೃಭಾಷೆಯಲ್ಲಿಯೇ ನೀಡುತ್ತಿದೆ. ಹೀಗಾಗಿ ಆ ರಾಜ್ಯದಲ್ಲಿ ಹಿಂದುಳಿದ ಸಮುದಾಯದ, ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ವ್ಯಾಸಂಗ ಮಾಡಲು ಅನುಕೂಲವಾಗಿದೆ. ಇಂಗ್ಲಿಷ್ ಭಾಷೆ ಬದುಕು ಕಟ್ಟಿಕೊಡುತ್ತದೆ ಎಂಬುದಕ್ಕೆ ಯಾವ ದೇಶಗಳಲ್ಲಿಯೂ ನಿಖರ ಉತ್ತರ ಸಿಗುವುದಿಲ್ಲ. ರಷ್ಯಾ, ಜಪಾನ್ ಮುಂತಾದ ದೇಶಗಳಲ್ಲಿ ಇಂಗ್ಲಿಷ್ ಪ್ರಮುಖ ಭಾಷೆಯಲ್ಲ. ಅಲ್ಲಿನ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನೂ ಓದಿ: VIDEO | ಕ್ವಾರಂಟೈನ್‌ನಲ್ಲಿ ಗಾಯಕರಾದ ಕ್ರಿಕೆಟಿಗ ಸುರೇಶ್ ರೈನಾ

ಸರ್ಕಾರಿ ವ್ಯವಸ್ಥೆಯಡಿ ರಾಜ್ಯದಲ್ಲಿ ಈಗಾಗಲೇ 650 ಪಿಯು ವಿಜ್ಞಾನದ ಕಾಲೇಜುಗಳಿವೆ. ಅಲ್ಲದೆ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿ ಹಲವು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ವಿಜ್ಞಾನದ ಪಿಯು ಕಾಲೇಜುಗಳಿವೆ. ಈ ಕಾಲೇಜುಗಳಲ್ಲೂ ಕನ್ನಡದಲ್ಲಿ ವಿಜ್ಞಾನ ಬೋಧನೆ ಮಾಡುವುದರಿಂದ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗುತ್ತದೆ.

ರಾಜ್ಯದ ಗಡಿಯಂಚಿನಲ್ಲಿರುವ ಅಂದರೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ಸಂಖ ಗ್ರಾಮದ ಶಿವಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಕಳೆದ 23 ವರ್ಷಗಳಿಂದ ಪಿಯು ವಿಜ್ಞಾನವನ್ನು ಕನ್ನಡದಲ್ಲಿ ಬೋಧನೆ ಮಾಡಲಾಗುತ್ತಿದೆ. ಅಲ್ಲಿನ ವಿದ್ಯಾಸಂಸ್ಥೆ ಮುಖ್ಯಸ್ಥರು ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದು ಕನ್ನಡದಲ್ಲಿಯೇ ಪಿಯು ವಿಜ್ಞಾನ ಕಾಲೇಜು ತೆರೆದಿದ್ದಾರೆ. ಈ ಕಾಲೇಜಿನಲ್ಲಿ ನೂರು ಮಂದಿ ವಿದ್ಯಾರ್ಥಿಗಳಿದ್ದು ಪ್ರತಿ ವರ್ಷ ಕನಿಷ್ಠ 80ರಿಂದ 90 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಶಿಕ್ಷಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ವಿದೇಶಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿನ ಕನ್ನಡ ಶಾಲೆ ಕೂಡ ಹಲವು ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಹಾಗಾಗಿ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದಲ್ಲಿಯೂ ಪಿಯು ವಿಜ್ಞಾನ ಬೋಧಿಸಲು ಸರ್ಕಾರ ಚಿಂತನೆ ನಡೆಸಿದೆ. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಕ್ರೖೆಸ್ ವಸತಿ ಶಾಲೆಗಳ ವಿದ್ಯಾರ್ಥಿಗಳು ಕ್ರೖೆಸ್ ವಸತಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು. ಈ ಕಾಲೇಜುಗಳಲ್ಲಿ ತರಗತಿ ಆರಂಭಗೊಂಡ ದಿನದಿಂದಲೇ ಎನ್​ಇಇಟಿ, ಸಿಇಟಿ ಸೇರಿ ವೃತ್ತಿಪರ ಕೋರ್ಸಗಳಿಗೆ ಪೂರ್ವತರಬೇತಿ ನೀಡಲಾಗುವುದು. ಈ ವಸತಿ ಶಾಲೆಗಳು ಗುರುಕುಲ ಮಾದರಿಯನ್ನು ಹೊಂದಿದ್ದು, ಉಚಿತ ಊಟ, ಪಠ್ಯಪುಸ್ತಕ, ಗುಣಮಟ್ಟದ ಪ್ರಯೋಗಾಲಯ, ಪರಿಣಿತ ಉಪನ್ಯಾಸಕರು, ವಿಶಾಲ ಮೈದಾನವನ್ನು ಹೊಂದಿವೆ. ಇದನ್ನೂ ಓದಿ: ಮುಂಬೈ, ಬಿಹಾರ್​ ಪೊಲೀಸ್​, ಇ.ಡಿ, ಸಿಬಿಐ ಆಯ್ತು; ಈಗ ಸುಶಾಂತ್​ ಕೇಸ್ ತನಿಖೆಗೆ ಮಾದಕ ವಸ್ತು ನಿಗ್ರಹ ದಳ…!

ಆಂಗ್ಲಭಾಷೆಯ ಶಿಕ್ಷಣದಿಂದ ಮಾತ್ರ ಇಂಜಿನಿಯರ್, ಡಾಕ್ಟರ್​ಗಳನ್ನು ರೂಪಿಸಲು ಸಾಧ್ಯವೆಂಬ ಭ್ರಮೆಯನ್ನು ಅಳಿಸಿ, ‘ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ’ ಎನ್ನುವ ಆಶಯದಂತೆ ಕನ್ನಡ ಮಾಧ್ಯಮದಿಂದ ಎಲ್ಲವೂ ಸಾಧ್ಯವೆನ್ನುವುದನ್ನು ಸಾಬೀತು ಪಡಿಸಲು ರಾಜ್ಯ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಗ್ರಾಮೀಣ ಪ್ರದೇಶದ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಕೀಳರಿಮೆಯನ್ನು ತೊಡೆದುಹಾಕಿ ಮಾತೃಭಾಷೆಯಲ್ಲಿ ಪಿಯುಸಿ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿ ವೈದ್ಯಕೀಯ, ಇಂಜಿನಿಯರಿಂಗ್, ವೃತ್ತಿಪರ, ಸಂಶೋಧನಾ ವಿಭಾಗಕ್ಕೆ ದಾಪುಗಾಲು ಹಾಕಬೇಕು ಎಂದು ಹಾರೈಸುತ್ತೇನೆ.

(ಲೇಖಕರು ರಾಜ್ಯದ ಉಪ ಮುಖ್ಯಮಂತ್ರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net