

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಎಪ್ಪತ್ತೇಳು ಮಲೆಗಳೆಂಬ ಬೆಟ್ಟಸಾಲುಗಳ ನಡುವೆ ನಡುಮಲೆಯಲ್ಲಿ ಮಲೆಯ ಮಾದೇಶ್ವರರ ನೆಲೆ ದೇವಸ್ಥಾನ ಇದೆ. ಮಾದೇಶ್ವರ ಕನ್ನಡ ನಾಡಿನ ಧರ್ಮ ಮತ್ತು ಸಂಸ್ಕೃತಿಯ ಪ್ರತೀಕವಾಗಿ ಬೆಳೆದಿರುವ ದೇವರು. ವಾಸ್ತವದಲ್ಲಿ ಮಾದೇಶ್ವರ ಕರ್ನಾಟಕ -ತಮಿಳುನಾಡಿನ ಗಡಿ ಭಾಗದ ಧರ್ಮ, ಸಂಸೃ್ಕ, ಭಾಷೆ, ಸೌಹಾರ್ದದ ದೈವಕೂಡ. ಜಾತಿ, ಮತ, ಭಾಷೆಗಳನ್ನು ಮೀರಿದ ಪರಂಪರೆ ಮಾದೇಶ್ವರರದು. ಕನ್ನಡದ ಜಾನಪದ ಮಹಾಕಾವ್ಯದ ನಾಯಕ ಮಲೆ ಮಹದೇಶ್ವರ. ಕರ್ನಾಟಕದ ಪ್ರಸಿದ್ಧ ಜಾನಪದ ಕಂಸಾಳೆ ಕಲೆಯ ಕರ್ತೃ ಮಾದೇಶ್ವರ. ಹಾಗೇ ಕನ್ನಡ ನಾಡಿನ ಬಹುಮುಖ್ಯ ಪಂಥಗಳಲ್ಲೊಂದಾದ ಕಂಸಾಳೆ ದೇವರ ಗುಡ್ಡರ ಪಂಥದ ಮೂಲಪುರುಷ ಕೂಡ.
ಮಲೆಯ ಮಾದೇಶ್ವರ ಜಾನಪದ ಮಹಾಕಾವ್ಯ ಮತ್ತು ಕಂಸಾಳೆ ಜಾನಪದ ನೃತ್ಯಕಲೆ ಕನ್ನಡ ನಾಡು, ಭಾರತ ಮಾತ್ರವಲ್ಲ, ಜಗ್ಗತ್ತಿನ ಪ್ರಮುಖ ಕಾವ್ಯವಾಗಿ, ಕಲೆಯಾಗಿ ಪ್ರಸಿದ್ಧಿ ಪಡೆದಿದೆ. ಫಿನ್ಲೆಂಡ್ ದೇಶದ ‘ಕಲೇವಾಲ’ ಎಂಬುದು ವಿಶ್ವದ ಮೊದಲ ಜಾನಪದ ಕಾವ್ಯ ಎನಿಸಿದೆ. ಅದನ್ನು ಬಿಟ್ಟರೆ ಜಗತ್ತಿನ ಸುದೀರ್ಘ ಹಾಗೂ ಮಹತ್ವದ ಕಾವ್ಯ ಎಂದರೆ ನಮ್ಮ ಮಲೆ ಮಹದೇಶ್ವರರ ಜಾನಪದ ಕಾವ್ಯವಾಗಿದೆ. ಈ ಕೀರ್ತಿ, ಗೌರವ ಈ ಕಾವ್ಯವನ್ನು ಕಟ್ಟಿ ಬೆಳೆಸಿ ಉಳಿಸಿದ ನಮ್ಮ ಜಿಲ್ಲೆಯ ಹಳ್ಳಿಗಾಡಿನ ಅನಕ್ಷರಸ್ಥ - ಅವಿದ್ಯಾವಂತರೆನ್ನಿಸಿಕೊಳ್ಳುವ ಜಾನಪದ ಗಾಯಕರಿಗೆ ಸಲ್ಲಬೇಕು. ಮಲೆ ಮಾದೇಶ್ವರರು ಕರ್ನಾಟಕ- ತಮಿಳುನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದಾರೆ. ಕುಟುಂಬವೊಂದರ ಹಿರಿಯ ಮಗನಿಗೆ ದೀಕ್ಷೆ ಕೊಡಿಸುವುದು ಭಕ್ತ ಅನುಯಾಯಿ ಒಕ್ಕಲುಗಳಲ್ಲಿ ಪದ್ಧತಿ. ಇವರನ್ನು ಕಂಸಾಳೆ ದೇವರ ಗುಡ್ಡರು ಎನ್ನುತ್ತಾರೆ. ಕಂಸಾಳೆ ಜಾಗಟೆ, ಜೋಳಿಗೆ, ಮಹದೇಶ್ವರರ ಶಿಷ್ಯರೆನಿಸಿದ ಇವರ ಬಿರುದುಗಳು. ಮಾದೇಶ್ವರ ಮತ್ತು ಅವರ ದೇವರ ಗುಡ್ಡರು ಶಿವ-ಈಶ್ವರ ಸ್ವರೂಪಿಗಳು. ಇವರು ಅವೈದಿಕ ದ್ರಾವಿಡ ಶೈವ ಪರಂಪರೆಯ ಪ್ರತೀಕ ಮತ್ತು ಮುಂದುವರಿಕೆಯಾಗಿದ್ದಾರೆ.
ಮಾದೇಶ್ವರರ ಭಕ್ತರು ಒಕ್ಕಲುಗಳಲ್ಲಿ ಬಹುತೇಕ ಎಲ್ಲ ಜನಸಮುದಾಯ, ಜಾತಿ-ಜನಾಂಗಗಳು ಇವೆ. ಮಹದೇಶ್ವರ ಮತ್ತು ದೇವರಗುಡ್ಡರು ಜಾತ್ಯತೀತ-ಧರ್ವತೀತರು. ಬುದ್ಧ- ಬಸವ- ಅಲ್ಲಮರಂತೆ ಶರಣರ 12ನೇ ಶತಮಾನದ ವಚನ ಚಳವಳಿಯ ಆಶಯಗಳನ್ನು ಮಹದೇಶ್ವರರು 15ನೇ ಶತಮಾನದಲ್ಲಿ ಮುಂದುವರಿಸಿದವರು. ಸಮಾಜದಲ್ಲಿ ಸಮಾನತೆ, ಏಕತೆ, ಮಾನವೀಯತೆ, ಜಾತ್ಯತೀತತೆ ಪ್ರತಿಪಾದಿಸಿ ಜನಜಾಗೃತಿ ಮೂಡಿಸಿದರು.
ಶ್ರೀಶೈಲದಿಂದ ಎಪ್ಪತ್ತೇಳು ಮಲೆಗೆ: ಮಲೆ ಮಹದೇಶ್ವರ ಜಾನಪದ ದೇವರೆನಿಸಿದ್ದರೂ ಅವರೊಬ್ಬ ಚಾರಿತ್ರಿ್ರ ಮಹಾಪುರುಷ. ‘ಮಲೆ ಮಹದೇಶ್ವರ’ ಜಾನಪದ ಮಹಾಕಾವ್ಯದಲ್ಲಿ ಬರುವಂತೆ ಹಲವು ಐತಿಹಾಸಿಕ ದಾಖಲೆಗಳು ಇವರ ಚರಿತ್ರೆಯನ್ನು ವಿವರಿಸುತ್ತವೆ. ಉತ್ತರ ದೇಶದ ಉತ್ತಮಪುರ ಅಥವಾ ಆದಿಕಲ್ಯಾಣ ಪಟ್ಟಣದ ಉತ್ತರಾಜಮ್ಮ- ಚಂದ್ರಶೇಖರಮೂರ್ತಿ ದಂಪತಿಯ ಮಗ ಮಾದೇಶ್ವರ ಎಂಬುದಾಗಿ ಉಲ್ಲೇಖಗಳು ಬರುತ್ತವೆ.
ಸಂಗಪ್ಪಶಾಸ್ತ್ರಿ ಬರೆದ ‘ಸಿಂಹಾಸನದ ಗುರುಪರಂಪರೆ’ ಎಂಬ ಕೃತಿಯಲ್ಲಿ ಹೀಗಿದೆ: ಕಲ್ಯಾಣದ ಕೆಲವರು ಶ್ರೀ ಶೈಲದ ಬಳಿ ಸುತ್ತೂರಿಗೆ ದಾರಿ ಕೇಳಿದರು. ಮಾದೇಶ್ವರ ಬಾಲಕ ಅವರನ್ನು ಸುತ್ತೂರಿಗೆ ಕರೆತಂದ. ಆಗ ಸುತ್ತೂರು ಪೀಠಾಧಿಪತಿಗಳಾಗಿದ್ದ ಸಿದ್ದನಂಜದೇಶಿಕರು ಅವನನ್ನು ರಾಗಿ ಬೀಸುವ ಕಾಯಕಕ್ಕೆ ನೇಮಿಸಿದರು. ಅಲ್ಲಿ ಮಹದೇಶ್ವರ ಹಲವು ಪವಾಡಗಳನ್ನು ಮೆರೆದ. ಮಾದೇಶ್ವರ ಪರಶಿವರೂಪಿ ಎಂದು ತಿಳಿದ ದೇಸಿಕರು ಅವನನ್ನು ಅಲ್ಲಿಂದ ಬೀಳ್ಕೊಡುತ್ತಾರೆ. ಚಾಮರಾಜನಗರ ತಾಲೂಕಿನ ಹರದನಹಳ್ಳಿಯ 1324ರ ಹೊಯ್ಸಳ ವೀರ ಬಲ್ಲಾಳನ ಕಾಲದ ತಾಮ್ರ ಶಾಸನ, ಮಾದೇಶ್ವರ ಶ್ರವಣನನ್ನು ಸಂಹರಿಸಿ, ವಜ್ರಮಲೆಯಲ್ಲಿ ನೆಲೆಸಿ, ಆಲಂಬಾಡಿ ಜುಂಜೇಗೌಡನಿಂದ ದೇವಾಲಯ ಕಟ್ಟಿಸಿಕೊಂಡು ಬೇಡರ ಕನ್ನಾಯ್ಯನಿಂದ ಪೂಜಿಸಿ ಕೊಂಡನೆಂದು ಹೇಳುತ್ತದೆ.
ಹೈದರ ಅಲಿಯ 1776ರ ತಾಮ್ರ ಶಾಸನವೂ ಇದೇ ಮಾಹಿತಿಗಳನ್ನು ಹೇಳುತ್ತಾ, ಸರಗೂರು ಉಪ್ಪಲಿಗರನ್ನು ಎಣ್ಣೆಮಜ್ಜನಕ್ಕೆ ನೇಮಿಸಿಕೊಂಡ ಅಂಶವನ್ನು ಪ್ರಸ್ತಾಪಿಸಿದೆ. ಮೀಣ್ಯದ ಗುರುಸಿದ್ಧ ಕವಿಯ ‘ಶ್ರೀ ಮಾದೇಶ್ವರ ಸಾಂಗತ್ಯ’ ಕೃತಿಯು ಮಾದೇಶ್ವರ ಎಪ್ಪತೇಳು ಮಲೆಗಳ ದಾಟಿ ಬೇಡಗಂಪಣ ರಾಜ್ಯ, ಆಲಂಬಾಡಿಗೆ ಬಂದು ಕಾಡಯ್ಯನ ಒಕ್ಕಲು ಪಡೆದು ನಡುಮಲೆಯಲ್ಲಿ ನೆಲೆಸುತ್ತಾನೆಂದು ವಿವರಿಸುತ್ತದೆ.
ಮಾದೇಶ್ವರ ಕುಂತೂರು ಮಠಕ್ಕೆ ಬಂದಿದ್ದರೆಂದು, ಈ ಮಠ 1512ರಷ್ಟು ಪ್ರಾಚೀನವಾದುದೆಂದು ಕುಂತೂರು ಶಾಸನದಿಂದ ತಿಳಿದು ಬಂದಿರುತ್ತದೆ. ಹಾಗಾಗಿ ಮಾದೇಶ್ವರ 15-16ನೇ ಶತಮಾನದ ನಡುವೆ ಕತ್ತಲ ರಾಜ್ಯವೆಂಬ ಮೈಸೂರು ಸೀಮೆಯ- ಎಪ್ಪತ್ತೇಳು ಮಲೆಯಲ್ಲಿ ಸಾಮಾಜಿಕ-ಸಾಂಸೃ್ಕಕ ಸುಧಾರಣೆ ಕೈಗೊಂಡರೆಂದು ದೃಢವಾಗುತ್ತದೆ. ಶ್ರೀ ಶೈಲದಿಂದ ದಕ್ಷಿಣ ಕರ್ನಾಟಕಕ್ಕೆ ಬರುವ ಮಾದೇಶ್ವರ ಕೊಡಗು-ಹೆಗ್ಗಡೆದೇವನಕೋಟೆಯ ಭೀಮನಕೊಲ್ಲಿ- ಪಿರಿಯಾಪಟ್ಟಣ ಹುಣಸೂರು- ಬದನ ವಾಳು- ಸುತ್ತೂರು-ಚಾಮರಾಜನಗರ- ಸಂತೇಮರಳ್ಳಿ,-
ಕುಂತೂರು-ಕೊಳ್ಳೇಗಾಲ-ಮಧುವನಹಳ್ಳಿ -ಸಿಂಗನಲ್ಲೂರು, ಕಾಮಗೆರೆ-ಹನೂರು-ಕೌದಳ್ಳಿ... ಹೀಗೆ ಎಪ್ಪತೇಳು ಮಲೆಗಳ ನಡುಮಲೆ -ನಾಗಮಲೆ ತನಕ ಪ್ರಯಾಣ ಬೆಳಸಿ ನೆಲೆಸಿದ್ದಾರೆ. ಈ ನಡುವೆ ಇಕ್ಕೇರಿ ದೇವಮ್ಮ-ಬೇವಿನಹಟ್ಟಿ ಕಾಳಮ್ಮನವರ ಪ್ರಭಾವವನ್ನು ನಿಯಂತ್ರಿಸಿ, ಒಕ್ಕಲು ಪಡೆಯುತ್ತಾರೆ. ತಲಕಾಡು ಮಾದಯ್ಯರ ಕೃತಿ ‘ಮಲೆ ಮಾದೇಶ್ವರ ಚರಿತ್ರೆ’ ಶ್ರವಣ ಎಂಬ ಜೈನ ಕಂಬದಹಳ್ಳಿ ಬೆಟ್ಟದಲ್ಲಿ 1120ರಲ್ಲಿ ಇದ್ದ ಎಂದು ತಿಳಿಸುತ್ತದೆ. ಇಂದಿನ ಮಲೆ ಮಹದೇಶ್ವರಬೆಟ್ಟ ಪ್ರದೇಶ ಭಾನುಕೀರ್ತಿ ಎಂಬ ಜೈನ ರಾಜನ ಆಳ್ವಿಕೆಗೆ ಒಳಪಟ್ಟಿತ್ತು. ಈತನ ಕೇಂದ್ರಸ್ಥಾನ ಶ್ರವಣಬೋಳಿಯಾಗಿತ್ತು. ಈ ಜೈನ ರಾಜ ಜೈನೇತರರನ್ನು ಬಂಧಿಸಿ ಸೆರೆಯಲ್ಲಿಟ್ಟಿದ್ದ. ಮಹದೇಶ್ವರ ಶ್ರವಣನನ್ನು ಸಂಹರಿಸಿ ಅವರನ್ನು ಬಿಡುಗಡೆಗೊಳಿಸಿದರು ಎಂದು ಮಹದೇಶ್ವರ ಕಾವ್ಯದಲ್ಲಿ ಬರುತ್ತದೆ. ಕೊಯಮತ್ತೂರು ಜಿಲ್ಲೆಯ ಸತ್ಯಮಂಗಲಂ ರಸ್ತೆಯಲ್ಲಿ ಗೋಪಿ ತಾಲೂಕಿನ ಗೇರು ಮಾಳದ ಬಳಿ ಈ ಶ್ರವಣಬೋಳಿ ಎಂಬ ಶ್ರವಣ ಬೆಟ್ಟವಿದೆ. ಇಲ್ಲಿ ಶ್ರವಣದೊರೆ ಮಹದೇಶ್ವರ ಕೊಡುವ ಉರಿ ಚಮ್ಮಾಳಿಗೆಯನ್ನು ಮೆಟ್ಟಲು ಹೋಗಿ ಉರಿ ಜ್ವಾಲೆಗೆ ತುತ್ತಾದ ಹೆಜ್ಜೆ ಗುರುತುಗಳಿರುವ ಬಂಡೆ ಇದೆ ಎಂಬ ಸ್ಥಳಪುರಾಣವಿದೆ.
ಮಾದೇಶ್ವರ ಜಾನಪದ ಕಾವ್ಯದಲ್ಲಿ ಶಂಕಮ್ಮನ ಕಥಾಪ್ರಸಂಗ ಮಹತ್ವದ್ದು. ಶಂಕಮ್ಮ-ನೀಲೇಗೌಡ ಸೋಲಿಗ ದಂಪತಿ ಎಪ್ಪತ್ತೇಳು ಮಲೆಯ ನಿವಾಸಿಗಳು. ನೀಲೇಗೌಡ ಹೆಜ್ಜೇನು ಬೇಟೆಗೆ ಹೋಗುತ್ತಾನೆ. ಮಡದಿ ಶಂಕಮ್ಮ ದುಷ್ಟರಿಂದ ದೂರವಿರುವಂತೆ ಅವಳಿಗೂ ಅವನ ವಸತಿಗೂ ಗೃಹ ದಿಗ್ಬಂಧನ ಹಾಕುತ್ತಾನೆ. ಶಂಕಮ್ಮ ತನ್ನ ತವರು ಮನೆಯ ದೈವ ಮಾದೇಶ್ವರರಲ್ಲಿ ಮೊರೆ ಹೋಗುತ್ತಾಳೆ. ತನಗೆ ಗಂಡ ವಿಧಿಸಿದ್ದ ದಿಗ್ಬಂಧನವನ್ನು, ತನ್ನ ಬಂಜೆತನವನ್ನು ನಿವಾರಿಸುವ ವರ ಪಡೆಯುತ್ತಾಳೆ. ಕಾರಯ್ಯ-ಬಿಲ್ಲಯ್ಯ ಎಂಬ ಮಕ್ಕಳನ್ನು ಪಡೆಯುತ್ತಾಳೆ. ಸೋಲಿಗ ಸಮಾಜವಾದ ಶಂಕಮ್ಮ-ನೀಲೇಗೌಡ ಮಾದೇಶ್ವರರ ಒಕ್ಕಲಾಗುತ್ತಾರೆ. ತಮ್ಮ ಮಕ್ಕಳನ್ನು ಮಹದೇಶ್ವರನ ಶಿಷ್ಯರನ್ನಾಗಿಸುತ್ತಾರೆ. ಇಂದಿನ ಮಲೆ ಮಹದೇಶ್ವರ ದೇವಾಲಯದ ಎದುರಿರುವ ಮೂರು ಮೈಲಿ ದೂರದ ಬೆಟ್ಟಕ್ಕೆ ‘ಎದುರುಬೋಳಿ’ ಎಂದು ಕರೆಯುತ್ತಾರೆ. ಈ ಬೆಟ್ಟದಲ್ಲಿ ಮಾದೇಶ್ವರರ ಶಿಶುಮಕ್ಕಳಾದ ಕಾರಯ್ಯ-ಬಿಲ್ಲಯ್ಯನವರ ಗದ್ದುಗೆಗಳಿವೆ.
ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ದೀಪನಗಿರಿ ಒಡ್ಡಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ 108 ಅಡಿ ಎತ್ತರದ, ಹುಲಿಯ ಮೇಲೆ ಕುಳಿತ ಮಹದೇಶ್ವರನ ಬೃಹತ್ ಪ್ರತಿಮೆ ಲೋಕಾರ್ಪಣೆಯಾಗಿದೆ. ಮಹದೇಶ್ವರ ಜಾನಪದ ಕಾವ್ಯ ಮತ್ತು ಪರಂಪರೆಯಲ್ಲಿ ಹುಲಿಯನ್ನು ಮಹದೇಶ್ವರ ವಾಹನ ಮಾಡಿಕೊಂಡಿರುವುದು ಕಂಡುಬರುತ್ತದೆ. ಮಹದೇಶ್ವರರು ಆನೆಯನ್ನು ತಲೆದಿಂಬು ಮಾಡಿಕೊಂಡ ಸ್ಥಳ ‘ಆನೆತಲೆ ದಿಂಬ’ ಎಂದು ಕರೆಯಲ್ಪಡುತ್ತಿದೆ. ‘ಮಲೆ ಮಲೆ ಮಾತಾಡಿ ಹುಲಿ, ಕರಡಿ ಜೂಜಾಡಿ’ ಎಂಬುದಾಗಿ ಕಾವ್ಯದಲ್ಲಿ ಉಲ್ಲೇಖವಿದೆ. ಆನೆಮಲೆ, ಜೇನುಮಲೆ, ನಾಗಮಲೆ ಹೀಗೆ 77 ಮಲೆಗಳಲ್ಲಿ ಮಹದೇಶ್ವರ ಸಂಚರಿಸಿದ ಚರಿತ್ರೆ ಇದೆ. ಮಲೆ ಮಹದೇಶ್ವರ ಹಿಂಡು ಹುಲಿಗಳ ಒಡೆಯ. ಹುಲಿಗಳನ್ನು ಸಾಕುವ, ಪಳಗಿಸುವ ಸಿದ್ಧಿಪುರುಷ. ಅವರು ಓಡಾಟಕ್ಕೆ ಹುಲಿಯನ್ನು ವಾಹನವಾಗಿಸಿಕೊಂಡಿದ್ದು, ಹುಲಿ ಹೆಜ್ಜೆ ಗುರುತುಗಳು ಇಂದಿಗೂ 77 ಮಲೆಗಳ ಹಲವು ನೆಲೆಗಳಲ್ಲಿ ಕಂಡುಬರುತ್ತವೆ. ಮಹದೇಶ್ವರನ ದೇವಸ್ಥಾನದಲ್ಲಿ ಹುಲಿ ವಾಹನ ಸೇವೆ, ಬಸವ ವಾಹನ ಸೇವೆ, ನಾಗಾಭರಣ ವಾಹನ ಸೇವೆಗಳೆಂಬ ಆಚರಣೆಗಳನ್ನು ನಡೆಸಲಾಗುತ್ತದೆ.
ಮಲೆ ಮಹದೇಶ್ವರರ ಒಕ್ಕಲಾಗಿ ಈ ಪಂಥ ಪರಂಪರೆಯನ್ನು ಮುಂದುವರಿಸುವುದೆಂದರೆ ಮಾದೇಶ್ವರ ಗುಡ್ಡ ಎಂಬ ದೀಕ್ಷೆ ಪಡೆಯುವುದು. ಬಹುತೇಕ ಅವೈದಿಕ ಎಲ್ಲ ಜನಸಮುದಾಯಗಳು ಈ ದೀಕ್ಷೆ ಪಡೆಯುತ್ತಾರೆ. ಸಾಲೂರು ಮಠ ಈ ಒಕ್ಕಲು ಸಂವರ್ಧನೆಯ ಕಾರ್ಯನಿರ್ವಹಿಸುತ್ತದೆ. ರುದ್ರಾಕ್ಷಿ ಧಾರಣೆ, ನಾಗಬೆತ್ತ, ಜೋಳಿಗೆ, ಜಾಗಟೆ, ಮಹದೇಶ್ವರರ ಗುಡ್ಡರಾದ ಶಿಶುಮಕ್ಕಳ ಪಾರಂಪರಿಕ ಗುರುತುಗಳು. ಇಂದಿಗೂ ಈ ಮಠದಲ್ಲಿ ಭಕ್ತ ಒಕ್ಕಲುಗಳ ಗುರುಗಳಾಗಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಇದ್ದಾರೆ. ಸ್ವತಃ ಮಾದೇಶ್ವರರು ಸಾಲೂರು ಮಠ ಸ್ಥಾಪನೆ ಮಾಡಿದರೆಂಬ ಐತಿಹ್ಯ ಇದೆ. ಇಂದಿಗೂ ಅಲ್ಲಿ ಮಾದೇಶ್ವರರು ನೆಟ್ಟ ಕಂಬ ಹಾಗೂ ಮಾದೇಶ್ವರರು ಬಳಸುತ್ತಿದ್ದ ಬೆತ್ತ, ವಿಭೂತಿ, ಜೋಳಿಗೆ, ಪಾದರಕ್ಷೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಮಲೆ ಮಹದೇಶ್ವರರು ನಡುಮಲೆ ಎಂಬ ಇಂದಿನ ದೇವಸ್ಥಾನದ ಸ್ಥಳದಲ್ಲೇ ಐಕ್ಯರಾದರು ಎನ್ನಲಾಗಿದೆ. ಕಾಲಾನಂತರ ಮಾದೇಶ್ವರರು ನಡುಮಲೆಯಿಂದ ತೆರಳಿ ನಾಗಮಲೆಗೆ ತಲುಪಿ ಅಲ್ಲೇ ಐಕ್ಯರಾದರು ಎಂಬ ನಂಬಿಕೆಯೂ ಇದೆ.
ಬೆಟ್ಟ ಮಾದಪ್ಪನ ಸನ್ನಿಧಿಯು ಪ್ರಸಿದ್ಧ ಧಾರ್ವಿುಕ ಯಾತ್ರಾಸ್ಥಳವಾಗಿದೆ. ಬೆಂಗಳೂರಿನಿಂದ ಮಲೆಮಹದೇಶ್ವರ ಬೆಟ್ಟವು 220 ಕಿ.ಮೀ. ದೂರವಿದೆ. ಮೈಸೂರಿನಿಂದ ಮ.ಬೆಟ್ಟ 140 ಕಿ.ಮೀ. ಅಂತರವಿದೆ. ಮ.ಬೆಟ್ಟದಲ್ಲಿ ಮಹದೇಶ್ವರರ ದೇಗುಲವಿದ್ದು, ಗರ್ಭಗುಡಿಯಲ್ಲಿ ಉದ್ಭವಮೂರ್ತಿ ಇದೆ. ಇತಿಹಾಸ ಪ್ರಸಿದ್ಧ ಸಾಲೂರು ಬೃಹನ್ಮಠ ಹಾಗೂ ಶ್ರೀಗಳ ಗದ್ದುಗೆ, ಮಹದೇಶ್ವರ ಬೆಟ್ಟದಿಂದ 13 ಕಿ.ಮೀ. ದೂರದಲ್ಲಿ ಕಾಲ್ನಡಿಗೆ ಮೂಲಕ ಸಾಗಿದರೆ ಸಿಗುವ ನಾಗಮಲೆ ಪ್ರಸಿದ್ಧ ಸ್ಥಳವಾಗಿವೆ.
(ಲೇಖಕರು ಸಾಹಿತಿ)